ಚಿತ್ರದುರ್ಗ ಜಿಲ್ಲೆಯ ಅಂತಾಪುರ ಗ್ರಾಮದವಳು ಸ್ವಾತಿ. ನಾನೀಗ ಉಳಿದುಕೊಂಡಿರುವ ಪಿ.ಜಿ.ಗೆ ನನಗಿಂತ ಎರಡು ದಿನ ಮುಂಚಿತವಾಗಿ ಸೇರಿಕೊಂಡವಳು ಆಕೆ. ಆರಂಭದ ದಿನಗಳಲ್ಲಿ ನಾವಿಬ್ಬರೂ ಪರಸ್ಪರ ಬಹುವಚನ ಬಳಸಿ ಮಾತಾಡುತ್ತಿದ್ದೆವು. ಕ್ರಮೇಣ, ಗೆಳೆತನ ಗಟ್ಟಿಯಾದಂತೆ, ಸಲುಗೆಯೂ ಹೆಚ್ಚಾಯಿತು. ಅದೊಂದು ಮುಂಜಾನೆ ಅವಳೇ ಹೇಳಿಬಿಟ್ಟಳು; 'ಈ ಬಹುವಚನದ ಮಾತುಗಳಿಂದ ಮನಸ್ಸಿಗೆ ಖುಷಿಯಾಗೋದಿಲ್ಲ. ಇನ್ಮುಂದೆ ನಾವಿಬ್ರೂ ಏಕವಚನದಲ್ಲೇ ಮಾತಾಡೋಣ...' ಆನಂತರದಲ್ಲಿ ನಾವಿಬ್ಬರೂ ಅದೆಷ್ಟು ಆಪ್ತರಾದೆವು ಅಂದರೆ, ಪಿ.ಜಿ.ಯಲ್ಲಿರುವವರೆಲ್ಲ ಈಗಲೂ ನಮ್ಮನ್ನು 'ಟೂ ಲವರ್ಸ್' ಎಂದು ಕರೆದು ಮಜಾ ತೆಗೆದುಕೊಳ್ಳುತ್ತಾರೆ!
ಗೆಳೆತನ ಗಾಢವಾದ ನಂತರದಲ್ಲಿ, ತನ್ನ ಬದುಕಿನ ಎಲ್ಲ ರಹಸ್ಯವನ್ನೂ ನನ್ನೊಂದಿಗೆ ಹೇಳಿಕೊಂಡವಳು ಸ್ವಾತಿ. ಯಾವುದೋ ಬೇಸರ ಅನ್ನಿಸಿದಾಗ ನನಗೆ ತಕ್ಷಣವೇ ಹೆಗಲಾಗುತ್ತಿದ್ದವಳೂ ಆಕೆಯೇ. ಅಂಥ ಸ್ವಾತಿ, ಒಂದು ತಿಂಗಳಿಂದ ಯಾಕೋ ಬಡವಾಗಿದ್ದಾಳೆ ಅನಿಸುತ್ತಿತ್ತು. ಅದೊಮ್ಮೆ ಈಚೆಗೆ ನೀನು ಸ್ವಲ್ಪ ಡಲ್ ಆಗಿದೀಯ ಕಣೇ ಎಂದಿದ್ದಕ್ಕೆ, ಐವತ್ತಾರು ಕೆ.ಜಿ. ಇದೀನಮ್ಮ, ಅದು ಕಡಿಮೆ ತೂಕವಾ? ಎಂದು ಮಾತು ಹಾರಿಸಿದ್ದಳು. ಕನ್ನಡಿಯ ಮುಂದೆ ಹೆಚ್ಚು ಹೊತ್ತು ಕಳೆಯತೊಡಗಿದ್ದಳು. ವಿಶೇಷವಾಗಿ ಡ್ರೆಸ್ ಮಾಡಿಕೊಳ್ತಾ ಇದ್ದೀಯಲ್ಲ, ಏನ್ ವಿಶೇಷ ಎಂದು ಕೇಳಿದರೆ, ಆಫೀಸಿನಲ್ಲಿ ಯಾವುದೋ ಕಾರ್ಯಕ್ರಮವಿದೆ ಎಂದು, ಮದುವೆ/ ರಿಸೆಪ್ಷನ್ ಎಂದು ಉತ್ತರ ಕೊಡುತ್ತಿದ್ದಳು.
ಇಂಥ ಸ್ವಾತಿ, ಮೊನ್ನೆ, ಇಷ್ಟಿಷ್ಟೇ ಉಗುಳು ನುಂಗುತ್ತಾ ಹೇಳಿದಳು; ನಮ್ಮ ಕೊಲೀಗ್‌ನನ್ನು ಪ್ರೀತಿಸ್ತಾ ಇದೀನಿ. ನಾವಿಬ್ರೂ ಒಟ್ಟಿಗೇ ಕಾಫಿಗೆ ಹೋಗ್ತೇವೆ. ಊಟಕ್ಕೆ ಹೋಗ್ತೇವೆ. ಗುಡ್ ಮಾರ್ನಿಂಗ್, ಗುಡ್ ಈವ್ನಿಂಗ್, ಗುಡ್‌ನೈಟ್ ಅಂತೆಲ್ಲ ಮೆಸೇಜ್‌ನ ಶೇರ್ ಮಾಡಿಕೊಳ್ತೇವೆ. ಆದರೆ, ಐ ಲವ್‌ಯೂ ಅಂತ ಈವರೆಗೂ ಅವನೂ ಹೇಳಿಲ್ಲ, ನಾನೂ ಹೇಳಿಲ್ಲ. ಅವನ ಮುಂದೆ ನಿಂತು ಹಾಗೆ ಹೇಳಿಬಿಡಬೇಕು ಅಂತ ಸಾವಿರ ಸಲ ಅಂದ್ಕೋತೇನೆ. ಆಫೀಸಿಗೆ ಹೋದಾಗ ಹೇಗೆ ಮಾತಾಡಬೇಕು ಅಂತ ರಿಹರ್ಸಲ್ ಮಾಡುತ್ತೇನೆ. ಆದರೆ, ಅವನು ಎದುರಾದರೆ ಸಾಕು; ಮನಸ್ಸು ತಾಳ ತಪ್ಪುತ್ತೆ. ಹೇಳಬೇಕು ಅಂದುಕೊಂಡ ಮಾತು ಹೊರಗೇ ಬರಲ್ಲ. ಅವನಿಗೆ ಪತ್ರದ ಮೂಲಕ ತಿಳಿಸಬೇಕು ಅಂದ್ಕೋತೇನೆ ಆದರೆ, ಬರೆಯಲು ಕೂತರೆ ಸಾಕು, ಕೈ ನಡುಗುತ್ತೆ. ಒಂದು ವೇಳೆ, ನನ್ನ ಪ್ರೇಮವನ್ನು ಅವನು ಒಪ್ಪದಿದ್ರೆ ಗತಿ ಏನು ಎಂಬ ಫೀಲ್ ಬಂದ ತಕ್ಷಣ, ಹಾಳೆ ಮುಚ್ಚಿಟ್ಟು ಎದ್ದು ಹೋಗ್ತೇನೆ. ನನ್ನದು ಒಂಥರಾ ಹೇಳಲಾರೆ, ಹೇಳದಿರಲಾರೆ ಎಂಬಂಥ ಪರಿಸ್ಥಿತಿ, ಏನು ಮಾಡಬೇಕೋ ಗೊತ್ತಾಗ್ತಾ ಇಲ್ಲ ಅಂದಳು.
ಸ್ವಾತಿಯ ಅದುವರೆಗಿನ ತಳಮಳಕ್ಕೆ, ಮೌನಕ್ಕೆ, ಆಕೆ ಹೆಚ್ಚು ಹೊತ್ತು ಕನ್ನಡಿಯ ಮುಂದೆ ನಿಲ್ಲುತ್ತಿದ್ದುದಕ್ಕೆ ಉತ್ತರ ಸಿಕ್ಕಿತ್ತು. ಆಕೆಯ ಮಾತುಗಳನ್ನೇ ಮತ್ತೆ ಮತ್ತೆ ನೆನಪಿಸಿಕೊಂಡಾಗ, ಆಶ್ಚರ್ಯ/ಸೋಜಿಗ ಒಟ್ಟಿಗೇ ಆಯಿತು. ಹೌದಲ್ಲವಾ? ಪ್ರೇಮವೆಂಬುದು, ಮುಸ್ಸಂಜೆಯಲ್ಲಿ ಹಚ್ಚಿಟ್ಟ ದೀಪದಂಥದು. ಹಚ್ಚಿಟ್ಟ ದೀಪ ಆರದಿರಲಿ ಎಂಬುದು ಎಲ್ಲರ ಆಸೆಯಾಗಿರುತ್ತದೆ. ಅದೇ ಕಾರಣದಿಂದ, ಸಂಜೆ ಆಯ್ತು. ಕಿಟಕಿ ಬಾಗಿಲು ಮುಚ್ಚು, ದೀಪ ಹಚ್ಚು ಎಂದಿರುತ್ತೇವೆ. ಆದರೆ, ಮುಚ್ಚಿದ ಬಾಗಿಲು ಅದ್ಯಾವುದೋ ಮಾಯದಲ್ಲಿ ತೆರೆದುಕೊಂಡಿರುತ್ತದೆ. ಹಿಂದೆಯೇ ಬೀಸಿದ ಗಾಳಿ ದೀಪ ಆರುವಂತೆ ನೋಡಿಕೊಂಡಿರುತ್ತದೆ! ಆರಿದ ದೀಪವನ್ನು ಮತ್ತೆ ಹೊತ್ತಿಸಬಹುದು. ಆದರೆ, ದೀಪ ಹಚ್ಚಲು ಮೊದಲ ಬಾರಿ ಹೋದಾಗ ಆಗುವ ರೋಮಾಂಚನ ಎರಡನೇ ಬಾರಿ ಆಗುವುದಿಲ್ಲ. ಈ ಮಾತನ್ನೇ ಪ್ರೇಮಕ್ಕೂ ಅನ್ವಯಿಸಿ ಹೇಳಬಹುದೇನೋ.
ನನಗೆ ತುಂಬ ಇಷ್ಟವಾಗುವ ಅವನ(ಳ) ಮುಂದೆ ನಿಂತು ಐ ಲವ್ ಯೂ ಎಂದು ಹೇಳಿ ಬಿಡಬೇಕು ಎಂಬುದು ಎಲ್ಲರ ಆಸೆ. ಅಂಥದೊಂದು ಮಧುರ ಕ್ಷಣ ಎಲ್ಲರ ಬದುಕಲ್ಲೂ ಬಂದೇ ಬರುತ್ತದೆ. ಆದರೆ, ಐ ಲವ್ ಯೂ ಅಥವಾ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂಬ ಮೂರೇ ಪದಗಳನ್ನು ಹೇಳುವುದು ಎಷ್ಟೊಂದು ಕಷ್ಟವೆಂದರೆ, ಹೆಚ್ಚಿನವರು ಅದನ್ನು ಹೇಳುವುದೇ ಇಲ್ಲ! ಪ್ರಖ್ಯಾತ ಚರ್ಚಾಪಟುವಿಗೂ ಪ್ರೇಮ ನಿವೇದನೆಯ ಸಂದರ್ಭದಲ್ಲಿ ಮಾತೇ ಮರೆತುಹೋಗುತ್ತದೆ! ಏಕೆಂದರೆ, ಹಾಗಂತ ಹೇಳುವುದೋ ಬೇಡವೋ ಎಂಬ ವಿಷಯವಾಗಿ ಅವರ ಮನಸಿನೊಳಗೆ ಅಂತಯುದ್ಧ ಶುರುವಾಗಿರುತ್ತದೆ. ಆಗ ಅವರಷ್ಟಕ್ಕೆ ಅವರೇ ಗೊಣಗಿಕೊಳ್ಳುತ್ತಾರೆ; ನಾಳೆ ಅಥವಾ ನಾಡಿದ್ದು ಅವನಿ(ಳಿ)ಗೆ ಐ ಲವ್ ಯೂ ಎಂದು ಹೇಳಲೋ, ಬೇಡವೋ? ಹೇಳಿದರೆ ಏನಾಗಿ ಬಿಡ್ತದೋ? ಹೇಳದಿದ್ದರೆ ಮತ್ತೇನಾಗಿ ಹೋಗ್ತದೋ? ಏನನ್ನೂ ಹೇಳದಿರುವ ಈ ಸಂದರ್ಭದಲ್ಲಿ ಆತ(ಕೆ) ದಿನವೂ ಹರಟೆಗೆ ಸಿಗುತ್ತಲೇ ಇರುತ್ತಾನೆ(ಳೆ). ನಾಳೆ, ಐ ಲವ್ ಯು ಅಂದದ್ದನ್ನೇ ನೆಪ ಮಾಡಿಕೊಂಡು ಆತ (ಕೆ) ಮಾತಾಡುವುದನ್ನೇ ನಿಲ್ಲಿಸಿಬಿಟ್ಟರೆ? ಛೆ, ಛೆ, ನನಗೆ ನಿಮ್ಮ ಬಗ್ಗೆ ಅಂಥ ಭಾವನೆಯೇ ಇಲ್ಲ ಅಂದುಬಿಟ್ಟರೆ? ಹೀಗೆಲ್ಲ ಯೋಚಿಸಿ ಯೋಚಿಸಿಯೇ ಹುಡುಗ ಮತ್ತು ಹುಡುಗಿಯರು ಒದ್ದಾಡಿ ಹೋಗುತ್ತಾರೆ. ಹೇಳಿಕೊಳ್ಳಲಾಗದ ಪ್ರೇಮದ ಆ ಸ್ಥಿತಿ ಎಷ್ಟೊಂದು ಮಧುರವಲ್ಲವೆ ಎಂದು ಯಾರೆಂದರೆ ಯಾರೂ ಯೋಚಿಸುವುದೇ ಇಲ್ಲ!
ಇಂಥದೇ ಸ್ಥಿತಿಯಲ್ಲಿ ಈಗ ಸ್ವಾತಿಯೂ ಇದ್ದಾಳೆ. ಅವನಿಗೆ ಬಹಳ ಒಳ್ಳೆಯ ಟೇಸ್ಟ್ ಇದೆ ಕಣೇ. ನನ್ನನ್ನು ಬಹಳ ಸೂಕ್ಷ್ಮವಾಗಿ ಗಮನಿಸ್ತಾನೆ. ಬಹುಶಃ ಅವನೂ ನನ್ನನ್ನು ಪ್ರೀತಿಸ್ತಾ ಇದಾನೇ ಅನ್ಸುತ್ತೆ..." ಎಂದೆಲ್ಲಾ ಆಕೆ ಹೇಳುತ್ತಿರುತ್ತಾಳೆ. ಈ ಬಗ್ಗೆ ಅವನನ್ನೇ ಕೇಳಿ ಗ್ಯಾರಂಟಿ ಮಾಡಿಕೊಳ್ಳಮ್ಮ ಅಂದರೆ - ಆ ಕೆಲ್ಸ ಮಾತ್ರ ಮಾಡಲ್ಲ ಕಣೇ, ಬೈ ಛಾನ್ಸ್, ಅವನೇನಾದ್ರೂ - 'ಇಲ್ಲಾರಿ, ನಾನು ನಿಮ್ಮನ್ನು ಪ್ರೀತಿಸ್ತಾ ಇಲ್ಲ ಅಂದುಬಿಟ್ರೆ ಅಂಥದೊಂದು ಶಾಕ್‌ನ ತಡೆದುಕೊಳ್ಳಲು ನನ್ನಿಂದ ಆಗಲ್ಲ. ಹಾಗಾಗಿ, ಅವನಾಗಿಯೇ ಪ್ರೊಪೋಸ್ ಮಾಡುವ ತನಕ ಸೈಲೆಂಟ್ ಆಗಿ ಇದ್ದು ಬಿಡ್ತೀನಿ' ಅನ್ನುತ್ತಾಳೆ.
ನನ್ನ ಸುತ್ತಮುತ್ತ ಮಾತ್ರವಲ್ಲ; ನಿಮ್ಮ ಸುತ್ತ ಮುತ್ತಲೂ ಪ್ರೇಮದ ಅಮಲನ್ನು ತಲೆಗೇರಿಸಿಕೊಂಡ, ಪ್ರೀತಿಸಿದವರ ಮುಂದೆ ನಿಂತು ಗಟ್ಟಿಯಾಗಿ, ಸ್ಪಷ್ಟವಾಗಿ 'ಐ ಲವ್ ಯೂ' ಎಂದು ಹೇಳಲು 'ಶಕ್ತಿ' ಇಲ್ಲದವರ ದಂಡೇ ಇದೆ. ಅವರನ್ನೆಲ್ಲ ನೆನಪಿಸಿಕೊಂಡಾಗ ಅನಿಸಿದ್ದು: ನಿನ್ನನ್ನು ಕೊಂದು ಬಿಡ್ತೀನಿ ಅನ್ನುವುದು ಸುಲಭ. ನಿನ್ನನ್ನು ಪ್ರೀತಿಸ್ತೀನಿ ಅನ್ನುವುದೇ ಕಷ್ಟ!
-ನಾನು ಪ್ರಣತಿ