ನಿಮ್ಮ ಮರುಳು ಸ್ವಗತಗಳನ್ನು ಮೆಚ್ಚುವವರಷ್ಟೇ ಸುಭಗರೇ?

ವಿಚಾರವಾದಿ ಕೆ.ಮರುಳಸಿದ್ದಪ್ಪನವರು 'ಕಂದಾಚಾರ-ವೈಚಾರಿಕತೆ ಒಂದು ಚಿಂತನೆ' ಎಂಬ ವಿಚಾರಗೋಷ್ಠಿಯಲ್ಲಿ ಮಾತಾಡುತ್ತಾ, ಹಿಂದೂಧರ್ಮವನ್ನು ಶುದ್ಧಗೊಳಿಸುವ ಅವಶ್ಯಕತೆ ಬಗ್ಗೆ ಹೇಳುತ್ತ, 'ಕೆಲವು ಪತ್ರಿಕೆಗಳಲ್ಲಿ ಬಂದೂಕಿಗಿಂತ ಅಪಾಯಕಾರಿಯಾದ ಲೇಖನಿ ಹೊಂದಿರುವ ಉಗ್ರಗಾಮಿಗಳಿದ್ದಾರೆ. ಅವರು ಭಯೋತ್ಪಾದಕರಿಗಿಂತ ಕ್ರೂರವಾಗಿ ವಿಜೃಂಭಿಸುತ್ತದ್ದಾರೆ. ಅವರೇ ಮೂಢನಂಬಿಕೆ ವಿಧೇಯಕದ ಚರ್ಚೆಯ ಹಾದಿಯನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಆದರೆ, ವಿಜಯ ಕರ್ನಾಟಕ, ಪ್ರಜಾವಾಣಿ ಪತ್ರಿಕೆಗಳು ಮಾತ್ರ ಕಾಯಿದೆ ಪರವಾಗಿ ಉತ್ಸಾಹ ತೋರಿಸುತ್ತಿವೆ' ಎಂದಿದ್ದಾರೆ. ಒಂದು ಕಡೆ ಹಿಂದೂ ಧರ್ಮದ ಸುಧಾರಕರಂತೆ ಮತ್ತೊಂದು ಕಡೆ ತಮ್ಮ ವಿಚಾರಗಳನ್ನು ಪ್ರತಿಪಾದಿಸದವರಿಗೆ ಭಯೋತ್ಪಾದಕರ ಪಟ್ಟಕಟ್ಟುವ ಮೂಲಕ ದ್ವಂದ್ವವನ್ನು ಪ್ರದರ್ಶಿಸಿದ್ದಾರೆ.
ಇವರ ವಿಚಾರಗಳನ್ನು ಒಪ್ಪದವರನ್ನು ಉಗ್ರಗಾಮಿಗಳಿಗೆ ಹೋಲಿಸುವ ಇವರ ಅಸಹನೆಯ ಕಮ್ಯುನಿಸ್ಟ್ ಸಿದ್ಧಾಂತದ್ದು. ತಾವು ಹೇಳಿದ್ದು ಮಾತ್ರ ಸಿದ್ಧ, ಉಳಿದಿದ್ದು ಭಯೋತ್ಪಾದನೆ ಎಂಬುದು ಫ್ಯಾಸಿಸ್ಟ್ ಧೋರಣೆಯಲ್ಲವೇ? ಈ ಬುದ್ಧಿಜೀವಿಗಳು ಯಾವುದೇ ಧರ್ಮದ ನಂಬಿಕೆ ಶ್ರದ್ಧೆಗಳನ್ನು ಶುದ್ಧಿಮಾಡಲು ಯಾವ ಕನಿಷ್ಠ ಅರ್ಹತೆ ಹೊಂದಿದ್ದಾರೆ? ಇವರು ಪ್ರತಿಪಾದಿಸಿಕೊಂಡು ಬಂದ ವಿಚಾರವಾದ-ತತ್ವಗಳು ಈ ದೇಶದ ಉದ್ದಗಲಕ್ಕೂ ನಕ್ಸಲೈಟ್ಗಳನ್ನು ಸೃಷ್ಟಿಸಿದೆ. ಈ ದೇಶಕಂಟಕರು ಮುಸ್ಲಿಂ ಭಯೋತ್ಪಾದಕರೊಂದಿಗೆ ಕೈ ಜೋಡಿಸುವುದರೊಂದಿಗೆ ಸಿಗಬಾರದ ಶಸ್ತ್ರಾಸ್ತ್ರಗಳು ರಾಷ್ಟ್ರವಿರೋಧಿಗಳ ಕೈ ಸೇರಿ ರಾಷ್ಟ್ರವಿಂದು ಅಪಾಯವನ್ನೆದುರಿಸುತ್ತಿದೆ. ಇದರ ಬಗ್ಗೆ ಈ ಬುದ್ಧಿಜೀವಿಗಳು ಮೌನವಹಿಸಿರುವುದರಿಂದ ಇವರ ಗುಪ್ತ ಕಾರ್ಯ ಸೂಚಿ ಯಾರಿಗಾದರೂ ಅರ್ಥವಾಗುತ್ತದೆ. ಇವರ ಮೌಢ್ಯ ವಿಧೇಯಕವನ್ನು ವಿರೋಧಿಸಿ ಬರೆಯುವ ಲೇಖಕರನ್ನು ಭಯೋತ್ಪಾದಕರಿಗೆ ಹೋಲಿಸುವ ಮರುಳಸಿದ್ದಪ್ಪನವರ ಅಭಿಪ್ರಾಯದಲ್ಲೆ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಅವರಿಗಿರುವ ಅಸಹನೆ ಗೋಚರವಾಗುತ್ತಿದೆ. ಇವರು ಅಪ್ಪಣೆ ಕೊಡಿಸಿದಂತೆ ಎಲ್ಲ ಪತ್ರಿಕೆಗಳೂ ತಥಾಕಥಿಕ ಸೆಕ್ಯುಲರ್ ಚಿಂತಕರ ಪುಂಗಿಯಾಗಬೇಕೆ?
ಯಾವಾಗಲೂ ಹಿಂದೂ ಧರ್ಮದ ಸುಧಾರಣೆಯ ಬಗ್ಗೆ ಮಾತಾಡುವ ಬುದ್ಧಿಜೀವಿಗಳು ಆ ಧರ್ಮದ ಶ್ರದ್ಧಾವಂತರಂತೂ ಆಲ್ಲ. ಈ ದೇಶದ ಒಂದು ವಿಶೇಷತೆಯನ್ನು ನಾವು ಗಮನಿಸಬೇಕು. ಹಿಂದೂ ಧರ್ಮದಲ್ಲಿ ನುಸುಳಿರುವ ಅನೇಕ ಮೌಢ್ಯಗಳನ್ನು ಹೋಗಲಾಡಿಸಲು ಪ್ರಯತ್ನಸಿದವರಲ್ಲಿ ಬಹುತೇಕ ಶ್ರದ್ಧಾವಂತ ಹಿಂದೂ ಸುಧಾರಕರು ಎಂಬುದು. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮ ಕಂದಾಚಾರಗಳನ್ನು ನಿಷ್ಠುರ ಶಬ್ದಗಳಲ್ಲಿ ಖಂಡಿಸಿದ್ದಾರೆ. ಆದರೆ ಅವರೊಬ್ಬ ಶ್ರದ್ಧಾವಂತ ಆದರ್ಶ ಹಿಂದು ಸನ್ಯಾಸಿ. ಹಿಂದೂಧರ್ಮದ ಅಸ್ಪೃಶ್ಯ ಆಚರಣೆ ಬಗ್ಗೆ ಕಠೋರ ಮಾತುಗಳಲ್ಲಿ ವಿರೋಧಿಸಿದ್ದಾರೆ. ಆದರೆ ಅದೇ ಸ್ವಾಮೀಜಿ ಹಿಂದೂಧರ್ಮದ ಶ್ರೇಷ್ಠತೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದ್ದಾರೆ. ಕೇರಳದಲ್ಲಿ ಬಿಲ್ಲವರ ಬಗ್ಗೆ ಅನುಧಾರಣವಾಗಿ ನಡೆಸಿಕೊಳ್ಳುತ್ತಿದ್ದ ಅಲ್ಲಿನ ಮೇಲ್ವರ್ಗದ ಜನರ ಶೋಷಣೆಯ ವಿರುದ್ಧ ಸಾಮಾಜಿಕ ಆಂದೋಲನ ನಡೆಸಿ, ಹಿಂದೂಧರ್ಮದ ಘನತೆಯನ್ನು ಮೇಲೆತ್ತಿದವರು ನಾರಾಯಣ ಗುರುಗಳು. ಅವರೊಬ್ಬ ಶ್ರದ್ಧಾವಂತ ಹಿಂದೂ ಸಂತ. ಸ್ವಾಮಿ ದಯಾನಂದ ಸರಸ್ವತಿಯವರಂತೂ ನಮ್ಮ ಸಮಾಜದಲ್ಲಿನ ಲೋಪಗಳನ್ನು ಗುರುತಿಸಿ, ಅದನ್ನು ಮಾತ್ರ ತಿರಸ್ಕರಿಸಿ, ಹಿಂದೂ ಧರ್ಮದ ಮೂಲ ವಿಚಾರಗಳಿಗೆ ಪ್ರಚಾರ ಕೊಟ್ಟು ವೇದಗಳಿಗೆ ಹಿಂದಿರುಗಿ ಎಂದು ಕರೆಕೊಟ್ಟವರು. ಇವರೊಬ್ಬ ಶ್ರೇಷ್ಠ ಹಿಂದೂ ಶ್ರದ್ಧಾಳು. ಹೀಗೆ ಈ ದೇಶದಲ್ಲಿ ರಾಜ ಮಹಾರಾಜರು, ಸಾಧುಗಳು, ಸಂತರುಗಳಿಂದ ಆರಂಭಿಸಿ ಸಾಮಾನ್ಯರೂ ಹಿಂದೂಧರ್ಮದ ಸುಧಾರಣೆಗೆ ತಮ್ಮ ಕೈಂಕರ್ಯ ಸಲ್ಲಿಸಿದ್ದಾರೆ ಅವರಲ್ಲಿ ಬಹುತೇಕ ಹಿಂದೂ ಧರ್ಮದಲ್ಲಿನ ಲೋಪಗಳನ್ನು ಖಂಡಿಸಿ ಅದನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ. ಆದರೆ ಅಂಥವರಲ್ಲಿ ಯಾರೊಬ್ಬರಲ್ಲಿಯೂ ಹಿಂದೂ ದ್ವೇಷದ ಭಾವನೆ ಕಾಣಲು ಸಾಧ್ಯವಿಲ್ಲ. ಅವರೆಂದೂ ಅದರ ಸುಧಾರಣೆಗೆ ರಾಷ್ಟ್ರ ವಿರೋಧಿ ಶಕ್ತಿಗಳೊಂದಿಗೆ ವ್ಯವಹರಿಸಿದ್ದಿಲ್ಲ. ಅವರಲ್ಲಿ ಆಗಾಗ ಕಾಣುವ ಹಿಂದೂ ವಿರೋಧದ ಆಕ್ರೋಶದ ಬಗ್ಗೆಯೂ ಯಾರಲ್ಲಿಯೂ ಅಸಮಾಧಾನವಿಲ್ಲ. ಯಾಕೆಂದರೆ ಅವರು ಬಯಸುತ್ತಿದ್ದದೂ ಅವರದ್ದೇ ಧರ್ಮದ ಸುಧಾರಣೆಯನ್ನು. ಇಂಥ ಮಹಾಪುರುಷರನ್ನು ನಿಡುಮಾಮಿಡಿ ಸ್ವಾಮೀಜಿಯವರೊಂದಿಗೆ ಹೋಲಿಸಲಾದೀತೆ? ಮೌಢ್ಯ ವಿರೋಧಿ ಕರಡಿಗೆ ವಿರೋಧ ವ್ಯಕ್ತವಾದದ್ದು ಇದೇ ಹಿನ್ನೆಲೆಯಲ್ಲಿ. ಏಕೆಂದರೆ ಈ ಕರಡು ವಿಧೇಯಕದ ಸೃಷ್ಟಿಕರ್ತರೆಲ್ಲ ತಥಾಕಥಿತ ಎಡಪಂಥಿಯ ಹಿಂದೂ ಧರ್ಮ ವಿರೋಧಿ ಪಾಳೆಯ ಆಗಿದ್ದರಿಂದ. ಈ ಗುಂಪಲ್ಲಿ ಹಿಂದೂ ವಿಚಾರಗಳ ಬಗ್ಗೆ ಒಲವಿರುವ ಒಂದಷ್ಟು ಸದಸ್ಯರಿದ್ದರೆ ಹಿಂದೂಧರ್ಮದಲ್ಲಿ ಮೌಢ್ಯವನ್ನು ಹೋಗಲಾಡಿಸಲು ಯಾರದ್ದೇ ತಕರಾರಿಲ್ಲ. ಏಕೆಂದರೆ ಕಾಲಕಾಲಕ್ಕೆ ಹಿಂದೂಧರ್ಮ ತನ್ನನ್ನು ತಾನೇ ಶುದ್ಧಿಕರಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಅದನ್ನು ಶುದ್ಧಿ ಮಾಡುವವರ ಹಿನ್ನೆಲೆ ಹಾಗೂ ಧೋರಣೆ ಶುದ್ಧಿಯಾಗಿರಬೇಕಾದದ್ದು ಕಡ್ಡಾಯ. ನಾಸ್ತಿಕನೊಬ್ಬ ಇನ್ನೊಬ್ಬರ ನಂಬಿಕೆಯ ಬಗ್ಗೆ ಮಾತಾಡುವುದೇ ಮೌಢ್ಯವಾಗುತ್ತದೆ. ಇಷ್ಟಕ್ಕೂ ಹಿಂದೂಧರ್ಮದಲ್ಲಿ ಮಾತ್ರ ಮೂಢನಂಬಿಕೆಗಳಿರುವಂತೆ ಕರಡು ಪ್ರತಿ ರಚಿಸಿರುವುದೂ ಆ ಸದಸ್ಯರ ಮೂಢನಂಬಿಕೆಯೇ?
ಈ ಬುದ್ಧಿಜೀವಿಗಳು ಹೇಳುವುದೆಲ್ಲ ವೇದವಾಕ್ಯ ಎಂಬ ಕಾಲವಿತ್ತು. ಇವರ ತುತ್ತೂರಿಯನ್ನೇ ಮಹಾಪ್ರಸಾದವೆಂದುಕೊಂಡು ಪ್ರಸರಿಸುತ್ತಿದ್ದ ಪತ್ರಿಕೆಗಳಿದ್ದವು. ಈಗ ಕಾಲ ಬದಲಾಗಿದೆ. ರಾಷ್ಟ್ರನಿಷ್ಠ ಪತ್ರಿಕೆಗಳು ಮತ್ತು ಬರಹಗಾರರು ಹುಟ್ಟಿಕೊಂಡಿದ್ದಾರೆ. ಈ ಬುದ್ಧಿಜೀವಿಗಳು ಹೇಳುವ ಕಾಲಬಾಹ್ಯ ವಿಚಾರಗಳನ್ನು ವಿಮರ್ಶಿಸಲು ಅವರು ಶಕ್ತರಿದ್ದಾರೆ. ಇದನ್ನು ಈ ಬುದ್ಧಿಜೀವಿಗಳಿಗೆ ಅರಗಿಸಲು ಸಾಧ್ಯವಾಗುತ್ತಿಲ್ಲ. ಮರುಳಸಿದ್ದಪ್ಪನಂಥವರು ಇಂತಹ ಪತ್ರಕರ್ತರನ್ನು, ಪತ್ರಿಕೆಗಳನ್ನು ಉಗ್ರವಾದಿಗಳಿಗೆ ಹೋಲಿಸಿ ತಮ್ಮ ಹತಾಶೆ, ಹಳವಂಡ, ಬಾಲಿಶತನ, ಪೊಳ್ಳುತನವನ್ನು ಪ್ರದರ್ಶಿಸಿದ್ದು ನಾಚಿಕೆಗೇಡು.
- ಡ್ಯಾನಿ ಪಿರೇರಾ, ಹಳ್ಳಿಮೈಸೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


