ಅಂಕಣಗಳು

ಭಾರತ- ಜಪಾನ್ ಸಂಬಂಧಕ್ಕೆ ಚೀನಾ ಕಾರಣ!

ಭಾರತ- ಜಪಾನ್ ಸಂಬಂಧಕ್ಕೆ ಚೀನಾ ಕಾರಣ!
ಆ್ಯಂಫಿಬಿಯನ್ ಯುದ್ಧವಿಮಾನ
Published On :

ಪ್ರಧಾನಿ ಸಿಂಗ್ ಅವರ ಜಪಾನ್‌ಗೆ ಭೇಟಿ ನೀಡಿದ್ದಾರೆ. ಹಾಗಂತ ಮನಮೋಹನ್ ಸಿಂಗ್ ಅವರಿಗೆ ಟೋಕಿಯೋದ ಮೇಲೆ ಮೋಹ ಹೆಚ್ಚಾಗಿದೆ ಎಂದರ್ಥವಲ್ಲ. ಇದನ್ನು 'ಚಾಣಾಕ್ಷ ಪ್ರೀತಿ' ಎಂದು ಕರೆಯುವುದೇ ಒಳಿತು.
ಪ್ರಧಾನಿ ಮನಮೋಹನ್ ಸಿಂಗ್ ಅವರ ಜಪಾನ್ ಭೇಟಿಯನ್ನು 'ಭಾರತ ಮತ್ತು ಜಪಾನ್ ನಡುವಿನ ಯುದ್ಧತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಬಲಿಷ್ಠ ಪಡಿಸುವ ಪ್ರಯತ್ನ' ಎಂದು ಹೇಳಲಾಗಿದೆ.
ಈ ಬಾರಿಯ ಜಪಾನ್ ಭೇಟಿಯಿಂದತೂ ಭಾರತಕ್ಕೆ ಭರ್ಜರಿ ಕೊಡುಗೆ ಸಿಕ್ಕಿದೆ. 'ಮುಂಬೈ ಮೆಟ್ರೋ ಲೈನ್ 3' ಯೋಜನೆಗಾಗಿ ಭಾರತಕ್ಕೆ 71 ಬಿಲಿಯನ್ ಯೆನ್(ಸುಮಾರು 7 ಮಿಲಿಯನ್ ಅಮೆರಿಕನ್ ಡಾಲರ್‌ಗಳು)ನಷ್ಟು ಸಾಲ ಕೊಡುವುದಕ್ಕೆ ಜಪಾನ್ ಒಪ್ಪಿಕೊಂಡಿದೆ. ಅಲ್ಲದೆ ಇನ್ನೂ 8 ಯೋಜನೆಗಳಿಗಾಗಿ ಅದು ಸಾಲ ಕೊಡಲಿದ್ದು, ಒಟ್ಟಾರೆ 353.106 ಬಿಲಿಯನ್ ಯೆನ್( 3.47 ಬಿಲಿಯನ್ ಡಾಲರ್ಸ್)ನಷ್ಟು ಹಣ ಭಾರತದ ಕೈಸೇರಲಿದೆ. ಇದಷ್ಟೇ ಅಲ್ಲದೆ ಹೈದರಾಬಾದ್‌ನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎರಡನೇ ಹಂತದ ಕ್ಯಾಂಪಸ್ ನಿರ್ಮಾಣ ಯೋಜನೆಗೆ 17.7 ಬಿಲಿಯನ್ ಯೆನ್(174 ಮಿಲಿಯನ್ ಡಾಲರ್ಸ್) ಮತ್ತು ತಮಿಳುನಾಡಿನ 'ಬಂಡವಾಳ ಹೂಡಿಕೆ ಪ್ರಚಾರ' ಯೋಜನೆಗೆ 13 ಬಿಲಿಯನ್ ಯೆನ್ (127 ಮಿಲಿಯನ್ ಡಾಲರ್ಸ್)ನಷ್ಟು ಸಾಲ ಕೊಡುವುದಾಗಿ ಜಪಾನ್ ವಚನ ನೀಡಿದೆ.
ಅಂದರೆ, ಈ ಮೊತ್ತವನ್ನೆಲ್ಲ ಸೇರಿಸಿದರೆ ಒಟ್ಟಾರೆ 4.46 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟಾಗುತ್ತದೆ. ಪ್ರಧಾನಿ ಸಿಂಗ್ ಮತ್ತು ಜಪಾನ್ ಪ್ರಧಾನಿ ಶಿನ್ಜೋ ಅಬೆಯವರ ಏಕೈಕ ಭೇಟಿಯಲ್ಲಿಯೇ ಇಷ್ಟೊಂದು ಮೊತ್ತವನ್ನು ಭಾರತ ಬಾಚಿಕೊಂಡಿದೆ!
ಎಲ್ಲಕ್ಕಿಂತ ಮುಖ್ಯವಾಗಿ, ಭಾರತದ ಉದ್ದಗಲಕ್ಕೂ ಆಗಲಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗಾಗಿ ಜಪಾನ್‌ನ ವಿನಿಯೋಗವಾಗಲಿದೆ. ಜೊತೆಗೆ ಆ ದೇಶದ ತಾಂತ್ರಿಕ ನೆರವನ್ನೂ ನಾವು ಪಡೆಯಲಿದ್ದೇವೆ. ಹಾಗಂತ ಇದನ್ನು ಭಾರತದ ಆರ್ಥಿಕತೆಯನ್ನು ಎತ್ತಿ ಹಿಡಿಯಲು ಕೊಡಲಾಗುತ್ತಿರುವ 'ಅನುಕಂಪ'ದ ಹಣ ಎಂದು ಭಾವಿಸುವುದು ಮೂರ್ಖತನವಾದೀತು.
ನವೆಂಬರ್ 2010ರಂದು ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಸುಮಾರು 20 ಯೋಜನೆಗಳಿಗೆ ಸಂಬಂಧಿಸಿದಂತೆ 10 ಬಿಲಿಯನ್ ಡಾಲರ್‌ಗಳ ಒಪ್ಪಂದವನ್ನು ಭಾರತದೊಂದಿಗೆ ಮಾಡಿಕೊಂಡರು. ಈ ಒಪ್ಪಂದದಿಂದ ಹಿಗ್ಗಿದ ಅಮೆರಿಕದ ಅಧ್ಯಕ್ಷರು, ದೇಶಕ್ಕೆ ಮರಳಿದಾಗ 'ಹೇಗೆ ತಮ್ಮ ಭಾರತ ಭೇಟಿಯಿಂದಾಗಿ ಅಮೆರಿಕದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ' ಎನ್ನುವುದನ್ನು ತಮ್ಮ ಜನರಿಗೆ ತಿಳಿಸುವುದಾಗಿ ಹೇಳಿದ್ದರು.
ಒಮ್ಮೆ ಊಹಿಸಿಕೊಳ್ಳಿ. ಜಪಾನ್‌ನ ಆರ್ಥಿಕ ಸಹಾಯದಿಂದಾಗಿ ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಯಾವಮಟ್ಟದಲ್ಲಿ ಉದ್ಯೋಗಗಳು ಹುಟ್ಟಿಕೊಳ್ಳಬಹುದು ಎನ್ನುವುದನ್ನು?
ಇಷ್ಟಾದರೂ ಜಪಾನ್ ಎದೆಯುಬ್ಬಿಸಿಕೊಂಡು ಅಹಂಕಾರದಿಂದ ಅಡ್ಡಾಡುತ್ತಿಲ್ಲ. ಭಾರತದೊಂದಿಗೆ ವಿನಮ್ರವಾಗಿಯೇ ನಡೆದುಕೊಳ್ಳುತ್ತಿದೆ. 'ನಿಜವಾದ ಸ್ನೇಹಿತ' ಎನ್ನುವವನಲ್ಲಿ ಇರಬೇಕಾದ ಗುಣಗಳನ್ನು ಈಗ ನಾವು ಅದರಲ್ಲಿ ಕಾಣಬಹುದು.
ಹಾಗಂತ ಜಪಾನಿಯರಿಗೆ 'ರಾತ್ರೋರಾತ್ರಿ' ಭಾರತೀಯರ ಮೇಲೆ ಪ್ರೀತಿ ಪುಟಿದೆದ್ದಿತು ಎಂದರ್ಥವಲ್ಲ. ಅಥವಾ ಸಕಾರಣವಿಲ್ಲದೆ ಒಮ್ಮೆಲೆ ಅವರು ಭಾವುಕತೆಗೆ ಬಿದ್ದು 'ಹಿಂದಿ-ಜಪಾನಿ ಭಾಯ್ ಭಾಯ್‌' ಎನ್ನುವ ಅರ್ಥವಿಲ್ಲದ ಐಡಿಯಾಕ್ಕೆ ಬಲಿಯಾದರು ಎನ್ನುವುದೂ ಅಲ್ಲ. ಒಂದು ವಿಷಯವನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ/ ಸ್ನೇಹದಲ್ಲಿ 'ಪುಕ್ಕಟೆ' ಊಟ-ಉಪಚಾರಗಳಾಗುವುದಿಲ್ಲ.
ಒಂದಂತೂ ನಿಜ. ಇಂದು ಚೀನಾದ 'ಶಾಂತಿಯುತ ಬೆಳವಣಿಗೆ'(?)ಯಿಂದಾಗಿ ಪ್ರಪಂಚದ ಬೇರೆಲ್ಲಾ ರಾಷ್ಟ್ರಗಳಿಗಿಂತ ಅತಿ ಹೆಚ್ಚು ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರ ಜಪಾನ್. ಆದರೆ ಭಾರತ ಕೂಡ ಚೀನಾವನ್ನು 'ಅಪಾಯಕಾರಿ' ಎಂದೇ ಭಾವಿಸುತ್ತದೆ. ಈ ಕಾರಣಕ್ಕಾಗಿಯೇ ಜಪಾನ್ ಮತ್ತು ಚೀನಾ ನಡುವಿನ ಸಂಬಂಧ ಗಟ್ಟಿಗೊಳ್ಳುತ್ತಿದೆ. ಹಾಗಾಗೇ ಜಪಾನ್ ಪ್ರಧಾನಿ ಶಿನೋ ಅಬೆ 2007ರಂದು ದೆಹಲಿಯ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಭಾರತೀಯ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದಾಗ, ಇಂಡೋ-ಜಪಾನ್ ಸಂಬಂಧವನ್ನು 'ಎರಡು ಸಮುದ್ರಗಳ ಸಂಗಮ' ಎಂದು ಬಣ್ಣಿಸಿದ್ದರು!
ಅಬೆ ಅವರು ಮೊದಲಿನಿಂದಲೂ 'ಮುಲಾಜಿಗೆ ಬೀಳದೆ' ಚೀನಾದ ನೀತಿಗಳನ್ನು, ನಡೆಯನ್ನು ಹಿಗ್ಗಾ ಮುಗ್ಗಾ ಖಂಡಿಸುತ್ತಾ ಬಂದಿರುವ ವ್ಯಕ್ತಿ. ದಕ್ಷಿಣ ಚೀನಾ ಸಮುದ್ರ ಎಂದಿಗೂ 'ಲೇಕ್ ಬೀಜಿಂಗ್‌' ಆಗದಂತೆ(ಸಂಪೂರ್ಣವಾಗಿ ಚೀನಾದ ಹಿಡಿತಕ್ಕೆ ಬರದಂತೆ) ನೋಡಿಕೊಳ್ಳುತ್ತೇನೆ ಎಂದು ಅವರು ಹೇಳುತ್ತಾರೆ. ಅಲ್ಲದೆ ಅವರು ಜಪಾನ್, ಭಾರತ, ಆಸ್ಟ್ರೇಲಿಯಾ ಮತ್ತು ಅಮೆರಿಕವನ್ನೊಳಗೊಂಡ ಎಡಿಎಸ್‌ಡಿ ಒಕ್ಕೂಟವನ್ನು(ಏಷಿಯಾ ಡೆಮಾಕ್ರಟಿಕ್ ಸೆಕ್ಯೂರಿಟಿ ಡೈಮಂಡ್) ಸ್ಥಾಪಿಸುವ ಪ್ರಸ್ತಾವನೆಯನ್ನೂ ಮುಂದಿಟ್ಟಿದ್ದಾರೆ.
ಡಿಸೆಂಬರ್ 2012ರಂದು ಸಹಿ ಮಾಡಿದ ಲೇಖನವೊಂದರಲ್ಲಿ ಅಬೆ ಹೇಳಿದ್ದು ಹೀಗೆ: 'ಜಪಾನ್ ಅಭಿವೃದ್ಧಿಯಾದಂತೆಲ್ಲ ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿಯೂ ಹೆಚ್ಚು ಬದಲಾವಣೆಗಳಾಗತೊಡಗುತ್ತವೆ. ಅದರ ಜೊತೆಗೆ ಅಲ್ಲಿನ ಜಂಜಾಟಗಳೂ ಹೆಚ್ಚಾಗುತ್ತವೆ. ಆಗ ಜಪಾನ್ ಮತ್ತು ದಕ್ಷಿಣ ಕೋರಿಯಾದ ನೌಕಾಯಾನದ ಸ್ವಾತಂತ್ರ್ಯಕ್ಕೆ ಹೆಚ್ಚು ಸಮಸ್ಯೆಗಳು ಎದುರಾಗುತ್ತವೆ. ದಕ್ಷಿಣ ಚೀನಾ ಸಮುದ್ರ ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಬರುತ್ತದಾದರೂ ಅಮೆರಿಕ ಸೇರಿದಂತೆ ಜಪಾನ್‌ಗೂ ಕೂಡ ನೌಕಾ ಸ್ವತ್ತುಗಳನ್ನು ಆ ಭಾಗದಲ್ಲಿ ಸಾಗಿಸಲು ತೊಡಕು ಉಂಟಾಗುತ್ತದೆ'
ಈ ಕಾರಣದಿಂದಾಗಿಯೇ ಅಬೆ, ಹಿಂದೂ ಮಹಾಸಾಗರದಿಂದ ಪಶ್ಚಿಮ ಪೆಸಿಫಿಕ್‌ವರೆಗೆ ಹರಡಿಕೊಂಡಿರುವ ಸಮಾನ ಕಡಲ ಮಾರ್ಗವನ್ನು ಕಾಪಾಡಲು ಭಾರತ, ಜಪಾನ್, ಅಮೆರಿಕ ಮತ್ತು ಆಸ್ಟ್ರೇಲಿಯಾವನ್ನೊಳಗೊಂಡ ಒಕ್ಕೂಟವೊಂದನ್ನು ಸ್ಥಾಪಿಸುವ ಕೆಲಸವಾಗಬೇಕು ಎನ್ನುತ್ತಾರೆ. ಅಲ್ಲದೆ ಇನ್ನೊಂದು ದಶಕದಲ್ಲಿ ಇಂಡೋ-ಜಪಾನ್ ಸಂಬಂಧ, ಜಪಾನ್-ಚೀನಾ ಮತ್ತು ಜಪಾನ್-ಅಮೆರಿಕ ಸಂಬಂಧಗಳಿಗಿಂತಲೂ ಬಲಿಷ್ಠವಾಗಲಿದೆ ಎಂದು ತಮ್ಮ ಲೇಖನದಲ್ಲಿ ಅವರು ಹೇಳುತ್ತಾರೆ.
ಅಬೆ ಮತ್ತು ಸಿಂಗ್ ಅವರ ಮಾತುಕತೆಯ ನಂತರ ಭಾರತ-ಜಪಾನ್ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಏನಿದೆಯೋ ನೋಡಿ. ಮನಮೋಹನ್ ಸಿಂಗ್ ಅವರು ಅಬೆ ಅವರ ಕನಸನ್ನು ಸಾಕಾರಗೊಳಿಸಲು ತಾವೂ ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಇಂಡೋ-ಜಪಾನ್ ದ್ವಿಪಕ್ಷೀಯ ಹೇಳಿಕೆಯಲ್ಲಿನ ಆಯ್ದ ಭಾಗ ಹೀಗಿದೆ:
'ಎರಡೂ ರಾಷ್ಟ್ರಗಳ ಪ್ರಧಾನಿಗಳು ರಾಜಕೀಯ ವಿನಿಮಯ, ಮಾತುಕತೆ ಮತ್ತು ಎಲ್ಲಾ ಹಂತದಲ್ಲಿನ ನೀತಿ ಸಮನ್ವಯದಲ್ಲಾಗುತ್ತಿರುವ ಬೆಳವಣಿಗೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಅವರು  ಮಂತ್ರಾಲಯ ಮಟ್ಟದ ವಾರ್ಷಿಕ ಮಾತುಕತೆಗಳು ಮತ್ತು ವಿನಿಮಯಗಳ ಬಗ್ಗೆ, ಅದರಲ್ಲೂ ನಿರ್ದಿಷ್ಟವಾಗಿ ರಕ್ಷಣಾತಂತ್ರದ ಬಗೆಗಿನ ವಿದೇಶಾಂಗ ಸಚಿವರ ಮಾತುಕತೆಯ ಬಗ್ಗೆ ಧನಾತ್ಮಕ ಮೌಲ್ಯಮಾಪನ ಮಾಡಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಗಳು, ವಿದೇಶಾಂಗ ಕಚೇರಿಯ ಸಮಾಲೋಚನೆಗಳು, ರಕ್ಷಣಾ ತಂತ್ರಗಳ ಮಾತುಕತೆ, ಭಾರತ-ಅಮೆರಿಕ-ಜಪಾನ್ ನಡುವಿನ ತ್ರಿಪಕ್ಷೀಯ ಮಾತುಕತೆ ಮತ್ತು ಇನ್ನಿತರ ಕ್ಷೇತ್ರಗಳಾದ ಸೈಬರ್, ಉಗ್ರ ನಿಗ್ರಹ ಮತ್ತು ಆರ್ಥಿಕ ಪಾಲುದಾರಿಕೆಯ ಬಗೆಗಿನ ಪ್ರಮುಖ ಮಾತುಕತೆಗಳ ವಿಷಯವಾಗಿ ಇದುವರೆಗೂ ಸಾಧಿಸಲಾದ ಯಶಸ್ಸಿನ ಬಗ್ಗೆ ಎರಡೂ ರಾಷ್ಟ್ರಗಳ ಪ್ರಧಾನ ಮಂತ್ರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು 29 ಜನವರಿ 2013ರಂದು ದೆಹಲಿಯಲ್ಲಿ ಎರಡೂ ರಾಷ್ಟ್ರಗಳ ನಡುವಿನ ಸಮುದ್ರ ಸಂಬಂಧಿ ಮಾತುಕತೆ ಆರಂಭವಾಗಿದ್ದನ್ನುಅವರು ಸ್ವಾಗತಿಸಿದ್ದಾರೆ.
ಭಾರತ ಮತ್ತು ಜಪಾನ್ ನಡುವಿನ ಭದ್ರತಾ ಸಹಕಾರ ಜಂಟಿ ಘೋಷಣೆ ಆಧಾರದ ಮೇಲೆ ಎರಡೂ ದೇಶಗಳ ನಡುವಿನ ರಕ್ಷಣಾ ಸಂಬಂಧಗಳು ಇನ್ನಷ್ಟು ಸುಧಾರಣೆಯಾಗಲಿವೆ ಎಂದು ಈ ಜೋಡಿ ವಿಶ್ವಾಸ ವ್ಯಕ್ತಪಡಿಸಿದೆ. ಇನ್ನು ಜೂನ್ 2012ರಂದು ಜಪಾನ್‌ನ ಕಡಲ ತೀರದಲ್ಲಿ ಭಾರತದ ನೌಕಾಪಡೆ(ಐಎನ್) ಮತ್ತು ಜಪಾನ್‌ನ ಮೆರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್(ಜೆಎಮ್‌ಎಸ್‌ಡಿಎಫ್) ನಡುವೆ ನಡೆದ ಮೊದಲ ಜಂಟಿ ಸಮಾರಾಭ್ಯಾಸದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅಬೆ ಮತ್ತು ಸಿಂಗ್, ಮುಂಬರುವ ವರ್ಷಗಳಲ್ಲಿ ಇಂತಹ ಸಮರಾಭ್ಯಾಸಗಳನ್ನು ನಿರಂತರವಾಗಿ ಮತ್ತು ಇನ್ನಷ್ಟು ತೀವ್ರ ಗತಿಯಿಂದ ನಡೆಸಲಿದ್ದೇವೆ ಎಂದು ಹೇಳಿದರು. ಅಲ್ಲದೆ ಜಪಾನ್ ತನ್ನ ್ಖಖ-2 ಆ್ಯಂಫಿಬಿಯನ್ ಏರ್‌ಕ್ರಾಫ್ಟ್ (ರಕ್ಷಕ ವಿಮಾನ)ಅನ್ನು ಭಾರತಕ್ಕೆ ಸಪ್ಲೈ ಮಾಡುವುದಾಗಿ ಹೇಳಿದೆ. (ಆ್ಯಂಫಿಬಿಯನ್ ವಿಮಾನ ಬಹುಪಯೋಗಿಯಾಗಿದ್ದು, ನೀರು ಮತ್ತು ನೆಲದ ಮೇಲೆ ಲ್ಯಾಂಡ್ ಆಗುತ್ತದೆ. ನಾಗರಿಕರ ರಕ್ಷಣೆ ಮತ್ತು ಯುದ್ಧ ಕಾರ್ಯಾಚರಣೆಗಳಿಗೂ ಇದರ ಬಳಕೆಯಾಗುತ್ತದೆ). ಈ ನಿಟ್ಟಿನಲ್ಲಿ ಸಾಧ್ಯತೆಗಳನ್ನು ಅನ್ವೇಷಿಸಲು ಜಂಟಿ ಕ್ರಿಯಾ ಸಮಿತಿಯೊಂದನ್ನು ರಚಿಸಲು ಎರಡೂ ದೇಶಗಳು ನಿರ್ಧರಿಸಿವೆ.
***
ಹಿಂದೆಂದೂ ಇರದ ರೀತಿಯಲ್ಲಿ ಈಗ ಭಾರತ ಮತ್ತು ಜಪಾನ್ ನಡುವಿನ ಸ್ನೇಹ ಗಟ್ಟಿಗೊಂಡಿದೆ. ಅದು ಭವಿಷ್ಯದಲ್ಲಿ ನಿಸ್ಸಂಶಯವಾಗಿ ಇನ್ನಷ್ಟು ಭದ್ರವಾಗಲಿದೆ. ಇಂಡೋ-ಜಪಾನ್ ಸಂಬಂಧ ವೃದ್ಧಿಸಲು ಪರೋಕ್ಷವಾಗಿ ಕಾರಣವಾದ ಚೀನಾಕ್ಕೆ ನಾವು ಧನ್ಯವಾದ ಹೇಳಲೇಬೇಕು!
ಒಂದು ಬಲೂನನ್ನು ಒಂದು ಕಡೆಯಿಂದ ಒತ್ತಿದರೆ ಅದರ ಇನ್ನೊಂದು ಭಾಗ ಉಬ್ಬುತ್ತದೆ. ಚೀನಾ ಒಂದೇ ಬಾರಿಗೆ ಎರಡೂ ಕಡೆಯಿಂದ ಬಲೂನನ್ನು ಒತ್ತಿದೆ. ಅದರ ಪರಿಣಾಮವನ್ನು ಅದು ಈಗ ಎದುರಿಸಲಿದೆ!

 -ರಾಜೀವ್ ಶರ್ಮಾ
ರಕ್ಷಣಾ ಪರಿಣತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.