ಶಾಶ್ವತ ಯೋಜನೆಗಳೇಕೆ ಅನುಷ್ಠಾನವಾಗುತ್ತಿಲ್ಲ?
ಬದಲಾವಣೆಯ ಹೆಸರಿನಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಕೆಲವೇ ವರ್ಗಗಳನ್ನು ಗುರಿಯಾಗಿಸಿಕೊಂಡು ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಚುನಾವಣೆಯಲ್ಲಿ ನೀಡಿದಭರವಸೆಯನ್ನು ಉಳಿಸಿಕೊಳ್ಳುವ ತವಕದಲ್ಲಿದ್ದಂತೆ ಅದು ಕಾಣಿಸುತ್ತಿದೆ. ಈ ಧಾವಂತದಲ್ಲಿ ಸರ್ಕಾರ ಹೊಸ ಯೋಜನೆಗಳನ್ನೇನೋ ರೂಪಿಸುತ್ತಿದ್ದೆ, ಆದರೆ, ಯೋಜನೆಗಳು ರಾಜ್ಯದ ಜನರ ಬದುಕಿನ ಮಟ್ಟವನ್ನು ಎತ್ತರಿಸುವ ಚಿಂತನೆ ಹೊಂದಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ರಾಜ್ಯದ ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಯಾವುದೇ ಅಗತ್ಯ ಸಿದ್ಧತೆ ಮಾಡಿಕೊಳ್ಳದೇ ಜಾರಿಗೆ ತಂದ ಕ್ಷೀರಭಾಗ್ಯ ಯೋಜನೆ ಮತ್ತು ಈಗಾಗಲೇ ಪ್ರಾಥಮಿಕ ಶಾಲೆಯಲ್ಲಿ ಜಾರಿಯಲ್ಲಿರುವ ಬಿಸಿಯೂಟ ಯೋಜನೆಯನ್ನು ಕಾಲೇಜು ಹಂತಕ್ಕೆ ವಿಸ್ತರಿಸುವ ಸಿದ್ಧತೆಯನ್ನು ಸರ್ಕಾರ ಮಾಡಿಕೊಂಡಿದೆ. ಮೊಟ್ಟೆಭಾಗ್ಯ ಯೋಜನೆಯೂ ಚಿಂತನೆಯಲ್ಲಿದೆ!
ಸರ್ಕಾರ ರಾಜ್ಯದ ಎಲ್ಲಾ ಜನರ ಹಿತ ಕಾಯಬೇಕು ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆ ಹೇಳುವ ಮಂತ್ರ. ಆದರೆ, ಸರ್ಕಾರ ಕೇವಲ ಒಂದು ವರ್ಗವನ್ನೇ ಗುರಿಯಾಗಿಸಿಕೊಂಡು ಯೋಜನೆ ರೂಪಿಸಲು ಪ್ರಾರಂಭಿಸಿದಲ್ಲಿ ರಾಜ್ಯದ ಇನ್ನುಳಿದ ಜನರ ಪಾಡೇನು ಎನ್ನುವ ಪ್ರಶ್ನೆ ಎದುರಾಗುತ್ತದೆ. ಅಧಿಕಾರದಲ್ಲಿರುವ ಪಕ್ಷಗಳು ತಮ್ಮ ಪಕ್ಷದ ಅನುಕೂಲಕ್ಕಾಗಿ ಯೋಜನೆ ರೂಪಿಸಿದಲ್ಲಿ ಅದರಿಂದ ದೊಡ್ಡ ಮಟ್ಟದ ಹಾನಿಯಾಗುವುದು ರಾಜ್ಯದ ಜನತೆಗೇ. ಪಕ್ಕದ ಆಂಧ್ರಪ್ರದೇಶ ಸರ್ಕಾರ ತನ್ನ ಒಟ್ಟು ಬಜೆಟ್ನ ಶೇ. 45ರಷ್ಟು ಹಣವನ್ನು ರಾಜ್ಯದ ನೀರಾವರಿ ಯೋಜನೆಗಳಿಗಾಗಿ ಮೀಸಲಿಟ್ಟಿದೆ. ತಮಿಳುನಾಡು ಸರ್ಕಾರ ನೀರಾವರಿ ಯೋಜನೆಗಳಿಗೆ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಹಣ ಮೀಸಲಿಟ್ಟ ರಾಜ್ಯಗಳ ಸಾಲಿನಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಆದರೆ, ನಮ್ಮ ರಾಜ್ಯ ಮಾತ್ರ ಈ ವಿಷಯದಲ್ಲಿ ಸಾಕಷ್ಟು ಹಿಂದಿದೆ. ರಾಜ್ಯದ 14 ಜಿಲ್ಲೆಗಳ ವ್ಯಾಪ್ತಿಯಲ್ಲಿನ 789 ಕಾಲುವೆಗಳು ದುರಸ್ತಿಗಾಗಿ ಕಾಯುತ್ತಿವೆ. 125 ದೊಡ್ಡ ಕಾಲುವೆಗಳ ರಿಪೇರಿ ಕಾಮಗಾರಿ ಇಂದಿಗೂ ಟೆಂಡರ್ ಹಂತದಲ್ಲಿಯೇ ಇದೆ. ಆರ್ಥಿಕ ಮಿತವ್ಯಯದ ಹೆಸರಿನಲ್ಲಿ ಸರ್ಕಾರ ನೀರು ಬಳಕೆದಾರರ ಸಂಘ ಸ್ಥಾಪಿಸಿ ಕಾಲುವೆಗಳ ದುರಸ್ತಿ ಮತ್ತು ನೀರು ಹಂಚಿಕೆಯನ್ನು ಅವರಿಗೆ ನೀಡಿದೆ.
ಉ-ಕದ ಪ್ರಮುಖ ನೀರಾವರಿ ಯೋಜನೆಗಳಾದ ಕಳಸಾಬಂಡೂರಿ, ಸಿಂಗಟಾಲೂರ ಏತ ನೀರಾವರಿ ಕುಂಟುತ್ತಾ ಸಾಗಿವೆ. ರಾಜ್ಯದಲ್ಲಿ ಅಂತರ್ಜಲಮಟ್ಟ 350 ಅಡಿಗಿಂತ ಕೆಳಗೆ ಹೋಗಿದೆ. ಇದನ್ನು ಉತ್ತೇಜಿಸಲು ಕೇವಲ ಬಜೆಟ್ನಲ್ಲಿ ಘೋಷಣೆ ಮಾಡಿದ್ದನ್ನು ಹೊರತು ಪಡಿಸಿದಲ್ಲಿ ಇನ್ನಾವುದೇ ಗಂಭೀರ ಯೋಜನೆ ರೂಪಿತವಾಗಿಲ್ಲ. ಇನ್ನು ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಿಗೆ ಎಜುಸ್ಯಾಟ್ ಮೂಲಕ ಪಾಠ ಹೇಳಲು ವ್ಯವಸ್ಥೆ ಮಾಡಲಾಗಿದೆ. ದುರಂತವೆಂದರೆ ತರಗತಿಗಳು ನಡೆವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವೇ ಇರುವುದಿಲ್ಲ. ಹೀಗಾದಾಗ ಮಕ್ಕಳು ಈ ಯೋಜನೆಯ ಪ್ರಯೋಜನ ಹೇಗೆ ಪಡೆಯಬಲ್ಲರು?
ಇನ್ನು ಶಾದಿ ಭಾಗ್ಯ ಯೋಜನೆಯಲ್ಲಿ ರಾಜ್ಯದ ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗೆ 50 ಸಾವಿರ ನೆರವು ನೀಡಲು ಸರ್ಕಾರ ಮುಂದಾಗಿದೆ. ಇಂತಹ ಯೋಜನೆ ರೂಪಿಸುವುದೇ ಆದಲ್ಲಿ ಅದು ಕೇವಲ ಒಂದು ಕೋಮಿಗೇ ಏಕೆ ಸೀಮಿತವಾಗಬೇಕು? ಇನ್ನುಳಿದ ಕೋಮಿನಲ್ಲಿ ಬಡವರಿಲ್ಲವೇ? ರಾಜ್ಯದಲ್ಲಿ ಒಟ್ಟು ಕೃಷಿ ಭೂಮಿಯಲ್ಲಿ 76 ಲಕ್ಷ ಹೆಕ್ಟೇರ್ಗೂ ಅಧಿಕ ಪ್ರದೇಶ ಕೃಷಿಗಾಗಿ ಬಳಕೆಯಾಗುತ್ತಿದೆ. ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸಾಕಷ್ಟು ನೀರಾವರಿ ಯೋಜನೆಗಳು ರಾಜ್ಯದಲ್ಲಿವೆ. ಅಂತಹ ಯೋಜನೆ ಕೈಗೆತ್ತಿಕೊಂಡು ಯೋಜನೆ ರೂಪಿಸಿದಲ್ಲಿ ಆ ಭಾಗದ ರೈತರ ಬದುಕು ಶಾಶ್ವತವಾಗಿ ಸುಧಾರಣೆಯಾಗುತ್ತದೆ. ನಮ್ಮ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 61ರಷ್ಟು ಜನ ರೈತರಿದ್ದಾರೆ. ಆದರೆ, ಅವರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಯಾವ ಉತ್ತಮ ಯೋಜನೆಯನ್ನು ಜಾರಿಗೆ ತಂದಿದೆ?
ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗಳಾಗಿವೆ. ನಮ್ಮ ಆಂಗ್ಲ ಮಾಧ್ಯಮ ಶಾಲೆಗಳು ಕೇವಲ ಶಿಕ್ಷಣ ವ್ಯವಸ್ಥೆಯಿಂದ ಮಾತ್ರವಲ್ಲ, ಶಾಲೆಗಳಲ್ಲಿ ಮಕ್ಕಳ ಬೋಧನೆಗಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಆವಿಷ್ಕಾರಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರಗಳೇಕೆ ಸರ್ಕಾರಿ ಶಾಲೆಗಳಲ್ಲಿಯೂ ಸ್ಮಾರ್ಟ್ ಕ್ಲಾಸ್ಗಳನ್ನು ಅಳವಡಿಸಬಾರದು? ಮಕ್ಕಳಿಗೂ ಕಂಪ್ಯೂಟರ್ ಶಿಕ್ಷಣ ನೀಡಲು ರಾಜ್ಯದ ಹಲವಾರು (ಅಜೀಂ ಪ್ರೇಮ್ಜಿ, ಇನ್ಪೋಸಿಸ್) ಫೌಂಡೇಶನ್ಗಳು ನೂರಾರು ಶಾಲೆಗಳಿಗೆ ಕಂಪ್ಯೂಟರ್ ನೀಡಿದ್ದು, ಅವೆಲ್ಲಾ ಧೂಳು ತಿನ್ನುತ್ತಿವೆ. ಎಸ್.ಎಂ. ಕೃಷ್ಣ ಸಿಎಂ ಆಗಿದ್ದ ವೇಳೆಯಲ್ಲಿ ರೂಪಿಸಿದ 'ಮಾಹಿತಿ ಸಿಂಧು' ಯೋಜನೆ ಸ್ಥಗಿತವಾಗಿದ್ದರಿಂದ ಸಾವಿರಾರು ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನೊಂದೆಡೆ ಮಕ್ಕಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದೆಲ್ಲ ಅದೇಕೆ ಸರ್ಕಾರಕ್ಕೆ ಕಾಣುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಕೇವಲ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುವ ಬದಲು ಶಾಶ್ವತ ಯೋಜನೆಗಳನ್ನು ರೂಪಿಸಿದಲ್ಲಿ ಜನರ ಜೀವನ ಮಟ್ಟ ಸುಧಾರಣೆಯಾಗುತ್ತದೆ. ಈ ಎಲ್ಲ ಯೋಜನೆಗಳ ಮಧ್ಯೆ ಶಾಶ್ವತ ಯೋಜನೆಗಳಿಗೂ ಸಿಎಂ ಆದ್ಯತೆ ನೀಡಲಿ ಎನ್ನುವುದು ಎಲ್ಲರ ಆಶಯ.
- ಶಿವಕುಮಾರ ಕುಷ್ಟಗಿ
ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

