2008....2013 ಯಡಿಯೂರಪ್ಪ, ಯಡಿಯೂರಪ್ಪ

Updated on: 

ಸುಮಾರು ಐದು ವರ್ಷಗಳ ಹಿಂದೆ (2008ರಲ್ಲಿ) ರಾಜ್ಯ ವಿಧಾನ ಸಭೆಗೆ ಚುನಾವಣೆ ನಡೆದಾಗ ಇದ್ದ ವಾತಾವರಣವನ್ನು ನೆನಪಿಗೆ ತಂದುಕೊಳ್ಳಿ. ಯಡಿಯೂರಪ್ಪ ಅವರಿಗೆ ಆಗ ಜಾತ್ಯತೀತ ಜನತಾದಳ ಮುಖ್ಯಮಂತ್ರಿಯ ಸ್ಥಾನವನ್ನು ತಪ್ಪಿಸಿತ್ತು.
ಅದನ್ನು ಉಗ್ರವಾಗಿ ಪ್ರತಿಭಟಿಸಿದ ಭಾರತೀಯ ಜನತಾ ಪಾರ್ಟಿಯ ಯಡಿಯೂರಪ್ಪ ಅವರಿಗೆ ಆದ ಅನ್ಯಾಯವನ್ನು ಸಮಸ್ತ ವೀರಶೈವ ಸಮಾಜಕ್ಕೇ ಆದ ಅನ್ಯಾಯವೆಂದು ಪರಿಗಣಿಸಿ, ದೊಡ್ಡ ರೀತಿಯಲ್ಲಿ ಪ್ರಚಾರ ಮಾಡಿತ್ತು. ಆ ಚುನಾವಣೆಯಲ್ಲಿನ ಬಹು ಮುಖ್ಯವಾದ (ಏಕೈಕ ಎನ್ನಬಹುದಾದ) ವಿಶೇಷ ವಿಚಾರದ ಕೇಂದ್ರ ಯಡಿಯೂರಪ್ಪ ಅವರಿಗಾಗಿದ್ದ ಅನ್ಯಾಯ ಎನ್ನುವಂತೆ ಆಗಿತ್ತು. ಆಗಲೂ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿರಲಿಲ್ಲ.
ಈಗ ಐದು ವರ್ಷಗಳ ಅನಂತರ, ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿಯ ಪಾಲಿಗೆ ಯಡಿಯೂರಪ್ಪ ಅವರ ವರ್ತನೆಯೇ ಮುಖ್ಯ ವಸ್ತು. ಯಡಿಯೂರಪ್ಪ ಅವರು ಬಿಜೆಪಿಯನ್ನು ಹೋಳು ಮಾಡದೇ ಇದ್ದರೆ ಪಕ್ಷದ ವಿಜಯ ಸುಗಮವಾಗುತ್ತಿತ್ತು ಎಂದೇ ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯ. ಅದನ್ನೇ ಅವರು ಪ್ರಚಾರ ಮಾಡುತ್ತಿರುವುದು. ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರ ನಡುವೆ ಹಲವು ತಿಂಗಳ ಕಾಲ ನಡೆದ ಪ್ರಚ್ಛನ್ನ, ಪ್ರತ್ಯಕ್ಷ ಸಮರದ ಕತೆಯನ್ನು ಸ್ಮರಿಸುವ ಅಗತ್ಯವಿಲ್ಲ. ಇಲ್ಲಿ ಮುಖ್ಯವಾದ ವಿಚಾರವೆಂದರೆ ಐದು ವರ್ಷಗಳ ಹಿಂದೆ ಬಿಜೆಪಿಯ ಪಾಲಿಗೆ ಕಿರೀಟ ಧಾರಣೆ ಮಾಡಿಸಿದ ಯಡಿಯೂರಪ್ಪ, ಈಗ ಅದರ ಮಗ್ಗುಲ ಮುಳ್ಳಾಗಿದ್ದಾರೆ.
ಅದನ್ನು ಯಡಿಯೂರಪ್ಪ ಅವರೂ ಮುಚ್ಚು ಮರೆಮಾಡಿಲ್ಲ. ಬಿಜೆಪಿಯನ್ನು ಧೂಳಿಪಟ ಮಾಡುವುದೇ ತಮ್ಮ ಉದ್ದೇಶವೆನ್ನುವುದನ್ನು ಅವರು ಹೇಳದೇ ಸಭೆಗಳನ್ನು ಮುಗಿಸುವುದೇ ಇಲ್ಲ. ಬಿಜೆಪಿ ನಾಯಕರೂ ಅಷ್ಟೇ. ಯಡಿಯೂರಪ್ಪ ಅವರು ಕೆಟ್ಟ ಹೊಲಸಿನಂತೆ, ತೊಲಗಿದ್ದೇ ಲೇಸು ಎನ್ನುವಂತೆ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿ ಅಧಿಕಾರ ಹೋದರೂ ಚಿಂತೆ ಇಲ್ಲ ಎನ್ನುವ ಮಾತೂ ರಾಷ್ಟ್ರೀಯ ನಾಯಕರಿಂದ ಕೇಳಿ ಬಂದಿದೆ. ಆದರೆ ಸ್ಥಳೀಯ ನಾಯಕರು ಹಾಗೆ ಹೇಳುವುದು ಸಾಧ್ಯವಿಲ್ಲವಲ್ಲ.
ಹಲವು ವಾರಗಳ ತೀವ್ರ ಪ್ರಚಾರ ಸಮರ ತನ್ನ ಅಂತಿಮ ಹಂತವನ್ನು ತಲುಪಿದೆ. ಎಲ್ಲ ನಾಯಕರೂ ಹೇಳಬೇಕಾದ್ದನ್ನೆಲ್ಲ ಹೇಳಿಯಾಗಿದೆ. ಪ್ರಚಾರ ಸಮರಕ್ಕೆ ಸಂಬಂಧಿಸಿದಂತೆ, ಚುನಾವಣೆ ಆಯೋಗ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ, ಹಿಂದಿನಂತೆ ಪ್ರಚಾರದಲ್ಲಿ ಬೀದಿಗಳಲ್ಲಿ, ಮೈದಾನದಲ್ಲಿ ಅಬ್ಬರ ಆವುಟ, ಕೂಗುಮಾರಿಯ ಹಾವಳಿ, ಮೆರವಣಿಗೆ, ಪಕ್ಷದ ಚಿಹ್ನೆಗಳ ಹಾರಗಳು ಯಾವುವೂ ಕಂಡು ಬರುತ್ತಿಲ್ಲ. ಆದರೆ ಅಂತರಂಗದಲ್ಲಿ ಚುನಾವಣೆಯ ಪ್ರಚಾರ ಯಾವ ರೀತಿ ನಡೆಯಬೇಕೋ ಆ ರೀತಿ ಜೋರಾಗಿಯೇ ನಡೆಯುತ್ತಿದೆ. ಎಲ್ಲವೂ ನಾಲ್ಕು ಗೋಡೆಗಳ ಮಧ್ಯೆಯೆ ನಡೆಯುತ್ತಿರುವ ಆಟ. ಬಹಿರಂಗ ಸಮರಕ್ಕೆ ಮಾಧ್ಯಮ ಪ್ರಪಂಚ ಪ್ರಮುಖ ವೇದಿಕೆಯಾಗಿರುವುದೂ ನಿಜ. ಪ್ರವಾಸದಲ್ಲಿರುವ ನಾಯಕರು, ಎಲ್ಲ ಕಡೆ ಪತ್ರಿಕಾ ಸಂದರ್ಶನ, ಪತ್ರಿಕಾಗೋಷ್ಠಿ, ಅಂತರಂಗದ ಮಾತುಕತೆಯ ಮೂಲಕ ತಮ್ಮ, ತಮ್ಮ ಪಕ್ಷದ ಅನಿಸಿಕೆಗಳನ್ನು ಧಾರಾಳವಾಗಿ ಪ್ರಕಟಿಸುತ್ತಿದ್ದಾರೆ. ಅದರಲ್ಲಿ ಸಾಕಷ್ಟು ಪ್ರಕಟವಾಗುತ್ತಿರುವುದೂ ನಿಜ.

ಬಿಜೆಪಿಯ ಸಂಕಟ: ಆಳುವ ಪಕ್ಷವಾಗಿ ಬಿಜೆಪಿ ತನ್ನ ಐದು ವರ್ಷಗಳ ಸಾಧನೆಗಳನ್ನು ಜನರಿಗೆ ಮುಟ್ಟಿಸುವುದು ಕಷ್ಟ. ಅದಕ್ಕೆ ಘೋಷವಾಕ್ಯಗಳ ಅಭಾವವಿದೆ. ಆದರೆ ಬಿಜೆಪಿಯ ಎದುರಾಳಿಗಳಿಗೆ ಈ ಐದು ವರ್ಷಗಳ ಹಗರಣಗಳು, ಭ್ರಷ್ಟಾಚಾರದ ನಗ್ನ ಚಿತ್ರವನ್ನು ಬಿಡಿಸುವುದು ಸುಲಭ. ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಅವರ ವರದಿಗಳೇ ಸಾಕಷ್ಟು ಕಳಂಕವನ್ನು ಅಂಟಿಸಬಲ್ಲ ಶಕ್ತಿಯನ್ನು ಪಡೆದಿರುವುದು ನಿಜ.
ರಾಜಕೀಯವಾಗಿ ಐದು ವರ್ಷಗಳ ಹಿಂದೆ ಕಾರಣಾಂತರಗಳಿಂದ ಬಿಜೆಪಿಯ ಪ್ರಬಲ ಶಕ್ತಿ ಕೇಂದ್ರವಾಗಿದ್ದ ಮುಂಬೈ ಕರ್ನಾಟಕದ ಜಿಲ್ಲೆಗಳೇ ಈಗ ಪಕ್ಷದ ಅತಿದುರ್ಬಲ ಪ್ರದೇಶವಾಗಿ ಪರಿವರ್ತನೆಯಾಗಿರುವುದು ಪ್ರವಾಸಿಗರ ಕಣ್ಣಿಗೂ ಕಂಡುಬರುತ್ತಿದೆ. ಚುನಾವಣೆಯ ಸ್ಥಿತಿಗತಿಯ ಅಧ್ಯಯನ, ವರದಿಗೆಂದು ಉತ್ತರದ ಪ್ರದೇಶಗಳಿಂದ ಬರುವವರು ತಮ್ಮ ಕರ್ನಾಟಕದ ಪ್ರವಾಸವನ್ನು ಆರಂಭಿಸುವುದು ಬೆಳಗಾವಿಯಿಂದಲೇ. ಬೆಂಗಳೂರು- ಪುಣೆ ಹೆದ್ದಾರಿಯಲ್ಲಿರುವ ಜಿಲ್ಲೆಗಳಲ್ಲಿ ಬಹುಶಃ ಎಲ್ಲ ಜಿಲ್ಲೆಗಳಲ್ಲೂ ಕನಿಷ್ಟ ಒಂದು ಸ್ಥಾನವನ್ನಾದರೂ ಬಿಜೆಪಿ ಕಳೆದುಕೊಳ್ಳಲಿದೆ ಎನ್ನುವ ಅನಿಸಿಕೆ ಆ ಪ್ರವಾಸಿಗರಲ್ಲಿ ಮೂಡುತ್ತಿದೆ.
ಈ ಪ್ರದೇಶದಲ್ಲೇ ಯಡಿಯೂರಪ್ಪ ಅವರು ತಮ್ಮ ಕರ್ನಾಟಕ ಜನತಾ ಪಕ್ಷವನ್ನು ಉದ್ಘಾಟಿಸಿದ್ದು. ಆ ಭಾಗದ ಹಲವು ವೀರಶೈವ ನಾಯಕರು ಯಡಿಯೂರಪ್ಪ ಅವರ ಜತೆಯಲ್ಲಿರುವುದಾಗಿ ಹೇಳಿ, ಕೊನೆಯ ನಿಮಿಷದಲ್ಲಿ ಬಿಜೆಪಿಯ ಚಿಹ್ನೆಯನ್ನೇ ಪಡೆದಿದ್ದು ಆ ಪಕ್ಷಕ್ಕೆ ಒಂದು ರೀತಿಯಲ್ಲಿ ದೊಡ್ಡ ಅಪಾಯವನ್ನು ತಪ್ಪಿಸಿದ್ದೂ ನಿಜ. ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಧಾರವಾಡ, ಗದಗ, ಹಾವೇರಿ ಸೀಮೆಯಲ್ಲಿ ಬಿಜೆಪಿ ಕಳೆದುಕೊಳ್ಳಬಹುದಾದ ಸ್ಥಾನಗಳು ಕಾಂಗ್ರೆಸ್ಸಿಗೇ ಹೆಚ್ಚಾಗಿ ಹೋಗುವುದು ಸಹಜವೇ. ಅಲ್ಲಿ ಜೆಡಿಎಸ್ ಪ್ರಭಾವ ಕಡಿಮೆ, ಕೆಜೆಪಿಯ ಪರಿಚಯ ಜನರಿಗೆ ಇಲ್ಲ. ಈ ಪರಿಸ್ಥಿತಿಯನ್ನು ಗಮನಿಸಿದ ಯಡಿಯೂರಪ್ಪ ಅವರು ತಮ್ಮ ಪತ್ರಿಕಾ ಸಂದರ್ಶನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಶಕ್ತಿ ಕಳೆದುಕೊಂಡರೆ (ಹಾಗೇ ಆಗತ್ತೆ ಎನ್ನುವುದು ಅವರ ನಂಬಿಕೆ) ಅದರ ಕತೆ ಮುಗಿದಂತೆಯೇ ಎನ್ನುತ್ತಿದ್ದಾರೆ. ಯಡಿಯೂರಪ್ಪ ಅವರ ಮಾತಿನ ಧಾಟಿಯೇ ಅದು. ಆ ಸ್ಥಾನಗಳಲ್ಲಿ ತಮ್ಮ ಪಕ್ಷ ಗೆಲ್ಲುವುದು ಕಷ್ಟವೆನ್ನುವುದು ಅವರಿಗೆ ಮನದಟ್ಟಾಗಿಲ್ಲ.

ಬಳ್ಳಾರಿಯ ಸತ್ಯ! ಕಾಂಗ್ರೆಸ್ ಸ್ಥಿತಿ: 2008ರಲ್ಲಿ ಬಳ್ಳಾರಿ ಹಾಗೂ ದಾವಣಗೆರೆಯ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು, ಅಲ್ಲಿನ ಗಣಿಧಣಿಗಳ ನೆರವಿನಿಂದ. ಈಗ ಆ ನೆರವು ಇಲ್ಲ. ಅಲ್ಲಿ ಬಿಜೆಪಿ ಸೊರಗಿದೆ. ಇದು ಕಾಂಗ್ರೆಸ್ಸಿಗೂ ಅನ್ವಯಿಸುವ ಮಾತೇ. ಅದಕ್ಕೇ ಕಾಂಗ್ರೆಸ್ ಇಲ್ಲಿ ಗಣಿಧಣಿಗಳಿಗೆ ಟಿಕೆಟ್ ಕೊಟ್ಟಿರುವುದು. ಶಿವಮೊಗ್ಗದಿಂದ ಬಳ್ಳಾರಿಯವರೆಗಿನ ಮಧ್ಯ ಕರ್ನಾಟಕ ಸೀಮೆಯಲ್ಲಿ ಈಚೆಗೆ ಹಿಂದುಳಿದ ಜಾತಿ- ಪಂಗಡಗಳ ಸಂಘಟನೆಗೆ ಬಲ ಬಂದಿದೆ. ಕಳೆದ ಬಾರಿ ಆ ಪ್ರದೇಶದಲ್ಲಿ ಬೇರೆ ಬೇರೆ ಕಾರಣಗಳಿಂದ ಅಲ್ಲಿ ಬಿಜೆಪಿ ಗೆದ್ದಿತ್ತು. ಈಗ ಹಿಂದೆ ಇದ್ದ ರಾಜಕೀಯ ಅನುಕೂಲ ಈಗ ಇಲ್ಲವಾಗಿದೆ. ಪ್ರಾಯಶಃ ಅದಕ್ಕೆ ಆಡಳಿತದ ದೋಷಗಳು ಕಾರಣವಾಗಿರಲೂಬಹುದು.
ಹೆಚ್ಚು ಕಡಿಮೆ ಹೈದರಾಬಾದ್ ಕರ್ನಾಟಕದ ಪರಿಸ್ಥಿತಿಯೂ ಇದೇ. ಅಲ್ಲಿನ ಬಿಜೆಪಿಗೆ ನಾಯಕತ್ವವೇ ಇದ್ದಂತಿಲ್ಲ. ಕಾಂಗ್ರೆಸ್ಸಿಗೆ ಈ ಪ್ರದೇಶದಲ್ಲಿ ದಶಕಗಳಿಂದಲೂ ಸೋಲನ್ನೇ ಅರಿಯದ ನಾಯಕರಿದ್ದಾರೆ. ಹಾಗಿದ್ರೆ ಬಿಜೆಪಿಗೆ ಅನುಕೂಲವಾಗಿರುವ ಪ್ರದೇಶಗಳು ಯಾವುವು? ಮೊದಲಿನಿಂದಲೂ, ಕರ್ನಾಟಕದ ಕರಾವಳಿ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಘಟ್ಟದ ಸೀಮೆ ಬಿಜೆಪಿಯ ಭದ್ರ ಕೋಟೆಗಳಲ್ಲದೇ ಇದ್ದರೂ, ಅಲ್ಲಿ ದಶಕಗಳಿಂದಲೂ, ಅತಿ ಕಷ್ಟ ಕಾಲದಲ್ಲೂ ಬಿಜೆಪಿಯ ಧ್ವಜವನ್ನು ಎತ್ತಿ ಹಿಡಿದವರಿದ್ದಾರೆ.
ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿರುವಂತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕರಾವಳಿಯ ನಗರಗಳಲ್ಲಿ ಮೊದಲ ಬಾರಿಗೆ ದೊಡ್ಡ ರೀತಿಯಲ್ಲಿ ಕಾಣಿಸಿಕೊಂಡ ನೈತಿಕ ಪೊಲೀಸ್ ವ್ಯವಸ್ಥೆಗೆ, ಸರ್ಕಾರದ ಪರೋಕ್ಷ ಬೆಂಬಲ ಸಿಕ್ಕಿದಂತಹ ವಾತಾವರಣ ಬೆಳೆದು ಬಂದಿದೆ. ಅಲ್ಲಿನ ಯುವ ಜನಾಂಗಕ್ಕೆ ಸಿಟ್ಟು ಬಂದಿರುವುದು ಅನೇಕ ರೀತಿಯಲ್ಲಿ ಮಾಧ್ಯಮ ಪ್ರಪಂಚದಲ್ಲಿ ಪ್ರಕಟವಾಗುತ್ತಿದೆ. ಬಿಜೆಪಿಗೆ ಈ ಪ್ರದೇಶದಲ್ಲಿ ಪರಿಸ್ಥಿತಿಯನ್ನು ಸುಧಾರಿಸುವ ಶಕ್ತಿ ಇದ್ದರೂ ಇರಬಹುದು.
ಬೆಂಗಳೂರು ಮಹಾನಗರದಲ್ಲಿ ಹಲವು ಕ್ಷೇತ್ರಗಳಲ್ಲಿ ಸ್ಥಳೀಯ ಬಿಜೆಪಿ ಶಾಸಕರು, ಕಾರ್ಯಕರ್ತರು ಜನಸಾಮಾನ್ಯ ವರ್ಗಗಳ ನೆರವಿಗೆ ಬಂದಿರುವುದು ನಿಜ. ಅದೇ ರೀತಿ ಸರ್ಕಾರದ ಹೊಚ್ಚ ಹೊಸ ಯೋಜನೆಯಾದ ಸಕಾಲದಲಾಭ (ನಿರ್ದಿಷ್ಟ ಕೆಲಸವನ್ನು ನಿರ್ದಿಷ್ಟವಾದ ಅವಧಿಯಲ್ಲಿ ಮಾಡಿಕೊಡುವುದು) ಸಿಕ್ಕಿರುವುದೂ ಇಲ್ಲಿನ ಮಧ್ಯಮ ವರ್ಗಕ್ಕೇ. ಆದರೆ ಭ್ರಷ್ಟಾಚಾರದ ಪಿಡುಗು ನಾಗರಿಕರ ಮನಸ್ಸನ್ನು ಕದಡಿರುವುದೂ ನಿಜ.
ಕಾಂಗ್ರೆಸ್ ಪ್ರಯತ್ನ ಕಡಿಮೆ: ರಾಜ್ಯದಲ್ಲಿ ಕಾಂಗ್ರೆಸ್‌ನ ಗೆಲವು ಸಾಧ್ಯ ಎನ್ನುವ ಮಾತು ಅನೇಕ ಕಡೆಗಳಲ್ಲಿ ಕೇಳಿಬರುವುದಕ್ಕೆ, ಆ ಪಕ್ಷದ ಪ್ರಯತ್ನ ಶೂನ್ಯ. ಭ್ರಷ್ಟಾಚಾರದ ಪ್ರಕರಣಗಳನ್ನು ವಿಧಾನ ಮಂಡಲದ ಒಳಗೆ- ಹೊರಗೆ ಬಯಲಿಗೆಳೆದು ಹೋರಾಡಿ ಅದರ ಮೂಲಕ ಆಳುವ ಪಕ್ಷಕ್ಕೆ ಕಳಂಕವನ್ನು ಅಂಟಿಸಲು ಪ್ರಯತ್ನಿಸುವುದರಲ್ಲಿ ರಾಜಕೀಯವಾಗಿ ಜಾತ್ಯತೀತ ಜನತಾ ದಳದ ಪಾತ್ರ ದೊಡ್ಡದು. ಅದಕ್ಕಿಂತ ಹೆಚ್ಚಾಗಿ ಈ ಕೆಲಸವನ್ನು ಮಾಡಿದ್ದು ಖಾಸಗಿ ವ್ಯಕ್ತಿಗಳು. ವಾಸ್ತವದಲ್ಲಿ ಕರ್ನಾಟಕದಲ್ಲೇ ಹಲವಾರು ಭ್ರಷ್ಟಾಚಾರದ ಪ್ರಕರಣದಲ್ಲಿ ಕಾಂಗ್ರೆಸ್ಸಿಗರ ಪಾಲೂ ಇರಬಹುದು. ಅಕ್ರಮ ಗಣಿಗಾರಿಕೆಯಲ್ಲಂತೂ ಆ ಮಾತು ನಿಜ. ಅದಕ್ಕೇ ಕಾಂಗ್ರೆಸ್ ಲೋಕಾಯುಕ್ತ ವರದಿಗಳನ್ನು ಗಂಭೀರವಾಗಿ ಪರಿಗಣಿಸದೇ ಹೋಗಿದ್ದು. ಅನೇಕರ ದೃಷ್ಟಿಯಲ್ಲಿ ಭ್ರಷ್ಟಾಚಾರದ ಪ್ರಕರಣಗಳು ದೊಡ್ಡ ರೀತಿಯಲ್ಲಿ ಬೆಳಕು ಕಂಡಿದ್ದು ಮಾಧ್ಯಮ ಪ್ರಪಂಚದಲ್ಲೇ.
ನಿಜ ಹೇಳಬೇಕೆಂದರೆ ಕಾಂಗ್ರೆಸ್ಸಿನ ಆಂತರಿಕ ರಾಜಕೀಯ ಸ್ಥಿತಿಗತಿ ಹೇಳಿಕೊಳ್ಳುವ ರೀತಿಯಲ್ಲಿ ಇಲ್ಲ. ಸುಮಾರು ನಾಲ್ಕು ದಶಕಗಳ ಕಾಲ (ಮಧ್ಯೆ ಮೂರು- ನಾಲ್ಕು ವರ್ಷ ಬಿಟ್ಟರೆ) ಕಾಂಗ್ರೆಸ್ ರಾಜ್ಯದ ಪ್ರಬಲ ಕೋಮುಗಳಾದ ವೀರಶೈವರು, ಒಕ್ಕಲಿಗರನ್ನು ದೂರವೇ ಇಟ್ಟಿರುವುದೂ ನಿಜ. ಆ ಜನಾಂಗಗಳಲ್ಲಿ ಹೋರಾಟದ ಸ್ವಭಾವವನ್ನು ಮೈಗೂಡಿಸಿಕೊಂಡಿರುವ ನಾಯಕರ ಅಭಾವವೇ ಇದಕ್ಕೆ ಕಾರಣ.
ಕಾಂಗ್ರೆಸ್ಸಿನಲ್ಲಿ ಈಗ ಹಿರಿತನದ ಪಟ್ಟಕ್ಕೆ ಏರಿರುವ ಎಸ್.ಎಂ. ಕೃಷ್ಣ ಅವರ ಸ್ಥಿತಿಯನ್ನೇ ಗಮನಿಸಿ. ಅವರಿಗೆ ಬೇಜಾರಾಗಿದೆ. ಆದರೂ ಅನಿವಾರ್ಯವಾಗಿ ತಮ್ಮ ಮಾತು ನಡೆಯುವ ಕಡೆ ಪ್ರಚಾರಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ಸಂಘಟನೆಯಲ್ಲಿ, ಶಾಸಕಾಂಗ ಪಕ್ಷದಲ್ಲಿ ಈ ಪ್ರಬಲ ಜನಾಂಗಗಳ ನಾಯಕರಿಗೆ ಸ್ಥಾನಮಾನವಿಲ್ಲ. ಶ್ಯಾಮನೂರು ಶಿವಶಂಕರಪ್ಪ ಅವರಂತಹ ಹಿರಿಯರನ್ನೂ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಅವರಿಗಿರುವ ಮರ್ಯಾದೆ ಅವರು ವೀರಶೈವ ಮಹಾಸಭೆಯ ಅಧ್ಯಕ್ಷರೆನ್ನುವ ಕಾರಣಕ್ಕಾಗಿ.
ಕಾಂಗ್ರೆಸ್ಸಿನಲ್ಲಿ ಟಿಕೆಟ್ ಮಾರಾಟದ ದಂಧೆಯ ವರದಿಯಾಗಿತ್ತು. ತನಿಖೆಯ ಮಾತು ಕೇಳಿ ಬಂದಿತ್ತು. ಅದು ಅಲ್ಲಿಗೇ ನಿಂತು ಹೋಯಿತು. ಆದರೆ ಅದರ ಕಹಿ ಕಾರ್ಯಕರ್ತರಲ್ಲಿ ಇನ್ನು ಉಳಿದುಬಿಟ್ಟಿದೆ. ಅವರಿಗೆ ತಾನೇ ಬೇರೆ ದಾರಿ ಎಲ್ಲಿದೆ? ಇತರೆ ಪಕ್ಷಗಳಲ್ಲಿನ ದೌರ್ಬಲ್ಯಗಳೇ ಕಾಂಗ್ರೆಸ್ಸಿನ ಶಕ್ತಿ.

ಜೆಡಿಎಸ್‌ನ ವ್ಯಾಪ್ತಿ ಸೀಮಿತ: ದೀರ್ಘ ಕಾಲದ ಅನುಭವ ಆಧರಿತ, ಶಕ್ತಿಶಾಲಿ ಕೌಟುಂಬಿಕ ನಾಯಕತ್ವದ ಆಸರೆಯಲ್ಲಿ ಜಾತ್ಯತೀತ ಜನತಾದಳ ತನ್ನ ಶಕ್ತಿಯ ನೆಲೆಗಳನ್ನು ಭದ್ರವಾಗಿ ಉಳಿಸಿಕೊಂಡಿರುವಂತಿದೆ. ಪಕ್ಷದ ಹಿರಿಯ ದೇವೇಗೌಡರ ಮನೆತನದಿಂದಲೇ ಮೂವರು ಕಣಕ್ಕಿಳಿದಿದ್ದಾರೆ. ಆ ಪಕ್ಷದಲ್ಲೂ ಅಲ್ಲಿ- ಇಲ್ಲಿ ಗೊಣಗಾಟ ಕೇಳಿ ಬಂದರೂ, ಅದು ಪಕ್ಷದ ರಾಜಕೀಯ ಸಂಘಟನೆಯ ಶಕ್ತಿಯ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಅಲ್ಲಿ ಪ್ರಭಾವಿ ಬಂಡಾಯಗಾರರು ಯಾರೂ ಇಲ್ಲ. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷದ ರಾಜಕೀಯ ಶಕ್ತಿ ಬಿಜೆಪಿಯ ಬೇರಿನಿಂದಲೇ ಬಂದಿದ್ದು. ಶ್ರೀರಾಮುಲು ನೇತೃತ್ವದ ಬಿಎಸ್ಸಾರ್ ಕಾಂಗ್ರೆಸ್ಸಿಗೆ ಸಂಖ್ಯೆಯ ದೃಷ್ಟಿಯಿಂದ ಶಕ್ತಿಶಾಲಿಯಾಗುವ ಅವಕಾಶವಿದೆ. ಅದಕ್ಕೆ ಸಂಘಟನೆ ಬೇಕು. ಕಾಂಗ್ರೆಸ್ ವೋಟುಗಳನ್ನು ಕಸಿಯುವ ಶಕ್ತಿ ಇದೆ. ಅದರ ಪರಿಣಾಮವನ್ನು ಊಹಿಸುವುದ ಕಷ್ಟ.

ಕಿಡಿಗೇಡಿತನ- ಯಾವ ರಾಜಕೀಯ ಪಕ್ಷದ ಪ್ರಣಾಳಿಕೆಯಲ್ಲೂ ಭ್ರಷ್ಟಾಚಾರ, ಭೂ ಕಬಳಿಕೆ, ಜಾತೀಯತೆಯ ಪ್ರಸ್ತಾಪ ಇರಬೇಕಾದ ಖಚಿತ ರೀತಿಯಲ್ಲಿ ಇಲ್ಲ. ಎಲ್ಲ ಪಕ್ಷಗಳೂ, ಎಲ್ಲರಿಗೂ ಅಗ್ಗದ ಅಕ್ಕಿ- ಗೋಧಿ ಹಂಚಲು ಕಂಕಣಬದ್ಧ.

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com