ನಂಬಿಕೆ ಶಿಕ್ಷಾರ್ಹವಾದರೆ ಜಗತ್ತೇ ಜೈಲು

ಎಂಥಾ ದುರದೃಷ್ಟಕರ ಘಟನೆಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ ನೋಡಿ. 6.5 ಕೋಟಿ ಜನರ ಧಾರ್ಮಿಕ ನಂಬಿಕೆಗಳ ಮೇಲೆ ಸವಾರಿ ಮಾಡಲು ಬೆರಳೆಣಿಕೆಯಷ್ಟು ಜನರ ಸಮಿತಿಯನ್ನು ರಚಿಸಲಾಗಿದೆ!
ಈ ಸಮಿತಿ 'ನಿಷೇಧ ಹೇರಬೇಕು' ಎಂದು ಸಿದ್ಧಪಡಿಸಿರುವ ಪಟ್ಟಿಯಲ್ಲಿ ಜ್ಯೋತಿಷ್ಯ, ವಾಸ್ತು ಶಾಸ್ತ್ರ, ಪಲ್ಲಕ್ಕಿ ಉತ್ಸವ, ಪಾದಪೂಜೆ, ಪ್ರಾಣಿ ಬಲಿ, ವಾಮಾಚಾರದಂಥ ಅನೇಕ ಆಚರಣೆಗಳಿವೆ. ಇನ್ನು ಪೂಜಾ ಸಾಮಗ್ರಿಗಳನ್ನು ಮಾರುವುದು ಮತ್ತು ರುದ್ರಾಕ್ಷಿ ಮಾಲೆಯನ್ನು ಧರಿಸುವುದೂ ಮೂಢನಂಬಿಕೆ ಎಂದು ಈ ಸಮಿತಿ ಹೇಳುತ್ತಿದೆ.
ಇದನ್ನೆಲ್ಲ ನೋಡಿದ ಮೇಲೆ ನನ್ನ 4 ವರ್ಷದ ಮೊಮ್ಮಗ ನೆನಪಾದ. ಒಂದು ದಿನ ಅವನಿಗೆ, "ನಿನಗೇನು ಇಷ್ಟವಿಲ್ಲ/ ಇಷ್ಟವಿದೆ ಅನ್ನುವುದನ್ನೆಲ್ಲ ಪಟ್ಟಿ ಮಾಡು" ಎಂದು ಹೇಳಿದೆ. ತನಗೆ ಏನು ಇಷ್ಟವಿಲ್ಲ ಎನ್ನುವುದರ ದೊಡ್ಡ ಪಟ್ಟಿಯನ್ನೇ ಅವನು ನನ್ನ ಎದುರಿಗೆ ಹಿಡಿದ. ಪ್ರತಿದಿನ ತನ್ನನ್ನು ಶಾಲೆಗೆ ಹೋಗಲು ಯಾರು ಬೇಗನೇ ಎಬ್ಬಿಸುತ್ತಿದ್ದರೋ ಅವರೆಲ್ಲರ ಹೆಸರನ್ನೂ ಅದರಲ್ಲಿ ಅವನು ಬರೆದಿದ್ದ! ಈಗ ಈ ಸಮಿತಿ ಮಾಡಿರುವುದು ಇದನ್ನೇ ಅಲ್ಲವೇ? ತಮಗೇನು ಇಷ್ಟವಿಲ್ಲವೋ ಅವನ್ನೆಲ್ಲ ಪಟ್ಟಿ ಮಾಡಿ, ತಮ್ಮ ಬಾಸ್ನೆದುರು ಹಿಡಿದಿದ್ದಾರೆ! ನರ ಬಲಿ, ಪ್ರಾಣಿ ಬಲಿ ಮತ್ತು ಮುಟ್ಟಾದವರನ್ನು ಹೊರಗಿಡುವ ಕೆಲವು ಅರ್ಥಹೀನ ಆಚರಣೆಗಳ ಬಗೆಗಿನ ಆ ಸಮಿತಿಯ ಅಭಿಪ್ರಾಯಕ್ಕೆ ನನ್ನ ಒಪ್ಪಿಗೆಯಿದೆಯಾದರೂ, ಆ ಪಟ್ಟಿಯಲ್ಲಿನ ಉಳಿದ ಸಂಗತಿಗಳ ಬಗ್ಗೆ ಮಾತ್ರ ಅಲ್ಲ.
ಜ್ಯೋತಿಷ್ಯವನ್ನು ನಿಷೇಧಿಸಬೇಕು ಎಂದು ಈ ಸಮಿತಿ ಹೇಳುತ್ತದೆ. ಆದರೆ ನಮ್ಮ 224 ಶಾಸಕರಲ್ಲಿ 224 ಮಂದಿಯೂ ಒಂದಲ್ಲ ಒಂದು ಬಾರಿ ಜ್ಯೋತಿಷಿಗಳ ಮೊರೆಹೋದವರೇ. ಈಗ ಹೋಗುತ್ತಿಲ್ಲವೆಂದರೂ ನಾಮನಿರ್ದೇಶನದ ಸಮಯದಲ್ಲಾದರೂ ಅತ್ತ ತಲೆಹಾಕಿರುತ್ತಾರೆ. ವಿಧಾನ ಸೌಧಕ್ಕೆ ಕಾಲಿಡುವುದಕ್ಕೆ ಅಥವಾ ಯಾವುದೇ ಜರೂರಿ ಕೆಲಸ ಶುರುಮಾಡುವುದಕ್ಕೆ ಮುನ್ನ ಎಲ್ಲಾ ಸಚಿವರೂ ಜ್ಯೋತಿಷಿಗಳ ಮನೆ ಬಾಗಿಲು ತಟ್ಟಿ ಬರುತ್ತಾರೆ. ಸಿದ್ದರಾಮಯ್ಯನವರೂ ತಮ್ಮ ಪ್ರಮಾಣ ವಚನದ ಸಮಯವನ್ನು ಜ್ಯೋತಿಷಿಯಿಂದ ನಿಗದಿಪಡಿಸಿದ್ದಿರಲೂಬಹುದು! ಕೆಲವರು ವಾಸ್ತು ಪರಿಣತರ ಮಾತು ಕೇಳಿ ತಮ್ಮ ಕಚೇರಿಯಲ್ಲಿನ ಟೇಬಲ್ಗಳನ್ನು ಬೇರೇ ದಿಕ್ಕಿನಲ್ಲಿ ದೂಕಿದರೆ, ಮತ್ತೆ ಕೆಲವರಂತೂ ಜ್ಯೋತಿಷಿಗಳು ಹೇಳಿದ್ದಾರೆಂಬ ಕಾರಣಕ್ಕೆ ತಮ್ಮ ನಿವಾಸ ಅಥವಾ ಕಚೇರಿಗಳನ್ನು ಬದಲಾಯಿಸದೆ ಪಟ್ಟು ಹಿಡಿದು ಅದರಲ್ಲೇ ಕುಳಿತಿದ್ದಾರೆ. ಸಿ.ಎಂ. ಸಿದ್ದರಾಮಯ್ಯನವರು ಮೊದಲ ಬಾರಿಗೆ ವಿಧಾನಸೌಧದಲ್ಲಿನ ಮುಖ್ಯಮಂತ್ರಿ ಕಚೇರಿಗೆ ತೆರಳುವಾಗ ಕೈಯಲ್ಲಿ ನಿಂಬೆ ಹಣ್ಣು ಹಿಡಿದುಕೊಂಡಿದ್ದರು! ಅಷ್ಟೇ ಅಲ್ಲದೆ ತಮ್ಮ ಕುರ್ಚಿಗೆ ಪೂಜೆ ಮಾಡಿ ಆನಂತರ ಅದರ ಮೇಲೆ ಆಸೀನರಾದರು. ಅವರು ನಿಂಬೆ ಹಣ್ಣು ಹಿಡಿದುಕೊಂಡಿದ್ದೇಕೆ? ಅದು ನಂಬಿಕೆಯೋ ಅಥವಾ ಅಧಿಕಾರ ಬಂದಾಕ್ಷಣ ಪಿತ್ತ ಜಾಸ್ತಿಯಾಗದಿರಲಿ ಎಂಬ ಕಾರಣಕ್ಕೆ ಹಾಗೆ ಮಾಡಿದರೋ?! ಇತ್ತೀಚೆಗೆ ಸಿದ್ದರಾಮಯ್ಯನವರ ಪತ್ನಿ, ಭಾರತೀತೀರ್ಥ ಮಹಾಸ್ವಾಮೀಜಿಗಳ ಮಠಕ್ಕೆ ಭೇಟಿ ಕೊಟ್ಟು ಆಶೀರ್ವಾದ ಪಡೆದು ಬಂದಿದ್ದೂ ನಂಬಿಕೆಯ ಕಾರಣದಿಂದಲೇ ಅಲ್ಲವೇ? ಅಥವಾ ಈ ಸಮಿತಿ ಮಾಡಿರುವ ಶಿಫಾರಸಿನ ಬಗ್ಗೆ ಚರ್ಚಿಸಲು ಅಲ್ಲಿಗೆ ಹೋಗಿದ್ದರೆ?
ಕುಕ್ಕೇ ಸುಬ್ರಮಣ್ಯದಲ್ಲಿ ನಡೆಯುವ ಮಡೆ ಸ್ನಾನವನ್ನು ಮೂಢನಂಬಿಕೆ ಎನ್ನುವುದೇಕೆ? ಅದು ವೈಯಕ್ತಿಕ ನಂಬಿಕೆ ಮತ್ತು ಆಯ್ಕೆಯ ಪ್ರಶ್ನೆಯಷ್ಟೆ. ಒಂದು ವೇಳೆ ಭಕ್ತನೊಬ್ಬನಿಗೆ ತನ್ನ ಆಚರಣೆಯಲ್ಲಿನ ಒಳಿತು-ಕೆಡುಕುಗಳ ಅರಿವಿದ್ದರೆ, ಆತನನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಕೇವಲ ಹಿಂದುಳಿದ ಜಾತಿಯವರಿಗಷ್ಟೇ ಮಡೆಸ್ನಾನ ಮಾಡಲು ಒತ್ತಾಯ ಮಾಡಲಾಗುತ್ತದೆ ಎನ್ನುವುದು ಮೂರ್ಖತನದ ಅತಿರೇಕವಷ್ಟೆ. ಅನ್ಯ ಮಠಗಳ ಅರ್ಚಕರು ಊಟದ ಎಲೆಗಳ ಮೇಲೆ ಉರುಳುವುದನ್ನು ನಾನೇ ನೋಡಿದ್ದೇನೆ. ಇನ್ನು ನ್ಯಾಯಾಲಯ ಕೂಡ ಮಡೆಸ್ನಾನವನ್ನು ತಡೆಯಬಾರದು ಎಂಬ ತೀರ್ಪಿತ್ತಿರುವುದರಿಂದ ಈಗ ಏನು ಮಾಡುವುದಕ್ಕೂ ಸಾಧ್ಯವಿಲ್ಲ.
ಒಂದು ವೇಳೆ ವಾಸ್ತು ಶಾಸ್ತ್ರವನ್ನು ನಿಷೇಧಿಸಬೇಕು ಎಂದಾದರೆ, ಮೊದಲು ಮುಖ್ಯಮಂತ್ರಿಗಳು ತಮಗೆ ಕೊಟ್ಟಿರುವ "ಅನುಗ್ರಹ" ನಿವಾಸಕ್ಕೆ ತೆರಳಬೇಕು ಎನ್ನುವುದನ್ನು ಈ ಸಮಿತಿ ಹೇಳಲಿ. ವಿರೋಧ ಪಕ್ಷದನಾಯಕರಿದ್ದಾಗ ಕೊಟ್ಟ ಮನೆಯಲ್ಲೇ ಸಿದ್ದರಾಮಯ್ಯನವರು ಇಂದಿಗೂ ವಾಸವಾಗಿರುವುದೇಕೆ? ಆ ಮನೆ ತುಂಬಾ ಅದೃಷ್ಟ ತಂದಿದೆ ಎನ್ನುವುದು ಅವರ ನಂಬಿಕೆ. ಅವರ ಈ ನಂಬಿಕೆ ಅವೈಜ್ಞಾನಿಕವಾದದ್ದು ಎನ್ನುವ ಕಾರಣಕ್ಕೆ ಅವರಿಗೆ ಶಿಕ್ಷೆ ನೀಡಲಾಗುತ್ತದಾ? ಅವರ ಕ್ಯಾಬಿನೆಟ್ ಸಹೋದ್ಯೋಗಿಗಳು, ತಮಗೆ ನೀಡಿದ ಅಧಿಕೃತ ನಿವಾಸಗಳ ಗೋಡೆಗಳನ್ನು ಕೆಡವಿ, ವಾಸ್ತುವಿಗೆ ತಕ್ಕಂತೆ ಅದನ್ನು ಬದಲಾಯಿಸಿದ್ದಾರೆ ಎನ್ನುವುದನ್ನು ಜನ ಮರೆತಿಲ್ಲ. ಇನ್ನು ಪಾದ ಪೂಜೆ ಮತ್ತು ಪಲ್ಲಕ್ಕಿ ಉತ್ಸವಗಳ ವಿಷಯಕ್ಕೆ ಬಂದರೆ, ಅನಾದಿ ಕಾಲದಿಂದಲೂ ಈ ಸಂಪ್ರದಾಯ ಜಾರಿಯಲ್ಲಿದೆ. ಯಾವ ಸ್ವಾಮೀಜಿಯೂ "ನನ್ನ ಪಾದ ಪೂಜೆ ಮಾಡಿ ಅಥವಾ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಿ" ಎಂದು ಜನರನ್ನು ಒತ್ತಾಯಿಸುವುದಿಲ್ಲ. ಇಕಟ್ಟಿನ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳುವುದು ಅವರಿಗೆ ಹಿತಕೊಡುತ್ತದೆ ಅಥವಾ ದಿನಕ್ಕೆ ಹತ್ತು ಬಾರಿ ಪಾದ ಪೂಜೆ ಮಾಡಿಸಿಕೊಳ್ಳುವುದು ಮಜವಾಗಿರುತ್ತದೆ ಎಂದು ಈ ಸಮಿತಿಯವರು ಭಾವಿಸಿದ್ದಾರಾ?
ರುದ್ರಾಕ್ಷಿ ಜಪಮಾಲೆ ಮತ್ತು ಇತರ ಪೂಜಾ ಸಾಮಗ್ರಿಗಳ ಮಾರಾಟದ ಮೇಲೆ ನಿಷೇಧವೇಕೆ ಹೇರಬೇಕು? ನಂಬಿಕೆಯಿದ್ದವರು ರುದ್ರಾಕ್ಷಿ ಧರಿಸಿದರೆ ಸಮಿತಿಯ ಮಂದಿಗೇನು ತೊಂದರೆ? ಒಂದು ವೇಳೆ ಇದು ನಿಜಕ್ಕೂ ಕಾನೂನಾದರೆ ಈಗಿನ ಅರ್ಧದಷ್ಟು ಸಚಿವರು ಮತ್ತು ಮುಕ್ಕಾಲು ಭಾಗ ವಿಧಾನ ಸಭಾ ಸದಸ್ಯರನ್ನು ಶಿಕ್ಷಿಸಬೇಕಾಗುತ್ತದೆ. ರುದ್ರಾಕ್ಷಿ ಧರಿಸಿದವರು ಗುಣಾತ್ಮಕ ಪರಿಣಾಮಗಳ ಅನುಭೂತಿ ಪಡೆದಿದ್ದಾರೆ ಮತ್ತು ಹಲವರು ಅವುಗಳನ್ನು ಮಾರುತ್ತಾ ಬದುಕು ಕಂಡುಕೊಂಡಿದ್ದಾರೆ. ಎಲ್ಲಾ ಜಾತಿಯವರು ಇದನ್ನು ಧರಿಸುತ್ತಾರೆ. ಇದರಿಂದ ಯಾರಿಗೆ ತೊಂದರೆಯಾಗುತ್ತಿದೆ?
ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಸಮಿತಿ ಸನಾತನ ಹಿಂದು ಧರ್ಮವನ್ನು ಕೊನೆಗಾಣಿಸಲು ತನ್ನ ಕೈಲಾದ ಎಲ್ಲಾ ಪ್ರಯತ್ನವನ್ನೂ ಮಾಡುತ್ತಿದೆ. ರುದ್ರಾಕ್ಷಿ ಧರಿಸುವುದು ತಪ್ಪು ಎಂದರೆ, ಮುಸಲ್ಮಾನರು ದಿನಕ್ಕೆ ಐದು ಬಾರಿ ನಮಾಜು/ ಕ್ರಿಶ್ಚಿಯನ್ನರು ವಾರಕ್ಕೊಂದು ಬಾರಿ ಸಮೂಹ ಪ್ರಾರ್ಥನೆ ಮಾಡುವುದು ಅಥವಾ ಶಿಲುಬೆಯನ್ನು ಧರಿಸುವುದೂ ಶಿಕ್ಷಾರ್ಹವಲ್ಲವೇ? ಸನಾತನ ಧರ್ಮವೇ ಭಾರತದ ಬುನಾದಿ. ಸಾವಿರಾರು ವರ್ಷಗಳಿಂದ ಎಷ್ಟೋ ದುಷ್ಟ ಶಕ್ತಿಗಳು ಈ ಬುನಾದಿಯನ್ನು ಅಲುಗಾಡಿಸಲು ಪ್ರಯತ್ನಿಸಿ ಬೂದಿಯಾಗಿಹೋಗಿವೆ. ಇಷ್ಟೆಲ್ಲ ಮೂರ್ಖತನವನ್ನು ಪ್ರದರ್ಶಿಸುವ ಬದಲು ಮಂದಿರ ಅಥವಾ ಮಠಗಳನ್ನು ಮುಚ್ಚಿಹಾಕುವುದು ಒಳಿತು. ಈ ನಾಸ್ತಿಕರು "ದೇವರಿಲ್ಲ" ಎಂದು ಹೇಳುತ್ತಿದ್ದಾರೆ. ಪರೋಕ್ಷವಾಗಿ ತಮ್ಮ "ದೇವರಿಲ್ಲ ಎನ್ನುವ ನಂಬಿಕೆಯನ್ನು" ನಮ್ಮ ಮೇಲೆ ಹೇರುತ್ತಿದ್ದಾರೆ! ಹಾಗೆ ನೋಡಿದರೆ, ಎಲ್ಲಾ ಕ್ಷೇತ್ರಗಳಲ್ಲಿನಂತೆ ಧಾರ್ಮಿಕ ಕ್ಷೇತ್ರದಲ್ಲೂ ಕೂಡ ವಂಚಕರಿದ್ದಾರೆ. ಅಲ್ಲದೆ, ಅಂಥವರ ಹೆಡೆಮುರಿಕಟ್ಟಲು ಕಾನೂನು ಕಾಲಕಾಲಕ್ಕೆ ಕ್ರಮ ಕೈಗೊಳ್ಳುತ್ತಲೇ ಇದೆ.
ಪುಣ್ಯವಶಾತ್ ಈ ಸಮಿತಿ ರಚಿಸಿರುವ ಈ ಕಾಯ್ದೆ ಇದೇ ತಿಂಗಳು ಕಾನೂನಾಗಲಿಲ್ಲ. ಇಲ್ಲದಿದ್ದರೆ ಕೊಲ್ಲೂರು ಮೂಕಾಂಬಿಕೆ ದೇವಾಲಯದಲ್ಲಿ ಚಂಡೀ ಹವನ ನಡೆಸಿದ್ದಕ್ಕಾಗಿ ಪಿ. ಚಿದಂಬರಂ ಅವರು ಜೈಲು ಸೇರಬೇಕಾಗುತ್ತಿತ್ತು! ಇಂದಿರಾ ಗಾಂಧಿಯವರನ್ನೊಮ್ಮೆ ನಾನು ಶೃಂಗೇರಿ ಪೀಠದ ಸ್ವಾಮೀಜಿಗಳ ಮತ್ತು ಧರ್ಮಸ್ಥಳದ ದರ್ಶನಕ್ಕೆ ಕರೆದೊಯ್ದಿದ್ದೆ. ಧರ್ಮದಲ್ಲಿ ಅವರಿಗೆ ಪೂರ್ಣ ನಂಬಿಕೆ ಇತ್ತು. ನಾನು ಎಸ್.ಎಂ. ಕೃಷ್ಣ, ವಿಲಾಸ್ ರಾವ್ ದೇಶ್ಮುಖ್, ಕ್ಯಾ. ಅಮರಿಂದರ್ ಸಿಂಘ್, ನಟವರ್ ಸಿಂಘ್ ಮತ್ತು ಸುಶೀಲ್ ಕುಮಾರ್ ಶಿಂದೆಯವರೊಂದಿಗೆ ಕೆಲಸ ಮಾಡಿದ್ದೇನೆ. ಇವರ್ಯಾರೂ ಇಂಥ ಧರ್ಮ ವಿರೋಧಿ ಗುಣವನ್ನು ತೋರಿಸಿದವರಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಉಡುಪಿ ಶ್ರೀಕೃಷ್ಣ ಮಠದ ವಿವಾದ ಭುಗಿಲೆದ್ದಿತ್ತು. ಆದರೆ ಜನಾರ್ದನ ಪೂಜಾರಿಯವರು ನಡುವೆ ಬಂದು, "ಇಂಥ ವಿಷಯಗಳನ್ನು" ಮುಟ್ಟಬಾರದು ಎಂದು ಬಹಿರಂಗ ಹೇಳಿಕೆ ನೀಡಿ ಮುಖ್ಯಮಂತ್ರಿಗಳನ್ನು ಮುಜುಗರದಿಂದ ಬಚಾವು ಮಾಡಿದ್ದರು. ಮುಖ್ಯಮಂತ್ರಿಗಳೇ, ಮೂಲಸೌಕರ್ಯಾಭಿವೃದ್ಧಿ, ರೈತರ ಸಮಸ್ಯೆ, ಕಾವೇರಿ ವಿವಾದ, ವಿದ್ಯುತ್ ಅಭಾವ, ಮಕ್ಕಳಲ್ಲಿ ಅಪೌಷ್ಟಿಕತೆ, ಉದ್ಯೋಗ ಸಮಸ್ಯೆ....ಹೀಗೆ ಚಿಂತಿಸಲು ನಿಮ್ಮ ಮುಂದೆ ಅನೇಕ ವಿಷಯಗಳಿವೆ. ದಯವಿಟ್ಟು, ತೆರಿಗೆದಾರರ ಹಣವನ್ನು ಲೂಟಿ ಮಾಡುತ್ತಿರುವ ರಾಜಕಾರಣಿಗಳನ್ನು/ ಅಧಿಕಾರಿಗಳನ್ನು ಶಿಕ್ಷಿಸುವುದಕ್ಕೆ ಮುಂದಾಗಿ.
ರಾಜ್ಯವನ್ನು ಮುನ್ನಡೆಸುವ ಅವಕಾಶ, ದುರ್ಬಲರನ್ನು ಮೇಲಕ್ಕೆತ್ತುವ ಶಕ್ತಿ ಎಲ್ಲರಿಗೂ ಸಿಗುವುದಿಲ್ಲ. ನಿಮಗೆ ಅದು ಸಿಕ್ಕಿದೆ. ದಯವಿಟ್ಟೂ ಅದನ್ನು ಸದುಪಯೋಗಪಡಿಸಿಕೊಳ್ಳಿ. ನಿಮಗೆ ಒಳ್ಳೆಯದಾಗಲಿ ಮತ್ತು ಸ್ವಲ್ಪ ವಿಶಾಲ ಮನಸ್ಸಿನಿಂದ ಯೋಚಿಸಲು ಶುರುಮಾಡಿ. ಏಕೆಂದರೆ ನೀವು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿಗಳು, ಒಂದು ನಿರ್ದಿಷ್ಟ ಗುಂಪಿಗಲ್ಲ.
- ದ್ವಾರಕಾನಾಥ್. ಬಿ.ಎಸ್
ಖ್ಯಾತ ಜ್ಯೋತಿಷಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


