ಪೂರ್ವಸಿದ್ಧತೆಯಿಲ್ಲದೆ ಪ್ರಾಥಮಿಕಕ್ಕೇಕೆ ಎಂಟರ ನಂಟು?
ಬಹುಧರ್ಮೀಯ, ಬಹುಭಾಷೀಯ ಹಾಗೂ ಬಹುಸಂಸ್ಕೃತಿಯ ಜನರನ್ನು ಒಳಗೊಂಡ ಭಾರತವು ಬಹುಸ್ವರೂಪಿ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವದು ವೈಶಿಷ್ಟ್ಯ. ಅದರಲ್ಲಿಯೂ ರಾಜ್ಯದಿಂದ ರಾಜ್ಯಕ್ಕೆ ಪ್ರಾಥಮಿಕ, ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣಗಳಲ್ಲಿನ ಕಲಿಕಾವಧಿ, ಪಠ್ಯಕ್ರಮ, ಬೋಧನಾವಿಧಾನ ಮೊದಲಾದವುಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. 1968 ಹಾಗೂ 1986ರ ರಾಷ್ಟ್ರೀಯ ಶಿಕ್ಷಣ ನೀತಿಗಳ ಅನುಸಾರವಾಗಿ ದೇಶಾದ್ಯಂತ ಸರಿಸುಮಾರು ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿತ್ತು. ಅದರಂತೆ, 1ರಿಂದ 4ನೇ ತರಗತಿಯನ್ನು ಕಿರಿಯ ಪ್ರಾಥಮಿಕವೆಂದೂ, 5ರಿಂದ 7ನೇ ತರಗತಿಯನ್ನು ಹಿರಿಯ ಪ್ರಾಥಮಿಕವೆಂದೂ, 8ರಿಂದ 10ನ್ನು ಪ್ರೌಢಶಾಲಾ ಶಿಕ್ಷಣವೆಂದೂ ಹಾಗೂ 2 ವರ್ಷಗಳ ಪದವಿಪೂರ್ವ ವ್ಯಾಸಂಗವನ್ನು ಕಾಲೇಜು ಶಿಕ್ಷಣವೆಂದೂ(4+3+3+2) ನಿಗದಿಪಡಿಸಲಾಯ್ತು.
ತದನಂತರ 1992ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೆಲ ಮಹತ್ತರ ಮಾರ್ಪಾಡುಗಳನ್ನು ಮಾಡಲಾಯಿತು. ಆ ಪ್ರಕಾರ 1ರಿಂದ 5ನೇ ವರ್ಗವನ್ನು ಕಿರಿಯ ಪ್ರಾಥಮಿಕವೆಂದೂ, 6ರಿಂದ 8ರವರೆಗೆ ಹಿರಿಯ ಪ್ರಾಥಮಿಕವೆಂದೂ, 9 ಮತ್ತು 10ನೇ ತರಗತಿಗಳನ್ನು ಕಿರಿಯ ಮಾಧ್ಯಮಿಕವೆಂದೂ ಹಾಗೂ 11 ಮತ್ತು 12ನೇ ತರಗತಿಗಳನ್ನು ಹಿರಿಯ ಮಾಧ್ಯಮಿಕ ಶಿಕ್ಷಣವೆಂದೂ(5+3+2+2) ಪುನರ್ವಿಂಗಡಣೆ ಮಾಡಲಾಯಿತು. ಈಗಾಗಲೇ ಹಲವು ರಾಜ್ಯಗಳು ಈ ವಿಧಾನವನ್ನು ಅಳವಡಿಸಿಕೊಂಡಿವೆಯಾದರೂ ಕರ್ನಾಟಕದಲ್ಲಿ ಮೊದಲಿನ ಪದ್ಧತಿಯೇ ಜೀವಂತವಾಗಿದೆ. ಆದಕಾರಣ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ರಾಜ್ಯ ಸರ್ಕಾರವು ಮುಂದಾಗಿದ್ದು, ಮೊದಲ ಹಂತವಾಗಿ 2013-2014ನೇ ಸಾಲಿನ ಶೈಕ್ಷಣಿಕ ವರ್ಷದಿಂದ 8ನೇ ತರಗತಿಯನ್ನು ಪ್ರಾಥಮಿಕ ಶಿಕ್ಷಣಕ್ಕೆ ಸೇರಿಸಲಾಗುತ್ತಿದೆ. ಅಲ್ಲದೇ, ಮಗುವೊಂದು ತನ್ನ 14ನೇ ವಯಸ್ಸಿನಲ್ಲಿ 8ನೇ ವರ್ಗವನ್ನು ಅಭ್ಯಸಿಸುವದರಿಂದ 14ನೇ ವರ್ಷದವರೆಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವೆಂಬ ಸಂವಿಧಾನದ 45ನೇ ಪರಿಚ್ಛೇದವು ಪ್ರಸಕ್ತ ಪದ್ಧತಿಯಿಂದ ಸಾಧಿತವಾಗಬಲ್ಲದು. ಹೀಗಾಗಿ ಸರ್ಕಾರದ ಈ ಕ್ರಮವು ತಾತ್ವಿಕವಾಗಿ ಸಮರ್ಪಕವಾಗಿದೆಯಾದರೂ ಸೂಕ್ತ ಸಿದ್ಧತೆಗಳಿಲ್ಲದೇ ಯಥಾಸ್ಥಿತಿಯಲ್ಲಿ ಅನುಷ್ಠಾನಗೊಳಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ?
ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯು 6 ಮತ್ತು 7ನೇ ತರಗತಿಗಳನ್ನು ಹೊಂದಿರುವ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಶಾಲೆಗಳಲ್ಲಿ 8ನೇ ವರ್ಗವನ್ನು ಪ್ರಾರಂಭಿಸಲು ಸೂಚಿಸಿದೆ. ಅಂದರೆ 7ನೇ ತರಗತಿಯಿಂದ 8ನೇ ತರಗತಿಗೆ ಸಹಜ ಬೆಳವಣಿಗೆ ಎಂದು ಭಾವಿಸಿ, ತರಗತಿ ಆರಂಭಿಸಲು ತಿಳಿಸಿದೆ. ಇಂತಹ ಪ್ರಕರಣಗಳಿಗೆ ಮತ್ತೊಮ್ಮೆ ಪ್ರತ್ಯೇಕ ಅನುಮತಿ ಪಡೆಯುವ ಅಗತ್ಯತೆ ಇಲ್ಲವೆಂದು ಇಲಾಖೆಯೂ ತಿಳಿಸಿದೆ. ಇಲ್ಲಿ ಉದ್ಭವವಾಗುವ ಪ್ರಮುಖ ಪ್ರಶ್ನೆಯೆಂದರೆ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿಗೆ ಪಾಠ ಮಾಡುವವರಾರು ಎಂಬುದು. ಹೆಚ್ಚಿನ ಪ್ರಾಥಮಿಕ ಶಾಲಾ ಶಿಕ್ಷಕರು 7ನೇ ತರಗತಿಯವರೆಗೆ ಮಾತ್ರ ಬೋಧಿಸಲು ಸಮರ್ಥರಿದ್ದು 8ನೇ ವರ್ಗದ ತರಗತಿಗಳು ಅವರಿಗೆ ಹೊರೆಯಾಗಬಲ್ಲವು. ಅಲ್ಲದೇ, ಇದುವರೆಗೆ ಶಿಕ್ಷಕರಿಗೆ ಯಾವುದೇ ತರಬೇತಿಗಳನ್ನು ನೀಡಿಲ್ಲವಲ್ಲದೇ, ಹೊಸ ಶಿಕ್ಷಕರ ನೇಮಕದ ಕುರಿತೂ ಪ್ರಸ್ತಾವನೆಯಿಲ್ಲ.
ಜೊತೆಯಲ್ಲಿ ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳಿಗಳಲ್ಲಿ 8ನೇ ತರಗತಿಗೆ ಪ್ರವೇಶ ನೀಡದಂತೆ ಕೇವಲ ಮೌಖಿಕವಾಗಿ ಸೂಚನೆ ನೀಡಲಾಗಿದ್ದು, ಲಿಖಿತ ಆದೇಶವಿನ್ನೂ ಹೊರಬಿದ್ದಿಲ್ಲ. ಹೀಗಾಗಿ ಸ್ವಾಭಾವಿಕವಾಗಿ ಪಾಲಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಪ್ರವೇಶಾತಿಯ ಕುರಿತು ವಿಪರೀತ ಗೊಂದಲವುಂಟಾಗಬಹುದು. ಪ್ರೌಢಶಾಲೆಯೊಂದರ 8ನೇ ತರಗತಿಗೆ ಪ್ರವೇಶ ಪಡೆಯುವವರು ಸುತ್ತಮುತ್ತಲಿನ ಪ್ರಾಥಮಿಕ ಶಾಲೆಗಳಲ್ಲಿನ 7ನೇ ತರಗತಿ ಪಾಸಾದ ವಿದ್ಯಾರ್ಥಿಗಳೇ ಆಗಿರುವುದರಿಂದ, ಕಟ್ಟುನಿಟ್ಟಾಗಿ ಪ್ರೌಢಶಾಲೆಗಳಲ್ಲಿ 8ನೇ ತರಗತಿಯನ್ನು ನಿಷೇಧಿಸದಿದ್ದಲ್ಲಿ ವಿದ್ಯಾರ್ಥಿಗಳು ಹರಿದು ಹಂಚಿಹೋಗಲಿದ್ದಾರೆ. ತನ್ಮೂಲಕ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸೃಷ್ಟಿಯಾಗಬಲ್ಲದು.
ಒಂದು ವೇಳೆ ಪ್ರೌಢಶಾಲೆಗಳಲ್ಲಿ 8ನೇ ತರಗತಿಯನ್ನು ರದ್ದುಗೊಳಿಸಿದಲ್ಲಿ ಅಲ್ಲಿರುವ ಹೆಚ್ಚುವರಿ ಸಹಶಿಕ್ಷಕರನ್ನು ಗುರುತಿಸಿ ಪ್ರಾಥಮಿಕ ಶಾಲೆಗಳಿಗೆ ನಿಯೋಜನೆ ಮಾಡಲು ಕೆಲ ತಿಂಗಳುಗಳ ಅವಧಿ ಅವಶ್ಯಕ. ಇನ್ನು, ಹೊಸ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಕನಿಷ್ಠ ಆರೆಂಟು ತಿಂಗಳ ಕಾಲಾವಧಿ ಅನಿವಾರ್ಯವಿದ್ದು, ಅಲ್ಲಿಯವರೆಗೆ ವಿದ್ಯಾರ್ಥಿಗಳ ಅತ್ಯಮೂಲ್ಯ ಸಮಯ ವ್ಯರ್ಥವಾಗುತ್ತದೆಯಲ್ಲವೇ? ನಂತರದ ನಾಗಾಲೋಟದಿಂದ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಸಾಧ್ಯವಿದೆಯಾದರೂ ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬಲ್ಲರೇ ಎಂಬ ಕಳವಳ ಉಂಟಾಗುತ್ತದೆ. ಕಳೆದ (2012-2013ನೇ ಸಾಲಿನ) ಶೈಕ್ಷಣಿಕ ವರ್ಷದಿಂದಲೇ 8ನೇ ತರಗತಿಯ ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಸಿಬಿಎಸ್ಇ ಪಠ್ಯಕ್ರಮವು ಅಳವಡಿಸಲ್ಪಟ್ಟಿರುವದರಿಂದ ಆ ವರ್ಗದ ಬೋಧನೆಗೆ ಸೂಕ್ತ ಶಿಕ್ಷಕರು ಅವಶ್ಯಕ. ಆದುದರಿಂದ ಪ್ರೌಢಶಾಲೆಗಳಲ್ಲಿನ ಗಣಿತ ಮತ್ತು ವಿಜ್ಞಾನ ಸಹಶಿಕ್ಷಕರನ್ನು ಪ್ರಾಥಮಿಕ ಶಾಲೆಗಳಿಗೆ ನಿಯಮಿಸಿದಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಸರಿಯಾದ ಮಾರ್ಗದರ್ಶನವಿಲ್ಲದೇ ಅತಂತ್ರರಾಗುವುದಿಲ್ಲದೇ?
ಇವಲ್ಲದೇ, BPEd ಶಿಕ್ಷಕರು ಒತ್ತಟ್ಟಿಗಿರಲಿ, ಕೆಲವಾರು ಪ್ರಾಥಮಿಕ ಶಾಲೆಗಳಲ್ಲಿ CPEd ವ್ಯಾಸಂಗ ಮಾಡಿರುವ ಶಿಕ್ಷಕರೇ ಇಲ್ಲದಿರುವುದರಿಂದ ಅಲ್ಲಿನ 8ನೇ ತರಗತಿಯ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ತರಬೇತಿಯ ಕೊರತೆಯೂ ಉಂಟಾಗಲಿದೆ. ಈಗಾಗಲೇ ಉನ್ನತೀಕರಿಸಿದ ಪ್ರೌಢಶಾಲೆಗಳಲ್ಲಿ ಕೇವಲ ಗಣಿತ(PCM) ವಿಷಯದ ಶಿಕ್ಷಕರನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ವಿಜ್ಞಾನದ ಇನ್ನೊಂದು ಪ್ರಮುಖ ಶಾಖೆಯಾದ ಜೀವಶಾಸ್ತ್ರ (CBZ) ಹಾಗೂ ಇಂದಿನ ದಿನಮಾನಕ್ಕೆ ಅವಶ್ಯಕವೆನ್ನಿಸಿರುವ ಇಂಗ್ಲಿಷ್ ಮೊದಲಾದ ಭಾಷಾ ವಿಷಯಗಳ ಪರಿಣತರ ಬೋಧನೆಯಿಂದ ವಿದ್ಯಾರ್ಥಿಗಳನ್ನು, ಅದರಲ್ಲಿಯೂ ಗ್ರಾಮೀಣ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿಸಿದೆ.
ಇವೆಲ್ಲ ಸರ್ಕಾರದ ತರಾತುರಿಯ ನಿರ್ಧಾರದಿಂದ ವಿದ್ಯಾರ್ಥಿಗಳೆದುರಿಸುವ ಸಮಸ್ಯೆಗಳಾದರೆ, ಶಿಕ್ಷಕರನ್ನು ಕಾಡುವ ಸಂಕಷ್ಟಗಳಿಗೂ ಬರವಿಲ್ಲ. ಈಗಿರುವ ಪದ್ಧತಿಯಂತೆ 8ನೇ ತರಗತಿಯನ್ನು ಬೋಧಿಸಲು ಪದವಿ ಹಾಗೂ B.Ed ಶಿಕ್ಷಣ ಪಡೆದಿರುವ ಶಿಕ್ಷಕರು ಅವಶ್ಯ. ಇವರು ಪ್ರೌಢಶಾಲಾ ಸಹಶಿಕ್ಷಕರ ವೇತನವನ್ನು ಅಪೇಕ್ಷಿಸುವುದು ಸಹಜ. ಆದರೆ 7ನೇ ತರಗತಿಯವರೆಗಿನ ಬಹುಪಾಲು ಬೋಧಕವೃಂದವು ಅಭ್ಯಸಿಸಿರುವದು PUC ಹಾಗೂ D.Ed ಕೋರ್ಸ್ ಮಾತ್ರ. ಹಾಗಾಗಿ ವಿದ್ಯಾರ್ಹತೆಯಲ್ಲಿ ವ್ಯತ್ಯಾಸವಿರುವ ಇವರು ಒಂದೇ ಸೂರಿನಡಿಯಲ್ಲಿ ಕೆಲಸಮಾಡುವುದರಿಂದ ವೇತನ ತಾರತಮ್ಯ, ಮೇಲರಿಮೆ-ಕೀಳರಿಮೆ ಮೊದಲಾದ ಸಂಘರ್ಷಗಳು ಎದುರಾಗಬಲ್ಲವು. ಈ ಅಂಶವೂ ಕಾರಣಗಳಲ್ಲೊಂದಾಗಿರುವುದರಿಂದ ಈಗಾಗಲೇ ಒಟ್ಟಿಗಿರುವ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಬೇರ್ಪಡಿಸಲಾಗಿದ್ದು, ಮತ್ತೂಮ್ಮೆ ಶಿಕ್ಷಣ ವ್ಯವಸ್ಥೆಯಲ್ಲಿ ಈ ತಾಪತ್ರಯ ಭುಗಿಲೇಳಬಾರದಲ್ಲವೇ? ಅಲ್ಲದೇ, ಹೆಚ್ಚಿನ ವಿದ್ಯಾರ್ಹತೆ ಹೊಂದಿರುವು 8ನೇ ತರಗತಿಯ ಶಿಕ್ಷಕರು ತಮಗಿಂತ ಕಡಿಮೆ ವಿದ್ಯಾರ್ಹತೆಯ ಮುಖ್ಯಾಧ್ಯಾಪಕರನ್ನು ಅಲಕ್ಷಿಸುವ, ಅಗೌರವಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕಾರ್ಯಭಾರ ಕಡಿಮೆಯಿರುವ ಪ್ರಾಥಮಿಕ ಶಾಲಾಶಿಕ್ಷಕರನ್ನು 8ನೇ ತರಗತಿಗೆ ಪಾಠಮಾಡಲು ತಿಳಿಸಿದಲ್ಲಿ, ಅವರು ಹೆಚ್ಚಿನ ವೇತನಕ್ಕಾಗಿ ಆಗ್ರಹಿಸಬಲ್ಲರು. ಪ್ರಸ್ತುತ ಅಸ್ತಿತ್ವದಲ್ಲಿರುವ ಪ್ರೌಢಶಾಲಾ ಸಹಶಿಕ್ಷಕರ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಮೂಲವೇತನದಲ್ಲಿ ವ್ಯತ್ಯಾಸವಿರುವುದರಿಂದ, ವೇತನ ನೀಡಿಕೆಯು ಸರ್ಕಾರದ ಪಾಲಿಗೆ ಬಹುದೊಡ್ಡ ತಲೆನೋವಾಗಬಲ್ಲದು. ಒಂದೇ ಸಂಸ್ಥೆಯಡಿಯಲ್ಲಿರುವ ಕೆಲವೇ ಕೆಲವು ಸಂಯುಕ್ತ ವಿದ್ಯಾಲಯ (ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನೊಳಗೊಂಡಿರುವ)ಗಳಲ್ಲಿ ಈ ಸಮಸ್ಯೆಗಳು ಎದುರಾಗಲಾರದಾದರೂ ಉಳಿದೆಲ್ಲೆಡೆಗಳಲ್ಲಿ ಎಲ್ಲ ಸಂಕಷ್ಟಗಳೆದುರಾಗುವುದು ಶತಃಸಿದ್ಧ. ಇವೆಲ್ಲ ಕಾರಣಗಳಿಂದಾಗಿ ಸರ್ಕಾರದ ಆತುರದ ಅನುಷ್ಠಾನವು ಲಕ್ಷಾಂತರ ವಿದ್ಯಾರ್ಥಿಗಳನ್ನು ಪ್ರಯೋಗಪಶುಗಳನ್ನಾಗಿಸುವ ಮೂಲಕ ಅವರ ಭವಿಷ್ಯವನ್ನು ಮಂಕಾಗಿಸುವುದಲ್ಲದೆ ಪಾಲಕರಲ್ಲಿ ಆತಂಕವನ್ನು ಹುಟ್ಟುಹಾಕಲಿದೆ. ಸೂಕ್ತ ಪೂರ್ವಸಿದ್ಧತೆಗಳಿಲ್ಲದೇ ಕ್ರಮಾನುಷ್ಠಾನಕ್ಕೆ ತೊಡಗಿರುವ ಸರ್ಕಾರವು 8ನೇ ತರಗತಿಯನ್ನು ಯಶಸ್ವಿಯಾಗಿ ಪ್ರಾಥಮಿಕ ಶಿಕ್ಷಣಕ್ಕೆ ಸೇರ್ಪಡೆಗೊಳಿಸಲು ಅದಿನ್ನಾವ ಮಂತ್ರದಂಡವನ್ನು ಪ್ರಯೋಗಿಸಬಲ್ಲದೆಂಬುದನ್ನು ಕಾಲವೇ ಉತ್ತರಿಸಬೇಕಿದೆ.
-ಪ್ರಿಯದರ್ಶಿನಿ ಎಸ್. ಭಟ್
ಹೊನ್ನಾವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

