ಪೋಲಿಯೋ ಮುಕ್ತ ಭಾರತಕ್ಕೆ ಹರ್ಷವರ್ಧನ್ ಕೊಡುಗೆ

ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವಾಗಿಸುವಲ್ಲಿ ಬಿಜೆಪಿ ಮತ್ತು ಮುಖ್ಯವಾಗಿ ಡಾ. ಹರ್ಷವರ್ಧನ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲು ನನಗೆ ಸಂತಸವಾಗುತ್ತಿದೆ. ಇದಕ್ಕಾಗಿ ಅವರಿಗೆ ಅನೇಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
ನವೆಂಬರ್ ತಿಂಗಳು, ನನ್ನ ಮಡದಿ ಕಮಲಾ ಮತ್ತು ನನಗೆ ವಿಶೇಷವಾದದ್ದು. ಏಕೆಂದರೆ ನಮ್ಮಿಬ್ಬರ ಜನ್ಮದಿನ ಈ ತಿಂಗಳಲ್ಲೇ ಬರುತ್ತದೆ. ನವೆಂಬರ್ 27 ಕಮಲಾ ಹುಟ್ಟುಹಬ್ಬ, ನನ್ನದು ನವೆಂಬರ್ 8 ರಂದು. ಈ ಬಾರಿ ನವೆಂಬರ್ 24ಕ್ಕೆ ಗೆಳೆಯರನ್ನೆಲ್ಲ ಕರೆದು ಇಬ್ಬರ ಹುಟ್ಟುಹಬ್ಬಗಳನ್ನು ಆಚರಿಸಿದಳು ಮಗಳು ಪ್ರತಿಭಾ. ಊಟದಿಂದ ಹಿಡಿದು ಪ್ರತಿಯೊಂದು ವಿಷಯವನ್ನೂ ಪ್ರತಿಭಾ ಅಚ್ಚುಕಟ್ಟಾಗಿ ನಿರ್ವಹಿಸಿದಳು ಎಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಿಯೊಬ್ಬರೂ ಹೇಳಿದರು.
ಕೊಡುಗೆಯ ರೂಪದಲ್ಲಿ ಹಲವಾರು ಪುಸ್ತಕಗಳು ನನ್ನ ಕೈ ಸೇರಿದವು. ಅದರಲ್ಲೂ ವಿಶ್ವವಿಖ್ಯಾತ ಮ್ಯಾಕಿನ್ಸೇ ಆ್ಯಂಡ್ ಕಂಪನಿ ಪ್ರಕಟಿಸಿರುವ "Reimagining India: Unlocking the potential of Asia’s next Super power'' ಪುಸ್ತಕ ನನ್ನ ಕುತೂಹಲ ಕೆರಳಿಸಿತು.
"ಅತಿ ಪ್ರಮುಖವಾದ ಮತ್ತು ಅತಿ ಕಡಿಮೆಯಾಗಿ ಅರ್ಥಮಾಡಿಕೊಂಡ ರಾಷ್ಟ್ರ(ಭಾರತ) ಎದುರಿಸುತ್ತಿರುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಪ್ರಪಂಚದ ಪ್ರಮುಖ ಚಿಂತಕರು ನಡೆಸಿದ ಅಧ್ಯಯನ" ಎನ್ನುವ ಸಾಲುಗಳು ಪುಸ್ತಕ ತೆರೆಯುತ್ತಿದ್ದಂತೆಯೇ ಎದುರಾಗುತ್ತವೆ.
ಸಿಎನ್ಎನ್ನ ಫರೀದಾ ಜಾಕ್ರಿ, ರಿಲಯನ್ಸ್ ಉದ್ದಿಮೆಗಳ ಮುಖ್ಯಸ್ಥ ಮುಕೇಶ್ ಅಂಬಾನಿ, ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ಗೇಟ್ಸ್, ಗೂಗಲ್ ಮುಖ್ಯಸ್ಥ ಎರಿಕ್ ಶ್ಮಿಟ್, ಇನ್ಫೋಸಿಸ್ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಮತ್ತು ಖ್ಯಾತ ಲೇಖಕರಾದ ಸುಕೇತು ಮೆಹತಾ, ಎಡ್ವರ್ಡ್ ಲೂಸಿ ಮತ್ತು ಪ್ಯಾಟ್ರಿಕ್ ಫ್ರೆಂಚ್ರಂಥ ಘಟಾನುಘಟಿಗಳೆಲ್ಲ ಈ ಪುಸ್ತಕದಲ್ಲಿ ಮಾತನಾಡಿದ್ದಾರೆ.
ಅದೇ ಪಟ್ಟಿಯಲ್ಲಿ ನನ್ನ ಕಣ್ಣಿಗೆ ತಟ್ಟನೆ ಸಿಲುಕಿದ ಇನ್ನೊಂದು ಪ್ರಮುಖ ಹೆಸರೆಂದರೆ ಬಿಲ್ ಗೇಟ್ಸ್ ಅವರದ್ದು. ಭಾರತದ ಕುರಿತುಅವರು ಏನು ಹೇಳಿದ್ದಾರೋ ನೋಡೋಣ ಎಂದು ಪುಟ ತಿರುವಿದಾಗ, ನನಗೆ ಆಶ್ಚರ್ಯ ಕಾದಿತ್ತು. ಏಕೆಂದರೆ ಈ ಲೇಖನದ ತಲೆ ಬರಹ ಹೀಗಿತ್ತು: "ನಾನು ಯುದ್ಧದಿಂದ (ಪೋಲಿಯೋ ವಿರುದ್ಧದ) ಕಲಿತದ್ದೇನು?"
---------
ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡಾ. ಹರ್ಷವರ್ಧನ್ ಮೊನ್ನೆ ರಾತ್ರಿ, ದಶಕದ ಹಿಂದೆ ತಾವು ಬರೆದ ಪುಸ್ತಕವೊಂದನ್ನು ನನಗೆ ಕೊಟ್ಟರು.
ಮೊದಲ ಪುಟದಲ್ಲಿ ಅವರು ಹೀಗೆ ಬರೆದಿದ್ದಾರೆ: "ಗೌರವಾನ್ವಿತ ಅಡ್ವಾಣಿಯವರೆ, ನಿಮ್ಮಿಂದಾಗಿ ನನಗೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಕಳೆದ ಮೂರು ವರ್ಷಗಳಿಂದ ಭಾರತ ಪೋಲಿಯೋ ಮುಕ್ತವಾಗಿದೆ"
-ಹರ್ಷವರ್ಧನ್
------------
ಬಿಲ್ಗೇಟ್ಸ್ ಬರೆದ ಲೇಖನವೇ ಇಂದು ನನ್ನ ಲೇಖನಕ್ಕೆ ಮೂಲ. ಅದರಲ್ಲಿ ಗೇಟ್ಸ್- "ಭಾರತ ಪೋಲೀಯೋ ರೋಗವನ್ನು ಬೇರು ಸಮೇತ ನಿರ್ಮೂಲನೆ ಮಾಡಿದೆ. ನಾನು ಕಂಡ ಅತ್ಯಂತ ಪರಿಣಾಮಕಾರಿಯಾದ ಜಾಗತಿಕ ಆರೋಗ್ಯ ಯಶಸ್ಸಿದು" ಎನ್ನುತ್ತಾರೆ.
2004ರಲ್ಲಿ ಡಾ. ಹರ್ಷವರ್ಧನ್, 'ಎ ಟೇಲ್ ಆಫ್ ಟೂ ಡ್ರಾಪ್ಸ್' ಪುಸ್ತಕವನ್ನು ಬರೆದಾಗ, ಆ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಬೇಕೆಂದು ನನ್ನಲ್ಲಿ ಕೇಳಿಕೊಂಡರು. ಮೂರು ಪುಟಗಳ ಆ ಮುನ್ನುಡಿಯ ಮೊದಲ ಮೂರು ಪ್ಯಾರಾಗಳನ್ನು ನೋಡಿದರೆ, ಏಕೆ ನಾನು ಅವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲು ಬಲವಾಗಿ ಶಿಫಾರಸು ಮಾಡಿದೆ ಎನ್ನುವುದು ನಿಮಗೆ ಅರ್ಥವಾಗುತ್ತದೆ. ಮುನ್ನುಡಿಯಲ್ಲಿ ನಾನು ಹೇಳಿದ್ದು...
"ಈ ಪುಸ್ತಕದ ಲೇಖಕ ಡಾ. ಹರ್ಷವರ್ಧನ್ ಅವರ ಪರಿಚಯ ನನಗಾದದ್ದು 1994ರಲ್ಲಿ. ಅವರನ್ನು "ಪೋಲಿಯೋ ಮುಕ್ತ ಭಾರತ" ಆಭಿಯಾನದ ಹರಿಕಾರ ಎನ್ನಲೇಬೇಕು. ಹರ್ಷ ಅವರನ್ನು ಇತ್ತೀಚೆಗೆ ದೆಹಲಿ ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಸಚಿವರನ್ನಾಗಿ ನೇಮಿಸಲಾಗಿದೆ. ಅಲ್ಲದೆ, ಇದೇ ವೇಳೆಯಲ್ಲೇ ಅವರು ದೆಹಲಿ ಮೆಡಿಕಲ್ ಅಸೋಶಿಯೇಷನ್ನ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಹರ್ಷವರ್ಧನ್ರೊಂದಿಗಿನ ಮಾತುಕತೆಗಳಲ್ಲಿ ಅವರು, ಹೇಗೆ ಜಾಗತಿಕವಾಗಿ ಪೋಲಿಯೋ ರೋಗವನ್ನು ನಿರ್ಮೂಲನೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಪ್ರಯತ್ನಿಸುತ್ತಿದೆ ಮತ್ತು ಈ ಪ್ರಯತ್ನದಲ್ಲಿ ಬ್ರೆಜಿಲ್ ಮತ್ತು ಫಿಲಿಪೀನ್ಸ್ನಿಂದ ಹೇಗೆ ಪೋಲಿಯೋ ನಿರ್ಮೂಲನೆಯಾಗಿದೆ ಎನ್ನುವ ಕುರಿತು ಮಾಹಿತಿ ನೀಡುತ್ತಿದ್ದರು. 'ಪಲ್ಸ್ ಪೋಲಿಯೋ ಅಭಿಯಾನದ' ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವ ಪ್ರತಿಯೊಂದು ಪುಸ್ತಕಗಳನ್ನೂ ತಾವು ಅಭ್ಯಸಿಸಿರುವುದಾಗಿ ಮತ್ತು ದೇಶದ ರಾಜಧಾನಿಯಿಂದ ಪೋಲಿಯೋ ರೋಗವನ್ನು ತೊಡೆದುಹಾಕುವುದು ಸಾಧ್ಯವಿದೆ ಎಂದು ನನಗೆ ಹೇಳಿದ್ದರು."
"ನಾನು ಈ ಸಮಯದಲ್ಲಿ ಹರ್ಷ ಅವರನ್ನು ಅಭಿನಂದಿಸಲು ಇಚ್ಛಿಸುತ್ತೇನೆ. ಅವರು ತಮ್ಮ ಅಭಿಯಾನವನ್ನು ದೆಹಲಿಯಲ್ಲಿ ಆರಂಭಿಸಿದರಾದರೂ, ಇಂದು ಅದು ರಾಷ್ಟ್ರೀಯ ಅಭಿಯಾನವಾಗಿ ಬದಲಾಗಿದೆ. ದೇಶವನ್ನು ಆರೋಗ್ಯವಂತವಾಗಿ ಮಾಡಬೇಕೆಂಬ ಇಚ್ಛೆಯಿಂದ ಮುನ್ನುಗ್ಗುತ್ತಿರುವ ಈ ಅಭಿಯಾನ, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಿಂದಾಗಿ ಬೃಹತ್ ಹೋರಾಟದ ರೂಪ ಪಡೆದಿದೆ. ಅವರು ತಮ್ಮ ಅನುಭವಗಳನ್ನು ಅಕ್ಷರರೂಪಕ್ಕಿಳಿಸಿರುವುದನ್ನು ನೋಡಿ ನನಗೆ ಸಂತೋಷವಾಗಿದೆ."
----------
ತಮ್ಮ ಲೇಖನದಲ್ಲಿ ಬಿಲ್ಗೇಟ್ಸ್, ವಿಮಾನದಿಂದ ತಮ್ಮ ಕಣ್ಣಿಗೆ ಕಂಡ ಬೆಂಗಳೂರಿನ ಬಗ್ಗೆ ಹೀಗೆ ಹೇಳುತ್ತಾರೆ: "ವಿಮಾನ ಇನ್ನೊಂದು 5 ನಿಮಿಷಕ್ಕೆ ಲ್ಯಾಂಡ್ ಆಗುವುದರಲ್ಲಿತ್ತು. ನಾನು ಕಿಟಕಿಯಿಂದ ಹೊರಗೆ ಇಣುಕಿದೆ. ಒತ್ತೊತ್ತಾದ, ಚಿಕ್ಕ ಮತ್ತು ಶಿಥಿಲವಾದ ಮನೆಗಳು ಮೈಲಿಗಟ್ಟಲೇ ಹರಡಿಕೊಂಡಿದ್ದವು. ನನ್ನ ಪಕ್ಕ ಕುಳಿತಿದ್ದ ಭಾರತೀಯನೊಬ್ಬ ಹೆಮ್ಮೆಯಿಂದ ಹೇಳಿದ- 'ನಮ್ಮ ಬೆಂಗಳೂರಿನಲ್ಲಿ ಸ್ಲಮ್ಗಳೇ ಇಲ್ಲ!'. ಆತ ಅಮಾಯಕನೋ, ಮುಜುಗರದಿಂದ ಹಾಗೆ ಹೇಳಿದನೋ ಅಥವಾ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಿದ್ದಾನೋ ತಿಳಿಯದು. ಏಕೆಂದರೆ ಆತನಿಗೆ 'ಇನ್ನೊಂದು ಭಾರತ' ಕಾಣಿಸಲೇ ಇಲ್ಲ. ತಪ್ಪು ಆತನದ್ದಷ್ಟೇ ಎಂದು ನಾನು ಹೇಳುತ್ತಿಲ್ಲ. ನಮ್ಮ ದೃಷ್ಟಿಯನ್ನು ಬಡವರಿಂದ ಬೇರೆಡೆಗೆ ಹರಿಸುವುದು ಬಹಳ ಸುಲಭದ ಕೆಲಸ. ಆದರೆ ನಾವು ಹಾಗೆ ಮಾಡಿದರೆ, ಸಮಾಜದ ಪೂರ್ಣ ಸಾಮರ್ಥ್ಯದ ಅರಿವೇ ನಮಗೆ ಆಗುವುದಿಲ್ಲ".
ಮುಂದುವರಿಯುತ್ತಾ ಅವರು ಹೇಳುತ್ತಾರೆ: "ಭಾರತದ ಅತ್ಯಂತ ಪ್ರಭಾವಿ ಜನರೊಂದಿಗೆ ಕೆಲಸ ಮಾಡಿದ ಸಂತೃಪ್ತಿ ನನ್ನಲ್ಲಿದೆ. ಅವರೆಲ್ಲರೂ ಅತ್ಯಂತ ಬುದ್ಧಿವಂತರು, ಕಾರ್ಯತತ್ಪರತೆ ಉಳ್ಳವರು ಮತ್ತು ಪ್ರತಿಭಾವಂತರಾಗಿದ್ದರು. ಆದರೆ ನಾನು ಮತ್ತು ಮೆಲಿಂದಾ ನಮ್ಮ ಫೌಂಡೇಷನ್ನ ಕೆಲಸವನ್ನು ಶುರು ಮಾಡಿದಾಗ, ಬಹಳಷ್ಟು ಬಡವರನ್ನು ಭೇಟಿಯಾದೆವು. ಶಿಕ್ಷಣ ವಂಚಿತ, ಅನಾರೋಗ್ಯದ ಗೂಡಾಗಿದ್ದ ಮತ್ತು ಸ್ಲಂಗಳಲ್ಲಿ ವಾಸಿಸುತ್ತಿರುವ ಜನರೇ ಭಾರತವನ್ನು ಬೆಳೆಯಲು ಬಿಡುತ್ತಿಲ್ಲ ಎಂದು ಪರಿಣತರು ನಮಗೆ ಹೇಳುತ್ತಿದ್ದರು. ಆದರೆ ನಮ್ಮ ಅನುಭವ ಬೇರೆಯದ್ದೇ ಕಥೆ ಹೇಳುತ್ತದೆ. ಯಾವುದನ್ನು ಭಾರತೀಯರು ದೌರ್ಬಲ್ಯ ಎಂದು ಭಾವಿಸಿದ್ದಾರೋ, ಅದನ್ನೇ ಪ್ರಬಲ ಶಕ್ತಿಯಾಗಿ ಮಾರ್ಪಡಿಸಬಹುದು."
ಇನ್ನು ಭಾರತ ಪೋಲಿಯೋ ನಿರ್ಮೂಲನೆಯ ಪೂರ್ಣ ಖರ್ಚನ್ನು ತಾನೇ ನಿರ್ವಹಿಸುತ್ತಿರುವುದನ್ನು ಬಿಲ್ ಗೇಟ್ಸ್ ಪ್ರಶಂಸಿಸುತ್ತಾರೆ. 'ಇದು ಬದ್ಧತೆ ಮತ್ತು ಆತ್ಮವಿಶ್ವಾಸದ ಪ್ರತಿರೂಪ" ಎನ್ನುತ್ತಾರೆ!
ಬಿಲ್ ಗೇಟ್ಸ್ ತಮ್ಮ ಲೇಖನದ ಕೊನೆಯಲ್ಲಿ ಹೇಳುತ್ತಾರೆ: "ಪೋಲಿಯೋ ಅಭಿಯಾನದಲ್ಲಿ ಭಾರತ ತನ್ನ ಕೆಚ್ಚೆದೆಯನ್ನು, ಹುರುಪನ್ನು, ವೈಜ್ಞಾನಿಕ ಶಕ್ತಿಯನ್ನು, ವಿವೇಚನಾಶಕ್ತಿಯನ್ನು, ಉತ್ಪಾದನಾ ಶಕ್ತಿಯನ್ನು, ರಾಜಕೀಯ ಕ್ರಿಯಾಶೀಲತೆಯನ್ನು ಅನಾವರಣಗೊಳಿಸಿದೆ. ಹೌದು, ಭಾರತ ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ಈ ಎಲ್ಲಾ ವಿಷಯಗಳನ್ನು ನಾವು ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಪೋಲೀಯೋ ವಿರುದ್ಧದ ಹೋರಾಟದಲ್ಲಿ ಭಾರತೀಯರು ವಹಿಸಿದ ಶ್ರಮ ಮಾತ್ರ ಅತ್ಯದ್ಭುತ. ಜನತೆ ಒಗ್ಗೂಡಿದರೆ ಎಂಥಾ ಕಠಿಣ ಸಮಸ್ಯೆಯೂ ಹೆಚ್ಚು ಕಾಲ ನಿಲ್ಲಲಾರದು ಎನ್ನುವುದನ್ನು ಭಾರತೀಯರು ಪ್ರಪಂಚಕ್ಕೆ ತೋರಿಸಿದ್ದಾರೆ."
----
ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವಾಗಿಸುವಲ್ಲಿ ಬಿಜೆಪಿ ಮತ್ತು ಮುಖ್ಯವಾಗಿ ಡಾ. ಹರ್ಷವರ್ಧನ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲು ನನಗೆ ಸಂತಸವಾಗುತ್ತಿದೆ. ಈ ಕಾರಣಕ್ಕಾಗಿಯೇ ಡಾ. ಹರ್ಷವರ್ಧನ್ ಅವರಿಗೆ ಅನೇಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
2001ರಲ್ಲಿ ಡಾ. ಹರ್ಷವರ್ಧನ್ ಅವರನ್ನು ಅಭಿನಂದಿಸಲು 'ರೋಟರಿ ಸಂಸ್ಥೆ' ಕಾರ್ಯಕ್ರಮವನ್ನು ಆಯೋಜಿಸಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಹರ್ಷವರ್ಧನ್ ಅವರನ್ನು 'ಡಾ. ಸ್ವಾಸ್ಥ್ಯ ವರ್ಧನ್!' ಎಂದು ಕರೆದು ಬೆನ್ನುತಟ್ಟಿದ್ದರು. ಇವರನ್ನು ಮನಸಾರೆ ಮೆಚ್ಚಿದ ಇನ್ನೊಬ್ಬ ಪ್ರಧಾನಿಯೆಂದರೆ ಐ.ಕೆ. ಗುಜ್ರಾಲ್. ಹರ್ಷವರ್ಧನ್, ದೆಹಲಿ ಕಂಡ ಅತ್ಯುತ್ತಮ ಆರೋಗ್ಯ ಸಚಿವ ಎಂದಿದ್ದರು ಗುಜ್ರಾಲ್.
- ಎಲ್. ಕೆ. ಆಡ್ವಾಣಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


