ಅಂಕಣಗಳು

ಕಚೇರಿಯ ಮುಂದೆ ನೂರಾರು ಎಮ್ಮೆಗಳ ಪ್ರತಿಭಟನೆ!

Published On :

ಶಾಲಿನಿ: ಈ ವಾರ ನಿಮಗೆ ಕೋಟೆ ಕೆರೆಯ ಬಗ್ಗೆ ಹೇಳಲೇಬೇಕು. ಬೆಳಗಾವಿ ಕೋಟೆಯ ಪಕ್ಕದಲ್ಲಿರುವ ಕೆರೆ ಈ ದಿನಗಳಲ್ಲಿ ನೋಡಲೇಬೇಕಾದ ಸ್ಥಳಗಳಲ್ಲೊಂದು. ಆದರೆ ನಾನು ಅಲ್ಲಿ ಅಧಿಕಾರದಲ್ಲಿದ್ದಾಗ ಈ ಕೆರೆ ಅತ್ಯಂತ ಅವ್ಯವಸ್ಥೆಯಲ್ಲಿತ್ತು. ಕೋಟೆ ಕೆರೆಯನ್ನು ಉತ್ತಮಗೊಳಿಸಬೇಕೆಂದು ಯೋಚಿಸಿ ವಿಷಯ ಸಂಗ್ರಹಿಸಲು  ಪತ್ರಿಕಾ ಗೋಷ್ಠಿಯನ್ನು ಕರೆದೆ. ಕೋಟೆ ಕೆರೆ ಎಲ್ಲರ ಅಭಿಪ್ರಾಯದಲ್ಲಿ ದುರದೃಷ್ಟವನ್ನು ತರುವ ಕೆರೆಯಾಗಿತ್ತು. ಅದಕ್ಕಾಗಿಯೇ ಈ ಕೆರೆಯ ಬಗ್ಗೆ ಯಾವ ಜನ ಪ್ರತಿನಿಧಿಗಳೂ, ಅಧಿಕಾರಿಗಳೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಜಿಲ್ಲಾಧಿಕಾರಿಯೇನಾದರೂ ಈ ಕೆಲಸವನ್ನು ಕೈಗೆತ್ತಿಕೊಂಡರೆ ಅವರಿಗೆ ವರ್ಗಾವಣೆ ಕಟ್ಟಿಟ್ಟ ಬುತ್ತಿ ಎನ್ನುವಂಥ ಚರಿತ್ರೆ ಇತ್ತು. ಅದು ನಿಜಕ್ಕೂ ದುರದೃಷ್ಟಕರ ಕೆರೆ ಎಂದಾದರೆ, ಹೆಚ್ಚೆಂದರೆ ನನಗೆ ಅಲ್ಲಿಂದ ವರ್ಗಾವಣೆಯಾಗಬಹುದು. ಅಷ್ಟೇ ತಾನೇ? ಅದಕ್ಕೆ ನಾನೇನು ಹೆದರುವವಳಲ್ಲ. ನಾವು ಒಂದು ಹುದ್ದೆಯಲ್ಲಿ ಗರಿಷ್ಟ ಎರಡು ಮೂರು ವರ್ಷಗಳು ಇರಬಹುದು. ನಂತರ ನಮಗೆ ವರ್ಗಾವಣೆ ಆಗೇ ಆಗುತ್ತದೆ. ಎಷ್ಟು ಸಮಯ ಒಂದು ಜಾಗದಲ್ಲಿ ಇರುತ್ತೇವೆ ಎನ್ನುವುದು ಮುಖ್ಯವಲ್ಲ, ಹೋಗುವ ಮುಂಚೆ ಜನರಿಗೆ ಏನು ಮಾಡಿ ಹೋಗುತ್ತೇವೆ ಎನ್ನುವುದು ಮುಖ್ಯ. ಮೂಢ ನಂಬಿಕೆಯಿಂದಾಗಿ ಇಷ್ಟು ಸುಂದರ ಹಾಗೂ ಐತಿಹಾಸಿಕ ಊರಿನಲ್ಲಿರುವ ಕೆರೆ ಕಳಂಕಿತವೆಂದು ಗುರುತಿಸಿಕೊಳ್ಳುವುದು ಅವೈಜ್ಞಾನಿಕ ಎಂದು ಅನಿಸಿತು. ಏನಾದರೂ ಆಗಲಿ, ಈ ಕೋಟೆ ಕೆರೆಯನ್ನು ನಾನು ಜೀರ್ಣೋದ್ಧಾರ ಮಾಡಿಯೇ ಮಾಡುತ್ತೇನೆ ಎಂದು ನಿರ್ಧರಿಸಿದೆ.
ಮಾಧ್ಯಮದವರ ಅಳಲೇನಾಗಿತ್ತೆಂದರೆ ಈ ಕೆರೆಯು ಊರಿನ ಬಾಗಿಲಲ್ಲಿಯೇ ಇದೆ. ಈ ಕೆರೆ ಊರಿನ ಜನರ ಸ್ವಾಭಿಮಾನದ ಪ್ರತೀಕವಾಗಿದೆ. ಬೇರೆ ಊರಿಂದ ಬಂದ ಜನರಿಗೆ ಈ ಕೆರೆ ಊರಿನ ಬಗ್ಗೆ ಉತ್ತಮ ಭಾವನೆ ಮೂಡಿಸಬಹುದು ಎಂಬುದು. ಈ ಯೋಜನೆಯನ್ನು ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಳ್ಳುತ್ತೇನೆ ಎಂದು ಮಾಧ್ಯಮದವರಿಗೆ ಮಾತುಕೊಟ್ಟೆ. ನಂತರ ಏಕೆ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದರ ಬಗ್ಗೆ  ಕೂಲಂಕಷವಾಗಿ ತಿಳಿದುಕೊಳ್ಳಲಾರಂಭಿಸಿದೆ. ಕೇಂದ್ರ ಸರ್ಕಾರದ ಪರ್ಯಾವರಣ ಇಲಾಖೆಯ 'ಕೆರೆ ಅಭಿವೃದ್ಧಿ ಯೋಜನೆ' ಅಡಿಯಲ್ಲಿ ಒಂದು ಕೆರೆಯ ಸಂಪೂರ್ಣ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರಕ್ಕೆ ಐದು ಕೋಟಿ ರುಪಾಯಿಗಳು ಸಿಗುತ್ತವೆ. ಇಷ್ಟು ಹಣ ಲಭ್ಯವಿದ್ದೂ, ನಿರೀಕ್ಷಿತ ಕೆಲಸ ಏಕೆ ಆಗುತ್ತಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದೆ. ಆಗ ನನಗೆ ತಿಳಿದು ಬಂದದ್ದೇನೆಂದರೆ- 1995ನೆಯ ಇಸವಿಯಲ್ಲಿಯೇ ಕೆರೆಯ ಹೂಳೆತ್ತುವ ಕಾರ್ಯವನ್ನು ಭೂ ಸೇನಾ (ಔಛಟಿಜ ಆ್ಠಟಣ) ನಿಗಮಕ್ಕೆ ವಹಿಸಿಕೊಡಲಾಗಿತ್ತು. ಅವರು ತಮ್ಮ ಕೆಲಸವನ್ನು ಮಾಡಿ, ತಮ್ಮ ಬಿಲ್ಲನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊಟ್ಟಿದ್ದರು. ಆದರೆ ಬಿಲ್ಲು ಮೊತ್ತ ಅವರು ಒಪ್ಪಿಕೊಂಡಿದ್ದ ಪ್ರಮಾಣಕ್ಕಿಂತ ದುಪ್ಪಟ್ಟಾಗಿತ್ತು. ಅಲ್ಲದೆ ಕೆರೆಯನ್ನು ಹೇಳಿದಷ್ಟು ಆಳವಾಗಿ ಸರಿಸಮನಾಗಿ ಅಗೆದಿರಲಿಲ್ಲ. ಹಾಗಾಗಿ ಕೆರೆಯಲ್ಲಿ ದೋಣಿ ವಿಹಾರ ಮಾಡುವುದೂ ಅಸಾಧ್ಯವಾಗಿತ್ತು. ಈ ರೀತಿ ಯಾಕಾಯಿತು ಎಂದರೆ, ಹೊಳನ್ನೆತ್ತುವಾಗ ಒಂದು ದೊಡ್ಡ ಕಲ್ಲು ಸಿಕ್ಕಿತು. ಹಾಗಾಗಿ ಆ ಜಾಗದಲ್ಲಿ ಹೆಚ್ಚು ಆಳಕ್ಕೆ ಅಗೆಯಬೇಕಾಗಿತ್ತು. ಒಟ್ಟು ಕ್ಯೂಬಿಕ್ ಮೀಟರ್ ಪ್ರಮಾಣ ಹೆಚ್ಚಾಗುತ್ತದೆ ಎಂದು ಹೆದರಿ, ಸಂಸ್ಥೆಯ ಇಂಜಿನಿಯರುಗಳು ಕೆಲಸವನ್ನು ನಿಲ್ಲಿಸಿದರು. ನಂತರ ಮಳೆ ಬಂದಿತು. ನಿಜವಾಗಿ ಎಲ್ಲಿ ಎಷ್ಟು ಆಳ ಇದೆ ಎಂದು ತೋರಿಸಿಕೊಡಲು ಅಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿ ಅವರ ಬಿಲ್ಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಜೂರಾಗಲಿಲ್ಲ. ಹಿಂದಿನ ಹಣ ಪಾವತಿ ಆಗದೆ ಇರುವುದರಿಂದ ಮುಂದಿನ ಕೆಲಸ ಮಾಡಲು ಸಂಸ್ಥೆಯ ಮುಖ್ಯಸ್ಥರು ನಿರಾಕರಿಸಿದರು. ಇದರಲ್ಲೇ ಹತ್ತು ವರ್ಷಗಳು ಉರುಳಿಹೋದವು. ಹೇಳುವುದಕ್ಕೆ ಎಲ್ಲಾ ಇಲಾಖೆಗಳೂ ಸರ್ಕಾರದ ಅಂಗವಾಗಿರುತ್ತವೆ, ಆದರೆ ಕೆಲಸದ ವೇಳೆ ನಾವು ಪರಸ್ಪರ ಸಹಕಾರ ತೋರಿಸುವ ಬದಲು ಕೇವಲ ನಮ್ಮ ಇಲಾಖೆ ಅಥವಾ ಸಂಸ್ಥೆಯ ಫಾಯಿದೆಯನ್ನು ಮಾತ್ರ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ನಮ್ಮ ಬಗ್ಗೆಯೇ ನಮಗೆ ಗಮನವಿದ್ದಾಗ ಜನರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುವುದಿಲ್ಲ. ಅದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಮಟ್ಟದಲ್ಲಿ ಮುಖ್ಯ ಕಾರ್ಯದರ್ಶಿಗಳು ನೂರಾರು ಸಮಿತಿಗಳ ಅಧ್ಯಕ್ಷತೆಯನ್ನು ವಹಿಸಿ ಇಲಾಖೆಗಳ ಪರಸ್ಪರ ಸಮನ್ವಯತೆಯನ್ನು ಸಾಧಿಸುತ್ತಾರೆ. ನಾನೂ ಸಹ ಕೆರೆ ಅಭಿವೃದ್ಧಿ ಸಮಿತಿಯನ್ನು ಸಕ್ರಿಯಗೊಳಿಸಿದೆ. ಸ್ಥಳೀಯ ಶಾಸಕರನ್ನು ಆಹ್ವಾನಿಸಿದೆ. ಸಮಿತಿಯ ಮುಖ್ಯ ನಿರ್ಣಯಗಳಿಗೆ ಅನುಗುಣವಾಗಿ ಆ ನಿಗಮದ ಮುಖ್ಯಸ್ಥರನ್ನು ಕರೆಸಿ, ಇನ್ನೂ ಹೆಚ್ಚಿನ ಆಳಕ್ಕೆ ಅಗೆದು ಕೆಲಸವನ್ನು ಅಚ್ಚುಕಟ್ಟಾಗಿ ಪೂರೈಸಿಕೊಡಬೇಕೆಂದು ಮನವಿ ಮಾಡಿಕೊಂಡೆ. ಹಾಗಿ ಮಾಡಿ ಕೊಟ್ಟರೆ ನೆನೆಗುದಿಗೆ ಬಿದ್ದಿದ್ದ ಅವರ ಬಿಲ್ಲುಗಳ ಪಾವತಿಯನ್ನು ಮಾಡುತ್ತೇನೆಂದು ತಿಳಿಸಿದೆ. ಭೂ ಸೇನಾ ಇಲಾಖೆ ಮತ್ತು ಸರೋವರ ಅಭಿವೃದ್ಧಿ ಪ್ರಾಧಿಕಾರದವರಿಗೆ ನನ್ನ ಅಪೇಕ್ಷೆ ಸರಿಯೆನ್ನಿಸಿತು. ಭಾರತ ಸರ್ಕಾರಕ್ಕೆ ಎಲ್ಲಾ ತಂತ್ರಜ್ಞಾನಗಳನ್ನೊಳಗೊಂಡ ತಾರ್ಕಿಕ ವರದಿಯನ್ನು ಸಲ್ಲಿಸಲಾಯಿತು. ಭೂ ಸೇನಾ ನಿಗಮದ ನಿರ್ದೇಶಕರಾಗಿದ್ದ ಶ್ರೀಕಾಂತ್‌ರವರು ನನ್ನ ಮನವಿಯ ಮೇರೆಗೆ ಮೂರು ಬಾರಿ ಬೆಳಗಾವಿಗೆ ಭೇಟಿಯನ್ನಿತ್ತರು. ತಮ್ಮ ನಿಗಮದ ಅಧಿಕಾರಿಗಳನ್ನು ಕೆಲಸ ಮಾಡಲು ಪ್ರೇರೇಪಿಸಿದರು. ಅಂದಿನ ಮಂತ್ರಿಗಳು ಸಹ ಈ ಕೆಲಸವನ್ನು ತಮ್ಮ ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡರು. ಅರ್ಧ ದುಡ್ಡನ್ನು ಕೊಟ್ಟ ನಂತರ ಕೆರೆಯನ್ನು ಸರಿಸಮಾನವಾಗಿ ಆಳವಾಗಿ ಅಗೆದು, ಹೂಳನ್ನೆತ್ತಲಾಯಿತು, ಹಾಗೂ ಮಳೆ ನೀರು ಹೊರಗೆ ಹೋಗದೆ ಇರುವ ಹಾಗೆ ವ್ಯವಸ್ಥೆ ಮಾಡಲಾಯಿತು.
ಮೊದಲನೆಯ ಸವಾಲನ್ನು ಯಶಸ್ವಿಯಾಗಿ ಪರಿಹರಿಸಿದ್ದಾಗಿತ್ತು. ಎರಡನೆಯ ಸವಾಲು ಎದುರಾಯಿತು. ಊರಿನ ಚರಂಡಿಯ ನೀರೆಲ್ಲ ಈ ಕೆರೆಗೆ ಬಂದು ಸೇರುತ್ತಿತ್ತು. ಈ ಕೆರೆ ಕೆಳಮಟ್ಟದಲ್ಲಿದ್ದುದರಿಂದ ಮತ್ತು ಸುತ್ತ ಮುತ್ತಲೂ ಸರಿಯಾದ ನಾಲೆ ವ್ಯವಸ್ಥೆ ಇಲ್ಲದ್ದರಿಂದ ಊರಿನ ಕೊಳಚೆ ನೀರೆಲ್ಲ ಈ ಕೆರೆಗೆ ಸೇರುತ್ತಿತ್ತು. ಚರಂಡಿಯ ನೀರು ಈ ಕೆರೆಗೆ ಬರದಂತೆ ತಡೆಯಬೇಕಾಗಿದ್ದಿತು. ಚರಂಡಿ ನೀರನ್ನು ಸಂಸ್ಕರಿಸುವ ಯೋಜನೆ ಇರಲಿಲ್ಲ. ಆಗ ಹೊಸ ಯೋಚನೆಯೊಂದನ್ನು ಸಿದ್ಧಪಡಿಸಿದೆವು. ಊರ ಹೊರಗಿರುವ ಹೊಲ ಗದ್ದೆಗಳಿಗೆ ಈ ಚರಂಡಿ ನೀರನ್ನು ಹರಿಸಿದರೆ ಬೆಳೆಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿದು ರೈತರ ಜೊತೆ ಮಾತನಾಡಿ, ಅವರ ಮನವೊಲಿಸಿ, ಚರಂಡಿ ನೀರನ್ನು ಕೆರೆಗೆ ಬರದಂತೆ ದಿಕ್ಕು ಬದಲಾಯಿಸಲಾಯಿತು. ನಂತರ ಎರಡೂವರೆ ಕಿಲೋಮೀಟರುಗಳಷ್ಟು ಉದ್ದದ ನಾಲೆ ವ್ಯವಸ್ಥೆಯನ್ನು ಹೆದ್ದಾರಿಯ ಮೂಲಕ ಹರಿಸಲು ಒಪ್ಪಿಗೆಯನ್ನು ಪಡೆದು, ಚರಂಡಿ ನೀರನ್ನು ಸಂಸ್ಕರಿಸುವ ಒಂದು ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಮಳೆಗಾಲ ಶುರುವಾಗುವ ಮೊದಲೇ ಈ ಕೆಲಸ ಮಾಡಿ ಮುಗಿಸಬೇಕಿತ್ತು. ಬಹಳ ಒತ್ತಡಗಳ ನಡುವೆಯೂ ಕರ್ನಾಟಕ ನೀರು ಮತ್ತು ಒಳ ಚರಂಡಿ ಮಂಡಳಿಯವರು ಅಭಿನಂದನಾರ್ಹ ಕೆಲಸ ಮಾಡಿದರು. ಹೊಸ ಚರಂಡಿ ನೀರಿನ ಸಂಸ್ಕರಣಾ ವ್ಯವಸೆ,್ಥ ಕೆರೆಯನ್ನು ಕೊಳಚೆ ನೀರಿನಿಂದ ಮಲಿನಗೊಳ್ಳುವುದನ್ನು ತಪ್ಪಿಸಿತು.
ನಮಗೆದುರಾದ ಮೂರನೆಯ ಸವಾಲೆಂದರೆ, ಕೆರೆಯ ಇನ್ನೊಂದು ಬದಿಗಿದ್ದ ಜನರು ಕೆರೆಯ ದಂಡೆಯ ಮೇಲೆ ನಡೆದೂ ನಡೆದು, ಅದನ್ನು ತಮ್ಮ ಮನೆಗಳಿಗೆ ಹೋಗುವ ದಾರಿಯನ್ನಾಗಿ ಮಾಡಿಕೊಂಡಿದ್ದರು. ಕೋಟೆ ಕೆರೆಯ ಪುನರುತ್ಥಾನದ ಯೋಜನೆಯಲ್ಲಿ ಪಾರ್ಕು, ಮಕ್ಕಳ ಆಟದ ರೈಲುಗಳು, ವಾಕಿಂಗ್‌ಗಾಗಿ ಪ್ರತ್ಯೇಕ ದಾರಿ, ಸಭಾಂಗಣ, ಮತ್ತಿತರ ಮನರಂಜನೆಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರಿಂದಾಗಿ ಸಹಜವಾಗಿಯೇ ತಮ್ಮ ಅಡ್ಡದಾರಿಗೆ ಅಡ್ಡಿಯುಂಟಾದುದರಿಂದ ಸ್ವಲ್ಪ ಜನರಿಗೆ ಬೇಸರವಂತೂ ಆಯಿತು.ಅವರಿಗೂ ಬೇರೆಯ ದಾರಿಯನ್ನು ಮಾಡಿಸಿ ಸಮಾಧಾನ ಪಡಿಸಲಾಯಿತು ಹಾಗೂ ಕೆರೆಯ ಆವರಣದ ಭದ್ರತೆಯನ್ನು ಕಾಪಾಡಲಾಯಿತು.
ನಾಲ್ಕನೆಯ ಸವಾಲು ಎದುರಾಯಿತು. ಪ್ರತಿನಿತ್ಯ ಕೋಟೆ ಕೆರೆಯನ್ನು ನೂರಾರು ಎಮ್ಮೆಗಳಿಗೆ ಸ್ನಾನ ಮಾಡಿಸಲು ಬಳಸಲಾಗುತ್ತಿತ್ತು. ಕೆರೆ ಶುಚಿ ಕೆಲಸಕ್ಕಾಗಿ ತಡಿಕೆಗಳನ್ನು ನಿರ್ಮಿಸಿದುದಕ್ಕಾಗಿ ಪ್ರತಿಭಟನೆ ಶುರುವಾಯಿತು. ಇದನ್ನು ಮೊದಲೇ ಮನಗಂಡು ಇನ್ನೊಂದು ಕಡೆ ಹಳ್ಳವಿರುವ ಜಾಗದಲ್ಲಿ ವ್ಯವಸ್ಥೆಯನ್ನು ಮಾಡಬೇಕೆಂದು ಸೂಚಿಸಿದ್ದೆ. ಅಷ್ಟರಲ್ಲಿ ಒಂದು ದಿನ ಕಚೇರಿಗೆ ಬಂದು ನೋಡಿದರೆ ಅಲ್ಲಿ ನೂರಾರು ಎಮ್ಮೆಗಳನ್ನು ತಂದು ನಿಲ್ಲಿಸಿದ್ದರು. ಎಮ್ಮೆಗಳೇ ಪ್ರತಿಭಟಿಸುತ್ತಿವೆಯೇನೋ ಎಂಬ ಭಾವ ಬರುತ್ತಿತ್ತು! ಬೇರೆ ಜಾಗದ ವ್ಯವಸ್ಥೆ ಮಾಡುವವರೆಗೆ ಎಮ್ಮೆಗಳು ಇಲ್ಲಿಯೇ ಇರುತ್ತವೆ ಎಂದು ಜನ ಪ್ರತಿಭಟಿಸಿದರು. ನಂತರ ಅವರಿಗೆ ಪರ್ಯಾಯ ವ್ಯವಸ್ಥೆಯ ಬಗ್ಗೆ ತಿಳಿಸಿ, ಮನ ಒಲಿಸಿದ ಮೇಲೆ ಒಪ್ಪಿಕೊಂಡು ಸಹಕರಿಸಿದರು.
ದೇವರ ದಯೆಯಿಂದ ಒಳ್ಳೆಯ ಮಳೆಯೂ ಬಂದು ಕೋಟೆ ಕೆರೆ ತುಂಬಿತು. ಇಷ್ಟೆಲ್ಲಾ ವ್ಯವಸ್ಥೆಗಳನ್ನು ಮಾಡಿದ ಮೇಲೆ ಅದನ್ನು ಕಾಪಾಡಿಕೊಂಡು ಜನರಿಗೆ ಉತ್ತಮ ಸೇವೆಯನ್ನು ಸಲ್ಲಿಸಲು ಆಸಕ್ತಿಯುಳ್ಳ ಸಂಸ್ಥೆಗಳಿಂದ ಟೆಂಡರುಗಳನ್ನು ಕರೆಯಲಾಯಿತು. ಎರಡು ಸಂಸ್ಥೆಗಳು ಭಾಗವಹಿಸಿದವು. ಹೆಚ್ಚು ಮೊತ್ತ ಕೊಡಲು ಒಪ್ಪಿಕೊಂಡ ಸಂಸ್ಥೆಗೆ ಮೂವತ್ತು ವರ್ಷಗಳ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಪರಿಸರವನ್ನು ಸ್ವಚ್ಛವಾಗಿ ಕಾಪಾಡಿ, ಮಳೆ ನೀರಿನ ಸದುಪಯೋಗದೊಂದಿಗೆ, ಸಾರ್ವಜನಿಕರಿಗೆ ಆಹಾರ ಸಿಗುವ ವ್ಯವಸ್ಥೆ, ಶೌಚಾಲಯ ನಿರ್ವಹಣೆ, ಮನರಂಜನೆಗಾಗಿ ದೋಣಿಗಳು, ಆಟದ ರೈಲು, ಇನ್ನಿತರ ಮನರಂಜನೆಯ ವ್ಯವಸ್ಥೆಗಳು, ಸಾಂಸ್ಕೃತಿಕ ಚಟುವಟಿಕೆಗಳು, ಮುಂತಾದ ಉತ್ತಮ ವ್ಯವಸ್ಥೆಗಳೂ ಸಂಸ್ಥೆಯ ಜವಾಬ್ದಾರಿಯಾಗಿತ್ತು.
ಸವಾಲನ್ನು ಸ್ವೀಕರಿಸಿ ಉತ್ತಮವಾಗಿ ಕೆಲಸ ನಿಭಾಯಿಸಿದ ಸಮಾಧಾನ ನನಗಾಯಿತು. ನನ್ನ ಬಳಿಕ ಬರುವ ಅಧಿಕಾರಿಗಳು ಯಾವ ಸಂಕಷ್ಟಗಳೂ ಇಲ್ಲದೆ ಸಂತೋಷದಿಂದ ಕೆಲಸ ಮಾಡಿಕೊಂಡು ಹೋಗಲು ಸಾಧ್ಯವಾಯಿತು. ಕೋಟೆ ಕೆರೆಯನ್ನು ಅಭಿವೃದ್ಧಿ ಪಡಿಸಲು ಹೋದರೆ ತೊಂದರೆ ಆಗುತ್ತದೆ ಎನ್ನುವ ಮೂಢನಂಬಿಕೆಯನ್ನೂ ಕೆರೆಯಲ್ಲಿಯೇ ಮುಳುಗಿಸಿದ್ದಾಯಿತು!
 (ಮುಂದುವರೆಯುವುದು)

 ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.