ಅಂಕಣಗಳು

ತನಿಖಾ ಸಂಸ್ಥೆ ದುರುಪಯೋಗಕ್ಕೆ ಇನ್ನೆಂಥ ಸಾಕ್ಷ್ಯ ಬೇಕು?

Published On :

ತನ್ನ ರಾಜಕೀಯ ಎದುರಾಳಿಗಳನ್ನು ಮುಗಿಸುವುದಕ್ಕೆ ಕೇಂದ್ರ ಸರ್ಕಾರವು ತನ್ನ ಅಧೀನದ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂಬ ದೂರು ಈಗ ವ್ಯಾಪಕವಾಗಿದೆ. ಸರ್ಕಾರಕ್ಕೆ ಅಗತ್ಯ ಬೆಂಬಲ ಬೇಕಾದಾಗಲೆಲ್ಲ ಸಿಬಿಐ ಗುಮ್ಮನನ್ನು ಉಪಯೋಗಿಸಿಕೊಂಡು ಸಣ್ಣಪಕ್ಷಗಳನ್ನು ಕುಣಿಸುತ್ತಿರುವ ಕಾಂಗ್ರೆಸ್‌ನ ಆಟ ರಹಸ್ಯವಾಗಿಯೇನೂ ಉಳಿದಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ರಾಜಕೀಯಕ್ಕೆ ಉಪಯೋಗಿಸಿಕೊಂಡಿರುವ ಕ್ರಮವನ್ನು ವಿರೋಧಿಸುತ್ತ ಈ ಬಗ್ಗೆ ಅಮೂಲಾಗ್ರ ತನಿಖೆಗೆ ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ. ಹಲವು ಪ್ರಕರಣಗಳನ್ನು ತಾರ್ಕಿಕವಾಗಿ ವಿಶ್ಲೇಷಿಸಿರುವ ಅವರ ಪತ್ರದ ಸಾರ ಇಲ್ಲಿದೆ.

ಪ್ರಿಯ ಪ್ರಧಾನಿಯವರೇ,
ಸಾರ್ವಜನಿಕವಾಗಿ ಪ್ರಮುಖವಾಗಿರುವ ಈ ಸಂಗತಿಯ ಬಗ್ಗೆ ನಿಮಗೆ ಪತ್ರ ಬರೆಯುತ್ತಿದ್ದೇನೆ. ತನ್ನ ಜನಪ್ರಿಯತೆ ಕ್ಷೀಣಿಸಿಕೊಂಡಿರುವ ಕಾಂಗ್ರೆಸ್ ಅದಕ್ಕೆ ಪ್ರತಿಯಾಗಿ ಅನುಸರಿಸುತ್ತಿರುವ ಕಾರ್ಯತಂತ್ರ ನಿಚ್ಚಳವಾಗಿದೆ. ಕಾಂಗ್ರೆಸ್‌ಗೆ ಬಿಜೆಪಿಯನ್ನು, ನರೇಂದ್ರ ಮೋದಿ ಅವರನ್ನು ಎದುರಿಸುವುದಕ್ಕೆ ಆಗುತ್ತಿಲ್ಲ. ಸೋಲೆಂಬುದು ಕಾಂಗ್ರೆಸ್‌ನ ಕಣ್ಮುಂದೆ ಕುಣಿಯುತ್ತಿದೆ. ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದರ ಮೂಲಕ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶಾ ಹಾಗೂ ಇತರ ಪ್ರಮುಖ ಬಿಜೆಪಿ ನಾಯಕರನ್ನು ಹತ್ತಿಕ್ಕುವ ಕಾರ್ಯವನ್ನು ಅದು ಇದುವರೆಗೂ ಮಾಡಿಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಕೆಲ ಪ್ರಕರಣಗಳನ್ನು ವಿವರವಾಗಿ ಚರ್ಚಿಸಿದ್ದೇನೆ.
ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣ: ಸೊಹ್ರಾಬುದ್ದೀನ್ ಶೇಖ್ ಕೊಲೆಯಾದ ಎನ್‌ಕೌಂಟರ್ ಪ್ರಕರಣವು ಕೇಂದ್ರ ಸರ್ಕಾರದ ಇಂಟೆಲಿಜೆನ್ಸ್ ಬ್ಯೂರೋದಿಂದಲೇ ನಿರ್ದೇಶಿತವಾದದ್ದು. ಗುರಿಯನ್ನು ಗೊತ್ತು ಮಾಡಿ ಆ ಬಗ್ಗೆ ಮಾಹಿತಿಯನ್ನು ಕಲೆಹಾಕಿಕೊಂಡಿರುವ ಹಾಗೂ ಆ ಗುರಿಯನ್ನು ಬಂಧಿಸುವ ಅವಕಾಶ ಸಿಗುತ್ತಲೇ ಆ ಬಗ್ಗೆ ರಾಜ್ಯದ ಪೊಲೀಸರನ್ನು ಎಚ್ಚರಿಸುವ ರೂಢಿಯು ಕೇಂದ್ರದ ಇಂಟೆಲಿಜೆನ್ಸ್ ವ್ಯವಸ್ಥೆಯ ಕಾರ್ಯದಲ್ಲಿ ರೂಢಿಗತವಾಗಿ ಬಂದಿದೆ. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಜಾಲ ಹೊಂದಿದ್ದ ಸೋಹ್ರಾಬುದ್ದೀನ್ ಪ್ರಮುಖ ಮಾಫಿಯಾ ಕುಳ. ಮಧ್ಯಪ್ರದೇಶ ಸರ್ಕಾರವು ಆತನ ತಲೆಗೆ ಬಹುಮಾನ ಘೋಷಿಸಿತ್ತು ಎಂಬುದೂ ಗಮನಾರ್ಹ. ಆತ ಅಕ್ರಮ ಶಸ್ತ್ರಾಸ್ತ್ರ ಮಾರಾಟಗಾರ, ಟಾಡಾ ಕಾಯ್ದೆ ಅಡಿ ಶಿಕ್ಷೆಗೆ ಒಳಗಾದವನು. ಪೊಲೀಸರಿಂದ ತಪ್ಪಸಿಕೊಂಡಿದ್ದ ವ್ಯಕ್ತಿ.
2005ರಲ್ಲಿ ಆತನ ಎನ್‌ಕೌಂಟರ್ ನಡೆದ ಮೇಲೆ ಆತನ ಸಹೋದರ ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಈ ಅರ್ಜಿದಾರರನ್ನು ಕಾಂಗ್ರೆಸ್ ಪ್ರಾಯೋಜಿಸಿತಷ್ಟೆ. ಆಗಿನ ಅಡಿಷನಲ್ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಮ್, ಪೂರ್ವ ನಿರ್ಧರಿತವೆಂಬಂತೆ ತಾವೇ ಮುತುವರ್ಜಿ ವಹಿಸಿ ಪ್ರಕರಣದಲ್ಲಿ ಅಮಿಕಸ್ ಕ್ಯೂರಿ ಆದರು. ಪ್ರಕರಣದ ತನಿಖೆ ಸಿಬಿಐಗೆ ವಹಿಸಲಾಗಿ ಹಲವು ಐಪಿಎಸ್ ಅಧಿಕಾರಿಗಳನ್ನು ಬಂಧಿಸಿತು.
ಗುಜರಾತ್ ಪೊಲೀಸರ ತನಿಖೆಯಲ್ಲಿ ಲೋಪವಾಗಿದ್ದ ಯಾವ ನಾಲ್ಕು ಅಂಶಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕಿತ್ತೋ ಆ ಕೆಲಸವನ್ನು ಮಾಡಲೇ ಇಲ್ಲ. ಈ ಪ್ರಕರಣದಲ್ಲಿ ಆಂಧ್ರ ಪ್ರದೇಶದ ಆಯಾಮವನ್ನು ಅದು ಮುಟ್ಟಲೇ ಇಲ್ಲ. ಆಂಧ್ರ ಪೊಲೀಸರು ಈ ಎನ್‌ಕೌಂಟರ್‌ಗೆ ಸಂಬಂಧಿಸಿದ ತನಿಖೆಗೆ ಅಸಹಕಾರ ತೋರಿರುವ ಅಂಶ ಗಮನಾರ್ಹ. ಸಿಬಿಐನ ಒಟ್ಟಾರೆ ಉದ್ದೇಶವೇ ಗುಜರಾತ್ ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸುವುದಾಗಿತ್ತು. ಗುಜರಾತ್‌ನ ಆಗಿನ ಗೃಹಸಚಿವರಾಗಿದ್ದ ಅಮಿತ್ ಶಾ ಅವರನ್ನು ನರೇಂದ್ರ ಮೋದಿಯವರನ್ನು ತಪ್ಪಿತಸ್ಥರನ್ನಾಗಿಸುವ ಯೋಜನೆ ಇರಿಸಿಕೊಂಡೇ ಸಿಬಿಐ ತನ್ನ ಗುರಿಯಾಗಿಸಿಕೊಂಡಿತು. ಅಮಿತ್ ಶಾ ಅವರ ವಿರುದ್ಧ ಯಾವುದೇ ಪ್ರಕರಣ ನಿರ್ಮಿಸುವ ಅಂಶಗಳೇ ಇಲ್ಲ ಎಂದು ಸಿಬಿಐನ ಕಾನೂನು ವಿಭಾಗವು ಹೇಳಿದಾಗ ಅದನ್ನು ಅದೇ ಸಂಸ್ಥೆಯ ಸುಪರ್‌ವೈಸರಿ ಅಧಿಕಾರಿಯ ಟಿಪ್ಪಣಿ ಬಳಸಿಕೊಂಡು ಹತ್ತಿಕ್ಕಲಾಯಿತು. ಅಮಿತ್ ಶಾ ಅವರ ಬಂಧನವು ಸಿಬಿಐಗೆ ಕೆಲ ಸಾಕ್ಷ್ಯಗಳನ್ನು ಕಲೆ ಹಾಕುವುದಕ್ಕೆ ಸಾಧ್ಯ ಮಾಡಿಕೊಡುತ್ತದೆ ಎಂಬ ಟಿಪ್ಪಣಿಯನ್ನು ಸಿಬಿಐ ನಿರ್ದೇಶಕ ಅಶ್ವಾನಿ ಕುಮಾರ್ ಸಮ್ಮತಿಸಿದರು.
ಅಮಿತ್ ಶಾ ಅವರನ್ನು ಬಂಧಿಸುವುದಕ್ಕೆ ಅವರು ಆಧಾರವಾಗಿರಿಸಿಕೊಂಡಿದ್ದು ರಮಣ್‌ಭಾಯ್ ಪಟೇಲ್ ಹಾಗೂ ದಶರಥ್‌ಭಾಯ್ ಪಟೇಲ್ ಎಂಬುವವರ ಸೂಕ್ತವಲ್ಲದ ಸಾಕ್ಷ್ಯವನ್ನು. ಇವರಿಬ್ಬರೂ ಗುಜರಾತ್‌ನ ಪ್ರಮುಖ ಭೂಕಬಳಿಕೆದಾರರು. ಆರೋಪಪಟ್ಟಿಯಲ್ಲಿ ಹೇಳಿರುವ ಪ್ರಕಾರ ಅಮಿತ್ ಶಾ ಅವರು ಸೊಹ್ರಾಬುದ್ದೀನ್ ಎನ್‌ಕೌಂಟರ್ ಆದ ಆರು ತಿಂಗಳ ನಂತರ ಇವರಿಬ್ಬರ ಬಳಿ, ಆತನಿಗೆ ಬೇರೆ ಆಯ್ಕೆಯೇ ಇರಲಿಲ್ಲ ಎಂದಿದ್ದರಂತೆ. ಇದನ್ನೇ ತಪ್ಪೊಪ್ಪಿಗೆ ಎಂದು ಪರಿಗಣಿಸಿ ಬಂಧನಕಾರ್ಯ ನಡೆಯಿತು. ಅಮಿತ್ ಶಾ ವಿರುದ್ಧ ಹೇಳಿಕೆ ನೀಡಿದ ಕ್ರಿಮಿನಲ್ ಹಿನ್ನೆಲೆಯ ಈ ಇಬ್ಬರೂ ವ್ಯಕ್ತಿಗಳಿಗೆ ಗುಜರಾತ್ ಕಾಂಗ್ರೆಸ್‌ನ ಆಗಿನ ಅಧ್ಯಕ್ಷ ಶಂಕರಸಿಂಘ್ ವಘೇಲ ಇದ್ದ ಸಮಾರಂಭದಲ್ಲಿ ಸನ್ಮಾನ ನಡೆಯಿತು. ಅಜಯ್ ಪಟೇಲ್ ಎಂಬ ವ್ಯಕ್ತಿಯ ಮೂಲಕ ಮೂರು ಕಂತುಗಳಲ್ಲಿ ಅಮಿತ್ ಶಾ ಅವರಿಗೆ 75 ಲಕ್ಷ ರುಪಾಯಿಗಳನ್ನು ಒಪ್ಪಿಸಿರುವುದಾಗಿ ಇವರು ಆರೋಪಿಸಿದ್ದರು. ಹಣವನ್ನು ಒಪ್ಪಿಸಿದ ನಿಖರ ದಿನಾಂಕಗಳನ್ನೂ ಅವರು ಹೇಳಿದ್ದರು. ಅಲ್ಲದೇ ಅಜಯ್ ಪಟೇಲ್ ಬಳಿ ಖುದ್ದಾಗಿ ಹೋಗಿ ಈ ದಿನಾಂಕಗಳಲ್ಲಿ ಹಣ ಒಪ್ಪಿಸಿರುವುದಾಗಿಯೂ ಅವರೇ ತಪ್ಪೊಪ್ಪಿಗೆಯಲ್ಲಿ ಹೇಳಿಕೊಂಡಿದ್ದಾರೆ. ಆದರೆ ಇದು ಸಂಪೂರ್ಣ ಸುಳ್ಳು ಎಂಬುದು ಅಜಯ್ ಪಟೇಲರ ಪಾಸ್‌ಪೋರ್ಟ್ ಪರಿಶೀಲಿಸಿದಾಗ ತಿಳಿಯುತ್ತದೆ. ಏಕೆಂದರೆ ಇವರು ಹೇಳಿರುವ ಯಾವುದೇ ದಿನಾಂಕಗಳಲ್ಲಿ ಅಜಯ್ ಪಟೇಲ್ ದೇಶದಲ್ಲೇ ಇರಲಿಲ್ಲ. ಇವನ್ನೆಲ್ಲ ಗಮನಿಸಿ ಗುಜರಾತ್ ಹೈಕೋರ್ಟ್ ಅಮಿತ್ ಶಾ ಅವರಿಗೆ ಜಾಮೀನು ನೀಡಿತು. ಆದರೆ ಸಿಬಿಐ ಇದಕ್ಕೆ ಪ್ರತಿಯಾಗಿ ಮೇಲ್ಮನವಿ ಸಲ್ಲಿಸಿದಾಗ ಸುಪ್ರೀಂಕೋರ್ಟ್ ಅಮಿತ್ ಶಾ ಅವರಿಗೆ ಗುಜರಾತ್‌ನ ಹೊರಗಡೆ ಇರಬೇಕು ಹಾಗೂ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ನಿರತರಾಗಿರಬಾರದು ಎಂದು ಸೂಚಿಸಿತ್ತು. ಅದನ್ನು ಎರಡು ವರ್ಷ ಅಮಿತ್ ಶಾ ಪಾಲಿಸಿದರು. ನಂತರ ಶಾ ಅವರ ವಿರುದ್ಧ ಪ್ರಕರಣ ನಿರ್ಮಿಸುವ ಸಾಕ್ಷ್ಯಗಳಿಲ್ಲ ಎಂಬ ಹೈಕೋರ್ಟ್ ಅಭಿಮತವನ್ನೇ ಸುಪ್ರೀಂಕೋರ್ಟ್ ಎತ್ತಿಹಿಡಿಯಿತು.
ತುಳಸಿ ಪ್ರಜಾಪತಿ ಎನ್‌ಕೌಂಟರ್: ಇದು ಸೊಹ್ರಾಬುದ್ದೀನ್ ಪ್ರಕರಣದ ಮುಂದುವರಿಕೆ ಎಂಬಂತೆ ಸಿಬಿಐ ದಾಖಲಿಸಿದ ಪ್ರಕರಣ. ತುಳಸಿ ಪ್ರಜಾಪತಿ, ಸೊಹ್ರಾಬುದ್ದೀನ್ ಬಂಧನ ಮತ್ತು ಕಣ್ಮರೆಗಳಿಗೆ ಸಾಕ್ಷಿಯಾಗಿದ್ದರು. ಹೀಗಾಗಿಯೇ ಗುಜರಾತ್ ಪೊಲೀಸರು ತುಳಸಿ ಪ್ರಜಾಪತಿಯನ್ನು ಮುಗಿಸಿದರು ಎಂಬುದು ಸಿಬಿಐ ವಾದವಾಗಿತ್ತು. ಇದಕ್ಕೆ ಅವರು ನೀಡಿದ್ದ ಒಂದೇ ಆಧಾರ ಎಂದರೆ ತುಳಸಿ ಪ್ರಜಾಪತಿ ಪ್ರಕರಣದಲ್ಲಿ ಆರೋಪಿಯಾದ ಆರ್. ಕೆ. ಪಂಡಿಯನ್ ಎಂಬ ಐಪಿಎಸ್ ಅಧಿಕಾರಿ ಅವರೊಂದಿಗೆ ಅಮಿತ್ ಶಾ ನಿರಂತರ ಸಂಪರ್ಕದಲ್ಲಿದ್ದರು ಎಂಬುದು. ವಾಸ್ತವವೆಂದರೆ ಈ ಪ್ರಕರಣಕ್ಕೆ ಬಹಳ ಮೊದಲು ಹಾಗೂ ನಂತರವೂ ಪಂಡಿಯನ್ ಅವರು ಅಮಿತ್ ಶಾ ಅವರೊಂದಿಗೆ ನಿರಂತರ ದೂರವಾಣಿ ಮಾತುಕತೆ ನಡೆಸಿದ್ದಾರೆ. ಏಕೆಂದರೆ ಇಂಟೆಲಿಜೆನ್ಸ್‌ನ ಹಾಗೂ ರಾಜ್ಯ ಪೊಲೀಸ್ ಪಡೆಯ ಉಸ್ತುವಾರಿಯಲ್ಲಿದ್ದ ಪಂಡಿಯನ್ ಅವರು ಗೃಹಮಂತ್ರಿಯವರಿಗೆ ನಾನಾ ವಿಷಯಗಳ ಕುರಿತು ಮಾಹಿತಿ ಒದಗಿಸುವುದಕ್ಕೆ ಸಂಪರ್ಕದಲ್ಲಿರುವುದು ಸಹಜವಾದದ್ದು. ಹೀಗಿದ್ದೂ ತುಳಸಿ ಪ್ರಜಾಪತಿ ಪ್ರಕರಣದಲ್ಲಿ ಅಮಿತ್ ಶಾ ಅವರ ವಿರುದ್ಧ ಪ್ರತ್ಯೇಕ ಆರೋಪಪಟ್ಟಿ ಸಲ್ಲಿಸಿ ಬಂಧನ ಮಾಡಲಾಯಿತು. 2012ರಲ್ಲಿ ಗುಜರಾತ್ ಚುನಾವಣೆಗೆ ಸಮೀಪಿಸುತ್ತಿರುವಾಗ ಕೈಗೊಂಡ ಈ ರಾಜಕೀಯ ಪ್ರೇರಿತ ಕ್ರಮದ ವಿರುದ್ಧ ಅಮಿತ್ ಶಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಸಿಬಿಐ ಸಂಸ್ಥೆಯೇ ಇದು ಸೊಹ್ರಾಬುದ್ದೀನ್ ಪ್ರಕರಣದ ವಿಸ್ತರಣೆ ಎಂದು ಹೇಳಿರುವುದರಿಂದ ಇದರಲ್ಲಿ ಪ್ರತ್ಯೇಕ ಆರೋಪಪಟ್ಟಿ ಸಲ್ಲಿಸುವ ಮಾತೇ ಬರುವುದಿಲ್ಲ ಎಂದು ಏಪ್ರಿಲ್ 2013ರಲ್ಲಿ ಆದೇಶಿಸಿದ ಸುಪ್ರೀಂಕೋರ್ಟ್, ಅಮಿತ್ ಶಾ ಅವರನ್ನು ಸಿಬಿಐ ಇನ್ನೊಮ್ಮೆ ಬಂಧಿಸುವುದಕ್ಕೆ ಅವಕಾಶ ಕೊಡಲಿಲ್ಲ.
ಇದೇ ಪ್ರಕರಣದಲ್ಲಿ ರಾಜಸ್ತಾನ ಬಿಜೆಪಿಯ ಮುಖಂಡ ಗುಲಾಬ್ ಚಾಂದ್ ಕಟಾರಿಯಾ ಅವರನ್ನು ಸಿಕ್ಕಿಸುವ ಪ್ರಯತ್ನಗಳಾದವು. ಸೊಹ್ರಾಬುದ್ದೀನ್ ಹಾಗೂ ತುಳಸಿ ಪ್ರಜಾಪತಿ ಎಂಬ ವ್ಯಕ್ತಿಗಳ ಅಸ್ತಿತ್ವದ ಬಗ್ಗೆಯೇ ಗೊತ್ತಿರದ ಕಟಾರಿಯಾ ಅವರ ವಿರುದ್ಧ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ, ರಾಜಸ್ಥಾನದ ಮಾರ್ಬಲ್ ವ್ಯಾಪಾರಿಗಳಿಂದ ಹಫ್ತಾ ಸ್ವೀಕರಿಸಿದ ಕಟಾರಿಯಾ ಅವರು ಈ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ತುಳಸಿ ಪ್ರಜಾಪತಿಯನ್ನು ಮುಗಿಸಿದ್ದಾರೆ ಎಂಬುದು ಸಿಬಿಐ ಆರೋಪವಾಗಿತ್ತು. 26/12/2005 ಹಾಗೂ 28/12/2005ರ ನಡುವೆ ಅವರು ಗುಜರಾತ್ ಪೊಲೀಸ್ ಅಧಿಕಾರಿ ವಂಜಾರಾ ಅವರನ್ನು ಭೇಟಿ ಮಾಡಿರುವುದು ಪ್ರಕರಣದಲ್ಲಿ ಶಾಮೀಲಾಗಿರುವುದಕ್ಕೆ ಸಾಕ್ಷಿ ಎಂಬುದು ಸಿಬಿಐ ವಾದಸರಣಿ. ಆದರೆ ಆ ದಿನಾಂಕಗಳಲ್ಲಿ ಕಟಾರಿಯಾ ಅವರ ಉಪಸ್ಥಿತಿ ಬೇರೆ ಕಡೆಯಲ್ಲಿತ್ತು ಎಂಬುದಕ್ಕೆ ಸ್ಪಷ್ಟ ಸಾಕ್ಷಿಗಳನ್ನು ಬಿಜೆಪಿ ಒದಗಿಸಿತು. ಡಿ. ಜಿ. ವಂದಾರಾ ಅವರನ್ನು ಕಟಾರಿಯಾ ಅವರು ಯಾವತ್ತೂ ಭೇಟಿಯಾಗಿಯೇ ಇರಲಿಲ್ಲ. ಇದಕ್ಕೆ ವ್ಯತಿರಿಕ್ತ ವರದಿ ತಯಾರಿಸಿದ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸುವ ಅಗತ್ಯವಿದೆ.
ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣವೂ ನೇರವಾಗಿ ಕೇಂದ್ರ ಗುಪ್ತಚರ ವಿಭಾಗದ ನಿರ್ವಹಣೆಯಲ್ಲಿ ನಡೆದಿದ್ದು. ಗುಜರಾತ್‌ನ ರಾಜಕೀಯ ವ್ಯವಸ್ಥೆ ಇದರಲ್ಲಿ ಪಾಲ್ಗೊಳ್ಳುವ ಪ್ರಶ್ನೆಯೇ ಇಲ್ಲ. ಎನ್‌ಕೌಂಟರ್ ಅಸಲಿಯೋ ನಕಲಿಯೋ ಎಂಬ ಉತ್ತರ ಕೊಡಬೇಕಾದವರೂ ಕೇಂದ್ರದವರೆ. ಎಲ್‌ಇಟಿಯ ಮುಖವಾಣಿ ಜಮಾತ್ ಉದ್ ದಾವಾದಲ್ಲಿ ಇಶ್ರತ್ ಸಾವನ್ನು 'ಹುತಾತ್ಮ' ಪಟ್ಟಕ್ಕೆ ಹೋಲಿಸಿರುವುದರಲ್ಲೇ ಆಕೆಯ ಬೇರುಗಳು ಸ್ಪಷ್ಟವಾಗುತ್ತವೆ. ಇಷ್ಟಾಗಿಯೂ ಇಶ್ರತ್ ಸಂಬಂಧಿಗಳಿಂದ ಅರ್ಜಿ ಹಾಕಿಸಿ ಪ್ರಕರಣವನ್ನು ಕಟ್ಟಲಾಯಿತು. ಅನೇಕ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿ, ನೇಪಥ್ಯದಲ್ಲಿ ಯುಪಿಎ ಸರ್ಕಾರವು ಒತ್ತಡದ ಆಟ ಆಡಿತು. ಕೆಲ ಅಧಿಕಾರಿಗಳು ಹಾಗೂ ಬಿಜೆಪಿ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡಲು ಒಪ್ಪಿದವರ ವಿರುದ್ಧ ಆರೋಪಪಟ್ಟಿ ಸಲ್ಲಿಸದೇ ಬಿಡುವ ಚೌಕಾಶಿಯನ್ನು ನಡೆಸಲಾಯಿತು.
ಈ ಬಗೆಯ ಒತ್ತಡವು ಯುಪಿಎ ಸರ್ಕಾರದ ಕಾರ್ಯವೈಖರಿಯ ಒಂದು ಭಾಗವೇ ಆಗಿಬಿಟ್ಟಿದೆ. ರಾಷ್ಟ್ರೀಯ ಮಾಧ್ಯಮದಲ್ಲಿ ವರದಿಯಾಗಿರುವಂತೆ- ಅಜ್ಮೀರ್ ಷರೀಫ್ ದರ್ಗಾ ಪ್ರಕರಣದಲ್ಲಿ ಆರೋಪಿಯಾಗಿರುವ ಭವನೇಶ್ ಪಟೇಲ್ ಎಂಬುವವರು ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಹೀಗೆ ಹೇಳಿದ್ದಾರೆ- 'ಕಾಂಗ್ರೆಸ್ ನಾಯಕತ್ವದ ಒಂದು ವರ್ಗ, ಕೆಲ ಕೇಂದ್ರ ಸಚಿವರು ಹಾಗೂ ಎನ್‌ಐಎ ಅಧಿಕಾರಿಗಳು ಪ್ರಕರಣದಲ್ಲಿ ಆರೆಸ್ಸೆಸ್ ನಾಯಕರ ಹೆಸರು ಹೇಳುವಂತೆ ಒತ್ತಡ ತರುತ್ತಿದ್ದಾರೆ.' ಹರ್ಷದ್ ಮತ್ತು ಮುಕೇಶ್ ಎಂಬ ಆರೋಪಿಗಳೂ ಇಂಥದ್ದೆ ಆರೋಪ ಮಾಡಿದ್ದಾರೆ.
ಅಲ್ಲಿಗೆ ಯುಪಿಎ ಸರ್ಕಾರವು ಬಿಜೆಪಿ ಮತ್ತು ಆರೆಸ್ಸೆಸ್ ಹತ್ತಿಕ್ಕುವುದಕ್ಕೆ ಯಾವ ಮಾರ್ಗವನ್ನು ಅನುಸರಿಸುತ್ತಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗುವಂತಿದೆ. ಕಾಂಗ್ರೆಸ್ ಪಕ್ಷ ಇದಕ್ಕಾಗಿಯೇ ರಾಜಕೀಯ ಘಟಕವೊಂದನ್ನು ಸ್ಥಾಪಿಸಿಕೊಂಡಿದೆ. ಕೇಂದ್ರದ ಕೆಲ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಪದಾಧಿಕಾರಿಗಳೆಲ್ಲ ಇದರಲ್ಲಿದ್ದಾರೆ. ಗುಜರಾತ್ ಪೊಲೀಸ್ ಸೇವೆಯ ನಿವೃತ್ತ ಅಧಿಕಾರಿಯೊಬ್ಬರನ್ನು ಗೃಹ ಸಚಿವರಿಗೆ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಗುಜರಾತ್‌ನ ರಾಜಕೀಯ ನಾಯಕರನ್ನು ಹೇಗಾದರೂ ಮಾಡಿ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವುದೇ ಆ ಅಧಿಕಾರಿಗೆ ನೀಡಿರುವ ಗುರಿ.
ಇದೀಗ ಆರೋಪಗಳನ್ನು ಹೊತ್ತು ಜೈಲಿನಲ್ಲಿರುವ ಅಧಿಕಾರಿಗಳನ್ನು ನಿಯಮಿತವಾಗಿ ಭೇಟಿ ಮಾಡುತ್ತಿರುವ ತಂಡವೇ ಇದೆ. ಇಂಥ ಹೇಳಿಕೆ ಕೊಟ್ಟರೆ ನಿಮ್ಮ ಮೇಲಿನ ಪ್ರಕರಣ ಇರುವುದಿಲ್ಲ ಎಂಬ ಚೌಕಾಶಿಗಳು ಅಲ್ಲಿ ನಿರಂತರ ಜಾರಿಯಲ್ಲಿವೆ. ತನಿಖಾ ಸಂಸ್ಥೆಯಲ್ಲಿರುವ ಹಿರಿಯ ಶ್ರೇಣಿಯ ಅಧಿಕಾರಿಗಳಿಗೆ ನಿವೃತ್ತಿ ನಂತರ ಒಳ್ಳೆಯ ಹುದ್ದೆಗಳನ್ನು ನೀಡುವ ಭರವಸೆ ದೊರೆತಿದೆ. ಸಿಬಿಐನ ಕೊನೆಯ ಎರಡು ನಿರ್ದೇಶಕರಿಗೆ ನಿವೃತ್ತಿ ನಂತರದ ಭರ್ಜರಿ ಪೋಸ್ಟ್‌ಗಳು ಸಂದಾಯವಾಗಿವೆ. ಎನ್‌ಐಎಯ ಕೊನೆಯ ನಿವೃತ್ತ ಮುಖ್ಯಸ್ಥನಿಗೂ ನಿವೃತ್ತಿ ನಂತರದ ಆಮಿಷ ಪೂರೈಸಲಾಗಿದೆ. ಈಗಿನ ಸಿಬಿಐ ವಿಶೇಷ ನಿರ್ದೇಶಕರಿಗೆ ಅವರು ನೀಡಿರುವ 'ಸೇವೆ'ಗೆ ಪ್ರತಿಯಾಗಿ ವೈಸ್‌ಛಾನ್ಸೆಲರ್ ಹುದ್ದೆ ಗಟ್ಟಿ ಮಾಡಲಾಗಿದೆ.
ಇಂಟಲಿಜೆನ್ಸ್ ಬ್ಯೂರೊದ ರಹಸ್ಯ ಕಾರ್ಯಾಚರಣೆಗಳನ್ನು ಬಹಿರಂಗವಾಗಿಸುವ ಹೆಜ್ಜೆ ಇಡಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದವರಿಗೆ ಅವರ ಮೂಲಗಳನ್ನು ಬಹಿರಂಗಗೊಳಿಸಬೇಕೆಂಬ ಒತ್ತಡವನ್ನು ಹಾಕಲಾಗುತ್ತಿದೆ.
ದಾರಾ ಸಿಂಗ್ ಎಂಬ ಮಾಫಿಯಾ ಡಾನ್‌ನ ಎನ್‌ಕೌಂಟರ್‌ನಲ್ಲೂ ಬಿಜೆಪಿ ನಾಯಕ, ರಾಜಸ್ಥಾನದ ಲೋಕೋಪಯೋಗಿ ಖಾತೆ ಮಾಜಿ ಸಚಿವ ರಾಜಿಂದರ್ ರಾಥೋಡ್ ಅವರನ್ನು ಯಾವ ಸಾಕ್ಷ್ಯಗಳೂ ಇಲ್ಲದಿದ್ದರೂ ಸಿಲುಕಿಸುವ ಯತ್ನವನ್ನು ಸಿಬಿಐ ಮಾಡಿತು. ಜಾಟ್ ಆಗಿದ್ದ ದಾರಾಸಿಂಗ್‌ಗೂ ರಜಪೂತ ರಾಜಿಂದರ್ ಅವರಿಗೂ ವೈಯಕ್ತಿಕ ದ್ವೇಷವಿದ್ದದ್ದು ದಾರಾನನ್ನು ಎನ್‌ಕೌಂಟರ್‌ನಲ್ಲಿ ಮುಗಿಸುವುದಕ್ಕೆ ಕಾರಣ ಎಂಬ ಕ್ಷುಲ್ಲಕ ಆರೋಪ ಹೊರೆಸಿದ ಸಿಬಿಐ, ಈ ಪ್ರಕರಣದಲ್ಲಿ ಆರೋಪಿಯಾಗಿರುವ ಡಿಜಿಪಿ ಜೈನ್ ಅವರೊಂದಿಗೆ ಕೆಲ ಸಮಯ ರಾಜಿಂದರ್ ಮಾತನಾಡಿರುವುದೇ ಪ್ರಕರಣದಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷ್ಯ ಎಂದು ಆರೋಪಿಸಿಬಿಟ್ಟಿತು. ಇಂಥ ಸಿನಿಮೀಯ ಅಂಶಗಳ ಆಧಾರದಲ್ಲಿಯೇ ರಾಜಿಂದರ್ ರಾಥೋಡ್ ಅವರ ಬಂಧನವೂ ಆಯಿತು. ರಾಜಿಂದರ್ ಅವರನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ನೆರವಾಗುವ ಸಾಕ್ಷ್ಯಗಳ್ಯಾವವೂ ಇಲ್ಲ ಎಂದು ಆಗಿನ ಸಿಬಿಐ ನಿರ್ದೇಶಕ ಎಪಿ ಸಿಂಗ್ ಹಾಗೂ ಅಟಾರ್ನಿ ಜನರಲ್ ವಾಹನ್ವತಿ ಅವರು ಅಭಿಪ್ರಾಯ ನೀಡಿದ ಮೇಲೂ ಆರೋಪಪಟ್ಟಿ ಸಲ್ಲಿಕೆಯಾಯಿತು. ವಿಚಾರಣಾ ನ್ಯಾಯಾಲಯ ಯಾವ ಅಂಶಗಳೂ ಕಾಣದೇ ರಾಜಿಂದರ್ ಅವರನ್ನು ದೋಷಮುಕ್ತಗೊಳಿಸಿತು. ರಾಜಸ್ಥಾನ ಹೈಕೋರ್ಟ್‌ನಲ್ಲಿ ಇದರ ಪರಾಮರ್ಶೆ ಅರ್ಜಿ ಸಲ್ಲಿಕೆಯಾಗಿ ನಂತರ ಅದಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತು. ಪ್ರಕರಣವಿನ್ನೂ ನ್ಯಾಯಾಲಯದಲ್ಲಿದೆ.
ಈ ಮೇಲೆ ಹೇಳಲಾದ ಕೆಲವು ಪ್ರಕರಣಗಳ ಸಂಬಂಧವೇ ಗುಜರಾತ್‌ನ ಐಪಿಎಸ್ ಅಧಿಕಾರಿ ಡಿ. ಜಿ. ವಂಜಾರಾ ಅವರನ್ನು ಆರೋಪಿಯನ್ನಾಗಿಸಿ ಆರು ವರ್ಷಗಳಿಂದ ಜೈಲಿನಲ್ಲಿ ಇರಿಸಲಾಗಿದೆ. ಗುಜರಾತ್ ನಾಯಕರ ವಿರುದ್ಧ ಹೇಳಿಕೆ ನೀಡಿದ್ದೇ ಆದಲ್ಲಿ ನಿಮ್ಮನ್ನು ರಕ್ಷಿಸಲಾಗುವುದು ಎಂದು ಅವರ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿದೆಯಾದರೂ ಈವರೆಗೆ ಅದು ಫಲಪ್ರದವಾಗಿಲ್ಲ.
ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕತ್ವದ ವಿರುದ್ಧ ಅಧಿಕಾರಿಗಳನ್ನು ಹೇಗೆ ಉಪಯೋಗಿಸಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಸಂಜೀವ್ ಭಟ್ ಉದಾಹರಣೆಯೇ ಸ್ಪಷ್ಟವಾಗಿದೆ. ಗುಜರಾತ್ ಗಲಭೆಗೆ ತಾವು ಸಾಕ್ಷಿಯಾಗಿದ್ದಾಗಿ 2010-11ರಲ್ಲಿ ಸಂಜೀವ್ ಭಟ್ ಏಕಾಏಕಿ ಪ್ರಹಾರ ಶುರು ಮಾಡಿದರು. ಸಂಜೀವ್ ಭಟ್ ಕಾಂಗ್ರೆಸ್ ವ್ಯೂಹದ ಒಂದು ಭಾಗ ಎಂಬುದು ಅವರು ನಡೆಸಿರುವ ಇಮೇಲ್ ಸಂವಹನಗಳಿಂದಲೇ ದೃಢವಾಗಿದೆ. ಅಧಿಕಾರಿಗಳಿಗೆ ತಕ್ಕುದಲ್ಲದ ಭಾಷೆಯಲ್ಲಿ ಅವಹೇಳನಕಾರಿಯಾಗಿ ಮೋದಿಯವರಿಗೆ ಪತ್ರ ಬರೆದವರೂ ಇವರೇ. ಕೆಲ ಎನ್‌ಜಿಒಗಳ ಜತೆ ನಿಂತು ಮೋದಿ ವಿರುದ್ಧ ಅರ್ಜಿಗಳನ್ನು ಸಲ್ಲಿಸುತ್ತಿರುವ ಸಂಜೀವ್ ಭಟ್ ಪತ್ನಿಗೆ ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೇಟ್ ಸಿಕ್ಕಿದ್ದು ಎಲ್ಲವಕ್ಕೂ ಕನ್ನಡಿ ಹಿಡಿದಿದೆ.
ಸಿಬಿಐ ಹಾಗೂ ಎನ್‌ಐಎಗಳು ಕಾಂಗ್ರೆಸ್‌ನ ಭಾಗವಾಗಿ ಕೆಲಸ ಮಾಡುತ್ತಿರುವುದಕ್ಕೆ ಇಲ್ಲಿ ಉದಾಹರಿಸುವ ಪ್ರಕರಣಗಳು ಕೆಲ ಸಾಕ್ಷ್ಯಗಳಷ್ಟೆ. ತನಿಖೆಗಳಲ್ಲಿ ರಾಜಕೀಯ ನುಗ್ಗಿರುವುದರ ಬಗ್ಗೆ ತನಿಖೆ ಮಾಡಲು ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗವೊಂದು ರಚನೆಯಾಗಲಿ ಎಂದು ಈ ಮೂಲಕ ನಾನು ಆಗ್ರಹಿಸುತ್ತೇನೆ.
ತನ್ನ ರಾಜಕೀಯ ಎದುರಾಳಿಗಳನ್ನು ಮುಗಿಸುವುದಕ್ಕೆ ಕೇಂದ್ರ ಸರ್ಕಾರವು ತನ್ನ ಅಧೀನದ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂಬ ದೂರು ಈಗ ವ್ಯಾಪಕವಾಗಿದೆ. ಸರ್ಕಾರಕ್ಕೆ ಅಗತ್ಯ ಬೆಂಬಲ ಬೇಕಾದಾಗಲೆಲ್ಲ ಸಿಬಿಐ ಗುಮ್ಮನನ್ನು ಉಪಯೋಗಿಸಿಕೊಂಡು ಸಣ್ಣಪಕ್ಷಗಳನ್ನು ಕುಣಿಸುತ್ತಿರುವ ಕಾಂಗ್ರೆಸ್‌ನ ಆಟ ರಹಸ್ಯವಾಗಿಯೇನೂ ಉಳಿದಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ರಾಜಕೀಯಕ್ಕೆ ಉಪಯೋಗಿಸಿಕೊಂಡಿರುವ ಕ್ರಮವನ್ನು ವಿರೋಧಿಸುತ್ತ ಈ ಬಗ್ಗೆ ಅಮೂಲಾಗ್ರ ತನಿಖೆಗೆ ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ. ಹಲವು ಪ್ರಕರಣಗಳನ್ನು ತಾರ್ಕಿಕವಾಗಿ ವಿಶ್ಲೇಷಿಸಿರುವ ಅವರ ಪತ್ರದ ಸಾರ ಇಲ್ಲಿದೆ.

- ಅರುಣ್ ಜೇಟ್ಲಿ
ರಾಜ್ಯಸಭೆ ಪ್ರತಿಪಕ್ಷ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.