ಒಬಾಮಾಗೇಕೆ ಪಾಕಿಸ್ತಾನದ ಮೇಲೆ ಈ ಪರಿ ಪ್ರೇಮ?

ಆಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಸುರಕ್ಷಿತವಾಗಿ ಹೊರಹೋಗುವುದಕ್ಕೆ ತಾನು ಸಹಾಯಮಾಡುವುದಾಗಿ ಹೇಳಿರುವ ಪಾಕಿಸ್ತಾನಕ್ಕೆ ಬರಾಕ್ ಒಬಾಮಾ ಹೇರಳವಾಗಿ ಹಣ ಮತ್ತು ಮಿಲಿಟರಿ ಸಹಾಯ ಮಾಡಿದ್ದಾರೆ. ಇದರಿಂದಾಗಿ ಭಾರತವೇನು ಅಂದುಕೊಳ್ಳುತ್ತದೋ ಎನ್ನುವ ಚಿಂತೆ ಅವರಿಗಿಲ್ಲ. ಎಷ್ಟಿದ್ದರೂ ಇರಾನ್ಗಾಗಿ ಇಸ್ರೇಲ್ನಂಥ ಬಲಾಢ್ಯ ರಾಷ್ಟ್ರವನ್ನೇ ಅವರು ಕಡೆಗಣಿಸಿದವರಲ್ಲವೇ!
ಮನಮೋಹನ್ ಸಿಂಗ್ ಅಮೆರಿಕದಿಂದ ಮರುಳುವಾಗ ಒಬಾಮಾ ಅವರು ಬೀಳ್ಕೊಡುವ ಭೋಜನಕೂಟವನ್ನು ಆಯೋಜಿಸಿದ್ದರು. ಸಿಂಗ್ ಅವರಿಗೆ "ನಿಶ್ಚಿಂತೆಯಿಂದಿರಿ" ಎನ್ನುವಂತೆ ನಕ್ಕು ಊಟ ಮಾಡಿಸಿ ಕಳುಹಿಸಿದ್ದರು. ಆದರೆ ಅಕ್ಟೋಬರ್ನಲ್ಲಿ ನವಾಜ್ ಷರೀಫ್ಗೆ ಒಬಾಮಾ ಕೊಟ್ಟಿರುವ ಮೆನು ನೋಡಿ ಭಾರತಕ್ಕೆ ಅಂದು ತಿಂದಿದ್ದೆಲ್ಲ ಅಜೀರ್ಣವಾಗಿದೆ. ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ, ಪಾಕಿಸ್ತಾನದ ಅಣ್ವಸ್ತ್ರ ಸಾಮರ್ಥ್ಯವನ್ನು ಭಾರತಕ್ಕೆ ಸಮನಾಗಿ ಬಲಿಷ್ಠಗೊಳಿಸಿ ಮತ್ತು ಎಲ್ಲವೂ ಸರಿಹೋದರೆ ಇಸ್ಲಾಮಾಬಾದ್ನೊಂದಿಗೆ ಅಣ್ವಸ್ತ್ರ ಒಪ್ಪಂದ ಮಾಡಿಕೊಳ್ಳುವುದು ಮೆನುವನ್ನು ಅಮೆರಿಕ ಪಾಕಿಸ್ತಾನದ ಮುಂದಿಟ್ಟಿದೆ!
ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ತಮ್ಮ ಅಮೆರಿಕ ಭೇಟಿಯ ವೇಳೆ ಪಾಕಿಸ್ತಾನವನ್ನು "ಉಗ್ರವಾದಿಗಳ ಉಗಮಸ್ಥಾನ" ಎಂದು ಬಣ್ಣಿಸಿದ್ದರು. ಆದರೆ ಒಬಾಮಾ ಈ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಬದಲಾಗಿ, ನವಾಜ್ ಶರೀಫ್ರೊಂದಿಗಿನ ಜಂಟಿ ಹೇಳಿಕೆಯಲ್ಲಿ ಅವರು, "ಭಾರತ ಪ್ರಬುದ್ಧವಾಗಬೇಕು ಮತ್ತು ಕಾಶ್ಮೀರದ ವಿಷಯವನ್ನು ಚರ್ಚೆಮಾಡಬೇಕು" ಎಂದು ಬುದ್ಧಿವಾದ ಹೇಳಿದರು.
ನವಾಜ್ ಶರೀಫ್ ವಾಷಿಂಗ್ಟನ್ನಲ್ಲಿ ಮತ್ತು ಡಾ. ಸಿಂಗ್ ಅವರು ಬೀಜಿಂಗ್ನಲ್ಲಿ ಅಡ್ಡಾಡುತ್ತಿದ್ದ ವಾರದಲ್ಲಿಯೇ ನನಗೆ ಜಸ್ವಂತ್ ಸಿಂಗ್ ಅವರ India at Risk: Mistakes, Misconceptions and Misadventures of Security Policy ಎಂಬ ಪುಸ್ತಕದ ಪ್ರತಿಯೊಂದು ಸಿಕ್ಕಿತು.
ಜಸ್ವಂತ್ ಸಿಂಗ್ ಅವರು ತುಂಬಾ ಸಂಭಾವಿತ ವ್ಯಕ್ತಿ. ಅವರು ಬಂದೂಕಿನ ಟ್ರಿಗರ್ ಅಮುಕಿದರೆಂದರೆ ಗುರಿ ತಪ್ಪುವ ಸಾಧ್ಯತೆ ಬಹಳ ಕಡಿಮೆ. ಅವರು ಹೇಳುತ್ತಾರೆ, "ಭಾರತ ಇದುವರೆಗೂ ಕಾರ್ಯತಂತ್ರದ ಸಂಸ್ಕೃತಿಯನ್ನು ಬೆಳೆಸಿಕೊಳ್ಳದೇ ಇರುವುದರಿಂದ ಅದು ಅಪಾಯದಲ್ಲಿದೆ. ಇಂಥ ದುರ್ಬಲ ಗುಣಕ್ಕೆ ರೂಪ ಕೊಟ್ಟಿದ್ದು ಜವಾಹರ್ಲಾಲ್ ನೆಹರೂ. ಅವರ ಉದ್ದೇಶಗಳೇನೋ ಉತ್ತಮವಾಗಿದ್ದವಾದರೂ, ಆ ಉದ್ದೇಶಕ್ಕೆ ಅಡ್ಡಗಾಲು ಹಾಕುತ್ತಿದ್ದ ಕಟು ಸತ್ಯಗಳನ್ನು ಮಾತ್ರ ಅವರು ಕಡೆಗಣಿಸಿಬಿಟ್ಟರು. ಪಾಕಿಸ್ತಾನದ ಸ್ಥಾಪನೆಗೆ ನೆಹರು ಬೆಂಬಲ ಕೊಟ್ಟಿದ್ದು, ಆ ಉಪಖಂಡದಲ್ಲಿ ಶಾಂತಿ ನೆಲೆಸುತ್ತದೆ ಎಂದು ಭಾವಿಸಿದ್ದರಿಂದ. ಆದರೆ ಸ್ವಾತಂತ್ರ್ಯ ದೊರೆತ ಕೆಲವೇ ವಾರಗಳಲ್ಲಿ ಪಾಕಿಸ್ತಾನ ಕಾಶ್ಮೀರಕ್ಕಾಗಿ ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸಿತು. ನೆಹರೂರ ನೀತಿಗಳಿಗೆ ಮಂಕು ಕವಿಯಿತು. ಇದೇ ಮಂಕಿನಲ್ಲಿಯೇ ಅವರು ಪಾಕಿಸ್ತಾನಿಗಳನ್ನು ಹಿಂದೋಡಿಸಲು ಮುಂದಾಗಿದ್ದ ಭಾರತೀಯ ಸೇನೆಯನ್ನು ತಡೆದು ನಿಲ್ಲಿಸಿದರು. ಯುದ್ಧಕ್ಕಿಂತ ಶಾಂತಿಯೇ ಉತ್ತಮ ಐಡಿಯಾ ಎಂದು ಹೇಳಿ ಸೇನೆಯನ್ನು ಸುಮ್ಮನಾಗಿಸಿರು. ಭಾರತೀಯ ಸೈನಿಕರಲ್ಲಿ ಮುಜಫರಾಬಾದ್ವರೆಗೆ ನುಗ್ಗುವ ಸಾಮರ್ಥ್ಯವಿತ್ತು, ಕಾಶ್ಮೀರದಿಂದ ಪಾಕಿಸ್ತಾನಿಗಳನ್ನು ಒದ್ದೋಡಿಸಬೇಕೆಂಬ ಕೆಚ್ಚಿತ್ತು. ಆದರೆ ನೆಹರೂ ವಿಶ್ವಸಂಸ್ಥೆಯ ಮುಂದೆ ಈ ವಿಷಯವನ್ನು ಕೊಂಡೊಯ್ದರು. ಅವರಂದು ಮಾಡಿದ ಈ ಅನಾಹುತದಿಂದಾಗಿ ಇಂದಿಗೂ ಭಾರತದ ರಕ್ತಹರಿಯುತ್ತಲೇ ಇದೆ.
ಇನ್ನು ಚೀನಾದೊಂದಿಗಿನ ಕಥೆಯಲ್ಲಿ ತುಸು ವ್ಯತ್ಯಾಸಗಳಿವೆಯಾದರೂ, ಆ ದೇಶದಿಂದ ನಮಗಾದ ಹಾನಿ ಕಡಿಮೆ ಪ್ರಮಾಣದಲ್ಲೇನೂ ಇಲ್ಲ. ಚೀನಾ ತಾವು ತೋರಿಸಿದ ಹಾದಿಯಲ್ಲಿ ನಡೆಯುತ್ತದೆ ಮತ್ತು non-alignmentಗೆ ಒಪ್ಪಿಕೊಳ್ಳುತ್ತದೆ , ಈ ಮೂಲಕ ತಾವು 'ಶಾಂತಿಯ ದೂತ' ಎಂಬುದು ಪ್ರಪಂಚದ ಮುಂದೆ ಮತ್ತೊಮ್ಮೆ ಸಾಬೀತಾಗುತ್ತದೆ ಎನ್ನುವ ಭ್ರಮೆ ನೆಹರೂರಿಗಿತ್ತು. 1950ರಲ್ಲಿ ಚೀನಾ ಟಿಬೆಟ್ನ ಒಳಹೊಕ್ಕಾಗ ನೆಹರೂ ಅವರು ಬೀಜಿಂಗ್ನಲ್ಲಿದ್ದ ಭಾರತೀಯ ರಾಯಭಾರಿ ಕೆ.ಎಮ್.ಪಣಿಕ್ಕರ್ ಅವರಿಗೆ, "ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದೊಂದಿಗಿನ ಸಂಬಂಧವನ್ನು ಭಾರತ ಬಹಳ ಗೌರವಿಸುತ್ತದೆ" ಎಂದು ಹೇಳಿದ್ದರು. ನೆಹರು ಚೀನಾದ ಮುಂದೆ ಪದೇ ಪದೇ ಮಂಡಿ ಊರುತ್ತಿದ್ದಾರೆ ಎನ್ನುವ ಸಂಗತಿ ಪಣಿಕ್ಕರ್ ಅವರಿಗಷ್ಟೇ ಅಲ್ಲದೆ, ದೆಹಲಿಯಲ್ಲಿನ ವಿದೇಶಾಂಗ ಸಚಿವಾಲಯಕ್ಕೂ ಸ್ಪಷ್ಟವಾಗಿ ಗೊತ್ತಾಗಿತ್ತು.
ಇನ್ನೊಂದೆಡೆ ಪಟೇಲ್ ಅವರು ದೂರದೃಷ್ಟಿಯುಳ್ಳ, ವ್ಯಾವಹಾರಿಕ ಮತ್ತು ವಾಸ್ತವಿಕತೆಯಲ್ಲಿ ಬದುಕುವ ನಾಯಕರಾಗಿದ್ದರು. ಚೀನಾದೊಂದಿಗಿನ ಈ ವಿದ್ಯಮಾನಗಳನ್ನು ಅವರು ಕಟುವಾಗಿ ಟೀಕಿಸಿ ಬರೆದರು. ಬೀಜಿಂಗ್ನಿಂದ ಬಂದಿದ್ದ ಪತ್ರವೊಂದನ್ನು ಉಲ್ಲೇಖಿಸಿದ ಪಟೇಲರು, "ಟಿಬೆಟ್ನ ಮೇಲೆ ಚೀನಿಯರಿಗೆ ಹಕ್ಕಿಲ್ಲ ಎಂದು ವರ್ಷಗಳಿಂದ ವಾದಿಸುತ್ತಾ ಬಂದಿರುವ ಭಾರತವನ್ನು ತುಚ್ಛವಾಗಿ ಕಂಡಿದ್ದಲ್ಲದೆ, ಭಾರತದ ನೀತಿಗಳನ್ನು ವಿದೇಶಿ ಶಕ್ತಿಗಳು ನಿಗ್ರಹಿಸುತ್ತಿವೆ ಎಂಬ ದೂಷಣೆಯನ್ನು ಚೀನಿಯರು ಆ ಪತ್ರದ ಮೂಲಕ ಪರೋಕ್ಷವಾಗಿ ಮಾಡಿದ್ದಾರೆ. ಚೀನಿಯರು ಮಿತ್ರರಂತಲ್ಲ, ಪ್ರಬಲ ಶತ್ರುಗಳಂತೆ ಮಾತನಾಡುತ್ತಿದ್ದಾರೆ" ಎಂದಿದ್ದರು. ಆದರೆ ಅದೇಕೋ ನೆಹರೂ ಅವರಿಗೆ ಚೀನಾ ಭಾರತದ ಆಪ್ತಮಿತ್ರನಾಗಿಯೇ ಕಂಡಿತು. ಆದರೆ ಕೊನೆಗೆ ಆದದ್ದೇನು? 1962ರಲ್ಲಿ ಚೀನಿಯರು ನಮ್ಮ ಮೇಲೆ ಯುದ್ಧಸಾರಿದರು. ಆಗ ಕಂಗೆಟ್ಟ ನೆಹರೂ ಅಮೆರಿಕದ ಮುಂದೆ ಮಂಡಿಯೂರಿ ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಸಬೇಕೆಂದು ಕೇಳಿಕೊಂಡರು. ಆದರೆ ಅಮೆರಿಕ ಕೆಲವು ಷರತ್ತುಗಳನ್ನು ನೆಹರೂರ ಮುಂದಿಟ್ಟಿತು(ಪಾಕಿಸ್ತಾನದ ಸೀಮಾರೇಖೆಯಲ್ಲಿ ಭಾರತೀಯ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡಬೇಕು ಮತ್ತು ಕಾಶ್ಮೀರ ವಿವಾದವನ್ನು ಬಗೆಹರಿಸಬೇಕು ಎಂಬುದೂ ಅದರಲ್ಲೊಂದು. ಈ ವಿಷಯ ಬರಾಕ್ ಒಬಾಮಾಗೆ ಚೆನ್ನಾಗಿ ಗೊತ್ತಿದೆ). ಬಹುಶಃ ಅಮೆರಿಕದ ಷರತ್ತಿಗೆ ಅಂದು ತಲೆ ಅಲ್ಲಾಡಿಸುವಾಗಲೇ ನೆಹರೂರಲ್ಲಿದ್ದ ಭ್ರಮೆಯೆಲ್ಲ ಕಳಚಿಬಿದ್ದಿತೇನೋ!
ನಮಗೆಲ್ಲರಿಗೂ ಶಾಂತಿ ಬೇಕು. ಹುಚ್ಚನಷ್ಟೇ ಯುದ್ಧಕ್ಕಾಗಿ ಹಾತೊರೆಯಬಲ್ಲ. ಆದರೆ ಶಾಂತಿ ಸ್ಥಾಪನೆಗೆ ಶಕ್ತಿಯ ಅವಶ್ಯಕತೆಯಿರುತ್ತದೆ. "ಹೆಚ್ಚುವರಿ ಮಿಲಿಟರಿ ಸಾಮರ್ಥ್ಯ" ಎಂಬ ಬ್ರಿಟಿಷರ ನೀತಿಯನ್ನು ಸ್ವತಂತ್ರ ಭಾರತ ಕಿತ್ತೆಸೆಯಿತು. ಆದರೆ ಬಲಿಷ್ಠ ಮಿಲಿಟರಿಯಿಂದ ಆಗುವ ಲಾಭವನ್ನು ಚೀನಾ ಮತ್ತು ಪಾಕಿಸ್ತಾನ ಮನಗಂಡವು. ಇಂದು ಪಾಕಿಸ್ತಾನದ ಬಳಿಯಿರುವ ಶಸ್ತ್ರಾಗಾರಗಳು ಭಾರತಕ್ಕಿಂತಲೂ ಬಲಿಷ್ಠವಾಗಿವೆ. ಪೆಸಿಫಿಕ್ನಲ್ಲಿ ಅಮೆರಿಕಕ್ಕೆ ಸಡ್ಡುಹೊಡೆದು ನಿಲ್ಲಬೇಕು ಎನ್ನುವ ಕಾರಣಕ್ಕೆ ಚೀನಾ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. 1962ರ ವರೆಗೂ ಭಾರತ, ಸಶಸ್ತ್ರ ಸೇನೆಯನ್ನು "ಬಡ ರಾಷ್ಟ್ರದ ಆಡಂಬರ" ಎಂದು ಕರೆಯುತ್ತಿತ್ತು!
6 ದಶಕಗಳಿಂದ ಭಾರತ, ಪಾಕಿಸ್ತಾನ, ರಷ್ಯಾ ಮತ್ತು ಅಮೆರಿಕದ ನಡುವಿನ ವ್ಯೂಹಾತ್ಮಕ ಕೊಂಡಿ ಬದಲಾಗುತ್ತಲೇ ಇದೆ. ನಮ್ಮ ಮುಂದಿರುವ ಪ್ರಶ್ನೆಯೆಂದರೆ ಯಾವ ದೇಶದ ಕೊಂಡಿ ದುರ್ಬಲವಾಗಿದೆ ಎನ್ನುವುದು. ಕಾರ್ಯತಂತ್ರ ಎನ್ನುವುದು ನೀತಿ ಕಥೆಯಲ್ಲ, ಪ್ರತಿಯೊಂದು ರಾಷ್ಟ್ರವೂ ಇನ್ನೊಂದು ದೇಶದೊಂದಿಗಿನ ತನ್ನ ಸಂಬಂಧವನ್ನು ಪರೀಕ್ಷೆಗೊಳಪಡಿಸುತ್ತದೆ. ಅದರಲ್ಲಿ ಪಾಸಾದರೆ ಮಾತ್ರ ಮತ್ತೆ ಸಂಬಂಧ ಬೆಳಸುತ್ತದೆ. ಆದರೆ ಭಾರತ ಹಾಗೆಂದಾದರೂ ಮಾಡಿದೆಯೇ? ಡಾ. ಸಿಂಗ್ ಅವರು ದಶಕದಿಂದ ಶಾಂತಿ ಸ್ಥಾಪನೆಗಾಗಿ ಇಸ್ಲಾಮಾಬಾದ್ನೊಂದಿಗೆ ಮಾತನಾಡುತ್ತಿದ್ದಾರೆ. ಆದರೆ ಕಾಲು ನಡಗುವವನು ಸರಿಯಾಗಿ ಶೇಕ್ ಹ್ಯಾಂಡ್ ಹೇಗೆ ಮಾಡಬಲ್ಲ? ವಾಸ್ತವಿಕ ಜಗತ್ತು ದುರ್ಬಲರನ್ನು ದೂರ ಸರಿಸಿ, ತನಗಾಗಿ ಬೇರೇ ವ್ಯವಸ್ಥೆ ಮಾಡಿಕೊಳ್ಳುತ್ತದೆ ಎನ್ನುವುದು ನಮ್ಮವರಿಗೆ ಗೊತ್ತಾದರೆ ಸಾಕು!
- ಎಮ್.ಜೆ. ಅಕ್ಬರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


