ಕಾಂಗ್ರೆಸ್ ನಾಯಕರ ಈ ಬರ್ಬರ ಹತ್ಯೆ, ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲಿನ ದಾಳಿ... ಎಂದರು ಸೋನಿಯಾ ಮತ್ತು ರಾಹುಲ್ ಗಾಂಧಿ.
ನಕ್ಸಲಿಸಂ ಎಂಬುದು ಈ ದೇಶ ಎದುರಿಸುತ್ತಿರುವ ಅತಿ ದೊಡ್ಡ ಹಾಗೂ ಅತ್ಯಂತ ಅಪಾಯಕಾರಿ ಸವಾಲು. ಇದನ್ನು ಮಟ್ಟ ಹಾಕಲು ಎಲ್ಲರೂ ಸಂಘಟಿತರಾಗಬೇಕು... ಎಂದರು ಪ್ರಧಾನಿ ಮನಮೋಹನ್ ಸಿಂಗ್. ಹಾಗೆ ನೋಡಿದರೆ ಪ್ರಧಾನಿಯ ಬಾಯಲ್ಲಿ ಈ ಮಾತು ಬರುತ್ತಿರುವುದು ಇದೇ ಮೊದಲಲ್ಲ. ರಾಜ್ಯಗಳ ಗೃಹ ಸಚಿವರ ಸಭೆ ಇರಬಹುದು, ಡಿಜಿಪಿಗಳ ಸಭೆ ಇರಬಹುದು, ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆ ಇರಬಹುದು, ಈ ಎಲ್ಲ ಕಡೆ ಪ್ರಧಾನಿ ಸಿಂಗ್ ಗಿಣಿ ಪಾಠದಂತೆ ಈ ಎಚ್ಚರಿಕೆಯನ್ನು ಅರುಹಿದ್ದಾರೆ. ಅಷ್ಟೇಕೆ, 2010ರಲ್ಲಿ ಛತ್ತೀಸ್ಗಡದ ದಾಂತೇವಾಡದಲ್ಲಿ ಇದೇ ನಕ್ಸಲರು 78 ಮಂದಿ ಸಿಆರ್ಪಿಎಫ್ ಯೋಧರನ್ನು ಅತ್ಯಂತ ಹೇಯವಾಗಿ ಹತ್ಯೆ ಮಾಡಿದಾಗ ಅಂದಿನ ಗೃಹ ಸಚಿವರು ಸಂಸತ್ತಿನಲ್ಲಿ ನೀಡಿದ ಹೇಳಿಕೆಯನ್ನು ಗಮನಿಸಿ: 'ನಮ್ಮ ಮುಂದಿನ ಸವಾಲಿನ ಗಾಂಭೀರ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅದು ಅಂತಿಂಥ ಸವಾಲಲ್ಲ. ಈ ದೇಶದ ಸೌರ್ವಭೌಮತೆಯ ಬುಡಕ್ಕೆ ಕೊಡಲಿ ಪೆಟ್ಟು ನೀಡುವ ಹುನ್ನಾರ ನಡೆದಿದೆ. ಸಿಪಿಐ-ಮಾವೊವಾದಿಗಳ ಪಾಲಿಗೆ ಈ ಸಂಸತ್ತು ಒಂದು ಅರ್ಥಹೀನ ಕೊಟ್ಟಿಗೆ ಮತ್ತು ಇಲ್ಲಿರುವ ನಾವು-ನೀವೆಲ್ಲ ಅವರಿಗೆ ಪರಮ ವೈರಿಗಳು. ಈಗ ಅವರು ಕರೆದುಕೊಳ್ಳುವ ಜನ ವಿಮೋಚನಾ ಗೆರಿಲ್ಲಾ ಪಡೆಯನ್ನು ಮುಂದೊಂದು ದಿನ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯಂತಾಗಿಸಿ ಅಲ್ಲಿನಂತೆಯೇ ಇಲ್ಲೂ ಸಹ ರಾಜಕೀಯ ಅಧಿಕಾರವನ್ನು ಕಸಿದುಕೊಳ್ಳುವುದೇ ಅವರ ಗುರಿ. ಅದಕ್ಕಾಗಿ ಅವರು ಎಷ್ಟು ದಿನ ಬೇಕಾದರೂ ಕಾಯುತ್ತಾರೆ. ಎಷ್ಟು ನೆತ್ತರು ಬೇಕಾದರೂ ಬಗೆಯುತ್ತಾರೆ. ಆದರೆ ಅವರ ಗುರಿ, ನಿಲುವಿನ ಬಗ್ಗೆ ಇಲ್ಲಿರುವ ಯಾರಿಗೂ, ಯಾವುದೇ ಸಂಶಯ ಬೇಡ. ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವುದೇ ಅವರ ಧ್ಯೇಯ' ಎಂದು ಆಗ ಗೃಹ ಸಚಿವರಾಗಿದ್ದ ಪಿ. ಚಿದಂಬರಂ ಸಂಸತ್ತಿನಲ್ಲಿ ಸಾರಿದ್ದರು. ಅದಾಗಿ ಎರಡು ವರ್ಷ ಕಳೆದಿದೆ. ಮತ್ತೆ ಛತ್ತೀಸ್ಗಡದಲ್ಲಿ ಭಾರೀ ಪ್ರಮಾಣದಲ್ಲಿ ನಕ್ಸಲರು ರಕ್ತದೋಕುಳಿ ಆಡಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರನ್ನೇ ಚೆಂಡಾಡಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ್ ಪಟೇಲ್ ಹಾಗೂ ಅವರ ಪುತ್ರ ದಿನೇಶ್, ಈ ಬಾರಿ ಅಕಸ್ಮಾತ್ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ರೇಸ್ನಲ್ಲಿದ್ದ ಅತ್ಯಂತ ಪ್ರಬಲ ಬುಡಕಟ್ಟು ಜನಾಂಗದ ನಾಯಕ ಮಹೇಂದ್ರ ಕರ್ಮಾ ಸೇರಿದಂತೆ 28 ಮಂದಿ ಈ ನಕ್ಸಲರ ನೆತ್ತರ ಉನ್ಮಾದಕ್ಕೆ ಬಲಿಯಾಗಿದ್ದಾರೆ. ಕಾಂಗ್ರೆಸ್ನ ಮತ್ತೋರ್ವ ಹಿರಿಯ ನಾಯಕ ವಿದ್ಯಾಚರಣ್ ಶುಕ್ಲಾ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಸೋನಿಯಾ, ರಾಹುಲ್, ಮನಮೋಹನ್ ಬಾಯಲ್ಲಿ ಮತ್ತದೇ ಮಾತುಗಳು ಹೊರಬಿದ್ದಿವೆ.
ದಾಂತೇವಾಡದ ಪ್ರಕರಣದ ನಂತರ ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿದ್ದರೂ ಈ ಪ್ರಮಾಣದ ದಾಳಿ ಆಗಿರಲಿಲ್ಲ. ಇದನ್ನೇ ಒಂದು ಸಾಧನೆ ಎಂಬಂತೆ ಪರಿಗಣಿಸಿದ ಕಾಂಗ್ರೆಸ್ ಪಕ್ಷವು ಇತ್ತೀಚೆಗೆ ಯುಪಿಎ-2 ಸರ್ಕಾರದ ನಾಲ್ಕನೇ ವರ್ಷಾಚರಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಸಾಧನಾ ಪತ್ರದಲ್ಲಿ ಹೇಳಿಕೊಂಡಿತ್ತು. ಆದರೆ ಕೆಲವೇ ದಿನಗಳಲ್ಲಿ ಪರಿಸ್ಥಿತಿ ಬದಲಾಗಿದೆ. ನಕ್ಸಲರು ಅಟ್ಟಹಾಸ ಮೆರೆದಾಗಲೆಲ್ಲ ಇದೇ ಮಾತುಗಳನ್ನು ಕೇಳಿದಾಗ ಈ ಸರ್ಕಾರಕ್ಕೆ ನಿಜವಾಗಲೂ ನಕ್ಸಲರನ್ನು ಮಟ್ಟ ಹಾಕುವ ನಿಜವಾದ ಇರಾದೆ ಇದೆಯಾ ಎನಿಸುತ್ತದೆ. ಹಾಗೆ ಮಾಡಲು ಬೇಕಾದ ರಾಜಕೀಯ ಇಚ್ಛಾಶಕ್ತಿ ಇವರಿಗಿದೆಯೇ? ಎಂಬ ಪ್ರಶ್ನೆ ಏಳುತ್ತದೆ. ಕಾಂಗ್ರೆಸ್ ಮುಖಂಡರ ಮಾತುಗಳು ಮೊಸಳೆ ಕಣ್ಣೀರಿನಂತೆ ಭಾಸವಾಗುತ್ತದೆ.
2004. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತ್ತು. ಅದಕ್ಕೆ ಕಮ್ಯುನಿಸಂ ಸಿದ್ಧಾಂತದ ಎಡಪಕ್ಷಗಳ ಬೆಂಬಲವೂ ಇತ್ತು. ಕಾಕತಾಳೀಯ ಎಂಬಂತೆ ಇದೇ ಸಮಯದಲ್ಲಿ ದೇಶದಲ್ಲಿ ನಕ್ಸಲ್ ಚಳವಳಿಯ ಎರಡು ದಿಕ್ಕುಗಳಂತಿದ್ದ ಪೀಪಲ್ಸ್ ವಾರ್ ಗ್ರೂಪ್ ಮತ್ತು ಮಾವೋಯಿಸ್ಟ್ ಕಮ್ಯುನಿಸ್ಟ್ ಸೆಂಟರ್ಗಳು ಒಂದೇ ಛತ್ರಿಯಡಿ ಬರಲು ತೀರ್ಮಾನಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾವೋಯಿಸ್ಟ್ (ಸಿಪಿಐ-ಎಂ) ಸ್ಥಾಪಿಸಿದವು. ಅಂದಿನಿಂದ ಲಾಗಾಯ್ತು ದೇಶದಲ್ಲಿ ಇವರ ಉಪಟಳ ಹೆಚ್ಚಿತು. 1960ರ ದಶಕದ ಅಂತ್ಯದಲ್ಲಿ ಶೋಷಿತರಿಗೆ ದನಿಯಾಗುವ ನೆಪದಲ್ಲಿ ಪಶ್ಚಿಮ ಬಂಗಾಳದ ನಕ್ಸಲ್ ಬಾರಿ ಎಂಬಲ್ಲಿ ಅವತರಿಸಿದ ಚಳವಳಿ 2004ರ ನಂತರ ಬಂಡುಕೋರ ಸಂಘಟನೆಯ ರೂಪ ತಳೆದಿದ್ದೇ ಅಲ್ಲದೆ ದಂಡಕಾರಣ್ಯ ಎಂದೇ ಕರೆಯಲಾಗುವ ದೇಶದ ತೀರಾ ಹಿಂದುಳಿದ ಬುಡಕಟ್ಟು ಪ್ರದೇಶಗಳಾದ ಜಾರ್ಖಂಡ್, ಛತ್ತೀಸ್ಗಡ, ಒರಿಸ್ಸಾ ಮುಂತಾದೆಡೆ ತನ್ನ ಭದ್ರ ನೆಲೆ ಕಂಡುಕೊಂಡಿತು. ಆರಂಭದಲ್ಲಿ ಕೇಂದ್ರ ಸರ್ಕಾರ ಈ ಬೆಳವಣಿಗೆಯನ್ನು ಅಷ್ಟೇನೂ ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳಲಿಲ್ಲ. ಜೊತೆಗೆ ಎಡಪಕ್ಷಗಳನ್ನು ಬಳಸಿಕೊಂಡು ಈ ಮಾವೋಗಳ ಮನವೊಲಿಸಬಹುದು ಎಂಬ ಉದಾಸೀನ ಸರ್ಕಾರದಲ್ಲಿ ಮನೆ ಮಾಡಿತ್ತು. ಇನ್ನು ಅಂದಿನ ಗೃಹ ಸಚಿವ ಶಿವರಾಜ್ ಪಾಟೀಲರಿಗೆ ತಮ್ಮ ಉಡುಪಿನ ಬಗ್ಗೆ ಇದ್ದ ಕಾಳಜಿ ದೇಶಕ್ಕೆ ಇದ್ದ ಗಂಡಾಂತರಗಳ ಬಗ್ಗೆ ಇರಲಿಲ್ಲ. ಹೀಗಾಗಿ ಒರಿಸ್ಸಾ ಮತ್ತು ಆಂಧ್ರಪ್ರದೇಶ ಮೂಲದ ಪೀಪಲ್ಸ್ ವಾರ್ ಗ್ರೂಪ್ ಮತ್ತು ಬಿಹಾರದಲ್ಲಿ ನೆಲೆಕಂಡಿದ್ದ ಮಾವೋ ಕಮ್ಯುನಿಸ್ಟ್ ಸೆಂಟರ್ ಪರಸ್ಪರ ಒಂದುಗೂಡುವ ಮೂಲಕ ತಮ್ಮ ವ್ಯಾಪ್ತಿ ಹೆಚ್ಚಿಸಿಕೊಂಡವು. ಇದಕ್ಕೆ ಪೂರಕವಾಗಿ ಜಾರ್ಖಂಡ್ ಮತ್ತು ಛತ್ತೀಸ್ಗಡದ ಬುಡಕಟ್ಟು ಜನರ ದೈನೇಸಿ ಸ್ಥಿತಿ ಈ ಬಂಡುಕೋರರು ಅವರ ಮೇಲೆ ಸವಾರಿ ಮಾಡಿ ಅವರ ತಲೆ ತಿರುಗಿಸಿ ತಮ್ಮ ನೆಲೆ ಗಟ್ಟಿ ಮಾಡಿಕೊಡಲು ಅವಕಾಶ ನೀಡಿತು. ಸುಮಾರು ಐದು ವರ್ಷ ಕಾಲ ತಮ್ಮ ಸಂಘಟನೆಯನ್ನು ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಹಿಗ್ಗಿಸಿಕೊಂಡ ಈ ಮಾವೋವಾದಿಗಳು 2009ರಿಂದೀಚೆಗೆ ದೇಶದ ಮೇಲೆ ಒಂದು ರೀತಿ ಯುದ್ಧವನ್ನೇ ಸಾರಿದರು.
ಈ ಕಳೆದ ನಾಲ್ಕು ವರ್ಷಗಳಲ್ಲಿ ಮಾವೊಗಳ ಅಟ್ಟಹಾಸಕ್ಕೆ ಸುಮಾರು 500 ಮಂದಿ ಯೋಧರು ಹತರಾಗಿದ್ದಾರೆ. ಈಗ ಇವರ ಗೆರಿಲ್ಲಾ ಪಡೆ 46 ಸಾವಿರ ಸಶಸ್ತ್ರ ಬಂಡುಕೋರರಿಂದ ಕೂಡಿದೆ ಎಂದರೆ ಇವರ ರಣಸಿದ್ಧತೆ ಎಷ್ಟರ ಮಟ್ಟಿಗಿದೆ ಎಂಬುದು ತಿಳಿಯುತ್ತದೆ. ಇದರ ಪೈಕಿ 8 ರಿಂದ 10 ಸಾವಿರದಷ್ಟು ಮಂದಿ ಎಲ್ಲ ರೀತಿಯ ತರಬೇತಿ ಪಡೆದ ಬಂಡುಕೋರರಾದರೆ ಉಳಿದವರು ಇವರಿಗೆ ಬೇಕಾದ ಶಸ್ತ್ರ ಸಾಮಗ್ರಿಗಳನ್ನು ಪೂರೈಸುವ, ಜನರನ್ನು ನಿಲುವಿನತ್ತ ಒಲಿಸಿಕೊಳ್ಳುವ, ಅವರನ್ನು ಅಡ್ಡ ದಾರಿಗೆ ಎಳೆಯುವ ಕಾಯಕದಲ್ಲಿ ನಿರತರಾಗಿದ್ದಾರೆ.
ಈ ಮಾವೋವಾದಿಗಳು ತಮ್ಮ ಗುಂಪನ್ನು ವೃದ್ಧಿಸಿಕೊಳ್ಳುತ್ತಿರುವುದು, ನೇಪಾಳದಿಂದ ಶಸ್ತ್ರಾಸ್ತ್ರ ವಾಮ ಮಾರ್ಗದಲ್ಲಿ ಆಮದು ಮಾಡಿಕೊಳ್ಳುತ್ತಿರುವುದು ನಮ್ಮ ಜಾಗೃತ ದಳದ ಗಮನಕ್ಕೆ ಬರಲಿಲ್ಲ ಎಂದೇನಲ್ಲ. ಆದರೆ ಇದೇ ಶಿವರಾಜ್ ಪಾಟೀಲ್ ಮಾವೋಗಳನ್ನು, ಅವರು ಒಡ್ಡಬಹುದಾಗಿದ್ದ ಅಪಾಯವನ್ನು ಗಂಭೀರವಾಗಿ ಪರಿಗಣಿಸಲು ಸಿದ್ಧರಿರಲಿಲ್ಲ. ಹಾಗಾಗಿ ಮಾವೋಗಳ ಟ್ಟಛ್ಝಿಟ್ಝಡಛಡ್ಝ್ಟಿಟಿ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ ಏನೂ ಮಾಡಲಾಗದ ಸ್ಥಿತಿಯಲ್ಲಿ ಗೃಹ ಇಲಾಖೆ ಕುಳಿತಿತ್ತು. 26/11 ರ ಮುಂಬೈ ದಾಳಿ ನಂತರ ಶಿವರಾಜ್ ಪಾಟೀಲ್ ಜಾಗಕ್ಕೆ ಚಿದಂಬರಂ ಬಂದ ಮೇಲೆ ಮಾವೋ ಬೆದರಿಕೆ ಬಗ್ಗೆ ಕೇಂದ್ರ ಗೃಹ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಲಾರಂಭಿಸಿತು. ಇದಕ್ಕೆ ಪೂರಕವಾಗಿ ಎಡಪಕ್ಷಗಳ ಬೆಂಬಲ ಮತ್ತು ಅದರ ಬೆನ್ನಿಗೆ ಬರುವ ಅವರ ಆಕ್ಷೇಪಣೆಗಳ ಹಂಗಿಲ್ಲದೆ ಚಿದಂಬರಂ ಮಾವೋಗಳ ಬಗ್ಗೆ ಕಠಿಣ ನಿಲುವು ತಾಳಿದರು. ಬಾಧಿತ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪದೇಪದೆ ಸಭೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಮಾವೋಗಳ ವಿರುದ್ಧ ಏಕೀಕೃತ ಸಂಘಟಿತ ದಾಳಿಗೆ ಆಪರೇಷನ್ ಗ್ರೀನ್ ಹಂಟ್ ಕಾರ್ಯಾಚರಣೆ ರೂಪಿಸಿದರು. ಮೊಟ್ಟ ಮೊದಲ ಬಾರಿಗೆ ಮಾವೋವಾದಿಗಳನ್ನು ಭಯೋತ್ಪಾದಕರ ಜೊತೆ ಗುರುತಿಸಲಾಯಿತು. ಈ ಸಮರ ಗೆಲ್ಲುವುದು ದೇಶದ ಸಾರ್ವಭೌಮತ್ವಕ್ಕೆ ತೀರಾ ಅಗತ್ಯ ಎಂಬ ವಾತಾವರಣವೂ ನಿರ್ಮಾಣವಾಯಿತು. ಇದೆಲ್ಲದರ ನಡುವೆ ದಾಂತೇವಾಡ ಘಟನೆ ನಡೆಯಿತು. ಉಮೇದಿನಲ್ಲಿದ್ದ ಚಿದಂಬರಂ ಮಾವೋಗಳ ವಿರುದ್ಧ ಸಮರಕ್ಕೆ ಸೇನೆಯನ್ನು ಬಳಸಿಕೊಳ್ಳುವ ಮಾತನಾಡಿದರು.
ವಾಯುಪಡೆ ಬಳಕೆ ಅಗತ್ಯ ಎಂದರು. ಅಂದು ಅವರ ವಾದ ಮತ್ತು ನಿಲುವು ಸಾಧ್ಯ-ಸಾಧ್ಯತೆಗಳ ಪರಿಧಿಯಲ್ಲಿತ್ತೊ ಇಲ್ಲವೋ, ಆದರೆ ಅದಕ್ಕೆ ಕಾಂಗ್ರೆಸ್ ಪಕ್ಷ ಸ್ಪಂದಿಸಿದ್ದಾದರೂ ಹೇಗೆ? ಸೋನಿಯಾ ಮತ್ತು ರಾಹುಲ್ ಗಾಂಧಿಯವರ ಕಿವಿ-ಕಣ್ಣುಗಳಂತಿರುವ ದಿಗ್ವಿಜಯ್ ಸಿಂಗ್ ಹೇಳಿದ್ದಾದರೂ ಏನು? 'ಮಾವೋಗಳ ಸಮಸ್ಯೆಯನ್ನು ಅಂತಃಕರಣದಿಂದ ನೋಡಬೇಕು. ಅವರಿಗೆ ಬೇಕಿರುವುದು ಅಭಿವೃದ್ಧಿ. ಅದು ಸಾಧ್ಯವಾದರೆ ಮಾವೋಗಳನ್ನು ಸುಮ್ಮನಾಗಿಸಬಹುದು. ಚಿದಂಬರಂ ಅವರು ಈ ಅಂಶವನ್ನು ಅರ್ಥಮಾಡಿಕೊಂಡಂತಿಲ್ಲ. ಅವರು ಇದನ್ನು ಶಾಂತಿ-ಸುವ್ಯವಸ್ಥೆಯ ಸಮಸ್ಯೆ ಎಂಬಂತೆ ನೋಡುತ್ತಿದ್ದಾರೆ. ಅವರ ಈ ನಿಲುವಿನಿಂದ ಅಸಂಖ್ಯಾತ ಜನರಿಗೆ ತೊಂದರೆ ಆಗಲಿದೆ. ಚಿದಂಬರಂ ಹಠವಾದಿ. ಒಮ್ಮೆ ಒಂದು ನಿರ್ಧಾರ ಕೈಗೊಂಡರೆ ಅದರಿಂದ ಹಿಂದೆ ಬರಲು ಒಪ್ಪುವುದಿಲ್ಲ. ಆದರೆ ನಕ್ಸಲರ ವಿಷಯದಲ್ಲಿ ಅವರು ತೆಗೆದುಕೊಂಡಿರುವ ನಿಲುವು ಪಕ್ಷಕ್ಕೇ ಒಪ್ಪುವಂತಹುದಲ್ಲ' ಎಂದು ದಿಗ್ವಿಜಯ್ ಸಿಂಗ್ ದಿನ ಪತ್ರಿಕೆಯೊಂದರಲ್ಲಿ ಒಂದು ಪುಟದಷ್ಟು ದೀರ್ಘ ಲೇಖನ ಬರೆದಿದ್ದರು. ಸರ್ಕಾರದ ಆಡಳಿತ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಬಿಂಬಿಸಿಕೊಳ್ಳುವ ಸೋನಿಯಾ ಗಾಂಧಿ ಅಂದು ಮಾಡಿದ್ದೇನು? ಪಕ್ಷದ ಮುಖವಾಣಿ ಸಂದೇಶದಲ್ಲಿ ಬರೆದ ಲೇಖನದಲ್ಲಿ 'ನಕ್ಸಲಿಸಂ ಹಿಂದೆ ಅಡಗಿರುವ ಮೂಲ ಸಮಸ್ಯೆಯನ್ನು ನಾವು ಪರಿಗಣಿಸಿ ಅದಕ್ಕೆ ತಕ್ಕ ಪರಿಹಾರ ರೂಪಿಸಬೇಕು' ಎಂದಿದ್ದರು. ಅಂದರೆ ಪರೋಕ್ಷವಾಗಿ ದಿಗ್ವಿಜಯ್ ಎತ್ತಿದ್ದ ಆಕ್ಷೇಪಣೆಯನ್ನು ಸಮರ್ಥಿಸಿಕೊಂಡಿದ್ದರು. ಇದರ ಪರಿಣಾಮ ನಕ್ಸಲ್ ವಿರುದ್ಧ ಹೋರಾಟದಲ್ಲಿ ಕಂಡಿದ್ದ ಬಿಗಿ ನಿಲುವು ಸಡಿಲವಾಯಿತು. ಆಪರೇಷನ್ ಗ್ರೀನ್ ಹಂಟ್ ಕಾರ್ಯಾಚರಣೆ ನಿರೀಕ್ಷಿತ ವೇಗ ಪಡೆಯಲೇ ಇಲ್ಲ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೆಲವೊಂದು ತೀರ್ಮಾನ ತೆಗೆದುಕೊಂಡಿತ್ತು. ಅದರಲ್ಲಿ ಪ್ರಮುಖವಾದದ್ದೆಂದರೆ ನಕ್ಸಲ್ ದಮನಕ್ಕಾಗಿಯೇ 34 ಹೊಸ ಮೀಸಲು ಬೆಟಾಲಿಯನ್ ಸ್ಥಾಪಿಸುವುದು, ಬಾಧಿತ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ 400 ಪೊಲೀಸ್ ಠಾಣೆ ತೆರೆಯುವುದು, ರಸ್ತೆ ಸಂಪರ್ಕ ಕಲ್ಪಿಸುವುದು ಇವೇ ಮುಂತಾದವಿದ್ದವು. ಆದರೆ ಇದಾಗಿ ಮೂರು ವರ್ಷಗಳಲ್ಲಿ ಆಗಿರುವುದಾದರೂ ಏನು? ಅತ್ಯಂತ ಬಾಧಿತ ಪ್ರದೇಶವಾಗಿರುವ ಛತ್ತೀಸ್ಗಡದಲ್ಲಿ 2 ಲಕ್ಷ ಚದರ ಕಿ.ಮೀ. ಪ್ರದೇಶದ ಮೇಲೆ ನಿಗಾ ವಹಿಸಲು ಇರುವುದು 25 ಸಾವಿರ ಪೊಲೀಸರು. ನಕ್ಸಲ್ ವಿರೋಧಿ ಪಡೆಯ ಯೋಧರನ್ನು ಆ ಕೆಲಸ ಬಿಟ್ಟು ಗಣ್ಯರ ಭದ್ರತೆಗೆ ನಿಯೋಜಿಸಲಾಗಿದೆ. ಅಲ್ಲಿ ಇನ್ನು 100 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳ ಹುದ್ದೆ ಖಾಲಿ ಬಿದ್ದಿವೆ. ನಕ್ಸಲರ ಚಲನವಲನದ ಮೇಲೆ ನಿಗಾ ವಹಿಸಲು ಡ್ರೋನ್ ವಿಮಾನಗಳ ಬಳಕೆ ಹೇಳಿದ ಪ್ರಮಾಣದಲ್ಲಿ ಆಗುತ್ತಿಲ್ಲ. ಇದೆಲ್ಲ ಏನನ್ನು ಹೇಳುತ್ತದೆ? ಈ ಸರ್ಕಾರ ಹೇಳುವುದಕ್ಕೂ ಮಾಡುವುದಕ್ಕೂ ಅಜಗಜಾಂತರ ಇದೆ ಎನಿಸುವುದಿಲ್ಲವೇ? ಇಂದು ಮಹೇಂದ್ರ ಕರ್ಮಾ ಸಾವಿನಲ್ಲಿ ದೇಶದ ಸಾರ್ವಭೌಮತ್ವಕ್ಕೆ ಸವಾಲನ್ನು ಕಾಣುವ ಕಾಂಗ್ರೆಸ್ಪಕ್ಷ ಅದೇ ಮಹೇಂದ್ರ ಕರ್ಮಾ ಅವರನ್ನು ಎಷ್ಟರ ಮಟ್ಟಿಗೆ ಗೌರವಿಸಿತ್ತು? ನಕ್ಸಲರ ವಿರುದ್ಧ ಸಮರಕ್ಕೆ ಬುಡಕಟ್ಟು ಜನರನ್ನೇ ಬಳಸಿಕೊಂಡು ಅವರು ಸಾಲ್ವಾ ಜುಡಂ ಎಂಬ ಸಂಘಟನೆಯನ್ನು ಕಟ್ಟಿ ಹೋರಾಟದ ಮುಂಚೂಣಿಗೆ ಇಳಿದಾಗ ಕಾಂಗ್ರೆಸ್ನ ಯಾವ ನಾಯಕನೂ ಅವರನ್ನು ಬೆಂಬಲಿಸಲಿಲ್ಲ. ಬೆಂಬಲ ಇರಲಿ, ಅವರನ್ನು ಜರಿದವರೇ ಹೆಚ್ಚು.
ಛತ್ತೀಸ್ಗಡ ಪ್ರತ್ಯೇಕ ರಾಜ್ಯವಾದಾಗ ಆ ಹೋರಾಟದಲ್ಲಿ ಮೊದಲಿಗರಾಗಿದ್ದ ಕರ್ಮಾ ಅವರನ್ನು ಕಡೆಗಣಿಸಿ ಅಜಿತ್ ಜೋಗಿಯನ್ನು ಸಿಎಂ ಗಾದಿಯಲ್ಲಿ ಕುಳ್ಳಿರಿಸಿದ್ದು ಇದೇ ಕಾಂಗ್ರೆಸ್ ಹೈಕಮಾಂಡ್ ಅಲ್ಲವೇ? ಇಂದು ಮುಸ್ಲಿಂ ಭಯೋತ್ಪಾದಕ ಸಂಘಟನೆಗಳಷ್ಟೇ ಈ ಮಾವೋವಾದಿ ಭಯೋತ್ಪಾದನೆ ಭಾರತದ ಇರುವಿಕೆಗೆ ದೊಡ್ಡ ಸವಾಲು ಎಸೆದಿದೆ. ರಾಜಕೀಯ ಮುಖಂಡರ ಮೊಸಳೆ ಕಣ್ಣೀರಿನಿಂದ ಈ ಸವಾಲು ಗೆಲ್ಲುವುದು ಸಾಧ್ಯವಿಲ್ಲ. ರಾಜಕೀಯ ದೂರದೃಷ್ಟಿ ಮತ್ತು ಗಟ್ಟಿಗತನ ಪ್ರದರ್ಶಿಸಬೇಕಿದೆ. ಅದನ್ನು ಈ ಸರ್ಕಾರದಿಂದ ನಿರೀಕ್ಷಿಸುವುದು ಅಪರಾಧವೇ ಸರಿ.
- ಕೆ.ಎಸ್.ಜಗನ್ನಾಥ್
jagannath.kudinoor@gmail.com