ಅಂಕಣಗಳು

ಮಳೆನೀರು ಕೊಯ್ಲಿಗೆ ಮಾದರಿಯಾಗಲಿ ಮೊಹೆಂಜೋದಾರೋ

Published On :

ಪ್ರಾಚೀನ ಮೊಹೆಂಜೋದಾರೋ ನಾಗರಿಕತೆಯ ಕಾಲದಲ್ಲಿದ್ದ ಮಳೆ ನೀರು ಕೊಯ್ಲು ತಂತ್ರಜ್ಞಾನ ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ಸವಾಲೊಡ್ಡುವಂತಿರುವ ಯಶೋಗಾಥೆಯಿದು.
ಇಂದು: ಇದು ಮಳೆಗಾಲ. ಯಾರ ಹಂಗಿಲ್ಲದೆ ನಮ್ಮ ಮನೆಯಂಗಳದಲ್ಲಿ ಮನೆಯ ಛಾವಣಿ ಮೇಲೆ, ಎಲ್ಲೆಂದರಲ್ಲಿ ಮಳೆರಾಯ ಭೂಮಿಗಿಳಿದು ಬರುತ್ತಾನೆ. ನಮ್ಮ ಕಣ್ಣೆದುರಿಗೆ ಮಳೆನೀರು ಹರಿದು ಹೋಗುತ್ತದೆ. ಒಂದಷ್ಟು ನೀರು ನೆಲದಲ್ಲಿ ಇಂಗುತ್ತದೆ. ಒಂದಷ್ಟು ನೀರು ಆವಿಯಾಗಿ ಮತ್ತೆ ಆಕಾಶ ಸೇರುತ್ತದೆ. ಉಳಿದ ನೀರು ಹಳ್ಳಕೊಳ್ಳದಲ್ಲಿ ಹರಿದು ನದಿ ಸೇರುತ್ತದೆ, ನದಿ ಸಮುದ್ರ ಸೇರುತ್ತದೆ.
ಮಳೆ ನೀರು ಸಂಗ್ರಹ ಮತ್ತು ಬಳಕೆಗೆ ನಾವು ಯಾರ ಅಪ್ಪಣೆಗೂ ಕಾಯಬೇಕಿಲ್ಲ. ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದ ಪಕ್ಕದ ಹಿನ್ನೀರಿನ ದಡದಲ್ಲಿರುವ ಒಂದು ಪುಟ್ಟ ಗ್ರಾಮ ಗೆಂಡತ್ತೂರು. ಈ ಗ್ರಾಮದಲ್ಲಿನ ಜನ ಜಲಾಶಯದ ನೀರು ಕುಡಿದು ವಿಷಮಶೀತ ಜ್ವರ, ಕೆಮ್ಮು, ನೆಗಡಿ, ಚರ್ಮರೋಗ ಇತ್ಯಾದಿಗಳಿಂದ ಬಳಲಿದ್ದರು. ಕೊನೆಗೆ ಇವರ ನೆರವಿಗೆ ಬಂದಿದ್ದು ಛಾವಣಿ ಮಳೆ ನೀರು ಸದ್ಭಳಕೆ ಕಾರ್ಯಕ್ರಮ.
ಮೈಸೂರು ಜಿಲ್ಲಾ ಪಂಚಾಯಿತಿ ಮತ್ತು ಮೈರಾಡಾ ಸಂಸ್ಥೆ ಇಡೀ ಹಳ್ಳಿಗೆ ಛಾವಣಿ ಮಳೆ ನೀರು ಸದ್ಬಳಕೆಗೆ ಕಾರ್ಯ ಯೋಜನೆ ರೂಪಿಸಿತು. ಗೆಂಡತ್ತೂರಿನ ಹಳ್ಳಿಗರು ತಮ್ಮ ಕಾಣಿಕೆ ನೀಡಿದರು. ಇದರ ಜೊತೆಗೆ ಗ್ರಾಮೀಣ ಭಾರತದ ಸೊಬಗನ್ನು ಅರಿಯಲು ಬಂದಿದ್ದ ವಿದೇಶಿ ಮಹಿಳಾ ವಿದ್ಯಾರ್ಥಿಗಳ ತಂಡವೊಂದು ಇವರ ಜೊತೆ ಕೈಜೋಡಿಸಿತು. ಇಂದು ಇಡೀ ಹಳ್ಳಿಯ ಮನೆ ಛಾವಣಿಗಳು ಮಳೆರಾಯ ಬರುವುದನ್ನು ಕಾದು ಕೂತಿವೆ. ಮಳೆ ಬಿದ್ದ ಕೂಡಲೆ ಛಾವಣಿಯಿಂದ ಕೊಳವೆಗಳಲ್ಲಿ ಹರಿದು ಬರುವ ನೀರು, ಮರಳು ಶೋಧಕದಲ್ಲಿ ಶುದ್ಧಗೊಂಡು ಸುಭದ್ರವಾದ ಟ್ಯಾಂಕು ಸೇರಿಬಿಡುತ್ತದೆ.
ಇಂದು ಗೆಂಡತ್ತೂರಿನ ಹೆಣ್ಣುಮಕ್ಕಳು ಮಳೆಗಾಲದ ಮೂರು ತಿಂಗಳಲ್ಲಿ ಯಾವುದೇ ತಾಪತ್ರಯವಿಲ್ಲದೆ ಮನೆಯಂಗಳದಲ್ಲೇ ದೊರೆಯುವ ಮಳೆ ನೀರನ್ನು ನೇರವಾಗಿ ಬಳಸಿಕೊಳ್ಳುತ್ತಾರೆ. ಮಳೆಗಾಲದ ನಂತರ ಟ್ಯಾಂಕಿನಲ್ಲಿ ಸಂಗ್ರಹಗೊಂಡ ಮಳೆನೀರು ನಂತರದ ಮೂರು ತಿಂಗಳಿಗೆ ಒಟ್ಟಾರೆ ಉಪಯೋಗಕ್ಕೆ ಬರುತ್ತದೆ. ಒಟ್ಟು ಆರು ತಿಂಗಳ ಕಾಲ ಶುದ್ಧ ಮಳೆ ನೀರನ್ನು ಕುಡಿಯುವುದಕ್ಕೆ ಮತ್ತು ದಿನಬಳಕೆಗೆ ಬಳಸುತ್ತಾ ಹಂಗಿಲ್ಲದ ಅರಮನೆಯಲ್ಲಿದ್ದಾರೆ.
ಅಂದು: ಓದುಗರ ಗಮನಕ್ಕೆ ಮತ್ತೊಂದು ಸೋಜಿಗದ ಸಂಗತಿ ಇದೆ. ಅದು ಪ್ರಾಚೀನ ನಾಗರಿಕತೆಗಳಾದ ಹರಪ್ಪಾ ಮತ್ತು ಮೊಹೆಂಜೋದಾರೋ ನಾಗರಿಕತೆಯ ಕಾಲದಲ್ಲಿನ ಸುವ್ಯವಸ್ಥಿತವಾಗಿದ್ದ ನೀರಿನ ಮೂಲಗಳ ಬಳಕೆ ಹಾಗೂ ನಿರ್ವಹಣೆ ಈಗಲೂ ಕುತೂಹಲ ಹುಟ್ಟಿಸುತ್ತಿದೆ. ಅವರ ತಂತ್ರಜ್ಞಾನದ ಬಗ್ಗೆ ಮೆಚ್ಚುಗೆಯಾಗುತ್ತದೆ.
ಪ್ರಾಚೀನ ಮೊಹೆಂಜೋದಾರೋದಲ್ಲಿ ಉತ್ಖನನ ಮಾಡಿದಾಗ ಇಂದಿಗೂ ಶ್ರೇಷ್ಠವೆನಿಸುವ ಮಾದರಿ ನೀರು ಸದ್ಬಳಕೆ ಮಾರ್ಗಗಳು ಗೋಚರವಾಗಿವೆ. ಎಲ್ಲ ಕಾರ್ಯದಲ್ಲೂ ಅಚ್ಚುಕಟ್ಟುತನ, ಯೋಜನಾ ಬದ್ಧತೆ ಎದ್ದು ಕಾಣುತ್ತದೆ. ಇಂದಿನ ನಮ್ಮ ನಗರಾಭಿವೃದ್ಧಿಯ ಪಾಲಕರು ಇದನ್ನು ನೋಡಿ ಕಲಿಯುವುದಿದೆ.
ಚಿತ್ರದಲ್ಲಿ ಕಾಣುತ್ತಿರುವುದು ಮೊಹೆಂಜೋದಾರೋ ನಾಗರಿಕತೆಯಲ್ಲಿನ ನಗರವೊಂದರಲ್ಲಿ ಕಂಡು ಬರುವ ಸಾರ್ವಜನಿಕ ಉಪಯೋಗಕ್ಕಿರುವ ಬಾವಿ. ಮುಖ್ಯರಸ್ತೆ ಬದಿಗೆ ಹೊಂದಿಕೊಂಡಂತೆ ಇರುವ ಈ ಬಾವಿ ಎಡ ಮತ್ತು ಬಲ ಭಾಗದಲ್ಲಿ ಗೋಡೆಗಳಿಗೆ ಹೊಂದಿಕೊಂಡಿದೆ. ಸುಭದ್ರವಾದ ಇಟ್ಟಿಗೆ ಗೋಡೆಗಳನ್ನು ಹೊಂದಿದ್ದು ನೀರು ಮಲಿನವಾಗುವುದನ್ನು ತಡೆಯುತ್ತಿದೆ.
ಉತ್ಖನನದ ಸ್ಥಳವನ್ನು ವೀಕ್ಷಿಸಲು ಬಂದ ಪ್ರವಾಸಿಗರು ಕುತೂಹಲದಿಂದ ತಮ್ಮ ಪೂರ್ವಿಕರ ಜ್ಞಾನದ ಮಹಿಮೆಗೆ ಬೆರಗಾಗಿ ಬಾವಿಯನ್ನು ಸ್ಪರ್ಶಿಸಿ ಪುಳಕಿತರಾಗುತ್ತಿದ್ದಾರೆ. ಇದು ಒಂದು ಸ್ಯಾಂಪಲ್ ಮಾತ್ರ. ಇಂತಹ ಹತ್ತು ಹಲವು ಜಲ ಸಂಪನ್ಮೂಲ ಮೂಲಗಳ ವ್ಯವಸ್ಥಿತ ಸದ್ಭಳಕೆಯನ್ನು ಇಲ್ಲಿ ನಾವು ಈಗಲೂ ಕಾಣಬಹುದು.
ಇಂದಿನ ಆಧುನಿಕ ನಗರ ನಿರ್ಮಾಪಕರು ಇಲ್ಲೊಂದು ಬಾರಿ ಕಣ್ಣಾಯಿಸಿ ಬಂದರೆ ನಷ್ಟವೇನೂ ಇಲ್ಲ. ಮಳೆ ಯಾವತ್ತೂ ವರವೇ.  
ಪ್ರಾಚೀನ ಜಲಸಂಪನ್ಮೂಲ ಸಂರಕ್ಷಣೆ ಹಾಗೂ ಸದ್ಭಳಕೆಯ ತಂತ್ರಜ್ಞಾನದ ಕಾರ್ಯವೈಖರಿ 21ನೇ ಶತಮಾನದ ನಾಗರಿಕತೆಯನ್ನು ಅಣಕಿಸುವಂತಿದೆ. ಜೀವಜಲ ಕಾಣೆಯಾಗುತ್ತಿದ್ದರೂ ಸರ್ಕಾರ ಹಾಗೂ ಜನ ಸಾಮಾನ್ಯರು ಜಲಸಂರಕ್ಷಣೆಯ ಹೊಣೆಗಾರಿಕೆಯನ್ನು ಸ್ವೀಕರಿಸದೆ ದಿವ್ಯ ನಿರ್ಲಕ್ಷ್ಯದಿಂದಿರುವುದು ಪ್ರಳಯದ ಮುನ್ಸೂಚನೆ ಎನಿಸುತ್ತಿದೆ. ಪ್ರತಿಯೊಬ್ಬರ ಮನೆಯ ಛಾವಣಿಯ ಮೇಲೆ ಮಳೆರಾಯ ಇವನು ಬಡವ ಇವನು ಬಲ್ಲಿದ ಎಂಬ ಭೇದಭಾವವಿಲ್ಲದೆ ಸುರಿಯುತ್ತಾನೆ.
ಈ ಮಳೆರಾಯನನ್ನು ಕೊಳವೆಗಳ ಮೂಲಕ ಮನೆಯಂಗಳಕ್ಕೆ ಕರೆದುಕೊಂಡರೆ ಮಳೆಗಾಲದ ಮೂರು ತಿಂಗಳು ನಂತರ ಸಂಗ್ರಹಿಸಿಟ್ಟ ಮಳೆ ನೀರನ್ನು ಮತ್ತೆ ಮೂರು ತಿಂಗಳು ಬಳಸಿಕೊಂಡಲ್ಲಿ ನಾಡಿನ ಪ್ರತಿಯೊಬ್ಬರ ಮನೆ ನೀರಿನ ವಿಷಯದಲ್ಲಿ ಹಂಗಿಲ್ಲದ ಅರಮನೆಯಾದೀತು. ಇದಕ್ಕೆ ಬೇಕಿರುವುದು ಕಾನೂನು ಅಲ್ಲ ಇಚ್ಛಾಶಕ್ತಿ ಮಾತ್ರ.

 ರಾಜು ಬಿ. ಕನ್ನಲಿ
ಸಂಪಾದಕರು, ಜಲ ಸಾಕ್ಷರತಾ ಮಾಸಿಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.