ಪಾಕಿಸ್ತಾನದತ್ತಲ್ಲೇ ಏಕೆ ಸ್ನೇಹ ಹಸ್ತ ಚೀನಾದತ್ತಲೂ ಹರಿಯಲಿ ನಮ್ಮ ಚಿತ್ತ
ಚೀನಾದ ಪ್ರಧಾನಿ 'ಲೀ ಕಾ ಚನ್' ಮೇ. 19-22ರವರೆಗೆ ಭಾರತ ಯಾತ್ರೆ ಕೈಗೊಳ್ಳಲಿದ್ದಾರೆ. ಈಗ ತಿಂಗಳ ಹಿಂದೆ ಚೀನೀ ಸೈನಿಕರು ಲದಾಖ್ನಲ್ಲಿ 19 ಕಿಲೋಮೀಟರ್ವರೆಗೆ ಅಕ್ರಮ ಪ್ರವೇಶ ಮಾಡಿ ಅಲ್ಲಿ 5 ಟೆಂಟ್ಗಳನ್ನು ನಿರ್ಮಾಣ ಮಾಡಿಕೊಂಡಿದ್ದರು. ಬಹಳಷ್ಟು ರಾಜಕೀಯ ಕಸರತ್ತು ನಡೆಸಿದ ಬಳಿಕ ಅವರು ಜಾಗದಿಂದ ಹಿಂದೆ ಸರಿದರು. ಭಾರತ ಸರ್ಕಾರ ಒಂದು ವಿಷಯವನ್ನು ಒಪ್ಪಿಕೊಳ್ಳಲು ತಯಾರಿಲ್ಲವಾದರೂ, ಸೇನಾ ಸೂತ್ರಗಳ ಪ್ರಕಾರ ಈ ಒಪ್ಪಂದದಲ್ಲಿ ಭಾರತೀಯ ಸೈನಿಕರೂ ತಮ್ಮ ಹಳೆಯ ನೆಲೆಯಿಂದ ಹಿಂದೆ ಸರಿಯಬೇಕಾಯಿತಂತೆ. ಇದನ್ನೇ ಲದಾಖ್ ಒಪ್ಪಂದ ಎಂದು ಕರೆಯಲಾಗುತ್ತಿದೆ. ವ್ಯಂಗ್ಯವೆಂದರೆ ಇತ್ತೀಚೆಗೆ ಬೀಜಿಂಗ್ಗೆ ತೆರಳಿದ್ದ ನಮ್ಮ ವಿದೇಶಾಂಗ ಮಂತ್ರಿ ಸಲ್ಮಾನ್ ಖುರ್ಷಿದ್ ಅವರು, 'ಚೀನಿಯರು ಲದಾಖ್ನಲ್ಲಿ ಅಕ್ರಮ ಪ್ರವೇಶ ಮಾಡಿದ ವಿಷಯವನ್ನು ಪೋಸ್ಟ್ಮಾರ್ಟಮ್ ಮಾಡಲು ಅಥವಾ ಅವರು ಭಾರತದಲ್ಲಿ ಏನು ಮಾಡಿದರು, ಏನು ಮಾಡಲಿಲ್ಲ ಎನ್ನುವುದರ ಬಗ್ಗೆ ಚರ್ಚೆ ಮಾಡಲು ನಾನಿಲ್ಲಿ ಬಂದಿಲ್ಲ' ಎಂದು ಬೀಜಿಂಗ್ನಲ್ಲಿ ಹೇಳಿದರು! ಈ ಮಧ್ಯೆಯೇ ಇನ್ನೊಂದು ಸುದ್ದಿ ಹೊರಬಿದ್ದಿದೆ. ಚೀನಾದ ಮುನಿಸಿನಿಂದ ಹೆದರಿರುವ ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗಿನ ತನ್ನ ಪರಂಪರಾಗತ ಯುದ್ಧಾಭ್ಯಾಸವನ್ನು ಮುಂದೂಡಿದೆ ಎಂದು.
ಈ ವರ್ತಮಾನ ಭಾರತದ ಸ್ವಾಭಿಮಾನವನ್ನು ಮತ್ತು ಸೈನಿಕರ ಮನೋಬಲವನ್ನು ಕುಗ್ಗಿಸಲಿದೆ ಎನ್ನುವುದರಲ್ಲಿ ಸಂದೇಹವಿಲ್ಲ.
ಇನ್ನು ಚೀನಾದೊಂದಿಗೆ ನಮ್ಮ ಸ್ನೇಹ ವೃದ್ಧಿಸಬೇಕು ಮತ್ತು ಪರಸ್ಪರ ಮತಭೇದಗಳನ್ನು ಚರ್ಚೆಗಳ ಮೂಲಕ ಬಗೆಹರಿಸಿಕೊಳ್ಳಬೇಕು ಎನ್ನುವ ಮಾತನ್ನು ಅಂಗೀಕರಿಸಲೇಬೇಕು. ಈ ಕಾರಣಕ್ಕಾಗಿಯೇ ಚೀನಾದ ಪ್ರಧಾನಿಗಳ ಆಗಮನವನ್ನು ನಾವು ಗುಣಾತ್ಮಕ ದೃಷ್ಟಿಯಿಂದ ನೋಡಬೇಕಾಗುತ್ತದೆ. ಲೀ ಕಾ ಚನ್ ಪ್ರಧಾನಿ ಹುದ್ದೆಗೆ ಏರಿದ ನಂತರ ಆಡಿದ ಮಾತಿನಲ್ಲಿಯೂ ಎರಡೂ ದೇಶಗಳ ಸಂಬಂಧ ಸುಧಾರಣೆಯ ಸುಳುಹುಗಳಿವೆ. 'ಭಾರತದೊಂದಿಗೆ ಚೀನಾದ ಸ್ನೇಹವನ್ನು ನಾನು ವೃದ್ಧಿಸಲು ಬಯಸುತ್ತೇನೆ ಮತ್ತು ಈ ಕಾರಣಕ್ಕಾಗಿಯೇ ನನ್ನ ಮೊದಲ ವಿದೇಶಿ ಯಾತ್ರೆಯನ್ನು ಭಾರತದ ಮೂಲಕ ಆರಂಭಿಸಲು ಬಯಸುತ್ತೇನೆ' ಎಂದು ಚನ್ ಹೇಳಿದ್ದಾರೆ. ಚೀನಾ ಆರ್ಥಿಕ ಮತ್ತು ಸಾಮರಿಕ ರೂಪದಿಂದ ಭಾರತಕ್ಕೆ ಅತ್ಯಂತ ಮಹತ್ವಪೂರ್ಣ ನೆರೆಯ ರಾಷ್ಟ್ರ. ಅದರ ಸೈನ್ಯ ಕ್ಷಮತೆ ನಮಗಿಂತ ಎಷ್ಟೋ ಪಟ್ಟು ಅಧಿಕವಿದೆ ಮತ್ತು ಆರ್ಥಿಕವಾಗಿಯೂ ಭಾರತದ ಅತಿದೊಡ್ಡ ವ್ಯಾಪಾರಿ ಸ್ಥಾನ ಆ ದೇಶ. ಭಾರತ ಮತ್ತು ಚೀನಾದ ವ್ಯಾಪಾರ ವಹಿವಾಟು ವಾರ್ಷಿಕವಾಗಿ 70 ಬಿಲಿಯನ್ ಡಾಲರ್ಗಳಷ್ಟಾಗಿದೆ. 2014-15ರ ವೇಳೆಗೆ ಈ ಮೊತ್ತ 100 ಬಿಲಿಯನ್ ಡಾಲರ್ಗಳಷ್ಟಾಗಲಿದೆ ಎಂದು ಅದಾಂಜಿಸಲಾಗುತ್ತಿದೆ. ಹಾಗಂತ ನಾವು ಚೀನಿಯರ ದಬ್ಬಾಳಿಕೆಗಳಿಗೆಲ್ಲ ತಲೆಬಾಗುತ್ತ ಬದುಕಬೇಕು ಅಥವಾ ಅದರ ಸೈನ್ಯ ಸಾಮರ್ಥ್ಯವನ್ನು ನೆನೆದು ನಡುಗುತ್ತಾ ಇರಬೇಕು ಎಂಬುದು ಇದರರ್ಥವಲ್ಲ. ಸೈನ್ಯದ ಕ್ಷಮತೆಯನ್ನು ಶಸ್ತ್ರಗಳ ಪ್ರಮಾಣದ ಮೇಲೆ ಅಳೆಯುವುದೂ ಸರಿಯಲ್ಲ. ಅಮೆರಿಕ-ಕೋರಿಯಾ ಯುದ್ಧ ಸಮಯದಲ್ಲಿ ಚೀನಾ ಅಮೆರಿಕದ ಎದುರು ತೃಣ ಸಮಾನವಾಗಿ ಕಂಡರೂ, ಚೀನಿ ಸೇನೆಯ ಕೂಗಿಗೆ ಅಮೆರಿಕ ತಣ್ಣಗಾಗಬೇಕಾಯಿತು. ಯುದ್ಧವನ್ನು ಗೆಲ್ಲಲು ಕೆಚ್ಚೆದೆ ಮತ್ತು ತೋಳಿನಲ್ಲಿ ದೇಶ ಭಕ್ತಿಯ ಬಲವಿರಬೇಕು. ಈಗ ನಮ್ಮದು 1962ರ ಭಾರತವಲ್ಲ. ಗಡಿ ರೇಖೆಯಲ್ಲಿ ನಮ್ಮ ಸೈನ್ಯದ ಬಲ ಮತ್ತು ದೇಶವಾಸಿಗಳಲ್ಲಿ ಆತ್ಮವಿಶ್ವಾಸ ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ದುಃಖದ ವಿಷಯವೆಂದರೆ ಚೀನಾದ ಬಗ್ಗೆ ಭಾರತದ ಸಾಮಾನ್ಯ ಜನತೆಯಲ್ಲಿ ಅರಿವು ಮತ್ತು ಎಚ್ಚರಿಕೆ ಬಹಳ ಕಡಿಮೆ ಇದೆ ಎನ್ನುವುದು. ಭಾರತೀಯರಿಗೆ ನೆರೆ ರಾಷ್ಟ್ರ ಚೀನಾಕ್ಕಿಂತ ರೋಮ್, ಪ್ಯಾರಿಸ್, ಲಂಡನ್ ಮತ್ತು ನ್ಯೂರ್ಯಾರ್ಕ್ಗಳ ಬಗ್ಗೆಯೇ ಹೆಚ್ಚು ಗೊತ್ತು. ಚೀನಾ ನಮ್ಮ ಶತ್ರುವೋ, ಮಿತ್ರನೋ ಎಂಬ ವಿಷಯ ಒತ್ತಟ್ಟಿಗಿರಲಿ ಎಲ್ಲಿಯವರೆಗೂ ನಾವು ಆ ದೇಶದ ಬಗ್ಗೆ ತಿಳಿದುಕೊಳ್ಳುವುದಿಲ್ಲವೋ, ಅಲ್ಲಿಗೆ ಹೋಗುವುದಿಲ್ಲವೋ, ಅಲ್ಲಿಯವರೊಂದಿಗೆ ವ್ಯವಹಾರ ನಡೆಸುವುದಿಲ್ಲವೋ, ಅಲ್ಲಿನ ಸಾಮಾಜಿಕ ಸ್ಥಿತಿ ಮತ್ತು ಸರ್ಕಾರದ ದಿಸೆಯನ್ನು ಅರ್ಥಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ 'ಚೀನಿಯರನ್ನು ಧೈರ್ಯದಿಂದ ಎದುರಿಸಬೇಕು' ಎನ್ನುವ ಮಾತು ಸಿನಿಮಾ ಡೈಲಾಗ್ಗಳಂತೆ ಬಾಲಿಷವಾಗಿಯೇ ಕಾಣುತ್ತದೆ. ಚೀನಾದ ಬಗೆಗಿನ ಮಾಹಿತಿಗಳೆಲ್ಲವೂ ನಮಗೆ ಇಂದು ದೊರಕುತ್ತಿರುವುದು ಬ್ರಿಟಿಷ್, ಅಮೆರಿಕ ಮತ್ತು ಫ್ರಾನ್ಸ್ನ ಮಾಧ್ಯಮಗಳಿಂದ. ಭಾರತದಲ್ಲಿ ಚೀನಾದ 22 ವರದಿಗಾರರು ಮತ್ತು 4 ವರಿಷ್ಠ ಸಂವಾದಗಾರರಿದ್ದಾರೆ, ಆದರೆ ಇನ್ನೊಂದೆಡೆ ಚೀನಾದಲ್ಲಿರುವ ಸಂವಾದದಾರರ ಸಂಖ್ಯೆ ಕೇವಲ ನಾಲ್ಕು. ಮತ್ತು ಅದರಲ್ಲೂ ಇಂಗ್ಲಿಷೇತರ ಮಾಧ್ಯಮಗಳ ಒಬ್ಬ ವರದಿಗಾರನೂ ಅಲ್ಲಿಲ್ಲ. ಆ ದೇಶದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿಂದು ಹಿಂದಿ, ಬಾಂಗ್ಲಾ, ತಮಿಳ್ ಮತ್ತು ಮಳಯಾಳಂ ಭಾಷೆಗಳನ್ನು ಕಲಿಸಲಾಗುತ್ತದೆ. ಆದರೆ ಭಾರತದಲ್ಲಿ ಚೀನೀ ಭಾಷೆಯನ್ನು ಕಲಿಸುವ ಏಕಮಾತ್ರ ಕೇಂದ್ರವೊಂದು ಇತ್ತೀಚೆಗಷ್ಟೇ ಶುರುವಾಗಿದೆ. ಇನ್ನು ವಿದ್ಯಾರ್ಥಿಗಳ ಸಂಖ್ಯೆಯಂತೂ ಬಹಳ ಕಡಿಮೆ! ಇನ್ನು ಸೀಂಜಿಯಾಂಗ್(ಚೀನಾದ ಏಕಮಾತ್ರ ಮುಸ್ಲಿಂ ಬಾಹುಳ್ಯದ ಪ್ರಾಂತ್ಯ)ನ ಬಗ್ಗೆಯೂ ಭಾರತಕ್ಕೆ ಹೆಚ್ಚಿನ ಅರಿವಿಲ್ಲ!
ಸಾಮಾನ್ಯವಾಗಿ ಚೀನೀ ನಾಗರಿಕರಿಗೆ ಭಾರತದ ಬಗ್ಗೆ ಒಳ್ಳೆಯ ಭಾವನೆಯೇ ಇದೆ. ನಾನು ಚೀನಾದ ಬಹಳಷ್ಟು ಪ್ರದೇಶಗಳಿಗೆ ಹೋಗಿ ಬಂದಿದ್ದೇನೆ. ಅಲ್ಲೆಲ್ಲ ಭಾರತದ ಬಗ್ಗೆ ಹಿತಕಾರ ಮಾತುಗಳೇ ನನ್ನ ಕಿವಿಗೆ ಬಿದ್ದಿವೆ. ಅಲ್ಲಿ ಬೌದ್ಧ ಪರಂಪರೆ ಮತ್ತೆ ಉದಯವಾಗುತ್ತಿದೆ ಹಾಗಾಗೇ ವಿರಾಟ ರೂಪದಲ್ಲಿ ಬೌದ್ಧ ಮಠಗಳು ಮತ್ತು ಮಂದಿರಗಳು ಅಲ್ಲಿ ಹುಟ್ಟಿಕೊಳ್ಳುತ್ತಿವೆ. ಪ್ರತಿ ಬೌದ್ಧ ಮಠದಲ್ಲಿಯೂ ಒಂದು ಶಾಖಾಹಾರಿ ಉಪಹಾರಗೃಹವಿರುತ್ತದೆ. ಯಾವುದೇ ಬೌದ್ಧ ಮಠಕ್ಕೆ ಹೋಗಿ ನೋಡಿ, ಅಲ್ಲಿನ ಉಪಹಾರಗೃಹದ ಹೆಸರು ಮಾತ್ರ ಒಂದೇ ಆಗಿರುತ್ತದೆ- 'ಮಂಜುಶ್ರೀ'. ಮಂಜುಶ್ರೀ ಎನ್ನುವುದು ಭಗವಾನ್ ಬುದ್ಧನ ಇನ್ನೊಂದು ಅವತಾರದ ಹೆಸರು. ಚೀನಾದ ಪ್ರಮುಖ ರಾಜಗುರುವನ್ನು ಇಂದಿಗೂ 'ಕುಮಾರ್ ಜೀವ್' ಎಂದೇ ಕರೆಯಲಾಗುತ್ತದೆ. ಒಂದು ಸಾವಿರ ವರ್ಷದ ಹಿಂದೆ ತಂಗ ಶಾಸನಕಾಲದಲ್ಲಿ ಕುಮಾರ ಜೀವರಿಗೆ 'ಚೀನಾದ ಮೊದಲ ಅಧ್ಯಾಪಕ' ಎಂಬ ಬಿರುದನ್ನು ಕೊಡಲಾಗಿತ್ತು. ಕುಮಾರ ಜೀವರು ಕಾಶ್ಮೀರದ ನಿವಾಸಿಯಾಗಿದ್ದರು. ಇನ್ನು ಚೀನಾದಲ್ಲಿ ಒಂದು ನಂಬಿಕೆ ಗಟ್ಟಿಯಾಗಿ ತಳವೂರಿದೆ. 'ಒಂದು ವೇಳೆ ನಾವೆಲ್ಲ ಒಳ್ಳೆಯ ಕೆಲಸವನ್ನು ಮಾಡಿದರೆ, ಭಗವಾನ್ ಬುದ್ಧ ಭಾರತದಲ್ಲಿ ಮತ್ತೆ ಹುಟ್ಟಿ ಬರುತ್ತಾನೆ!'
ಇಷ್ಟೊಂದು ಯುದ್ಧ ಮತ್ತು ಆತಂಕವಾದಿ ಘಟನೆಗಳ ನಂತರವೂ ನಾವು ಪಾಕಿಸ್ತಾನದೊಂದಿಗೆ ಮಾತುಕತೆ ಮತ್ತು ಮೈತ್ರಿ ಸಂಬಂಧ ಸುಧಾರಣೆಗಾಗಿ ಹಾತೊರೆಯುತ್ತಿದ್ದೇವೆ. ಆದರೆ ಇದೇ ಕೆಲಸವನ್ನು ನಾವು ಚೀನಾದೊಂದಿಗೆ ಏಕೆ ಮಾಡುತ್ತಿಲ್ಲವೋ? ಚೀನಾದ ಪ್ರಧಾನ ಮಂತ್ರಿಗಳ ಭಾರತೀಯ ಪ್ರವಾಸದ ಮುಖ್ಯ ಅಜೆಂಡಾ ಸಂಬಂಧ ಸುಧಾರಣೆ. ಸಾಧ್ಯವಾದರೆ ಭಾರತ ಕೂಡ ತನ್ನ ಶಕ್ತಿಯ ಅಧಿಷ್ಠಾನದ ಮೇಲೆ ಚೀನಾದೊಂದಿಗೆ ಸ್ನೇಹ ಹಸ್ತ ಚಾಚಬೇಕು. ಅದರೊಟ್ಟಿಗೆ ಲದಾಖ್ನಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸದಿರುವಂತೆ ಜಾಗೃತಿ ವಹಿಸಲು ಚೀನಾಕ್ಕೆ ಎಚ್ಚರಿಕೆ ನೀಡಬೇಕು.
-ತರುಣ್ ವಿಜಯ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

