ಬದಲಿಸಬೇಕಿರುವುದು ವಾಸ್ತುವಲ್ಲ, ಆಡಳಿತದ ಸ್ವರೂಪ

ಹಣೆಬರಹ ಸರಿಯಾಗಿ ಇರದಿದ್ದರೆ ವಾಸ್ತು ತಾನೆ ಏನು ಮಾಡಲು ಸಾಧ್ಯ?
Updated on: 

ತಮ್ಮ ಗೆಲುವಿಗೆ ದಾರಿ ಮಾಡಿಕೊಟ್ಟ ಮತದಾರರನ್ನು ನೆನಪಿಸಿಕೊಂಡರೋ ಇಲ್ಲವೋ ಗೊತ್ತಿಲ್ಲ. ಆದರೆ, ದೇವಾನುದೇವತೆಗಳೆಲ್ಲ ನೆನಪಾಗುತ್ತಾರೆ
ಜೋತಿಷ್ಯ, ಮಾಟ-ಮಂತ್ರ, ದೇವರು, ಪೂಜೆ, ಪುನಸ್ಕಾರ, ಹೋಮ, ಹವನಾದಿಗಳಲ್ಲಿ ಜನರಿಗೆ ಕೊಂಚ ನಂಬಿಕೆ ಹೆಚ್ಚು. ಇನ್ನು ರಾಜಕಾರಣಿಗಳ ವಿಚಾರದಲ್ಲಿ ಹೇಳುವುದಾದರೆ ನಂಬಿಕೆಯಲ್ಲಿ ಜನ ಸಾಮಾನ್ಯರಿಗಿಂತ ಒಂದು ಹೆಜ್ಜೆ ಮುಂದು. ಏಕೆಂದರೆ, 'ಕುರ್ಚಿ'ಯ ಮಹಾತ್ಮೆ ಅಂಥದ್ದು.
ಸಾಮಾನ್ಯವಾಗಿ ರಾಜಕಾರಣಿಗಳು ಮೂಢನಂಬಿಕೆಗಳ ಮೊರೆ ಹೋಗುವುದು ಚುನಾವಣೆ ಸಂದರ್ಭದಲ್ಲಿ. ತಮ್ಮಲ್ಲಿ ತಮಗೆ ನಂಬಿಕೆ ಇಲ್ಲದವರು, ಸ್ವಂತ ಶಕ್ತಿ ಮತ್ತು ಸಾಮರ್ಥ್ಯದ ಬಗ್ಗೆ ಅನುಮಾನ ಇದ್ದವರು ಈ ಎಲ್ಲದರ ಬೆನ್ನತ್ತಿ ಹೋಗುವುದು ಸರ್ವೇ ಸಾಮಾನ್ಯ.
ಅಧಿಕಾರಕ್ಕೆ ಬಂದ ಮೇಲಂತೂ ಕುರ್ಚಿ ಉಳಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡುತ್ತಾರೆ ಎಂದರೆ ಇವರ ಭಯ, ಭಕ್ತಿ ನೋಡಿ ಆ ದೇವರೇ ಗಾಬರಿ ಆದರೂ ಅಶ್ಚರ್ಯವಿಲ್ಲ. ಚುನಾವಣೆ ವೇಳೆ ಎಲ್ಲೆಂದರಲ್ಲಿ ಮತದಾರರಿಗೆ ಕೈ ಮುಗಿಯುವ ಈ ಖಾದಿ ಮಂದಿ ಗೆದ್ದ ಮೇಲೆ ಸಿಕ್ಕ ಸಿಕ್ಕ ದೇವಸ್ಥಾನ, ದೇವರು, ಜ್ಯೋತಿಷಿಗಳ ಮುಂದೆ ಅಡ್ಡ ಬೀಳುತ್ತಾರೆ. ಆಗಮಾತ್ರ ಚುನಾವಣೆಯಲ್ಲಿ ತಮಗೆ ಆಶೀರ್ವಾದ ಮಾಡಿದ ಮತದಾರನಿಗೆ ಮುಗಿಯಲು ಕೈ ಮುಂದಾಗುವುದೇ ಇಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಸಂಪುಟದ ಸಹೋದ್ಯೋಗಿಗಳಲ್ಲಿ ಅನೇಕರು ಮಂತ್ರಿಗಳಾಗಿ ವಿಧಾನಸೌಧಕ್ಕೆ ಕಾಲಿಟ್ಟ ತಕ್ಷಣ ನಡೆದುಕೊಳ್ಳುವ ರೀತಿ ನೋಡಿ ಇದೆಲ್ಲವನ್ನೂ ಹೇಳಬೇಕಾಗಿ ಬಂದಿದೆ. ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದವರು ತಮ್ಮ ಗೆಲುವಿಗೆ ದಾರಿ ಮಾಡಿಕೊಟ್ಟ ಮತದಾರರನ್ನು ನೆನಪಿಸಿಕೊಂಡರೋ ಇಲ್ಲವೋ ಗೊತ್ತಿಲ್ಲ. ಆದರೆ, ದೇವಾನುದೇವತೆಗಳೆಲ್ಲ ಅವರ ಸ್ಮೃತಿ ಪಟಲದಲ್ಲಿ ಅರೆಕ್ಷಣ ಹಾದು ಹೋದರು. ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಧಾನಸೌಧಕ್ಕೆ ಬಂದಿದ್ದೇ ತಡ, ಅಲ್ಲಿ ತಮಗೆ ನಿಗದಿಯಾಗಿದ್ದ ಕೊಠಡಿಗಳನ್ನು ಮೊದಲ ದಿನ ಅಕ್ಷರಶ: ದೇವಸ್ಥಾನ ಮಾಡಿಬಿಟ್ಟರು. ದೇವರುಗಳಿಗೆ ಅವರು ಸುತ್ತಿದ, ಊದುಬತ್ತಿ ಬೆಳಗಿದ, ಮಂಗಳಾರತಿಯ ಹೊಗೆಯಲ್ಲಿ ಕಲ್ಲು ಕಟ್ಟಡವೇ ಮುಸುಕಾಗಿತ್ತು.
ಇದು ಇಷ್ಟಕ್ಕೇ ನಿಲ್ಲಲಿಲ್ಲ. ಸಚಿವರ ಪೈಕಿ ಕೆಲವರು ವಾಸ್ತು ಜ್ಯೋತಿಷಿಗಳ ಮಾತು ಕೇಳಿ ಕೂರುವ ದಿಕ್ಕು ಬದಲಿಸಿದರು, ಕಿಟಕಿ, ಬಾಗಿಲುಗಳನ್ನು ಅಲ್ಲಿ ಕಿತ್ತು ಇಲ್ಲಿ ನೆಟ್ಟರು. ತಾವು ನಂಬಿರುವ ದೇವರುಗಳ ಫೋಟೋ ತಂದು ನೇತು ಹಾಕಿದರು. ಇನ್ನೂ ಕೆಲವರು ಕಿಟಕಿ, ಬಾಗಿಲುಗಳಿಗೆ ನಿಂಬೆ ಹಣ್ಣುಗಳನ್ನು ಸಿಕ್ಕಿಸಿದರು. ತಾವಿರುವುದು ಸರ್ಕಾರಿ ಕಟ್ಟಡ ಎಂಬುದನ್ನೂ ಮರೆತು ಸಿಕ್ಕ ಸಿಕ್ಕ ಪುರೋಹಿತರನ್ನೆಲ್ಲಾ ಕರೆತಂದು ಪೂಜೆ, ಪುನಸ್ಕಾರ ಮಾಡಿಸಿದರು. ಅವಕಾಶ ಇದ್ದಿದ್ದರೆ ಇಡೀ ವಿಧಾನಸೌಧದ ದಿಕ್ಕನ್ನೇ ಬದಲಿಸಿಬಿಡುತ್ತಿದ್ದರೋ ಏನೋ. ಸದ್ಯ ಆ ರೀತಿ ಆಗಲಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇದರಿಂದ ಹೊರತಾಗಿಲ್ಲ. ಈ ಮೂಢನಂಬಿಕೆಗಳಲ್ಲಿ ನನಗೆ ನಂಬಿಕೆ ಇಲ್ಲ ಎಂದು ಅವರು ಎಷ್ಟೇ ಹೇಳಿಕೊಂಡರೂ ಸಮಯ ಮತ್ತು ಸಂದರ್ಭದ ಮಾತನ್ನು ಅವರು ಕೇಳಬೇಕಾಗುತ್ತದೆ. ಇಲ್ಲದಿದ್ದರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು 'ಶುಭಗಳಿಗೆ' ಹುಡುಕುತ್ತಿರಲಿಲ್ಲ. ಅವರ ಪ್ರಮಾಣ ವಚನಕ್ಕೆ ಸಮಯ ಫಿಕ್ಸ್ ಮಾಡಿದ್ದೂ ಜ್ಯೋತಿಷಿಗಳೇ. ಅವರು ನೇರವಾಗಿ ಜ್ಯೋತಿಷಿಗಳ ಬಳಿ ಹೋಗದಿದ್ದರೂ ಜ್ಯೋತಿಷಿಗಳು ತಿಳಿಸಿದ ಪ್ರಕಾರ ಮನೆಯವರು ಹೇಳಿದ ಸಮಯದಲ್ಲಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಸುಳ್ಳಲ್ಲ.
ಇನ್ನು ಮುಖ್ಯಮಂತ್ರಿಯವರಿಗೆ ಅಧಿಕೃತ ನಿವಾಸ ಎಂದು ಈಗ ಕಾವೇರಿ ನಿಗದಿಯಾಗಿದೆ. ಅವರು ಅಲ್ಲಿಗೆ ಹೋಗದಿರುವುದಕ್ಕೆ ಕಾರಣವೂ ಇದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಅವರು ಉಪ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿಯಲ್ಲೇ ಇದ್ದರು. ಆ ಸಂದರ್ಭದಲ್ಲಿ ಅವರು ಉಪ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದರ ಜೊತೆಗೆ ಜೆಡಿಎಸ್ ಸಹ ಬಿಡಬೇಕಾಯಿತು. ಇದಕ್ಕೆ ರಾಜಕೀಯ ಕಾರಣಗಳಿದ್ದರೂ ಇದ್ದ ಮನೆಯನ್ನು ದೂಷಿಸುವುದು ಯಾವ ನ್ಯಾಯ ?
ಅದರೂ ಮನಸ್ಸು ಕೇಳಬೇಕಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಈ ಬಾರಿ ಕಾವೇರಿ ಕಡೆ ಹೋಗುತ್ತಿಲ್ಲ. ಕುಮಾರ ಪಾರ್ಕ್ ಪ್ರದೇಶದಲ್ಲಿ, ಗಾಂಧಿ ಭವನ ರಸ್ತೆಯಲ್ಲಿ ಹಾಲಿ ಇರುವ ಬಂಗಲೆಯಲ್ಲೇ ಅವರು ಮುಂದುವರಿಯಲಿದ್ದಾರೆ. ಮುಖ್ಯಮಂತ್ರಿ ಎಂದ ಮೇಲೆ ಬಂದು ಹೋಗುವ ಮಂದಿ ಹೆಚ್ಚು. ಹೀಗಾಗಿ ಪಕ್ಕದ ಬಂಗಲೆಯನ್ನೂ ಜೋಡಿಸಿಕೊಳ್ಳಲಿದ್ದಾರಂತೆ. ಈ ಬಂಗಲೆಯಲ್ಲಿ ಸಚಿವರಾಗಿದ್ದಾಗ ಆರ್.ಅಶೋಕ್ ಇದ್ದರು. ಇನ್ನೊಂದು ವಿಷಯ, ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ಬಂಗಲೆಯೂ ವಾಸ್ತು ಜ್ಯೋತಿಷ್ಯಕ್ಕೆ ಅನುಗುಣವಾಗಿ ನವೀಕರಣಗೊಂಡಿತ್ತು.
ಮುಖ್ಯಮಂತ್ರಿ, ಮಂತ್ರಿಗಳು ಕಂಡ ಕಂಡ ಜ್ಯೋತಿಷಿಗಳ ಮಾತಿಗೆ ಕಟ್ಟು ಬೀಳುವುದು, ಅವರ ಕಾಲಿಗೆ ಎರಗುವುದು ಹೊಸದೇನೂ ಅಲ್ಲ. ಈ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗಿದೆ. ಆದರೆ, ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಉದಾಹರಣೆಗೆ ಹೇಳುವುದಾದರೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಅಧಿಕೃತ ನಿವಾಸ ಅನುಗ್ರಹಕ್ಕೆ ಕಾಲಿಟ್ಟ ಮುರುಗಳಿಗೆಯಲ್ಲೇ ಆ ಬಂಗಲೆಯ ಮುಂಭಾಗದ ಗೋಡೆ ಎತ್ತರಿಸಿದರು. ಬಾಗಿಲಿನ ಎದುರಿಗೆ ಇದ್ದ ಗೇಟ್‌ನ್ನು ಪಕ್ಕಕ್ಕೆ ಸರಿಸಿದರು. ಇದು ಸಹ ವಾಸ್ತುಶಾಸ್ತ್ರದ ಎಫೆಕ್ಟ್. ಆ ರೀತಿ ಮಾಡಿದರೆ ಐದು ವರ್ಷ ನಿರಾತಂಕವಾಗಿ ಆಡಳಿತ ನಡೆಸಬಹುದು. ರಾಜ್ಯ ಸುಭಿಕ್ಷವಾಗಿರುತ್ತದೆ. ಬಳಿಕ ಚುನಾವಣೆಯಲ್ಲಿ ಗೆದ್ದುಬಂದು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂದು ಜ್ಯೋತಿಷಿಗಳು ಹೇಳಿದ್ದರಂತೆ. ನಿರಾತಂಕ ಆಡಳಿತ, ಸುಭಿಕ್ಷ ರಾಜ್ಯ, ಮತ್ತೆ ಮುಖ್ಯಮಂತ್ರಿ ಎಂದರೆ ಯಾವ ರಾಜಕಾರಣಿ ತಾನೆ ಜ್ಯೋತಿಷಿಗಳ ಮಾತಿಗೆ ತಲೆ ಆಡಿಸುವುದಿಲ್ಲ. ಒಂದು ಕ್ಷಣವೂ ತಡಮಾಡದೆ ಕೃಷ್ಣ ಜ್ಯೋತಿಷಿಗಳು ಹೇಳಿದ್ದನ್ನು ಚಾಚೂತಪ್ಪದೆ ಜಾರಿಗೆ ತಂದರು.
ಆದರೆ, ಆಗಿದ್ದೇನು? ಹಿಂದಿನ ಯಾವ ಮುಖ್ಯಮಂತ್ರಿಯೂ ಕಾಣದಷ್ಟು ಕಷ್ಟಗಳು ಕೃಷ್ಣರ ಮೈಮೇಲೆ ಬಂದೆರಗಿತು. ಅದು ಒಂದೇ, ಎರಡೇ? ವರನಟ ಡಾ.ರಾಜ್ ಅವರನ್ನು ನರಹಂತಕ ವೀರಪ್ಪನ್ ಅಪಹರಿಸಿದ. ರಾಜ್ ಕಾಡುಗಳ್ಳನ ಒತ್ತೆಯಲ್ಲಿ ಇದ್ದಷ್ಟು ದಿನ ಕೃಷ್ಣ ಅವರು ಕ್ಷಣಕ್ಷಣವೂ ಸಂಕಷ್ಟ ಅನುಭವಿಸಿದರು. ರಾಜ್ ಬಿಡುಗಡೆಯಾಗಿ ಬಂದು ನಿರಾಳ ಆಗುವಷ್ಟರಲ್ಲಿ ಅದೇ ಕಾಡುಗಳ್ಳನಿಂದ ಮಾಜಿ ಸಚಿವ ನಾಗಪ್ಪ ಅಪಹರಣ ಮತ್ತು ಹತ್ಯೆ ಆಯಿತು. ಅದೆಲ್ಲವೂ ಕಳೆಯಿತು ಎನ್ನುವಷ್ಟರಲ್ಲಿ ಬರಗಾಲ ಇಡೀ ರಾಜ್ಯವನ್ನು ಆವರಿಸಿತು. ಇದರ ಮಧ್ಯೆ ಕಾವೇರಿ ನದಿ ನೀರಿನ ವಿವಾದ ಎದುರಾಯಿತು.
ಬರ ಕಾಡುತ್ತಿರುವ ಸಂದರ್ಭದಲ್ಲಿ ವಿಧಾನಸಭೆ ಅವಧಿ ಮುಗಿಯಲು ಇನ್ನೂ ಆರು ತಿಂಗಳು ಬಾಕಿ ಇರುವ ಮೊದಲೇ ಕೃಷ್ಣ ಚುನಾವಣೆಗೆ ಮುಂದಾದರು. ಅದರೆ, ಪಕ್ಷ ಅಧಿಕಾರಕ್ಕೆ ಬರಲಿಲ್ಲ. ವಿಧಾನಸಭೆ ಅವಧಿ ಮುಗಿದ ಬಳಿಕ ನಿಗದಿತ ಸಮಯದಲ್ಲಿ ಚುನಾವಣೆ ನಡೆದಿದ್ದರೆ ಕೃಷ್ಣ ಅವರ ಪಾಲಿಗೆ ಅದೃಷ್ಟ ಹುಡುಕಿಕೊಂಡು ಬರುತ್ತಿತ್ತೋ ಏನೋ? ಏಕೆಂದರೆ, ಆ ಸಮಯಕ್ಕೆ ಸರಿಯಾಗಿ ಒಳ್ಳೆಯ ಮಳೆ ಬಂತು.
ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಆಯಿತು. ಆಗ ಧರ್ಮಸಿಂಗ್ ಮುಖ್ಯಮಂತ್ರಿಯಾದರು. ಅವರನ್ನು ಕೆಳಗಿಳಿಸಿ ಬಿಜೆಪಿ ಜೊತೆಗೂಡಿ ಕುಮಾರಸ್ವಾಮಿ ಸರ್ಕಾರ ರಚಿಸಿ ಮುಖ್ಯಮಂತ್ರಿಯೂ ಆದರು. ಸರ್ಕಾರಿ ಬಂಗಲೆ ಅನುಗ್ರಹಕ್ಕೆ ಬಂದ ಕೂಡಲೇ ಕುಮಾರಸ್ವಾಮಿ ಅವರು ಆ ಬಂಗಲೆಯ ಸ್ವರೂಪವನ್ನೇ ಬದಲು ಮಾಡಿದರು. ಕಾಂಪೌಂಡ್‌ಗೇ ಮತ್ತೊಂದು ಕಾಪೌಂಡ್ ಹಾಕಿಸಿದರು. ಜ್ಯೋತಿಷಿಗಳ ಸಲಹೆ ಮೇರೆಗೆ ಅಮೃತ ಮಹಲ್ ತಳಿಯ ದನ,ಕರುಗಳನ್ನು ಬಂಗಲೆಯಲ್ಲಿ ಕಟ್ಟಿಕೊಂಡರು. ಮುಖ್ಯದ್ವಾರದ ಭಾಗವನ್ನು ಎತ್ತರಿಸಿದರು. ಇನ್ನೂ ಏನೇನೋ ಮಾಡಿದರು. 20 ತಿಂಗಳ ಬಳಿಕ ಬಿಜೆಪಿಗೆ ಅಧಿಕಾರ ಬಿಟ್ಟುಕೊಡದೆ ಅವರೂ ಅಧಿಕಾರದಿಂದ ಕೆಳಗಿಳಿದರು. ಯಾವ ಪೂಜೆ ಪುನಸ್ಕಾರ ಮತ್ತು ವಾಸ್ತು ಶಾಸ್ತ್ರವೂ ಕುಮಾರಸ್ವಾಮಿ ಅವರನ್ನೂ ಕಾಪಾಡಲಿಲ್ಲ.
ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತವೂ ಇಲ್ಲದೆ ಅಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಆದರೆ, ಅವರು ಅನುಗ್ರಹ ಬಂಗಲೆಗೆ ಹೋಗಲಿಲ್ಲ. ಅದನ್ನು ಅವರು ಅಂದಿನ ಸಚಿವ ಡಾ.ವಿ.ಎಸ್.ಆಚಾರ್ಯರಿಗೆ ಬಿಟ್ಟುಕೊಟ್ಟರು. ಅವರೂ ಹೋಮ, ಹವನಾದಿಗಳ ಮೂಲಕ ಆ ಮನೆಯೊಳಗೆ ಕಾಲಿಟ್ಟರು. ಯಡಿಯೂರಪ್ಪ ಅವರು ಅಲ್ಲಿಗೆ ಹೋಗದಿರುವುದಕ್ಕೆ ಕಾರಣವೂ ಇತ್ತು. ವಿಧಾನಸಭೆ ಪ್ರತಿಪಕ್ಷ ನಾಯಕ, ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರು ರೇಸ್‌ಕೋರ್ಸ್ ರಸ್ತೆಯ ಬಂಗಲೆಯಲ್ಲಿದ್ದರು. ಅದೃಷ್ಟದ ಮನೆ ಎಂಬ ಕಾರಣಕ್ಕೆ ಅವರು ಆ ಜಾಗ ಖಾಲಿ ಮಾಡಲಿಲ್ಲ. ಜೊತೆಗೆ ವಾಸ್ತು ಪ್ರಕಾರ ಅವರೂ ಆ ಬಂಗಲೆಯಲ್ಲಿ ಅಲ್ಲಿ, ಇಲ್ಲಿ ಕೆಡವಿ ತಮ್ಮ ಅನುಕೂಲಕ್ಕೆ ತಕ್ಕಂತೆ ಕಟ್ಟಿಕೊಂಡರು. ಪಕ್ಕದ ಮನೆಯನ್ನೂ ಜೋಡಿಸಿಕೊಂಡರು. ಇನ್ನು ಯಡಿಯೂರಪ್ಪ ಅವರು ನೋಡದ ದೇವಸ್ಥಾನಗಳಿಲ್ಲ, ತಿರುಗದ ಪುಣ್ಯಕ್ಷೇತ್ರಗಳಿಲ್ಲ. ದೂರದ ವೈಷ್ಣೋದೇವಿ ಸೇರಿದಂತೆ ತಮಿಳುನಾಡು, ಕೇರಳ, ಅಂಧ್ರ ರಾಜ್ಯದ ಒಂದೇ ಒಂದು ದೇವಾಲಯವನ್ನೂ ಬಿಡದೆ ಸುತ್ತು ಹಾಕಿ ಬಂದರು. ಕೇರಳದ ದೇವಾಲಯಕ್ಕೆ ಸರ್ಕಾರದ ಲೆಕ್ಕದಲ್ಲಿ ಅನುದಾನವನ್ನೂ ಕೊಟ್ಟು ಬಂದರು. ಯಡಿಯೂರಪ್ಪ ಮತ್ತು ಅವರ ಆಪ್ತರು ಮಾಡಿದ ಪೂಜೆ ಪುನಸ್ಕಾರಗಳಿಗೆ ಲೋಡುಗಟ್ಟಲೆ ಕರ್ಪೂರ, ಊದುಬತ್ತಿ ಖರ್ಚಾಗಿರಬಹುದು. ಮಂಗಳಾರತಿ ತಟ್ಟೆಗೆ ಅವರು ಹಾಕಿರುವ ಕಾಸು ಲಕ್ಷಗಳನ್ನು ಮೀರಬಹುದು. ಇದರಿಂದ ಆದ ಪ್ರಯೋಜನವಾದರೂ ಏನು? ನಾನಾ ಹಗರಣಗಳನ್ನು ಮೈಗೆ ಮೆತ್ತಿಕೊಂಡು ಯಡಿಯೂರಪ್ಪ ಅವರನ್ನು ಯಾವ ದೇವರೂ ಕಾಪಾಡಲಿಲ್ಲ. ಅವರು ಮಾಡಿದ ಮತ್ತು ಮಾಡಿಸಿದ ಪೂಜೆಗಳಿಗೆ ಕನಿಷ್ಠ ನೂರು ವರ್ಷವಾದರೂ ಮುಖ್ಯಮಂತ್ರಿ ಹುದ್ದೆಯಲ್ಲಿರಬೇಕಿತ್ತು. ಆದರೆ, ಮೂರೂವರೆ ವರ್ಷಕ್ಕೇ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು ಹೋದರು. ಅಷ್ಟೇ ಅಲ್ಲ, ಜೈಲಿಗೂ ಹೋಗಿ ಬಂದರು.  ನಂತರ ಬಂದ ಡಿ.ವಿ.ಸದಾನಂದಗೌಡರದ್ದೂ ಅದೇ ಕಥೆ. ಅನುಗ್ರಹ ಬಂಗಲೆಯಲ್ಲಿ ಅವರೂ ಹೋಮ, ಹವನಾದಿಗಳನ್ನು ನೆರವೇರಿಸಿದರು. ಆದರೆ ಅವರ ಸೀಟಿಗೂ ಹೊಗೆ ಬಿತ್ತು.
ಸಚಿವರಾಗಿದ್ದಾಗ ಕೃಷ್ಣಯ್ಯಶೆಟ್ಟಿ ಸಂಖ್ಯಾಶಾಸ್ತ್ರಕ್ಕೆ ಜೋತುಬಿದ್ದು ತಮ್ಮ ಹೆಸರಿನಲ್ಲಿ ಕೆಲ ಅಕ್ಷರ ಬದಲಿಸಿದರು. ಯಡಿಯೂರಪ್ಪ ಅವರ ಹೆಸರನ್ನು ಯಡ್ಯೂರಪ್ಪ ಮಾಡಿಸಿದರು. ಶೆಟ್ಟರು ಗಂಗಾಜಲ, ತಿರುಪತಿ ಲಡ್ಡು ಹಂಚಿದರೂ ಅಧಿಕಾರ ಕಳೆದುಕೊಂಡು ಜೈಲಿಗೆ ಹೋಗಿ ಬಂದರು. ಮಾಜಿ ಸಚಿವ ಜನಾರ್ದನ ರೆಡ್ಡಿ ಜೈಲಿನಿಂದ ಹೊರಗೆ ಬರಲು ಸಾಧ್ಯವೇ ಆಗುತ್ತಿಲ್ಲ. ಅವರು ಮಾಡಿಸಿದ ಪೂಜೆ, ಪುನಸ್ಕಾರಗಳಿಗೂ ಮಿತಿ ಎಂಬುದೇ ಇರಲಿಲ್ಲ.  ಎಲ್ಲ ಪಕ್ಷಗಳ ನಾಯಕರು ಒಂದಿಲ್ಲೊಂದು ಕಾರಣಕ್ಕೆ ದೇವರು, ದಿಂಡಿರು ಎಂದು ಅಡ್ಡ ಬಿದ್ದವರೇ. ಪ್ರಮಾಣ ವಚನ ಸ್ವೀಕಾರ ಮಾಡಿದವರ ಪೈಕಿ ಬಹುತೇಕರು ಕೈಯಲ್ಲಿ ಹಾರೆ, ಸುತ್ತಿಗೆ ಹಿಡಿದುಕೊಂಡೇ ವಿಧಾನಸೌಧಕ್ಕೆ ಬಂದವರೇ. ನಾನು ಕಂದಾಚಾರ ನಂಬುವುದಿಲ್ಲ, ಮೂಢನಂಬಿಕೆಗಳಿಗೆ ನಮ್ಮಲ್ಲಿ ಜಾಗವಿಲ್ಲ ಎನ್ನುತ್ತಲೇ ಉದುಬತ್ತಿ ಗಿರ ಗಿರ ಸುತ್ತಿದವರೇ.
ಯಾರು ಏನೇ ಮಾಡಿದರೂ ಹಣೆ ಬರಹ ಬದಲಿಸಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಆದರಲ್ಲೂ ಚುನಾವಣೆ ವೇಳೆ ಮತದಾರರು ಬರೆಯುವ ಭವಿಷ್ಯವನ್ನು ಮೀರಿ ನಿಲ್ಲುವ ಜ್ಯೋತಿಷ್ಯ, ವಾಸ್ತುಶಾಸ್ತ್ರ ಯಾವುದಿದೆ ?
ಲಗೋರಿ: ಹಣೆಬರಹ ಸರಿಯಾಗಿ ಇರದಿದ್ದರೆ ವಾಸ್ತು ತಾನೆ ಏನು ಮಾಡಲು ಸಾಧ್ಯ ?

-ಪಿ. ತ್ಯಾಗರಾಜ್
thyagarjun@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com