ಚುನಾವಣೆಯ ಸ್ಪರ್ಧೆಯಲ್ಲಿ ಮೇಲ್ನೋಟಕ್ಕೇ ದುರ್ಬಲ ಸ್ಪರ್ಧಿ ಎನಿಸಿಕೊಂಡಿದ್ದ ಬಿಜೆಪಿ, ಕಾಂಗ್ರೆಸ್ಸಿಗೆ ರಾಜ್ಯದ ಯಾವ ಪ್ರದೇಶಗಳಲ್ಲೂ, ಯಾವ ಸಮುದಾಯದಲ್ಲೂ ಸವಾಲೆಸೆಯುವ ಸ್ಥಿತಿಯಲ್ಲೇ ಇರಲಿಲ್ಲ.
ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಇರುವ ಒಂದು ವಿಶೇಷ ಪ್ರಾಮಖ್ಯವೆಂದರೆ, ದೆಹಲಿಯ ನಾಯಕರ ದೃಷ್ಟಿಯಲ್ಲಿ ಕಾಂಗ್ರೆಸ್ಸಿಗೆ 2014ರ ಲೋಕಸಭೆ ಚುನಾವಣೆಗೆ ಈ ಚುನಾವಣೆಯಲ್ಲಿನ ವಿಜಯದ ಪ್ರಮಾಣ ತುಂಬಾ ಮುಖ್ಯವಾಗಿತ್ತು ಎನ್ನುವುದೇ.
ಈಗ ಕಾಂಗ್ರೆಸ್ ಜಯಭೇರಿ ಬಾರಿಸಿದೆ ಎಂದು ಕರ್ನಾಟಕದಲ್ಲಿ ಪಕ್ಷದ ಬೆಂಬಲಿಗರು ಎಷ್ಟೇ ಕೊಚ್ಚಿಕೊಂಡರೂ ವಿಜಯದ ಸ್ವರೂಪ ಖಂಡಿತವಾಗಲೂ ವಿಜಯ ದುಂದುಭಿಯನ್ನು ಬಾರಿಸಿದ ಸ್ವರೂಪದಲ್ಲಿಲ್ಲ.
ನಿಜ. ಕಾಂಗ್ರೆಸ್ಗೆ ಬೇರೆ ಯಾವ ಪಕ್ಷದ ಹಂಗೂ ಇಲ್ಲದೇ, ಏಕಪಕ್ಷೀಯ ಸರ್ಕಾರವನ್ನು ರಚಿಸುವ ಶಕ್ತಿ ಬಂದಿದೆ. ಆ ಶಕ್ತಿಯನ್ನು ಗಳಿಸಿಕೊಟ್ಟ ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ ಅಭಿನಂದನೆ ಸಲ್ಲಲೇಬೇಕು. ಕಾಂಗ್ರೆಸ್ ಈಗಿನ ವಿಧಾನ ಸಭೆಯ ಚುನಾವಣೆಯನ್ನು ಎದುರಿಸಿದ ಸನ್ನಿವೇಶ ಎಂತಹದ್ದು? ಭಾರತೀಯ ಜನತಾ ಪಾರ್ಟಿ ತನ್ನ ಆಂತರಿಕ ಜಗಳಗಳು ಹಾಗೂ ಅಧಿಕಾರದಲ್ಲಿದ್ದಾಗ ನಡೆಸಿದ ಅವಾಂತರಗಳಿಂದ ಹೋಳಾಗಿ ಜರ್ಝರಿತವಾಗಿತ್ತು. ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಹಗರಣದ ಪ್ರಚಾರದಿಂದ ಹೈರಾಣವಾಗಿತ್ತು.
ಸುಮಾರು ಮೂರೂವರೆ ವರ್ಷಗಳ ಕಾಲ ಪಕ್ಷದ ಏಕೈಕ ನಾಯಕನಾಗಿ, ಮುಖ್ಯಮಂತ್ರಿಯಾಗಿ ವಿಜೃಂಭಿಸಿದ್ದ ಯಡಿಯೂರಪ್ಪ ಅವರೇ ಹಲವು ಹಗರಣಗಳ ವಿಚಾರಣೆಯ ಸಂಬಂಧದಲ್ಲಿ ಜೈಲಿಗೆ ಹೋಗಬೇಕಾಗಿತ್ತು.
ಇಷ್ಟೆಲ್ಲ ಆದರೂ ಯಡಿಯೂರಪ್ಪ ಸ್ವಲ್ಪ ಕಾಲ ಸುಮ್ಮನಿದ್ದು, ತಮ್ಮ ಸ್ಥಾನ-ಮಾನವನ್ನು ಉಳಿಸುವಂತಹ ಯಾವುದಾದರೂ ಒಂದು ಮರ್ಯಾದೆಯ ಸ್ಥಾನಕ್ಕಾಗಿ ಒತ್ತಾಯ ಸಲ್ಲಿಸಿದರೂ, ಪಕ್ಷದ ವರಿಷ್ಠರು ಅವರನ್ನು ಕಡೆಗಣಿಸಿದ್ದು ನಿಜ. ಕೊನೆಗೆ ಬೇಸತ್ತ ಯಡಿಯೂರಪ್ಪ ತಮ್ಮದೇ ಆದ ಕರ್ನಾಟಕ ಜನತಾ ಪಕ್ಷವನ್ನು ರಚಿಸಿಕೊಂಡು, ಬಿಜೆಪಿಯ ಪರಮ ವೈರಿಯಾಗಿ ಪರಿವರ್ತನೆಯಾದರು. ಆ ಬೆಳವಣಿಗೆ ನಿಜಕ್ಕು ಬಿಜೆಪಿಗೆ ಬಹು ದೊಡ್ಡ ಪೆಟ್ಟೇ. ಈ ಬೆಳವಣಿಗೆಯ ಅನಂತರ ಬಿಜೆಪಿಯ ಕಟ್ಟರ್ ಅಭಿಮಾನಿಗಳಿಗೂ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಕುಸಿದು ಬಿದ್ದಿತ್ತು. ಅನೇಕರು ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲಿಲ್ಲ ಅಷ್ಟೇ.
ಈ ಬೆಳವಣಿಗೆಯ ಜತೆಯಲ್ಲೇ, ಹಿಂದೆ ಪಕ್ಷಕ್ಕೆ ಬಳ್ಳಾರಿ ಸೀಮೆಯಲ್ಲಿ 'ಪ್ರಚಂಡ ಚುನಾವಣೆ ಶಕ್ತಿಯನ್ನು ನೀಡಿದ್ದ ಗಣಿಧಣಿಗಳೂ ಕೂಡ ದೂರಹೋಗಿದ್ದರು. ಅವರ ಅನುಯಾಯಿ ಶ್ರೀರಾಮುಲು ಅವರು ತಮ್ಮದೇ ಆದ ಪಕ್ಷವನ್ನು ಕಟ್ಟಿಕೊಂಡು ಬಿಜೆಪಿಗೆ ಹಿಂದೆ ಬಂದಿದ್ದ ಮತಗಳನ್ನು ಕಬಳಿಸಲು ಮುಂದಾಗಿದ್ದರು.'
ಹೀಗಾಗಿ ಚುನಾವಣೆಯ ಸ್ಪರ್ಧೆಯಲ್ಲಿ ಮೇಲ್ನೋಟಕ್ಕೇ ದುರ್ಬಲ ಸ್ಪರ್ಧಿ ಎನಿಸಿಕೊಂಡಿದ್ದ ಬಿಜೆಪಿ, ಕಾಂಗ್ರೆಸ್ಸಿಗೆ ರಾಜ್ಯದ ಯಾವ ಪ್ರದೇಶಗಳಲ್ಲೂ, ಯಾವ ಸಮುದಾಯದಲ್ಲೂ ಸವಾಲೆಸೆಯುವ ಸ್ಥಿತಿಯಲ್ಲೇ ಇರಲಿಲ್ಲ. ಜಾತ್ಯತೀತ ಜನತಾದಳ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ವ್ಯಾಪಕವಾಗಿ ಸವಾಲನ್ನೆಸೆಯುವ ಸ್ಥಿತಿಯಲ್ಲಿ ಇರಲಿಲ್ಲ. ಸುಮಾರು ಒಂಬತ್ತು ವರ್ಷಗಳಿಂದಲೂ ಅಧಿಕಾರದಿಂದ ದೂರವಿದ್ದ ಕಾಂಗ್ರೆಸ್ ಕಾರ್ಯಕರ್ತರಲ್ಲಿ, ರಾಜ್ಯದ ಅನೇಕ ಭಾಗಗಳಲ್ಲಿ ಈ ಬಾರಿ ಸೋಲಲೇ ಬಾರದು ಎನ್ನುವ ಛಲ ಮೂಡಿತ್ತು. ಕಾಂಗ್ರೆಸ್ಸಿಗೆ ಇಂತಹ ಅನುಕೂಲವಾದ ಪರಿಸ್ಥಿತಿ, ಈಚಿನ ದಿನಗಳಲ್ಲಿ ಕಂಡುಬಂದಿರಲಿಲ್ಲ. ಇಷ್ಟೆಲ್ಲ ಅನುಕೂಲಗಳಿದ್ದರೂ ಪಕ್ಷ ಕೂದಲೆಳೆಯಷ್ಟೇ ಬಹುಮತವನ್ನು ಗಳಿಸುವುದರಲ್ಲೇ ತೃಪ್ತವಾಗಬೇಕಾಯಿತು.
ಅಂದರೆ ಈ ಚುನಾವಣೆಯಿಂದ ಕಾಂಗ್ರೆಸ್ ಅಜೇಯ ಎನ್ನುವ ಸಂದೇಶವನ್ನು ಹೊತ್ತು, ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಪ್ರಚಾರ ಮಾಡುವಂತಿಲ್ಲ. ಅಂತಹ ಅವಕಾಶ ಕಳೆದು ಹೋಗಿದೆ. ಆದ್ದರಿಂದಲೇ ಅನೇಕರ ದೃಷ್ಟಿಯಲ್ಲಿ ಕಾಂಗ್ರೆಸ್ ಇನ್ನೂ ತನ್ನ ಆಂತರಿಕ ದೌರ್ಬಲ್ಯಗಳನ್ನು ನಿವಾರಿಸಿಕೊಂಡಿಲ್ಲ ಎನ್ನುವ ಅಭಿಪ್ರಾಯ ಮೂಡಿರುವುದು.
ಕಾಂಗ್ರೆಸ್ ಗೆದ್ದಿದೆ. ಸರ್ಕಾರವನ್ನು ರಚಿಸಲಿದೆ. ಆದರೆ ಅದು ಈಗ ಪ್ರದರ್ಶಿಸಿರುವ ಜನಪ್ರಿಯತೆ 'ಪ್ರಚಂಡ' ಎನ್ನುವಂತಿಲ್ಲ. ನಿಜ. ಚುನಾವಣೆಯ ಗೆಲವಿನ ಸಂಭ್ರಮದಲ್ಲಿ ಕಾಂಗ್ರೆಸ್ ಮುಳುಗಿರುವಾಗ ಇಂತಹ ಮಾತುಗಳು ಅದಕ್ಕೆ ಹಿಡಿಸಲಿಕ್ಕಿಲ್ಲ. ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ಚುನಾವಣೆಯನ್ನು ಗೆದ್ದರೂ, ಅದರ ಪ್ರಚಾರ ಸಮರದಲ್ಲಿ, ಬಹು ಮುಖ್ಯವಾದ ಪಾತ್ರ ವಹಿಸಿದ್ದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಸೋತಿದ್ದು ನಿಜಕ್ಕೂ ಒಂದು ವಿಷಾದದ ಸಂಗತಿಯೇ.
ಚುನಾವಣೆಯ ಸಮರದಲ್ಲಿ ಗೆದ್ದಿರುವ ಕಾಂಗ್ರೆಸ್ ತನ್ನ ಮುಂದಿರುವ ಹೊಣೆಗಾರಿಕೆಯನ್ನು ಸಮರ್ಥವಾಗಿ ಎದುರಿಸುವ ಸಿದ್ಧತೆಯನ್ನು ಈಗಲೇ ಮಾಡಿಕೊಳ್ಳಬೇಕು.
ಬಿಜೆಪಿ: ಹೀನಾಯ ಸೋಲು
ಭಾರತೀಯ ಜನತಾ ಪಾರ್ಟಿಯ ವಕ್ತಾರರು, ತಮ್ಮ ಪಕ್ಷದ ಸೋಲನ್ನು ಯಾವ ರೀತಿಯಲ್ಲಿ ವಿವರಿಸುತ್ತಾರೋ ಗೊತ್ತಿಲ್ಲ. ಅವರು ಏನಾದರೂ ಹೇಳಿಕೊಳ್ಳಲಿ, ಪಕ್ಷದ ಆಂತರಿಕ ಕಚ್ಚಾಟ, ಅದಕ್ಕೆ ಸರಿಸಾಟಿ ಎನ್ನುವ ರೀತಿಯಲ್ಲಿ ಮಂತ್ರಿಗಳು, ನಾಯಕರು, ಜನತಾಂತ್ರಿಕ ಮೌಲ್ಯಗಳನ್ನು ಧಿಕ್ಕರಿಸಿ, ತಾವುಂಟೋ ಮೂರು ಲೋಕ ಉಂಟೋ ಎನ್ನುವ ರೀತಿಯಲ್ಲಿ ವರ್ತಿಸಿದ್ದು, ಬ್ರಹ್ಮಾಂಡ ಸ್ವರೂಪದ ಭ್ರಷ್ಟಾಚಾರದ ಪ್ರಕರಣಗಳನ್ನು ತಿಪ್ಪೆ ಸಾರಿಸಿ ಮುಗಿಸಲು ಪ್ರಯತ್ನಿಸಿದ್ದು. ಸರ್ಕಾರದ ಸಂಸ್ಥೆಗಳಲ್ಲಿ ಅಪಾತ್ರರಿಗೇ ಮಣೆ ಹಾಕಿದ್ದು ಜನ ಚುನಾವಣೆಯ ಸಮಯದಲ್ಲಿ ಮರೆಯಲಿಲ್ಲ.
ಬೇರು ಮಟ್ಟದಲ್ಲಿ ಪಕ್ಷದ ಸಂಘಟನೆ ಇರುವ (ಅಂದ ಮಾತ್ರಕ್ಕೆ ಆ ಪ್ರದೇಶ ಬಿಜೆಪಿಯ ಭದ್ರ ಕೋಟೆ ಎಂದೇನೂ ಅಲ್ಲ) ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗಗಳಲ್ಲೂ ಪಕ್ಷ ದಯನೀಯವಾಗಿ ಸೋತಿದೆ. ಮಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿ ದೊಡ್ಡ ರೀತಿಯಲ್ಲೇ ಹಾವಳಿ ಮಾಡಿದ ನೈತಿಕ ಪೊಲೀಸ್ ಕಾರ್ಯಾಚರಣೆ ಅಂತಿಮವಾಗಿ ತನ್ನ ಬಲಿಯನ್ನು ತೆಗೆದು ಕೊಂಡಿದೆ.
ಇದರ ಪರಿಣಾಮವಾಗಿ ಬಿಜೆಪಿ ವಿಧಾನ ಸಭೆಯಲ್ಲಿ ಪ್ರತಿಪಕ್ಷದ ಸ್ಥಾನ-ಮಾನಗಳನ್ನು ಕಳೆದುಕೊಳ್ಳಲಿದೆ. ಆ ಸ್ಥಾನವನ್ನು ಅದು ಜಾತ್ಯತೀತ ಜನತಾದಳಕ್ಕೆ ಬಿಟ್ಟು ಕೊಡಬೇಕಾಗಬಹುದು. ಮುಂದಿನ ವಿಧಾನ ಸಭೆಯಲ್ಲಿ ಬಿಜೆಪಿ, ತನ್ನ ಸ್ವಂತ ಶಕ್ತಿಯಿಂದ ಒಂದು ರಾಜ್ಯ ಸಭೆಯ ಸ್ಥಾನವನ್ನೂ ಗಳಿಸುವುದು ಸಾಧ್ಯವಿಲ್ಲ.
ಇಂತಹ ಹೀನಾಯ ಸ್ಥಿತಿಗೆ ಪಕ್ಷ ಬೇರೆ ಯಾರನ್ನೂ ದೂರುವಂತಿಲ್ಲ. ತನ್ನನ್ನು ತಾನೇ ದೂಷಿಸಿಕೊಳ್ಳಬೇಕು. ಕಾಂಗ್ರೆಸ್ಸಿಗೆ ಪ್ರಚಂಡ ವಿಜಯ ಸಿಕ್ಕಿಲ್ಲ. ನಿಜ. ಆದರೆ ಬಿಜೆಪಿಗೆ ಹೀನಾಯ ಸೋಲು ತಪ್ಪಿಲ್ಲ.
ಜಾತ್ಯತೀತ ಜನತಾದಳ
ಜಾತ್ಯತೀತ ಜನತಾದಳ ಈ ಚುನಾವಣೆಯಲ್ಲಿ ರಾಜ್ಯದ ರಾಜಕೀಯದಲ್ಲಿ ತನ್ನ ಸ್ಥಾನವನ್ನು ಬೇಕಾದಷ್ಟು ಉತ್ತಮ ಪಡಿಸಿಕೊಂಡಿದೆ. ಹಿಂದಿನಂತೆ ಇನ್ನು ಮುಂದೆ ಅವರನ್ನು 'ಉಪ ಪ್ರಾದೇಶಿಕ ಪಕ್ಷ' (ಅಂದರೆ ರಾಜ್ಯದ ಒಂದೇ ಪ್ರದೇಶದ ಕೆಲವೇ ಜಿಲ್ಲೆಗಳಿಗೆ ಸೀಮಿತವಾದ ಪಕ್ಷ) ಎನ್ನುವಂತಿಲ್ಲ. ಈ ಬಾರಿ ರಾಜ್ಯದ ಎಲ್ಲಾ ಪ್ರದೇಶಗಳಲ್ಲೂ ಜೆಡಿಎಸ್ ನ ಅಸ್ತಿತ್ವ ಅನುಮಾನಕ್ಕೆ ಅವಕಾಶವೇ ಇಲ್ಲದಂತೆ ಪ್ರದರ್ಶಿಸಿದೆ. ವಿಧಾನ ಸಭೆಯಲ್ಲಿ ಸ್ಥಾನಗಳ ಸಂಖ್ಯೆಯೂ ಹೆಚ್ಚಿದೆ. ಇದುವರೆಗೂ ಪಕ್ಷಕ್ಕೆ ಪ್ರಾತಿನಿಧ್ಯವೇ ಇಲ್ಲ ಎನ್ನುವ ಪ್ರದೇಶಗಳಿಂದಲೂ ಶಾಸಕರು ಸದನದಲ್ಲಿ ಕೂಡಲಿದ್ದಾರೆ.
ಜೆಡಿಎಸ್ ಗೆ ಈ ಬಾರಿ ಇದುವರೆಗೆ ಬೆಂಬಲ ನೀಡದೇ ಇದ್ದ ಜನವರ್ಗಗಳ ಬೆಂಬಲವೂ ಸಿಕ್ಕಿದೆ. ಇದೇನೂ ಸಾಧಾರಣವಾದ ಸಾಧನೆಯಲ್ಲ. ಪಕ್ಷದ ಹಿರಿಯ ದೇವೇಗೌಡರು ಪ್ರದೇಶ ಸಮಿತಿಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಬಿಡುವಿಲ್ಲದ ದುಡಿಮೆಯಿಂದ ಪಕ್ಷಕ್ಕೆ ಈ ಉಡುಗೊರೆಯನ್ನು ನೀಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಜೆಡಿಎಸ್ ಬಿಜೆಪಿ ಸರ್ಕಾರವನ್ನು ವಿಧಾನ ಮಂಡಲದ ಒಳಗೆ - ಹೊರಗೆ ತೀವ್ರವಾಗಿ ವಿರೋಧಿಸಿಕೊಂಡೇ ಬಂದಿದೆ. ಈಗ ಆ ಕೆಲಸವನ್ನು ವಿದ್ಯಕ್ತವಾಗಿ ಮಾಡಲು ಅದಕ್ಕೆ ಅಧಿಕೃತ ವಿರೋಧ ಪಕ್ಷದ ಸ್ಥಾನ-ಮಾನವೂ ಸಿಕ್ಕಿರುವುದು ಒಂದು ರೀತಿಯಲ್ಲಿ 'ಹೋರಾಟಕ್ಕೆ' ಸಂದ ಗೌರವ. ಯಡಿಯೂರಪ್ಪ ಅವರು ತಾವಿಲ್ಲದ ಬಿಜೆಪಿಗೆ ವಿಧಾನಸಭೆಯ ನಲವತ್ತು ಸ್ಥಾನಗಳನ್ನು ಗೆಲ್ಲುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು. ಆ ಮಾತು ವಸ್ತುಶಃ ನಿಜವಾಗಿದೆ. ಆದರೆ ಅದರಿಂದ ಯಡಿಯೂರಪ್ಪ ಅವರಿಗೆ, ಅವರ ಪಕ್ಷಕ್ಕೆ ಬರುವ ಲಾಭವಾದರೂ ಏನು? ಅದು ಮುಂದೆ ಗೊತ್ತಾಗಬೇಕಷ್ಟೇ. ಯಡಿಯೂರಪ್ಪ ಅವರಂತೆಯೇ ಮಾಜಿ ಸಚಿವ ಬಿ.ಶ್ರೀರಾಮುಲು ಅವರೂ ಪ್ರಚಾರ ಸಮರದಲ್ಲಿ ಹೀರೋ ಆಗಿದ್ದರು. ಆದರೆ ಫಲಿತಾಂಶದಲ್ಲಿ ಅದು ಪ್ರಕಟವಾಗಲಿಲ್ಲ. ಮರಳಿ ಯತ್ನವ ಮಾಡಬೇಕು ಅಷ್ಟೇ.
ಕಿಡಿಗೇಡಿತನ: ಕರ್ನಾಟಕದಲ್ಲಿ ಕಾಂಗ್ರೆಸ್ ವಿಜಯಕ್ಕೆ, ಸೋನಿಯಾ ಗಾಂಧಿ ಯಡಿಯೂರಪ್ಪ ಅವರಿಗೆ ಧನ್ಯವಾದವನ್ನು ಹೇಳಬೇಕು.
- ಸತ್ಯ
anisikeprabha@gmail.com