ನಾಯಕರಿಗೇಕೆ ನಾಗರಿಕ ಕೇಂದ್ರಿತ ಆಡಳಿತ ಬೇಕಿಲ್ಲ?
ನಗರಾಡಳಿತ ಎನ್ನುವುದು ಭಾರತದಲ್ಲಿ ಮೊದಲಿನಿಂದಲೂ ದೊಡ್ಡ ಸಮಸ್ಯೆಗಳ ಆಗರ. ಅದಾಗ್ಯೂ ನಗರಗಳು ಆರ್ಥಿಕತೆಯ ಪ್ರಮುಖ ಯಂತ್ರಗಳಾಗಿ ಬೆಳೆದಿದ್ದರೂ, ಸರಿಯಾದ ಯೋಜನೆಗಳಿಲ್ಲದಿರುವುದು, ಅಧಿಕಾರದಲ್ಲಿರುವವರು ಉತ್ತರದಾಯಿತ್ವದಿಂದ ನುಣುಚಿಕೊಳ್ಳುವುದು ಮತ್ತು ಎಲ್ಲಾ ಹಂತಗಳಲ್ಲೂ ಹೆಚ್ಚುತ್ತಿರುವ ಭ್ರಷ್ಟಾಚಾರದಿಂದಾಗಿ ಅವುಗಳ ಅಭಿವೃದ್ಧಿಗೆ ಹೊಡೆತ ಬೀಳುತ್ತಲೇ ಇದೆ. ಇದರೊಟ್ಟಿಗೆ ಅಸಮರ್ಪಕ ಸಾರ್ವಜನಿಕ ಸೇವೆಗಳು ಮತ್ತು ಕಳಪೆ ಗುಣಮಟ್ಟದ ಜೀವನ ಸೇರಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
ನಗರದ ಮಧ್ಯಮ ವರ್ಗ, ನಿವಾಸಿ ಕಲ್ಯಾಣ ಸಂಘಗಳ ಮೂಲಕ ಅಭಿವೃದ್ಧಿಯಲ್ಲಿ ತಾವೂ ಭಾಗಿಗಳಾಗಿ, ಸರ್ಕಾರದೊಂದಿಗೆ ಕೆಲಸ ಮಾಡಬೇಕೆಂದು ಬಯಸುತ್ತಿದ್ದಾರೆ. ಆದರೆ ರಾಜಕೀಯ ವರ್ಗ ಅವರ ಈ ಆಸೆಗೆ ಸೊಪ್ಪು ಹಾಕುತ್ತಿಲ್ಲ. ಯಾವುದೇ ಪಕ್ಷದ ರಾಜಕಾರಣಿಗಳಿರಲಿ, ಜನತೆಯನ್ನು ಆಡಳಿತದ ಭಾಗವಾಗಿ ಸ್ವೀಕರಿಸಲು ಅವರು ಸಿದ್ಧರಿಲ್ಲ. ಅಧಿಕಾರಿಗಳ ಮನಸ್ಥಿತಿಯೂ ಹೀಗೆಯೇ ಇದೆ ಬಹುಶಃ ಎಲ್ಲಿ ತಮ್ಮ ಬಂಡವಾಳ ಬಯಲಾಗುತ್ತದೋ ಎನ್ನುವ ಭಯದಿಂದ ಇವರೆಲ್ಲ ಹೀಗೆ ಮಾಡುತ್ತಿರಬಹುದು.
ಬೆಂಗಳೂರಿನ ಪರಿಸ್ಥಿತಿಯನ್ನೇ ನೋಡಿ. ಒಂದೊಮ್ಮೆ ಇದು ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿತ್ತು. ಸಾಫ್ಟವೇರ್ ತಂತ್ರಜ್ಞಾನದ ಮೂಲಕ ದೇಶವನ್ನೇ ಮೂಕವಿಸ್ಮಿತಗೊಳಿಸಿತ್ತು. ಜಾಗತಿಕ ಹೂಡಿಕೆದಾರರು ಬೆಂಗಳೂರಿನತ್ತ ಸಾಲುಗಟ್ಟಿ ನಿಂತಿದ್ದರು. ಪ್ರಧಾನಿ ಮನಮೋಹನ್ ಸಿಂಗ್ ಅವರು ಒಮ್ಮೆ ಹೇಳಿದ್ದರು, "ಜಗತ್ತಿಗೆ ಭಾರತಕ್ಕಿಂತ ಬೆಂಗಳೂರಿನ ಬಗ್ಗೆಯೇ ಹೆಚ್ಚು ಗೊತ್ತು" ಎಂದು. ಭಾರತದ ಮಾದರಿ ನಗರವಾಗಿ ಬೆಂಗಳೂರು ಬದಲಾಗಬಹುದಿತ್ತು. ಹಾಗಿತ್ತು ಅದರ ದರ್ಜೆ. ಆದರೆ ಈಗ ಎಲ್ಲವೂ ಬದಲಾಗಿದೆ. ಈಗ ಬೆಂಗಳೂರು ಅಂದರೆ 24 ಗಂಟೆ ಟ್ರಾಫಿಕ್ ಜಾಮ್ಗಳು, ತಗ್ಗುಬಿದ್ದ ರಸ್ತೆಗಳು, ಅಸ್ತಿತ್ವ ಕಳೆದುಕೊಂಡ ಫುಟ್ಪಾತ್ಗಳು, ಅಸಮರ್ಪಕ ಸಾರ್ವಜನಿಕ ಸಾರಿಗೆ, ಕೈಕೊಡುವ ವಿದ್ಯುತ್ ಮತ್ತು ನೀರು, ಕೊನೆಯುಸಿರೆಳೆಯುತ್ತಿರುವ ಕೆರೆಗಳು, ಕಳಪೆ ಕಸ ನಿರ್ವಹಣಾ ವಿಧಾನ...ಇತ್ಯಾದಿ ಎಂಬಂತಾಗಿದೆ.
ನಗರದ ಅಭಿವೃದ್ಧಿಯ ವೇಗಕ್ಕೆ ತಕ್ಕಂತೆ ಮೂಲಭೂತಸೌಕರ್ಯಗಳನ್ನು ಒದಗಿಸುವಲ್ಲಿ ನಗರ ನಿರ್ವಾಹಕರು ಸೋತಿದ್ದಾರೆ. ಇಷ್ಟು ತ್ವರಿತವಾಗಿ ಬೆಳೆಯುತ್ತಿರುವ ನಗರವನ್ನು ಅದ್ಹೇಗಪ್ಪ ನಿರ್ವಹಿಸುವುದು ಎಂದು ಕಂಗಾಲಾಗಿ ಗಿರಗಿಟ್ಲೆ ಹೊಡೆಯುತ್ತಿದ್ದಾರವರು. ಅದಾಗ್ಯೂ, ಅತಿ ಎನಿಸುವಷ್ಟು ಏಜೆನ್ಸಿಗಳು (ಬಿಬಿಎಂಪಿ, ಬಿಡಿಎ, ಬಿಎಮ್ಆರ್ಡಿಎ) ನಗರವನ್ನು ನಿರ್ವಹಿಸುತ್ತಿವೆ. ಇನ್ನು, ನಿವಾಸಿಕಲ್ಯಾಣ ಸಂಘಗಳನ್ನು, ನಾಗರಿಕ ಗುಂಪುಗಳನ್ನು ಮತ್ತು ಪರಿಣತರನ್ನು ಆಡಳಿತದ ಭಾಗವಾಗಿಸಿಕೊಳ್ಳಲು ಮನಸ್ಸು ಮಾಡದ ರಾಜಕೀಯ ಮತ್ತು ಅಧಿಕಾರ ವರ್ಗ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಫಲಿತಾಂಶ: ಬೆಂಗಳೂರು ಉಸಿರಾಡಲು ಪರದಾಡುತ್ತಿದೆ. ರಾಜ್ಯದ ಆದಾಯದಲ್ಲಿ ಅರ್ಧ ಪಾಲನ್ನು ಉತ್ಪಾದಿಸುವ ನಗರವೊಂದು ಕೊಳೆತು ನಾರುತ್ತಿರುವುದು ದೌರ್ಭಾಗ್ಯದ ವಿಷಯವಲ್ಲವೇ?
ಪೌರಾಡಳಿತ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ನ್ಯಾಯಾಲಯಗಳು ಯಾವಾಗಲೂ ಹೇಳುತ್ತಾ ಬಂದಿವೆ. ಉದಾಹರಣೆಗೆ, ಸಮುದಾಯ ಸಹಭಾಗಿತ್ವ ಕಾಯ್ದೆಯಡಿಯಲ್ಲಿ ನಾಗರಿಕರಿಗೆ ಆಡಳಿತದಲ್ಲಿ ಭಾಗಿಯಾಗಲು ವಾರ್ಡ್ ಸಮಿತಿಗಳನ್ನು ಸ್ಥಾಪಿಸಿದ ವಿಷಯ. ರಾಜ್ಯ ಹೈಕೋರ್ಟ್ ಕೊನೆಯ ಎಚ್ಚರಿಕೆಯನ್ನು ನೀಡುವವರೆಗೂ ಬಿಬಎಂಪಿ ಕಾಲುಚಾಚಿಕೊಂಡು ಸುಮ್ಮನೇ ಕುಳಿತಿತ್ತು. ಬಿಬಿಎಂಪಿಯ ಕಾರ್ಪೊರೇಟರ್ಗಳು ಏನು ಮಾಡಿದರೋ ಊಹಿಸಿ? ಆ ಸಮಿತಿಗಳಲ್ಲಿ 'ಹೂಂ ಸರ್' ಎನ್ನುವವರನ್ನೇ ನೇಮಿಸಿದರು. ಹೀಗೆ ನೇಮಕವಾದವರ ಹಿನ್ನೆಲೆ ನೋಡಿದರೆ, ಅವರು ಹಿಂದೆ ಸಾರ್ವಜನಿಕ ಸೇವೆಯಲ್ಲಿ ಯಾವ ಕೆಲಸವನ್ನೂ ಮಾಡಿರಲಿಲ್ಲ ಅಥವಾ ಜನತೆಯನ್ನು ಪ್ರತಿನಿಧಿಸುವ ಅರ್ಹತೆಯನ್ನೂ ಅವರು ಹೊಂದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. "ನಿಮ್ಮ ಆದೇಶವನ್ನು ಪಾಲಿಸಿದ್ದೇವೆ" ಎಂದು ನ್ಯಾಯಲಯಕ್ಕೆ ತೋರಿಸುವುದಷ್ಟೇ ಬಿಬಿಎಂಪಿಯ ಉದ್ದೇಶವಾಗಿತ್ತು. ಆದರೆ ಆ ಸಮಿತಿಗಳಲ್ಲಿ ಸಮುದಾಯ ಸಹಭಾಗಿತ್ವ ಮಾತ್ರ ಕಾಣೆಯಾಗಿತ್ತು.
'Govern Right, Govern Responsibly' ಎನ್ನುವ ತನ್ನ ಕಾರ್ಯಕ್ರಮದಲ್ಲಿ ಸುಮಾರು 600ಕ್ಕೂ ಹೆಚ್ಚು ನಿವಾಸಿ ಕಲ್ಯಾಣ ಸಂಘಗಳನ್ನು ಹೊಂದಿರುವ "ನಮ್ಮ ಬೆಂಗಳೂರು ಫೌಂಡೇಷನ್", ವಾರ್ಡ್ ಸಮಿತಿಗಳ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ಕೆಲವು ಆಘಾತಕಾರಿ ಸಂಗತಿಗಳನ್ನು ಹೊರಹಾಕಿದೆ.
1) ನಿವಾಸಿ ಕಲ್ಯಾಣ ಸಂಘಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪಾರದರ್ಶಕವಾಗಿ ಇಲ್ಲ. ಇದರಿಂದಾಗಿ, ಪ್ರತಿನಿಧಿಗಳು, ನಿಜವಾಗಿಯೂ ತಾವು ವಾರ್ಡ್ಗಳ ಬಹುಸಂಖ್ಯಾತರನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಹೇಳಿಕೊಳ್ಳಲಾಗದ ಸನ್ನಿವೇಶ ಸೃಷ್ಟಿಯಾಗಿದೆ. ಕೆಲವು ಸದಸ್ಯರಿಗಂತೂ ಕಳೆದ ಮೂರು ವರ್ಷಗಳಿಂದ ಸಮುದಾಯ/ಸಾರ್ವಜನಿಕ ಕೆಲಸಗಳಿಂದ ದೂರವೇ ಉಳಿದಿದ್ದಾರೆ. ಇದು ಕೋರ್ಟ್ ಆದೇಶಕ್ಕೆ ವಿರುದ್ಧವಾದದ್ದು.
2) ಕೆಲವು ವಾರ್ಡ್ ಸಮಿತಿಗಳಲ್ಲಿನ ಸದಸ್ಯರನ್ನು ಆಯ್ಕೆ ಮಾಡಿರುವುದು ಕೇಬಲ್ ಆಪರೇಟರ್ ಸಂಘಗಳು, ದೇಗುಲ ಅಭಿವೃದ್ಧಿ ಸಂಘಗಳು, ಜಾತಿ ಆಧಾರಿತ ಸಂಘಗಳು, ಕಂಪನಿ ನೌಕರರ ಸಂಘಗಳು, ಇತ್ಯಾದಿ. ಸಮುದಾಯ ಕೆಲಸಗಳ ವಿಷಯದಲ್ಲಿ ನಿಜಕ್ಕೂ ಇವರುಗಳ ಪ್ರಾತಿನಿಧ್ಯವಿಲ್ಲ.
3) ಬಿಬಿಎಂಪಿಯ ಅಧಿಕೃತ ಜಾಲತಾಣ ಕೆಲವು ವಾರ್ಡ್ಗಳಲ್ಲಿ ನಿವಾಸಿ ಕಲ್ಯಾಣ ಸಂಘಗಳು ಇಲ್ಲವೆಂದು ಹೇಳುತ್ತದೆ. ಆದರೆ ನಮ್ಮ ಬೆಂಗಳೂರು ಫೌಂಡೇಷನ್, ಇಂಥ ವಾರ್ಡ್ಗಳಲ್ಲಿ ಒಂದಕ್ಕಿಂತಲೂ ಹೆಚ್ಚಿನ ನಿವಾಸಿ ಕಲ್ಯಾಣ ಸಂಘಗಳಿವೆ ಎಂಬ ದಾಖಲೆಗಳನ್ನು ಹೊಂದಿದೆ.
4) ವಾರ್ಡ್ ಸಮಿತಿಗಳು ಪ್ರತೀ ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂಬ ನಿಯಮವಿದೆಯಾದರೂ, ಬಹುತೇಕ ಸಮಿತಿಗಳು ರಚನೆಯಾದ ಸಮಯದಲ್ಲಿ ಮಾತ್ರ ಸಭೆ ನಡೆಸಿವೆಯಷ್ಟೆ.
ವಾರ್ಡ್ ಸಮಿತಿಯ ಉದ್ದೇಶ ಕೇವಲ ಕಾಗದಗಳ ಮೇಲಷ್ಟೇ ಉಳಿದಿದೆ. ಈ ಕುರಿತು ಹೈಕೋರ್ಟ್ ಹೇಳಿದ್ದೇನು ಎನ್ನುವುದನ್ನು ನೋಡೋಣ:
1) ವಾರ್ಡ್ ಅನ್ನು ಪ್ರತಿನಿಧಿಸುವ ಕಾರ್ಪೊರೇಷನ್ನ ಕೌನ್ಸಿಲರ್ ವಾರ್ಡ್ ಸಮಿತಿಯ ಮುಖ್ಯಸ್ಥರಾಗಿರಬೇಕು.
2) ಹತ್ತು ಜನರ ನಾಮನಿರ್ದೇಶನ ಮಾಡಬೇಕು. ಅದರಲ್ಲಿ ಇಬ್ಬರು ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿರಬೇಕು, ಮೂವರು ಮಹಿಳೆಯರಿರಬೇಕು ಮತ್ತು ನಿವಾಸಿ ಸಂಘಗಳ ಇಬ್ಬರು ಪ್ರತಿನಿಧಿಗಳಿರಬೇಕು. ಜೊತೆಗೆ ಈ ಕೆಳಗಿನ ನಿಯಮಗಳು ಕಡ್ಡಾಯ-
- ಅವರು ಪ್ರತಿನಿಧಿಸುವ ವಾರ್ಡ್ನಲ್ಲೇ ನೋಂದಾಯಿತ ಕಚೇರಿಯಿರಬೇಕು.
- ಅದು ನಿವಾಸಿಗಳನ್ನು, ನಾಗರಿಕ ಗುಂಪುಗಳನ್ನು ಪ್ರತಿನಿಧಿಸಬೇಕು
- ಕನಿಷ್ಠ ಮೂರು ವರ್ಷಗಳವರೆಗಾದರೂ ಅದು ಸಮುದಾಯ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು
- ಅದು ನೊಂದಾಯಿತ ಸಂಘವಾಗಿರಬೇಕು
3) ವಾರ್ಡ್ ಸಮಿತಿಯ ಕೆಲಸಗಳು:
- ತಮ್ಮ ಪ್ರದೇಶದ ಅಭಿವೃದ್ಧಿಗೆ ಯೋಜನೆಯನ್ನು ಸಿದ್ಧಪಡಿಸಿ ಕಾರ್ಪೊರೇಷನ್ಗೆ ಕೊಡುವುದು.
- ಫಲಾನುಭವಿಗಳ ಪಟ್ಟಿಯನ್ನು ಅನುಮೋದಿಸುವುದು
- ಕಾರ್ಪೊರೇಷನ್ ತಮ್ಮ ವಾರ್ಡ್ನಲ್ಲಿ ಕೈಗೊಳ್ಳುವ ಕಾಮಗಾರಿಗಳ ಮೇಲ್ವಿಚಾರಣೆ ನಡೆಸುವುದು.
- ಕಾರ್ಪೊರೇಷನ್ಗೆ ಬಾಕಿ ಇರುವ ತೆರಿಗೆ, ಶುಲ್ಕ ಮತ್ತು ಇತರ ಹಣವನ್ನು ಸಮಯಕ್ಕೆ ಸರಿಯಾಗಿ ಕಲೆಹಾಕುವುದು
- ವಾರ್ಡ್ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು.
ಈ ಆದೇಶ ಬಂದ ನಂತರ ನಮ್ಮ ಬೆಂಗಳೂರು ಫೌಂಡೇಷನ್ ಸಮೀಕ್ಷೆಯೊಂದನ್ನು ನಡೆಸಿತು. ವಾರ್ಡ್ ಸಮಿತಿಗಳ ಸ್ಥಾಪನೆ ಕೇವಲ ಕಣ್ಣೊರೆಸುವ ತಂತ್ರವಷ್ಟೇ ಹೊರತು, ನ್ಯಾಯಾಲಯದ ಆಜ್ಞೆಯ ಸರಿಯಾದ ಪಾಲನೆಯಲ್ಲ ಎನ್ನುವುದು ಪತ್ತೆಯಾಯಿತು. ಈ ಕಾರಣಕ್ಕಾಗಿ ನಮ್ಮ ಬೆಂಗಳೂರು ಫೌಂಡೇಷನ್ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ನ(ವಾರ್ಡ್ಸಮಿತಿ) ನಿಯಮಗಳಲ್ಲಿ ಕೆಲವು ಬದಲಾವಣೆ ತರಲು ಸಲಹೆ ನೀಡಿದೆ. ಅವೆಂದರೆ:
- ವಾರ್ಡ್ ಸಮಿತಿಯ ಸದಸ್ಯರ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಹೀಗೆ ನೇಮಕವಾದವರು ತಮ್ಮ ವಾರ್ಡ್ಗಳಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಬಿಬಿಎಂಪಿಯ ಅಂತರ್ಜಾಲದಲ್ಲಿ ಮಾಹಿತಿ ಪ್ರಕಟಿಸಬೇಕು.
- ವಾರ್ಡ್ ಸಮಿತಿಯಿ ಸದಸ್ಯ ಮೂರು ವರ್ಷಗಳಿಂದ ಸಕ್ರಿಯವಾಗಿ ತನ್ನ ವಾರ್ಡ್ನ ಮೂಲಭೂತ ಕೆಲಸಗಳಲ್ಲಿ ಭಾಗಿಯಾಗಿದ್ದಾನೆ ಎನ್ನುವುದನ್ನು ರುಜುವಾತು ಮಾಡುವ ದಾಖಲೆಗಳನ್ನು ಸಿದ್ಧಪಡಿಸಬೇಕು.
- ವಾರ್ಡ್ ಸದಸ್ಯರನ್ನು ಪ್ರತಿನಿಧಿಸುವ ವಿಷಯ ಪರಿಣತರಿರಬೇಕು.
- ಪ್ರತೀ ತಿಂಗಳು ತಪ್ಪದೇ ಸಭೆಗಳನ್ನು ನಡೆಸಬೇಕು. ಆ ಸಭೆಯಲ್ಲಿ ನಡೆದ ಚರ್ಚೆಯ ಸಾರಾಂಶ ಸಾರ್ವಜನಿಕರಿಗೆ ದೊರಕುವಂತಾಗಬೇಕು.
ಅಧಿಕಾರವರ್ಗ ಮತ್ತು ಆಡಳಿತ ವರ್ಗ ಯಾವಾಗ ಜನತೆಯನ್ನು ತನ್ನ ಅಭಿವೃದ್ಧಿ ಯೋಜನೆಗಳಲ್ಲಿ ಸಕ್ರಿಯವಾಗಿ ಬಳಸಿಕೊಳ್ಳುತ್ತದೋ ಆಗ ಮಾತ್ರ ಸರಿಯಾದ ಅಭಿವೃದ್ಧಿ ಸಾಧ್ಯ. ಇದು ಕೇವಲ ಬೆಂಗಳೂರಿಗಷ್ಟೇ ಅನ್ವಯವಾಗುವುದಿಲ್ಲ. ಪ್ರತಿ ನಗರಗಳ ಆಡಳಿತದಲ್ಲೂ ಇದು ಅನ್ವಯವಾಗಬೇಕು.
ಕೊನೆಯ ಗುಟುಕು: ಸ್ಥಳೀಯ ಪತ್ರಿಕೆಯೊಂದರಲ್ಲಿ ಬಂದ ಆಘಾತಕಾರಿ ಮಾಹಿತಿ: ಬೆಂಗಳೂರಿನ ಶಾಸಕರ ಭವನದ ಹೆಲ್ತ್ ಕ್ಲಬ್ನಲ್ಲಿ ವಿಧಾನ ಪರಿಷತ್ ಸದಸ್ಯರು ಮತ್ತು ಶಾಸಕರ ಆಯಿಲ್ ಮಸಾಜ್ಗೆ ನಿಗದಿಪಡಿಸಿರುವ ಶುಲ್ಕವೆಷ್ಟು ಗೊತ್ತೆ? ಕೇವಲ 19 ರುಪಾಯಿ. ಇನ್ನು ಅವರ ಸ್ಟೀಮ್ ಬಾತ್ಗೆ ಕೇವಲ 17 ರುಪಾಯಿ! ಅಧಿಕಾರಿಯೊಬ್ಬರು ಈ ಕುರಿತು ಹೇಳಿದ್ದು ಹೀಗೆ: ಸಾಮಾನ್ಯ ಪ್ರಜೆಯೊಬ್ಬ ಒಂದು ಪ್ಲೇಟ್ ಇಡ್ಲಿ ಅಥವಾ ದೋಸೆಗೆ ಇದಕ್ಕಿಂತಲೂ ಹೆಚ್ಚು ಖರ್ಚು ಮಾಡುತ್ತಾನೆ. ಇದು ನಿಜಕ್ಕೂ ಪ್ರಜೆಗೆ ಮಾಡುವ ಅವಮಾನವೇ ಸರಿ.
- ಎಚ್.ಎಸ್. ಬಲರಾಮ್
hsbalram@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

