ಅಂಕಣಗಳು

ಮಾಧ್ಯಮಗಳ ಮೇಲೆ ಗೂಬೆ ಕೂರಿಸುವುದೇಕೆ?

Published On :

ಉದ್ದೇಶಿತ ಮೂಢನಂಬಿಕೆ ಪ್ರತಿಬಂಧಕ ಕಾಯಿದೆಯ ಕರಡು ವಿಧೇಯಕದ ಬಗ್ಗೆ ವ್ಯಕ್ತವಾದ ತೀವ್ರ ವಿರೋಧಪೂರಿತ ಆಕ್ರೋಶ ಅಂತಹದೊಂದು ಘನಕಾರ್ಯಕ್ಕಿಳಿದವರನ್ನು ಕಲ್ಲವಿಲಗೊಳಿಸಿದೆ. ಇಂತಹ ಪ್ರಖರ ವಿರೋಧವನ್ನೂ, ಮೂಢನಂಬಿಕೆಗಳಿಗೆ ದಾಸರಾಗಿ ಅದರಿಂದ ಬಿಡಿಸಿಕೊಳ್ಳಲೊಪ್ಪದ ವಿಚಾರ ಹೀನತೆಯ ಪ್ರತೀಕ ಎಂದು ಬಿಂಬಿಸುವ  ಮಾತುಗಳು ಕೆಲ ವಿಚಾರವಾದಿಗಳಿಂದ ಕೇಳಿಬರುತ್ತಿದೆ. ಹಾಗಾಗಿ ಪ್ರಸ್ತಾಪಿತ ವಿಧೇಯಕವನ್ನೇ ಯಥಾವತ್ತಾಗಿ ಮಂಡಿಸುವಂತೆ ಮುಖ್ಯಮಂತ್ರಿಗಳನ್ನು ಉತ್ತೇಜಿಸುವ ಹೇಳಿಕೆಗಳು ಪ್ರಗತಿಪರರ ಪಡಸಾಲೆಯಿಂದ ಹೊರ ಹೊಮ್ಮುತ್ತಿದೆ. ಆದರೆ ಇಲ್ಲಿ ವ್ಯಕ್ತವಾದ ತೀಕ್ಷ್ಣ ವಿರೋಧವನ್ನು ಸೀಮಿತ ದೃಷ್ಟಿಕೋನದಿಂದ ವ್ಯಾಖ್ಯಾನಿಸುವುದು ತರವಲ್ಲ. ವಿರೋಧದ ಹಿಂದಿರುವ ಕೆಲ ಆಚರಣೆಗಳೆಡೆಗಿನ ಜನರ ಆಳವಾದ ನಂಬಿಕೆ ಹಾಗೂ ಅದರೊಂದಿಗೆ ಬೆಸೆದುಕೊಂಡಿರುವ ಭಾವನೆಗಳನ್ನು ಗೌರವಿಸಲೇಬೇಕು. ಸಂವಿಧಾನದ ಆಶಯವೂ ಅದೇ. ಈ ಹಿನ್ನಲೆಯಲ್ಲಿ ವಿಧೇಯಕದ ಬಗ್ಗೆ ಜನರ ಅಭಿಮತದ ಪರವಾದ ನಿರ್ಧಾರವನ್ನು ಕೈಗೊಂಡಿರುವ ಸರ್ಕಾರ ಅದನ್ನು ಬದಿಗಿಡುವ ಇಲ್ಲವೇ ಸೂಕ್ತ ಬದಲಾವಣೆ ಮಾಡುವ ಯೋಚನೆಯಲ್ಲಿದೆ. ಆದರೆ ಇದರಿಂದ ಪ್ರಸ್ತುತ ಸರ್ಕಾರಕ್ಕೆ ಅಂಟಬಹುದಾದ ಜನವಿರೋಧಿ ಕೊಳೆಯನ್ನು ತೊಡೆದು ಹಾಕಲು, ಈ ವಿಧೇಯಕ ಸಂಬಂಧಿ ಅವಾಂತರಗಳಿಗೆಲ್ಲ ಮಾಧ್ಯಗಳನ್ನೇ ಹೊಣೆಗಾರರನ್ನಾಗಿಸಲಾಗುತ್ತಿದೆ.
ಸಮಾಜದ ನಾಲ್ಕನೆಯ ಅಂಗವಾದ ಮಾಧ್ಯಮಗಳು ಸರ್ಕಾರದ ನಿರ್ಣಯಗಳು, ಯೋಜನೆಗಳು, ಸಾಧನೆಗಳು ಹಾಗೂ ಆದೇಶಗಳ ಯಥಾವತ್ತು ವರದಿಗಾರಿಕೆಗೆ ಸೀಮಿತವಾಗುವ ಮಡಿವಂತಿಕೆಯನ್ನು ಬೆಳೆಸಿಕೊಂಡರೆ ಜನರ ಸಂವೇದನೆಗಳಿಗೆ, ಅಭಿಪ್ರಾಯಗಳಿಗೆ, ಆತಂಕಗಳಿಗೆ ಹಾಗೂ ಮುಗ್ಧಭಾವನೆಗಳಿಗೆ ಮುಕ್ತ ಧ್ವನಿಯಾಗುವವರಾರು? ಇತ್ತೀಚಿನ ದಿನಗಳಲ್ಲಿ ಜನರ ಅಭಿಪ್ರಾಯಗಳ ಮಂಡನೆಗೆ ಸಾಕಷ್ಟು ಅವಕಾಶ ನೀಡುವುದರೊಂದಿಗೆ ಸರ್ಕಾರವನ್ನು ಎಚ್ಚರಿಸುವ ಕೈಂಕರ್ಯದಲ್ಲಿ ಪತ್ರಿಕೆಗಳು ಹೊಸಹೊಸ ಸಾಧ್ಯತೆಗಳೆಡೆಗೆ ತಮ್ಮನ್ನು ತೆರೆದುಕೊಳ್ಳುತ್ತಿರುವುದು ಅಭಿನಂದನಾರ್ಹ.
ಈ ವಿಧೇಯಕ ಸಿದ್ಧವಾಗಿ ಸರ್ಕಾರದ ಕೈ ಸೇರಿದ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಸದ್ರಿ ವಿಧೇಯಕವನ್ನೇ ಅಖೈರುಗೊಳಿಸಿ ನ.25 ರಿಂದ ಆರಂಭವಾಗುವ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಎಷ್ಟೊಂದು ಉತ್ಸುಕರಾಗಿದ್ದರು ಎಂಬುವುದು ನಿಮಗೂ ಗೊತ್ತಿರಬಹುದು. ಯಾವಾಗ ಕೆಲ ಪತ್ರಿಕಾ ಮಾಧ್ಯಮಗಳು, ದೃಶ್ಯ ಮಾಧ್ಯಮಗಳುಈ ಬಗ್ಗೆ ಜನರ ಅಭಿಪ್ರಾಯ ಆಹ್ವಾನಿಸಿ ಚರ್ಚೆಗಿಳಿದವೋ, ಅದರ ಒಳಹೊರಹುಗಳನ್ನು ಬಿಚ್ಚಿಟ್ಟವೋ ಅಲ್ಲಿಗೆ ಸಿದ್ದರಾಮಯ್ಯನವರ ಉತ್ಸಾಹ ಮಂಕಾಗತೊಡಗಿತು. ಹಾಗಾಗಿ ಯು ಟರ್ನ್ ತೆಗೆದುಕೊಂಡು, ಬೆಳಗಾವಿ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸುವ ಇರಾದೆಯೇ ತಮಗಿರಲಿಲ್ಲ ಎಂದು ಹೇಳಿ ಜಾರಿಕೊಂಡರು. ಇದೆಲ್ಲಾ ಮಾಧ್ಯಮಗಳ ಕಟ್ಟುಕತೆ ಎಂದು ಕರೆದು ಅವುಗಳ ಸಮಾಜಮುಖಿ ಪ್ರಯತ್ನದ ಮೇಲೆ ಗೂಬೆಕೂರಿಸಿ ನುಣುಚಿಕೊಳ್ಳಲೆತ್ನಿಸಿದರು. ಬ್ರಾಹ್ಮಣ-ದಲಿತ, ಶ್ರದ್ಧಾಭಕ್ತಿ-ವೈಚಾರಿಕತೆ, ಆಸ್ತಿಕತೆ-ನಾಸ್ತಿಕತೆ ಹಾಗೂ ಬಡವ-ಶ್ರೀಮಂತರ ನಡುವೆ ಸಂಘರ್ಷ ಸೃಷ್ಟಿಸಿ ಸಮಾನತೆ ಸಾಧಿಸ ಹೊರಟ ಪ್ರಗತಿಪರರು, ಬುದ್ಧಿಜೀವಿಗಳ ಗಣದೊಂದಿಗೆ ಆವ್ರತರಾಗಿರುವ ಸಿದ್ದರಾಮಯ್ಯನವರು ಎಡಪಂಥೀಯ ಮನಃಸ್ಥಿತಿಯ ಏಕಮುಖ ಧೋರಣೆಯ ವ್ಯಕ್ತಿಗಳಿಂದ ರಚಿತವಾದ ವಿಧೇಯಕವನ್ನು ಸ್ವಾಗತಿಸಿದ ವೈಖರಿಯಲ್ಲಿಯೇ ಸಮಾಜದ ಬೇರೆ ಬೇರೆ ವರ್ಗದ, ಭಿನ್ನ ವಿಭಿನ್ನ ಧೋರಣೆಯ ವಿವಿಧ ಕ್ಷೇತ್ರಗಳ ತಜ್ಞರು, ಜನಸಾಮಾನ್ಯರು ಮಾಧ್ಯಮಗಳ (ಪತ್ರಿಕೆಗಳು) ಮುಖೇನ ವಿಧೇಯಕದ ಬಗ್ಗೆ ಹಂಚಿಕೊಂಡ ಪರ-ವಿರೋಧ ಅಭಿಪ್ರಾಯಗಳನ್ನು ಸಮಚಿತ್ತ, ಸಾವಧಾನ ಹಾಗೂ ಕೊಂಚ ವೈಶಾಲ್ಯತೆಯೊಂದಿಗೆ ಸ್ವೀಕರಿಸಿ, ವಿವೇಚನಾಸಹಿತ ತುಲನಾತ್ಮಕ ವಿಮರ್ಶೆಗೊಳಪಡಿಸಿ ಸೂಕ್ತ ನಿಲವಿಗೆ ಬರುವುದೊಳಿತು. ಇಂತಹ ಅವಕಾಶವೊಂದಕ್ಕೆ ಮಾಧ್ಯಮಗಳನ್ನು ಶ್ಲಾಘಿಸಬೇಕೇ ಹೊರತು ಶಪಿಸುವುದು ಸಾಧುವಲ್ಲ!

- ಸಂದೇಶ್. ಎಚ್. ನಾಯ್ಕ ಹಕ್ಲಾಡಿ
ಕುಂದಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.