ಅಂಕಣಗಳು

ಬೆಳಗಾವಿಯಲ್ಲಿ ಐತಿಹಾಸಿಕ ವಿಧಾನ ಮಂಡಲದ ಅಧಿವೇಶನ

Published On :

ಕಳೆದ ವಾರ ನಿಮಗೆ ಕೋಟೆ ಕೆರೆಯ ಬಗ್ಗೆ ಹೇಳುತ್ತಿದ್ದೆ. ನಾನು ಜಿಲ್ಲಾಧಿಕಾರಿಯ ಜೊತೆಗೆ ಬೆಳಗಾವಿ ನಗರ ಪಾಲಿಕೆಯ ಆಡಳಿತಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದೆ. ಪಾಲಿಕೆಯ ಸದಸ್ಯರ ನಡತೆ ಕಾನೂನು ಬಾಹಿರವಾಗಿದ್ದುದರಿಂದ ಪಾಲಿಕೆಯನ್ನು ವಿಸರ್ಜನೆ ಮಾಡಬೇಕಾಗಿದ್ದಿತು.  
ಆ ಸಮಯದಲ್ಲಿ ಕನ್ನಡ ಮರಾಠಿ ಸಂಘರ್ಷ ತುಂಬಾ ಜೋರಾಗಿತ್ತು. ಮಹಾರಾಷ್ಟ್ರ ಸರ್ಕಾರದ ಹಾಗೂ ಅವರ ನೇತಾಗಳ ಭಾಷಣಗಳಲ್ಲಿ ಈ ಭಾಗ ತಮ್ಮ ರಾಜ್ಯಕ್ಕೆ ಸೇರುತ್ತದೆ ಎಂದು ಘೋಷಿಸುತ್ತಿದ್ದುದರಿಂದ ಕನ್ನಡಿಗರು ತುಂಬಾ ವಿಷಾದ ವ್ಯಕ್ತಪಡಿಸುತ್ತಿದ್ದರು. ಇದಕ್ಕೆ ಪೂರಕವಾಗಿ ನಮ್ಮ ಸರ್ಕಾರ ಏನೂ ಮಾಡುವುದಿಲ್ಲ ಎಂಬ ಭಾವನೆ ಬೆಳೆಯುತ್ತಿತ್ತು. ನಾನು ಮತ್ತು ನಮ್ಮ ಪ್ರಾದೇಶಿಕ ಆಯುಕ್ತರಾದ ಅಮಿತಾ ಪ್ರಸಾದ್ ಅವರು ಒಂದು ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಹೋಗಿದ್ದೆವು. ಆಗ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳು ನನ್ನನ್ನು ಕರೆದು ಬೆಳಗಾವಿಯಲ್ಲಿ ಮುಂದಿನ ಹದಿನೈದು ದಿನಗಳೊಳಗೆ ವಿಧಾನ ಸಭೆ ಅಧಿವೇಶನ ಮಾಡಲು ಇಚ್ಚಿಸಿರುತ್ತೇವೆಂದು ಹೇಳಿದರು. ಇದು ಸಾಧ್ಯವೇ ಎಂದು ಕೇಳಿದಾಗ ನಾನು ತಕ್ಷಣವೇ ಖಂಡಿತ ಸಾಧ್ಯವಿದೆ ಎಂದು ಹೇಳಿದೆ. ಅದು ನನ್ನ ಸ್ವಭಾವ. ಯಾವುದನ್ನೂ ಆಗುವುದಿಲ್ಲ ಎಂದು ಹೇಳಲು ನನಗಾಗದು. ಸವಾಲುಗಳನ್ನು ಸ್ವೀಕರಿಸುತ್ತ, ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುತ್ತ ಬೆಳೆದವಳು ನಾನು. ಹಾಗಾಗಿ ತಕ್ಷಣ ಒಪ್ಪಿಕೊಳ್ಳುವ ಮನೋಭಾವ ನನಗಿದೆ. ನಾನೇಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ, ಹಲವಾರು ಬಾರಿ ಆ ಕಾರ್ಯಗಳಿಗೆ ಸಂಬಂಧ ಪಟ್ಟ ಇತರರು- 'ನೀವೇಕೆ ಒಪ್ಪಿಕೊಂಡು ಬಂದಿರಿ. ಇದಕ್ಕೆ ಸಾಕಷ್ಟು ಸಮಯಾವಕಾಶ ಬೇಕು, ಸರಿಯಾಗಿ ಯೋಚಿಸಿ, ಯಾವ ತಪ್ಪೂ ಆಗದಂತೆ ಕೆಲಸ ಮಾಡಬೇಕಾದರೆ ಸಮಯ ಬೇಕಾಗುತ್ತದೆ ಎಂದು ನನಗೆ ಹೇಳಿದ್ದಾರೆ. ನಾಳೆ ಏನಾದರೂ ಹೆಚ್ಚು ಕಮ್ಮಿಯಾದರೆ ನಿಮ್ಮನ್ನು ಹೊಣೆ ಮಾಡಿ ಎಲ್ಲರೂ ಟೀಕಿಸುತ್ತಾರೆ' ಎಂದರು. ಆದರೆ ನನ್ನ ಪ್ರಕಾರ ನಾಳಿನ ಕೆಲಸವನ್ನು ಇಂದೇ ಮಾಡಬೇಕು, ಇಂದಿನ ಕೆಲಸವನ್ನು ಈ ಕ್ಷಣವೇ ಮಾಡಿ ಮುಗಿಸಬೇಕು, ನಾಳೆ ಎಂದು ಮುಂದೂಡಿದರೆ ಕೆಲಸ ಹಾಳು. ಹೊಸ ಕೆಲಸಗಳನ್ನು ಮಾಡುವಾಗ ಅಥವಾ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳುವಾಗ ತಪ್ಪುಗಳು ಆಗುವುದು ಸಾಮಾನ್ಯ. ಆದರೆ ಧೈರ್ಯದಿಂದ ಹಾಗೂ ನಿಷ್ಠೆಯಿಂದ ನಾವು ಯಾವ ಕೆಲಸವನ್ನು ಮಾಡುವ ನಿರ್ಧಾರ ಮಾಡುತ್ತೇವೆಯೋ ಅದರ ಪರಿಣಾಮ ಯಾವಾಗಲೂ ಒಳ್ಳೆಯದಾಗುತ್ತದೆ ಎಂದು ನನ್ನ ಅನುಭವ ಹಾಗೂ ನನ್ನ ಪ್ರಕೃತಿಯಾಗಿದೆ. ಎಲ್ಲರೂ ಆಗದೆ ಇರುವ ದುರಂತವನ್ನು ಕಲ್ಪಿಸಿಕೊಂಡು ಹೊಸ ಹೆಜ್ಜೆಯನ್ನು ಹಾಕದೆ ಹೋದರೆ ಅಭಿವೃದ್ಧಿ ಆಗುವುದು ಹೇಗೆ ಮತ್ತು ಯಾರಿಂದ?
ಈ ಹಿಂದೆ ನಾನು ಯಾವಾಗಲೂ ಸಚಿವಾಲಯದಲ್ಲಿ ಕೆಲಸ ಮಾಡಿರಲಿಲ್ಲ. ಆದುದರಿಂದ ಅಧಿವೇಶನದ ಬಗ್ಗೆ ಪರೀಕ್ಷಾವಧಿಯಲ್ಲಿನ ಅಭ್ಯರ್ಥಿಯಾಗಿ ತಿಳಿದುಕೊಂಡಿದ್ದುದರ ಹೊರತಾಗಿ ಯಾವುದೇ ಅನುಭವವನ್ನು ಪಡೆದಿರಲಿಲ್ಲ. ಆ ತಕ್ಷಣವೇ ಅಧಿವೇಶನದ ಬಗ್ಗೆ ಮಾಹಿತಿ ಪಡೆಯಲು ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಕಾರ್ಯದರ್ಶಿಗಳನ್ನು ಭೇಟಿ ಮಾಡಿದೆ. ಅಂದಿನ ಕಾರ್ಯವಿಧಾನದ ಎಲ್ಲಾ ಮಾಹಿತಿಗಳನ್ನು ಪಡೆದು ರಜನೀಶ್ ಅವರಿಗೆ ಫೋನ್ ಮಾಡಿದೆ. ಅಂದೇ ಎಲ್ಲಾ ಹಿರಿಯ ಅಧಿಕಾರಿಗಳ ಸಭೆಯನ್ನು ಕರೆಯಲು ನನ್ನ ಕಚೇರಿಯಿಂದ ನೋಟೀಸನ್ನು ಜಾರಿ ಮಾಡಿಸಿದೆ. ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿಯನ್ನು ಹಂಚಬೇಕಾಗಿದ್ದಿತು. ಮುಂದೆ ಹದಿನೈದು ದಿನಗಳು ಯಾವ ಅಧಿಕಾರಿಗೂ ರಜೆ ಇಲ್ಲವೆಂದೂ ಸಹ ಸುತ್ತೋಲೆ ಹೊರಡಿಸಿದೆ. ಮಾರನೇ ದಿನದಿಂದಲೇ ಅದಕ್ಕೆ ಬೇಕಾದ ಕೆಲಸವನ್ನು ಪ್ರಾರಂಭಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಎಲ್ಲಾ ಸ್ಥಳೀಯ ಶಾಸಕರ ಸಭೆಯನ್ನು ಕರೆಯಲಾಯಿತು. ಈ ಅಧಿವೇಶನದಲ್ಲಿ 224 ವಿಧಾನ ಸಭೆಯ ಸದಸ್ಯರು ಹಾಗೂ 75 ವಿಧಾನ ಪರಿಷತ್ತಿನ ಸದಸ್ಯರೂ ಬರುತ್ತಾರೆ. ಅವರಿಗಾಗಿ ಬೇರೆ ಬೇರೆ ಭವನದ ವ್ಯವಸ್ಥೆ ಮಾಡಬೇಕಾಗಿತ್ತು. ಜಿಲ್ಲೆಯಲ್ಲಿ ಅಂಥ ದೊಡ್ಡ ಸಭಾಂಗಣ ಇರಲಿಲ್ಲ. ಒಂದೇ ಒಂದು ಸ್ಥಳ ಅಂದರೆ ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಭಾಂಗಣ ಲಭ್ಯವಿತ್ತು. ಆದರೆ ವಿಧಾನ ಸಭೆ ಮತ್ತು ಪರಿಷತ್ತನ್ನು ನಡೆಸಲು ಸಭಾಂಗಣಗಳನ್ನು ಬೇರೆ ಬೇರೆ ಸ್ಥಾಪಿಸಿದರೆ, ಮಂತ್ರಿಗಳು ಎರಡು ಕಡೆ ಹೋಗಬೇಕಾಗುತ್ತದೆ, ಸದಸ್ಯರು ಚರ್ಚೆ ಮಾಡಬೇಕಾಗುತ್ತದೆ, ಅಧಿಕಾರಿಗಳು ಎರಡು ಕಡೆಗೂ ಓಡಾಡಬೇಕಾಗುತ್ತದೆ. ಇವೆಲ್ಲವನ್ನೂ ಗಮನಿಸಿ ಒಂದು ಸ್ಥಳವನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಲಾಯಿತು. ಆಗ ಕೆ.ಎಲ್.ಇ. ಅಧ್ಯಕ್ಷರು ವೈದ್ಯಕೀಯ ಕಾಲೇಜನ್ನು ಅಧಿವೇಶನಕ್ಕೆ ಬಿಟ್ಟು ಕೊಟ್ಟಿದ್ದು ಬಹಳ ದೊಡ್ಡ ಹೊರೆಯನ್ನು ಇಳಿಸಿದಂತಾಗಿತ್ತು. ಆದುದರಿಂದ ಹದಿನೈದು ದಿವಸಗಳಲ್ಲಿ ಬೃಹತ್ ಸಂಕೀರ್ಣವನ್ನು ಕಟ್ಟಲು ಯಾವ ಕಂಟ್ರ್ಯಾಕ್ಟರ್ ಹತ್ತಿರ ಕ್ಷಮತೆ ಇದೆ ಎಂದು ನಮ್ಮ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಕೇಳಿದೆ. ಅವರು ಒಬ್ಬ ದೊಡ್ಡ ಕಂಟ್ರ್ಯಾಕ್ಟರ್‌ರನ್ನು ಕರೆದುಕೊಂಡು ಬಂದರು. ಅವರಿಂದ ಅಂದಾಜು ಬೆಲೆಪಟ್ಟಿಯನ್ನು ಪಡೆದು ಸರ್ಕಾರದ ಅನುಮೋದನೆಯನ್ನು ಕೇಳಿದೆ.
ಒಟ್ಟು ಮುನ್ನೂರು ಶಾಸಕರಿಗೆ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಬೇಕಾಯಿತು. ಅಧಿವೇಶನಕ್ಕಾಗಿ ವೈದ್ಯಕೀಯ ವಿದ್ಯಾರ್ಥಿಗಳೆಲ್ಲರಿಗೂ ಬಲವಂತದ ರಜೆಯನ್ನು ಕೊಟ್ಟು ಅವರವರ ಊರುಗಳಿಗೆ ಕಳುಹಿಸಲಾಯಿತು.  ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳ ಕೋಣೆಗಳನ್ನು ಶಾಸಕರಿಗಾಗಿ ತಯಾರಿಸಲು ಸುಣ್ಣ, ಬಣ್ಣ, ಹಾಸಿಗೆ,  ಹೊದಿಕೆಗಳು, ಇತ್ಯಾದಿ ಅವಶ್ಯಕ ವಸ್ತುಗಳನ್ನು ಒದಗಿಸಲು ಕ್ರಮ ಜರುಗಿಸಲಾಯಿತು. ಅಧಿವೇಶನದ ಸಮಯದಲ್ಲಿ ಉತ್ತರ ಕರ್ನಾಟಕದ ರುಚಿಯಾದ ಊಟ ತಿಂಡಿಗಳನ್ನು ಬಡಿಸಲು ನಿರ್ಣಯಿಸಲಾಯಿತು. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಹೋಟೆಲ್ಲುಗಳನ್ನು ಅತ್ಯಂತ ಮುಖ್ಯ, ಪ್ರತಿಷ್ಠಿತ ವ್ಯಕ್ತಿಗಳಿಗಾಗಿ ಕಾದಿರಿಸಲಾಯಿತು. ಮುನ್ನೂರು ಕಾರುಗಳ ಬೇಡಿಕೆ ಇರುವಾಗ ಅಷ್ಟು ಸಂಖ್ಯೆಯಲ್ಲಿ ಸ್ಥಳೀಯರ ಹತ್ತಿರ ಟ್ಯಾಕ್ಸಿಗಳು ಲಭ್ಯವಿರಲಿಲ್ಲ. ಆಗ ಧಾರವಾಡ ಹಾಗೂ ಅಕ್ಕ ಪಕ್ಕದ ಜಿಲ್ಲೆಗಳ ಸಹಕಾರವನ್ನು ತೆಗೆದುಕೊಳ್ಳಲಾಯಿತು. ಅಲ್ಲಿನ ಪ್ರಾದೇಶಿಕ ಆಯುಕ್ತರಾಗಿದ್ದ ಅಮಿತಾ ಪ್ರಸಾದ್ ಅವರು ಎಲ್ಲಾ ಸಮನ್ವಯತೆಯನ್ನು ಹಾಗೂ ಹಣದ ವ್ಯವಹಾರವನ್ನು ನೋಡಿಕೊಂಡರು.
ಈ ಸಮಯದಲ್ಲಿ ಜಿಲ್ಲೆಯ ಒಳ್ಳೆಯ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಒಂದು ಕಿರು ಪರಿಚಯದ ಪುಸ್ತಕವನ್ನು ತಯಾರಿಸಲಾಯಿತು. ಉದಾಹರಣೆಗೆ ಗೋಕಾಕ್ ಫಾಲ್ಸ್, ಯಲ್ಲಮ್ಮ ದೇವಸ್ಥಾನ, ಕಿತ್ತೂರಿನ ಕೋಟೆ, ಸಂಗೊಳ್ಳಿ ರಾಯಣ್ಣನ ಸ್ಮಾರಕ ಮುಂತಾದ ಸ್ಥಳಗಳು ಕನ್ನಡ ನಾಡಿನ ಗರಿಮೆಯನ್ನು ಪರಿಚಯಿಸುತ್ತವೆ. ಈ ಅಧಿವೇಶನದ ಮೂಲಕ ನಮ್ಮ ಜಿಲ್ಲೆಯ ಎಲ್ಲಾ ವೈಶಿಷ್ಟ್ಯವನ್ನು ನಾವು ನಮ್ಮ ರಾಜ್ಯದ ಶಾಸಕರ ಮುಂದೆ ಇಡಲು ಒಂದು ಸುವರ್ಣ ಅವಕಾಶವಿತ್ತು. ಜಿಲ್ಲೆಗೆ ಆಗಬೇಕಾದ ಕೆಲವು ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನೂ ಸಹ ಮಂಡಿಸಲು ನಿರ್ಧರಿಸಲಾಯಿತು. ನಂತರ ಎಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಕರೆದು ಸ್ವಯಂಸೇವಕರನ್ನು ನೇಮಿಸಿದೆವು. ಪ್ರತಿ ಒಬ್ಬ ಶಾಸಕರಿಗೂ ಒಬ್ಬರನ್ನು ಬೆಂಗಾವಲಾಗಿ ಜೊತೆಗಾರರನ್ನು ಒದಗಿಸಿದೆವು. ಅವರಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಲು ನಾವು ಸಿದ್ಧವಾಗಿದ್ದೇವೆ ಎಂದು ನೌಕರರು ತಿಳಿಸಿದರು. ಎಲ್ಲಾ ಸರ್ಕಾರಿ ನೌಕರರು ಹಾಗು ಜನಪ್ರತಿನಿಧಿಗಳು ಸತತವಾಗಿ ಒಬ್ಬರಿಗೊಬ್ಬರು ಸಂಪೂರ್ಣ ಬೆಂಬಲವಾಗಿ, ಉತ್ತಮವಾಗಿ, ಧೈರ್ಯ ಮತ್ತು ಆತ್ಮ ವಿಶ್ವಾಸದಿಂದ ಕೆಲಸಗಳನ್ನು ಮಾಡಿದರೆ ನಾವು ಏನೆಲ್ಲ ಸಾಧಿಸಬಹುದು!
ಒಂದು ವಾರ ಆದ ಮೇಲೆ, ಮುಖ್ಯ ಮಂತ್ರಿಗಳು ಪರಿಶೀಲನಾ ಸಭೆಯನ್ನು ವಿಡಿಯೋ ಕಾನ್ಫರೆನ್ಸಿನ ಮೂಲಕ ತೆಗೆದುಕೊಳ್ಳುತ್ತಾರೆ ಎಂಬ ಸೂಚನೆ ಬಂದಿತು. ಆಗ ನಾನು ಸ್ಥಳದಲ್ಲಿ ಆಗಿರುವ ಎಲ್ಲಾ ಕಾಮಗಾರಿಗಳ ಒಂದು ಚಿತ್ರವನ್ನು ತೆಗೆದು ಲ್ಯಾಪ್‌ಟಾಪ್‌ನ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಿಗೆ ಮಂಡಿಸಿದಾಗ ಅವರಿಗೆ ನಂಬಿಕೆ ಬಂದಿತು. ನಿಜವಾಗಿ ಈ ಕೆಲಸ ಯಶಸ್ವಿಯಾಗುತ್ತದೆ ಎಂದು ಭಾವಿಸಿದರು.
ಎಲ್ಲಾ ವ್ಯವಸ್ಥೆಗಳ ಒಂದು ಕಿರು ಪುಸ್ತಕ, ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳ ಸಹಿತ ಮುದ್ರಿಸಿ ವಿಧಾನ ಮಂಡಲದ ಕಾರ್ಯದರ್ಶಿಗಳ ಮೂಲಕ ಎಲ್ಲರಿಗೂ ಹಂಚಲಾಯಿತು. ಜೊತೆಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಮ್ಮ ಜಿಲ್ಲೆಯ ಶಾಸಕರಿಗೆ ಈ ಮಾಹಿತಿ ಮುಂಚಿತವಾಗಿ ತಿಳಿಸಲು ಪತ್ರ ಬರೆಯಲಾಯಿತು. ನಂತರ ನನಗೆ ಗೊತ್ತಾಯಿತು, ಅಧಿವೇಶನದ ಎಲ್ಲಾ ಪತ್ರ ವ್ಯವಹಾರವನ್ನು ಮಾಡಲು ಕೇವಲ ವಿಧಾನ ಮಂಡಲದ ಸಚಿವಾಲಯಕ್ಕೆ ಮಾತ್ರ ಅಧಿಕಾರ ಇರುತ್ತದೆ ಎಂದು!
ಅಧಿವೇಶನ ಯಾವ ತೊಂದರೆಗಳೂ ಇಲ್ಲದಂತೆ ಉತ್ತಮ ರೀತಿಯಲ್ಲಿ ನಡೆಯಿತು. ಇಡೀ ಬೆಳಗಾವಿಯನ್ನು ಕನ್ನಡ ಸಂಸ್ಕೃತಿಯನ್ನು ಬಿಂಬಿಸುವಂತೆ ಅಲಂಕರಿಸಲಾಯಿತು. ಇದರಿಂದ ಬೆಳಗಾವಿಯು ಕರ್ನಾಟಕದ ರಾಜ್ಯದ ಒಂದು ಮುಖ್ಯ ಭಾಗವೆಂದು ದೃಢೀಕರಿಸಿದಂತಾಯಿತು. ಮುಂದಾಳತ್ವವನ್ನು ವಹಿಸಿ ಅಧಿವೇಶನ ಯಶಸ್ವಿಗೊಳಿಸಿದ್ದಕ್ಕೆ ಅಧಿವೇಶನದ ಕೊನೆಯ ದಿನ ಹತ್ತು ಹನ್ನೆರಡು ಜನರಿಗೆ ಮಾನ್ಯ ಮುಖ್ಯ ಮಂತ್ರಿಗಳಿಂದ ಬೆಳ್ಳಿಯ ಪಲಕಗಳನ್ನು ನೀಡಿ ಗೌರವಿಸಲಾಯಿತು.

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.