ಅಭದ್ರತೆ ತರಲಿದೆಯೇ ಆಹಾರ ಭದ್ರತೆ?

Updated on: 

1998ರಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಅಮರ್ತ್ಯ ಸೇನ್, ಆಹಾರ ಭದ್ರತಾ ಕಾಯ್ದೆ ಜಾರಿಯಾಗಬೇಕೆಂದು ಬಯಸುವವರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಂತಿದ್ದಾರೆ. ಭಾರತದ ಮೂರರಲ್ಲಿ 2 ಭಾಗದಷ್ಟು ಜನಸಂಖ್ಯೆಗೆ ಸಬ್ಸಿಡಿ ಆಧಾರದಲ್ಲಿ ಅಕ್ಕಿ ಮತ್ತು ಗೋಧಿಯನ್ನು ಹಂಚುವ ಬಗ್ಗೆ ಈ ಬಿಲ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಬಹುಷ ಇಷ್ಟೊಂದು ಪ್ರಮಾಣದಲ್ಲಿ ಇದುವರೆಗೂ ಯಾವ ದೇಶವೂ ಅಕ್ಕಿ ಮತ್ತು ಗೋಧಿಯನ್ನು ಹಂಚಿಲ್ಲವೇನೋ? ಆಹಾರ ಭದ್ರತಾ ಮಸೂದೆಯಿಂದಾಗಿ ಸಂಕಷ್ಟಗಳು ಎದುರಾಗುವುದೇ ಇಲ್ಲ ಎಂದು ಕೇಂದ್ರ ಭಾವಿಸಿರಬಹುದು ಅಥವಾ ಮುಂದೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟೂ ಅದಕ್ಕೆ ಸಮಯವಿಲ್ಲವೇನೋ?
ಹಾಗಾಗೆ ಈ ಮಸೂದೆಗೆ ಅಮರ್ತ್ಯ ಸೇನ್ ತಾರ್ಕಿಕವಾಗಿಯಲ್ಲದೆ ಕೇವಲ ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಅನ್ನಿಸುತ್ತಿದೆ. ತಾರ್ಕಿಕವಾಗಿ ಅವರೇಕೆ ಯೋಚಿಸುತ್ತಿಲ್ಲ ಎನ್ನುವುದು ಅರ್ಥವಾಗಬೇಕಾದರೆ, ಒಮ್ಮೆ ಸಿಎಸಿಪಿ (ಕಮಿಷನ್ ಆಫ್ ಅಗ್ರಿಕಲ್ಚರಲ್ ಕಾಸ್ಟ್ಸ್ ಆ್ಯಂಡ್ ಪ್ರೈಸಸ್) ಪ್ರಕಟಿಸಿರುವ ವರದಿಯನ್ನು ಓದಬೇಕು. ಈ ವರದಿ ಡಿಸೆಂಬರ್ 2012ರಲ್ಲಿ ಪ್ರಕಟವಾಗಿತ್ತು. ಆಹಾರ ಭದ್ರತಾ ಕಾಯ್ದೆಯಲ್ಲಿ  ವಿಪತ್ತು ತಂದೊಡ್ಡಬಹುದಾದ ಅಂಶಗಳಿವೆ, ಇದನ್ನು ಜಾರಿಗೊಳಿಸುವುದು ಮೂರ್ಖತನವೇ ಎನ್ನುವುದರ ಬಗ್ಗೆ ಈ ಸಿಎಸಿಪಿ ವರದಿ ಸ್ಪಷ್ಟವಾಗಿ ಬೆಳಕು ಚೆಲ್ಲಿದೆ.
-ಆಹಾರ ಭದ್ರತಾ ಕಾಯ್ದೆಯಲ್ಲಿ, ಆಗಬಹುದಾದ ಖರ್ಚು ಸುಮಾರು 1 ಲಕ್ಷ 20 ಸಾವಿರ ಕೋಟಿಗಳಷ್ಟು ಎಂದು ಹೇಳಲಾಗಿದೆ. ಆದರೆ ಸಿಎಸಿಪಿ ವರದಿಯ ಪ್ರಕಾರ ಅದರಲ್ಲಿ ತೋರಿಸುತ್ತಿರುವ ಮೊತ್ತ ಕೇವಲ ಹಿಮಪರ್ವತದ ತುದಿಯಷ್ಟೆ. ಆಡಳಿತಾತ್ಮಕ ಸ್ಥಾಪನೆ, ಸಂಗ್ರಹಣೆ, ಸಾಗಾಟ, ಸಂಸ್ಕರಣೆ ಮತ್ತು ಮಾರುಕಟ್ಟೆ ಸೌಲಭ್ಯಕ್ಕಾಗಿನ ಹೂಡಿಕೆಗಳೆಲ್ಲವೂ ಸೇರಿದರೆ ಮೂರುವರ್ಷಗಳಿಗೇ ಸುಮಾರು 682,163 ಕೋಟಿ ರುಪಾಯಿ ಹಣ ಬೇಕು ಎಂದು ಹೇಳುತ್ತದೆ ಆ ವರದಿ.  ಕೇಂದ್ರ ಸರ್ಕಾರ ಹೇಳುತ್ತಿರುವ ಹಣಕ್ಕಿಂತ ಈ ಮೊತ್ತ ಅತಿ ಹೆಚ್ಚು. ದೇಶ ಅದಾಗಲೇ ಅಧಿಕ ಹಣಕಾಸಿನ ಕೊರತೆಯಿಂದ ತತ್ತರಿಸಿಹೋಗಿದೆ. ಅಂಥದ್ದರಲ್ಲಿ ಇಷ್ಟೊಂದು ಹಣ ತರುವುದಾದರೂ ಎಲ್ಲಿಂದ?
ಇದರರ್ಥವಿಷ್ಟೆ. ಸಾಲ ಮಾಡಬೇಕು. ಅದೂ ಹೆಚ್ಚಿನ ಬಡ್ಡಿ ತೆತ್ತು!
- ವ್ಯಂಗ್ಯವೆಂದರೆ, ಸರ್ಕಾರ ಜನರಿಗೆ ಆಧಾರ್‌ನಂತಹ ಯೋಜನೆಯ ಬದಲಾಗಿ ಸಾರ್ವಜನಿಕ ವಿತರಣಾ ಜಾಲದ ಮೂಲಕ ಆಹಾರ ಭದ್ರತೆ ಒದಗಿಸಲು ಇಚ್ಛಿಸುತ್ತಿದೆ. ಈ ರೀತಿಯ ವಿತರಣೆ ಪ್ರಪಂಚದ ಅತ್ಯಂತ ವಿಸ್ತಾರವಾದ ಯೋಜನೆಯಾಗಲಿದೆಯಾದರೂ ಇಂಥದ್ದೇ ಸಾಹಸಕ್ಕಿಳಿದ ಹಲವಾರು ದೇಶಗಳು ಕೈಸುಟ್ಟುಕೊಂಡ ಉದಾಹರಣೆಗಳಿವೆ. ಸಂಪೂರ್ಣ ಆಹಾರ ಭದ್ರತೆಯನ್ನು ಧಾನ್ಯಗಳಾದ ಅಕ್ಕಿ ಮತ್ತು ಗೋಧಿಗಳಿಂದ ಒದಗಿಸಬಹುದು ಎಂಬ ಭ್ರಮೆಯಲ್ಲಿ ಸದ್ಯದ ಆಹಾರ ಭದ್ರತಾ ಮಸೂದೆಯನ್ನು ರೂಪಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಭಾರತೀಯರು, ಧಾನ್ಯಗಳನ್ನು ಬದಿಗೊತ್ತಿ ಪ್ರೋಟೀನ್ ಆಧರಿತ ಆಹಾರದತ್ತ ಚಿತ್ತ ಹರಿಸಿದ್ದಾರೆ.
'ಆರ್ಥಿಕ ಪ್ರಗತಿ ಆಗುತ್ತಿದ್ದಂತೆ, ಜನತೆಯ ಆಹಾರ ಸೇವನಾ ಕ್ರಮದಲ್ಲೂ ಬದಲಾವಣೆ ಆಗುತ್ತದೆ. 1987-88ರಲ್ಲಿ 41 ಪ್ರತಿಶತದಷ್ಟಿದ್ದ ಗ್ರಾಮೀಣ ಭಾಗದ 'ಒಟ್ಟು ಆಹಾರ ಖರ್ಚಿನಲ್ಲಿನ ಧಾನ್ಯಗಳ ಪ್ರಮಾಣ', 2009-10ರ ವೇಳೆಗೆ 26.5 ಕ್ಕೆ ಇಳಿದಿದೆ. ನಗರ ಪ್ರದೇಶಗಳಲ್ಲಿ ಈ ಪ್ರಮಾಣ 1987-88ರಲ್ಲಿ 26.5ರಷ್ಟಿದ್ದರೆ, 2009-10ರಲ್ಲಿ 22.4 ಪ್ರತಿಶತಕ್ಕೆ ಕುಸಿದಿತ್ತು. ಜನ ಇತ್ತೀಚಿನ ದಿನಗಳಲ್ಲಿ ಹಾಲು, ಮೊಟ್ಟೆ, ಹಣ್ಣು ಮತ್ತು ತರಕಾರಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಆಹಾರ ಭದ್ರತೆಯನ್ನು ಬೃಹತ್ ಮಟ್ಟದಲ್ಲಿ ಲಭ್ಯವಿರುವ ಆಹಾರ ಧಾನ್ಯಗಳಿಗಷ್ಟೇ ಸೀಮಿತಗೊಳಿಸುವ ಮೂಲಕ ಒದಗಿಸುವುದು ಅಸಾಧ್ಯ' ಎನ್ನುತ್ತದೆ ಸಿಎಸಿಪಿ ವರದಿ.   
- ಆಹಾರ ಭದ್ರತೆಯ ಗುರಿಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಪೌಷ್ಟಿಕಾಂಶ ಮಟ್ಟವನ್ನು ಹೆಚ್ಚಿಸುವುದು ಪ್ರಮುಖವಾದದ್ದು. ಪೌಷ್ಟಿಕ ಮಟ್ಟವನ್ನು ಹೆಚ್ಚಿಸಲು ಕೇವಲ ಅಕ್ಕಿ, ಗೋಧಿಯಿಂದಲೇ ಸಾಧ್ಯವಿಲ್ಲ. ಶಿಕ್ಷಣ, ಸ್ವಚ್ಛ ಕುಡಿಯುವ ನೀರಿನ ಲಭ್ಯತೆ, ಆರೋಗ್ಯಕರ ನೈರ್ಮಲ್ಯ ಸೌಲಭ್ಯಗಳು ಪೌಷ್ಟಿಕತೆಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಪೌಷ್ಟಿಕತೆ ಬಹುಆಯಾಮದ ಸಮಸ್ಯೆ ಮತ್ತು ಅದನ್ನು ಹೊಡೆದೋಡಿಸಲು ದೂರದೃಷ್ಟಿಯ ದೀರ್ಘಾವಧಿ ತಂತ್ರಗಳನ್ನು ರಚಿಸಬೇಕು.
- ಅರ್ಹರಿಗೆ ಅಕ್ಕಿ ಮತ್ತು ಗೋಧಿಯನ್ನು ಹಂಚುವ ಕಾನೂನುಬದ್ಧ ಹೊಣೆಗಾರಿಕೆ ಸರ್ಕಾರದ ಮೇಲೆ ಬೀಳುತ್ತದೆ. ಈ ಹೊಣೆಯನ್ನು ಸರಿಯಾಗಿ ಹೊರಬೇಕಾದರೆ ಸರ್ಕಾರ ಅಕ್ಕಿ ಮತ್ತು ಗೋಧಿಗಾಗಿ ರೈತರ ಮೊರೆ ಹೋಗಲೇ ಬೇಕು. ಸದ್ಯಕ್ಕೆ ಅದು ಈ ಕೆಲಸವನ್ನು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ)ದ ಮೂಲಕ ಮಾಡುತ್ತಿದೆ, ಅದೂ ಕನಿಷ್ಠ ಬೆಂಬಲ ಬೆಲೆಯನ್ನು (ಎಮ್‌ಎಸ್‌ಪಿ) ನಿಗದಿ ಪಡಿಸುವ ಮೂಲಕ. ಈ ಎಮ್‌ಎಸ್‌ಪಿಯನ್ನು ಪೂರ್ವದಲ್ಲೇ ಘೋಷಿಸಲಾಗುತ್ತದೆ. ಹಾಗಾಗೇ ರೈತನಿಗೆ ತಾನು ಸರ್ಕಾರಕ್ಕೆ ಮಾರುತ್ತಿರುವ ಅಕ್ಕಿ ಅಥವಾ ಗೋಧಿಯಿಂದ ಎಷ್ಟು ಹಣ ಬರಲಿದೆ ಎಂಬುದು ಮುಂಚಿತವಾಗಿಯೇ ತಿಳಿದಿರುತ್ತದೆ.
ಸದ್ಯಕ್ಕೆ ಜಾರಿಯಿರುವ ನಿಯಮದ ಪ್ರಕಾರ, ರೈತರು ಬೆಳೆದ ಒಟ್ಟೂ ಅಕ್ಕಿ ಅಥವಾ ಗೋಧಿಯನ್ನು ಎಫ್‌ಸಿಐ ಖರೀದಿಸಬೇಕು. ಇದರಿಂದಾಗಿ ಎಂತಹ ಸನ್ನಿವೇಶ ಸೃಷ್ಟಿಯಾಗಿದೆಯೆಂದರೆ, ರೈತರು ಕೇವಲ ಈ ಬೆಳೆಗಳತ್ತಲೇ ಒಲವು ತೋರುತ್ತಿದ್ದಾರೆ. ಏಕೆಂದರೆ ಅವರಿಗೆ ಸಿದ್ಧ ಖರೀದಿದಾರನಿರುತ್ತಾನೆ ಮತ್ತು ನಿಗದಿತ ಮೊತ್ತದ ಬಗ್ಗೆಯೂ ಅರಿವಿರುತ್ತದೆ.
ಇದರಿಂದಾಗಿ ಎಣ್ಣೆ ಬೀಜಗಳು ಮತ್ತು ಬೇಳೆಕಾಳುಗಳ ಉತ್ಪಾದನೆಯಲ್ಲಿ ತೀವ್ರ ಏರುಪೇರಾಗುತ್ತಿದೆ. ವರದಿಯ ಪ್ರಕಾರ: '2011-2012ರಲ್ಲಿ ಭಾರತಕ್ಕೆ ಸುಮಾರು 46,242 ಕೋಟಿ ರುಪಾಯಿ ಮೊತ್ತದ ಆಹಾರಯೋಗ್ಯ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಆಹಾರ ಭದ್ರತಾ ಕಾಯ್ದೆಯೇನಾದರೂ ಜಾರಿಯಾದರೆ, ಮುಂಬರುವ ದಿನಗಳಲ್ಲಿ ರೈತರು ವೈವಿಧ್ಯಮಯ ಬೆಳೆಗಳಾದ ಹಣ್ಣು, ತರಕಾರಿಗಳನ್ನು ಬದಿಸರಿಸಿ ಕೇವಲ ಅಕ್ಕಿ ಮತ್ತು ಗೋಧಿಯತ್ತಲೇ ಹೆಚ್ಚು ಚಿತ್ತ ನೆಡಬಹುದು. ಹೀಗೇನಾದರೂ ಆದರೆ ಆಹಾರದ ಹಣದುಬ್ಬರ ಹೆಚ್ಚಬಹುದು'
- ಸುಮಾರು 50 ಪ್ರತಿಶತದಷ್ಟು ಭಾರತದ ಕೃಷಿ ಇಂದಿಗೂ ಮಳೆಯ ಮೇಲೆಯೇ ಅವಲಂಬಿತವಾಗಿದೆ. ಬಹುತೇಕ ಭಾಗಗಳಲ್ಲಿ ಮಳೆಯ ಗುಣವನ್ನು ಪರಿಗಣಿಸಿಯೇ ನಿರ್ದಿಷ್ಟ ಬೆಳೆಯನ್ನು ಬೆಳೆಯಲಾಗುತ್ತದೆ. ಒಂದು ವೇಳೆ ಬರಗಾಲ ಬಂದರೆ ಯಾವ ಸ್ಥಿತಿ ನಿರ್ಮಾಣವಾಗಬಹುದು?
2002-03ರಲ್ಲಿ ಭಾರತ ಬರಗಾಲ ಪೀಡಿತವಾಗಿತ್ತು. ಆ ಸಮಯದಲ್ಲಿ ಅಕ್ಕಿ ಮತ್ತು ಗೋಧಿಯ ಉತ್ಪಾದನೆ 28.5 ಮಿಲಿಯನ್ ಟನ್‌ಗಳಷ್ಟು ಕುಸಿದಿತ್ತು(ಒಟ್ಟಾರೆ ಆಹಾರಧಾನ್ಯ ಉತ್ಪಾದನಾ ಪ್ರಮಾಣ 38 ಮಿಲಿಯನ್ ಟನ್‌ಗಳಷ್ಟು ಕಡಿಮೆಯಾಗಿತ್ತು). ಆ ನಷ್ಟವನ್ನು ಸರಿಪಡಿಸಲು ಮೂರು ವರ್ಷಗಳೇ ಹಿಡಿಯಿತು.
ಒಂದು ವೇಳೆ ಮುಂದಿನ ದಿನಗಳಲ್ಲಿ ಬರ ಬಂದರೆ, ಸರ್ಕಾರ ಮತ್ತೆ ಆಮದನ್ನೇ ಅವಲಂಬಿಸುತ್ತದೆಯೇ? ಅದು ನಿರ್ವಹಣ ಯೋಗ್ಯ ಆಯ್ಕೆಯಾಗುತ್ತದೆಯೇ? 'ಇಲ್ಲ' ಎನ್ನುತ್ತದೆ ಸಿಎಸಿಪಿ ವರದಿ.
'ಭಾರತದಂತಹ ದೊಡ್ಡ ರಾಷ್ಟ್ರದ ಬೇಡಿಕೆಯ ಪ್ರಮಾಣವೂ ಹೆಚ್ಚಿರುತ್ತದೆ. ಅಕ್ಕಿ ಮತ್ತು ಗೋಧಿ ಉತ್ಪಾದನೆಯಲ್ಲಿ ಜಾಗತಿಕ ಮಾರುಕಟ್ಟೆಗಳು ಅಷ್ಟೇನೂ ಬೃಹತ್ ಆಗಿಲ್ಲ. ಅವು ನಮ್ಮ ಬೇಡಿಕೆಯನ್ನು ಪೂರೈಸುವಲ್ಲಿ ಸಫಲವಾದರೂ, ಅವುಗಳಿಗೇ ಅಕ್ಕಿಯ ಅಭಾವ ಉಂಟಾಗುವುದಂತೂ ನಿಶ್ಚಿತ(ಹಿಂದೆಯೂ ಹೀಗೇ ಆಗಿತ್ತು). ಹಾಗಾಗೇ ಒಮ್ಮೇಲೆ ಜಾಗತಿಕ ಮಟ್ಟದಲ್ಲಿ ಅಕ್ಕಿಯ ಬೆಲೆ ತೀವ್ರಗತಿಯಲ್ಲಿ ಏರುತ್ತದೆ.'
- ಇಂದು ಅಕ್ಕಿ ಮತ್ತು ಗೋಧಿ ಆಮದಿಗಾಗಿ ಎಫ್‌ಸಿಐ ಹಲವಾರು ರಾಜ್ಯಗಳ ಮೇಲೆ ಅವಲಂಬಿತವಾಗಿದೆ. ಅಲ್ಲದೆ ಅವುಗಳ ಖರೀದಿಯಲ್ಲಿಯೂ ಎಲ್ಲರಿಗಿಂತ ಅದು ಮುಂದಿದೆ. ಆಹಾರ ಭದ್ರತೆಯೇನಾದರೂ ಜಾರಿಯಾದರೆ ಖರೀದಿಯ ಪ್ರಮಾಣವೂ ಹುಚ್ಚೆದ್ದು ಹೆಚ್ಚುತ್ತದೆ. ಹಾಗಾದಾಗ ಅನೇಕ ಸಮಸ್ಯೆಗಳೂ ಹುಟ್ಟಿಕೊಳ್ಳುತ್ತವೆ. ಬೇಡಿಕೆ ಹೆಚ್ಚಿದಂತೆಲ್ಲ ಖಾಸಗಿ ವಲಯಗಳ ಆರ್ಭಟವೂ ಹೆಚ್ಚುತ್ತದೆ. ವೈವಿಧ್ಯಮಯ ಬೆಳೆಗಳಿಗೆ ಕಡಿವಾಣ ಬೀಳುತ್ತದೆ.
- ಇನ್ನು ಎಫ್‌ಸಿಐನಲ್ಲಿ ಪ್ರಮಾಣಾನುಗುಣ ಉಳಿತಾಯವಿಲ್ಲ ಎಂಬ ಅಂಶವನ್ನೂ ಗಮನಿಸಲಾಗಿದೆ. ಅದು ಹೆಚ್ಚು ಖರೀದಿ ಮಾಡಿದಂತೆಲ್ಲ, ಖರೀದಿಯ ವೆಚ್ಚವೂ ಹೆಚ್ಚುತ್ತಾ ಹೋಗುತ್ತಿದೆ! ಸಿಎಸಿಪಿ ಹೇಳುವುದೇನೆಂದರೆ, 'ಎಫ್‌ಸಿಐನ ಅಕ್ಕಿ ಮತ್ತು ಗೋಧಿ ಖರೀದಿಯ ಆರ್ಥಿಕ ವೆಚ್ಚವು ಖರೀದಿಯ ಪ್ರಮಾಣದ ಜೊತೆಗೆ ಹೆಚ್ಚುತ್ತಿದೆ. ಇದರಿಂದ ಅರ್ಥವಾಗುವುದು ಇಷ್ಟು- ಎಫ್‌ಸಿಐ ಪ್ರಮಾಣಾನುಗುಣ ಉಳಿತಾಯದ ಕೊರತೆಯಿಂದ ನರಳುತ್ತಿದೆ. ಒಂದುವೇಳೆ ಆಹಾರ ಭದ್ರತಾ ಕಾಯ್ದೆಯೇನಾದರೂ ಜಾರಿಗೆ ಬಂದರೆ, ಅಕ್ಕಿ ಮತ್ತು ಗೋಧಿಯ ಖರೀದಿಯೂ ಹೆಚ್ಚುತ್ತದೆ. ಎಫ್‌ಸಿಐನ ಸದ್ಯದ ವಹಿವಾಟಿನ ವೈಖರಿಯನ್ನು ನೋಡಿದರೆ, ಖರ್ಚೂ ಹೆಚ್ಚಾಗಲಿದೆ. ಅಂದರೆ ಇಷ್ಟೊಂದು ಹೊರೆ ನೇರವಾಗಿ ಸರ್ಕಾರದ ಮೇಲೆ ಬೀಳಲಿದೆ.'
- ಇನ್ನು ಸರ್ಕಾರ ಅಕ್ಕಿ ಮತ್ತು ಗೋಧಿಯ ಎಮ್‌ಎಸ್‌ಪಿಯನ್ನೂ ಏರಿಸುತ್ತಲೇ ಇರಬೇಕಾಗುತ್ತದೆ. ರೈತರು ಹೆಚ್ಚಾಗಿ ಈ ಬೆಳೆಗಳನ್ನೇ ಬೆಳೆಯಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಗೆ ಮಾಡಲೇಬೇಕಾದದ್ದು ಅನಿವಾರ್ಯ. ಇತ್ತೀಚಿನ ಸಮಯದಲ್ಲಂತೂ ಕೃಷಿ ದುಡಿಮೆದಾರರ ದಿನಗೂಲಿ ಹೆಚ್ಚಾಗಿದೆ. ಕೃಷಿ ಕ್ಷೇತ್ರದಲ್ಲಿ ಕೆಲಸಗಾರರ ಸಂಖ್ಯೆಯೂ ಕಳೆದ 3 ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಇದೇ ಸಮಯದಲ್ಲಿ ಕೆಲವು ರಾಜ್ಯಗಳಲ್ಲಿ ಕೂಲಿ ದರ ಸುಮಾರು ನೂರು ಪ್ರತಿಶತಕ್ಕಿಂತ ಹೆಚ್ಚಾಗಿದೆ. ಹಾಗಾಗೇ ಸರ್ಕಾರವೂ ಕಾಲಾಂತರದಲ್ಲಿ ಅಕ್ಕಿ ಮತ್ತು ಗೋಧಿಯ ಎಮ್‌ಎಸ್‌ಪಿಯನ್ನು ಹೆಚ್ಚಿಸಲೇಬೇಕಾದ ಅನಿವಾರ್ಯತೆಗೆ ಬೀಳುತ್ತದೆ. ಬೆಳೆಗಳ ಉತ್ಪಾದನಾ ವೆಚ್ಚ ಹೆಚ್ಚುತ್ತಿರುವುದರಿಂದ ಎಮ್‌ಎಸ್‌ಪಿಯನ್ನು ನಿರ್ದಿಷ್ಟ ಮಟ್ಟಕ್ಕೇ ತಟಸ್ಥವಾಗಿಸುವುದು ಅಸಾಧ್ಯ.
ಒಟ್ಟಿನಲ್ಲಿ ಆಹಾರ ಭದ್ರತೆ ಒದಗಿಸಲು ಮನಸ್ಸು ಮಾಡಿರುವ ಸರ್ಕಾರಕ್ಕೆ ಇವೆಲ್ಲ ಸಮಸ್ಯೆಗಳ ಬಗ್ಗೆ ಖಬರೇ ಇದ್ದಂತಿಲ್ಲ.

 -ವಿವೇಕ್ ಕೌಲ್, ವಿಶ್ಲೇಷಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com