ದೇಶವಾಸಿಗಳನ್ನು ಏಕಸೂತ್ರದಲ್ಲಿ ಬಂಧಿಸಿರುವ ದಸರೆ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಕಾವೇರಿಯಿಂದ ಗಂಗಾತಟದವರೆಗೆ, ವಿಶಾಲ ಭಾರತದಲ್ಲಿ ಕಾಣುವ ವಿವಿಧ ಭಾಷೆಗಳ ವಿವಿಧ ವೇಷ-ಭೂಷಣಗಳ ಜನರನ್ನು ಏಕ ಸೂತ್ರದಲ್ಲಿ ಬಂಧಿಸಿರುವುದು ನಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗಳು. ಕಥೆ ಹೇಳುವ ಪರಂಪರೆ ನಮ್ಮ ದೇಶದ ಸಂಸ್ಕೃತಿಯ ಒಂದು ವೈಶಿಷ್ಟ್ಯ. ಇಂದಿನಂತೆ ಸಂಚಾರ ಸೌಲಭ್ಯಗಳ್ಯಾವುವೂ ಇಲ್ಲದ ಕಾಲದಲ್ಲಿ ಚಿಕ್ಕ ದೊಡ್ಡ ಊರುಗಳಿಗೆ ಹಾಗೂ ಕಾಡುಗಳಲ್ಲಿದ್ದ ವಸತಿ ಸಮುಚ್ಚಯಗಳಿಗೆ ನಿರಂತರವಾಗಿ ಸಂಚರಿಸುತ್ತಾ ರಾಮಾಯಣ, ಮಹಾಭಾರತ ಮುಂತಾದ ಗ್ರಂಥಗಳ ಕಥೆಗಳನ್ನು ಹೇಳುತ್ತಿದ್ದ ಪುರಾಣಿಕರ ಪಡೆಗಳು ಪ್ರಸಿದ್ಧವಾಗಿದ್ದವು. ಬಹುತೇಕ ಕಾಲುನಡಿಗೆಯಲ್ಲಿಯೇ ಸಂಚರಿಸಿ ಜ್ಞಾನ ಪ್ರಸಾರ ಮಾಡಿದ ಆಧ್ಯಾತ್ಮ ಗುರು ಪರಂಪರೆಯೇ ನಮ್ಮ ಮುಂದಿದೆ. ಹಾಗೆಯೇ, ಯಾತ್ರಿಕರು, ವ್ಯಾಪಾರಿಗಳಿಂದಾಗಿ ದೇಶದ ಉದ್ದಗಲಕ್ಕೂ ಹರಡಿ ಹಲವು ನೂರು ವರುಷಗಳಿಂದಲೂ ನಡೆದು ಬಂದಿರುವ ಪಾರಂಪರಿಕ ಉತ್ಸವಗಳ ಮೂಲ ನಮ್ಮ ರಾಮಾಯಣ, ಮಹಾಭಾರತ, ಭಾಗವತ, ಪುರಾಣ ಗ್ರಂಥಗಳೊಂದಿಗೆ ಹಾಸು ಹೊಕ್ಕಾಗಿರುವುದು ಕಾಣುತ್ತದೆ. ಈ ಗ್ರಂಥಗಳ ನಾಯಕ-ನಾಯಕಿಯರ ನಿಜ ಜೀವನದ ಘಟನೆಗಳೇ ನಾವಿಂದು ಆಚರಿಸುತ್ತಿರುವ ದೀಪಾವಳಿ, ರಾಮ ನವಮಿ, ಕೃಷ್ಣ ಜನ್ಮಾಷ್ಟಮಿ, ದಸರ ಮುಂತಾದ ಹಬ್ಬಗಳಿಗೆ ಹಾಗೂ ಉತ್ಸವಗಳಿಗೆ ಮೂಲ ಪ್ರೇರಣೆ.
ಮೂಲ ಆಶಯ ಒಂದೇ ಆದರೂ ನಮ್ಮ ದೇಶದ ಬೇರೆ ಬೇರೆ ಪ್ರದೇಶಗಳ/ರಾಜ್ಯಗಳ ಆಚರಣೆಯಲ್ಲಿ ಹಲವು ವೈವಿಧ್ಯಗಳು ತೋರುವಂತೆ, ವೈಯಕ್ತಿಕ ನೆಲೆಯಲ್ಲಿ ಮನೆಗಳಲ್ಲಿ ನಡೆಯುವ ಹಬ್ಬಗಳ ಆಚರಣೆಗಳಿಗೂ ಹಾಗೂ ಸಾಮೂಹಿಕವಾಗಿ ಆಚರಿಸುವ ಉತ್ಸವಗಳಿಗೂ ಕೆಲವು ವ್ಯತ್ಯಯಗಳು ಕಾಣುತ್ತವೆ. ನಾವಿಲ್ಲಿ ನಾಡಹಬ್ಬ ಎಂದು ಸಂಭ್ರಮಿಸುವ ದಸರ ಉತ್ಸವ ನವರಾತ್ರಿ ಎಂದೂ ಪ್ರಸಿದ್ಧ. ಎಲ್ಲೆಡೆಯೂ ನಡೆಯುವ ದೇವಿಯ ಆರಾಧನೆಯೊಂದಿಗೆ ರಾಜ ಮಹಾರಾಜರ ಯುದ್ಧಯಾತ್ರೆಗಳ ಇತಿಹಾಸವೂ ದಸರೆಯಲ್ಲಿ ಸೇರಿಕೊಂಡು ಬಂದಿದೆ. ನಮ್ಮ ದೇಶದ ದಕ್ಷಿಣ ಪ್ರದೇಶಗಳಲ್ಲಿ ಮಹಾಭಾರತದ ಗೋಗ್ರಹಣದ ಸಂದರ್ಭದಲ್ಲಿ ಅರ್ಜುನ ವಿಜಯ ಯಾತ್ರೆಗೆ (ಯುದ್ಧಕ್ಕೆ) ಹೊರಡುವ ದಿನದೊಂದಿಗೆ ಸೇರಿರುವ ವಿಜಯ ದಶಮಿ, ಉತ್ತರ ಪ್ರದೇಶಗಳಲ್ಲಿ ರಾವಣನ ಮೇಲೆ ರಾಮ ಸಾಧಿಸಿದ ವಿಜಯದ ದಿನ ಎಂಬ, ರಾವಣವಧೆಯ ನಂತರ ಅಯೋಧ್ಯೆಗೆ ಮರಳಿ ಬಂದ ರಾಮನ ಪಟ್ಟಾಭಿಷೇಕವಾದ ದಿನ ಎಂಬ ಸಂಭ್ರಮದ ಆಚರಣೆ ಕಂಡುಬರುತ್ತದೆ. ನಾವಿಲ್ಲಿ ಮನೆಗಳಲ್ಲಿ ಗೊಂಬೆಗಳನ್ನು ಅಲಂಕರಿಸಿ, ಕೋಲಾಟ ಮುಂತಾದ ಉತ್ಸವಗಳಿಂದ ಸಂಭ್ರಮಿಸಿದರೆ, ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ದಾಂಡಿಯಾ-ಗಾರ್ಬಾ ನೃತ್ಯಗಳಿಂದ ಕೃಷ್ಣನ ಗುಣಗಾನ ನಡೆಯುತ್ತದೆ.
ದುರುಳ ದಾನವ ಮಹಿಷಾಸುರನ ವಧೆ ಮಾಡಲೆಂದೇ ಭೂಮಿಯಲ್ಲಿ ಪ್ರಕಟವಾದ ಪರಶಿವನ ಮಡದಿ ಮೈಸೂರಿನಲ್ಲಿ ಚಾಮುಂಡೇಶ್ವರಿ ಎಂದು ಪೂಜೆಗೊಂಡರೆ, ದೂರದ ಬಂಗಾಳದ ನವರಾತ್ರಿ ಉತ್ಸವದಲ್ಲಿ ದುರ್ಗೆಯಾಗಿ ವಿಜೃಂಭಿಸುತ್ತಾಳೆ. ಅವಳ ಬೃಹತ್ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನಗಳು ಪೂಜೆ ಸಲ್ಲಿಸಿ ನಂತರ ದಶಮಿಯ ದಿನದಂದು ನೀರಿನಲ್ಲಿ ವಿಸರ್ಜಿಸುತ್ತಾರೆ. ಜಮ್ಮು ಕಾಶ್ಮೀರಗಳಲ್ಲಿ ಒಂಬತ್ತು ದಿನಗಳು ಉಪವಾಸವಿದ್ದು, ಖೇರ್ ಭವಾನಿ ಎಂದು ದುರ್ಗಾರಾಧನೆ ನಡೆಸುತ್ತಾರೆ. ಅಲ್ಲಿನ ವೈಷ್ಣೋ ದೇವಿಗೆ ನವರಾತ್ರಿಯ ವಿಶೇಷ ಪೂಜೆ ನಡೆಯುತ್ತದೆ. ಪಂಜಾಬಿನಲ್ಲಿ ಏಳು ದಿನಗಳ ದೇವತಾರಾಧನೆಯ ನಂತರ ದುರ್ಗೆಯನ್ನು ಪ್ರತಿನಿಧಿಸುವ ಕುಮಾರಿಯರ ಪೂಜೆ ಮಾಡುತ್ತಾರೆ. ಹಿಮಾಚಲ ಪ್ರದೇಶದ ಕುಲು ಕಣಿವೆಯಲ್ಲಿ ಇದು ಬೆಟ್ಟದ ಜನರು ಆಚರಿಸುವ ಗ್ರಾಮೋತ್ಸವ.
ಶಕ್ತಿಪೂಜೆಯ ಮೂಲ ಋಗ್ವೇದದಲ್ಲಿಯೇ ಕಾಣುತ್ತದೆ. ಸರಸ್ವತಿ ನದಿತೀರದಲ್ಲಿ ಪಲ್ಲವಿಸಿದ ವೇದ ಸಂಸ್ಕೃತಿಯಲ್ಲಿ ಸರಸ್ವತಿ ಅತ್ಯುನ್ನತ ದೇವಿ (ದೇವಿತಮೇ). ಬುದ್ಧಿಶಕ್ತಿಯನ್ನು ಕೊಡುವ, ಒಳ್ಳೆಯ ಆಲೋಚನೆಗಳನ್ನು ಪ್ರೇರೇಪಿಸುವ ಅವಳು ಎಲ್ಲಾ ಪ್ರಕಾರದ ಜ್ಞಾನದ ಅಧಿದೇವತೆ (ಚೋದಯಿತ್ರೀ ಸೂನೃತಾನಾಂ.. ಪ್ರಚೇತಯತಿ ಕೇತುನಾ ಋ:1.3.12). ಇಂದು ಕಾಣುವ ಮಹಾನದಿ ಗಂಗೆಗಿಂತಲೂ ಹತ್ತುಪಟ್ಟು ಬೃಹತ್ತಾಗಿ ಹರಿಯುತ್ತಿದ್ದ ನದಿಯನ್ನೂ ದೇವಿ ಸರಸ್ವತಿ ಎಂದು ಕರೆದು ವೇದಮಂತ್ರಗಳಲ್ಲಿ, ಅತ್ಯಂತ ಬೃಹತ್ತಾದ ನದಿ ಅಂಬಿತಮೇ ಎಂದೂ ವರ್ಣಿಸುತ್ತಾರೆ. ಜೀವದಾಯಿನಿಯಾದ ಅವಳು ಅವರಿಗೆ ಸಂಪತ್ತನ್ನು ಕೊಡುವ ಲಕ್ಷ್ಮಿ ಸ್ವರೂಪಳಾಗಿದ್ದಾಳೆ. ಈಗ ಕೈಯಲ್ಲಿ ಪುಸ್ತಕ ಹಿಡಿದು ವೀಣೆ ನುಡಿಸುವ ಶಾಂತರೂಪಿ ಸರಸ್ವತಿಯ ಚಿತ್ರ ಕಾಣುವುದಾದರೂ ಋಗ್ವೇದದಲ್ಲಿ, ವೃತ್ರಘ್ನಿ-ವೃತ್ರಾಸುರನ ವಧೆಮಾಡಿದವಳು (ಋ: 6.61.7) ಎಂಬ ಅವಳ ಶಕ್ತಿ ಸ್ವರೂಪ ಕಾಣಿಸುತ್ತದೆ.
ಸರಸ್ವತಿ ದೇವಿಯ ಆರಾಧನೆ ಭಾರತದಲ್ಲಷ್ಟೇ ಅಲ್ಲದೆ ಹಲವಾರು ದೇಶಗಳಲ್ಲಿ ನಡೆಯುತ್ತದೆ. ವಿ, ವಾಣಿಯ ದೇವತೆ, ಮಧುರ ಸ್ವರದ ದೇವತೆ, ಸೌಂದರ್ಯದ ದೇವತೆ ಎಂಬ ಅರ್ಥ ಕೊಡುವ ಬೆಂಜಟೈನ್, ಬೆನ್ಟೆನ್, ಮೈಯೋ ಟೆನ್, ಡೈ ಬೆನ್ಝಟೆನ್ ಎಂಬ ವಿವಿಧ ಹೆಸರುಗಳಿಂದ ಜಪಾನಿನಲ್ಲಿ ಸರಸ್ವತಿ ದೇವಿ ಪೂಜೆಗೊಳ್ಳೂತ್ತಾಳೆ. ಎಂಟು ಕೈಗಳಲ್ಲಿ ವಿವಿಧ ಶಸ್ತ್ರಾಸ್ತ್ರಗಳನ್ನು ಹಿಡಿದು ಶಕ್ತಿಸ್ವರೂಪದಲ್ಲಿಯೂ ಅಲ್ಲಿ ಕಾಣುತ್ತಾಳೆ. ಇಂಡೋನೇಷಿಯಾದ ಪ್ರಮುಖ ಚೌಕಗಳಲ್ಲಿ ಕಂಗೊಳಿಸುವ ದೇವಾಧಿದೇವತೆಗಳಲ್ಲಿ ಸರಸ್ವತಿಯೂ ಕಾಣುತ್ತಾಳೆ.
ಒಟ್ಟಿನಲ್ಲಿ ಎಲ್ಲೆಡೆಯೂ ನಡೆಯುವ ಶಕ್ತಿದೇವತೆಯ ವಿಶೇಷ ಆರಾಧನೆಯೇ ನವರಾತ್ರಿಯ ವೈಶಿಷ್ಟ್ಯ. ದೇವಿಮಹಾತ್ಮೆ ಹಾಗೂ ಕಾಳಿಕಾಪುರಾಣಗಳ ಆಧಾರದಂತೆ, ಶಕ್ತಿ, ಐಶ್ವರ್ಯ, ಜ್ಞಾನಗಳನ್ನು ಪಡೆಯಲು ನವರಾತ್ರಿಯ ಮೊದಲ ಮೂರು ರಾತ್ರಿಗಳು ಮಹಾಕಾಳಿ, ನಂತರ ಮಹಾಲಕ್ಷ್ಮಿ ಹಾಗೂ ಕೊನೆಯ ಮೂರು ರಾತ್ರಿಗಳು ಮಹಾ ಸರಸ್ವತಿಗೆ ವಿಶೇಷ ಆರಾಧನೆ ನಡೆಯುತ್ತದೆ. ಬೆಟ್ಟದಲ್ಲಿ ನೆಲೆಗೊಂಡಿರುವ ಚಾಮುಂಡೇಶ್ವರಿಗೆ ಮೈಸೂರಿನಲ್ಲಿ ನಡೆಯುವ ಆರಾಧನೆ ಹಾಗೂ ವಿವಿಧ ಉತ್ಸವಗಳು ವೈಭವದ ನಾಡಹಬ್ಬವಾಗಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ. ವಿಜಯನಗರದ ಆಳರಸರಿಂದ ಇಲ್ಲಿಯವರೆಗೆ ಹರಿದು ಬಂದಿರುವ ದಸರೆಯ ಸಾಂಪ್ರದಾಯಿಕ ಆಚರಣೆಗಳು ಸ್ವಾತಂತ್ರ್ಯಪೂರ್ವದಿಂದಲೂ ದೇಶ ವಿದೇಶಗಳಿಂದ ಬರುವ ಜನರನ್ನು ಕೈಬೀಸಿ ಕರೆಯುತ್ತಿದೆ. ರಾಜನೇ ಅಂಬಾರಿಯಲ್ಲಿ ಬರುವ ಹಿಂದಿನ ರಾಜವೈಭವದ ಬದಲಾಗಿ ಹಲವಾರು ಹೊಸಬಗೆಯ ಸಂಭ್ರಮಗಳಿಂದ ಮೈಸೂರು ದಸರೆ ಇಂದು ಸಜ್ಜಾಗಿದೆ. ದುಷ್ಟಶಕ್ತಿಯನ್ನು ದಮನಮಾಡಿ ಸುಖ ಶಾಂತಿಗಳನ್ನು ತರುವ ಶಕ್ತಿದೇವತೆಯ ಒಂಬತ್ತು ದಿನಗಳ ಆರಾಧನೆಯ ನಂತರ ಹತ್ತನೆಯ ದಿನ ಆನೆಯ ಮೇಲಿನ ಅಂಬಾರಿಯಲ್ಲಿ ವಿಜೃಂಭಿಸುವ ಚಾಮುಂಡೇಶ್ವರಿಯ ಉತ್ಸವ, ಜಂಬೂ ಸವಾರಿ ಬೇರೆಲ್ಲಿಯೂ ಕಾಣದ ಸುಂದರ ನೋಟ.
- ಡಾ. ಜಯಂತಿ ಮನೋಹರ್
ವೇದ ಸಂಸ್ಕೃತಿ ಸಂಶೋಧಕರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


