'ಅಲ್ಲಲೇ ಈ ವಯಸ್ನಾಗೆ ಸ್ಪೀಕರ್ರು ಆಬುಟ್ಟು ಆ ಸಾಸ್ಕರ್ತಾವ ಕೂಗಾಡಕ್ಕೆ ಅಯ್ತದೇನ್ಲಾ ಬಡ್ಡೆತ್ತದೆ. ಕೂಗಾಡಿ ಕೂಗಾಡಿ ಗಂಟ್ಲು ಕಿತ್ತೊಯ್ತದೆ. ಕಾಗೋಡು ತಿಮ್ಮಪ್ಪ ಅನ್ನೋದ್ನ ಬುಟ್ಟು ಕೂಗಾಡೋ ತಿಮ್ಮಪ್ಪ ಅಂತ ಕರ್ಯಕ್ಕೆ ಸುರು ಮಾಡುದ್ರೆ ಹೆಂಗೆ ?'
'ನಮೋ ವೆಂಕಟೇಶ ನಮೋ ತಿರುಮಲೇಶ, ತಿರುಪತಿ ತಿಮ್ಮಪ್ಪ ನನ್ನೊಬ್ಬುನ್ನೇ ಕಾಪಾಡಪ್ಪ' ಅಂತ ಯೋಳ್ಕಂಡು ಮೈಲಾರಿ ವೋಯ್ತಾಯಿದ್ದ ಎದ್ರುಗಡೆಯಿಂದ ಮಾಜಿ ಮಂತ್ರಿ, ಹಾಲಿ ಎಂಎಲ್ಎ ಕಾಗೋಡು ತಿಮ್ಮಪ್ನೋರು ಬಂದ್ಬುಟ್ರು.
'ಏನ್ಲಾ ಮೈಲಾರಿ ನನ್ನುನ್ನ ಗೆಪ್ತಿ ಮಾಡ್ಕತಾಯಿದ್ದೀಯ. ನೀನಾದ್ರೂವೆ ನನ್ನೆಸ್ರು ಯೋಳ್ದಲ್ಲ, ಸಾಕು ಬುಡು ವೊಟ್ಟೆ ತಣ್ಗೆ ಆಯ್ತು' ಅಂದ್ರು ತಿಮ್ಮಪ್ನೋರು.
'ಅದೆ ಮತ್ತೆ ಬ್ಯಾಡ ಅನ್ನೋದು, ಬುಡ್ತು ಅಂತನ್ನಿ. ನಾನು ತಿರುಪತಿ ತಿಮ್ಮಪ್ಪುನ್ನ ನೆನುಸ್ಕಂಡು ವೋಯ್ತಾಯಿದ್ದೆ. ನೀವು ಅಡ್ಡ ಬಂದೋದ್ರಿ. ಅದುಕ್ಕೆ ನಾನು ವೊಣೆನಾ ?' ಅಂದ ಮೈಲಾರಿ.
'ವೋಗತ್ತಗೆ, ಏನೋ ನನ್ನೆಸ್ರು ಯೋಳಕ್ಕೆ ನೀನಾದ್ರೂವೆ ಇದ್ದೀಯ ಅಂದ್ಕಂಡಿದ್ದೆ. ವೋಗ್ಲಿ ಬುಟ್ಟಾಕು ನನ್ ನಸೀಬು ಸಂದಾಕಿಲ್ಲ ಅಷ್ಟೇಯ' ಅಂದ್ರು ತಿಮ್ಮಪ್ನೋರು. 'ಅದ್ಯಾಕೆ ಸಿವಾ ಈ ಪಾಟಿ ಪೀಲಿಂಗು ಮಾಡ್ಕಂಬುಟ್ಟಿದ್ದೀರಿ. ಏನಾಗದೆ ಅಂಥದ್ದು ಈವಾಗ. ಸಾಸ್ಕ ಆಬುಟ್ಟಿದ್ದೀರಿ. ನಿಮ್ದೇ ಸರ್ಕಾರ ಬಂದದೆ. ನಡ್ಸಿ ರಾಜ್ಯಭಾರಾವ' ಅಂದ ಮೈಲಾರಿ. 'ಅಯ್ಯೋ ನಿನ್ ಮನೆ ಕಾಯ್ವಾಗ. ನೀವ್ಯಾಕೆ ಸಾ ಮಂತ್ರಿ ಆಗಿಲ್ಲ ಅಂತ ಮಾತ್ಗಾದ್ರೂ ಕೇಳ್ತೀಯ ಅನ್ಕಂಡಿದ್ದೆ. ಥೂ ನಿನ್ ಮಖುಕ್ಕೆ' ಅಂತೇಳಿ ವುಗುದ್ರು ತಿಮ್ಮಪ್ನೋರು. 'ವೋ, ಹೌದಲ್ವಾ ? ಮರ್ತೇಬುಟ್ಟಿದ್ದೆ ವೊಟ್ಟೆಗೆ ಹಾಕ್ಕಂಬುಡಿ. ಹೌದು, ನೀವ್ಯಾಕೆ ಮಂತ್ರಿ ಆಗಿಲ್ಲ. ನಾನೂವೆ ಮಂತ್ರಿಗ್ಳು ಪ್ರಮಾಣ ವಚ್ನ ತಕ್ಕಳ್ಳೋ ದಿನ ಕಣ್ ಬುಟ್ಕಂಡು ಟೀವಿ ನೋಡ್ತಾಯಿದ್ದೆ. ನೀವು ಆವಾಗ ಬತ್ತೀರಿ, ಈವಾಗ ಬತ್ತೀರಿ ಅಂತ. ಬರ್ಲೇಯಿಲ್ವಲ್ಲ. ಯಾಕೆ ರಾಜಭವನಕ್ಕೆ ಹೋಗಕ್ಕೆ ದಾರಿ ಗೊತ್ತಾಗಿಲ್ವಾ ? ಟ್ರಾಫಿಕ್ಕು ಜಾಮ್ನಾಗೆ ಏನರ ತಗ್ಲಾಕ್ಕಂಬುಟ್ಟಿದ್ರ ಹೆಂಗೆ ? ನೀವೇನರ ಯೋಳಿ ಬೆಂಗ್ಳೂರು ಪ್ಯಾಟೆನಾಗೆ ಇತ್ತಿತ್ಲಾಗೆ ಟ್ರಾಫಿಕ್ಕು ಸ್ಯಾನೆ ಆಬುಟ್ಟದೆ. ಮೋಟಾರು ಗಾಡಿಗ್ಳು ವೊಳ್ಳೆ ಕಂಬ್ಳಿ ವುಳ ವೋದಂಗೆ ವೋತವೆ ಅಲ್ವಾ ?' ಅಂತ ಮೈಲಾರಿ ಕೇಳ್ದ.
'ನಂಗೆ ಬತ್ತಾಯಿರೋ ಕ್ವಾಪುಕ್ಕೆ ನಿನ್ನುನ್ನ ಸಿಗ್ದು ಕೆಂಗೇರಿ ಮೋರಿನಾಗೆ ಬಿಸಾಕಂಗೆ ಆಯ್ತಾ ಐತೆ. ಮಗಂದು ಬಾಡಿ ಕೂಡ ಸಿಗ್ಬಾರ್ದು ಅಂತೀನಿ. ಅಲ್ಲಲೇ, ನಾನು ನನ್ ಕಷ್ಟ ಯೋಳ್ಕಳವ ಅಂತ ಬಂದ್ರೆ ನೀನು ಟ್ರಾಫಿಕ್ಕು ವಿಚಾರ ತಕ್ಕಂಡು ಕೂತಿದ್ದೀಯ. ಎಷ್ಟಲೇ ನಿಂಗೆ ಧಿಮಾಕು ?' ಅಂತ ತಿಮ್ಮಪ್ನೋರು ಆವಾಜು ಬುಟ್ರು.
'ಅಯ್ಯೋ ಸಿವನೇ ? ಮಾತು ಎತ್ತೆತ್ಲಾಗೋ ವೋಯ್ತಾ ಐತೆ. ಅದೇನು ಯೋಳ್ಕಂಬೇಕೋ ಎಲ್ಲಾನೂವೆ ಯೋಳ್ಕಂಬುಡಿ. ವುಸ್ರು ಬುಡಾಕಿಲ್ಲ' ಅಂದ ಮೈಲಾರಿ. 'ಅಲ್ಲಲೇ, ಈಕಿತ ಎಲೆಕ್ಸನ್ನಾಗೆ ಗೆದ್ದೇ ಗೆಲ್ತೀನಿ. ಮಂತ್ರಿ ಆಬುಡ್ತೀನಿ ಅಂತ ಅನ್ಕಂಬುಟ್ಟಿದ್ದೆ. ನಮ್ ಲೀಡ್ರುಸು ಹೈಕಮಾಂಡ್ನೋರು ಮುಂದ್ಲಾಗಡೆ ಮೊದ್ಲು ನನ್ನೆಸ್ರು ಯೋಳ್ತರೆ ಅಂತ ಅನ್ಕಂಡಿದ್ದೆ. ವೊಬ್ರು, ವೊಬ್ರಾದ್ರು ಯೋಳುದ್ರಾ?' ಅಂತ ಬ್ಯಾಸ್ರ ಮಾಡ್ಕಂಡ್ರು ತಿಮ್ಮಪ್ನೋರು.
'ಎಲ್ಲೋ ಅರ್ಜೆಂಟ್ನಾಗೆ ಮರ್ತೋಗಿರ್ತರೆ ಬುಡಿ. ಹೆಂಗೂ ಐದು ಸೀಟು ಖಾಲಿ ಐತೆ. ಈವಾಗ್ಲೇ ವೋಗಿ ಟವಲ್ಲು ಹಾಕ್ಕಂಬುಡಿ' ಅಂದ ಮೈಲಾರಿ. 'ಸಂದಾಕೇಳ್ದೆ ಕಣ್ಲಾ, ನಾನು ಟವಲ್ಲು ಹಾಕೋದು ಅತ್ಲಾಗಿರ್ಲಿ. ಹಾಸ್ಗೆ, ದಿಂಬು, ಬೆಡ್ಸೀಟು ಹಾಕ್ಕಂಡು ಜನ ಮಲಗ್ಬುಟ್ಟವ್ರೆ. ಅವ್ರುನ್ನೆಲ್ಲ ದಾಟ್ಕಂಡು ವೋಗಿ ಟವಲ್ಲು ಹಾಕಕ್ಕೆ ಆಯ್ತದಾ ? ಬುಡು ಬುಡು' ಅಂದ್ರು ತಿಮ್ಮಪ್ನೋರು.
'ಅಶೆಂಬ್ಲಿ ಸ್ಪೀಕರ್ರು ಮಾಡ್ತೀವಿ ಅಂತ ಸಿದ್ರಾಮಣ್ಣ ಯೋಳ್ದಂಗಿತ್ತು ಅಲ್ವಾ ? ಅದುನ್ನಾರ ವೊಪ್ಕಂಬುಡಿ' ಅಂತೇಳ್ದ ಮೈಲಾರಿ. 'ಅಲ್ಲಲೇ ಈ ವಯಸ್ನಾಗೆ ಸ್ಪೀಕರ್ರು ಆಬುಟ್ಟು ಆ ಸಾಸ್ಕರ್ತಾವ ಕೂಗಾಡಕ್ಕೆ ಅಯ್ತದೇನ್ಲಾ ಬಡ್ಡೆತ್ತದೆ. ಕೂಗಾಡಿ ಕೂಗಾಡಿ ಗಂಟ್ಲು ಕಿತ್ತೊಯ್ತದೆ. ಅಮ್ಯಾಲೆ ವೂರ್ನಾಗೆ ಎಲ್ಲಾರೂವೆ ಕಾಗೋಡು ತಿಮ್ಮಪ್ಪ ಅನ್ನೋದ್ನ ಬುಟ್ಟು ಕೂಗಾಡೋ ತಿಮ್ಮಪ್ಪ ಅಂತ ಕರ್ಯಕ್ಕೆ ಸುರು ಮಾಡುದ್ರೆ ಹೆಂಗೆ ?' ಅಂತ ಕೇಳುದ್ರು ತಿಮ್ಮಪ್ನೋರು.
'ಇದೊಳ್ಳೆ ಗ್ರಾಚಾರುಕ್ಕೆ ಬಂತಲ್ಲ ಸಿವನೇ. ವೋಗ್ಲಿ ಸ್ಪೀಕರ್ರು ಪೋಸ್ಟು ಬ್ಯಾಡ ಅಂತ ಕಡ್ಡಿ ಮುರ್ದಂಗೆ ಯೋಳ್ಬುಟ್ರೆ ಆಯ್ತಪ್ಪ' ಅಂದ ಮೈಲಾರಿ.
'ಸುಮ್ಕಿರಪ್ಪ, ಅದೂವೆ ಬ್ಯಾಡ ಅಂತಂದ್ರೆ ಗೂಟದ ಕಾರು, ಅಳುಕಾಳು ಇಲ್ದೆ ಹೆಂಗಿರಾದು ? ಹೆಂಗೋ ಅಜ್ಜಸ್ಟು ಮಾಡ್ಕಂಡು ವೊಂಟೋಯ್ತೀನಿ' ಅಂತೇಳಿ ತಿಮ್ಮಪ್ನೋರು ಸ್ಕೀಕರ್ ಅಪೀಸ್ಕಡೆ ವೊಂಟ್ರು. 'ಕೂಗಾಡೋ ತಿಮ್ಮಪ್ನೋರ್ಗೆ ಜೈ' ಅಂತೇಳಿ ಮೈಲಾರಿನೂವೆ ಅಲ್ಲಿಂದ ಕಳಚ್ಕಂಡ.
-ಕೆ.ವಿ.ಪ್ರಭಾಕರ್
prabhukolar@yahoo.com