ಯಾಕ್ರೀ ಹೊಗೆ ಹಾಕಿಸ್ಕೋತೀರಿ?

ಪ್ರತಿದಿನ, ಪ್ರತಿ ಕ್ಷಣ ಲಕ್ಷಾಂತರ ಮಂದಿಯನ್ನು ಸ್ಮಶಾನ ಪಾಲು ಮಾಡುತ್ತಿದೆ ಧೂಮಪಾನ.
ಯಾಕ್ರೀ ಹೊಗೆ ಹಾಕಿಸ್ಕೋತೀರಿ?
Updated on: 

ಪ್ರತಿದಿನ, ಪ್ರತಿ ಕ್ಷಣ ಲಕ್ಷಾಂತರ ಮಂದಿಯನ್ನು ಸ್ಮಶಾನ ಪಾಲು ಮಾಡುತ್ತಿದೆ ಧೂಮಪಾನ. ಹಳ್ಳಿಯ ಬಡ ಕೂಲಿ ಕಾರ್ಮಿಕ ಬೀಡಿಗೆ ಬಲಿಯಾದರೆ, ಅನುಕೂಲಸ್ಥ ಸಿಗರೇಟಿನ ದಾಸನಾಗಿ ನರಳುತ್ತಿದ್ದಾನೆ. ಎಷ್ಟೇ ಬಿಗಿ ಕಾನೂನು ಜಾರಿಗೆ ಬಂದರೂ ಇದರ ಹತೋಟಿ ಮತ್ತು ನಿರ್ವಹಣೆ ಸಾಧ್ಯವಾಗಲಿಲ್ಲ. ಅಂಗಡಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಹೊಗೆಸೊಪ್ಪಿನ ವಿವಿಧ ಉತ್ಪನ್ನಗಳನ್ನು ಯಾವುದೇ ಶರತ್ತಿಲ್ಲದೆ ಅಪ್ರಾಪ್ತ ವಯಸ್ಸಿನವರೂ ಖರೀದಿಸಬಹುದಾಗಿದೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಮುಖ್ಯವಾಗಿ ಯುವಜನತೆ ಧೂಮಪಾನದ ಚಟಕ್ಕೆ ಬಲಿಯಾಗುತ್ತಿರುವುದು ಈ ಶತಮಾನದ ಬಲುದೊಡ್ಡ ದುರಂತ.  
ಭಾರತದಲ್ಲಿ ಧೂಮಪಾನಿಗಳು ಶೇ.3ರಷ್ಟು ವೃದ್ಧಿಯಾಗಿದ್ದಾರೆ. ಅಪಾಯಕಾರಿ ಹೊಗೆಸೊಪ್ಪನ್ನು ವಿವಿಧ ಮಾದಕ ವಸ್ತುಗಳ ಮೂಲಕ(ಬೀಡಿ, ಸಿಗರೇಟು, ಗಾಂಜಾ, ಬಂಗಿ, ಪಾನ್ ಪರಾಗ್, ಗುಟ್ಕಾ, ಚಿರುಟ...) ಜಗತ್ತಿಗೆ ಪರಿಚಯಿಸುತ್ತಿರುವುದು ತಂಬಾಕು ಸೇವಿಸುವವರ ವೃದ್ಧಿಗೆ ಪ್ರಮುಖ ಕಾರಣವಾಗಿದೆ. ಸಿನೆಮಾ ನಟರು, ಕ್ರಿಕೆಟ್ ಆಟಗಾರರು, ಸೆಲೆಬ್ರಿಟಿಗಳು, ಧೂಮಪಾನದ ಜಾಹಿರಾತು ನೀಡಿ ದೇಶಕ್ಕೆ, ಮನುಕುಲಕ್ಕೆ ಅನ್ಯಾಯ ಮಾಡುತ್ತಿದ್ದಾರೆ.  
ಸಿಗರೇಟಿನಲ್ಲಿ ಹೊಗೆಸೊಪ್ಪಿನ ಜೊತೆಯಲ್ಲಿ 500ಕ್ಕೂ ಮಿಕ್ಕಿದ ಮಾರಣಾಂತಿಕ ರಾಸಾಯನಿಕಗಳನ್ನು ಬೆರೆಸುತ್ತಾರೆ. ಈ ಚಟಕ್ಕೆ ಬಲಿಯಾದ ಶೇ.20 ಮಂದಿಗೆ ಹೃದ್ರೋಗ, ಶೇ.40 ಪಾಲು ಜನರಿಗೆ ಕ್ಯಾನ್ಸರ್, ಶೇ.40 ಪಾಲು ಜನರು ವಿವಿಧ ಕಾಯಿಲೆಗಳಿಗೆ ಬಲಿಯಾಗುವುದು ಸರ್ವೇ ಸಾಮಾನ್ಯವಾಗಿದೆ. ತಂಬಾಕು ಸೇವನೆ, ಬೀಡಿ ಸಿಗರೇಟು ಅಪಾಯಕಾರಿ ಎಂದು ತಿಳಿದರೂ ವಿದ್ಯಾವಂತರೇ, ಬುದ್ಧಿವಂತರೇ ಈ ಚಟಕ್ಕೆ ಬೀಳುತ್ತಿದ್ದಾರೆ. ಆರಂಭದಲ್ಲಿ ಕ್ಷಣಿಕ ಸುಖಕ್ಕಾಗಿ ಬಳಸಿ ಈ ಮೂಲಕ ರೋಗಗ್ರಸ್ಥನಾಗಿ ತನ್ನ ಶಾಶ್ವತ ಆನಂದವನ್ನು ನಾಶಮಾಡುತ್ತಿರುವ ಈ ಧೂಮಪಾನದಿಂದ ಹೊರಬರುವುದು ಅಷ್ಟು ಸುಲಭವೇನಲ್ಲ.
 ಮಾನಸಿಕ ಒತ್ತಡ, ಕುತೂಹಲ, ಲಭ್ಯತೆ, ಜಾಹೀರಾತು, ಪ್ರತಿಷ್ಠೆ, ಸಹವಾಸದೋಷ, ವಂಶಪಾರಂಪರ್ಯ, ಒತ್ತಡ, ಸಂತೋಷ, ಜಿಗುಪ್ಸೆ, ಒಂಟಿತನ, ಮೂಢನಂಬಿಕೆಗಳೇ ಇಂತಹ ಚಟಗಳಿಗೆ ಜನ ಬಲಿಯಾಗಲು ಕಾರಣವಾಗುತ್ತಿದೆ. ಬುದ್ದಿ ಹೇಳಬೇಕಾದ ತಂದೆ ತಾಯಿಗಳು, ಔಷಧಿ ಕೊಡುವ ವೈದ್ಯರು, ಪಾಠ ಮಾಡುವ ಗುರುಗಳು, ದೇಶ ಆಳುವ ರಾಜಕಾರಣಿಗಳು ಹೀಗೆ ಎಲ್ಲಾ ವರ್ಗದ ಜನರು ಧೂಮಪಾನದ ಆಹ್ವಾನಕ್ಕೆ ಮೋಡಿಯಾಗಿರುವುದು ನಾವು ಕಾಣುವ ಸತ್ಯ ಸಂಗತಿಯಾಗಿದೆ. 

ವ್ಯಸನಕ್ಕೆ ಮದ್ದಿಲ್ಲ: ಧೂಮಪಾನ ಮತ್ತಿತರ ಚಟಕ್ಕೆ ಬಲಿಯಾದವರಿಗೆ ಇದರಿಂದ ದೂರ ನಿಲ್ಲಲು ನಿಖರವಾದ ಜೌಷಧಿಗಳಿಲ್ಲ. ಮನೋಸ್ಥೈರ್ಯ, ಆತ್ಮವಿಶ್ವಾಸವೇ ಇದರ ಆರಂಭ ಮತ್ತು ತಡೆಗಟ್ಟುವಿಕೆಗೆ ಚಿಕಿತ್ಸೆಯಾಗಿದೆ.  2030ರ ವೇಳೆಗೆ ಹೊಗೆಸೊಪ್ಪು ರಹಿತ ಪ್ರಪಂಚವನ್ನು ಸೃಷ್ಟಿಸುವ ವಿಶ್ವ ಆರೋಗ್ಯ ಸಂಸ್ಥೆಯ ಕನಸನ್ನು ನನಸುಗೊಳಿಸಲು ನಾವೆಲ್ಲರೂ ಧೂಮಪಾನಮುಕ್ತ ಮನೆಗಳ ಕನಸು ಕಾಣಬೇಕು. ಇಂದು ಮೇ 31, ವಿಶ್ವ ತಂಬಾಕು ವಿರೋಧಿ ದಿನ. ಈ ದಿನವನ್ನು ಧೂಮಪಾನದ ಚಟ ಹೊಂದಿದ್ದವರು ಚಟ ನಿಲ್ಲಿಸುವ ಉದ್ಘಾಟನೆಯ ದಿನವನ್ನಾಗಿ ಆಚರಿಸಲೆಂಬುದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಹಾರೈಕೆಯಾಗಿದೆ.  
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದ ವೇದಿಕೆಯು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ ನಿರಂತರವಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳು, ಮದ್ಯಪಾನ, ಧೂಮಪಾನದ ವಿರುದ್ಧ ಜಾಗೃತಿ ಮೂಡಿಸುತ್ತಾ ಬಂದಿದೆ. ವರ್ಷಕ್ಕೆ ಕನಿಷ್ಠ 811 ಶಾಲಾ ಕಾಲೇಜುಗಳ 1,06,436 ವಿದ್ಯಾರ್ಥಿಗಳಿಗೆ ಕಾರ್ಯಾಗಾರ, ಮಾಹಿತಿ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ 411 ಸಂಪನ್ಮೂಲ ವ್ಯಕ್ತಿಗಳನ್ನು ತರಬೇತುಗೊಳಿಸಿ ಪಠ್ಯವಸ್ತು ನೀಡಲಾಗಿದೆ. ವೇದಿಕೆಯು ಪ್ರಸ್ತುತ ರಾಜ್ಯಮಟ್ಟಕ್ಕೆ ವಿಸ್ತಾರಗೊಂಡಿದ್ದು, 8 ಸಾವಿರಕ್ಕೂ ಅಧಿಕ ಮಂದಿ ಸ್ವಯಂ ಸೇವಕರು ಈ ಜನಪರ ಆಂದೋಲನದಲ್ಲಿ ದುಡಿಯುತ್ತಿದ್ದಾರೆ. ಇದುವರೆಗೆ ಒಟ್ಟು 588 ಶಿಬಿರವನ್ನು ನಡೆಸಿ 36,185 ಜನರಿಗೆ ದುಶ್ಚಟಮುಕ್ತ ಜೀವನ ನಡೆಸಲು ಚಿಕಿತ್ಸೆ ನೀಡಲಾಗಿದೆ. 

ದುಶ್ಚಟಗಳ ಹತೋಟಿ ಮತ್ತು ನಿವಾರಣೆ ಸೂತ್ರಗಳು:
- ಮಾದಕ ವಸ್ತುಗಳ ಮಾಯಾ ಜಾಲಕ್ಕೆ ಒಳಗಾಗದೇ ಇರಲು ಸುಲಭ ಮಾರ್ಗವೆಂದರೆ, ಸಮಸ್ಯೆ ಬರುವ ಮೊದಲೇ ಇದರ ಸೇವನೆಯಿಂದ ದೂರ ನಿಲ್ಲುವುದು.
- ಈಗಾಗಲೇ ಸ್ವಲ್ಪ ಪ್ರಮಾಣದಲ್ಲಿ, ಅಥವಾ ಹತೋಟಿಯಲ್ಲಿ ಧೂಮಪಾನ ಮಾಡುತ್ತಿದ್ದಲ್ಲಿ ತಕ್ಷಣ ಬಿಡುವುದು.
- ನಿಗದಿತ ಕಾಲ ಕ್ರಮಾನುಪಟ್ಟಿಯನ್ನು ಹಾಕಿಕೊಂಡು ಉತ್ತಮ ದಿನಚರಿಯಿಂದ ಬದುಕು ನಡೆಸುವುದು.
- ಧೂಮಪಾನ ಸೇವನೆ ಮಾಡುವ ವ್ಯಕ್ತಿ ಮತ್ತು ಕುಟುಂಬದವರ ಜೊತೆಯಲ್ಲಿ ಜಾಣ್ಮೆಯಿಂದ ವರ್ತಿಸುವುದು.  
- ಸ್ನೇಹಿತರ ಅಪಹಾಸ್ಯ, ಕೋಪಕ್ಕೆ ತುತ್ತಾದರೂ ಚಿಂತೆಯಿಲ್ಲ ಧೂಮಪಾನವನ್ನು ಸೇವಿಸಲು ಒತ್ತಾಯಿಸುವವ ಸ್ನೇಹಿತನಲ್ಲ ಅವನು ಹಿತಶತ್ರು ಎಂದು ಭಾವಿಸುವುದು.  
- ಯಾವುದೇ ಧೂಮಪಾನವನ್ನು ನಾನು ಸೇವಿಸುವುದಿಲ್ಲ. ಇತರರಿಗೂ ಕೊಡುವುದಿಲ್ಲ ಎನ್ನುವ ನಿರ್ಧಾರದಲ್ಲಿ ಬಲಿಷ್ಠರಾಗುವುದು.
- ಧೂಮಪಾನದ ಸೇವನೆಯೆಂದರೆ ಅದೊಂದು ನಿಧಾನ ಆತ್ಮಹತ್ಯೆ. ಇದರ ಸೇವನೆಯಿಂದ ಸಾವನ್ನು ಕರೆದಂತೆ ಎನ್ನುವ ಮಾಹಿತಿಯನ್ನು ನೀಡುವುದು.  
- ಈಗಾಗಲೇ ಧೂಮಪಾನದ ಚಟ ಅಂಟಿಸಿಕೊಂಡವರಿಗೆ ವೈದ್ಯಕೀಯ ನೆರವು, ಸಲಹೆಗೆ ಸಹಕರಿಸುವುದು.  
- ಸಾಮಾಜಿಕವಾಗಿ ಧೂಮಪಾನದ ವಿರುದ್ಧ ಹೋರಾಟ ನಡೆಸುವ ಸಂಘ ಸಂಸ್ಥೆಗಳಲ್ಲಿ ಭಾಗಿಯಾಗುವುದು.
- ಧೂಮಪಾನದ ವಿರುದ್ಧ ಜಾರಿಯಲ್ಲಿರುವ ಕಾನೂನನ್ನು ಪಾಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು.
- ಅನಾರೋಗ್ಯವಾದಾಗ, ಚಿಂತೆಯಾದಾಗ, ವೈದ್ಯರ ಸಲಹೆ ಪಡೆಯುವುದು.
- ಮನೋರಂಜನೆ ಪಡೆಯಲು ಅನೇಕ ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು. ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ, ಸ್ನೇಹ ಕೂಟ, ಪ್ರವಾಸ, ಯೋಗ, ಸಂಗೀತ ಲಲಿತ ಕಲೆ, ಧ್ಯಾನ, ಪ್ರಾಣಾಯಾಮ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು.  
- ಆರೋಗ್ಯಕರ ಆಹಾರ ಸೇವನೆ, ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದು.
- ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದು.
- ಶಾಲಾ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮಗಳು, ಕರಪತ್ರಗಳು, ಬೀದಿ ನಾಟಕ, ಪೋಸ್ಟರ್, ವಿಚಾರಗೋಷ್ಠಿ, ಸಮಾವೇಶಗಳು, ಚಲನಚಿತ್ರ ಪ್ರದರ್ಶನ ಮುಂತಾದವುಗಳ ಮೂಲಕ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು.
  
-ವಿವೇಕ್ ವಿ.
ಪೈಸ್ ನಿರ್ದೇಶಕರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ    

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com