-ಓಂಪ್ರಕಾಶ್ ಅವ್ರೆ, ನಿಮ್ಮ ಎಲೆಕ್ಷನ್ ಫಿಲ್ಮ್ನಲ್ಲಿ ರಾಜಕಾರಣಿಗಳನ್ನ ಏನು ಅಷ್ಟು ಕೆಟ್ಟದಾಗಿ ಬಯ್ದಿದ್ದೀರಿ?
ಅಯ್ಯೋ ಅದರಲ್ಲಿ ಹೊಸದೇನಿದೆ ಬಿಡಿ, ನನ್ನ ಬಾಯಲ್ಲಿ ಯಾವತ್ತು ಒಳ್ಳೆ ಮಾತು ಬಂದಿದೆ ಹೇಳಿ!
-ಎಲೆಕ್ಷನ್ ಸಿನಿಮಾ, ವಿಜಯ್ಕಾಂತ್ ಅವರ ಒಂದು ತಮಿಳು ಸಿನಿಮಾ ಥರಾ ಇದೆ ಅಂತಾರಲ್ಲ ಕೆಲವ್ರು?
ಈ ಜನಕ್ಕೆ ಕೆಲ್ಸ ಇಲ್ಲ ನೋಡಿ. ನಾನ್ ಮಾಡಿದ್ದೆಲ್ಲಾ ಕದ್ದಿದ್ದು ಅಂತಾರೆ. ಅದಕ್ಕೆ ಒಂದೊಂದ್ಸಲ ಒರಿಜಿನಲ್ ಸಿನಿಮಾ ಮಾಡುವಾಗ್ಲೂ, ಯಾವುದಕ್ಕೂ ಒಂದ್ ನಾಲ್ಕು ಅದೇ ಥರದ ಸಿನಿಮಾಗಳ ರಿಮೇಕ್ ರೈಟ್ಸ್ ಇಟ್ಕೊಂಡಿರಿ ಅಂತ ನಿರ್ಮಾಪಕರಿಗೆ ಹೇಳಿಬಿಡ್ತೀನಿ.
-ಸರಿ, ನಿಮ್ಮ ಪ್ರಕಾರ ಜನ ಕನ್ನಡ ಸಿನಿಮಾ ನೋಡೋಕೆ ಥಿಯೇಟರ್ಗೆ ಬರ್ಬೇಕಂದ್ರೆ ಏನ್ ಮಾಡ್ಬೇಕು?
ಐಪಿಎಲ್ನಲ್ಲಿ ಚಿಯರ್ಗರ್ಲ್ಸ್ ಇರೋ ಥರಾ, ಥಿಯೋಟರ್ರಿಗೂ ಐಟಂ ಗರ್ಲ್ಸ್ನ ಕರೆಸಿದ್ರೆ ಜನ ಬರ್ಬೋದೆನಪ್ಪಾ!
-ಓಂ ಅವ್ರೇ, ಈ ನಮ್ಮ ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ಪರಭಾಷೆಯ ಹುಡುಗಿಯರೇ ಯಾಕ್ರೀ ನಾಯಕಿಯರಾಗಿರ್ತಾರೆ?
ಬೇರೆವ್ರ ವಿಷ್ಯ ಗೊತ್ತಿಲ್ಲ, ನಂಗಂತೂ ಅದ್ರಿಂದ ತುಂಬಾ ಹೆಲ್ಪ್ ಆಗುತ್ತಪ್ಪ. ಅವರಿಗೆ ಕನ್ನಡ ಬರಲ್ಲ ಅಂದ್ರೆ ನಾನ್ ಏನ್ ಬೈದ್ರೂ ಅವರಿಗೆ ಅರ್ಥ ಆಗಲ್ಲ, ಬೈದಿದ್ದೆಲ್ಲಾ 'ಬೈ'ಪಾಸ್ನಲ್ಲೇ ಹೋಗ್ಬಿಡುತ್ತೆ ನೋಡಿ.
-ಅಲ್ರೀ, ಬೈಯ್ಯೋ ಪದಗಳ ಬೈಬಲ್ಲೇ ಇದೆಯಂತೆ ನಿಮ್ಮತ್ರ? ಅಷ್ಟಕ್ಕೂ ಈ ಬೈಯ್ಯೋ ಕೆಲಸ ನಿಮಗೆ ಯಾಕೆ ಅಷ್ಟೊಂದ್ ಇಷ್ಟ?
ನೋಡಿ, ಕೆಲವರು ಕನ್ನಡಕ್ಕಾಗಿ 'ಕೈ ಎತ್ತುತ್ತಾರೆ'. ನಾನು ಬರೀ ಬಾಯಲ್ಲಿ ಕೆಲಸ ಮುಗಿಸ್ತೀನಿ ಒಳ್ಳೇದಲ್ವಾ?
ಓಕೆ 'ಬೈ' 'ಬೈ'!
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಇತ್ತೀಚಿನ ದಿನಗಳಲ್ಲಿ ನಾವು ವ್ಯಾಯಾಮ ಮಾಡುವ ಪರಿಯೇ ಬದಲಾಗಿ ಹೋಗಿದೆ. ಜಿಮ್ಗೆ ಹೋಗಿ ಕೇವಲ ವೈಯ್ಟ್ ಎತ್ತುವುದಷ್ಟೇ ಕಸರತ್ತಲ್ಲ ಈಗ. ನಮ್ಮ ವ್ಯಾಯಾಮದ ಪದ್ಧತಿಗೀಗ ಏರೋಬಿಕ್ಸ್ ಎಂಬ ಹೊಸ ಆಯಾಮ ದೊರೆತಿದೆ. ನಿಮ್ಮ ಮನೆಯ ಹತ್ತಿರದ ಏರೋಬಿಕ್ಸ್ ಕ್ಲಾಸ್ಗೆ ಸೇರಿಕೊಳ್ಳುವ ಮೊದಲು ಅದರ ಬಗ್ಗೆ ಒಂದಿಷ್ಟು ತಿಳುವಳಿಕೆ ಬೇಕೆನಿಸಿದರೆ ಇಲ್ಲಿನ ಲಿಂಕ್ಗಳನ್ನು ನೋಡಿ.
-bit.ly/Y9V9xn n bit.ly/1534GX3 n bit.ly/b9lClJ n bit.ly/136d2Mp n bit.ly/cEUA6B
ಹರಿ-ಕಥೆ
ಬೆಳಗ್ಗೆ ಬೆಳಗ್ಗೆ ಮಗನ ಬೆಡ್ರೂಂ ಒಳಗೆ ಇಣುಕಿ ನೋಡಿದ ಅಪ್ಪನಿಗೆ ಹಾಸಿಗೆ ಮೇಲೆ ಒಂದು ಚೀಟಿ ಕಾಣಿಸಿತು. ಸ್ವಲ್ಪ ಆತಂಕದಿಂದಲೇ ಅದನ್ನು ತೆರೆದು ನೋಡಿದ ಅಪ್ಪ ಓದತೊಡಗಿದ. ಮಗ ಹೀಗೆ ಬರೆದಿದ್ದ, 'ಪ್ರೀತಿಯ ಅಪ್ಪ, ದಯವಿಟ್ಟು ಕ್ಷಮಿಸಿ, ನಿಮ್ಮನ್ನು ಮತ್ತು ಅಮ್ಮನನ್ನು ಎದುರಿಸುವ ಶಕ್ತಿ ನನಗಿಲ್ಲ. ಹಾಗಾಗಿ ಈ ಪತ್ರ. ನಾನು ನನ್ನ ಗರ್ಲ್ಪ್ರೆಂಡ್ ಜೊತೆ ಓಡಿಹೋಗುತ್ತಿದ್ದೇನೆ. ನಾನು ಈ ಹುಡುಗಿನಾ ತುಂಬಾ ಪ್ರೀತಿಸ್ತಿದೀನಿ. ಆದರೆ, ಅವಳು ಕ್ರಿಶ್ಚಿಯನ್ ಹುಡುಗಿ, ಜೊತೆಗೆ, ಮೈತುಂಬಾ ಟ್ಯಾಟೂ ಹಾಕ್ಕೊತಾಳೆ, ಮೈಗಂಟೋ ಬಟ್ಟೆ ಹಾಕ್ಕೊತಾಳೆ ಅಂತ, ನಮ್ಮ ಸಂಬಂಧಕ್ಕೆ ನಿಮ್ಮ ಒಪ್ಪಿಗೆ ಸಿಗಲ್ಲ ಅನ್ನೋದು ನಂಗೊತ್ತಿತ್ತು. ಅಲ್ಲದೆ ಅವಳು ನನಗಿಂತ 4 ವರ್ಷ ದೊಡ್ಡವಳು ಬೇರೆ. ಹಾಗಾಗಿ, ಸದ್ಯದ ಪರಿಸ್ಥಿತಿಯಲ್ಲಿ ಅವಳು ನಂಗಿಷ್ಟ ಅನ್ನೋದಕ್ಕಲ್ಲದಿದ್ದರೂ ಅವಳೀಗ ಗರ್ಭಿಣಿ ಅನ್ನೋ ಕಾರಣಕ್ಕಾದರೂ ನಾವು ಓಡಿಹೋಗಬೇಕಿತ್ತು. ಅವಳು ತುಂಬಾ ಒಳ್ಳೆಯವಳು ಅಪ್ಪ. ನಾನು, ಗಾಂಜಾ ಸೇದೋದನ್ನು ನೋಡಿದರೂ ಅದರಲ್ಲೇನೂ ತಪ್ಪಿಲ್ಲ ಬಿಡು ಅಂತ ಅಂತಾಳೆ. ಅಲ್ಲದೆ ಅವಳ ಫಾರ್ಮ್ ಹೌಸ್ನಲ್ಲೇ ಗಾಂಜಾ ಬೆಳೀತಾಳಂತೆ ಅವಳು. ನಾವು ಈಗ ಅದೇ ಮನೆಯಲ್ಲಿ ವಾಸ ಮಾಡ್ತೀವಿ. ಮಕ್ಕಳಾದ ಮೇಲೆ ನಿಮಗೆ ಹೇಳ್ತೀವಿ. ಸದ್ಯಕ್ಕೆ ಏಯ್ಡ್ಸ್ ರೋಗಕ್ಕೆ ಯಾರಾದ್ರೂ ಔಷಧಿ ಕಂಡುಹಿಡಿದು, ಅವಳು ಗುಣವಾದರೆ ಅಷ್ಟೇ ಸಾಕು. ನೀವು ಯಾವುದಕ್ಕೂ ಯೋಚಿಸಬೇಡಿ, ನಾವಿಬ್ರೂ ಅಚ್ಚುಕಟ್ಟಾಗಿ ಸಂಸಾರ ಮಾಡ್ತೀವಿ. ನನಗೆ 16 ವರ್ಷ ತುಂಬಿದೆ. ನನ್ನನ್ನು ನಾನು ನೋಡಿಕೊಳ್ಳುವಷ್ಟು ಜವಾಬ್ದಾರಿ ಬಂದಿದೆ. ಮುಂದೆ ಯಾವತ್ತಾದರೂ ನಮ್ಮ ಮಕ್ಕಳ ಸಮೇತ ನಿಮ್ಮನ್ನು ನೋಡಲು ಬರುತ್ತೇವೆ. ಇಂತಿ ನಿನ್ನ ಪ್ರೀತಿಯ ಮಗ, ರೋಹಿತ್'. ಪತ್ರ ಓದಿದ ಅಪ್ಪನಿಗೆ ಹಾರ್ಟ್ ಅಟ್ಯಾಕ್ ಆಗೋದ್ರಲ್ಲಿತ್ತು. ಅಷ್ಟರಲ್ಲಿ ಪತ್ರದ ಬಾಟಮ್ನಲ್ಲಿ ಇನ್ನೊಂದು ಪ್ಯಾರಾ ಬರೆದಿದ್ದ ಮಗ. ಅಲ್ಲಿ ಬರೆದಿತ್ತು 'ಅಪ್ಪ, ಮೇಲೆ ಬರೆದಿರುವುದು ಯಾವುದೂ ನಿಜ ಅಲ್ಲ. ನಾನು ರಾಹುಲ್ ಮನೆಯಲ್ಲಿದ್ದೀನಿ. ಲೈಫಲ್ಲಿ, ನಿಮ್ಮ ಬೆಡ್ರೂಂ ಟೇಬಲ್ ಮೇಲಿರೋ ನನ್ನ ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್ಗಿಂತಲೂ ಭಯಂಕರ ವಿಷಯಗಳಿರ್ತವೆ ಅಂತ ತೋರ್ಸೋಕೆ ಹಾಗೆ ಬರೆದೆ, ನಾನು ಮನೆಗೆ ಯಾವಾಗ ಬರಲಿ ಅನ್ನೋದನ್ನ ನನ್ನ ನಂಬರ್ಗೆ ಫೋನ್ ಮಾಡಿ ಹೇಳಿ, ಥ್ಯಾಂಕ್ಯೂ'.
ಸ್ಕ್ಯಾಂಡಲ್ವುಡ್
ಇತ್ತೀಚೆಗೆ ಪಾಪ, ನಟಿ ರಾಗಿಣಿಯ ಮೇಲೆ ಆರೋಪಗಳ ಸುರಿಮಳೆಯೇ ಆಗುತ್ತಿದೆ. ಇದು ರಾಗಿಣಿಗೆ ಆಗದ ನಟಿಯರ ಪ್ರಾಯೋಜಿತ ಕೆಲಸ ಎಂಬುದು ಗಾಂಧಿನಗರದ ಗುಲ್ಲು. ಆದರೆ ರಾಗಿಣಿಯ ಕಾಲು ಎಳೆಯುವ ಭರದಲ್ಲಿ ಮೊನ್ನೆ ಒಂದು ವಿಷಯ ಸುದ್ದಿಯಾಗಿತ್ತು. ಇತ್ತೀಚೆಗೆ ಪ್ರಶಸ್ತಿ ಸಮಾರಂಭವೊಂದರಲ್ಲಿ ಪ್ರಶಸ್ತಿ ಪಡೆದ ಇಬ್ಬರು ನಟಿಯರಲ್ಲಿ ಪೂಜಾಗಾಂಧಿಯ ಹೆಸರೂ ಇತ್ತು. ಸೃಜನ್ ಲೋಕೇಶ್ ಮತ್ತು ರಾಗಿಣಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಸೃಜನ್ ಇಬ್ಬರು ನಟಿಯರ ಹೆಸರು ಅನೌನ್ಸ್ ಮಾಡುವಂತೆ ಹೇಳಿದರೂ, ರಾಗಿಣಿ ಪೂಜಾಗಾಂಧಿ ಹೆಸರು ಮಾತ್ರ ಹೇಳಲಿಲ್ಲವಂತೆ ಅನ್ನೋದು ಆ ಸುದ್ದಿ. ಆದರೆ, ಈ ಸುದ್ದಿ ಓದಿ ರಾಗಿಣಿಗಿಂತಲೂ ಗಾಬರಿಯಾಗಿದ್ದು ಸೃಜನ್ ಲೋಕೇಶ್ ಅಂತೆ. ಯಾಕೆಂದರೆ 'ಆ ವೇದಿಕೆ ಬಿಡಿ, ಆ ಕಾರ್ಯಕ್ರಮಕ್ಕೇ ನಾನು ಹೋಗಿರಲಿಲ್ಲ' ಎನ್ನುತ್ತಾರೆ ಸೃಜನ್. ಉದ್ದೇಶಪೂರ್ವಕವಾಗಿಯೇ ಯಾರದೋ ಕಾಲು ಎಳೆಯುವಾಗ ಇಂಥ ತಪ್ಪುಗಳಾಗುವುದು ಸಹಜ ಬಿಡಿ. ಅಲ್ಲದೆ ಚಿತ್ರರಂಗದ ಯಾವುದೇ ಪ್ರತಿಷ್ಠಿತ ಸಮಾರಂಭ ಇದ್ದರೂ ಅಲ್ಲಿ ಸೃಜನ್ ಲೋಕೇಶ್ ಅವರೇ ನಿರೂಪಕ ಎಂಬಷ್ಟರ ಮಟ್ಟಿಗೆ ಸೃಜನ್ ಫೇಮಸ್ ಆಗಿರುವುದೂ ಇದಕ್ಕೆ ಕಾರಣವಿರಬಹುದೇನೋ.
ಡಬ್ಕುಡಬಲ್ ತುದಾಂಡಲ್...
- ಶ್ರೀಶಾಂತ್ ಫಿಕ್ಸಿಂಗ್ ಮಾಡಿದ್ದು ಪ್ರೂವ್ ಆದ್ರೆ
ಶ್ರೀ 420
- 'ವಸತಿ' ಖಾತೆ ಸಚಿವ ಅಂಬರೀಶ್ ಅವರನ್ನು ಸಿನಿಮೀಯವಾಗಿ ಏನೆನ್ನಬಹುದು?
'ಹೋಮ್' ಮಿನಿಸ್ಟರ್
- ಚೆನ್ನೈ ತಂಡದ ಗುರುನಾಥ್ ಫಿಕ್ಸಿಂಗ್ನಲ್ಲಿ ಸಿಕ್ಕಿಬಿದ್ದಿದ್ದಾನೆ
ಚೆನ್ನೈ ಟೀಮ್ಗೆ ಮುಂದೆ ಗುರಿಯೂ ಇತ್ತು, ಹಿಂದೆ ಗುರುವೂ ಇದ್ದ.
-ಬೆಟ್ಟಿಂಗ್ ಅಂದ್ರೇನು?
ಅವನು ಮ್ಯಾಚ್ ಫಿಕ್ಸ್ ಮಾಡಿದ್ದಾನೆ ಅಂತ ಇನ್ನೊಬ್ಬರ ಕಡೆ 'ಬೆಟ್ಟು' ಮಾಡಿ ತೋರಿಸುವುದು.
- ಫಿಕ್ಸಿಂಗ್ ಬಗ್ಗೆ ಗೊತ್ತಿದ್ದೇ ಕ್ರಿಕೆಟ್ ಬಗ್ಗೆ ಈ ಮಾತು ಹೇಳಿರಬಹುದಾ?
11 ಜನ ಮೂರ್ಖರು ಆಡ್ತಾರೆ, 11 ಸಾವಿರ ಜನ ಮೂರ್ಖರು ನೋಡ್ತಾರೆ.
-ಸ್ಟೇಡಿಯಂನಲ್ಲೇ 'ಸಾಕ್ಷಿ' ಸಿಕ್ಕರೂ ಫಿಕ್ಸಿಂಗ್ ಆರೋಪದಿಂದ ಬಚಾವಾಗಿದ್ದು ಯಾರು?
ಮಹೇಂದ್ರ ಸಿಂಗ್ ಧೋನಿ
- ಚೆನ್ನೈ ತಂಡದ ಮೇಲಿನ ಫಿಕ್ಸಿಂಗ್ ಆರೋಪ ಪ್ರಕರಣಕ್ಕೆ ಬ್ರಹ್ಮಾಂಡ ಸ್ವಾಮಿ ರಿಯಾಕ್ಷನ್
ಮುಂಡಾ ಮೋಚ್ತು. ಬಡ್ಕೊಂಡೆ, ಹೆಂಡತಿಯರನ್ನೆಲ್ಲಾ ಮನೇಲಿ ಕೂರಿಸೋದು ಬಿಟ್ಟು ಸ್ಟೇಡಿಯಂಗೆ ಕರ್ಕೊಂಡು ಬಂದ್ರೆ ಇನ್ನೇನಾಗುತ್ತೆ.
-ಹರಿ
harikannadaprabha@gmail.com