ಆಯುರ್ವೇದ ವೈದ್ಯರೇಕೆ ಆಗುತ್ತೀರಿ?
ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಅಲೋಪತಿ ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಪದವಿ ಕೋರ್ಸುಗಳಿಗೆ ಪ್ರವೇಶ ಸಿಗದೇ ಹೋದಾಗ ಬಹಳಷ್ಟು ಜನ ವಿದ್ಯಾರ್ಥಿಗಳು ಈ ಆಯುರ್ವೇದ ಕೋರ್ಸಿಗೆ ಬರುತ್ತಾರೆ. ಹಾಗೆ ಹೋಗುವವರು ಈ ಲೇಖನವನ್ನು ಒಮ್ಮೆ ಓದಿದರೆ ಒಳಿತು.
A-Ayurved,U-unani,S- Siddha,H-Homeopathy ಈ ಎಲ್ಲವನ್ನೂ ಸೇರಿ Ayush' (ಆಯುಷ್) ಎಂಬ ಒಂದು ವಿಭಾಗವನ್ನು ಸರಕಾರವು ರೂಪಿಸಿದೆ. ಈ ವಿಭಾಗದ ವತಿಯಿಂದ ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ ವೈದ್ಯ ಪದ್ಧತಿಗಳ ವ್ಯವಸ್ಥೆಗಳನ್ನು ನೋಡಿಕೊಳ್ಳಲಾಗುತ್ತದೆ. ಇದರೊಟ್ಟಿಗೆ ಯೋಗ ಹಾಗೂ ನ್ಯಾಚುರೋಪತಿ ಕೂಡ ಸೇರಿದೆ. ಆಯುಷ್ಯ ಇಲಾಖೆಯು ಕರ್ನಾಟಕದಾದ್ಯಂತ ಸರ್ಕಾರಿ ಆಸ್ಪತ್ರೆಗಳನ್ನು ಹೊಂದಿದ್ದು ಅಲ್ಲಿ ಈ ಎಲ್ಲ ವೈದ್ಯ ಪದ್ಧತಿಗಳನ್ನು ಅನುಸರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ ಈ ವೃತ್ತಿಪರ ಪದವಿಗಳನ್ನು ಪಡೆದು ಖಾಸಗಿ ವೈದ್ಯರಾಗುವ ಎಲ್ಲರೂ ಇದೇ ವೃತ್ತಿ ಜೀವನ ನಡೆಸಬೇಕೆಂಬ ಕಾನೂನೂ ಇದೆ. ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ವೈದ್ಯಕೀಯ ಪದವಿ ಕೋರ್ಸು ಮುಗಿದ ನಂತರ ಕರ್ನಾಟಕ ಆಯುರ್ವೇದ ಮಂಡಳಿ (ಬೋರ್ಡ್) ಆಯಾ ವೈದ್ಯ ಪದ್ಧತಿಯಲ್ಲಿ ವೃತ್ತಿ ನಡೆಸಲು ನೋಂದಾಯಿತರನ್ನಾಗಿ ಮಾಡುತ್ತದೆ. ಅಲ್ಲಿಗೆ ನೀವು ಒಂದು ವೈದ್ಯಕೀಯ ಶಾಸ್ತ್ರದ ನೋಂದಾಯಿತ ವೈದ್ಯರಾಗುತ್ತೀರಿ. ನೀವು ನಿಮ್ಮ ಉಪಜೀವನಕ್ಕಾಗಿ ಆ ವೈದ್ಯ ಪದ್ಧತಿಯನ್ನಷ್ಟೇ ಅನುಸರಿಸಬೇಕು, ಅವಲಂಬಿಸಬೇಕು. ಬೇರೆ ಯಾವುದೇ ವೈದ್ಯಕೀಯ ಪದ್ಧತಿಯನ್ನು ಅಥವಾ ಔಷಧಿಗಳನ್ನು ಬಳಸಿದರೆ ಅದು ಜೈಲು ಶಿಕ್ಷೆ ವಿಧಿಸುವಷ್ಟು 'ಅಪರಾಧ.' ನಿಮ್ಮ ಪದವಿಯನ್ನು ರದ್ದು ಮಾಡಿ ನಿಮ್ಮನ್ನು ನಿರ್ಗತಿಕರನ್ನಾಗಿ ಮಾಡುವಷ್ಟು ಕಾನೂನು ಅವಕಾಶ ನೀಡುತ್ತದೆ.
ಮಾನ್ಯ ವಿದ್ಯಾರ್ಥಿಗಳೇ ಈ ದೇಶದಲ್ಲಿ ಹೆಬ್ಬೆಟ್ಟಿನ ಗುರುತಿನಿಂದ ನೀವು ರಾಜಕಾರಣ ಪ್ರವೇಶಿಸಿ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಬಹುದು. ದೇಶ ನಡೆಸಲು ಯಾವ ಜ್ಞಾನದ, ಪದವಿಯ ಅವಶ್ಯಕತೆ ಇಲ್ಲ. ಎಷ್ಟೋ ರಾಜ್ಯದ ಮಂತ್ರಿ ಮಂಡಲಗಳಲ್ಲಿ ವೈದ್ಯಕೀಯ ಕ್ಷೇತ್ರ ನೋಡುವ ಮಂತ್ರಿ ಕೂಡ ವೈದ್ಯ ವೃತ್ತಿಯ ಗಾಳಿ-ಗಂಧ ಗೊತ್ತಿರದವನಾಗಿದ್ದಾನೆ. ಈ ಕೋರ್ಸ್ಗಳ ಪಠ್ಯಕ್ರಮ ಸಿ.ಸಿ.ಐ.ಎಂ. ಎಂಬ ಸಂಸ್ಥೆ ಮಾಡುತ್ತದೆ. ಈ ಕೋರ್ಸಿನ ಉಸ್ತುವಾರಿಯನ್ನೂ ಅದೇ ಮಾಡುತ್ತದೆ. ಅಲ್ಲಿಗೆ ಅದರ ಕೆಲಸ ಮುಗಿಯಿತು. ಈ ಕೋರ್ಸ್ ನಡೆಸುವ ವಿಶ್ವವಿದ್ಯಾಲಯ-ನಮ್ಮ ರಾಜ್ಯದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ.ಯ ಕಾಲೇಜುಗಳು ಹಾಗೂ ಸುಮಾರು 50 ಆಯುರ್ವೇದ ಕಾಲೇಜುಗಳು. ಇವುಗಳೂ ಕೂಡ ಶಿಕ್ಷಣವನ್ನು ತಕ್ಕಮಟ್ಟಿಗೆ ನೀಡುತ್ತವೆ. ಮುಂದೆ ವೃತ್ತಿ ಜೀವನ ನಡೆಸಬೇಕಾದಾಗ ಇವರ್ಯಾರೂ ಹಾಗೂ ಸರ್ಕಾರ ಕೂಡ ಸ್ಪಂದಿಸುವುದಿಲ್ಲ. ಎಲ್ಲರ ಮಂತ್ರ ಒಂದೇ. ನೀವು ಕಲಿತಿದ್ದನ್ನು ನೀವು ಪ್ರಾಕ್ಟಿಸ್ ಮಾಡಿ.
ಪ್ರಿಯ ವಿದ್ಯಾರ್ಥಿಗಳೇ ನಿಮಗೆ ಸಂಪೂರ್ಣ ಸಂಸ್ಕೃತ ಭಾಷೆಯ ಜ್ಞಾನವಿದ್ದು ನೀವು ಹಠವಾದಿಗಳಾಗಿದ್ದರೆ ಮಾತ್ರ ಈ ಕೋರ್ಸ್ಗೆ ಬನ್ನಿ ಹಾಗೂ ಕೇವಲ ಆಯುರ್ವೇದವನ್ನಷ್ಟೇ ಪ್ರಾಕ್ಟೀಸ್ ಮಾಡಿ. ನಿಮಗಷ್ಟು ತಾಳ್ಮೆ, ಜಾಣತನ ಇರದಿದ್ದರೆ ಈ ಪದವಿ ಓದಬೇಡಿ. ಬೇರೆ ಇನ್ನಾವುದೋ ಕೋರ್ಸ್ ಸೇರಿಕೊಳ್ಳಿರಿ.
ಈಗಿನ ಆಯುಷ್ಯ ವೈದ್ಯರ ಜೊತೆ ತಾವು ಭೇಟಿ ಆಗಿ ಅವರ ವೃತ್ತಿ ಜೀವನದ ಬಗ್ಗೆ ಕೇಳಿ. ತಿಳಿದುಕೊಳ್ಳಿ. ನಿಮಗೆ ಹೌದು ಎನಿಸಿದರೆ ನೀವು ಓದಿ. ದೇಶೀಯ ವೈದ್ಯವಿಜ್ಞಾನ ಮುನ್ನಡೆಸಿರಿ. ಅಂತಹ ಗಟ್ಟಿಕಾಳುಗಳು ಈಗ ಅವಶ್ಯ.
- ವೈದ್ಯ ಗೋವಿಂದ ಪೈ, ಹುಬ್ಬಳ್ಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

