ಅಂಕಣಗಳು

ಭೂಮಾಪಕರಿಗೆ ಆಗಿರುವ ಅನ್ಯಾಯ ಸರಿಪಡಿಸೋರು ಯಾರು?

Published On :

ಮಾನ್ಯರೇ, 'ಕಾನೂನು ದುರ್ಬಳಕೆ -ಪ್ರಮಾದ'- ಸರ್ಕಾರದ ಕಂದಾಯ ಇಲಾಖೆಯಲ್ಲಿ ಸ್ವತಃ ಸರ್ಕಾರವೇ ಜಾರಿ ಮಾಡಿರುವ ಕಾನೂನು ನಿಯಮಾವಳಿಗಳು ಸ್ವತಃ ಸರ್ಕಾರವೇ ತೊಡಗಿಸಿಕೊಂಡಿರುವ ಪರವಾನಗಿ ಭೂಮಾಪಕರ ಸಮುದಾಯವನ್ನು ದುರ್ಬಳಕೆ ಮಾಡಿಕೊಂಡಂತಾಗಿದೆ. ಈ ಅನ್ಯಾಯದ ಪರಮಾಧಿಗೆ ಬಲಿಯಾಗಿರುವ ಪರವಾನಗಿ ಭೂಮಾಪಕರ ಅನ್ಯಾಯ ಸರಿಪಡಿಸಲು, ನ್ಯಾಯಯುತ ಬೇಡಿಕೆ ಈಡೇರಿಸಲು ಈ ಮನವಿ ಪತ್ರ.
ಕಾನೂನು ದುರ್ಬಳಕೆಯ ಮುಂದಾಲೋಚನೆಯ ದುರುದ್ದೇಶದಿಂದ, ರಾಜ್ಯದ ಭೂ ಮಾಪನ ಇಲಾಖೆ/ಸರ್ಕಾರ ನೇಮಕ ನಿಯಮಾವಳಿಗಳ ವಿಚಾರದಲ್ಲಿ ಊರ್ಜಿತವಲ್ಲದ ಕಾನೂನು ನಿಯಮಾವಳಿಗಳನ್ನು ಊರ್ಜಿತಗೊಳಿದೆ. ಈ ಮೂಲಕ ರಾಜ್ಯದಲ್ಲಿನ ಜೆ.ಓ.ಸಿ. ಸರ್ವೇಯಿಂಗ್ ಅಭ್ಯರ್ಥಿಗಳ ಸಮುದಾಯ, ಪರವಾನಗಿ ಭೂಮಾಪಕರ ಸಮುದಾಯ ಹಾಗೂ ಲ್ಯಾಂಡ್ ಅಂಡ್ ಸಿಟಿ ಸರ್ವೇ ಅಭ್ಯರ್ಥಿಗಳ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಸಿಐಡಿ/ಸಿಬಿಐ ತನಿಖೆಗೊಳಪಡಿಸಿದರೆ ದಾಖಲೆಗಳು ಸಿಗುತ್ತವೆ. ಇದರಿಂದಾದ ಪ್ರಮಾದವೇನೆಂದರೆ,  ಭೂಮಾಪನ ಇಲಾಖೆಯಲ್ಲಿನ ಭೂಮಾಪಕರ ನೇಮಕಾತಿಯಲ್ಲಿ ಅವಕಾಶ ವಂಚಿತರಾದರು.
ಕಾನೂನು ದುರ್ಬಳಕೆಯಿಂದ ಸರ್ಕಾರ ಪರವಾನಗಿ ನೀಡಿರುವ ಭೂಮಾಪಕರೇ ಪ್ರಮಾದಗಳಿಗೆ ಬಲಿಯಾಗಿದ್ದಾರೆ. ಇನ್ನು ಜನಸಾಮಾನ್ಯರ ಪಾಡೇನು? ಭವಿಷ್ಯದಲ್ಲಿನ ದುಷ್ಪರಿಣಾಮಗಳೇನು? ಅರ್ಹ, ದಕ್ಷ, ಪ್ರಾಮಾಣಿಕರಿಗೆ ಅನ್ಯಾಯವಾಗಿದೆ. ಇವರುಗಳ ಜೀವನದಲ್ಲಿ ಅನಾಹುತ, ದುರಂತಗಳು ಘಟಿಸಿವೆ. ಅನರ್ಹರಿಗೆ ಮಣೆ ಹಾಕಲಾಗಿದೆ. ಇಲಾಖೆಯಲ್ಲಿನ ನೇಮಕ ನಿಯಮಾವಳಿಗಳು/ಸುತ್ತೋಲೆಗಳು ಲಾಬಿಗೆ ಪೂರಕವಾಗಿವೆ. ಲಾಬಿಯ ತೂಕಕ್ಕನುಸಾರವಾಗಿ ಬದಲಾಗುತ್ತವೆ. ಇದರಿಂದ ಪ್ರಮಾದಕ್ಕೊಳಗಾಗಿರುವ ಸಮುದಾಯಗಳು ಮತ್ತು ಇಲಾಖೆ/ಸರ್ಕಾರ ನಡುವೆ ಶೀತಲ ಸಮರಗಳು ಉಂಟಾಗಿವೆ. ಹೀಗಾಗಿ ಭೂಮಾಪಕರು ಸತತ 3 ತಿಂಗಳಿನಿಂದ ಮುಷ್ಕರ ಮುಂದುವರೆದಿದೆ.

ಕಾನೂನು ದುರ್ಬಳಕೆ ಪ್ರಮಾದ(1): ಕಂದಾಯ ಇಲಾಖೆ ವ್ಯಾಪ್ತಿಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ವಿಭಾಗದಲ್ಲಿ 1998ರಲ್ಲಿ ಪರವಾನಗಿ ಭೂಮಾಪಕರ ಯೋಜನೆಯನ್ನು ಅನುಷ್ಠಾನಗೊಳಿಸಲು ನಿಯಮಾವಳಿ ರೂಪಿಸುವ ಸಮಯದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ. ಈ ಯೋಜನೆಯಡಿ ಕೆಲಸ ನಿರ್ವಹಿಸುವ ಭೂಮಾಪಕರ ಹಿತಕ್ಕನುಗುಣವಾದ ಒಂದೇ ಒಂದು ಉಲ್ಲೇಖವಿರುವುದಿಲ್ಲ. ಕೆಲಸ ನಿರ್ವಹಿಸುವವರು ಇಂದಿಗೂ ಜೀತದಾಳುಗಳಂತೆ ದುಡಿಯುತ್ತಿದ್ದಾರೆ.

ಕಾನೂನು ದುರ್ಬಳಕೆ ಪ್ರಮಾದ (2): ಪರವಾನಗಿ ಭೂಮಾಪಕರ ಯೋಜನೆಯು ಒಂದು ಅಸಮತೋಲನ ಯೋಜನೆ. ಇದನ್ನು ಮಾನವೀಯ ಮೌಲ್ಯಗಳಡಿ ಸಮತೋಲನ ಮಾಡಿ ಪ್ರಮಾದ ಸರಿಪಡಿಸುವ ಪ್ರಯತ್ನವನ್ನು ಮಾಡದೆ, ಕಾನೂನು ದುರ್ಬಳಕೆಯ ತಂತ್ರಗಾರಿಕೆ ಅಳವಡಿಸಿಕೊಳ್ಳಲಾಗಿದೆ. ಇಂತಹ ಮುಂದಾಲೋಚನೆಯಿಂದ (ದುರಾಲೋಚನೆ) 2009ರಲ್ಲಿ 'ವೃಂದ ಮತ್ತು ನೇಮಕಾತಿಗೆ' ತಿದ್ದುಪಡಿ ತರುವುದರ ಮೂಲಕ ಕಾನೂನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದರ ಮೂಲ ಉದ್ದೇಶ (ದುರುದ್ದೇಶ) ಪರವಾನಗಿ ಭೂಮಾಪಕರನ್ನು ಈ ಯೋಜನೆಯಲ್ಲಿಯೇ ಉಳಿಯುವಂತೆ ಮಾಡುವುದು.

ಈ ತಿದ್ದುಪಡಿಯಲ್ಲಿ, 1. ಭೂಮಾಪಕರ ಹುದ್ದೆಗೆ ಸೂಕ್ತ ವಿದ್ಯಾರ್ಹತೆಯಾದ ವೃತ್ತಿಪರ ಶಿಕ್ಷಣ ಕೋರ್ಸ್ ಆದ ಜೆ.ಓ.ಸಿ. ಸರ್ವೇಯಿಂಗ್, ಲ್ಯಾಂಡ್ ಅಂಡ್ ಸಿಟಿ ಸರ್ವೆ ಅರ್ಹತೆಯ ಅಭ್ಯರ್ಥಿಗಳನ್ನು ಹೊರಹಾಕಲಾಯಿತು. ಇವರಿಗೆ ಊರ್ಜಿತವಲ್ಲದ ಎರಡು ವರ್ಷದ ಅನುಭವ ಕೇಳಲಾಯಿತು. 2. ಪಿಯುಸಿ (ವಿಜ್ಞಾನ, ಗಣಿತದಲ್ಲಿ ಕನಿಷ್ಠ 60 ಅಂಕಗಳು) ಅಭ್ಯರ್ಥಿಗಳಿಗೆ ಆಹ್ವಾನ ನೀಡಿತು. ಇವರಿಗೆ ಅನುಭವ ಕೇಳಲಿಲ್ಲ. 3. ಡಿಪ್ಲೊಮಾ ಮತ್ತು ಬಿ.ಇ. ಪದವೀಧರರಿಗೆ ಆಹ್ವಾನ ನೀಡಿತು. ಇವರಿಂದಲೂ ಅನುಭವ ಬಯಸಲಿಲ್ಲ. ಈ ಪ್ರಕಾರ ಭೂಮಾಪಕರಿಗಿದ್ದ ನೇಮಕ ಅವಕಾಶ ಹಂಚಿ ಹೋಗುವಂತೆ ಮಾಡಿತು. ಹುನ್ನಾರದ ಮಾರ್ಗವಾದ ಈ ಕಾನೂನು ದುರ್ಬಳಕೆಯಿಂದ ಅರ್ಹ, ದಕ್ಷ ಭೂಮಾಪಕರು ಇಲಾಖೆಯ ಹುದ್ದೆಯ ದಾರಿಗೆ ಮುಳ್ಳಿನ ಬೇಲಿ ಹಾಕಿತು.

ಕಾನೂನು-ದುರ್ಬಳಕೆ-ಅನ್ಯಾಯದ ಪರಮಾವಧಿ (3): 1834 ಮಂದಿ ಭೂಮಾಪಕರ ನೇಮಕ ಪ್ರಕ್ರಿಯೆಯಲ್ಲೂ ಸಹ ಪರವಾನಗಿ ಭೂಮಾಪಕರುಗಳಿಗೆ ಅವಕಾಶಗಳು ಹಂಚಿ ಹೋಗುವಂತೆ ಮಾಡಲಾಗಿದೆ. ಈ ನೇಮಕ ಪ್ರಕ್ರಿಯೆಯಲ್ಲಿ ಸುಮಾರು 147 ಅನರ್ಹ ಅಭ್ಯರ್ಥಿಗಳು ಆಯ್ಕೆ ಪ್ರಾಧಿಕಾರಕ್ಕೆ ಸುಳ್ಳು ಮಾಹಿತಿ ನೀಡಿ ಎಲ್ಲಾ ಹಂತಗಳನ್ನು ದಾಟಿ ಬಂದಿರುತ್ತಾರೆ. ಅಂತಿಮವಾಗಿ ಆಯ್ಕೆಯ ಸಮಯದಲ್ಲಿ ಇವರನ್ನು ಆಯ್ಕೆ ಪ್ರಾಧಿಕಾರವು ತಿರಸ್ಕರಿಸಿರುತ್ತದೆ. ಇಂತಹವರನ್ನು ನೇಮಕ ಮಾಡಿಕೊಂಡರೆ ಕಂದಾಯ ಇಲಾಖೆಯ ದಾಖಲೆಗಳು ಇನ್ನಾವ ರೀತಿಯಲ್ಲಿ ಬದಲಾಗಬಹುದು? ಇಂತಹವರಿಗಾಗಿಯೇ ಡ್ರಾಫ್ಟ್ ರೂಲನ್ನು ತಯಾರಿಸಿ ಅದೂ ಈ ಹಿಂದಿನ ಎರಡು ವರ್ಷಗಳ ಅನುಕೂಲಕರ ದಿನಾಂಕಕ್ಕೆ ಅನ್ವಯವಾಗುವಂತೆ ಜಾರಿ ಮಾಡಿದೆ. ಸರ್ಕಾರದ ಪ್ರಕಾರ, ಇಂತಹ ಅನರ್ಹ ಅಭ್ಯರ್ಥಿಗಳಿಗೆ ನೇಮಕಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಪ್ರಮಾದಕ್ಕೊಳಗಾದ ಪಂಗಡಗಳಿಗೆ ಮಾತ್ರ ಕಾನೂನಿನಲ್ಲಿ ಅವಕಾಶವಿಲ್ಲ!  ಈ ಪ್ರಕಾರವಾಗಿ ಕಾನೂನು ದುರ್ಬಳಕೆಯ ಮೂಲಕ ಇಲಾಖೆಗೆ ಅಗತ್ಯವಿರುವ ಭೂಮಾಪಕರ ನೇಮಕದಲ್ಲಿ ಪರವಾನಗಿ ಭೂಮಾಪಕರನ್ನು ಗುಲಾಮರಂತೆ ಬದಿಗೊತ್ತಿ ತಮಗಿಷ್ಟ ಬಂದಂತೆ ಈ ಮೇಲೆ ತಿಳಿಸಿದಂತೆ ಕಾನೂನು ದುರ್ಬಳಕೆ ಮಾಡಿಕೊಂಡು ಪರವಾನಗಿ ಭೂಮಾಪಕರನ್ನು ಅವಕಾಶ ವಂಚಿತರನ್ನಾಗಿ ಮಾಡಿರುವುದರಿಂದ ಅನ್ಯ ಮಾರ್ಗವಿಲ್ಲದೆ ಮುಷ್ಕರ ಅನಿವಾರ್ಯವಾಗಿದೆ. ಮುಷ್ಕರವು ಇಲಾಖೆಯ ಅನಾರೋಗ್ಯಕರ ಬೆಳವಣಿಗೆ ಪ್ರತಿಬಿಂಬಿಸುತ್ತದೆ. ದಿನಾಂಕ 23.09.2013ರಂದು ಪರವಾನಗಿ ಭೂಮಾಪಕನಾದ ಮಧುಸೂಧನ ಅವರು ಈ ಸರ್ಕಾರ ಮತ್ತು ಕಾನೂನು ದುರ್ಬಳಕೆ ಪ್ರಶ್ನಿಸಲು ಒಂದು ವರ್ಷದ ಮಗುವೊಂದನ್ನು ಮಾತ್ರ ಉಳಿಸಿ ಪತ್ನಿಯೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಜಾಪ್ರಭುತ್ವದ ಈ ಸಮಾಜದಲ್ಲಿ ಈ ದುರಂತದ ಹೊಣೆಯನ್ನು ಯಾರು ಹೊರುತ್ತಾರೆ?
ಸರ್ಕಾರವೇ ಅನುಷ್ಠಾನಗೊಳಿಸಿರುವ ಪರವಾನಗಿ ಭೂಮಾಪಕರ ಯೋಜನೆಯ ಕಂದಾಯ ಇಲಾಖೆಯ ಒಂದು ಅಂಗವಾಗಿ ರೈತರ/ಭೂಮಿ ಕೆಲಸವನ್ನು ಮಾಡುತ್ತಿದೆ. ಈ ಪರವಾನಗಿ ಭೂಮಾಪಕರ ಯೋಜನೆಯ ಉಸ್ತುವಾರಿಯನ್ನು ಕಂದಾಯ ಇಲಾಖೆಯೇ ಮಾಡುತ್ತಿದೆ. ಪರವಾನಗಿ ಭೂಮಾಪಕರು ಸತತ 12 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಮಾಡುತ್ತಾ ಬಂದಿರುತ್ತಾರೆ. ಇಂತಹುದರಲ್ಲಿ ಈ ಯೋಜನೆಯಡಿ ಕೆಲಸ ಮಾಡುವವರನ್ನು ಖಾಸಗಿಯವರು ಎಂದು ಬಿಂಬಿಸಿರುವುದು ಊರ್ಜಿತವಲ್ಲ. ಒಂದು ತಪ್ಪನ್ನು ಮುಚ್ಚಿಡಲು ಮತ್ತೆರಡು ತಪ್ಪು ಎಂಬಂತೆ ಪರವಾನಗಿ ಭೂಮಾಪಕರ ಸಮುದಾಯಕ್ಕೆ ಅನ್ಯಾಯವೆಸಗುವ ನಿಯಮಾವಳಿಗಳು ಮತ್ತು ಸುತ್ತೋಲೆಗಳನ್ನು ಜಾರಿ ಮಾಡುತ್ತಾ ತನ್ನ ವಿಕಟ ರೂಪ ಪ್ರದರ್ಶಿಸುತ್ತಾ ಬಂದಿದೆ.

ಪರವಾನಗಿ ಭೂಮಾಪಕರುಗಳ ನೈಜ ಸ್ಥಿತಿ ಅವಲೋಕಿಸಿ-

ಉಲ್ಲೇಖ-1: 1998ರಲ್ಲಿ ಪರವಾನಗಿ ಭೂಮಾಪಕರನ್ನು ನಿಯೋಜಿಸಿದಾಗ ಪ್ರಕರಣಕ್ಕೆ ನಿಗದಿಪಡಿಸಿದ ದರ 300. ಕಾಲಕಾಲಕ್ಕೆ ಬದಲಾದ ಹಣದುಬ್ಬರಕ್ಕೆ ಅನುಗುಣವಾಗಿ ಪರಿಷ್ಕರಿಸಿದ ವೇತನವನ್ನಾಗಲೀ, ನ್ಯಾಯಯುತವಾದ ಸಂಭಾವನೆಯನ್ನಾಗಲಿ, ಯಾವುದೇ ಕನಿಷ್ಠ ಮೂಲಭೂತ ಸೌಲಭ್ಯಗಳನ್ನಾಗಲೀ ನೀಡಿರುವುದಿಲ್ಲ. ಪರವಾನಗಿ ಭೂಮಾಪಕರ ಕೆಲಸವು ಒಂದು ರೀತಿಯ ತಾಂತ್ರಿಕ, ನ್ಯಾಯ ನಿರ್ಣಾಯಕ ಕೆಲಸವಾಗಿದ್ದು, ಒಂದು ಪ್ರಕರಣವನ್ನು ಇತ್ಯರ್ಥಗೊಳಿಸಲು ಯಾವುದೇ ಸಮಸ್ಯೆ ಇಲ್ಲದಿದ್ದರೂ ಕನಿಷ್ಠ ಹತ್ತರಿಂದ ಹದಿನೈದು ದಿನಗಳು ಬೇಕಾಗುತ್ತವೆ. ಪ್ರತಿ ಪ್ರಕರಣಕ್ಕನುಸಾರವಾಗಿ ಕನಿಷ್ಠ 300 800ರವರೆಗೆ ವೆಚ್ಚವಾಗುತ್ತದೆ. ಅಡವಿ ಕೆಲಸಕ್ಕೆ ಹೋಗಲು, ನೋಟಿಸು ಜಾರಿ ಮಾಡಲು ಎರಡೆರಡು ಬಾರಿ ಹೋಗಿ ಬರುವ ಪ್ರಯಾಣದ ವೆಚ್ಚ, ಅಂಚೆ ವೆಚ್ಚ, ಕಡತ ತಯಾರಿಸಲು ಬೇಕಾದ ಲೇಖನ ಸಾಮಗ್ರಿಗಳು ಇತ್ಯಾದಿಯಾಗಿ ಕಚೇರಿ ಕೆಲಸಕ್ಕೆ ವೆಚ್ಚ ಮಾಡಲಾಗುತ್ತಿದೆ. ರೈತರು ನೀಡುತ್ತಿರುವ ಭಿಕ್ಷೆಯಿಂದ (ಲಂಚ ಎಂತಲೂ ಪರಿಗಣಿಸಬಹುದು) ಈ ಎಲ್ಲಾ ಸಮಸ್ಯೆಗಳನ್ನು ಸರಿದೂಗಿಸಿಕೊಂಡು, ಸರ್ಕಾರದ ಆಶ್ವಾಸನೆಗಳನ್ನು ನಂಬಿ ನಿರೀಕ್ಷೆಯಲ್ಲಿ ಮುಂದುವರಿಯುತ್ತಿದ್ದೇವೆ. ಇಲಾಖೆಯಿಂದ ಭಾವನಾತ್ಮಕವಾಗಿ, ಮಾನಸಿಕವಾಗಿ ಹಿಂಸೆಯಾಗಿದೆ, ಶೋಷಣೆಯಾಗಿ ಮುಂದುವರಿದಿದೆ.

ಉಲ್ಲೇಖ-2: 2009ನೇ ಸರ್ಕಾರವು ವೃಂದ ಮತ್ತು ನೇಮಕಾತಿಗೆ ತಿದ್ದುಪಡಿ ತಂದಿರುತ್ತದೆ. ಇದರ ಪರಿಣಾಮವಾಗಿ ಪರವಾನಗಿ ಭೂಮಾಪಕರು ಇಲಾಖೆಯಲ್ಲಿ ಕಾಲಕಾಲಕ್ಕೆ ಆದ ನೇಮಕದಲ್ಲಿ ಅವಕಾಶ ವಂಚಿತರಾಗಿರುತ್ತಾರೆ. ಪರವಾನಗಿ ಭೂಮಾಪಕರಾಗಿ ಇಲ್ಲಿಯ ತನಕ ಸೇವೆ ಸಲ್ಲಿಸಿರುವ ನಮಗೆ ಹಾಗೂ ನಮ್ಮ ವಿದ್ಯಾರ್ಹತೆಗನುಸಾರವಾಗಿ ಭೂಮಾಪಕರ ಕೆಲಸವನ್ನು ಬಿಟ್ಟರೆ ಬೇರೆ ಯಾವ ಸರ್ಕಾರಿ ಹುದ್ದೆಗೆ ಅವಕಾಶವಿರುವುದಿಲ್ಲ.

ಉಲ್ಲೇಖ-3: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ದುಡ್ಡಿಗೆ ಬೆಲೆಯೇ ಇಲ್ಲದಂತಾಗಿರುವ ಈ ಕಾಲದಲ್ಲಿ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ. ಆದರೆ ನಿರುದ್ಯೋಗ, ಅವಕಾಶಗಳ ಕೊರತೆ, ಬದುಕಿನ ಸಂದಿಗ್ಧತೆ ಇತ್ಯಾದಿ ನಿರೀಕ್ಷೆಗಳು ನಮ್ಮನ್ನು ಈ ಹಂತದಲ್ಲಿ ದುಡಿಯುವಂತೆ ಮಾಡಿದೆ.

ಉಲ್ಲೇಖ-4: ರಾಜ್ಯಾದ್ಯಂತ 2000ಕ್ಕೂ ಅಧಿಕ ಪರವಾನಗಿ ಭೂಮಾಪಕರು ಇದೇ ಹಂತದಲ್ಲಿ ದುಡಿಯುತ್ತಾ ಶೋಷಣೆಗೆ ಒಳಗಾಗಿದ್ದಾರೆ. ಇಷ್ಟೊಂದು ಅಪಾರ ಪ್ರಮಾಣದ ಮಾನವ ಸಂಪನ್ಮೂಲ ಶಕ್ತಿಯನ್ನು ಚಾಣಾಕ್ಷತನದಿಂದ ಈ ಮೇಲಿನ ತಿದ್ದುಪಡಿಯಂತೆ ಕಾನೂನು ದುರ್ಬಳಕೆ ಮೂಲಕ ಸದುಪಯೋಗ ಪಡಿಸಿಕೊಂಡು ಕೆಲಸಕ್ಕೆ ತಕ್ಕಂತೆ ತಕ್ಕ ವೇತನವನ್ನು ನೀಡದೆ ಮೋಸ ಮಾಡಿದೆ, ಅನ್ಯಾಯ ಮಾಡಿದೆ. ಈ ಅನ್ಯಾಯವನ್ನು ಕುರಿತು ಸರ್ಕಾರ/ ಇಲಾಖೆಯನ್ನು ಪ್ರಶ್ನಿಸಿದರೆ, ಏನೂ ಮಾಡಲಾಗದು. ನೀವು ಖಾಸಗಿಯುವರು, ನಿಮಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ದಿಕ್ಕು ತಪ್ಪಿಸುವ ಹೇಳಿಕೆಯನ್ನು ಹೇಳುತ್ತಾರೆ. (ಬಾಯಿ ಪಾಠ ಮಾಡಿಕೊಂಡಿದ್ದಾರೆ). ನೀವು ಮಾಡಿರುವ ಕಾನೂನು ದುರ್ಬಳಕೆಯಿಂದಾದ ಪ್ರಮಾದದಿಂದಾಗಿ ನಮಗೆ ಕಾನೂನಿನಲ್ಲಿ ಅವಕಾಶವಿಲ್ಲದಂತೆ ನೀವೇ ಅಲ್ಲವೇ ಮಾಡಿದ್ದು ಎಂದು ಮರುಪ್ರಶ್ನೆ ಹಾಕಿದರೆ ಮೌನವಾಗುತ್ತಾರೆ.

ಉಲ್ಲೇಖ-5: ಪರವಾನಗಿ ಭೂಮಾಪಕರನ್ನು ಗುಲಾಮರಂತೆ ದುಡಿಸಿಕೊಂಡು ಮುಂದುವರೆಯುವ ದುರುದ್ದೇಶದಿಂದ ಇವರು ಖಾಸಗಿ ಭೂಮಾಪಕರು ಎಂಬ ಹಣೆಪಟ್ಟಿಯನ್ನು ಕಟ್ಟಿ ಇವರು ಸೀಮಿತ ಕೆಲಸಗಳಿಗೆ ಮಾತ್ರ ಎಂದು ಹೇಳುತ್ತಿರುವುದು ವಿಷಾದಕರ. ಇದು ಕಾನೂನು ದುರ್ಬಳಕೆಯಲ್ಲದೇ ಮತ್ತಿನ್ನೇನು?

ಉಲ್ಲೇಖ-6: ಭೂಮಾಪಕರ ಹುದ್ದೆಗೆ ಬೇಕಾದ ವಿದ್ಯಾರ್ಹತೆ ಇಲ್ಲವೇ? ಅನುಭವ ಇಲ್ಲವೇ? ಇಲಾಖೆಯಲ್ಲಿ ಸತತ 12 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸಿಲ್ಲವೇ? ಏತಕ್ಕಾಗಿ ಈ ಮಲತಾಯಿ ಧೋರಣೆ?

ಉಲ್ಲೇಖ-7: ಯಾವುದೇ ಒಂದು ಹುದ್ದೆಗೆ ಸೂಕ್ತ ವಿದ್ಯಾರ್ಹತೆ ಅಥವ ತತ್ಸಮಾನ ವಿದ್ಯಾರ್ಹತೆ ಎಂಬುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಆದರೆ ಈ ಕಂದಾಯ ಇಲಾಖೆಯಲ್ಲಿ ಭೂಮಾಪಕರ ಹುದ್ದೆಗೆ ಈ ಹಿಂದೆಯಿದ್ದ ಸೂಕ್ತ ವಿದ್ಯಾರ್ಹತೆ ವೃತ್ತಿಪರ ಶಿಕ್ಷಣ ಕೋರ್ಸ್ ಆದ ಜೆಓಸಿ, ಸರ್ವೆಯಿಂಗ್, ಲ್ಯಾಂಡ್ ಅಂಡ್ ಸಿಟಿ ಸರ್ವೆ, ಇವರು ಅಲಭ್ಯವಾದಲ್ಲಿ  ಪಿಯುಸಿ ವಿದ್ಯಾರ್ಥಿಗಳು. ಈದರೆ ಡಿಪ್ಲೊಮಾ ಮತ್ತು ಬಿಇ ಪದವೀಧರರನ್ನು ನೇಮಕ ಸ್ಪರ್ಧೆಗೆ ಬಿಟ್ಟಿರುವುದು ನ್ಯಾಯಸಮ್ಮತವಲ್ಲ.

ಉಲ್ಲೇಖ-8: ಸರ್ಕಾರವು ತನ್ನ ಕಂದಾಯ ಇಲಾಖೆಯಲ್ಲಿ ಅನುಷ್ಠಾನಗೊಳಿಸಿದ ಪರವಾನಗಿ ಭೂಮಾಪಕರ ಯೋಜನೆಯಡಿ ಕೆಲಸ ನಿರ್ವಹಿಸುವ ಪರವಾನಗಿ ಭೂಮಾಪಕರಿಂದ ನಿಗದಿಪಡಿಸಿದ ಕೆಲಸಗಳನ್ನಷ್ಟೇ ಅಲ್ಲದೇ ತನ್ನಿತರ ಕೆಲಸಗಳಿಗೂ ಬಳಸಿಕೊಂಡಿದೆ. ಇಂತಹ ಕೆಲಸಗಳನ್ನು ಪರವಾನಗಿ ಭೂಮಾಪಕರು ನಿರ್ವಹಿಸಲು ನಿರಾಕರಿಸಿದರೆ ಪರವಾನಗಿ ರದ್ದು ಮಾಡುವ ಬೆದರಿಕೆಯನ್ನೂ ಹಾಕುತ್ತಾರೆ.

ಉಲ್ಲೇಖ-9: ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯಾದ ಭೂಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆಗಳ ಇಲಾಖೆಯಲ್ಲಿನ ಊರ್ಜಿತವಲ್ಲದ 1834 ಮಂದಿ ಭೂಮಾಪಕರ ನೇಮಕ ಪ್ರಕ್ರಿಯೆ ನಡೆದಿದೆ.

ಮಹಾಸ್ವಾಮಿ, ಈ ಮೇಲಿನ ಎಲ್ಲಾ ಉಲ್ಲೇಖಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ಮನವರಿಕೆ ಮಾಡಿಕೊಂಡು, ಈ ರೀತಿಯ ಕಾನೂನು ದುರ್ಬಳಕೆ-ಪ್ರಮಾದದಿಂದಾಗುವ ಅನ್ಯಾಯಗಳಿಗೆ ಬಲಿಯಾದ ಪರವಾನಗಿ ಭೂಮಾಪಕರಿಗೆ ಪರಿಹಾರವಾಗಿ ಯಾವುದೇ ಬೇರೆ ರೀತಿಯ ಪರಿಹಾರಗಳಿಂದ ನ್ಯಾಯ ನೀಡಲು ಸಾಧ್ಯವಿಲ್ಲ. ಆದುದರಿಂದ ಅನ್ಯಾಯಕ್ಕನುಗುಣವಾಗಿ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ತಮ್ಮಲ್ಲಿ ಕಳಕಳಿಯಿಂದ ಬೇಡಿಕೊಳ್ಳುತ್ತೇವೆ.
1. ಊರ್ಜಿತವಲ್ಲದ 1834 ಮಂದಿ ಭೂಮಾಪಕರ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಪಡಿಸುವುದು. 2. ಮೇಲಿನ ಉಲ್ಲೇಖಗಳನ್ವಯ ಪರವಾನಗಿ ಭೂಮಾಪಕರ ಸಮುದಾಯಕ್ಕೆ ಕಾನೂನು ದುರ್ಬಳಕೆಯಾಗಿದೆ. ಸತತ 12 ವರ್ಷಗಳಿಂದ ಆಶ್ವಾಸನೆಗಳನ್ನು ನಂಬಿ, ನಿರೀಕ್ಷೆಯಿಂದ ಸೇವೆ ಸಲ್ಲಿಸುತ್ತಿರುವ ಪರವಾನಗಿ ಭೂಮಾಪಕರಿಗೆ, ಭೂಮಾಪಕರ ನೇಮಕಾತಿಯಲ್ಲಿ ಪರವಾನಗಿ ಭೂಮಾಪಕರಿಗೆ ಮೊದಲ ಆದ್ಯತೆ ಎಂದು ಘೋಷಿಸಬೇಕು. ಈ ಮೇಲಿನ ಎರಡೂ ಬೇಡಿಕೆಗಳು ಸಾಧ್ಯವಾಗದಿದ್ದರೆ ಪರವಾನಗಿ ಭೂಮಾಪಕರ ಯೋಜನೆಯನ್ನು ಇಲಾಖೆಗೆ ವಿಲೀನಗೊಳಿಸುವುದರ ಮೂಲಕ ಪರವಾನಗಿ ಭೂಮಾಪಕರನ್ನು ಕಾಯಂ ಮಾಡುವುದು.

- ಇಂತಿ ತಮ್ಮ ವಿಧೇಯರು
ನೊಂದ ಸರ್ಕಾರಿ ಪರವಾನಗಿ ಭೂಮಾಪಕರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.