ಅಂಕಣಗಳು

ಭಾರತದ ಬದಲಾವಣೆಗೆ ಕಾರಣರಾಗುವರೇ ಮೋದಿ?

Published On :

ಭಾರತದ ಆರ್ಥಿಕತೆಯನ್ನು ಚೇತರಿಸಿಕೊಳ್ಳುವಂತೆ ಮಾಡಬಲ್ಲರೇ ನರೇಂದ್ರ ಮೋದಿ? ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಮತದಾರರಲ್ಲಿ ಸುಳಿಯುತ್ತಿರುವ ಪ್ರಶ್ನೆಯಿದು. ಈ ಕುರಿತು ಮತದಾರರಲ್ಲಿ ಅಭಿಪ್ರಾಯಬೇಧವಂತೂ ಇದ್ದೇ ಇದೆ.  ಯುಪಿಎ ಸರ್ಕಾರದಡಿಯಲ್ಲಿ ಹಳ್ಳ ಹಿಡಿದಿರುವ ಆರ್ಥಿಕತೆಯನ್ನು ಮೋದಿಯವರಿಂದ ಖಂಡಿತವಾಗಿಯೂ ಮೇಲೆತ್ತಲು ಸಾಧ್ಯ ಎನ್ನುತ್ತಾರೆ ಅವರ ಬೆಂಬಲಿಗರು. ಗೋಲ್ಡಮೆನ್ ಸ್ಯಾಕ್ಸ್ ಎಂಬ ಜಾಗತಿಕ ಹೂಡಿಕೆಯ ಬ್ಯಾಂಕಿಂಗ್ ಸಂಸ್ಥೆ ತನ್ನ ವರದಿಯೊಂದರಲ್ಲಿ ಮೋದಿಯವರನ್ನು "ಆ್ಜಜಟಿಡಿ ್ಟಜಿ ಝಛಛಟ್ಜಿಜ" ಎಂದು ಕರೆದಿದೆ.
ಆದರೆ ಸಂದೇಹವಾದಿಗಳು ಹೇಳುವುದೇ ಬೇರೆ. ಗುಜರಾತ್‌ನಲ್ಲಿ ನರೇಂದ್ರ ಮೋದಿಯವರು ಬಿಜೆಪಿಯನ್ನು ಚೆನ್ನಾಗಿ ದುಡಿಸುತ್ತಿರಬಹುದು, ಆದರೆ ರಾಷ್ಟ್ರೀಯ ರಾಜಕಾರಣದ ವಿಷಯಕ್ಕೆ ಬಂದಾಗ ಅಲ್ಲಿ ಅನೇಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾಗುತ್ತದೆ. ಆಗ ಗುಜರಾತ್‌ನಲ್ಲಿ ಆದಂಥದ್ದೇ ಅಭಿವೃದ್ಧಿ ದೇಶದೆಲ್ಲೆಡೆ ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು. ಅದಾಗ್ಯೂ ಬಿಜೆಪಿ ಪಕ್ಷ ಒಂದು ರೀತಿಯ ಆರ್ಥಿಕ ಮನೋವ್ಯಾಧಿಯಿಂದ ಬಳಲುತ್ತಿದೆ. ಅಧಿಕಾರದಲ್ಲಿದಾಗ ಆ ಪಕ್ಷ ಧೈರ್ಯದಿಂದ ಸುಧಾರಣಾವಾದಿ ಸರ್ಕಾರವನ್ನು ನಡೆಸಿತು, ಉದಾರವಾದಿ ಸಿದ್ಧಾಂತವನ್ನು ಅಪ್ಪಿಕೊಂಡಿತು. ಇದರಿಂದಾಗಿ ಟೆಲಿಕಾಂ ಮತ್ತು ವಿಮಾ ವಲಯಗಳು ಖಾಸಗಿ ಕಂಪನಿಗಳಿಗೆ ಕದ ತೆರೆದವು. ಆದರೆ ಈಗ ಅದೇ ಬಿಜೆಪಿ ಆರ್ಥಿಕ ಉದಾರೀಕರಣ ಎಂದರೆ ಬೆಚ್ಚಿಬೀಳುವಂತಾಡುತ್ತಿದೆ. ಗ್ರಾಮೀಣ ಜನರಿಗೆ ಅನುತ್ಪಾದಕ ಕೆಲಸವನ್ನು ಕೊಡುವ ಅತಿ ದುಬಾರಿ ಯೋಜನೆಯನ್ನು ಬಿಜೆಪಿ ಹೊಗಳುತ್ತಿದೆ. ಅದು ಆಹಾರ ಭದ್ರತಾ ಮಸೂದೆಯನ್ನು ಬೈಯುತ್ತಿರುವುದೇಕೆಂದರೆ, ಮತ್ತೆಲ್ಲಿ ತನ್ನ ಯೂ ಟರ್ನ್‌ನ ಬಗ್ಗೆ ಜನರು ತಪ್ಪುತಿಳಿದುಕೊಳ್ಳುತ್ತಾರೋ ಎನ್ನುವ ಭಯದಿಂದಷ್ಟೆ. 'ಉದ್ಯಮ ಸ್ನೇಹಿ' ಎಂಬ ತನ್ನ ರೆಪ್ಯುಟೇಷನ್‌ನ ಹೊರತಾಗಿಯೂ ಬಿಜೆಪಿ ಭೂ ಸ್ವಾಧೀನ ಮಸೂದೆಗೆ ಬೆಂಬಲ ನೀಡಿತು. ಇದರಿಂದಾಗಿ ಖಾಸಗಿ ಉದ್ಯಮಗಳಿಗೆ ಜಾಗ ಸಿಗುವುದು ಬಹಳ ಕಷ್ಟವಾಗುತ್ತದೆ ಎನ್ನುವುದರ ಅರಿವಿದ್ದರೂ ಕೂಡ ಅದು ಹೀಗೆ ಮಾಡಿತು.
ಆದರೆ, ಮೋದಿಯವರ ಆರ್ಥಿಕ ರೆಕಾರ್ಡ್ ಅಸ್ತವ್ಯಸ್ಥವಾಗೇನೂ ಇಲ್ಲ. ಅವರು 2001ರಲ್ಲಿ ಅಧಿಕಾರ ಚುಕ್ಕಾಣಿಹಿಡಿದ ನಂತರ, ಒಂದು ದಶಕದವರೆಗೆ ಆ ರಾಜ್ಯದ ಅಭಿವೃದ್ಧಿ ದುಪ್ಪಟ್ಟು ವೇಗದಲ್ಲಿ ಸಾಗಿತು. ಇದೇನೂ ಸಾಮಾನ್ಯ ಸಾಧನೆಯಲ್ಲ. ಇದಷ್ಟೇ ಅಲ್ಲದೆ, ಅತಿ ಕಡಿಮೆ ನಿರುದ್ಯೋಗಿಗಳಿರುವ ರಾಜ್ಯಗಳಲ್ಲಿ ಗುಜರಾತ್ ಕೂಡ ಒಂದು. ಕ್ಯಾಟೋ ಸಂಸ್ಥೆ ಗುಜರಾತನ್ನು ಭಾರತದ ಅತ್ಯಂತ ನೆಚ್ಚಿನ 'ಉದ್ಯಮ ಸ್ನೇಹಿ' ರಾಜ್ಯ ಎಂದು ಬಣ್ಣಿಸಿದೆ. ಸೆಪ್ಟೆಂಬರ್‌ನಲ್ಲಿ ಬಂದ ನೀಲ್ಸನ್ ಸಮೀಕ್ಷೆಯಲ್ಲಿ, ಭಾರತದ 100 ಪ್ರಮುಖ ಕಂಪನಿಗಳ ಮುಖ್ಯಸ್ಥರು ಮೋದಿಯವರನ್ನು ಪ್ರಧಾನಿ ಹುದ್ದೆಯಲ್ಲಿ ನೋಡಲು ಬಯಸುತ್ತಾರೆ ಎಂದು ಹೇಳಲಾಗಿದೆ.
ಇನ್ನು ದೇಶವಾಸಿಗಳಿಗೆ ಸಂದೇಶ ಕಳುಹಿಸುವ ವಿಷಯದಲ್ಲೂ ಮೋದಿ ಭಿನ್ನರಾಗಿ ನಿಲ್ಲುತ್ತಾರೆ. 'ಹೆಚ್ಚು ಆಡಳಿತ, ಕಡಿಮೆ ಸರ್ಕಾರ' ಎನ್ನುವ ಅವರ ಸ್ಲೋಗನ್ ಪ್ರಸಿದ್ಧವಾಗಿದೆ. ಬಿಸಿನೆಸ್‌ಗಳಲ್ಲಿ ಮೂಗುತೂರಿಸುವ ಬಿಸಿನೆಸ್ ಅನ್ನು ಸರ್ಕಾರ ಮಾಡಬಾರದು ಎಂದೂ ಅವರು ಹೇಳುತ್ತಾರೆ. ಮುಕ್ತ ಮಾರುಕಟ್ಟೆಯ ದೀರ್ಘ ಇತಿಹಾಸಕ್ಕೆ ಸಾಕ್ಷಿಯಾಗಿರುವ ಅಮೆರಿಕನ್ ಅಥವಾ ಆಂಗ್ಲವ್ಯಕ್ತಿಯೊಬ್ಬನಿಗೆ ಈ ಮಾತು ಅಷ್ಟೇನೂ ದೊಡ್ಡ ವಿಷಯವಾಗಿ ಗೋಚರಿಸಲಾರದೇನೋ, ಆದರೆ ಭಾರತದಲ್ಲಿ ಈ ಹೇಳಿಕೆಗೆ ಇರುವ ಮಹತ್ವವೇ ಬೇರೆಯದ್ದು.
ಹಾಗಿದ್ದರೆ ಯಾರ ಮಾತನ್ನು ನೀವು ನಂಬುತ್ತೀರಿ? ರಾಜಕೀಯ ಪಂಡಿತರದ್ದೋ, ಉದ್ಯಮಪತಿಗಳದ್ದೋ? ಯಾರ ಮಾತಿಗೆ ನಾವು ಮಣೆಹಾಕಬೇಕು? ಗುಜರಾತ್‌ನಲ್ಲಿ ಮಾಡಿದ ಮ್ಯಾಜಿಕ್ಕನ್ನು ಭಾರತಕ್ಕೆ ಮಾಡಲು ಮೋದಿಗೆ ಸಾಧ್ಯವಿಲ್ಲ ಎನ್ನುವ ಮಾತಿಗಂತೂ ನಿಜಕ್ಕೂ ಅರ್ಥವಿಲ್ಲ. ದೇಶೀಯ ಮತ್ತು ಅಂತಾರಾಷ್ಟ್ರೀಯ ಉದ್ಯಮ ವಲಯಗಳು, ಮೋದಿ ಬಂದರೆ ಗುಜರಾತ್‌ನಲ್ಲಾದ ಬದಲಾವಣೆಯೇ ಎಲ್ಲೆಡೆಯೂ ಆಗಲಿದೆ ಎಂದು ಹೇಳುತ್ತಿವೆ. ಮೋದಿ ಪ್ರಧಾನಿಯಾಗುತ್ತಾರೋ ಇಲ್ಲವೋ ಎನ್ನುವುದನ್ನು ಹೇಳಲು ಈಗಲೇ ಸಾಧ್ಯವಿಲ್ಲ, ಜೊತೆಗೆ ಅವರು ಯಾವ ನೀತಿಗಳನ್ನು ಅನುಸರಿಸಲಿದ್ದಾರೆ ಎನ್ನುವುದನ್ನೂ ಕೂಡ. ಆದರೂ ಆರ್ಥಿಕ ಆಡಳಿತದ ವಿಷಯ ಬಂದಾಗ, ಅವರ ಮೇಲೆ ಹೆಚ್ಚು ಭರವಸೆಯಿಟ್ಟುಕೊಳ್ಳುವುದರಲ್ಲಿ ತಪ್ಪೇನು ಇಲ್ಲ.

- ಸದಾನಂದ ಧುಮೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.