ಕಾನೂನುಬಾಹಿರ ಬೇಹುಗಾರಿಕೆಯ ಕಥೆ ಈಗಿನದ್ದಲ್ಲ!

ಇಂದಿರಾ ಗಾಂಧಿ ತಮ್ಮ ಸೊಸೆ ಮನೇಕಾ ಗಾಂಧಿಯ ಮೇಲೂ ಬೇಹುಗಾರಿಕೆ ನಡೆಸಲು ಗುಪ್ತಚರ ಇಲಾಖೆಗೆ ಆದೇಶಿಸಿದ್ದರು! ಮನೇಕಾರ ಎಲ್ಲಾ ಸ್ನೇಹಿತರ/ ಆಪ್ತವಲಯದ ಖಾಸಗಿ ಜೀವನದಲ್ಲಿ ಇಣುಕಿ ನೋಡಿದ ಗುಪ್ತಚರ ಇಲಾಖೆ, ಅವರು ಮತ್ತು ಮನೇಕಾ ನಡುವೆ ನಡೆದಿದ್ದ ದೂರವಾಣಿ ಸಂಭಾಷಣೆಗಳನ್ನೆಲ್ಲ ಟ್ಯಾಪ್ ಮಾಡಿತ್ತು.
ಕಾಂಗ್ರೆಸ್ ಮತ್ತು ಬಿಜೆಪಿ ಮತ್ತೊಮ್ಮೆ ವಾಗ್ಯುದ್ಧದಲ್ಲಿ ತೊಡಗಿವೆ. ಈ ಬಾರಿ ಅವುಗಳ ನಡುವೆ ಮಾತಿನ ಸಮರ ನಡೆದಿರುವುದು ನರೇಂದ್ರ ಮೋದಿ ಅವರ ಆಪ್ತ ಅಮಿತ್ ಶಾ ವಿಷಯವಾಗಿ. ಅಮಿತ್ ಶಾ ಅಧಿಕಾರದ ದುರ್ಬಳಕೆ ಮಾಡಿ ಯುವತಿಯೊಬ್ಬಳ ಖಾಸಗಿ ಬದುಕಿನಲ್ಲಿ ಇಣುಕಿ ನೋಡಿದ್ದಾರೆ ಎಂದು ಇತ್ತೀಚೆಗೆ ಹೊರಬಿದ್ದಿರುವ ಸುದ್ದಿಯನ್ನು ಹಿಡಿದು ಈ ಎರಡೂ ಪಕ್ಷಗಳೀಗ ವಾದ-ಪ್ರತಿವಾದದಲ್ಲಿ ಮುಳುಗಿವೆ. ಯುವತಿಯೊಬ್ಬಳ ಚಲನವಲನಗಳ ಮೇಲೆ ರಹಸ್ಯವಾಗಿ ನಿಗಾ ಇಡಬೇಕೆಂದು ಪೊಲೀಸ್ ಅಧಿಕಾರಿಯೊಬ್ಬರಿಗೆ ಅಮಿತ್ ಶಾ ಹೇಳಿದ್ದಾರೆ ಎನ್ನಲಾದ ವಿಷಯ ಈಗ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ, ಬೇಹುಗಾರಿಕೆಯ ವಿಷಯ ಬಂದಾಗ, ನಮ್ಮ ರಾಜಕಾರಣಿಗಳು ಮೊದಲಿನಿಂದಲೂ ಕಾನೂನನ್ನು ಉಲ್ಲಂಘಿಸುವ ತಪ್ಪನ್ನು ಎಸಗುತ್ತಲೇ ಬಂದಿದ್ದಾರೆ ಎನ್ನುವುದು ತಿಳಿಯುತ್ತದೆ. ಇದು ಈಗಿಂದಲಲ್ಲ ಇಂದಿರಾ ಗಾಂಧಿಯವರ ಸಮಯದಿಂದಲೂ ಇಂದಿನವರೆಗೂ ರಾಜಕಾರಣಿಗಳು ನಡೆಸಿದ ಅಥವಾ ರಾಜಕಾರಣಿಗಳ ಮೇಲೆ ನಡೆದ ಇಂಥ ಕಾನೂನು ಬಾಹಿರ ಬೇಹುಗಾರಿಕೆಗಳ ಬಗ್ಗೆ 'ರೆಡಿಫ್.ಕಾಂ' ಜಾಲತಾಣದಲ್ಲಿ ವಿಕ್ಕಿ ನಂಜಪ್ಪ ಬರೆಯುತ್ತಾರೆ...
---
ನಿಯಮಗಳ ಪುಸ್ತಕವನ್ನು ಹಿಡಿದುಕೊಂಡು ಹೇಳಬೇಕೆಂದರೆ, ವ್ಯಕ್ತಿಯೊಬ್ಬನ ಖಾಸಗಿ ಜೀವನದ ಮೇಲೆ ಬೇಹುಗಾರಿಕೆ ನಡೆಸುವ ಅನುಮತಿಯನ್ನು ಕೊಡುವ ಅಧಿಕಾರ ಕೇಂದ್ರದ ಅಥವಾ ರಾಜ್ಯದ ಗೃಹ ಸಚಿವರಿಗಷ್ಟೇ ಇದೆ. ಅವರ ಅನುಮತಿಯಿಲ್ಲದೆ ನಡೆಸಲಾದ ಬೇಹುಗಾರಿಕೆಯನ್ನು ಅಪರಾಧವೆಂದೇ ಪರಿಗಣಿಸಲಾಗುತ್ತದೆ. ಗೃಹ ಸಚಿವರ ಅನುಮತಿ ಕೊಟ್ಟರೂ ಈ ಬೇಹುಗಾರಿಕೆಯ (snooping) ಹಿಂದೆ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಂತೂ ಇರಲೇಬೇಕು.
ಈಗ ಅಮಿತ್ ಶಾ ಅವರ ವಿಚಾರಕ್ಕೆ ಬಂದರೆ, ಅವರು ಗೃಹ ಸಚಿವರ ಅನುಮತಿಯಿಲ್ಲದೆ ರಾಜಕೀಯ ಅಧಿಕಾರವನ್ನು ಬಳಸಿಕೊಂಡು ಯುವತಿಯ ಮೇಲೆ ಬೇಹುಗಾರಿಕೆ ನಡೆಸಿದ್ದರು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಹೀಗಾಗಿ ಇದು ಅಪರಾಧವಾಗುತ್ತದೆ. ಆದರೆ ಇಂಥ ಘಟನೆಯೇನು ಭಾರತದಲ್ಲಿ ಮೊದಲ ಬಾರಿಗೆ ನಡೆದಿಲ್ಲ. ಭಾರತದ ಮಬ್ಬುಗವಿದ ರಾಜಕೀಯ ಲೋಕದಲ್ಲಿ ಕಾಲಕಾಲಕ್ಕೆ ಕಾನೂನು ಬಾಹಿರವಾಗಿ ಬೇಹುಗಾರಿಕೆ ನಡೆಸಿದ ಅನೇಕ ರಾಜಕಾರಣಿಗಳು ನಮಗೆ ಇತಿಹಾಸದ ಪುಟಗಳಲ್ಲಿ ಸಿಗುತ್ತಾರೆ.
ಗುಪ್ತಚರ ಇಲಾಖೆಯ ಮಾಜಿ ಜಂಟಿ ನಿರ್ದೇಶಕ ದಿ. ಮಲಯ್ ಕೃಷ್ಣ ಧಾರ್ ಅವರು ಬರೆದ ಪುಸ್ತಕವೊಂದನ್ನು ಕೈಗೆತ್ತಿಕೊಂಡಾಗ, ಇಂಥ ಹಲವಾರು ಕರಾಳ ಕಥೆಗಳೆಲ್ಲ ಅನಾವರಣಗೊಳ್ಳುತ್ತಾ ಹೋದವು. ""Open Secrets, India’s Intelligence Unveiled'' ಎನ್ನುವ ಪುಸ್ತಕದಲ್ಲಿ ಅವರು, ಹೇಗೆ ಗಾಂಧಿ ಕುಟುಂಬ ಹಲವಾರು ಸಂದರ್ಭಗಳಲ್ಲಿ ಗುಪ್ತಚರ ಇಲಾಖೆಯನ್ನು ಗೂಢಚರ್ಯೆಗಾಗಿ ಬಳಸಿಕೊಂಡಿತು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ಈ ರೀತಿಯ ಕಾನೂನುಬಾಹಿರ ಬೇಹುಗಾರಿಕೆಯನ್ನು ನಡೆಸಿದವರಲ್ಲಿ ಮೊದಲು ಬರುವುದೇ ಇಂದಿರಾ ಗಾಂಧಿಯವರ ಹೆಸರು. ಅಂದಿನ ಗೃಹಸಚಿವ ಗ್ಯಾನಿ ಜೈಲ್ ಸಿಂಗ್ ಅವರ ಮೇಲೆ ಗೂಢಚರ್ಯೆ ನಡೆಸಲು ಗುಪ್ತಚರ ಇಲಾಖೆಯನ್ನು ಬಳಸಿಕೊಂಡಿದ್ದರು ಇಂದಿರಾ.
ಆ ಪುಸ್ತಕದ ಪ್ರಕಾರ, ಇಂದಿರಾ ಗಾಂಧಿಯವರ ಆದೇಶದ ಮೇರೆಗೆ ಗುಪ್ತಚರ ಇಲಾಖೆ ಜೈಲ್ ಸಿಂಗ್ರ ದೂರವಾಣಿ ಕರೆಗಳನ್ನು ಕದ್ದಾಲಿಸಿತ್ತು. ಅವರು ಖಾಲಿಸ್ತಾನದ ಹೋರಾಟಗಾರ ಜರ್ನೈಲ್ ಸಿಂಗ್ ಭಿಂದ್ರನ್ವಾಲೆಯೊಂದಿಗೆ ನಡೆಸಿದ ಮಾತುಕತೆಯನ್ನು ರೆಕಾರ್ಡ್ ಮಾಡಿದ ಗುಪ್ತಚರ ಇಲಾಖೆ, ಅದನ್ನು ಇಂದಿರಾ ಗಾಂಧಿಯವರಿಗೆ ಕೊಟ್ಟಿತ್ತು.
ಆದರೆ ಇಂದಿರಾ ಗಾಂಧಿಯವರ ಈ ಗುಣ ಅವರನ್ನು ಇಷ್ಟಕ್ಕೇ ಸುಮ್ಮನಾಗಿಸಲಿಲ್ಲ. ಅವರು ತಮ್ಮ ಸೊಸೆ ಮನೇಕಾ ಗಾಂಧಿ (ಸಂಜಯ್ ಗಾಂಧಿ ಪತ್ನಿ)ಯ ಮೇಲೆಯೂ ಬೇಹುಗಾರಿಕೆ ನಡೆಸಲು ಗುಪ್ತಚರ ಇಲಾಖೆಗೆ ಆದೇಶಿಸಿದ್ದರು! ಮನೇಕಾರ ಎಲ್ಲಾ ಸ್ನೇಹಿತರ/ ಆಪ್ತವಲಯದ ಖಾಸಗಿ ಜೀವನದಲ್ಲಿ ಇಣುಕಿ ನೋಡಿದ ಗುಪ್ತಚರ ಇಲಾಖೆ, ಅವರು ಮತ್ತು ಮನೇಕಾ ನಡುವೆ ನಡೆದಿದ್ದ ದೂರವಾಣಿ ಸಂಭಾಷಣೆಗಳನ್ನೆಲ್ಲ ಟ್ಯಾಪ್ ಮಾಡಿತ್ತು. ಅಷ್ಟೇ ಅಲ್ಲದೆ, ಮನೇಕಾ ಗಾಂಧಿಯ ತಾಯಿ ಮತ್ತು ಅವರು ನಡೆಸುತ್ತಿದ್ದ ನಿಯತಕಾಲಿಕವೊಂದರ ಸಂಪಾದಕೀಯ ವರ್ಗದ ಮೇಲೂ ಅದು ಇಂದಿರಾರ ಆದೇಶದ ಮೇರೆಗೆ ಗೂಢಚರ್ಯೆ ನಡೆಸಿತ್ತು!
ಮುಂದೆ ದೇಶದ ಚುಕ್ಕಾಣಿ ಹಿಡಿದ ರಾಜೀವ್ ಗಾಂಧಿಯವರೂ ತಮ್ಮ ಅಮ್ಮನ ಹಾದಿಯಲ್ಲೇ ನಡೆದರು. ಅವರ ಈ ತಂತ್ರ ಮತ್ತೆ ಜೈಲ್ ಸಿಂಗ್ ಅವರನ್ನೇ ಸುತ್ತಿಕೊಂಡಿದ್ದು. ಅಂದಿನ ರಾಷ್ಟ್ರಪತಿಯಾಗಿದ್ದ ಜೈಲ್ ಸಿಂಗ್ರ ಮೇಲೆ ಬೇಹುಗಾರಿಕೆ ನಡೆಸಲು ಗುಪ್ತಚರ ಇಲಾಖೆಗೆ ಅವರೂ ಆದೇಶ ನೀಡಿದರು! ಇಡೀ ರಾಷ್ಟ್ರಪತಿ ಭವನದಲ್ಲೆಲ್ಲ 'ಬಗ್ಗಳನ್ನು'(ಸೂಕ್ಷ್ಮ ಧ್ವನಿಗ್ರಾಹಕಗಳನ್ನು) ಜೋಡಿಸಲಾಯಿತು. ರಾಜೀವ್ರ ಈ ಕುತಂತ್ರದ ಸುಳಿವು ಹತ್ತಿದ್ದೇ ತಡ, ಜೈಲ್ ಸಿಂಗ್ ಅಂದಿನಿಂದ ತಮ್ಮನ್ನು ಕಾಣಬಂದವರನ್ನೆಲ್ಲ ರಾಷ್ಟ್ರಪತಿ ಭವನದ ಉದ್ಯಾನದಲ್ಲಿ ಭೇಟಿಮಾಡತೊಡಗಿದರು.
ಹಾಗಂತ ರಾಜೀವ್ರ ಮೇಲೆ ಗೂಢಚರ್ಯೆ ನಡೆಯಲಿಲ್ಲ ಎಂದಲ್ಲ! ಕ್ಯಾಬಿನೆಟ್ನ ಮಾಜಿ ಕಾರ್ಯದರ್ಶಿಯೊಬ್ಬರು ರಾಜೀವ್ರೊಂದಿಗಿನ ತಮ್ಮ ಮಾತುಕತೆಯನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಅದರಲ್ಲಿ ರಾಜೀವ್, ಇಟಲಿಯಲ್ಲಿರುವ ತಮ್ಮ ಭಾವಮೈದುನನಿಗೆ ಸೂಟ್ಕೇಸ್ನಲ್ಲಿ ಹಣ ನೀಡಬೇಕೆಂದು ಆದೇಶ ನೀಡಿದ್ದರು ಎಂದು ಆಪಾದಿಸಲಾಗಿತ್ತು.
2011ರಲ್ಲಿ, ಅಂದಿನ ವಿತ್ತ ಸಚಿವರಾಗಿದ್ದ ಪ್ರಣಬ್ ಮುಖರ್ಜಿಯವರು ತಮ್ಮ ಕಚೇರಿಯನ್ನು 'ಬಗ್' ಮಾಡಲಾಗಿದೆ ಎಂದು ದೂರಿದ್ದರು. ಅಂದಿನ ಗೃಹ ಸಚಿವರಾಗಿದ್ದ ಪಿ. ಚಿದಂಬರಂ ಅವರೇ ಈ ಬೇಹುಗಾರಿಕೆಗೆ ಆದೇಶ ನೀಡಿದ್ದರು ಎಂಬ ಊಹಾಪೋಹಗಳು ಆಗ ಎದ್ದವು. ಅದಾಗ್ಯೂ, ಪ್ರಣಬ್ರ ಫೋನ್ ಕರೆಗಳನ್ನು ಯಾರೂ ಕದ್ದಾಲಿಸುತ್ತಿಲ್ಲ ಎಂದು ಗುಪ್ತಚರ ಇಲಾಖೆ ಹೇಳಿದ ನಂತರವೇ, ಆ ಪ್ರಕರಣದ ತನಿಖೆಯನ್ನು ನಿಲ್ಲಿಸಲಾಯಿತು. ಪ್ರಣಬ್ರ ಮೇಲೆ ಬೇಹುಗಾರಿಕೆ ನಡೆಸಿದ್ದು ಗುಪ್ತಚರ ಇಲಾಖೆಯಲ್ಲ, ಬದಲಾಗಿ ಖಾಸಗಿ ಏಜೆನ್ಸಿಯೊಂದು ಈ ಕೆಲಸ ಮಾಡಿತ್ತು ಎಂದು ಒಳಗಿನವರು ಹೇಳುತ್ತಾರೆ.
ಇನ್ನು ರಾಜಕಾರಣಿಗಳ ಮೇಲೆ ಬೇಹುಗಾರಿಕೆ ನಡೆದ ತೀರಾ ಇತ್ತೀಚಿನ ಘಟನೆಯೆಂದರೆ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ದೂರವಾಣಿ ಕದ್ದಾಲಿಕೆ ಪ್ರಕರಣ. ಈ ಆದೇಶವನ್ನು ನೀಡಿದ್ದು ಜೇಟ್ಲಿ ಅವರ ರಾಜಕೀಯ ವಿರೋಧಿಗಳು ಎಂದು ಹೇಳುತ್ತವೆ ತನಿಖೆಗಳು. ಖಾಸಗಿ ಏಜೆನ್ಸಿಯೊಂದು ದೆಹಲಿಯ ಪೊಲೀಸ್ ಅಧಿಕಾರಿಯೊಬ್ಬನ ಸಹಾಯದಿಂದ ಜೇಟ್ಲಿ ಅವರ ದೂರವಾಣಿ ಕರೆಗಳನ್ನು ಟ್ಯಾಪ್ ಮಾಡಿತ್ತು ಎನ್ನಲಾಗುತ್ತಿದೆ.
- ವಿಕ್ಕಿ ನಂಜಪ್ಪ
vickynanjappa@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


