ಬೆಂಗಳೂರು: ಐಪಿಎಲ್ ಪಂದ್ಯಾವಳಿಯಲ್ಲಿ ತಂಡವೊಂದು ಅಲ್ಪ ಮೊತ್ತ ಕಲೆ ಹಾಕಿದಾಗ ಅಭಿಮಾನಿಗಳು ಮೂಗು ಮುರಿಯಬಹುದು. ಆದರೆ, ಅಲ್ಪ ಮೊತ್ತದ ಕ್ಲಿಷ್ಟತೆ ಎನೆಂಬುದು ಸವಾಲನ್ನು ಬೆನ್ನಟ್ಟಿದ ಆಟಗಾರರಿಗೆ ಮಾತ್ರ ಗೊತ್ತು. ಐಪಿಎಲ್ನಲ್ಲಿ ಹೆಚ್ಚು ರನ್ಗಳಿಸಿದ ಪಂದ್ಯಗಳು ಬ್ಯಾಟ್ಸ್ಮನ್ಗಳ ಅಬ್ಬರದ ಬ್ಯಾಟಿಂಗ್ನಿಂದ ಎಷ್ಟು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿವೆಯೋ, ಅದೇ ರೀತಿ ಕಡಿಮೆ ರನ್ ಗಳಿಸಿದ ಪಂದ್ಯಗಳು, ಆಟಗಾರರಿಗೆ ಕಗ್ಗಾಂಟಾಗುವ ಮೂಲಕ ಅಭಿಮಾನಿಗಳಲ್ಲಿ ದಿಗ್ಭ್ರಮೆಯನ್ನು ಹುಟ್ಟಿಸುತ್ತವೆ.
ಈ ಪಂದ್ಯಗಳಲ್ಲಿ ಪಂದ್ಯ ನಿಧಾನಗತಿಯಲ್ಲಿ ಸಾಗುತ್ತದೆಯಾದರು, ಅಂತಿಮ ಕ್ಷಣಗಳಲ್ಲಿ ಗೆಲುವಿನ ಅವಕಾಶ ಎರಡೂ ತಂಡಕ್ಕೆ ಇರುತ್ತದೆ. ಕೆಲವೊಮ್ಮೆ ಇಂತಹ ಪಂದ್ಯದ ಕೊನೆ ಓವರ್ ಹಾಗೂ ಕೊನೆ ಎಸೆತದವರೆಗೂ ಗೆಲ್ಲುವ ಅವಕಾಶ ಇತ್ತಂಡಗಳಿಗೆ ಇರುತ್ತದೆ. ಈ ಕ್ಷಣದಲ್ಲಿ ಗೆಲುವು ಯಾರಿಗೆ ಒಲಿಯಲಿದೆ ಎಂಬುದು ಎಲ್ಲರ ಕುತೂಹಲ ಕೆರಳಿಸುತ್ತದೆ.
ಪ್ರಸಕ್ತ ನಡೆಯುತ್ತಿರುವ ಐಪಿಎಲ್ನ 6ನೇ ಆವೃತ್ತಿಯಲ್ಲಿ ಅಲ್ಪ ಮೊತ್ತವನ್ನು ಎದುರಿಸುವಾಗ ಸಾಕಷ್ಟು ಕ್ಲಿಷ್ಟತೆಯನ್ನು ಎದುರಿಸಿದ ಘಟನೆಗಳು ನಡೆದಿವೆ. ಅಂತಹ ಪಂದ್ಯಗಳನ್ನು ಮೆಲಕು ಹಾಕೋಣ ಪಂದ್ಯಾವಳಿಯಲ್ಲಿ ಇದುವರೆಗೂ 44 ಪಂದ್ಯಗಳಾಗಿದ್ದು, ಅದರಲ್ಲಿ ಹಲವು ಪಂದ್ಯಗಳಲ್ಲಿ ಕನಿಷ್ಠ ಗುರಿ ಕಠಿಣವಾಗುತ್ತಿರುವುದು ಕಂಡುಬಂದಿದೆ. ಈ ಕಡಿಮೆ ಮೊತ್ತದ ಪಂದ್ಯಗಳಲ್ಲಿ ಕೆಲ ತಂಡಗಳು ತಮ್ಮ ಅಲ್ಪ ಮೊತ್ತಕ್ಕೆ ಎದುರಾಳಿ ತಂಡವನ್ನು ಸಮರ್ಥವಾಗಿ ನಿಯಂತ್ರಿಸಿದರೆ, ಮತ್ತೇ ಕೆಲವು ಪಂದ್ಯಗಳಲ್ಲಿ ಕಡಿಮೆ ಮೊತ್ತದ ಗುರಿಯನ್ನು ಬೆನ್ನಟ್ಟಿದ ತಂಡಗಳು ಪ್ರಯಾಸದ ಜಯ ಸಾಧಿಸಿವೆ.
ಪಂದ್ಯಾವಳಿಯ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ ಪುಣೆ ವಾರಿಯರ್ಸ್ ವಿರುದ್ಧ ಕೇವಲ 127 ರನ್ ಗುರಿಯನ್ನು ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ಪುಣೆ ತಂಡ 104 ರನ್ಗಳಿಗೆ ಆಲೌಟ್ ಆಯಿತು.
ಇನ್ನು 7ನೇ ಪಂದ್ಯದಲ್ಲಿ ಆರ್ಸಿಬಿ ತಂಡದಿಂದ 131 ರನ್ಗಳ ಗುರಿ ಪಡೆದ ಸನ್ರೈಸರ್ಸ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 130 ರನ್ಗಳಿಸಿ ನಂತರ ಸೂಪರ್ ಓವರ್ನಲ್ಲಿ ಜಯ ಸಾಧಿಸಿತು. 22ನೇ ಪಂದ್ಯದಲ್ಲಿ ಮತ್ತೊಮ್ಮೆ ಸನ್ರೈಸರ್ಸ್ ತಂಡ ಪುಣೆ ವಾರಿಯರ್ಸ್ಗೆ ಕೇವಲ 120 ರನ್ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಪುಣೆ ತಂಡ 108 ರನ್ಗಳಿಗೆ ಆಲೌಟ್ ಆಯಿತು.
ಅಲ್ಲದೇ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 115 ರನ್ಗಳ ಗುರಿಯನ್ನು ಬೆನ್ನತ್ತಿದ ಸನ್ರೈಸರ್ಸ್ ತಂಡ 19.2 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಪ್ರಯಾಸದ ಜಯ ಸಾಧಿಸಿತು. ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನೀಡಿದ 125 ರನ್ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್ ಕಳೆದುಕೊಂಡು 19.2 ಓವರ್ಗಳಲ್ಲಿ ಗೆಲುವಿನ ದಡ ಸೇರಿತು.
ಸೋಮಶೇಖರ ಪಿ. ಭದ್ರಾವತಿ