ಜ್ಯೋತಿಷಿಗಳನ್ನು ಗುಟ್ಕಾಕ್ಕೆ ಹೋಲಿಸಿರುವುದು ಎಷ್ಟು ಸರಿ?
ವೈದ್ಯರಲ್ಲೂ ಕೂಡ ಆ ಟೆಸ್ಟ್ ಮಾಡಿಸಿ, ಈ ಟೆಸ್ಟ್ ಮಾಡಿಸಿ ಎಂದು ಮೋಸ ಮಾಡುವವರಿದ್ದಾರೆ. ಹಾಗಂತ ಎಲ್ಲಾ ವೈದ್ಯರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಿ ನೋಡುವುದು ಸರಿಯೇ? ವೈದ್ಯರನ್ನೇ ನಿಷೇಧಿಸಿಬಿಡಬೇಕು ಎಂದರೆ ಹೇಗಾದೀತು?
"ಬ್ರಾಹ್ಮಣ್ಯ ಆಕ್ಟೋಪಸ್ನಂತೆ ದೇಶವನ್ನು ಆವರಿಸಿದೆ" ಎಂದಿದ್ದಾರೆ ಸಾಹಿತಿ ಕುಂ. ವೀರಭದ್ರಪ್ಪನವರು. ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಲಂಕೇಶ್ ಬಳಗ ಆಯೋಜಿಸಿದ್ದ "ಬ್ರಾಹ್ಮಣ್ಯ ಅಂದು-ಇಂದು" ವಿಚಾರಗೋಷ್ಠಿ ಉದ್ಘಾಟಿಸಿದ ಸಾಹಿತಿ ಕುಂ. ವೀರಭದ್ರಪ್ಪನವರು "ಜ್ಯೋತಿಷಿಗಳನ್ನು ನಿಷೇಧಿಸಬೇಕು. ಪುರೋಹಿತರು ಕೂಲಿಗೆ ಇಳಿದಾಗ ಸಮಾನತೆ ಕಾಣುತ್ತದೆ. ಶೂದ್ರರು ಇವರ ಬಲೆಗೆ ಬೀಳುತ್ತಿದ್ದಾರೆ" ಎಂದು ಹೇಳಿದ್ದಾರೆ. ಯಾವುದೇ ಒಂದು ಧರ್ಮವಿರಲಿ ಅದರಲ್ಲಿ ಹಲವು ಪದ್ಧತಿಗಳು ಕಾಲಾಂತರದಲ್ಲಿ ಬೆಳೆಯುತ್ತಾ ಬಂದಿರುತ್ತವೆ. ಜ್ಯೋತಿಷ್ಯವೂ ಇದರಲ್ಲೊಂದು. ಕುಂ.ವಿ.ಯವರು "ಪುರೋಹಿತರು ಮತ್ತು ಜ್ಯೋತಿಷಿಗಳು ಕಟ್ಟು ಕಥೆ ಹೇಳಿ ಜನರನ್ನು ಮೋಸಮಾಡುತ್ತಿದ್ದಾರೆ, ಹಾಗಾಗಿ ಜ್ಯೋತಿಷ್ಯವನ್ನು ನಿಷೇಧಿಸಬೇಕು" ಎಂದು ಹೇಳಿದ್ದಾರೆ. ಯಾರೋ ಕೆಲವು ಜ್ಯೋತಿಷಿಗಳು ಮೋಸ ಮಾಡುತ್ತಾರೆ ಎನ್ನುವ ಕಾರಣಕ್ಕೆ ಜ್ಯೋತಿಷ್ಯವನ್ನೇ ನಿಷೇಧಿಸಿಬಿಡಬೇಕೇ? ಜನರು ಜ್ಯೋತಿಷಿಗಳ ಹತ್ತಿರ ಹೋಗುವುದು ಅಥವಾ ಪುರೋಹಿತರ ಹತ್ತಿರ ಪೂಜೆ ಮಾಡಿಸುವುದು ಮನಸ್ಸಿನ ನೆಮ್ಮದಿಗೋಸ್ಕರ. ಇದರಿಂದ ಯಾರಿಗೂ ಹಾನಿಯಿಲ್ಲವಲ್ಲ? ಹಾಗಿದ್ದರೆ ವೈದ್ಯರಲ್ಲೂ ಕೂಡ ಕೆಲವರು ಆ ಟೆಸ್ಟ್ ಮಾಡಿಸಿ, ಈ ಟೆಸ್ಟ್ ಮಾಡಿಸಿ ಎಂದು ಮೋಸ ಮಾಡುವವರಿದ್ದಾರೆ. ಹಾಗಂತ ಎಲ್ಲಾ ವೈದ್ಯರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಿ ನೋಡುವುದು ಸರಿಯೇ? ವೈದ್ಯರನ್ನೇ ನಿಷೇಧಿಸಿಬಿಡಬೇಕು ಎಂದರೆ ಹೇಗಾದೀತು?
ಇವೆಲ್ಲವೂ ನಂಬಿಕೆಯ ವಿಷಯಗಳಷ್ಟೆ. ಕ್ರಿಶ್ಚಿಯನ್ನರು, ಹಿಂದುಗಳು ಮತ್ತು ಮುಸ್ಲಿಮರಲ್ಲಿ ಅನೇಕ ನಂಬಿಕೆಗಳಿವೆ. ಆ ನಂಬಿಕೆಗಳಿಗನುಸಾರ ನಡೆದುಕೊಂಡು ಅವರು ನೆಮ್ಮದಿ ಪಡೆಯುತ್ತಾರೆ. ಯಾರೂ ಕೂಡ ಬಲವಂತಕ್ಕೊಳಪಟ್ಟಿರುವುದಿಲ್ಲ. ಅದು ಅವರವರ ಇಷ್ಟ. ಇನ್ನು ಮಡೆಸ್ನಾನದ ವಿಷಯದಲ್ಲೂ ಅಷ್ಟೆ. ಮಡೆ ಸ್ನಾನ ಮಾಡಿದರೆ ತಮ್ಮ ರೋಗರುಜಿನಗಳು ಕಡಿಮೆಯಾಗುತ್ತವೆ ಎನ್ನುವ ನಂಬಿಕೆ ಕೆಲವರಿಗಿದೆ. ರೋಗಗಳು ಕಡೆಮೆಯಾಗುತ್ತವೋ ಇಲ್ಲವೋ ಬೇರೇ ಮಾತು. ಆದರೆ ಅವರಿಗೆ ಹಾಗೆ ಮಾಡುವ ಮೂಲಕ ತುಸು ನೆಮ್ಮದಿ ಸಿಗುತ್ತದೆ. ಇದರಲ್ಲಿ ತಪ್ಪೇನು? ಯಾರಿಗೆ ತೊಂದರೆಯಿದೆ? ಮಡೆಸ್ನಾನವನ್ನು ಮಾಡಲೇಬೇಕೆಂದು ಯಾರೂ ಯಾರ ಮೇಲೂ ಒತ್ತಡ ಹೇರಿಲ್ಲವಲ್ಲ? ಪುರೋಹಿತರ ಬಳಿ, ಜ್ಯೋತಿಷಿಗಳ ಬಳಿ ಜನ ತೆರಳುವುದೂ ಇದೇ ಕಾರಣಕ್ಕೆ. ಅವರು ಹೇಳುವ ಪೂಜೆ, ಪುನಸ್ಕಾರ ಮಾಡಿಸಿ ಜನ ನೆಮ್ಮದಿ ಪಡೆಯುತ್ತಾರೆ. ಯಾರೋ ಒಬ್ಬರು ಮೋಸಮಾಡುತ್ತಾರೆ ಎನ್ನುವ ಕಾರಣಕ್ಕೆ ಎಲ್ಲರನ್ನೂ ಮೋಸಗಾರರು ಎಂದು ಒಮ್ಮೇಲೆ ನಿರ್ಧರಿಸಿಬಿಡಬೇಕೇ? ಪ್ರಾಣ ತೆಗೆಯುವ ಗುಟ್ಕಾಕ್ಕೆ ಬಡಪಾಯಿ ಜ್ಯೋತಿಷಿಗಳನ್ನು ಹೋಲಿಸುವುದು ಎಷ್ಟು ಸರಿ?
ಹಿಂದೆ ಹಳ್ಳಿಗಳಲ್ಲಿ ವ್ಯಕ್ತಿಯೊಬ್ಬ ಕಳ್ಳತನ ಮಾಡಿದ್ದಾನೆಂಬ ಅನುಮಾನ ಬಂದರೆ ಸಾಕು. ಅವನಿಗೆ ಸ್ನಾನ ಮಾಡಿಸಿ ದೇವರ ಗುಡಿಗೆ ಕರೆದುಕೊಂಡು ಹೋಗುತ್ತಿದ್ದರು. ಆತನ ಮನಸ್ಸಿನಲ್ಲಿ ಉದ್ವೇಗ ಉಂಟಾಗಿ ತಪ್ಪು ಮಾಡಿದ್ದರೆ ಒಪ್ಪಿಕೊಂಡುಬಿಡುತ್ತಿದ್ದ. ಒಪ್ಪಿಕೊಳ್ಳದಿದ್ದರೂ ನಡೆಯುತ್ತಿತ್ತಲ್ಲವೇ? ಆತ ಸುಲಭವಾಗಿ ಬಚಾವಾಗಿಬಿಡಬಹುದಿತ್ತು. ಆದರೂ ಅವನು ದೇವರ ಮೇಲಿನ ನಂಬಿಕೆಯಿಂದ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದನು. ದೇವರು, ಧರ್ಮ, ಆಚರಣೆಗಳು ಎಲ್ಲವೂ ನಂಬಿಕೆಯ ಮೇಲೆಯೇ ನೆಲೆನಿಂತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಉದರಪೋಷಣೆಗಿಳಿದಿರುವವರೂ ಇದ್ದಾರೆ. ಹಾಗಂತ ಎಲ್ಲರೂ ಅದೇ ಸಾಲಿನಲ್ಲಿ ಬರುತ್ತಾರೆ ಎನ್ನುವ ಹಾಗಿಲ್ಲ.
ಇನ್ನು ಧರ್ಮಗುರುಗಳನ್ನೂ ಇದೇ ರೀತಿ ಒಂದೇ ತಕ್ಕಡಿಯಲ್ಲಿ ಹಾಕಿ ಮಾತನಾಡುತ್ತಾರೆ ಕುಂ.ವಿ.ಯವರು. ಯಾವುದೇ ಜಾತಿಯ ಧರ್ಮಗುರುಗಳು ಅಥವಾ ಮಠಾಧೀಶರ ಕುರಿತಾಗಿ ಮಾತನಾಡುವಾಗ ಹಗುರವಾಗಿ ಮಾತನಾಡಬಾರದು. ಗುರುಹಿರಿಯರಿಗೆ ಗೌರವ ಕೊಡಬೇಕೆಂಬುದು ಈ ನೆಲದ ಸಂಸ್ಕೃತಿಯಲ್ಲವೇ? ಮಠಾಧೀಶರುಗಳಿಂದ ಎಂಥ ಪ್ರಗತಿಗಳಾಗಿವೆ. ಶಿಕ್ಷಣ ಕ್ಷೇತ್ರದಲ್ಲಿ ಎಷ್ಟೋ ಬಡವರು ಮುಂದುವರಿಯಲು ಮಠಾಧೀಶರುಗಳ ಪಾತ್ರವಿಲ್ಲವೇ? ಯಾವ ಮಠಾಧೀಶನಿಗೂ ಸಮಾಜದಲ್ಲಿ ಕಂದರಸೃಷ್ಟಿಸಬೇಕು ಎಂಬ ಬಯಕೆಯಿರುವುದಿಲ್ಲ. ಸಮಾಜದ ಏಳಿಗೆಗಾಗಿಯೇ ತಮ್ಮ ಜೀವನವನ್ನು ಅವರು ಮುಡಿಪಾಗಿಟ್ಟಿರುತ್ತಾರೆ. ಅಂಥವರ ಕಾಲು ಮುಟ್ಟಿ ನಮಸ್ಕರಿಸುವುದರಲ್ಲಿ ತಪ್ಪೇನಿದೆ? ಶೃಂಗೇರಿ ಪೀಠದ ಸ್ವಾಮೀಜಿಗಳೊಬ್ಬರಿಗೆ ಅಂದಿನ ಮುಖ್ಯಮಂತ್ರಿ ಧರಂಸಿಂಗ್ ಅವರು ಕಾಲು ಮುಟ್ಟಿ ನಮಸ್ಕರಿಸಿದರು ಎಂದು ಕುಂ.ವಿ. ಅವರು ಹೇಳುತ್ತಾರೆ. ದೊಡ್ಡವರಿಗೆ ನಮಸ್ಕರಿಸುವುದು ಉತ್ತಮ ಸಂಸ್ಕಾರವಲ್ಲವೇ? ಈ ರೀತಿ ಮಾಡುವುದು ತಪ್ಪು ಎಂದು ವಾದಿಸಿದರೆ ಯುವ ಪೀಳಿಗೆಯಲ್ಲಿ ಹಿರಿಯರ ಬಗೆಗಿನ ಗೌರವ ಕಡಿಮೆಯಾಗಿ, ತಂದೆ ತಾಯಿಗೇನೇ ಜಾಡಿಸಿ ಒದೆಯುವಂತೆ ಆದೀತು!
ಇನ್ನು "ಅನಂತಮೂರ್ತಿಯವರ ಅಭಿಪ್ರಾಯಕ್ಕೆ ಸನಾತನ ಮನಸ್ಸುಗಳು ವಿಕೃತ ಅಭಿಪ್ರಾಯ ವ್ಯಕ್ತಪಡಿಸಿರುವುದು ಸರಿ ಅಲ್ಲ" ಎಂದಿದ್ದಾರೆ ವೀರಭದ್ರಪ್ಪನವರು. ಅಲ್ಲ ಸರ್, ಯಾರು ವಿಕೃತ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು? ಜನರ ಭಾವನೆಗಳಿಗೆ ನೋವಾಗುವಂತೆ ಹೇಳಿಕೆ ಕೊಡುವವರದ್ದು ವಿಕೃತ ಮನಸ್ಥಿತಿಯಲ್ಲವೇ? ಇದರೊಟ್ಟಿಗೆ ನೀವು ಡುಂಢಿ ಕೃತಿಯನ್ನು ಒಂದು ಸಂಶೋಧನಾತ್ಮಕ ಕೃತಿಯೆಂದು ಕರೆದಿದ್ದೀರಿ. ಅಂಥ ಕೃತಿಯನ್ನು ರಚಿಸಿದ ಲೇಖಕನದ್ದು ವಿಕೃತ ಮನಸ್ಥಿತಿಯಲ್ಲವೇ? ಅನಂತಮೂರ್ತಿಯವರು ಹೇಳಿಕೆಯನ್ನು ವಿರೋಧಿಸಲೇಬಾರದೇ? ಕೇವಲ ಬುದ್ಧಿಜೀವಿಗಳ ಅಭಿಪ್ರಾಯವೇ ನಿತ್ಯ ಸತ್ಯವೇ? ಮಾತನಾಡುವ ಹಕ್ಕು ಎಲ್ಲರಿಗೂ ಇದೆ ಎಂಬುದನ್ನು ಮರೆಯದಿರಿ.
- ಬಿ. ಮೊಹಿದ್ದೀನ್ಖಾನ್
ಚಿತ್ರದುರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

