ಅಶೆಂಬ್ಲಿ ನೋಡಾವ ಅಂತೇಳಿ ಮೈಲಾರಿ ಬಸ್ ಹತ್ಕಂಡು ಬೆಳ್ಗಾಂ ಕಡೀಕೆ ವೊಂಟೇಬುಟ್ಟು. ವತ್ತಾರೆ ಬಸ್ ಇಳ್ದು ಅಲ್ಲೇ ಕೆರೆನಾಗೆ ಎಲ್ಲ ಪೊಗ್ರಾಮು ಮುಗ್ಸಿ ಸುವರ್ಣ ವಿಧಾನಸೌಧದ ಕಡೀಕೆ ವೊಂಟ.
ಹಂಗೇ ವೋಯ್ತಾಯಿದ್ರೆ ಕರೆ ಏರಿಮ್ಯಾಗೆ ಮಂತ್ರಿ ಉಮಾಸ್ರೀ ಮೇಡಮ್ಮು ವಾಕಿಂಗು ಮಾಡ್ಕತಾಯಿದ್ರು. ಆವಮ್ಮುನ್ನ ನೋಡಿ ಮೈಲಾರಿ ಸ್ಯಾನೆ ಖುಸಿ ಆಬುಟ್ಟ.
ಸಾಕವ್ವ, ಸಾಕವ್ವ ಅಂತೇಳಿ ಕೂಕ್ಕಂಡು ವೋಡೋದ. ಪಕ್ದಾಗೆ ಇದ್ದೋನು ಗನ್‌ಮ್ಯಾನು ಬಂದೂಕು ತೆಗ್ದು, ಮೈಲಾರಿ ತಲೆಗೆ ಮಡುಗ್ಬುಟ್ಟ. ಇದ್ಯಾಕಣ್ಣೋ ನಮ್ಮ ಸಾಕವ್ವೋರು ಬಂದವ್ರೆ, ವಸಿ ಮಾತಾಡವ ದಾರಿ ಬುಡು, ನಾನೇರ ಟೆರರಿಸ್ಟಾ ? ಹಿಂಗೆ ಬಂದೂಕು ಮಡುಗ್ತಾಯಿದ್ದೀಯ. ತೆಗಿ ಅತ್ತಗೆ ಅಂದ ಮೈಲಾರಿ.
ಮುಚ್ಕಂಡು ಸೈಡ್ಗೆ ವೋಗಲೆ, ಮೇಡಮ್ಮೋರು ಸೀರಿಯಸ್ಸಾಗಿ ವಾಕಿಂಗು ಮಾಡ್ತಾವ್ರೆ. ಸಾಕವ್ವ ಅಂತೆ ಸಾಕವ್ವ, ಇಲ್ಯಾರೂ ಇಲ್ಲ ವೋಗಲೆ ಅಂದ ಗನ್‌ಮ್ಯಾನು. ಸುಮ್ಕಿರಣ್ಣ ಕಂಡಿದ್ದೀನಿ, ಸಾಕವ್ವನೇ ಈವಮ್ಮ. ನಂಗೆ ಗೊತ್ತಿಲ್ವಾ? ಸಾಟಕ್ದಾಗೆ ನೋಡಿದ್ದೀನಿ. ನಾನು ಮೇಡಮ್ಮು ಅಭಿಮಾನಿ ಅಂದ ಮೈಲಾರಿ.
ನಿಂಗೆ ತಲೆ ಏನರ ಕೆಟ್ಟದಾ ? ಲೇ ಮೆಂಟ್ಲು ಅವ್ರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿ ಉಮಾಸ್ರೀ ಕಣಲೇ ದಡ್ಡ. ಸಾಕವ್ವ ಅಂತೆ ಸಾಕವ್ವ. ತಗ್ದು ಮಡುಗ್ದ ಅಂದ್ರೆ ಮಖ ಹಂಗೇ ಗೋಕಾಕ್ ಕರ್ದಂಟು ಥರ ಆಗೋಬೇಕು ಅಂದ ಗನ್‌ಮ್ಯಾನು.
ಗಲಾಟೆ ಕೇಳುಸ್ಕಂಬುಟ್ಟು ಉಮಾಸ್ರಿ ಮೇಡಮ್ಮು, ರೀ ಗನ್‌ಮ್ಯಾನು, ಯಾರ್ರೀ ಅದು, ಕಳುಸ್ರೀ ಅಂದ್ರು. ನಾನು ಯೋಳಿಲ್ವಾ, ಅದು ಸಾಕವ್ವ ಮೇಡಮ್ಮೇ ಅಂತೇಳಿ ಮೈಲಾರಿ ಕುಣ್ಕಂಡು ಹತ್ರುಕ್ಕೆ ವೋದ. ಮೇಡಮ್ನೋರೆ ನಮುಸ್ಕಾರ, ಸಂದಾಕಿದ್ದೀರ. ಏನರ ಯೋಳಿ ನಿಮ್ದು ಲಕ್ಕೇ ಲಕ್ಕು ಅಂದ ಮೈಲಾರಿ. ಉಮಾಸ್ರೀಯೋರು ಹಂಗೇ ನೋಡ್ತಾಯಿದ್ರು. ಬಾಯೇ ಬುಡ್ಲಿಲ್ಲ.
ಕೈ ಪಕ್ಸುದಾಗೆ ಐದಾರ್ಕಿತ ಗೆದ್ದಿರೋ ಸಾಸ್ಕರು ಸ್ಯಾನೆ ಜನ ಅವ್ರೆ. ಅವ್ರುನ್ನ ಸೈಡ್ಗೆ ತಳ್ಳುಟ್ಟು ಸಿದ್ರಾಮಣ್ಣ ನಿಮ್ಮುನ್ನ ಮಂತ್ರಿ ಮಾಡುದ್ರು. ಅಲ್ಲ ವೊಂದಲ್ಲ ಅಂತ ಎರ್ಡು ಖಾತೆ ಬ್ಯಾರೆ ಕೊಟ್ಟವ್ರೆ. ಡಬಲ್ ಧಮಾಕ ಬುಡಿ. ಮಂತ್ರಿ ಆದ್ಮೇಕೆ ಅದೇನು ಘನತೆ, ಗಾಂಭೀರ್ಯ ಬಂದೋಗದೆ ನಿಮ್ಗೆ ಅಂತೀನಿ. ಇರ್ಬೇಕು ಬುಡಿ. ಏಕ್‌ದಂ ಮಂತ್ರಿ ಆಬುಟ್ರೆ ಹಂಗೇ ಅಲ್ವಾ ಸಾಕವ್ವ ಅಂದ ಮೈಲಾರಿ.
ಮೇಡಮ್ನೋರ್ಗೆ ಕ್ವಾಪ ನೆತ್ತೀಗಂಟ ಬಂದೋಯ್ತು. ಹಂಗೇ ಗನ್‌ಮ್ಯಾನು ಕಡೆ ನೋಡುದ್ರು. ಆವಯ್ಯ ಬಂದು ತಿರ್ಗ ಮೈಲಾರಿ ತಲೆಗೆ ಬಂದೂಕು ಮಡುಗ್ದ. ಯಾವನಲೇ ಇವ್ಲು, ಇಬ್ರು ಮಾತಾಡೋವಾಗ ಅಡ್ಡ ಬತ್ತೀಯಲ್ಲೋ. ಆಯುಧಪೂಜೆನಾಗೆ ಇಡೋ ಬಂದೂಕು ತಂದೂ ತಂದೂ ನನ್ ತಲೆಮ್ಯಾಲೆ ಮಡುಗ್ತಾಯಿದ್ದೀಯಲ್ಲೋ ಪುಣ್ಯಾತ್ಮ ವೋಗತ್ತಗೆ ಅಂತೇಳಿ ಮೈಲಾರಿ ಬೈದು, ಮೇಡಮ್ನೋರು ಮುಂದೆ ಡೈಲಾಗು ತಿರ್ಗ ಸುರು ಹಚ್ಕಂಡ. ಅಲ್ಲ ಮೇಡಮ್ಮು, ಮಂತ್ರಿ ಆದ್ಮೇಕೆ ಸಿಕ್ಕಾಪಟ್ಟೆ ಸೀರಿಯಸ್ಸು ಆಬುಟ್ಟೀದ್ದಿರಂತೆ. ಯಾರ್ತಾವನೂ ಮಾತೇ ಆಡಾಕಿಲ್ವಂತೆ. ನೋಡುದ್ರೂ ನೋಡ್ದೇಯಿದ್ದಂಗೆ ವೊಂಟೋಯ್ತೀರಂತೆ. ಸಿನ್ಮಾದಾಗೆ, ನಾಟುಕ್ದಾಗೆ ಬ್ಯಾಡ ಬ್ಯಾಡ ಅಂದ್ರು ಡೈಲಾಗ್ ಮೇಲೆ ಡೈಲಾಗು ವೊಡೀತಾಯಿದ್ರು. ಮೂರೊತ್ತೂ ಮಾತಾಡ್ತಾಯಿದ್ರಿ. ಈವಾಗೇನು ಆಗಿರಾದು ಅಂತೀನಿ. ಸಾಕವ್ವ ಮೊದ್ಲು ಇದ್ದಂಗಿಲ್ಲ. ಮಂತ್ರಿ ಆದ್ಮೇಕೆ ಸ್ಯಾನೆ ಚೇಂಜು ಆಬುಟ್ಟವ್ರೆ. ಮಾತೇ ಆಡಕ್ಕಿಲ್ಲ ಅಂತ ನಮ್ಮೂರ್ನಾಗೆ ಜನಾನೂ ಯೋಳ್ತಾವ್ರೆ.
ಅಲ್ಲ, ಅರ್ಧರಾತ್ರಿನಾಗೆ ಐಶ್ವರ್ಯ ಬಂದ್ರೆ ಕೊಡೆ ಹಿಡುದ್ರು ಅನ್ನಂಗೆ ಆಬುಟ್ರೆ ಹೆಂಗೆ? ಮಂತ್ರಿ ಪೋಸ್ಟು ಏಸು ದಿನ ಇರ್ತದೆ? ಈವತ್ತಲ್ಲ ನಾಳೆ ಕಿತ್ಕಂಡು ವೋಯ್ತದೆ. ಎಂತೆಂಥೋರೋ ಏನೇನೋ ಆಗೋದ್ರು. ಬಳ್ಳಾರಿ ರೆಡ್ಡಿಗ್ಳು ಕಥೆ ಗೊತ್ತಲ್ಲ. ಹಿಂಗಿರ್ವಾಗ ಈ ನಾಟ್ಕ ಸಾಕವ್ವ ಅಂದ ಮೈಲಾರಿ. ಅದ್ರೂವೆ ಮೇಡಮ್ಮು ಮಾತಾಡೋ ಐಡಿಯಾನೇ ಮಾಡ್ಕಳಿಲ್ಲ. ಅಲ್ಲ, ನಾನು ಈಪಾಟಿ ಮಾತಾಡಿ ಗಂಟ್ಲು ಹರ್ಕತಾಯಿದ್ದೀನಿ. ಸುಮ್ಕೆ ನಿಂತೇ ಇದ್ದೀರಲ್ಲ. ಇದು ಸಂದಾಕಿಲ್ಲ ಬುಡಿ ಅಂದ ಮೈಲಾರಿ.
ಆವಾಗ ಬಾಯಿ ಬುಟ್ರು ಮೇಡಮ್ಮು, ಲೇ ಮೈಲಾರಿ. ನಾನು ನಾಟ್ಕದಾಗೆ, ಸಿನ್ಮಾದಾಗೆ ಮಾತಾಡ್ತಾಯಿದ್ದೆ. ಅಲ್ಲಿ ಡೈಲಾಗು ಯೋಳುದ್ರೆ, ಮಾತಾಡುದ್ರೆ ಕಾಸು ಕೊಡೋರು. ಇಲ್ಲಿ ಯಾರ್ಲಾ ಕೊಟ್ಟಾರು. ಇಲ್ಲೇ ನಿಂತು ಮಾತಾಡ್ತಾಯಿದ್ರೆ ಕಾಸಾಯ್ತದೆ. ಬಿಲ್ಲು ಬತ್ತದೆ ನಿಂಗೆ ಅಂದ್ರು ಮೇಡಮ್ಮು. ಮೇಡಮ್ಮು ಹಂಗೇಳಿದ್ದೇ ತಡ ಮೈಲಾರಿ ಎಸ್ಕೇಪ್ ಆಬುಟ್ಟ.
- ಕೆ.ವಿ. ಪ್ರಭಾಕರ್
prabhukolar@yahoo.com