

ಛತ್ತೀಸಗಡದಲ್ಲಿ ಮೇ 25ರಂದು ನಡೆದ ಬರ್ಬರ ನಕ್ಸಲೀಯ ದಾಳಿಯಲ್ಲಿ ಹತರಾದವರು ಕಾಂಗ್ರೆಸ್ನ ಮಹೇಂದ್ರ ಕರ್ಮ. ನಕ್ಸಲರ ವಿರುದ್ಧದ ಅವರ ಹೋರಾಟಕ್ಕಾಗಿಯೇ ಪಕ್ಷಬೇಧ ಮರೆತು ಜನರು ಅವರನ್ನು ಸ್ಮರಿಸಿಕೊಳ್ಳುತ್ತಾರೆ. 'ನಕ್ಸಲರ ವಿರುದ್ಧದ ಹೋರಾಟದಲ್ಲಿ ಕರ್ಮ ಬಹುದೊಡ್ಡ ಪ್ರೇರಕ ಶಕ್ತಿ' ಎಂದು ಅಲ್ಲಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ರಮಣ್ ಸಿಂಗ್ ಅವರೂ ಕಂಬನಿ ಮಿಡಿದಿದ್ದಾರೆ. ಆದರೆ, ಕರ್ಮ ಹೆಸರು ಕೇಳಿದೊಡನೆ ಅವರನ್ನು ಹಿಂಸಾತ್ಮಕ ಚೌಕಟ್ಟಿನಲ್ಲಿ ಇಟ್ಟು ನೋಡುವವರ ವರ್ಗವೂ ಒಂದಿದೆ. ಅವರೆಲ್ಲ 'ಸಲ್ವಾ ಜುಡುಂ' ಎಂಬ ನಕ್ಸಲೀಯರ ವಿರುದ್ಧದ ಬುಡಕಟ್ಟು ಸೇನೆಯತ್ತ ಬೊಟ್ಟು ಮಾಡುತ್ತಾರೆ. ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಸುಪ್ರೀಂಕೋರ್ಟ್ 'ಸಲ್ವಾ ಜುಡುಂ' ನಿಷೇಧಿಸಿರುವುದು ಇತಿಹಾಸ. ಅದರ ಸಂಸ್ಥಾಪಕರಾಗಿದ್ದವರು ಮಹೇಂದ್ರ ಕರ್ಮ. ಮಾಧ್ಯಮ ಹಾಗೂ ಮಾನವ ಹಕ್ಕು ಸಂಘಟನೆಗಳು ಸಲ್ವಾ ಜುಡುಂ ವಿಷಯದಲ್ಲಿ ಕರ್ಮರನ್ನು ಸಾಕಷ್ಟು ಟೀಕೆಗೆ ಒಳಪಡಿಸಿದ್ದವು. ಆದರೆ ಕೊನೆವರೆಗೂ ತಮ್ಮ ನಿಲುವಿಗೆ ಬದ್ಧರಾಗಿದ್ದರು ಕರ್ಮ. ಈ ನಿಟ್ಟಿನಲ್ಲಿ ರೀಡಿಫ್ಡಾಟ್ ಕಾಮ್ಗೆ ಮೂರು ವರ್ಷಗಳ ಹಿಂದೆ ಅವರು ನೀಡಿದ್ದ ಸಂದರ್ಶನವೊಂದು ಪ್ರಸ್ತುತವಾಗುತ್ತದೆ. ನಕ್ಸಲ್ ದಮನ ಏಕೆ ತುರ್ತಿನ ಸಂಗತಿ ಎಂಬುದನ್ನೂ ಇಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ಅವರು.
ಭದ್ರತಾ ಪಡೆಗಳು ನಕ್ಸಲ್ ನಿಗ್ರಹಕ್ಕಾಗಿ ಅನವರತ ಹೋರಾಡುತ್ತಿವೆ. ಸಿಆರ್ಪಿಎಫ್ನ ಹಲವಾರು ಜವಾನರು ಈ ಹೋರಾಟದಲ್ಲಿ ಮೃತಪಟ್ಟಿದ್ದಾರೆ. ನಕ್ಸಲ್ ನಿಗ್ರಹದ ಬಗೆಗಿನ ಸರ್ಕಾರದ ಪ್ರಸ್ತುತ ನೀತಿಯ ಬಗ್ಗೆ ಏನು ಹೇಳುತ್ತೀರಿ?
ಭದ್ರತಾ ಪಡೆಗಳ ಶಕ್ತಿ ಮತ್ತು ದೌರ್ಬಲ್ಯಗಳು ನಕ್ಸಲರಿಗೆ ಚೆನ್ನಾಗಿ ಗೊತ್ತಿದೆ. ಆದರೆ ಭದ್ರತಾ ಪಡೆಗಳಿಗೆ ನಕ್ಸಲರ ಬಗ್ಗೆ ಎಷ್ಟು ಗೊತ್ತು? ಹಾಗಾಗೇ ನಕ್ಸಲರು ಬದುಕುಳಿದು, ಬೆಳೆಯುತ್ತಿದ್ದಾರೆ.
ಇಷ್ಟು ವರ್ಷಗಳಿಂದ ನಕ್ಸಲ್ ಚಳವಳಿ ಅದ್ಹೇಗೆ ಬದುಕುಳಿದಿದೆ?
ನಕ್ಸಲರು ಎರಡು ರೂಪದಲ್ಲಿ ಜೀವಂತವಾಗಿದ್ದಾರೆ. ಒಂದು ಗುಂಪು ಬಂದೂಕಿನೊಂದಿಗೆ ಬದುಕಿದರೆ, ಇನ್ನೊಂದು ಸಾರ್ವಜನಿಕ ವಲಯದಲ್ಲಿ ಅಸ್ತಿತ್ವದಲ್ಲಿದೆ. ಸಾರ್ವಜನಿಕ ವಲಯದಲ್ಲಿರುವ ನಕ್ಸಲರು ಪ್ರತಿಭಟನೆಗಳ ಮೂಲಕ, ಬಂದ್ಗಳ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಾರೆ. ಅವರು ಈ ರಂಗದಲ್ಲಿ ಎಷ್ಟು ಬೆಳೆದಿದ್ದಾರೆಂದರೆ ನಕ್ಸಲ್ ಸಮಸ್ಯೆಯ ಕುರಿತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಿನ್ನತೆಗಳು ಹುಟ್ಟಿ, ಜನರ ಮಧ್ಯೆ ಬಿರುಕು ಮೂಡಿದೆ. ಇನ್ನು ನಕ್ಸಲ್ ಪರ ವಾದಿಸುವವರೂ ಕೂಡ ಇದೇ ಗುಂಪಿನಲ್ಲೇ ಬರುತ್ತಾರೆ. ಈ ಗುಂಪು ಪ್ರತಿಭಟನೆಗಳ ಮೂಲಕ ನಕ್ಸಲರ ದೌರ್ಬಲ್ಯವನ್ನೆಲ್ಲ ಮುಚ್ಚಿಹಾಕಲು ಪ್ರಯತ್ನಿಸುತ್ತದೆ. ಇವರ ಹೆಡೆಮುರಿಕಟ್ಟಬೇಕಾದ ಜವಾಬ್ದಾರಿ ರಾಜಕಾರಣಿಗಳ ಮೇಲಿದೆ. ಆದರೆ ಅವರು ಅದನ್ನು ಮಾಡುತ್ತಿಲ್ಲ.
ನಿಮ್ಮ ಬುಡಕಟ್ಟು ಸೇನೆಯ ಪ್ರಸ್ತುತ ಪರಿಸ್ಥಿತಿ ಹೇಗಿದೆ?
ಅವರು 17 ರಿಂದ 18 ಶಿಬಿರಗಳಲ್ಲಿ ಅಸಹಾಯಕರಾಗಿ ಕುಳಿತಿದ್ದಾರೆ. ಭದ್ರತಾ ಪಡೆಗಳು ನಕ್ಸಲರೊಂದಿಗೆ ಹೋರಾಡುತ್ತಿವೆ ಎಂದಮೇಲೆ ಸಲ್ವಾ ಜುಡುಂನ ಸೈನಿಕರನ್ನೇಕೆ ಬಿಡುತ್ತಿಲ್ಲ? ಈ ಸಮಯ ನಿಜಕ್ಕೂ ಅಪಾಯಕಾರಿ. ನಾವು ಅಸಹಾಯಕರಾಗಿರುವುದರ ಲಾಭ ಪಡೆದುಕೊಳ್ಳುತ್ತಿರುವ ನಕ್ಸಲರು ಅದಾಗಲೇ 400-500 ಸಲ್ವಾ ಜುಡುಂ ಜನರನ್ನು ಕೊಂದಿದ್ದಾರೆ.
ಬುಡಕಟ್ಟು ಜನರ ಮೇಲೆ ದೌರ್ಜನ್ಯ ಎಸಗಿದೆ ಎನ್ನುವ ಆರೋಪ ಸಲ್ವಾ ಜುಡಂನ ಮೇಲಿದೆ. ಅದನ್ನೀಗ ನಿಷೇಧಿಸಲಾಗಿದೆ. ಹೀಗಾಗಲು ಕಾರಣವೇನು?
ನಕ್ಸಲರು ತುಂಬಾ ಚಾಣಾಕ್ಷರು. ಅವರು ಕೇವಲ ಪೊಲೀಸರ ಮೇಲಷ್ಟೇ ದಾಳಿ ಮಾಡತೊಡಗಿದರು. ಇದರಿಂದಾಗಿ ಪೊಲೀಸರಿಗೂ ಆಶ್ಚರ್ಯವಾಯಿತು. 'ಬರೀ ನಮ್ಮ ಮೇಲಷ್ಟೇ ಏಕೆ? ಸಲ್ವಾ ಜುಡುಂನ ಮೇಲೇಕೆ ನಕ್ಸಲರು ದಾಳಿಮಾಡುತ್ತಿಲ್ಲ' ಎನ್ನುವ ಪ್ರಶ್ನೆ ಅವರನ್ನು ಕಾಡತೊಡಗಿತು. ಪೊಲೀಸರು ಮತ್ತು ನಮ್ಮ ಸಂಘಟನೆಯ ನಡುವೆ ಬಿರುಕು ಮೂಡಿಸುವ ಪ್ರಯತ್ನವಿದು. ಸಿಆರ್ಪಿಎಫ್ನ ಮೇಲೂ ಅವರು ಅದೇ ತಂತ್ರವನ್ನು ಉಪಯೋಗಿಸಿದರು. ಹಾಗೆ ಮಾಡುವ ಮೂಲಕ ಪೊಲೀಸರು, ಸಿಆರ್ಪಿಎಫ್ ಮತ್ತು ಸಲ್ವಾ ಜುಡುಂನ ನಡುವೆ ಭಿನ್ನಾಭಿಪ್ರಾಯ ಮೂಡಿಸುವುದು ಅವರ ತಂತ್ರ.
ಹಾಗಿದ್ದರೆ ಅದರ ಮೇಲೆ ಮಾಡಿರುವ ಆರೋಪಗಳೆಲ್ಲಾ ಸುಳ್ಳೇ?
ನೋಡಿ, ಒಂದು ಉದ್ರೇಕಕಾರಿ ಸನ್ನಿವೇಶದಲ್ಲಿ ಜನ ತಪ್ಪುಗಳನ್ನು ಮಾಡುತ್ತಾರೆ. ಅದನ್ನೆಲ್ಲ ತಡೆಯುವುದು ಸಾಧ್ಯವಿಲ್ಲ. ಗಾಂಧೀಜಿ ಸತ್ಯಾಗ್ರಹ ಕೈಗೊಳ್ಳುತ್ತಿದ್ದ ಸಂದರ್ಭದಲ್ಲೂ ಇಂತಹ ಎಷ್ಟೋ ಅನಿರೀಕ್ಷಿತ ಘಟನೆಗಳು ಅವರಿಗೆ ಎದುರಾಗುತ್ತಿದ್ದವು. ಆ ರೀತಿ ಆಗಬಾರದೆಂಬ ಉದ್ದೇಶ ಹೋರಾಟಗಾರರಿಗಿದ್ದರೂ...ಆಗಿಹೊಗುತ್ತದೆ.
ಮಾನವ ಹಕ್ಕು ಆಯೋಗವೂ ನಿಮ್ಮ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ...
ಹಾಗಿದ್ದರೆ ಅವರೇಕೆ ನಮ್ಮ ವಿರುದ್ಧ ಎಫ್ಐಆರ್ ದಾಖಲಿಸಲಿಲ್ಲ? ನಾನಾಗಲೇ ಹೇಳಿದೆನಲ್ಲ, ಇವೆಲ್ಲ ನಮ್ಮನ್ನು ಯುದ್ಧರಂಗದಿಂದ ಹಿಂದಕ್ಕೆಳೆಯಲು ನಡೆಸಿದ ಕುತಂತ್ರಗಳಷ್ಟೇ. ಕೋರ್ಟ್ ಕೂಡ ಇದುವರೆಗೂ ನಮಗೆ ಸಮನ್ಸ್ ಕಳಿಸಲಿಲ್ಲ. ಏಕೆ?
ಆದರೆ ಸ್ಥಳೀಯ ಬುಡಕಟ್ಟು ಜನಾಂಗದ ಮೇಲೆ ನೀವು ದೌರ್ಜನ್ಯ ಎಸಗಿದ್ದೀರಿ ಎಂದು ನಕ್ಸಲರು ಹೇಳುತ್ತಿದ್ದಾರಲ್ಲ?
ತಮ್ಮ ವಿರುದ್ಧ ಯಾರಾದರೂ ನಿಂತರೆ ನಕ್ಸಲರು ಮೊದಲು ಮಾಡುವುದು ಇದೇ ರೀತಿಯ ಅಪಪ್ರಚಾರವನ್ನೇ...
ಎಲ್ಲಾ ಆರೋಪಗಳೂ ಸುಳ್ಳಿರಲಿಕ್ಕಿಲ್ಲ!
ಹಾಗಿದ್ದರೆ ಈ ನಕ್ಸಲರು, ಅವರ ಪರ ಮಾತಾಡುವವರು, ಮಾನವ ಹಕ್ಕು ಆಯೋಗ ನಮ್ಮ ಮೇಲೇಕೆ ಎಫ್ಐಆರ್ ದಾಖಲಿಸುತ್ತಿಲ್ಲ? ನಾನೂ ಅದಕ್ಕಾಗಿ ಬಹಳ ದಿನದಿಂದ ಕಾದಿದ್ದೇನೆ! ನಕ್ಸಲಿಸಂ ಅನ್ನುವುದು ರಾಜಕೀಯ ಉಗ್ರವಾದ. ಭಾರತ ಸೂಪರ್ಪವರ್ ಆಗಿ ಬೆಳೆಯುತ್ತಿದೆ. ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳಿಗೆ ಈ ಸತ್ಯವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗೇ ಸರ್ಕಾರದ ಬುಡ ಅಲ್ಲಾಡಿಸುವ ಪ್ರಯತ್ನವನ್ನು ಅವರು ನಕ್ಸಲರ ಮೂಲಕ ಮಾಡುತ್ತಿದ್ದಾರೆ. ನಕ್ಸಲರಿಗೆ ಇಂದು ಅಂತಾರಾಷ್ಟ್ರೀಯ ವಲಯಗಳಿಂದ ಬೆಂಬಲ ಸಿಗುತ್ತಿದೆ. ಈ ಸಮಸ್ಯೆಯನ್ನು ಈಗಲೇ ಬಗೆಹರಿಸದಿದ್ದರೆ ನಿಸ್ಸಂಶಯವಾಗಿಯೂ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ. ನಾನೂ ಬುಡಕಟ್ಟು ಜನಾಂಗಕ್ಕೆ ಸೇರಿದವನು. ನಮಗೆ ನಮ್ಮದೇ ಆದ ಸಂಪ್ರದಾಯವಿದೆ. ಸಾಮಾಜಿಕ-ಆರ್ಥಿಕ ವ್ಯವಸ್ಥೆ ಇದೆ. ಈ ಕಾಮ್ರೆಡ್ಗಳು ಇಲ್ಲಿಗೆ ಬಂದು ಅಮಾಯಕ ಬುಡಕಟ್ಟು ಜನರ ತಲೆಕೆಡಿಸಿ ಅವರಿಗೂ ಕೆಂಪು ಬಣ್ಣ ಹಚ್ಚುತ್ತಿದ್ದಾರೆ. ಒಂದು ಮಾತು ಯೋಚನೆ ಮಾಡಿ. ಯಾರಾದರೂ ನಿಮ್ಮ ಹೆಸರನ್ನು, ನಿಮ್ಮ ನಂಬಿಕೆಗಳನ್ನು, ನಿಮ್ಮ ಸಾಂಸ್ಕೃತಿಕ ಬುನಾದಿಯನ್ನು ಕಿತ್ತೆಸೆದರೆ ನಿಮಗೆ ಹೇಗನ್ನಿಸುತ್ತದೆ? ನೀವು ಸುಮ್ಮನಿರುತ್ತೀರಾ? ಈ ಕಾಮ್ರೆಡ್ಗಳು(ನಕ್ಸಲರು) ನಮ್ಮ ಹಣೆಗೆ ಬಂದೂಕಿಟ್ಟು ಬೆದರಿಸಿ ನಮ್ಮನ್ನೂ ಕಾಮ್ರೆಡ್ಗಳಾಗಿಸುತ್ತಿದ್ದಾರೆ. ಬುಡಕಟ್ಟು ನಾಯಕನಾದ ನನಗೆ ನಮ್ಮವರನ್ನು ಉಳಿಸಿಕೊಳ್ಳುವ ಅಧಿಕಾರವಿಲ್ಲವೇ? ನಕ್ಸಲರನ್ನು ನಮ್ಮ ನೆಲದಲ್ಲೇ ಉಳಿಯಲು ಬಿಟ್ಟು ಅಮಾಯಕರನ್ನು ಸಾಯಲು ಬಿಡಬೇಕೇ? ನಾನಂತೂ ಯುದ್ಧ ಮಾಡಿದ್ದೇನೆ. ಆ ಯುದ್ಧವನ್ನು ನೀವು ತಪ್ಪು ಎಂದು ಕರೆದರೂ ಅಡ್ಡಿಯಿಲ್ಲ. ಆ ತಪ್ಪನ್ನು ನಾನು ಮತ್ತೆ ಮಾಡುತ್ತೇನೆ! ಮುಂದೆ ಯಾವುದೇ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಲಿ, ನಾನಂತೂ ನಕ್ಸಲರ ವಿರುದ್ಧ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ. ನಕ್ಸಲರಿಗೆ 'ಕರ್ಮ' ಯಾರೆಂದು ಗೊತ್ತು, ನನಗೆ ನಕ್ಸಲರ ದೌರ್ಬಲ್ಯ ಏನೆಂದು ಗೊತ್ತು. ನನಗೆ ರಾಜಕೀಯ ಬೆಂಬಲ ಬೇಕಿಲ್ಲ. ಇದೇನು ಜಾಗೀರು ಅಥವಾ ನೆಲಕ್ಕಾಗಿ ನಡೆದಿರುವ ಹೋರಾಟವಲ್ಲ. ನಾವೆಲ್ಲರೂ ಒಂದಾದರೆ ನಕ್ಸಲರು ಯಾವ ಲೆಕ್ಕ? ಆದರೆ ನಾವೆಲ್ಲ ಭಯಕ್ಕೆ ಬಲಿಯಾಗುತ್ತಿದ್ದೇವೆ.
ನಕ್ಸಲರು ಮುಂದಿನ ದಿನಗಳಲ್ಲಿ ನಗರಗಳಿಗೂ ಕಾಲಿಡಬಹುದಲ್ಲವೇ?
ನಗರ ಮತ್ತು ಪಟ್ಟಣಗಳು ಗ್ರಾಮೀಣ ಭಾಗಗಳಿಗಿಂತ ದುರ್ಬಲವಾಗಿರುತ್ತವೆ. ಗ್ರಾಮಗಳ ಗಡಿಗಳು ಒಂದಕ್ಕೊಂದು ಹೊಂದಿಕೊಂಡಿರುತ್ತವೆ, ಅವುಗಳಲ್ಲಿ ಅವುಗಳದ್ದೇ ಆದ ಆಡಳಿತವಿರುತ್ತದೆ, ಪರಸ್ಪರ ಸಂಬಂಧಗಳಿರುತ್ತವೆ. ಇದು ನಿಮಗೆ ನಗರಗಳಲ್ಲಿ ಕಾಣಿಸುವುದಿಲ್ಲ. ಒಬ್ಬ ದಾವೂದ್ ಇಬ್ರಾಹಿಂ ಇಡೀ ಮುಂಬೈಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ. ಈಗ ಅವನು ವಿದೇಶದಲ್ಲಿದ್ದರೂ ಅವನಿಗೆ ಮುಂಬೈನಿಂದ ಹಣ ಹರಿದುಹೋಗುತ್ತಿದೆ. ಸಿಟಿಗಳು ಈಗ ಸೇಫ್ ಆಗಿಲ್ಲ. ಮುಂದಿನ ದಿನಗಳಲ್ಲಿ ನಕ್ಸಲರು ನಗರಪ್ರದೇಶಗಳಲ್ಲೂ ರಾರಾಜಿಸುತ್ತಾರೆ.
ನಮ್ಮ ದೇಶ ಅಭಿವೃದ್ಧಿಯಾಗದೆ ಇರುವುದೇ ನಕ್ಸಲರ ಬೆಳವಣಿಗೆಗೆ ಮುಖ್ಯ ಕಾರಣ ಅಲ್ಲವಾ?
ಒಂದು ಮಾತು ಅರ್ಥ ಮಾಡಿಕೊಳ್ಳಿ, ಅಭಿವೃದ್ಧಿಯ ಅತಿದೊಡ್ಡ ಶತ್ರುಗಳೆಂದರೆ ನಕ್ಸಲರು! ಸ್ವಾತಂತ್ರ್ಯ ದೊರಕಿದಾಗಿನಿಂದ ನಮ್ಮ ದೇಶದಲ್ಲಾದ ಅಭಿವೃದ್ಧಿಯನ್ನು ಅವರು ನಾಶ ಮಾಡುತ್ತಲೇ ಬಂದಿದ್ದಾರೆ. ಬಡವರು ಬಡವರಾಗಿಯೇ ಉಳಿಯಬೇಕೆಂದು ನಕ್ಸಲರು ಪ್ರಯತ್ನಪಡುತ್ತಿದ್ದಾರೆ. ಹಾಗೆ ಆದಾಗ ಮಾತ್ರ ಅವರು ಬದುಕುಳಿಯುತ್ತಾರೆ, ಬೆಳೆಯುತ್ತಾರೆ.
ಒಂದು ವೇಳೆ ಸಲ್ವಾ ಜುಡುಂನಲ್ಲಿ ಸುಧಾರಣೆಗಳಾದರೆ, ನಾವು ಅದರಲ್ಲಿ ಯಾವ ಹೊಸತನವನ್ನು ನಿರೀಕ್ಷಿಸಬಹುದು?
ನಾನಂತೂ ಅದರಲ್ಲಿ ಎಲ್ಲರನ್ನೂ ಸೇರಿಸಿಕೊಳ್ಳುತ್ತೇನೆ. ಅದರಲ್ಲೂ ಮುಖ್ಯವಾಗಿ ಮಾಧ್ಯಮಗಳನ್ನು. ಆಗ ಅವರಿಗೆ ಗೊತ್ತಾಗುತ್ತದೆ ನಮ್ಮ ಮೇಲಿನ ಆರೋಪಗಳು ಸುಳ್ಳೋ, ನಿಜವೋ ಎನ್ನುವುದು. ಬರೀ ಆದಿವಾಸಿಗಳಷ್ಟೇ ಅಲ್ಲ, ಎಲ್ಲಾ ಜನರೂ ಇದರ ಭಾಗವಾಗಬೇಕು ಎಂದು ಆಶಿಸುತ್ತೇನೆ. ನಾನು ಪದೇ ಪದೇ ಹೇಳುತ್ತಿದ್ದೇನೆ. ನಾನು ತಪ್ಪು ಮಾಡಿಲ್ಲ. ಈ 'ಮಾನವ ಹಕ್ಕು' ಮಂದಿ ನಮ್ಮಲ್ಲಿ ಯಾರು ತಪ್ಪು ಎಸಗಿದ್ದಾರೆಂದು ಸ್ಪಷ್ಟವಾಗಿ ಏಕೆ ಹೇಳುತ್ತಿಲ್ಲವೋ?