ಸಿದ್ದು ಸಂಭ್ರಮದ ಮುಂದಿನ ಸವಾಲುಗಳು

ನಾಲ್ಕು ದಶಕಗಳ ರಾಜಕೀಯ ಸಂಘರ್ಷ, ಮಂಥನದಲ್ಲಿ ಮಿಂದೆದ್ದ ಸಿದ್ದರಾಮಯ್ಯ...
Updated on: 

ನಾಲ್ಕು ದಶಕಗಳ ರಾಜಕೀಯ ಸಂಘರ್ಷ, ಮಂಥನದಲ್ಲಿ ಮಿಂದೆದ್ದ ಸಿದ್ದರಾಮನಹುಂಡಿ ಸಿದ್ದರಾಮಯ್ಯನವರ ಮುಡಿಗೆ ಅಂತೂ-ಇಂತೂ ಮುಖ್ಯಮಂತ್ರಿ ಪದವಿ ಏರಿದೆ. ರಾಜಕೀಯದ ಅವಿಭಾಜ್ಯ ಅಂಗ ರಾಜಿ ಮನೋಭಾವಕ್ಕೆ ಎಂದಿಗೂ ತಲೆಭಾಗದ ಸಿದ್ದರಾಮಯ್ಯ ತಮ್ಮ ಸ್ವಾಭಿಮಾನದ ತೆಕ್ಕೆಗೆ ಈ ಅತ್ಯುನ್ನತ ಪದವಿಯನ್ನು ಬೀಳಿಸಿಕೊಂಡಿದ್ದಾರೆ.
ರಾಜಕೀಯ ಜೀವನದುದ್ದಕ್ಕೂ ತಮ್ಮದೇ ಆದ ಹಮ್ಮು-ಬಿಮ್ಮನ್ನು ಕಾಯ್ದಿರಿಸಿಕೊಂಡಿರುವ ಸಿದ್ದರಾಮಯ್ಯ ಪದವಿಗಾಗಿ ಎಂದಿಗೂ ತಮ್ಮತನವನ್ನು ಕಳೆದುಕೊಂಡವರಲ್ಲ. ಯಾರಿಗೂ ಸಲಾಮು ಹೊಡೆದವರಲ್ಲ. ಗತ್ತು ಬಿಟ್ಟುಕೊಟ್ಟವರಲ್ಲ. ಕೈಗೆ ಬಂದ ತುತ್ತು ಬಾಯಿ ಸೇರಲೇಬೇಕೆಂದು ಅನ್ಯರ ಮನೆಬಾಗಿಲು ಕಾಯ್ದವರಲ್ಲ. ಅವರ ಜನ್ಮಸಹಜ ಗುಣಗಳಾದ ದರ್ಪ, ಮುಂಗೋಪ, ಕಠಿಣ ನಡೆ-ನುಡಿಗಳ ನಡುವೆ ಮೆರೆದ ಮಾನವೀಯತೆ ಅವರನ್ನು ರಾಜ್ಯಾಡಳಿತದ ಉನ್ನತ ಸ್ಥಾನದಲ್ಲಿ ಪ್ರತಿಷ್ಠಾಪಿಸಿದೆ.
ಹಾಗೆ ನೋಡಿದರೆ ಹದಿನೇಳು ವರ್ಷಗಳ ಹಿಂದೆಯೇ ಅವರು ಮುಖ್ಯಮಂತ್ರಿ ಆಗಬೇಕಿತ್ತು. 1996 ರಲ್ಲಿ ಜನತಾ ದಳ ಮುಖಂಡ ದೇವೇಗೌಡರು ಪ್ರಧಾನಿಯಾದಾಗ ತೆರವು ಮಾಡಿದ ಮುಖ್ಯಮಂತ್ರಿ ಪದವಿ ಸ್ಪಲ್ಪದರಲ್ಲಿ ಸಿದ್ದರಾಮಯ್ಯನವರ ಕೈ ಜಾರಿ ಜೆ.ಎಚ್. ಪಟೇಲ್ ಪಾಲಾಯಿತು. ಆಗ ಹಣಕಾಸು ಖಾತೆಯೊಂದಿಗೆ ಉಪಮುಖ್ಯಮಂತ್ರಿಯಾದ ಅವರು ಜನತಾ ದಳದ ಪಾಲಿನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತರಾದರು. ಮುಂದೆ ದಳ ಹೋಳಾಗಿ ದೇವೇಗೌಡರ ಪಾಳೆಯದಲ್ಲೇ ಉಳಿದ ಸಿದ್ದರಾಮಯ್ಯ 2004 ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚಿಸಿದಾಗ ಸಹಜವಾಗಿಯೇ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ದೇವೇಗೌಡರ ಒಳರಾಜಕೀಯದ ಫಲವಾಗಿ ಆ ಗದ್ದುಗೆ ಕಳೆದುಕೊಂಡ ಸಿದ್ದರಾಮಯ್ಯ ಮುಂದೆ ಉಪಮುಖ್ಯಮಂತ್ರಿ ಸ್ಥಾನದ ಜತೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದಾಗ ಅವರಲ್ಲಿ ಅವಿರ್ಭವಿಸಿದ್ದು ವಂಚಿತ ಭಾವದೊಂದಿಗಿನ ಹಠ. ಏನಾದರೂ ಸರಿಯೇ ಮುಖ್ಯಮಂತ್ರಿ ಆಗಿಯೇ ತೀರಬೇಕು ಎಂಬ ಸಂಕಲ್ಪ ಈಡೇರಿಸಿಕೊಳ್ಳುವ ಮೂಲಕ ಇದೀಗ ದೇವೇಗೌಡರ ಕೂಟದ ಎದುರು ಜಂಭದ ನಗೆ ಬೀರಿದ್ದಾರೆ.
ಸಮಾಜವಾದಿ ಮೂಲದ ಸಿದ್ದರಾಮಯ್ಯ ಬೇರು ಮಟ್ಟದಿಂದ ರಾಜಕೀಯ ವಿಕಸನ ಕಂಡವರು. ಜೆಪಿ ಚಳವಳಿಯಲ್ಲಿ ಪಾಲ್ಗೊಂಡು, ತುರ್ತು ಪರಿಸ್ಥಿತಿ ಸಂದರ್ಭ ಜೈಲು ಸೇರಿದ್ದ ಅವರು ಹುಟ್ಟು ಹೋರಾಟಗಾರರು. ಅಧಿಕಾರ ರಾಜಕೀಯದಲ್ಲಿ ಒಬ್ಬ ಉತ್ತಮ, ದಕ್ಷ ಆಡಳಿತಗಾರ, ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಚಾಣಾಕ್ಷ ಎಂದೇ ಹೆಸರಾದವರು. 1994 ರಲ್ಲಿ ದೇವೇಗೌಡರ ಸಂಪುಟದ ಹಣಕಾಸು ಸಚಿವರಾಗಿ ಚೊಚ್ಚಲ ಬಜೆಟ್ ಮುಂಡಿಸಿದಾಗ ಅವರ ರಾಜಕೀಯ ವಿರೋಧಿಗಳು 'ಕುರಿಗಳ ಲೆಕ್ಕ ಹಾಕಲು ಬಾರದ ವ್ಯಕ್ತಿ ಬಜೆಟ್ ಹೇಗೆ ಮಂಡಿಸುತ್ತಾನೆ' ಎಂದು ಗೇಲಿ ಮಾಡಿದ್ದರು. ಆದರೆ ಸಿದ್ದರಾಮಯ್ಯ ಬೇರೆ-ಬೇರೆ ಸರಕಾರಗಳ ಅವಧಿಯಲ್ಲಿ ಒಟ್ಟಾರೆ ಏಳು ಬಾರಿ ಬಜೆಟ್ ಮಂಡಿಸಿ ಅತಿ ಹೆಚ್ಚು ಬಾರಿ ಈ ಜವಾಬ್ದಾರಿ ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರಾರಾಗಿದ್ದಾರೆ. ಆದರೆ ವಶೀಲಿಬಾಜಿ, ಲಾಬಿ, ಪ್ರಭಾವಗಳಿಗೆ ಮಣಿಯದೆ ಅನೇಕರನ್ನು ಎದುರು ಹಾಕಿಕೊಂಡಿದ್ದಾರೆ. ಧರ್ಮಸಿಂಗ್ ಸರಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದಾಗ ಶಾಸಕರ ಕೆಲಸ-ಕಾರ್ಯಗಳನ್ನು ಯೋಗ್ಯತೆಗೆ ಅನುಗುಣವಾಗಿ ಪಾಸು ಮಾಡುತ್ತಿದ್ದರು. ಪಕ್ಷದೊಳಗೇ ಎದುರಾಳಿಗಳ ಗುಂಪು ಗಟ್ಟಿಗೊಳ್ಳಲು ಇದು ಕೂಡ ಒಂದು ಕಾರಣವಾಗಿತ್ತು. ಈಗ ಕಾಂಗ್ರೆಸ್ ಸರ್ಕಾರದ ಅಧಿನಾಯಕರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ರೂಢಿಗತವಾಗಿರುವ ಪ್ರಭಾವ ಸಂಪ್ರದಾಯವನ್ನು ಸರಿದೂಗಿಸಿಕೊಳ್ಳುವುದೂ ಈಗ ಅವರಿಗೊಂದು ದೊಡ್ಡ ಸವಾಲು.
ಹಾಗೆ ನೋಡಿದರೆ ಸಿದ್ದರಾಮಯ್ಯನವರ ಮುಂದೆ ಸವಾಲುಗಳ ಸರಮಾಲೆಯೇ ಇದೆ. ಪಕ್ಷದಲ್ಲಿ ಅನುಭವಿ, ದಕ್ಷ, ಸಮರ್ಥ ಹಿರಿಯ ನಾಯಕರ ದಂಡೇ ಅವರ ಜತೆ ಆರಿಸಿ ಬಂದಿದೆ. ಕಾಗೋಡು ತಿಮ್ಮಪ್ಪ, ಶಾಮನೂರು ಶಿವಶಂಕರಪ್ಪ, ಎಚ್.ಕೆ. ಪಾಟೀಲ್, ಆರ್.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ, ರಮೇಶ್‌ಕುಮಾರ್, ಡಿ.ಕೆ. ಶಿವಕುಮಾರ್ ಸೇರಿದಂತೆ ಡಜನ್‌ಗಟ್ಟಲೆ ಹಿರಿಯ ನಾಯಕರು ಹಾಗೂ ಮೂರ್ನಾಲ್ಕು ಬಾರಿ  ಆಯ್ಕೆಯಾದ ಅನೇಕ ಕಿರಿಯ ನಾಯಕರು ಸಂಪುಟ ರಚನೆ ಪ್ರಕ್ರಿಯೆಯನ್ನೇ ಸವಾಲು ಮಾಡಿಟ್ಟಿದ್ದಾರೆ. ಇದರ ಜತೆಗೆ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಪೈಪೋಟಿ ನೀಡಿ ತಣ್ಣಗಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಂತಹ ಅತೃಪ್ತ ಆತ್ಮಗಳ ಕುದಿಮೌನ ಅವರ ಪಾಲಿಗೆ ಸದಾ ಸೆರಗಿನ ಕೆಂಡವೇ ಸರಿ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಅತ್ಯಂತ ಸರಳವಾಗಿತ್ತು ಎಂಬ ವ್ಯಾಖ್ಯಾನ ನಡೆಯುತ್ತಿದೆ. ಮೇಲ್ನೋಟಕ್ಕೆ ಸುಸೂತ್ರವಾದಂತೆ ಕಂಡರೂ ಆಂತರ್ಯದ ಕತೆ ಬೇರೆಯದೇ ಇದೆ. ಸಭೆ ಆರಂಭಕ್ಕೆ ಮುನ್ನ ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿ ಮುಂದೆ ಇದ್ದ ಮಲ್ಲಿಕಾರ್ಜುನ ಖರ್ಗೆ ಇದ್ದಕ್ಕಿದ್ದಂತೆ ಹಿಂದೆ ಬೀಳುವುದಕ್ಕೆ ಕಾರಣ ಕಾಂಗ್ರೆಸ್ ಹೈಕಮಾಂಡ್‌ನ ವಿಭಿನ್ನ ಲೆಕ್ಕಾಚಾರ. ಸದ್ಯಕ್ಕೆ ಕರ್ನಾಟಕದ ಸಮರವನ್ನು ಗೆದ್ದಾಗಿದೆ. ಈಗ ಎಐಸಿಸಿ ಅಧಿನಾಯಕಿಯ ಮುಂದೆ ಇರುವುದು 2014ರ ಲೋಕಸಭಾ ಚುನಾವಣೆ ಎಂಬ ಮಹಾಯುದ್ಧ. ಜತೆಗೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯುತ್ತಿರುವ ಸಂದರ್ಭದಲ್ಲೇ ಕೇಂದ್ರ ಸಚಿವರಾದ ಬನ್ಸಾಲ್ ಹಾಗೂ ಅಶ್ವನಿಕುಮಾರ್ ತಲೆದಂಡ ಪ್ರಕ್ರಿಯೆ ಆರಂಭಗೊಂಡಿತ್ತು. ಕೇಂದ್ರ ಮಟ್ಟದಲ್ಲಿ ತೀವ್ರ ಮುಜುಗರ ಅನುಭವಿಸುತ್ತಿದ್ದ ಕಾಂಗ್ರೆಸ್, ರಾಜ್ಯದಲ್ಲಿ ಸಿದ್ದರಾಮಯ್ಯ ಸಿಡಿದೇಳುವುದರಿಂದ ಆಗುವ ಕಸಿವಿಸಿ ಎದುರಿಸಲು ಸಿದ್ದವಿರಲಿಲ್ಲ. ಏಕೆಂದರೆ ಇದು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮೇಲೆ ಪ್ರತೀಕೂಲ ಪರಿಣಾಮ ಬೀರುವ ಎಲ್ಲ ಸಾಧ್ಯತೆ ಇತ್ತು. ಹೀಗಾಗಿ ಖರ್ಗೆ ಅವರಿಗೆ ಬೇಸರವಾದರೂ ತಕ್ಷಣದ ಮುಜುಗರದಿಂದ ಪಾರಾಗುವುದೇ ಸರಿ ಎಂಬ ನಿರ್ಧಾರಕ್ಕೆ ಬಂದ ಹೈಕಮಾಂಡ್ ಸಿದ್ದರಾಮಯ್ಯನವರಿಗೆ ಗದ್ದುಗೆ ನೀಡಿದೆ.
ಲೋಕಸಭಾ ಚುನಾವಣೆ ಹಿತವನ್ನು ಮನದಲ್ಲಿಟ್ಟಿಕೊಂಡು ಹೈಕಮಾಂಡ್ ತೆಗೆದುಕೊಂಡಿರುವ ಈ ನಿರ್ಣಯ ಶಾಶ್ವತ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಲೋಕಸಭಾ ಚುನಾವಣೆ ನಂತರ ಮೂಲ ಕಾಂಗ್ರೆಸಿಗರು ಸುಮ್ಮನಿರುತ್ತಾರೆ ಎಂದು ಹೇಳಲು ಬಾರದು. ಹೀಗಾಗಿ ಈ ಸೂಕ್ಷ್ಮ ಸಿದ್ದರಾಮಯ್ಯನವರನ್ನು ಸದಾ ಅಭದ್ರತೆಗೆ ದೂಡಬಹುದು. ಇದಾಗದಂತೆ ತಡೆಯಬೇಕಿದ್ದರೆ ಅವರಿಗೆ ಮೂಲ ಕಾಂಗ್ರೆಸಿಗರನ್ನು ಒಟ್ಟಿಗೆ ಕರೆದೊಯ್ಯುವ ತಾಳ್ಮೆ ಮತ್ತು ಕುಶಾಗ್ರತೆ ರೂಢಿಸಿಕೊಳ್ಳುವುದು ಅನಿವಾರ್ಯ.
ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸುತ್ತಿರುವ ಆರಂಭಿಕ ದಿನಗಳಲ್ಲೇ ಈ ವಿಚಾರ ಚರ್ಚೆಗೆ ಬರುವುದಕ್ಕೂ ಕಾರಣವಿದೆ. ಹೇಳಿಕೇಳಿ ಸಿದ್ದರಾಮಯ್ಯನವರ ರಾಜಕೀಯ ಬದುಕಿನಲ್ಲಿ ಹರಿಯುತ್ತಿರುವುದು ಜನತಾ ಪರಿವಾರದ ರಕ್ತ. ಆ ಗರಡಿಯಲ್ಲಿ ಬೆಳೆದವರ ಆಡಳಿತ ವೈಖರಿಯೇ ಭಿನ್ನ. ಜನಾನುರಾಗಿ ಯೋಜನೆಗಳನ್ನು ಜಾರಿಗೆ ತರುವಾಗ ಪಟ್ಟಭದ್ರರನ್ನು ಮೆಟ್ಟಿ ನಿಲ್ಲುತ್ತಾರೆ. ಹೊಂದಾಣಿಕೆಗೆ ಒಗ್ಗುವುದು ಅಸಾಧ್ಯ. ಸಿದ್ದರಾಮಯ್ಯ ಹುಟ್ಟಿನಿಂದಲೂ ಖಡಕ್ ವ್ಯಕ್ತಿತ್ವದವರು. ಆದರೆ ಕಾಂಗ್ರೆಸ್‌ನ ಆಡಳಿತ ಮಂತ್ರ ಹಾಗಲ್ಲ. ವ್ಯಕ್ತಿ ಎಷ್ಟೇ ಪ್ರಬಲನಾದರೂ ಹೈಕಮಾಂಡ್ ಕರೆಗೆ ಬಗ್ಗಲೇಬೇಕು. ಸಿಡುಕು, ತಿರಸ್ಕಾರವನ್ನು ಕಾಂಗ್ರೆಸ್ ಹೈಕಮಾಂಡ್ ಸಹಿಸದು. ಎಷ್ಟೇ ಉತ್ತಮ ಆಡಳಿತ ನೀಡಿದರೂ ಆ ಶ್ರೇಯಸ್ಸನ್ನು ಕಾಂಗ್ರೆಸ್ ಕಾಲ ಬುಡಕ್ಕೆ ಚೆಲ್ಲಬೇಕೇ ವಿನಾ ವೈಯಕ್ತಿಕವಾಗಿ ಮುಡಿಗೇರಿಸಿಕೊಳ್ಳುವಂತಿಲ್ಲ. ಈ ಸೂಕ್ಷ್ಮ ಕೂಡ ನೇರ ನಡೆ-ನುಡಿಯ ಸಿದ್ದರಾಮಯ್ಯನವರಿಗೆ ಒಂದಿಲ್ಲೊಂದು ದಿನ ಕಿರಿಕಿರಿ ಸೃಷ್ಟಿಸಬಹುದು.
ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಅದರ ಅಧ್ಯಕ್ಷರು ತೀರಾ ಪ್ರಬಲರಾಗಿರುತ್ತಾರೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜನಾರ್ದನ ಪೂಜಾರಿ ಆಡಿದ ಆಟಗಳನ್ನು ಸಿದ್ದರಾಮಯ್ಯನವರು ಮರೆತಿರಲಿಕ್ಕಿಲ್ಲ.
ಈ ನಾಡು ಕಂಡ ಶ್ರೇಷ್ಠ ಸಂಸದೀಯ ಪಟುಗಳಲ್ಲಿ ಸಿದ್ದರಾಮಯ್ಯ ಒಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ಆಡಳಿತ ಪಕ್ಷದ ಪೀಠದಿಂದಾಗಲಿ, ಪ್ರತಿಪಕ್ಷದ ಸಾಲಿನಿಂದಾಗಲಿ, ಸಿದ್ದರಾಮಯ್ಯ ಮಾತಿಗೆ ನಿಂತರೆ ಅದರ ತೂಕವೇ ಬೇರೆ. ಸಿದ್ದಾಂತಕ್ಕೆ ವಾಸ್ತವದ ಮೆರಗುಕೊಟ್ಟು ಗ್ರಾಮ್ಯ ಶೈಲಿಯಲ್ಲಿ ಅವರು ಸರ್ಕಾರವನ್ನು ಹಣಿಯುವ ಚಂದವೇ ಬೇರೆ. ಸಿದ್ದರಾಮಯ್ಯನವರ ಹಿಡಿತಕ್ಕೆ ಸಿಗದೇ ತಪ್ಪಿಸಿಕೊಳ್ಳುವುದಕ್ಕೆ ಬಿಜೆಪಿ ಸರ್ಕಾರದ ಸಚಿವರು ಪೇಚಾಡುತ್ತಿದ್ದ ರೀತಿ ಎಲ್ಲರಿಗೂ ಗೊತ್ತು. ಆದರೆ ಈ ಬಾರಿಯ ಸದನ ಸಿದ್ದರಾಮಯ್ಯನವರಿಗೆ ಸತ್ವ ಪರೀಕ್ಷೆ. ಏಕೆಂದರೆ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದ್ದಾರೆ. ಇನ್ನೊಂದೆಡೆ ಬಿಜೆಪಿ ಶಾಸಕಾಂಗಪಕ್ಷದ ನಾಯಕನಾಗಿ ಸುರೇಶ್ ಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರೈತಸಂಘದ ಕೆ.ಎಸ್.ಪುಟ್ಟಣಯ್ಯ ಉಪಸ್ಥಿತಿ ಸದನಕ್ಕೆ ಇದೆ. ಪ್ರತಿಯೊಬ್ಬರೂ ಸರ್ಕಾರದ ಹುಳುಕು ಹೆಕ್ಕುವುದರಲ್ಲಿ ಎತ್ತಿದ ಕೈ.
ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರ ಸಂಬಂಧ ಎಂತಹದ್ದು ಎಂಬುದು ಲೋಕಕ್ಕೇ ಗೊತ್ತು. ಜತೆಗೆ ಜೆಡಿಎಸ್ ನಿರೀಕ್ಷಿತ ಸ್ಥಾನ ಗಳಿಸದೇ ಇರುವ ಬೇಸರದಿಂದ ಕುಮಾರಸ್ವಾಮಿ ಕುದ್ದು ಹೋಗಿದ್ದಾರೆ. ಹೀಗಾಗಿ ಹೆಜ್ಜೆ ಹೆಜ್ಜೆಗೆ ಸರ್ಕಾರದ ತಪ್ಪು ಹುಡುಕಲು ಅವರು ಮುಂದಾಗಬಹುದು. ಕುಮಾರಸ್ವಾಮಿ ಅವರು ವಾಚ್ ಡಾಗ್ ರೀತಿ ಕೆಲಸ ಮಾಡುತ್ತೇವೆ ಎಂದು ಈಗಾಗಲೇ ನೀಡಿರುವ ಹೇಳಿಕೆ ಹಿಂದೆ ದೊಡ್ಡ ಎಚ್ಚರಿಕೆ ಇದೆ.
ಅದೇ ರೀತಿ ಸಿದ್ದರಾಮಯ್ಯ ಸಂಪುಟದಲ್ಲೂ ಅನುಭವಿಗಳ ದಂಡೇ ಸೇರಲಿದೆ. ಇವರಲ್ಲಿ ಹೆಚ್ಚಿನವರು ಮೂಲ ಕಾಂಗ್ರೆಸಿಗರು. ಜನತಾ ಪರಿವಾರದ ಶೈಲಿಯಲ್ಲಿ ಸಿದ್ದರಾಮಯ್ಯ ಸಂಪುಟ ಸಹೋದ್ಯೋಗಿಗಳ ಖಾತೆ ವ್ಯವಹಾರದಲ್ಲಿ ಕೈಯಾಡಿಸಿದರೆ, ಮೇಲಿಂದ ಮೇಲೆ ಸೂಚನೆ ನೀಡಿದರೆ ಅದು ಪ್ರತೀಕೂಲ ಪರಿಣಾಮ ಸೃಷ್ಟಿಸುವ ಸಾಧ್ಯತೆ ಜಾಸ್ತಿ ಇದೆ. ಮುಖ್ಯಮಂತ್ರಿಯಾದವರಿಗೆ ಎಲ್ಲ ಖಾತೆಗಳ ಕಾರ್ಯ ವೈಖರಿಯನ್ನು ಪ್ರಶ್ನಿಸುವ ಹಕ್ಕಿರುವುದು ಸತ್ಯವಾದರೂ, ಕಾಂಗ್ರೆಸ್‌ನ ಹಳೆ ತಲೆಗಳು ಇದನ್ನು ಒಪ್ಪಿಕೊಳ್ಳುವುದು ಕಷ್ಟ.
ಇನ್ನು ಸಿದ್ದರಾಮಯ್ಯನವರ ಆಡಳಿತಾವಧಿಯ ಉದ್ದಕ್ಕೂ ಅವರ ವಿರೋಧಿಗಳು ಜಾಗೃತರಾಗಿ ನೋಡುವ ಧರ್ಮಸೂಕ್ಷ್ಮದ ಅಂಶಗಳು ಕೆಲವಷ್ಟಿವೆ. ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬಂದಿದೆ. ಆದರೆ ರಾಜ್ಯದ ಜನತೆ ಕಾಂಗ್ರೆಸ್‌ಭ್ರಷ್ಟಾಚಾರ ರಹಿತ, ಜನಸ್ನೇಹಿ ಆಡಳಿತ ನೀಡುವ ಪಕ್ಷ ಎಂಬ ಕಾರಣಕ್ಕೆ ಈ ಆದೇಶ ನೀಡಿಲ್ಲ. ಈ ಆಯ್ಕೆಯ ಹಿಂದೆ ಇರುವುದು ಬಿಜೆಪಿಯ ವೈಫಲ್ಯ ಎಂಬುದು ಅಷ್ಟೇ ಸತ್ಯ. ಬಿಜೆಪಿ ಹಾಗೂ ಜೆಡಿಎಸ್ ಆಡಳಿತವನ್ನು ಕಳೆದ ಒಂಬತ್ತು ವರ್ಷಗಳಿಂದ ನೋಡಿರುವ ಮತದಾರ ಬೇರೆ ಆಯ್ಕೆ ಇಲ್ಲದೇ ಕಾಂಗ್ರೆಸ್ ಅನ್ನು ಅಪ್ಪಿಕೊಂಡಿದ್ದಾನೆ ಎಂಬುದನ್ನು ಸಿದ್ದರಾಮಯ್ಯ ಗಮನದಲ್ಲಿಟ್ಟುಕೊಳ್ಳಬೇಕು.
ಲಿಂಗಾಯಿತ ಸಮುದಾಯದ ಪ್ರಶ್ನಾತೀತ ನಾಯಕ ಎಂಬಂತೆ ಯಡಿಯೂರಪ್ಪನವರು ಮೆರೆದರು. ಆದರೆ ಅವರ ವೈಫಲ್ಯಗಳನ್ನು ಗಣನೆಗೆ ತೆಗೆದುಕೊಂಡ ಲಿಂಗಾಯಿತರು ಈ ಬಾರಿ ಕಾಂಗ್ರೆಸ್ ಕಡೆ ವಾಲಿದ್ದಾರೆ. ಅದೇ ರೀತಿ ಅಧಿಕಾರ ಹಸ್ತಾಂತರ ಮಾಡದೇ ಕುಮಾರಸ್ವಾಮಿ ತಪ್ಪೆಸಗಿದರು ಎಂಬುದನ್ನು ಒಪ್ಪಿಕೊಳ್ಳುವ ಒಕ್ಕಲಿಗ ಸಮುದಾಯ ತಮ್ಮ ಪ್ರಾಬಲ್ಯ ಇರುವ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ 28 ಸ್ಥಾನಗಳನ್ನು ದಯಪಾಲಿಸಿದ್ದಾರೆ. ಹೀಗಾಗಿ ಈ ಎರಡೂ ಪ್ರಬಲ ಸಮುದಾಯದ ಶಾಸಕರು ಹಾಗೂ ಸಚಿವರ ವಿಶ್ವಾಸ ಗಳಿಸಿ ಆಡಳಿತ ಯಂತ್ರವನ್ನು ಮುನ್ನಡೆಸುವ ದೊಡ್ಡ ಸವಾಲು ಅವರ ಮುಂದೆ ಇದೆ.
ವೈಯಕ್ತಿಕವಾಗಿ ಸಿದ್ದರಾಮಯ್ಯ ಜಾತ್ಯಾತೀತ ಮನೋಧರ್ಮದವರು. ಆಡಳಿತ ಯಂತ್ರ ಮುನ್ನಡೆಸುವಾಗ ಜಾತಿ-ಧರ್ಮದಂಥ ಸಣ್ಣ ವಿಚಾರ ಕಣ್ಣ ಮುಂದೆ ಕುಣಿಯಬಾರದು ಎಂಬ ವಿವೇಚನೆ ಅವರಿಗೆ ಇದೆ. ಆದರೆ ಈ ಸತ್ಯವನ್ನು ಮುಚ್ಚಿ ಹಾಕುವ ಪಟ್ಟಭದ್ರ ಹಿತಾಸಕ್ತಿಗಳ ಗುಂಪೊಂದು ಅವರ ಸುತ್ತ ಸೃಷ್ಟಿಯಾಗಬಹುದೆಂಬ ಆತಂಕ ಸಿದ್ದರಾಮಯ್ಯನವರ ಅಭಿಮಾನಿಗಳಲ್ಲಿ ಇದೆ.
ಇದನ್ನು ಸಿದ್ದರಾಮಯ್ಯ ಮೆಟ್ಟಿ ನಿಲ್ಲುವರೇ ಎಂಬ ಪ್ರಶ್ನೆ ಆರಂಭಿಕ ಹಂತದಲ್ಲೇ ಎಲ್ಲರನ್ನು ಕಾಡುತ್ತಿದೆ. ಇದಕ್ಕೆ ಕಾರಣ ಈ ಹಿಂದೆ ರಾಜ್ಯವನ್ನು ಆಳಿದ ಇಬ್ಬರು ಮುಖ್ಯಮಂತ್ರಿಗಳ ಸುತ್ತ ಇಂಥದ್ದೇ ಒಂದು ವರ್ಗ ಸೃಷ್ಟಿಯಾಗಿತ್ತು. ಯಡಿಯೂರಪ್ಪನವರು ಯಾವ ಮಟ್ಟದಲ್ಲಿ ತಮ್ಮ ಜಾತಿ ಪ್ರೇಮವನ್ನು ಮೆರೆದರು, ಅದು ಯಾವ ರೀತಿ ಅವರಿಗೆ ಕೆಟ್ಟ ಹೆಸರನ್ನು ತಂದುಕೊಟ್ಟಿತು ಎಂಬುದು ನಾಡಿಗೇ ಗೊತ್ತು. ಅದೇ ರೀತಿ ಎಚ್.ಡಿ.ಕುಮಾರಸ್ವಾಮಿಯವರೂ ಈ ಆರೋಪದಿಂದ ಹೊರತಾಗಿರಲಿಲ್ಲ.
ದೇವೇಗೌಡರ ಜತೆ ಮುನಿಸಿಕೊಂಡು ಜಾತ್ಯತೀತ ಜನತಾ ದಳದಿಂದ ಸಿಡಿದು ಬಂದ ಸಿದ್ದರಾಮಯ್ಯ ನಂತರದ ದಿನಗಳಲ್ಲಿ ಅಹಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಆದರೆ ಈಗ ಅವರು ಕೇವಲ ಅಹಿಂದ ವರ್ಗದ ನಾಯಕನಲ್ಲ. ಇಡಿ ರಾಜ್ಯವನ್ನು ಮುನ್ನಡೆಸುವ ಸ್ಥಾನದಲ್ಲಿದ್ದಾರೆ. ಹೀಗಾಗಿ ತಮ್ಮ ಸುತ್ತ ಹುಟ್ಟಿಕೊಳ್ಳುವ  ಜಾತಿಯ ಪರದೆಯಿಂದ ಹೊರ ಬರಬೇಕಾಗುತ್ತದೆ. ಜಾತಿಯನ್ನು ಅತಿಯಾಗಿ ಅಪ್ಪಿಕೊಂಡ ನಾಯಕರು ಹೇಗೆ ಅಧಃಪತನ ಹೊಂದಿದ್ದಾರೆ ಎಂಬ ದೃಷ್ಟಾಂತವನ್ನು ಆಗಾಗ ನೆನಪಿಸಿಕೊಳ್ಳಲೇಬೇಕು.

ಲಗೋರಿ:
ಆಸೆ ಆಕಾಶದಗಲ. ಆದರೆ ಅವಕಾಶ ಸಾಸಿವೆ ಗಾತ್ರ.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com