ಅಂಕಣಗಳು

ಗಾಂಧಿ ಜಯಂತಿ ರಜೆಯ ಆಸ್ವಾದನೆಗಷ್ಟೇ ಸೀಮಿತವಾಗದಿರಲಿ

ಗಾಂಧಿ ಜಯಂತಿ ರಜೆಯ ಆಸ್ವಾದನೆಗಷ್ಟೇ ಸೀಮಿತವಾಗದಿರಲಿ
Published On :

ವರ್ಷದಲ್ಲಿ ಅನೇಕ ಜಯಂತಿಗಳು ಬಂದು ಹೋಗುತ್ತವೆ. ಕೆಲವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತಮ್ಮ ವಿವೇಚನೆಗೆ ತಕ್ಕಂತೆ ಜಯಂತಿಗಳಿಗೆ ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ಸ್ ಆ್ಯಕ್ಟ್ ಪ್ರಕಾರ ಅಧಿಕೃತವಾಗಿ ರಜೆ ಘೋಷಿಸಿವೆ.
ಸಾಮಾನ್ಯವಾಗಿ ಎಲ್ಲರ ಮನಸ್ಸಲ್ಲಿರುವುದು ರಜೆ ಮಾತ್ರ. ಆದರೆ ಈ ಜಯಂತಿಗಳು ನಿಜವಾದ ಅರ್ಥದಲ್ಲಿ ಕೆಲವು ನಿರ್ದಿಷ್ಟ ವರ್ಗದ ಜನರಿಗೆ ಮಾತ್ರ ಸೀಮಿತವಾಗಿವೆ. ಆಚರಣೆ ಅಂದರೆ ಜಯಂತಿ ಅವರವರ ಭಾವಕ್ಕೆ ಬಿಟ್ಟಿದ್ದಾಗಿದೆ. ಆದ್ದರಿಂದಲೇ ಬಹುಪಾಲು ಸರ್ಕಾರಿ ನೌಕರರಿಗೆ ರಜೆ ಮಾತ್ರ ಅವರ ಲೆಕ್ಕಕ್ಕೆ ವರದಾನದ ಪಾಲು. ಈ ಜಯಂತಿಗಳಿಗೆ ರಜೆ ಏಕೆ ಕೊಡಲಾಗಿದೆ ಎಂಬುದನ್ನು ವಿಚಾರ ಮಾಡಬೇಕಲ್ಲವೇ? ಏನೇ ಆಗಲಿ ಜಯಂತಿಯನ್ನು ಒಂದು ಕಡೆ ಇಟ್ಟು ಇನ್ನು ರಜೆಯ ವಿಷಯದ ಕಡೆ ಗಮನಹರಿಸಿ ನೋಡುವ. ಭಾರತವಾಸಿಗಳೆಲ್ಲಾ ಗಮನಿಸಲೇಬೇಕಾದಂತಹ ದಿನಗಳೆಂದರೆ ಸ್ವಾತಂತ್ರ್ಯೋತ್ಸವದ ದಿನ ಮತ್ತು ಗಣರಾಜ್ಯ ದಿನ. ಇವೆರಡನ್ನು ನಾವೆಷ್ಟು ಹಚ್ಚಿಕೊಂಡಿದ್ದೇವೆಂದು ನಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಬೇಕು. ಸರ್ಕಾರವು ನಡೆಸದಿದ್ದರೆ ಕಚೇರಿ, ಶಾಲಾ ಕಾಲೇಜುಗಳಲ್ಲೂ ಬಾವುಟ ಹಾರುತ್ತಿರಲಿಲ್ಲವೇನೋ ಎಂಬ ಶಂಕೆ ಮೂಡುತ್ತದೆ. ನಿಜವಾಗಿಯೂ ಪ್ರಸಂಶಿಸಬೇಕಾದ್ದು ಶಾಲಾ ಶಿಕ್ಷಕರು, ಮಕ್ಕಳು ಮತ್ತು ಪೋಷಕರನ್ನು. ಏಕೆಂದರೆ ಅವರು ಆ ದಿನಕ್ಕಾಗಿ ಮಾಡುವ ತಯಾರಿ ಮತ್ತು ಆಚರಣೆಯಲ್ಲಿ ಭಾವನಾತ್ಮಕ ಭಾಗವಹಿಸುವಿಕೆ ಎದ್ದು ಕಾಣುತ್ತೆ. ಮೇಡಂ-ಮೇಷ್ಟ್ರುಗಳ ಪ್ರೀತಿ ಮತ್ತು ಆಣತಿಗೆ ಪುಟ್ಟ ಮಕ್ಕಳು ಖುಷಿಯಿಂದ ಬಂದೇ ಬರುತ್ತಾರೆ.  ಆದರೆ ಕಾಲೇಜುಗಳಲ್ಲಿ ಆ ಸಂಭ್ರಮ ಕಾಣುವುದಿಲ್ಲ. ಅಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳೇ ಕಾಣುವುದಿಲ್ಲ.
ಇನ್ನು ರಾಷ್ಟ್ರಪಿತ ಮಾಹಾತ್ಮ ಗಾಂಧಿಯವರ ಜಯಂತಿಯನ್ನು ಯಾರು ಎಲ್ಲಿ ಹೇಗೆ ಆಚರಿಸುತ್ತೀರೆಂದು ವಿಚಾರಮಾಡಬೇಕಿದೆ. ದೆಹಲಿಯ ರಾಜ್‌ಘಾಟ್‌ನ ಗಾಂಧಿ ಸಮಾಧಿಯಲ್ಲಿ ಹಾಗೂ ಅನೂಚಾನಾವಾಗಿ  ರಾಷ್ಟ್ರಮಟ್ಟದಲ್ಲಿ ಕೇಂದ್ರ ಸರ್ಕಾರ ಮತ್ತು ದೆಹಲಿ ರಾಜ್ಯ ಸರ್ಕಾರದವರ ಸಂಯುಕ್ತಾಶ್ರಯದಲ್ಲಿ  ಹಾಗೂ ಗಾಂಧಿ ಸ್ಮೃತಿಯಲ್ಲಿ ಆಯೋಜಿತವಾಗಿ ನಡೆದುಕೊಂಡು ಬಂದಿದೆ. ಈ ಎರಡೂ ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ದೆಹಲಿ ಮುಖ್ಯಮಂತ್ರಿ ಅತಿಗಣ್ಯ ವ್ಯಕ್ತಿಗಳು ಭಾಗವಹಿಸುವುದು ವಾಡಿಕೆ. ಆ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿಗಳು ದೇಶವಿದೇಶದ ರಾಯಭಾರಿಗಳು. ಉಪಸ್ತಿತರಿರುತ್ತಾರೆ. ಒಂದೈನೂರು ಶಾಲಾ ಮಕ್ಕಳು ಮತ್ತು ಆಯೋಜಕರು ಆಹ್ವಾನಿಸಿದವರಲ್ಲಿ ಕೆಲವರು ಪಾಲ್ಗೊಳ್ಳುತ್ತಾರೆ. ಒಟ್ಟು ಒಂದು ಸಾವಿರದೊಳಗಿನ ಜನಸಂದಣಿಯಿರುತ್ತೆ. ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಇಲ್ಲಿ ಏನು ನಡೆಯುತ್ತದೆ ಎಂಬುದನ್ನು ಗಮನಿಸಬೇಕು. ಸರ್ವಧರ್ಮ ಗುರುಗಳು ಆಯಾ ಧರ್ಮದ ಆಯ್ದ ಪ್ರಾರ್ಥನೆ, ಬುದ್ಧ ಕ್ರೈಸ್ತ,  ಜೊರಾಷ್ಟ್ರೀಯನಿಸಮ್, ಬಹಾಯ್, ಜೂಡಾಇಸಂ, ಖುರಾನ್, ಗುರುಗ್ರಂಥ ಸಾಹಿಬ್, ಜೈನ ಮತ್ತು ಭಗವದ್ಗೀತೆ ಪಠಣವಾಗುತ್ತೆ. ಖ್ಯಾತ ಗಾಯಕರಿಂದ ಭಕ್ತಿ ಸಂಗೀತ, ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆಗಳು ಮತ್ತು ಪ್ರಾರ್ಥನೆ ಮಾಡಿ ಕೊನೆಗೆ ರಘುಪತಿ ರಾಘವ ಭಜಿಸಿ ಗಣ್ಯರು ಶ್ರದ್ಧಾಂಜಲಿ ಅರ್ಪಿಸುವ ಕ್ರಮವಿದೆ. ಗಣ್ಯರಾದಿಯಾಗಿ ನೆಲದಮೇಲೆ ಹಾಸಿರುವ ಬಿಳಿ ಧರಿಯ ಮೇಲೆ ಕುಳಿತು ಶಾಂತಿ ಪ್ರಾರ್ಥನೆಯಲ್ಲಿ ಲೀನವಾಗುತ್ತಾರೆ.
ದಿಲ್ಲಿಯಲ್ಲಿ ಹಾಗೆ ಆಚರಿಸಿದರೆ ಹಳ್ಳಿಗಳ ಶಾಲೆಗಳಲ್ಲಿಯೂ ಗಾಂಧಿ ಜಯಂತಿ ಆಚರಣೆ ಕಂಡುಬರುತ್ತದೆ. ಅವುಗಳ ವೈಖರಿ ಕೇಳಿದರೆ ಆಶ್ಚರ್ಯವಾಗಬಹುದು. ಉದಾಹರಣೆಗೆ ಬಾಗಲಕೋಟೆ ಜಿಲ್ಲೆಯ, ಕೋವಳ್ಳಿಯ ಶಾಲೆಯಲ್ಲಿ ಗಾಂಧಿ ದೇವರ ಫೋಟೋ ಇಟ್ಟು ಪೂಜೆ ಮಾಡುತ್ತಾರೆ. ಊರಿನಲ್ಲಿ ಮೆರವಣಿಗೆ ಮಾಡಿ ಸಿಹಿ ಹಂಚುವ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ. ಊರಿನ ಗುರುಹಿರಿಯರು ಮತ್ತು ಜನರೆಲ್ಲಾ ಆದಷ್ಟು ಬಿಳಿವಸ್ತ್ರದ ಮೇಲೆ ಬಂದು ಭಾಗವಹಿಸುತ್ತಾರೆಂದು ತಿಳಿದು ಬಂದಿದೆ. ಗ್ರಾಮ ಪಂಚಾಯ್ತಿಯವರೂ ಪಾಲ್ಗೊಳ್ಳುವುದರಿಂದ ಹೆಚ್ಚಿನ ರೀತಿಯ ಆಸಕ್ತಿ ಮತ್ತು ಆಚರಣೆ ಕಂಡುಬರುತ್ತದೆ. ಹಳ್ಳಿಗಳಲ್ಲಿ ಗಾಂಧಿಜಿಗೆ ತೋರುವ ಗೌರವ ಮತ್ತು ಅವರು ಕೊಡುವ ಬೆಂಬಲದಿಂದ ಆಚರಣೆಗೆ ಮಹತ್ವ ಬಂದಿದೆ ಎನ್ನುತ್ತಾರೆ ಅಲ್ಲಿಯ ಶಾಲಾ ಶಿಕ್ಷಕರು. ಅವರೇ ಹೇಳುವ ಮಾತು ಏನೆಂದರೆ, ಎಲ್ಲಾ ಕಚೇರಿಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲೂ ಕಡ್ಡಾಯ ಮಾಡಿ ಹಾಗೆ ನಡೆಯುವಂತಾದರೆ ಇನ್ನು ಹೆಚ್ಚಿನ ರೀತಿಯ ಅರ್ಥಪೂರ್ಣ ಆಚರಣೆ ಕಾಣಬಹುದು ಎನ್ನುತ್ತಾರೆ. ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಗಾಂಧಿ ಬಗ್ಗೆ ಭಾಷಣ ಮಾಡುವುದು ಮತ್ತು ಶಿಕ್ಷಕರಿಂದ ಗಾಂಧಿ ವಿಚಾರಗಳನ್ನು ಕೇಳುವುದು ಶಾಲೆಗೆ ಸೀಮಿತವಾಗಿಬಿಟ್ಟಿದೆ. ಸಂತೋಷದ ಸಂಗತಿಯೆಂದರೆ ಹಳ್ಳಿಗಳಲ್ಲಿ ಇಷ್ಟಾದರೂ ನಡೆಯುತ್ತಿರುವುದು.
ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಪ್ರಮುಖರಷ್ಟೇ ಅಲ್ಲ ಅವರು ಇಡೀ ಪ್ರಪಂಚಕ್ಕೆ ಆದರ್ಶಪ್ರಾಯವಾಗಿರುವ ಯುಗ ಪುರುಷ ಎಂದು ತಜ್ಞರಾದಿಯಾಗಿ ಹೇಳುವ ಸತ್ಯ. ಐನ್‌ಸ್ಟೈನ್ ಅವರು ಹೇಳಿದ ಹಾಗೆ ರಕ್ತ ಮಾಂಸ ತುಂಬಿದ ಒಬ್ಬ ಮನುಷ್ಯ ಈ ಪೃಥ್ವಿಯ ಮೇಲೆ ನಡೆದ್ದಾನೆಂದರೆ ಯಾರೂ ನಂಬಲಿಕ್ಕಿಲ್ಲ ಎನ್ನುವ ಅಭಿಪ್ರಾಯ ದಿನೇ ದಿನೇ ನಮ್ಮ ನಡವಳಿಕೆಗಳಿಂದ ಸ್ಥಿರವಾಗುತ್ತದೆ. ಸದ್ಯದಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಅನಾಚಾರ ಅತ್ಯಾಚಾರ ಭ್ರಷ್ಟಾಚಾರಗಳನ್ನು ಗಮನಿಸಿದಾಗ ಸಹಜವಾಗಿ ಅರಿವಾಗುವುದೇನೆಂದರೆ ಇವೆಲ್ಲದರ ಪರಿಹಾರ ಗಾಂಧಿ ಮಾರ್ಗವೆಂಬುದು ನಿಖರವಾಗುತ್ತದೆ.
ಆದ್ದರಿಂದ ಗಾಂಧಿ ಜಯಂತಿಯನ್ನು ದೇಶದ ಪ್ರತಿಯೊಬ್ಬ ಪ್ರಜೆಯು ಮರೆಯದೇ ಆಚರಿಸಬೇಕಾದದ್ದು ಕರ್ತವ್ಯವೇ ಸರಿ. ಪ್ರತಿಷ್ಠಿತರು ಅಧಿಕಾರಸ್ಥರು ಮಾತ್ರ ಸಾಂಕೇತಿಕವಾಗಿ ಅಥವಾ ಔಪಚಾರಿಕವಾಗಿ ಭಾಗವಹಿಸುವಂಥದ್ದಾಗಬಾರದು. ಅಕ್ಟೋಬರ್ 2ರಂದು ಅಂತಾರಾಷ್ಟ್ರೀಯ ಅಹಿಂಸಾ ದಿನಾಚರಣೆಯಾಗಿ ವಿಶ್ವಸಂಸ್ಥೆ ಘೋಷಿಸಿರುವುದನ್ನು ಗಮನಿಸಬಹುದು. ಇಂತಹ ಅಹಿಂಸೆ ಮತ್ತು ಸತ್ಯ ಧರ್ಮದ ಯುಗಪುರುಷ ಪ್ರಪಂಚ ಅಳಿಯುವವರೆವಿಗೂ ಬೆಳಗುವ ಮತ್ತು ಪ್ರಸ್ತುತವಾಗಿಯೇ ಉಳಿಯುವಂಥವರು. ನಮ್ಮ ಮುಂದೆ ನಡೆಯುತ್ತಿರುವ ಹಿಂಸೆ ಹತ್ಯಾಚಾರ, ಅನಾಚಾರಗಳನ್ನು ಕಾನೂನಿನ ಮೂಲಕ ಹತ್ತಿಕ್ಕಲು ಶ್ರಮಿಸುತ್ತಿದ್ದೇವೆಯೇ ಹೊರತು ಸಮಾಜದಲ್ಲಿ ಸತ್ಯ ಅಹಿಂಸಾದ್ಯೋತಕ ಗಾಂಧಿಜಿಯವರ ತತ್ವಗಳ ಮೂಲಕ ಸದಾ ಸತ್ಪ್ರಜೆಗಳನ್ನು ಬೆಳೆಸಲಾಗುತ್ತಿಲ್ಲ. ಗಾಂಧಿ ಮಾರ್ಗ ಹಿಡಿಯುವ ಕಾಯ ಕಲ್ಪಗಳಿಗೆ ಆದ್ಯತೆ ನೀಡಬೇಕಿದೆ. ಬಹುಪಾಲು ನಮ್ಮ ಮುಂದಿರುವ ಕಷ್ಟ ಕಾರ್ಪಣ್ಯಗಳಿಗೆ ಅವರ ಸಿದ್ಧಾಂತಗಳೇ ಸಿದ್ಧ ಮದ್ದು ಎನ್ನವುದರಲ್ಲಿ ಸಂದೇಹವಿಲ್ಲ. ಆದರೆ ವೇಗದ ಸಮಾಜದಲ್ಲಿ ಗಾಂಧಿಜೀಯವರು ಎಲ್ಲೋ ಉಳಿದು ಹೋಗಿರುವುದು ಖೇದದ ವಿಷಯ.
ಇಂದು ಇಂತಹ ಮಹಾನ್‌ವ್ಯಕ್ತಿ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜಯಂತಿಯನ್ನು ಆಚರಿಸುವ ಉತ್ಸಾಹವನ್ನೇ ಸಮಾಜ ಕಳೆದುಕೊಂಡಿರುವುದು ಸೋಜಿಗದ ಸಂಗತಿಯಾಗಿದೆ. ಇಂತಹ ಮನೋಭಾವ ಇರುವ, ಒಬ್ಬ ಹಿರಿಯ ಆಡಳಿತ ಸೇವಾಧಿಕಾರಿ ತನ್ನ ಸಂಸ್ಥೆಯು ಹಲವು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಗಾಂಧಿಜಯಂತಿ ಕಾರ್ಯಕ್ರಮವನ್ನು ಈ ವರ್ಷವೂ ಮಾಡಬೇಕೆಂದು ಸಿಬ್ಬಂದಿಯವರು ಕಡತ ಮಂಡಿಸಿದರೆ ಪುಣ್ಯಾತ್ಮ ಏನು ಮಾಡಿದರೆಂದರೆ- ಗಾಂಧಿ ಜಯಂತಿ ಆಚರಿಸಬೇಕೆಂದು ಕಾನೂನೆಲ್ಲಿದೆ ತೋರಿಸಿ ಎಂದು ನಕಾರಾತ್ಮಕವಾಗಿ ಕಡತ ಕೆಳಕ್ಕೆ ತಳ್ಳಿ ಹಾಕಿದ್ದನ್ನು ಕೇಳಿ ನನಗಂತೂ ಆಶ್ಚರ್ಯ ಮೂಡಿತು.
ಗಾಂಧಿ ಜಯಂತಿ ಆಚರಣೆಯ ಮಾದರಿ ಹೇಗಿರಬೇಕೆಂದು ರೂಪಿಸುವುದು ಅವಶ್ಯಕವಾಗಿದೆ. ಗಾಂಧಿ ಜಯಂತಿ ಕಾರ್ಯಕ್ರಮವನ್ನು ದೆಹಲಿ ರಾಜ್‌ಘಾಟ್‌ನಲ್ಲಿ ಹೇಗೆ ಆಚರಿಸುವರೋ ಅದರ ಪ್ರತಿರೂಪವೆಂಬಂತೆ ಆಚರಿಸಬಹುದು. ಸರಳವಾಗಿ ಸರ್ವಧರ್ಮ ಪ್ರಾರ್ಥನೆ, ರಾಮ್‌ಧುನ್ ಮತ್ತು ಗಾಂಧಿ ಪ್ರಿಯ ಭಜನೆಗಳನ್ನು ಸಾಮೂಹಿಕವಾಗಿ ಕುಳಿತು ಹಾಡಿದರೆ ಗಾಂಧಿಜಿಯವರಿಗೆ ಶ್ರದ್ಧಾಂಜಲಿ ಅರ್ಪಣೆ ಮಾಡಬಹುದು. ಕರ್ನಾಟಕ ಲೋಕಸೇವಾ ಆಯೋಗದ ಈ ಮಾದರಿಯನ್ನು ಮೆಚ್ಚಿಕೊಂಡು ಪ್ರತಿವರ್ಷ ಭಾಗವಹಿಸುತ್ತಿರುವ ಸ್ವಾತಂತ್ರ್ಯ ಹೋರಾಟಗಾರರಾದ ಡಾ. ಹೋ. ಶ್ರೀನಿವಾಸಯ್ಯನವರು 'ಇದು ನಮಗೆಲ್ಲರಿಗೂ ಮಾದರಿಯಾಗಿದೆ' ಎಂದು ಹೇಳುವುದಲ್ಲದೆ ಈ ಮಾದರಿ ಗಾಂಧಿ ಜಯಂತಿ ರಾಜ್ಯಾದ್ಯಂತ ಎಲ್ಲ ಕಚೇರಿಗಳಲ್ಲಿ, ಸಂಘಸಂಸ್ಥೆಗಳಲ್ಲಿ ಆಚರಿಸುವಂತೆ ಮಾಡಬೇಕೆಂದು ಉತ್ಸುಕರಾಗಿದ್ದಾರೆಂದರೆ ಆಶಾಕಿರಣಮೂಡುತ್ತಿದೆ. ಈ ಕಾರ್ಯಕ್ರಮದಲ್ಲಿಯಾರ ಭಾಷಣವೂ ಇಲ್ಲ. ನಿರೂಪಣೆಯೂ ಇಲ್ಲ. ತಂತಾನೆ ಪ್ರಾರಂಭವಾಗಿ ರಾಮ್‌ಧುನ್‌ಲ್ಲಿ ಅಂತ್ಯವಾಗುತ್ತೆ. ಹೆಚ್ಚೆಂದರೆ ಗಾಂಧಿ ವಿಚಾರ, ಉಪನ್ಯಾಸಗಳನ್ನು ಏರ್ಪಡಿಸಬಹುದು. ಇಲ್ಲವೇ ಗಾಂಧಿ ನೀತಿ ಕಥೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣಗೊಳಿಸಬಹುದು. ವಿದೇಶದಿಂದ ಅಧ್ಯಕ್ಷರು ಪ್ರಧಾನಮಂತ್ರಿಯಾದಿಯಾಗಿ ಇತರೆ ಗಣ್ಯರು ಭಾರತಕ್ಕೆ ಭೇಟಿ ನೀಡಿದಾಗ ರಾಜ್‌ಘಾಟ್‌ನ ಗಾಂಧಿ ಸಮಾಧಿಯಲ್ಲಿ ಪುಷ್ಪಗುಚ್ಚವನ್ನಿರಿಸಿ ಶ್ರದ್ಧಾಂಜಲಿ ಅರ್ಪಿಸುವುದು ವಾಡಿಕೆಯಾಗಿದೆ. ನಮ್ಮ ದೇಶದ ಜನರೂ ಇದು ತಮ್ಮ ಕರ್ತವ್ಯವೆಂದು ಅರಿಯ ಬೇಕೆಂದೆನಿಸುವುದು ಸಹಜ.
ಅವರವರ ಸಮುದಾಯದ ವ್ಯಕ್ತಿಗಳಿಗೆ ಸಂಬಂಧಿಸಿದವರು ಜಯಂತಿಗಳನ್ನು ಆಚರಿಸುತ್ತಾರೆ. ಆದರೆ ಎಲ್ಲ ಸಮುದಾಯಕ್ಕೆ ಸೇರಿದ ಗಾಂಧಿಜಿಯವರನ್ನು ಕೇಳುವವರಿಲ್ಲ. ಏನೇ ಆಗಲಿ ನಮ್ಮ ಮನೆಯ ಆಚರಣೆಯಂತೆ ಗಾಂಧಿ ಜಯಂತಿ ಆಚರಣೆ ನಮ್ಮ ಸಮಾಜದಲ್ಲಿ ಕಡ್ಡಾಯವಾಗಿ ನಡೆದೀತೆಂದರೆ ಜನರ ಮನಸ್ಸಿನಲ್ಲಿ ಗಾಂಧಿಯು ಶಾಶ್ವತವಾಗಿ ಉಳಿಯುವುದರ ಜೊತೆಗೆ ಮನುಕುಲದ ಬೆಳವಣಿಗೆಯೂ ಸನ್ಮಾರ್ಗದಲ್ಲಿ ಹೋಗುವುದು ಖಚಿತ. ಮುಂದಿನ ಪೀಳಿಗೆಗಳ ಸುಸ್ಥಿರ ಬದುಕಿಗೆ ಗಾಂಧಿ ಮಾರ್ಗವೇ ಅನಿವಾರ್ಯ. ಜನರಲ್ಲಿ ಆಸಕ್ತಿ ಮೂಡಿಸಲು ಹಾಗೂ ಗಾಂಧೀಜಿಯವರು ಕಂಡ ಆದರ್ಶದ ಹಾದಿಯಲ್ಲಿ ಕೊಂಡೊಯ್ಯಲು ಇಂತಹ ವ್ಯವಸ್ಥಿತ ಸಾಮೂಹಿಕ ಕಾರ್ಯಕ್ರಮಗಳು ಅಗತ್ಯ.

- ಡಾ. ಬಿ.ಎಸ್. ಕೃಷ್ಣಪ್ರಸಾದ್
ಸದಸ್ಯರು, ಕರ್ನಾಟಕ ಲೋಕಸೇವಾ ಆಯೋಗ
krishnaprasadz@yahoo.co.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.