ಉತ್ತಮ ಆಡಳಿತ ನಿರ್ವಹಣೆಗೆ ಬೇಕು ಒಳ್ಳೆಯ ವರ್ಗಾವಣೆ ನೀತಿ
ಪ್ರತಿ ದಿನ ಪತ್ರಿಕೆಗಳಲ್ಲಿ ಮತ್ತು ಟಿ.ವಿ. ಚಾನೆಲ್ಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಲ್ಲಿ ಅಬ್ಬರದ ಪ್ರಚಾರ-ಪ್ರಾಮುಖ್ಯ ದೊರೆಯುತ್ತಿರುವುದು ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಹಾಗೂ ಭ್ರಷ್ಟಾಚಾರದ ಪ್ರಕರಣಗಳಿಗೆ. ಸರ್ಕಾರದಿಂದ, ಅಂದರೆ ಮುಖ್ಯಮಂತ್ರಿ/ಮಂತ್ರಿಗಳಿಂದ ಪೀಡೆಗೆ ಒಳಗಾಗಿರುವ ಶುದ್ಧಹಸ್ತ, ಪ್ರಾಮಾಣಿಕ ಅಧಿಕಾರಿಗಳ ಬವಣೆ ಕೂಡ ಆಗೊಮ್ಮೆ-ಈಗೊಮ್ಮೆ ಸುದ್ದಿ ಮಾಡುತ್ತಿವೆ. ಉತ್ತರ ಪ್ರದೇಶದ ಐ.ಎ.ಎಸ್. ಅಧಿಕಾರಿ ದುರ್ಗಾಶಕ್ತಿ ನಾಗ್ಪಾಲ್, ಹರಿಯಾಣಾದ ಅಶೋಕ್ ಖೇಮ್ಕಾ ಮತ್ತು ಕರ್ನಾಟಕದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಮುದ್ದನೇನಿ ಅವರು ತಕ್ಷಣ ನೆನಪಿಗೆ ಬರುತ್ತಾರೆ. ಇಂತಹ ಪ್ರಕರಣಗಳು ಹಿಂದೆ ಸಾಕಷ್ಟು ನಡೆದಿವೆ.
ದಕ್ಷ, ಶುದ್ಧ ಹಸ್ತ, ಪ್ರಾಮಾಣಿಕ ಅಧಿಕಾರಿಗಳು, ನೌಕರರು ಅಲ್ಪಸಂಖ್ಯಾತರು. ಬಹುಪಾಲು (ಮೆಜಾರಿಟಿ) ಅಧಿಕಾರಿಗಳು ಭ್ರಷ್ಟರು/ಅದಕ್ಷರು ಎಂಬುದು ನಿಜವಾಗಿಯೂ ಒಂದು ಭಯಾನಕ ಸ್ಥಿತಿ ಎಂದು ಹೇಳಲೇಬೇಕು! ಸರ್ಕಾರಿ ನೌಕರರು ನಮ್ಮ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ಹೊಂದಿದ್ದಾರೆ. ಅಕ್ಷರಶಃ ನೌಕರರು ಸರ್ಕಾರದ ಕೆಲಸ ಮಾಡುವ ಕೈಗಳಾಗಿರುತ್ತಾರೆ. ಕೈ ಸರಿಯಿಲ್ಲದಿದ್ದಾಗ ಯಾವುದೇ ಕೆಲಸ ಸರಿಯಾಗಿ ನಡೆಯಲು ಸಾಧ್ಯವಾಗುವುದಿಲ್ಲ. ನಾವು ಇಂದು ರಾಜ್ಯ ಮತ್ತು ರಾಷ್ಟ್ರದಲ್ಲಿ ನೋಡುತ್ತಿರುವುದು ಇಂಥ ಹೀನ ಸ್ಥಿತಿಯನ್ನೇ. ಯಾವುದೂ ಸಮರ್ಪಕವಾಗಿಲ್ಲ, ಗೊಂದಲರಹಿತವಾಗಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಅತೃಪ್ತಿ-ಆಕ್ರೋಶ ತುಂಬಿ ತುಳುಕುತ್ತಿದೆ. ಜನ ಬೇಸತ್ತಿದ್ದಾರೆ. ಅಸಹನೆ ಸಮಾಜದಲ್ಲಿ ತಾಂಡವವಾಡುತ್ತಿದೆ. ಅಭಿವೃದ್ಧಿ ವೇಗವಾಗಿ ಆಗುತ್ತಿಲ್ಲ. ಇದರ ಫಲ ನಿಜವಾಗಿ ತಲುಪಬೇಕಾದವರನ್ನು ತಲುಪುತ್ತಿಲ್ಲ. ಇದರ ಫಲ ಇಂತಹ ಒಂದು ಕೆಟ್ಟ ಪರಿಸ್ಥಿತಿಗೆ ಕೇವಲ ಸರ್ಕಾರಿ ನೌಕರರನ್ನು ಹೊಣೆ ಮಾಡುವುದು ತಪ್ಪಾಗುತ್ತದೆ. ಏಕೆಂದರೆ, ನೌಕರರು ಆಡಳಿತ ವ್ಯವಸ್ಥೆಯ ಒಂದು ಭಾಗ ಮಾತ್ರ. ಇನ್ನೊಂದು ಪ್ರಮುಖ ಭಾಗ ಜನಪ್ರತಿನಿಧಿಗಳು. ಪರಮಾಧಿಕಾರ ಇವರ ಕೈಯಲ್ಲಿ ಕೇಂದ್ರೀಕೃತವಾಗಿರುತ್ತದೆ. ನೌಕರರು ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡಬೇಕಾಗುತ್ತದೆ. ನೌಕರರಿಗೆ ಸ್ವತಂತ್ರ ಅಧಿಕಾರ ಇರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೀಲಿಕೈ ಇರುವುದು ಮುಖ್ಯಮಂತ್ರಿ-ಮಂತ್ರಿಗಳ ಕೈಯಲ್ಲಿ ಎಂಬುದು ಸತ್ಯ. ಇವರ ಮೇಲೆ ಪ್ರಭಾವ ಬೀರುವ ಶಾಸಕರು ಲೆಕ್ಕಕ್ಕೆ ಬರುತ್ತಾರೆ. ಏಕೆಂದರೆ, ಶಾಸಕರು ತಿರುಗಿ ಬಿದ್ದರೆ ಮುಖ್ಯಮಂತ್ರಿ-ಮಂತ್ರಿಗಳ ಸಿಂಹಾಸನ ನಡುಗುವುದು ಖಚಿತ.
ಈ ಹಿನ್ನೆಲೆಯಲ್ಲಿ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಆಡಳಿತವನ್ನು ನೀಡುವ ಜವಾಬ್ದಾರಿ ಹೆಚ್ಚಾಗಿರುವುದು ಮುಖ್ಯಮಂತ್ರಿಗಳಿಗೆ/ಮಂತ್ರಿಗಳಿಗೆ ಮಾತ್ರ ಎಂದು ನಾನು ಭಾವಿಸುತ್ತೇನೆ. ಸಾರ್ವಜನಿಕ ಹಿತಾಸಕ್ತಿ, ರಾಜ್ಯದ ಅಭಿವೃದ್ಧಿ, ಜನತೆಯ ಕಲ್ಯಾಣ, ಕಾನೂನುಬದ್ಧ ಆಡಳಿತ ಹಾಗೂ ಸಾಂವಿಧಾನಿಕ ನೈತಿಕ ನಡವಳಿಕೆ ಮಂತ್ರಿಗಳ ದಾರಿದೀಪವಾದರೆ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ. ಕೆಲವು ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲಿ ಇಂತಹ ಒಂದು ಸುಂದರ ರಾಜಕೀಯ ವಾತಾವರಣವಿತ್ತು ಎಂಬುದನ್ನು ನೆನಸಿಕೊಂಡರೆ ಹೆಮ್ಮೆಯಾಗುತ್ತದೆ. ಇಂದು ಮಂತ್ರಿಗಳ/ಶಾಸಕರ ಬಹುಪಾಲು ಸಮಯವನ್ನು ತೆಗೆದುಕೊಳ್ಳುತ್ತಿರುವ ನೌಕರರ ವರ್ಗಾವಣೆ ವಿಷಯ ಅಂದು ಒಂದು ಪ್ರಮುಖ ವಿಷಯವೇ ಆಗಿರಲಿಲ್ಲ. ತೀರಾ ಅನಿವಾರ್ಯವಾದಾಗ ಮಾತ್ರ ಮುಖ್ಯಮಂತ್ರಿ/ಮಂತ್ರಿಗಳ ಮಧ್ಯಪ್ರವೇಶ ಮಾಡುತ್ತಿದ್ದರು. ಉಳಿದಂತೆ ನೌಕರರ ವರ್ಗಾವಣೆ, ಸರ್ಕಾರಿ ನಿಯಮಗಳ ಪ್ರಕಾರ, ಹಿರಿಯ ಅಧಿಕಾರಿಗಳ ಉಸ್ತುವಾರಿಯಲ್ಲಿ ನಡೆದು ಹೋಗುತ್ತಿತ್ತು. ಮಂತ್ರಿಗಳು ಕೆಲಸ ಮಾಡಲು ಇಂತಹ ಅಧಿಕಾರಿಯೇ ಬೇಕು ಎಂದು ಭಾವಿಸಿರಲಿಲ್ಲ. ಸಾರ್ವಜನಿಕ ಸೇವೆ ಮಾಡಲು ಯಾರಾದರೇನು? ನೀತಿ-ನಿಯಮಗಳಿಗನುಗುಣವಾಗಿ ಪ್ರತಿಯೊಬ್ಬ ನೌಕರ ಕರ್ತವ್ಯ ನಿರ್ವಹಿಸುವುದು ಕಡ್ಡಾಯ ಎಂದು ಆ ಕಾಲದ ಮಂತ್ರಿಗಳು ತಿಳಿದಿದ್ದರು. ಹಾಗಾಗಿ, ವರ್ಗಾವಣೆಗಳು ನೀತಿ-ನಿಯಮಾನುಸಾರ ನಡೆದು ಸರ್ಕಾರ ಸುಗಮವಾಗಿ ಸಾಗುತ್ತಿತ್ತು.
ಈ ನಿಟ್ಟಿನಲ್ಲಿ ನನ್ನ ಒಂದು ಅನುಭವವನ್ನು ಓದುಗರ ಮುಂದಿಡುವುದು ಸಂದರ್ಭೋಚಿತವಾಗಿರುವುದರಿಂದ ಇಲ್ಲಿ ಉದಾಹರಿಸುತ್ತಿದ್ದೇನೆ. ರಾಮಕೃಷ್ಣ ಹೆಗಡೆಯವರ ಸರ್ಕಾರದಲ್ಲಿ ನಾನು ಶಿಕ್ಷಣ ಸಚಿವನಾಗಿದ್ದ ಅವಧಿ (1987-88)ಯಲ್ಲಿ ಇಲಾಖೆ ಸ್ವಲ್ಪಮಟ್ಟಿಗೆ ಜಡ್ಡುಗಟ್ಟಿದೆ ಎಂಬುದನ್ನು ನಾನು ಗಮನಿಸಿದೆ. ಇದಕ್ಕೆ ಮುಖ್ಯ ಕಾರಣ ಅಧಿಕಾರಿಗಳು ವರ್ಷಗಟ್ಟಲೆ ಒಂದು ಜಾಗ ಹಿಡಿದುಕೊಂಡು ಕಾಲ ಕಳೆಯುತ್ತಿದ್ದ ಪರಿಸ್ಥಿತಿ. ಎಲ್ಲಾ ಇಲಾಖೆಗಳಲ್ಲಿರುವಂತೆ ಶಿಕ್ಷಣ ಇಲಾಖೆಯಲ್ಲೂ ಬೋಧಕ, ತರಬೇತಿ ಹಾಗೂ ಕ್ಷೇತ್ರ ನಿರ್ವಹಣೆ ಎಂಬ 2-3 ವಿಭಾಗಗಳಿದ್ದವು. ಪ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದವರು, ತರಬೇತಿ ಕೇಂದ್ರಗಳಲ್ಲಿ ಸೂಪರಿಂಟೆಂಡೆಂಟ್ಗಳಾಗಿ ಸೇವೆ ಸಲ್ಲಿಸುತ್ತಿದ್ದವರು, ಕ್ಷೇತ್ರ ಹುದ್ದೆಗಳಿಗೆ ಅಂದರೆ ಸಹಾಯಕ ಶಿಕ್ಷಣ ಅಧಿಕಾರಿಗಳ ಹುದ್ದೆಗೆ ಅರ್ಹರಾಗಿದ್ದರು. ಅಂತೆಯೇ ಸಹಾಯಕ ಶಿಕ್ಷಣ ಅಧಿಕಾರಿಗಳು ಮುಖ್ಯ ಶಿಕ್ಷಕರಾಗಿ ಮತ್ತು ತರಬೇತಿ ಕೇಂದ್ರಗಳಿಗೆ ಬೋಧಕರಾಗಿ ಅರ್ಹರಾಗಿದ್ದರು. ಆಡಳಿತದ ದೃಷ್ಟಿಯಿಂದ ಅಧಿಕಾರಿಗಳಿಗೆ ಬೋಧನೆ ಹಾಗೂ ಆಡಳಿತ ವಿಷಯಗಳಲ್ಲಿ ಅನುಭವ ಗಳಿಸುವುದು ಅವಶ್ಯಕವಾಗಿತ್ತು. ಬೋಧನೆಯ ಅರಿವು ಬೆಳೆಸಿಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಕಾರ್ಯ ನಿರ್ವಹಣೆಯ ಅನುಭವ ಪಡೆದ ಮುಖ್ಯ ಶಿಕ್ಷಕರು ಸಮರ್ಥರಾಗಿ ತಮ್ಮ ತಮ್ಮ ಕರ್ತವ್ಯ ನಿರ್ವಹಣೆ ಮಾಡಬಹುದಾಗಿತ್ತು. ಆದರೆ, ಬಹುತೇಕ ಅಧಿಕಾರಿಗಳು ಕ್ಷೇತ್ರ ನಿರ್ವಹಣೆಯಲ್ಲೇ ಮುಂದುವರೆಯಲು ಉತ್ಸುಕರಾಗಿದ್ದರು.
ಆದ್ದರಿಂದ ನಾನು ವರ್ಗಾವಣೆಯ ಅವಕಾಶವನ್ನು ಉಪಯೋಗಿಸಿಕೊಂಡು ಶಿಕ್ಷಣ ಇಲಾಖೆಗೆ ಹೊಸ ಚೈತನ್ಯ ತುಂಬಲು ಒಂದು ಸರಳ ಸೂತ್ರ ನಿರೂಪಿಸಿದೆ. 5 ವರ್ಷಗಳಿಗಿಂತ ಹೆಚ್ಚು ಕಾಲ ಒಂದೇ ಹುದ್ದೆಯಲ್ಲಿದ್ದ ಮುಖ್ಯ ಶಿಕ್ಷಕರು, ತರಬೇತಿ ಕೇಂದ್ರದ ಮುಖ್ಯಸ್ಥರು ಮತ್ತು ಸಹಾಯಕ ಶಿಕ್ಷಣಾಧಿಕಾರಿಗಳು ಅದಲು-ಬದಲಾಗಬೇಕು ಎಂಬುದೇ ಸೂತ್ರವಾಗಿತ್ತು. ಆದರೆ, ಈ ಸೂತ್ರವನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಬರಬಹುದಾದ ರಾಜಕೀಯ ಒತ್ತಡಗಳನ್ನು ನಿಭಾಯಿಸಲು ಮುಖ್ಯಮಂತ್ರಿ ಹೆಗಡೆಯವರ ಬೆಂಬಲ ಕೇಳಿದೆ. ಅದಕ್ಕೆ ಹೆಗಡೆಯವರು ಒಪ್ಪಿಕೊಂಡರು. ನಂತರ ಸೂತ್ರದ ಪ್ರಕಾರ ಇಲಾಖೆಯಲ್ಲಿ ಪಟ್ಟಿ ತಯಾರಿಸಿ, ವರ್ಗಾವಣೆ ಕೈಗೊಳ್ಳಲಾಯಿತು. ಈ ಹಂತದಲ್ಲಿ ನನ್ನ ಸಹೋದ್ಯೋಗಿ ಸಚಿವರಾಗಿದ್ದ ಸಿಂಧ್ಯಾರವರು ಅವರ ಕನಕಪುರ ಕ್ಷೇತ್ರದಲ್ಲಿ 5 ವರ್ಷ ಮುಗಿಸಿದ್ದ ಒಬ್ಬ ಅಧಿಕಾರಿಯನ್ನು ಉಳಿಸಿಕೊಡುವಂತೆ ಕೋರಿದ್ದರು. ಆದರೆ, ನಿಯಮದ ಪ್ರಕಾರ ಆ ಅಧಿಕಾರಿಯ ವರ್ಗಾವಣೆಯಾಗದೇ ವಿಧಿಯಿರಲಿಲ್ಲ. ನಾನು ವರ್ಗಾವಣೆಯ ಧ್ಯೇಯೋದ್ದೇಶಗಳನ್ನು ವಿವರಿಸಿದಾಗ ಸಿಂಧ್ಯಾರವರು ಅರ್ಥಮಾಡಿಕೊಂಡು ತಮ್ಮ ಸಮ್ಮತಿ ಸೂಚಿಸಿ ಸಹಕರಿಸಿದರು. ಮಂತ್ರಿ/ಮುಖ್ಯಮಂತ್ರಿಗಳಲ್ಲಿ ಸಾರ್ವಜನಿಕ ನ್ಯಾಯದ ಕುರಿತು ಕಾಳಜಿ ಮತ್ತು ಬದ್ಧತೆ ಇದ್ದಾಗ ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡುತ್ತದೆ, ಜನರಿಗೆ ಹಿತವಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಅಂದು ನಾನು ಕೈಗೊಂಡ ವರ್ಗಾವಣೆಯಲ್ಲಿ ಅವಕಾಶ ವಂಚಿತರಾದವರೆಲ್ಲಾ ಕ್ಷೇತ್ರ ನಿರ್ವಹಣೆಯಲ್ಲಿ ಅವಕಾಶ ಪಡೆದು ಉತ್ತಮವಾಗಿ ಕೆಲಸ ನಿರ್ವಹಿಸಿದರು. ಇವರಲ್ಲಿ ಅಹಿಂದಾ ವರ್ಗಗಳಿಗೆ ಸೇರಿದವರು ಅಧಿಕ ಸಂಖ್ಯೆಯಲ್ಲಿದ್ದರು ಎಂಬುದೂ ಸಹ ಸಂತಸದ ಸಂಗತಿ.
ಇಂದು ಎಲ್ಲವೂ ಬದಲಾಗಿ ದಕ್ಷ ಹಾಗೂ ಚುರುಕು ಆಡಳಿತಕ್ಕೆ ಸಾಧನವಾಗಬೇಕಾಗಿದ್ದ ವರ್ಗಾವಣೆ ಕೋಟಿಗಟ್ಟಲೆ ಹಣ ತರುವ ಉದ್ದಿಮೆಯಾಗಿ ಪರಿವರ್ತನೆಯಾಗಿದೆ. ಸಚಿವರು-ಶಾಸಕರು, ನೌಕರರು ವರ್ಷಕ್ಕೆ 6 ತಿಂಗಳ ಕಾಲ ಇದರಲ್ಲೇ ಮಗ್ನರಾಗಿರುತ್ತಾರೆ. ಹಿಂದಿನ ಸಂಸ್ಕೃತಿ ಮರೆತುಹೋಗಿದೆ. ಸಾರ್ವಜನಿಕ ಸೇವೆ ಹಿಂದೆ ಎಷ್ಟು ನಿಷ್ಠುರವಾಗಿತ್ತೆಂದರೆ ಒಬ್ಬ ಗೆಜೆಟೆಡ್ ಅಧಿಕಾರಿ ಆತನ ಸ್ವಂತ ಜಿಲ್ಲೆಯಲ್ಲಿ ಸೇವೆ ಸಲ್ಲಿಸುವ ಹಾಗಿರಲಿಲ್ಲ. ಯಾವ ತಾಲೂಕು ಅಧಿಕಾರಿ, ಯಾವ ಪೊಲೀಸ್ ಇನ್ಸ್ಪೆಕ್ಟರ್ ಎಲ್ಲಿದ್ದಾರೆ, ಎಲ್ಲಿಗೆ ವರ್ಗವಾದರು ಎಂದು ಮಂತ್ರಿಗಳು/ಶಾಸಕರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಏಕೆಂದರೆ ಎಲ್ಲರೂ ನಿಯಮಗಳ ಪ್ರಕಾರ ಕೆಲಸ ಮಾಡಬೇಕಾಗಿರುವಾಗ ಯಾರು ಎಲ್ಲಿದ್ದರೂ ಮಾಡಬೇಕಾದ ಕೆಲಸ ಮಾಡಲೇಬೇಕಲ್ಲ ಎಂದು ಅರ್ಥ ಮಾಡಿಕೊಂಡಿದ್ದರು.
ಈ ಧೋರಣೆ ಬದಲಾಗಿರುವುದೇ ವ್ಯವಸ್ಥೆ ಹಾಳಾಗಲು ಮುಖ್ಯ ಕಾರಣವಾಗಿದೆ. ಇಂದು ಮಂತ್ರಿಗಳು/ಶಾಸಕರು ಇಂತಹ ಅಧಿಕಾರಿಯೇ ಬೇಕೆಂದು ಹೋರಾಡುವುದು ಏತಕ್ಕಾಗಿ? ಸಾರ್ವಜನಿಕರ ನೆಪದಲ್ಲಿ ತಮ್ಮ ಸ್ವಂತ ಕೆಲಸಗಳನ್ನು ಮಾಡಿಕೊಳ್ಳುವ ಅಂದರೆ, ತಮ್ಮ ಸ್ವಾರ್ಥ ಸಾಧನೆಗೆ ನೆರವಾಗುವ ಅಧಿಕಾರಿಯನ್ನು ಇಂದು ಮಂತ್ರಿಗಳು/ಶಾಸಕರು ಹುಡುಕುವುದು ವಿಪರೀತವಾಗಿದೆ. ರಾಜಕಾರಣಿಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿ ಸಾರ್ವಜನಿಕ ಸಂಪತ್ತನ್ನು ಲೂಟಿಮಾಡುವ ಸೂತ್ರವಿದೆಂದು ಹೇಳದೇ ಬೇರೆ ದಾರಿ ಇಲ್ಲ. ಇದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಪರಿಸ್ಥಿತಿ.
ನಿಜವಾಗಿಯೂ ಇದೊಂದು ಬೆಚ್ಚಿಬೀಳುವ ಪರಿಸ್ಥಿತಿ. ಹೀಗೆಯೇ ಮುಂದುವರೆದರೆ ಸಾರ್ವಜನಿಕ ಜೀವನದ ಎಲ್ಲಾ ಒಳ್ಳೆಯ ಮೌಲ್ಯಗಳು ನಾಶವಾಗಿ, ರಾಜ್ಯ/ರಾಷ್ಟ್ರ ಎಲ್ಲಿಗೆ ಹೋಗಿ ತಲುಪುತ್ತದೋ ಎಂಬ ಆತಂಕ ಮೂಡುತ್ತದೆ. ಆದ್ದರಿಂದ ತಡಮಾಡದೇ ಸಜ್ಜನ ರಾಜಕಾರಣಿಗಳು/ ನಾಗರಿಕರು ಎಚ್ಚೆತ್ತು ಸಾರ್ವಜನಿಕ ಆಡಳಿತ ಕ್ಷೇತ್ರವನ್ನು ಶುದ್ಧೀಕರಿಸಲು ಶ್ರಮಿಸಬೇಕಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಕುರಿತು ಒಂದು ಸ್ಪಷ್ಟ ಹಾಗೂ ಪಾರದರ್ಶಕ ನೀತಿಯನ್ನು ಕಾನೂನುಬದ್ಧವಾಗಿ ರೂಪಿಸಬೇಕು. ಈ ವರ್ಗಾವಣೆ ಕಾನೂನಿನಲ್ಲಿ ಮಂತ್ರಿಗಳು/ ಶಾಸಕರು ಸೇರಿದಂತೆ ಪಟ್ಟಭದ್ರ ಹಿತಾಸಕ್ತಿಗಳು ಹಸ್ತಕ್ಷೇಪ ಮಾಡುವುದಕ್ಕೆ ಅವಕಾಶವಿರಬಾರದು. ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶದನ್ವಯ ರಚಿತವಾದ ಪೊಲೀಸ್ ಮಂಡಳಿ ಮಾಡಿದ ವರ್ಗಾವಣೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿರುವುದನ್ನು ಮತ್ತು ಸಚಿವರೊಬ್ಬರು ಜಿಲ್ಲಾಧಿಕಾರಿ ಯವರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತಿಲ್ಲವೆಂದು ಕುಪಿತರಾಗಿ ಮುಖ್ಯಮಂತ್ರಿಗಳಿಗೆ ದುಂಬಾಲು ಬಿದ್ದು ಆ ಜಿಲ್ಲಾಧಿಕಾರಿಯವರನ್ನು ವರ್ಗಾವಣೆ ಮಾಡಿಸಿದ್ದನ್ನು ನೆನಪಿಸಿಕೊಳ್ಳುವುದು ಸೂಕ್ತವಾಗಿರುತ್ತದೆ. ಸರ್ಕಾರಿ ನೌಕರರ ವರ್ಗಾವಣೆ ಸಾರ್ವಜನಿಕ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಆಗಬೇಕೇ ಹೊರತು ಸ್ವಹಿತ ಲೆಕ್ಕಾಚಾರದಿಂದಲ್ಲ. ಕಾಕತಾಳೀಯವೆಂಬಂತೆ ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಒಂದು ಚರಿತ್ರಾರ್ಹ ತೀರ್ಪು ನೀಡಿ, ಸರ್ಕಾರಿ ನೌಕರರ ವರ್ಗಾವಣೆ ಕುರಿತು ಒಂದು ಸ್ಪಷ್ಟ ಹಾಗೂ ಪಾರದರ್ಶಕ ಕಾನೂನು ರೂಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿ ಉತ್ತಮ ಆಡಳಿತ ಪರವಾಗಿ ಒಂದು ದೊಡ್ಡ ಕ್ರಮ ತೆಗೆದುಕೊಂಡಿರುವುದು ಸ್ವಾಗತಾರ್ಹ.
- ಬಿ. ಸೋಮಶೇಖರ್
ಮಾಜಿ ಸಚಿವರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

