ದೊಡ್ಡಣ್ಣನ ಒಡ್ಡಾಟದ ಹಿಂದಿತ್ತು ಯುದ್ಧ ದಾಹ

ಇವತ್ತು ನಿನ್ನೆಯದಲ್ಲ ಧರಣಿಯ ಮೇಲಿನ ಈ ದೌರ್ಜನ್ಯ. ಈ ಭೂಮಿಯ ಮೇಲೆ...
ದೊಡ್ಡಣ್ಣನ ಒಡ್ಡಾಟದ ಹಿಂದಿತ್ತು ಯುದ್ಧ ದಾಹ
Updated on: 

ಇವತ್ತು ನಿನ್ನೆಯದಲ್ಲ ಧರಣಿಯ ಮೇಲಿನ ಈ ದೌರ್ಜನ್ಯ. ಈ ಭೂಮಿಯ ಮೇಲೆ ಹರಿದೋಡುವ ನೀರನ್ನು, ನಲಿದಾಡುವ ನದಿಯನ್ನು ಕಟ್ಟಿಹಾಕುವ ಪ್ರಸ್ತಾಪ ವೇದ ಕಾಲದಲ್ಲೇ ಇತ್ತು. ಅಂದರೆ ಪ್ರಕೃತಿಯ ಸಹಜ ವ್ಯಾಪಾರದಲ್ಲಿ ಮಾನವ ಹಸ್ತಕ್ಷೇಪವನ್ನು ಆರಂಭಿಸಿದ್ದು ಮಾನವನ ಹುಟ್ಟಿನಿಂದಲೇ ಆರಂಭವಾದಂತಿದೆ. ವೇದ ಕಾಲದಲ್ಲೇ ಇಂಥದ್ದೊಂದು ಅಪಚಾರ ನಡೆದಿತ್ತು ಎಂಬುದನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳು ಸಿಗುತ್ತಿವೆ. ಇಂದು ನಾವು ಬೃಹತ್ ನೀರಾವರಿಯ ಹೆಸರಿನಲ್ಲಿ ನದಿಗಳಿಗೆ ಅಡ್ಡಲಾಗಿ ಒಡ್ಡು ಕಟ್ಟಿ ಅಣೆಕಟ್ಟೆಗಳೆಂದು ಏನನ್ನು ಗುರುತಿಸುತ್ತೇವೆಯೋ ಅಂಥ ಅಣೆಕಟ್ಟುಗಳು ಆಗಿನ ಕಾಲದಲ್ಲೇ ಅಸ್ತಿತ್ವಕ್ಕೆ ಬಂದಿತ್ತೆನ್ನುವುದಕ್ಕೆ ಋಗ್ವೇದದಲ್ಲಿ (1-32-12) ಸಾಕಷ್ಟು ಆಧಾರಗಳು ಇವೆ. ಭಾರತದ ಪ್ರಮುಖ ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಲಾದ ಬಗ್ಗೆ ಅದರಲ್ಲಿ ಪ್ರಸ್ತಾಪಗಳಿವೆ. ಗಂಗಾ, ಯಮುನಾ, ಶುತುದ್ರಿ, ಪರುಷ್ಣಿ, ಅಸಿಕ್ನಿ, ವಿತಾಸ್ತಾ ಸೇರಿದಂತೆ ಸಿಂಧು ಹಾಗೂ ಅದರ ಉಪನದಿಗಳು, ಕುಂಭ, ಮೆಹತ್ನು ಹಾಗೂ ಗೋಮತಿಗಳಿಗೆ ಅಲ್ಲಲ್ಲಿ ತಡೆ ಒಡ್ಡಿ ನೀರು ನಿಲ್ಲಿಸಿಕೊಂಡು ಕೃಷಿ ಸೇರಿದಂತೆ ಹಲವು ದೈನಂದಿನ ಚಟುವಟಿಕೆಗಳಿಗೆ ನೀರನ್ನು ಹರಿಸಿಕೊಳ್ಳಲಾಗಿತ್ತು ಎನ್ನುತ್ತದೆ ಋಗ್ವೇದ (10-75).
ಇಲ್ಲಿ ನಮೂದಿಸಲೇಬೇಕಾದ ಪ್ರಮುಖ ವಿಷಯವೆಂದರೆ, ಅಣೆಕಟ್ಟುಗಳ ಅಸ್ತಿತ್ವಕ್ಕಿಂತ, ಅವುಗಳನ್ನು ಪಾಪವೆಂದು ಪರಿಗಣಿಸಿದ್ದು. ಆದರೆ ಆಧುನಿಕ ಜಗತ್ತು ಅದನ್ನು ಮರೆತಿದೆ. ನದಿಗಳಿಗೆ ಒಡ್ಡು ಕಟ್ಟುವುದು ಮಾನವ ಕುಲಕ್ಕೆ ಎಸಗುವ ಅಪಚಾರ ಎನ್ನುತ್ತದೆ ವೇದ ಭಾರತ. ಹರಿಯುವ ನದಿಗಳಿಗೆ ಅಡ್ಡಲಾಗಿ ಒಡ್ಡು ಕಟ್ಟಿ, ಸಹಜ ಹರಿವಿಗೆ ತಡೆಯೊಡ್ಡಿದರೆ ಅದು ನೀರಿನೊಡೆಯ ದೇವೇಂದ್ರನನ್ನು ಅಪಮಾನಿಸಿದಂತೆ ಎಂದು ಹೇಳಲಾಗಿದೆ. ಒಂದೊಮ್ಮೆ ತಾತ್ಕಾಲಿಕ ಒಡ್ಡುಗಳನ್ನು ನಿರ್ಮಿಸಿ ನೀರನ್ನು ಬಳಕೆ ಮಾಡಿಕೊಂಡರೂ ಕೃಷಿ ಕಾರ್ಯ ಮುಗಿದ ಬಳಿಕ, ಅವನ್ನು ತೆರವುಗೊಳಿಸಿ ಇಂದ್ರನಿಗೆ ಶಾಂತಿಯನ್ನು ಮಾಡುವಂತೆ ಅದೇ ಅಧ್ಯಾಯದಲ್ಲಿ ಸೂಚಿಸಲಾಗಿದೆ.
ಹೇಗೇ ನೋಡಿದರೂ ಭೂಮಿಯ ಮೇಲೆ ನದಿಗಳ ಪರಿಣಾಮ ಬಣ್ಣಿಸಲಸದಳ. ಗಿರಿಕಂದರಗಳಲ್ಲಿ ಜೀವ ಸೆಲೆಯಾಗಿ ಹೊಮ್ಮಿ ಪರ್ವತಗಳಗುಂಟ ನೀರು ಇಳಿದು ಬರುತ್ತದೆ. ಮಳೆಯೇ ಇದಕ್ಕೆ ಆಧಾರ. ಇಂಥ ಹತ್ತಾರು ಜೀವ ಸೆಲೆಗಳು ಸೇರಿ ನದಿಯ ಸ್ವರೂಪ ಪಡಕೊಳ್ಳುತ್ತದೆ. ನದಿಯೆಂಬುದು ಎಲ್ಲೋ ಒಂದು ಕಡೆ ಬೃಹದಾಕಾರದಲ್ಲಿ ಚಿಮ್ಮಿ ಹುಟ್ಟುವುದಲ್ಲವೇ ಅಲ್ಲ. ಹೀಗೆ ಹನಿಹನಿಗಳು ಸೇರಿ ಹಳ್ಳವಾಗಿ, ತೋಡಾಗಿ, ತೊರೆಯಾಗಿ ಹರಿದು ಇಂಥ ತೊರೆಗಳು ಒಂದಕ್ಕೊಂದು ಬೆಸೆದು ರೂಪುಗೊಳ್ಳುವ ನದಿಗಳು ಮತ್ತೆ ಉಪನದಿಗಳನ್ನು ಸೇರಿಸಿಕೊಂಡು ಕೊನೆಗೊಮ್ಮೆ ಸಮುದ್ರದಲ್ಲಿ ಒಂದಾಗುತ್ತದೆ. ಹೀಗೆ ಹುಟ್ಟಿನಿಂದ ಸಂಗಮದವರೆಗಿನ ಹಾದಿಯಲ್ಲಿ ನದಿ ತನ್ನ ಪಾಡಿಗೆ ತಾನು ಹರಿಯುವುದಿಲ್ಲ. ಬದಲಿಗೆ ತನ್ನ ಪಾತ್ರದುದ್ದಕ್ಕೂ ನೆಲವನ್ನು ತೋಯಿಸಿ ತೇವವಾಗಿಸುತ್ತ, ತನ್ನೊಡಲಲ್ಲಿ ಹೊತ್ತು ತಂದ ಹೂಳನ್ನು ಬಿಟ್ಟುಕೊಳ್ಳುತ್ತ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಇದಕ್ಕಿಂತ ಮುಖ್ಯವಾಗಿ ನೆಲದೊಳಗಣ ನೀರಿನ ಮಟ್ಟ (ಅಂತರ್ಜಲ) ರಕ್ಷಣೆಯಲ್ಲಿ ನದಿಯ ಹರಿವಿನ ಪಾತ್ರ ಅತ್ಯಂತ ಹಿರಿದು. ನದಿಯಿಲ್ಲದೇ ನೆಲವಿಲ್ಲ. ಹರಿವಿಲ್ಲದೇ ನದಿಯೇ ಇಲ್ಲ. ನದಿಯ ಮೂಲಭೂತ ಗುಣವೇ ನಿರಂತರ ಹರಿವು. ಅಂಥ ಹರಿವನ್ನು ನಾವು ಒಡ್ಡುಗಳ ಮೂಲಕ ನಾಶಗೊಳಿಸುತ್ತಿದ್ದೇವೆ.
ತಪ್ಪಲ್ಲ, ಆಧುನಿಕ ಅಭಿವೃದ್ಧಿಯ ದೃಷ್ಟಿಯಿಂದ, ಬೆಳೆಯುತ್ತಿರುವ ಜನಸಂಖ್ಯೆ, ನಗರ, ಕೃಷಿ, ಕೈಗಾರಿಕೆಗಳ ದೃಷ್ಟಿಯಿಂದ ನದಿಗಳ ನೀರನ್ನು ಹಿಡಿದಿಟ್ಟುಕೊಂಡು ಬಳಸುವುದು ಅನಿವಾರ್ಯ. ಆದರೆ ನದಿಗಳ ಅಸ್ತಿತ್ವವನ್ನೇ ನುಂಗುವ ಯೋಜನೆಗಳು ಪ್ರಶ್ನಾರ್ಹವಾಗುತ್ತವೆ. ಮಿತಿ ಮೀರಿದರೆ ಯಾವುದೇ ಆದರೂ ಅದು ಅಪಾಯವೇ. ಅಣೆಕಟ್ಟುಗಳ ವಿಷಯವೂ ಇದಕ್ಕೆ ಹೊರತಲ್ಲ. ನದಿಗಳಿಗೆ ಒಡ್ಡು ಕಟ್ಟುವುದರಿಂದ ಕೇವಲ ಅದರ ಅಸ್ತಿತ್ವವಷ್ಟೇ ನಾಶವಾಗುವುದಿಲ್ಲ. ನದಿಯ ಪಾತ್ರದುದ್ದಕ್ಕೂ ಅಂತರ್ಜಲಕ್ಕೆ ಧಕ್ಕೆ ಬರುತ್ತದೆ, ಮಣ್ಣಿನ ಫಲವತ್ತತೆ ನಾಶವಾಗುತ್ತದೆ. ಭೂಮಿಯ ಹದನು ಕೆಡುತ್ತದೆ. ಸಮುದ್ರ ಸೇರಬೇಕಿದ್ದ ತ್ಯಾಜ್ಯ, ಹೂಳು ಒಂದೆಡೆಯೇ ಸೇರಿ ನಿಲ್ಲುತ್ತದೆ. ಪರಿಣಾಮ ಸಮುದ್ರದ ಅಬ್ಬರಕ್ಕೆ ತಡೆಯಿಲ್ಲದಂತಾಗಿ ಅದು ಭೂಭಾಗವನ್ನು ಕಬಳಿಸುವ ಪ್ರಕ್ರಿಯೆ ಹೆಚ್ಚುತ್ತದೆ. ಇನ್ನೊಂದೆಡೆ ಮುಳುಗಡೆ, ಅರಣ್ಯ ನಾಶ, ತಾಳ ತಪ್ಪುವ ಪ್ರಕೃತಿ ವ್ಯಾಪಾರ ಇವೆಲ್ಲವನ್ನೂ ಎದುರಿಸಲೇಬೇಕು. ಇವಿಷ್ಟು ಮೇಲ್ನೋಟಕ್ಕೆ ಕಾಣುವ ಪರಿಣಾಮಗಳು. ಇನ್ನು ಪರೋಕ್ಷ ದುಷ್ಪರಿಣಾಮಗಳು ಲೆಕ್ಕವಿಲ್ಲದ್ದು. ಇಂಥ ಅಭಿವೃದ್ಧಿ ನಮಗೆ ಬೇಕೇ?
ತೀರಾ ಇತ್ತೀಚೆಗೆ ಅಂದರೆ ಕಳೆದ ಎರಡು ಶತಮಾನಗಳ ಹಿಂದಿನವರೆಗೂ ಈ ಒಡ್ಡುಗಳ ವಿಚಾರದಲ್ಲಿ ಮಾನವನಿಗೆ ಸ್ವ ನಿಯಂತ್ರಣವಿತ್ತು. 19ನೇ ಶತಮಾನದ ಮಧ್ಯ ಕಾಲದಲ್ಲಿ ಇದೊಂದು ರೀತಿಯ ಗೀಳಾಗಿ ಪರಿಣಮಿಸಿತು. ದೇಶಗಳ ಪ್ರತಿಷ್ಠೆಯ ಪ್ರಶ್ನೆಯಾಗಿ, ಅಭಿವೃದ್ಧಿಯ ಪ್ರತೀಕವಾಗಿ ಅಣೆಕಟ್ಟುಗಳು ತಲೆ ಎತ್ತಲು ಆರಂಭಿಸಿದವು. ಅದಕ್ಕೂ ಮುನ್ನ ಕೈಗಾರಿಕೆಗಳ ಬಳಕೆಗಾಗಿ ಮಾತ್ರವೇ ಒಡ್ಡುಗಳು ಇದ್ದವು. ವಿಶ್ವದ ವಿವಿಧೆಡೆ ಈ ಉದ್ದೇಶಕ್ಕಾಗಿ ಸರಿ ಸುಮಾರು 200 ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು ಎನ್ನುತ್ತವೆ ದಾಖಲೆಗಳು. ಇವೆಲ್ಲವೂ ತೀರಾ ಕಚ್ಚಾ ಮಾದರಿಯ ನಿರ್ಮಾಣಗಳಾಗಿದ್ದವು. ತೀರಾ ಬಲಿಷ್ಠವಾಗಿರದೇ ತುಸುಮಟ್ಟಿಗೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದವು. ಕಳೆದ(20ನೇ) ಶತಮಾನದ ಪ್ರಾರಂಭದವರೆಗೆ ಅಣೆಕಟ್ಟುಗಳಿಗೆ ಬಳಸುತ್ತಿದ್ದುದು ಕಲ್ಲು, ಇಟ್ಟಿಗೆ ಹಾಗೂ ಸುಣ್ಣ ಮಣ್ಣಿನ ಗಾರೆ. ಒಡ್ಡುಗಳಿಗೆ ಯಾವುದೇ ವೈಜ್ಞಾನಿಕ ತಾಂತ್ರಿಕತೆಯಾಗಲಿ, ವ್ಯವಸ್ಥೆಯಾಗಲಿ ಇರಲಿಲ್ಲ. ಹೀಗಾಗಿ ಅದರ ತಾಳಿಕೆ, ಪರಿಣಾಮಗಳ ಬಗ್ಗೆ ಅಷ್ಟೊಂದು ಗಂಭೀರ ಯೋಚನೆ ಮಾಡಬೇಕಿರಲಿಲ್ಲ. ನದಿಯ ಹರಿವನ್ನೂ ಹೇಳಿಕೊಳ್ಳುವಷ್ಟು ತಡೆದಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಆದ ತಾಂತ್ರಿಕ ಬೆಳವಣಿಗೆಗಳು ನಿಜಕ್ಕೂ ಆಘಾತಕಾರಿಯಾಗಿವೆ.
ಲಭ್ಯ ಮಾಹಿತಿಯ ಪ್ರಕಾರ, 1930ರಲ್ಲಿ ಅಣೆಕಟ್ಟೆಗಳ ಬಗೆಗೆ ಮೊದಲ ಬಾರಿಗೆ ತೀರಾ ವೈಜ್ಞಾನಿಕವಾಗಿ ಅಧ್ಯಯನ, ಯೋಜನೆ ಆರಂಭವಾಯಿತು. ನೀರಿನ ಹರಿವು, ವೇಗ, ನೀರಿನ ಪ್ರಮಾಣ, ಕಾಲಮಾನ ಮತ್ತದಕ್ಕನುಗುಣವಾಗಿ ವಾತಾವರಣದಲ್ಲಿನ ಬದಲಾವಣೆ, ಅಣೆಕಟ್ಟು ನಿರ್ಮಾಣ ಪ್ರದೇಶ, ಅಲ್ಲಿನ ಮಣ್ಣಿನ ಪರೀಕ್ಷೆ, ಭೂಗರ್ಭದ ಸಂರಚನೆ ಹಾಗೂ ಅಲ್ಲಿರಬಹುದಾದ ಕಲ್ಲು, ಬಂಡೆಗಳ ಪ್ರಮಾಣ, ಯೋಜಿತ ಒಡ್ಡಿನಲ್ಲಿ ನೀರಿನ ಸಂಗ್ರಹ ಪ್ರಮಾಣ ಹಾಗೂ ಅದರ ಒತ್ತಡದಿಂದಾಗುವ ಪ್ರಭಾವ ಇತ್ಯಾದಿಗಳ ಕುರಿತು ಅಧ್ಯಯನ ನಡೆಸಲಾಯಿತು. ಇಷ್ಟಾದರೂ ಅಣೆಕಟ್ಟುಗಳು ಸಬಲವಾಗಿಯೇನೂ ಇರುತ್ತಿರಲ್ಲ. ಏನಿಲ್ಲವೆಂದರೂ ಸರಾಸರಿ ಹತ್ತರಲ್ಲಿ ಒಂದು ಅಣೆಕಟ್ಟು ಒಡೆದು ಅವಘಡ ಎಬ್ಬಿಸುತ್ತಿದ್ದುದು ಸಾಮಾನ್ಯ ಸಂಗತಿಯಾಗಿತ್ತು.
ಯಾವಾಗ ಫ್ರಾನ್ಸ್‌ನ ಎಂಜಿನಿಯರ್ ಟರ್ಬೈನ್ ಎನ್ನುವವ ವಿದ್ಯುತ್ ಯಂತ್ರವನ್ನು ಸಂಶೋಧಿಸಿದನೋ ಆಗ ಇದ್ದಕ್ಕಿದ್ದಂತೆಯೇ ಅಣೆಕಟ್ಟುಗಳು ನಾಯಿಕೊಡೆಗಳಾಗತೊಡಗಿದವು. ಜಲ ವಿದ್ಯುತ್‌ಗೆ ಇನ್ನಿಲ್ಲದ ಬೇಡಿಕೆ ಹುಟ್ಟಿಕೊಂಡದ್ದೇ ಆಗ. ಅದರಲ್ಲೂ ಅಮೆರಿಕ, ಯುರೋಪ್ ಖಂಡಗಳು ತಮ್ಮ ಪ್ರಾಬಲ್ಯವನ್ನು ಸಾಧಿಸಿದವು. ಅಣೆಕಟ್ಟುಗಳೆಂದರೆ ಅಭಿವೃದ್ಧಿ ಎಂಬ ಭ್ರಮೆ ಬಿತ್ತಿದ್ದೇ ಅಲ್ಲಿನ ದೇಶಗಳು. ಒಂದು ಅಂದಾಜಿನ ಪ್ರಕಾರ 1900ರಲ್ಲಿ ಕೇವಲ 30 ಅಣೆಕಟ್ಟುಗಳಿದ್ದವು. ಆದರೆ 1930ರ ವೇಳೆಗೆ ಇದ್ದಕ್ಕಿದ್ದಂತೆಯೇ 200ಕ್ಕೆ ಏರಿತ್ತು. ಅಮೆರಿಕದಲ್ಲಿ ನಿಜವಾಗಿ ಒಡ್ಡುಗಳ ಕಲ್ಪನೆ ಹುಟ್ಟಿಕೊಂಡಿದ್ದೇ ಹುಲ್ಲುಗಾವಲಿಗಾಗಿ. ಮಾಂಸದ ಬೇಡಿಕೆಯನ್ನು ಸರಿಗಟ್ಟಲು, ಅದರಲ್ಲೂ ದನದ ಮಾಂಸವನ್ನು ದ್ವಿಗುಣಗೊಳಿಸಲು ಅವರಿಗೆ ಹೆಚ್ಚು ಹೆಚ್ಚು ಭೂಮಿಯಲ್ಲಿ ಮೇವು ಬೆಳೆಸುವುದು ಅನಿವಾರ್ಯವಾಗಿತ್ತು. ಅದೂ ಅತ್ಯಂತ ಕಲುಪ್ತ ಸಮಯದಲ್ಲಿ ಹೆಚ್ಚು ಹುಲ್ಲನ್ನು ಅಭಿವೃದ್ಧಿಪಡಿಸಬೇಕಿತ್ತು. ಇದಕ್ಕಾಗಿ ನೀರಾವರಿ ಯೋಜನೆಯನ್ನು ರೂಪಿಸಲಾಯಿತು. ಇಂಥ ಒಡ್ಡುಗಳನ್ನೇ ಅಭಿವೃದ್ಧಿಪಡಿಸಿ ನಂತರದ ದಿನಗಳಲ್ಲಿ ಕೈಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲಾಯಿತು.
ವಿದ್ಯುತ್ ಕ್ರಾಂತಿಯ ಹುಚ್ಚು ಹಿಡಿದದ್ದೂ ಅಲ್ಲಿಂದಲೇ. ಅದು ಇವತ್ತು ನಮ್ಮ ಉತ್ತರಾಖಂಡ, ಹಿಮಾಚಲ ಪ್ರದೇಶದಂಥ ರಾಜ್ಯಗಳವರೆಗೆ ವೈರಸ್‌ನಂತೆ ಹಬ್ಬಿ ನಿಂತಿದೆ. ಆದರೆ ಅವತ್ತು ಅಮೆರಿಕ ಹೀಗೆ ಒಡ್ಡುಗಳ ಸಂಖ್ಯೆಯನ್ನು ವೃದ್ಧಿಸಲು ಇದ್ದ ಕಾರಣ ಅದರ ಯುದ್ಧೋನ್ಮಾದ. ಜಗತ್ತನ್ನೇ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡು ತಾನು ಬಲಾಢ್ಯನೆನಿಸಿಕೊಳ್ಳಬೇಕೆಂಬ ಹುಚ್ಚಿಗೆ ಬಿದ್ದಿದ್ದ ಅಮೆರಿಕ ಕಂಡ ಕಂಡ ದೇಶಗಳ ಮೇಲೆ ಯುದ್ಧ ಸಾರುತ್ತಲೇ ಬಂದಿದೆ. ಅದಕ್ಕೆ ಅಗತ್ಯ ಶಸ್ತ್ರಾಸ್ತ್ರ ತಯಾರಿಕೆ ಆಗಬೇಕಿತ್ತು. ಶಸ್ತ್ರಾಸ್ತ್ರ ಕೈಗಾರಿಕೆಗಳಿಗೆ ಅಪಾರ ವಿದ್ಯುತ್ ಬೇಕಿತ್ತು. ಅದಕ್ಕಾಗಿ ಅದು ಹೂಡಿದ್ದು ಒಡ್ಡುಗಳ ಸರಣಿಯನ್ನು. ನಿಸರ್ಗದ ವಿರುದ್ಧದ ನೀಚತನವೆಂದರೆ ಇದಕ್ಕಿಂತ ಬೇರಿನ್ನೇನು ಇರಲು ಸಾಧ್ಯ? ಇದನ್ನು ದೃಢಪಡಿಸಲು ಅನೇಕ ಸಂಗತಿಗಳಿವೆ. ಎಲ್ಲಕ್ಕಿಂತ ವಿಶೇಷವೆಂದರೆ ಹೀಗೆ ಒಡ್ಡುಗಳನ್ನು ನಿರ್ಮಿಸಿದ್ದು ಅಲ್ಲಿನ ಸೇನಾಪಡೆ. ಇದಕ್ಕಾಗಿಯೇ ಅಲ್ಲಿನ ಸರ್ಕಾರ ಸೇನಾ ತಂತ್ರಜ್ಞರನ್ನು ಒಳಗೊಂಡ ತಂಡವನ್ನೂ ರಚಿಸಿತ್ತು. ಆ ತಂಡವೇ ಕಬ್ಬಣ ಮತ್ತು ಸಿಮೆಂಟ್ ಸೇರಿಸಿ ಒಡ್ಡುಗಳನ್ನು ಬೆಸೆಯಲು ಯೋಜಿಸಿದ್ದು. 1931ರಲ್ಲಿ ಜಗತ್ತಿನ ಅತ್ಯಂತ ಬೃಹತ್ ಅಣೆಕಟ್ಟುಗಳಲ್ಲಿ ಒಂದಾದ ಕೊಲರ್ಯಾಡೊ ನದಿಯ ಹೂವರ್ ಅಣೆಕಟ್ಟೆಯನ್ನು ಅಮೆರಿಕದಲ್ಲಿ ನಿರ್ಮಿಸಲಾಯಿತು. 1945ರ ನಂತರ ಅಮೆರಿಕದಲ್ಲಿ ಕಲ್ಲಿದ್ದಲು ಆಧಾರಿತ ಹಾಗೂ ಅಣು ವಿದ್ಯುತ್ ಉತ್ಪಾದನೆ ಆರಂಭವಾದದ್ದು. ಅಲ್ಲಿಯವರೆಗೂ ಅಮೆರಿಕ ಸರ್ಕಾರ ವಿದ್ಯುತ್ ಉತ್ಪಾದನೆಗೆ ಅವಲಂಬಿಸಿದ್ದು ನದಿಗಳನ್ನೇ. ಇದೇ ಉದ್ದೇಶಕ್ಕೆ ಅದು 100ಕ್ಕೂ ಹೆಚ್ಚು ಅಣೆಕಟ್ಟುಗಳನ್ನು ನಿರ್ಮಾಣ ಮಾಡಿತ್ತು ಎನ್ನುತ್ತದೆ ಇತಿಹಾಸ.
ಅಮೆರಿಕವೇ ಹೀಗಾಡುತ್ತಿದ್ದಾಗ ಅದರ ಬದ್ಧ ವೈರಿ ರಷ್ಯಾ ಸುಮ್ಮನೆ ಕುಳಿತುಕೊಳ್ಳುತ್ತದೆಯೇ? ಅದು ಸಹ ಅಣೆಕಟ್ಟುಗಳ ನಿರ್ಮಾಣದಲ್ಲಿ ಪೈಪೋಟಿಗೆ ಬಿತ್ತು. ಆದರೆ ಅಲ್ಲಿ ನದಿಗಳಿಗೆ ಒಡ್ಡುಕಟ್ಟುವುದು ಅನಿವಾರ್ಯವಾಗಿತ್ತು. ಏಕೆಂದರೆ ಅಲ್ಲಿನ ನದಿಗಳ ಹುಚ್ಚು ಪ್ರವಾಹವನ್ನು ನಿಯಂತ್ರಿಸಲು ಬೇರೆ ದಾರಿಯೇ ಇರಲಿಲ್ಲ. ರಷ್ಯಾದಲ್ಲಿ ಜಲವಿದ್ಯುತ್ ಯೋಜನೆಗೆ ನಾಂದಿ ಹಾಡಿದ್ದು 1932ರಲ್ಲಿ. ಡೈಪಿರ್ ನದಿಗೆ ಆಗ ಬೃಹತ್ ಅಣೆಕಟ್ಟು ನಿರ್ಮಿಸಲಾಯಿತು. ಮುಂದಿನ ಮೂವತ್ತೈದು ವರ್ಷಗಳಲ್ಲಿ ಅಲ್ಲಿನ ಬಹುತೇಕ ನದಿಗಳಿಗೆ ಅಣೆಕಟ್ಟುಗಳನ್ನು ಬೆಸೆಯಲಾಗಿತ್ತು. ಅಂಕಿ ಅಂಶಗಳ ಪ್ರಕಾರ 1970ರ ಸುಮಾರಿಗೆ ಅಣೆಕಟ್ಟುಗಳ ಮೂಲಕ ರಷ್ಯಾ 1 ಲಕ್ಷ ಚ.ಕಿ.ಮೀ.ಗೂ ಹೆಚ್ಚು ಪ್ರದೇಶವನ್ನು ನೀರಾವರಿಗೆ ಒಳಪಡಿಸಿತ್ತು.
ಅಲ್ಲಿಂದ ಇಲ್ಲಿಯವರೆಗೆ ನಿಲ್ಲಲೇ ಇಲ್ಲ ನಮ್ಮ ಅಣೆಕಟ್ಟುಗಳ ನಿರ್ಮಾಣದ ವ್ಯಾಮೋಹ. ಅದರಲ್ಲೂ 1950ರ ನಂತರದ ಎರಡು ದಶಕ ಅಣೆಕಟ್ಟುಗಳ ಸಂಖ್ಯೆ ವಿಪರೀತ ಹೆಚ್ಚಿತು. ಅದಕ್ಕೆ ಪ್ರಮುಖ ಕಾರಣ ವಿಶ್ವಬ್ಯಾಂಕ್ ನೆರವಿನ ಆಮಿಷ. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ವರ್ಷಕ್ಕೆ ಆ ಅವಧಿಯಲ್ಲಿ ಜಗತ್ತಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳು ನಿರ್ಮಾಣವಾಗುತ್ತಿದ್ದವು. ದೇವರ ದಯೆ ಈ ಪ್ರಮಾಣ ಈಗ 200ಕ್ಕೆ ಕುಸಿದಿದೆಯಂತೆ. ಆದರೂ ಬೃಹತ್ ಅಣೆಕಟ್ಟುಗಳ ಬಗೆಗಿನ ನಮ್ಮ ಭ್ರಮೆ ಪೂರ್ತಿ ಕಳಚಿಬಿದ್ದಿಲ್ಲ. ನದಿಗಳ ಅವಸಾನ ನಿಂತಿಲ್ಲ. ನಿಸರ್ಗದ ಮೇಲಿನ ದೌರ್ಜನ್ಯ ಕೊನೆಯಾಗಿಲ್ಲ. ಜ್ಞಾನಪೀಠಿ ಶಿವರಾಮ ಕಾರಂತರು ಹೇಳುತ್ತಲೇ ಇದ್ದರು, ಕಳೆದ 20 ಲಕ್ಷ ವರ್ಷಗಳಲ್ಲಿ ನಡೆದ ಪರಿಸರದ ಮೇಲಿನ ದಾಳಿಯಿಂದ ಆಗಿದ್ದ ನಷ್ಟಕ್ಕಿಂತ ಸ್ವಾತಂತ್ರ್ಯಾನಂತರದ ಕೇವಲ 50 ವರ್ಷಗಳಲ್ಲಿ ಆದ ನಷ್ಟ ಹೆಚ್ಚು. ಅದರ ಸಿಂಹಪಾಲು ನೀರಾವರಿ ಯೋಜನೆಗಳಿಗೆ ಸಲ್ಲುತ್ತದೆ.
ಇದರ ಅರಿವು ಅಣೆಕಟ್ಟುಗಳ ಪಕ್ಷಪಾತಿಯಾಗಿದ್ದ ಭಾರತದ ಮೊದಲ ಪ್ರಧಾನಿ ನೆಹರೂಗೆ ತಡವಾಗಿ ಅವರ ಕೊನೆಯ ದಿನಗಳಲ್ಲಿ ಆಗಿತ್ತು. ಅಣೆಕಟ್ಟುಗಳೇ ದೇಶದ ಪಾಲಿನ ಗುಡಿ-ಗೋಪುರಗಳು ಎಂದಿದ್ದ ಅವರು, ಸಂಸತ್ತಿನಲ್ಲೇ ಬೃಹತ್ ಅಣೆಕಟ್ಟುಗಳ ಬಗ್ಗೆ ಮರುಚಿಂತನೆ ನಡೆಸುವುದಾಗಿ ಹೇಳಿದ್ದರು. ವಿಶೇಷವೆಂದರೆ ಅಂದಿನ ಭಾರತದ ಆಪ್ತನಾಗಿದ್ದ ರಷ್ಯಾ ಸಹ ಇದೇ ಕಾಲಕ್ಕೆ ಇಂಥದ್ದೇ (ವೋಲ್ಗಾ ಅಣೆಕಟ್ಟು ಸಮರ್ಪಣೆ ವೇಳೆ ಅಂದಿನ ಪ್ರಧಾನ ಕಾರ್ಯದರ್ಶಿ ನಿಕಿತಾ ಕೃಶ್ನೇವ್ ಹೇಳಿಕೆ) ನಿಲುವನ್ನು ತಳೆದಿತ್ತು. ಅಣೆಕಟ್ಟುಗಳ ಪ್ರಯೋಜನಕ್ಕಿಂತ ಅದರಿಂದಾಗುವ ನಿಸರ್ಗದ ನಾಶವೇ ಹೆಚ್ಚು ಎಂಬ ಅವತ್ತಿನ ಎರಡೂ ದೇಶಗಳ ನಾಯಕರ ನಿಲುವು ಇವತ್ತಿಗೂ ಅನುಷ್ಠಾನಗೊಳ್ಳದಿರುವುದು ದುರಂತ. ಜೀವನದಿಗಳು ಸಾಯುತ್ತಲೇ ಇವೆ. ಮನುಕುಲ ಮೈಮರೆತಿದೆ.

- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com