ನಮಗೆ ಬೇಕಿರುವುದು ವೈಚಾರಿಕ ಉತ್ಸವಗಳು
ಇದು 21 ನೇ ಶತಮಾನ. ಈ ವೈಜ್ಞಾನಿಕ ಯುಗದಲ್ಲಿ ಮನುಷ್ಯ ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ್ದರೂ, ಕಂಪ್ಯೂಟರ್ನಂತಹ ಆಧುನಿಕ ಯಂತ್ರೋಪಕರಣಗಳನ್ನು ಸಾಕಷ್ಟು ಬಳಸುತ್ತಿದರೂ, ಇಂದಿಗೂ ಸಹ ಮೂಢ ನಂಬಿಕೆಗಳು, ಸಂಪ್ರದಾಯಗಳು ನಮ್ಮ ಬೆನ್ನು ಬಿಟ್ಟಿಲ್ಲದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಈ ನಂಬಿಕೆಗಳು ವಿಜ್ಞಾನ, ತಂತ್ರಜ್ಞಾನ ರಂಗಕ್ಕೆ ಅಪಮಾನ ಎಸಗಿದಂತೆ ಆಗುತ್ತದೆ. ಮೌಢ್ಯವನ್ನು ಬಿಂಬಿಸುವ ವ್ಯಕ್ತಿಯನ್ನಾಗಲಿ, ಮಠಗಳನ್ನಾಗಲಿ ಬೆಂಬಲಿಸುವುದು ಅದೆಷ್ಟು ಸರಿ?
ಈಗ ರಾಜ್ಯಾದ್ಯಂತ ಬಿಸಿ ಸುದ್ದಿಯಲ್ಲಿರುವುದು ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿನ ಆಚರಣೆಯೊಂದು. ಇದೇ ತಿಂಗಳು ಅಕ್ಟೋಬರ್ 5 ರಿಂದ 14 ರವರೆಗೆ ಧಾರ್ಮಿಕ ಪರಂಪರೆ ಹೆಸರಿನಲ್ಲಿ ನಡೆಯುತ್ತಿರುವ ಅಡ್ಡಪಲ್ಲಕ್ಕಿ ಉತ್ಸವ ಮಾನವನಿಗೆ ಅಪಮಾನವೆಸಗುವ ಸಂಪ್ರದಾಯವಾಗಿದೆ. ಮಠಾಧೀಶರೊಬ್ಬರನ್ನು ಜನರು ಪಲ್ಲಕ್ಕಿಯಲ್ಲಿ ಕುಳಿಸಿಕೊಂಡು ಮೆರವಣಿಗೆ ಮಾಡುವುದೇ ಅಡ್ಡಪಲ್ಲಕ್ಕಿ ಉತ್ಸವ. ಹಳೆಯ ಆಚಾರ ವಿಚಾರ, ಸಂಪ್ರದಾಯದ ಹೆಸರಿನಲ್ಲಿ ಸಾರ್ವಜನಿಕರನ್ನು ಅಜ್ಞಾನದ ಕಡೆಗೆ ಒಯ್ಯುವ ಗುಂಪು ಈ ಅಡ್ಡಪಲ್ಲಕ್ಕಿ ಉತ್ಸವವನ್ನು ನಡೆಸುತ್ತಿದೆ. ಜನರನ್ನು ಅಜ್ಞಾನಕ್ಕೆ ದೂಡಿ, ಅವರನ್ನು ತಮ್ಮ ಅಡಿಯಾಳಾಗಿಟ್ಟುಕೊಳ್ಳುವ ಮಠಾಧೀಶರು, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಜನರನ್ನು ಅಂಧಕಾರದಲ್ಲಿ ಮುಳುಗಿಸುವ ರಾಜಕಾರಣಿಗಳ ಸ್ವಾರ್ಥದಿಂದಾಗಿ ಮುಗ್ಧ ಜನರು ಬಲಿಯಾಗುತ್ತಿದ್ದಾರೆ.
ಅಡ್ಡಪಲ್ಲಕ್ಕಿಯಂಥ ಉತ್ಸವವು ಮಾನವ ಕುಲಕ್ಕೆ ಅನಿಷ್ಠವಾದುದಲ್ಲವೇ? ಇದರಿಂದಾಗಿ ಮಾನವ ಹಕ್ಕುಗಳ ಉಲಂಘನೆಯಾಗುವುದಿಲ್ಲವೇ? ಅನಾಗರಿಕ ಸಮಾಜ ಸೃಷ್ಟಿಯಾಗುವುದಿಲ್ಲವೇ? ಇಂತಹ ಅಡ್ಡ ಪಲ್ಲಕ್ಕಿ ಉತ್ಸವವು ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷ ನಡೆಯುವ ಮಡೆಸ್ನಾನಕ್ಕೆ ಸಮನಾದ ಅಥವಾ ಅದಕ್ಕಿಂತಲೂ ಘೋರವಾದ ಮೂಢನಂಬಿಕೆಯಲ್ಲದೇ ಮತ್ತೇನೂ ಅಲ್ಲ.
ಇಂಥ ಮೌಢ್ಯಗಳನ್ನು ನೋಡಿ ಮರುಗುತ್ತಿದ್ದ ಸ್ವಾಮಿ ವಿವೇಕಾನಂದರು, "ನಾಲ್ಕೈದು ಗಂಟೆಯ ನಂತರ ಸೂರ್ಯನಿಗೆ ಹಿಡಿದ ಗ್ರಹಣ ಬಿಡುತ್ತದೆ, ನಮ್ಮ ಜನರ ಬುದ್ದಿಗೆ ಹಿಡಿದ ಮೌಢ್ಯದ ಗ್ರಹಣ ಮಾತ್ರ ಯುಗ ಯುಗಗಳು ಕಳೆದರೂ ಬಿಡುತ್ತಲೇ ಇಲ್ಲ" ಎಂದು ಹೇಳಿದ್ದರು. ಅವರ ಈ ಮಾತು ಇಂದಿಗೂ ಸಹ ಪ್ರಸ್ತುತವೆನ್ನುವುದರಲ್ಲಿ ಎರಡು ಮಾತಿಲ್ಲ.
ಇನ್ನೊಂದು ಬಣ, ಅಡ್ಡಪಲ್ಲಕ್ಕಿ ಉತ್ಸವವನ್ನು ವಿರೋಧಿಸಲು, ಶರಣ ಪ್ರವಚನ ನಡೆಸಲು ಮುಂದಾಗಿದೆ. ಈ ಎರಡು ಬಣಗಳ ಕಚ್ಚಾಟದಲ್ಲಿ ಸಮಾಜದಲ್ಲಿ ಸಮಾನತೆ ಮೂಡಿಸುವುದಾಗಲಿ ಅಥವಾ ಜಾತಿ, ಬಡತನ ನಿಮೂರ್ಲನೆ ಮಾಡುವ ಉದ್ದೇಶವಾಗಲಿ ಕಾಣಿಸುತ್ತಿಲ್ಲ. ಇವರುಗಳ ನೈಜ ಉದ್ದೇಶವೇನು ಎನ್ನುವುದೇ ಅರ್ಥವಾಗುತ್ತಿಲ್ಲ. ರಾಷ್ಟ್ರಕವಿ ಕುವೆಂಪುರವರು "ಗುಡಿ-ಚರ್ಚು-ಮಸೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡಮಟ್ಟ ಕೀಳ ಬನ್ನಿ, ಮೌಢ್ಯತೆಯ ಮಾರಿಯನು ಹೊರ ದೂಡಲೈ ತನ್ನಿ, ವಿಜ್ಞಾನ ದೀವಿಗೆಯ ಹಿಡಿದು ಬನ್ನಿ" ಎನ್ನುವ ಮೂಲಕ ಜನರಿಗೆ ಅರಿವು ಮೂಡಿಸಿದ್ದರೂ ಸಹ ವಿದ್ಯಾವಂತರಾದ ನಾವೆಲ್ಲರೂ ಬದಲಾಗದೇ ಇರುವುದು ದುಃಖಕರ ಸಂಗತಿ. ಇನ್ನೊಂದು ಕಡೆಯೂ ಕುವೆಂಪುರವರು "ಹಳೆಮತದ ಕೊಳೆ ಹೊಸಮತದ ಹೊಳೆಯಲ್ಲಿ ಕೊಚ್ಚಿ ಹೋಗಲಿ ಎನ್ನುತ್ತಾರೆ. ಹೊಸ ಆಲೋಚನೆಗಳಿಗೆ ಮತ್ತು ವಿಜ್ಞಾನಕ್ಕೆ ಜಯವಾಗಬೇಕು ಎನ್ನುವ ಮುಖ್ಯವಾದ ಅಂಶವನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ.
ಈ ಮಠಾಧೀಶರು ಮತ್ತು ಸ್ವಾಮೀಜಿಗಳು "ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ವಾಕ್ಯವನ್ನು, ಮಾನವ ಶೋಷಣೆಗೆ ಜಯವಾಗಲಿ" ಎಂದು ಬದಲಾಯಿಸಲು ಮುಂದಾಗಿದ್ದಾರೆ ಎಂದನಿಸುವುದಿಲ್ಲವೇ? ಮನುಷ್ಯನಿಗೆ ನಂಬಿಕೆ ಮುಖ್ಯ ಹೌದು. ಆದರೆ ಯಾವುದೇ ವಿಷಯವಿರಲೀ ಸತ್ಯದ ಒರೆಗಲ್ಲಿಗೆ ಹಚ್ಚಿ, ವಿಮರ್ಶೆ ಮಾಡಿ ನಂಬಬೇಕು. ಈ ಮಾತನ್ನು 4ನೇ ಶತಮಾನದಲ್ಲಿಯೇ ಗೌತಮ ಬುದ್ಧ ಹೇಳಿದ್ದ. ನಂಬಿಕೆ, ಆಚರಣೆಗಳಿಂದ ಸಮಾಜದ ಉನ್ನತಿಯಾಗಬೇಕೇ ವಿನಹ ಸಮಾಜದ ಅವನತಿಯಾಗಬಾರದು ಎಂಬುದು ಅರ್ಥ ಮಾಡಿಕೊಳ್ಳಬೇಕಿದೆ.
ಅಡ್ಡ ಪಲ್ಲಕ್ಕಿ ಉತ್ಸವವನ್ನು ವಿರೋಧಿಸುತ್ತೇವೆ ಎಂದ ಪ್ರಗತಿಪರರೆನಿಸಿಕೊಂಡ ವ್ಯಕ್ತಿಗಳು, ಅಡ್ಡಪಲ್ಲಕ್ಕಿಗೆ ವಿರುದ್ಧವಾಗಿ ಶ್ವಾನ ಪಲ್ಲಕ್ಕಿ ನಡೆಸುತ್ತೇವೆ ಎಂದು ಕೂಗಾಡಿದರು. ಈಗ ಅವರುಗಳೇ ಪುರಾಣ-ಪ್ರವಚನ ಆಯೋಜಿಸುವ ಬಣಕ್ಕೆ ಬೆಂಬಲಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ?
ಮಹಾರಾಷ್ಟ್ರದಲ್ಲಿ ಮಾಟ, ಮಂತ್ರ, ಮೂಢನಂಬಿಕೆಯಂಥ ಅನಿಷ್ಠ ಪದ್ಧತಿಗಳ ವಿರುದ್ಧ ಆಂದೋಲನಕ್ಕೆ ಜೀವವನ್ನೇ ಕೊಟ್ಟರು ನರೇಂದ್ರ ದಾಭೋಲ್ಕರ್. ಅವರ ಹೋರಾಟದ ಫಲವಾಗಿ ಅಲ್ಲಿಯ ಸರ್ಕಾರವು ಎಚ್ಚೆತ್ತು ಕೊಂಡು ಮೂಢನಂಬಿಕೆ ವಿರೋಧಿ ಕಾನೂನನ್ನು ಜಾರಿಗೊಳಿಸಿದೆ. ಇದು ನಮ್ಮ ರಾಜ್ಯದಲ್ಲಿ ಏಕೆ ಸಾಧ್ಯವಿಲ್ಲ.
ನಮ್ಮ ರಾಜ್ಯದಲ್ಲಿ ಕೂಡಾ ಆದಷ್ಟು ಬೇಗ ಯಾವುದೇ ಒತ್ತಡಕ್ಕೆ ಮಣಿಯದೆ ಸಿದ್ದರಾಮಯ್ಯನವರು ಇಂಥ ಸಾಮಾಜಿಕ ಪಿಡುಗುಗಳನ್ನು ನಿಷೇಧಿಸುವ ಕಾಯ್ದೆಯನ್ನು ಜಾರಿಗೆ ತಂದು, ಜೇವರ್ಗಿಯಲ್ಲಿ ದಸರಾ ದರ್ಬಾರ್ ಹೆಸರಿನಲ್ಲಿ, ಧಾರ್ಮಿಕ ಸಂಸ್ಕೃತಿಯ ನೆಪದಲ್ಲಿ ಆಚರಣೆಯಲ್ಲಿರುವ, ಮನುಷತ್ವವನ್ನು ಅಣಕಿಸುವ ಅಡ್ಡಪಲ್ಲಕ್ಕಿ ಉತ್ಸವವನ್ನು ನಿಷೇಧಿಸಬೇಕು. ಅಡ್ಡ ಪಲ್ಲಕ್ಕಿ ಮತ್ತು ಶ್ವಾನ ಪಲ್ಲಕ್ಕಿಗಳಂಥ ಮೂಢನಂಬಿಕೆಗಳಿಂದ ಸಮಾಜಕ್ಕೆ ಏನು ಕೊಡುಗೆ ನೀಡಲು ತಾನೇ ಸಾಧ್ಯ ಎಂಬ ಪ್ರಶ್ನೆಗೆ ಪ್ರಜ್ಞಾವಂತ ನಾಗರಿಕರೇ ಉತ್ತರಿಸಲಿ. ಇಂತಹ ಅನಿಷ್ಠ ಉತ್ಸವಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಮತ್ತು ಮಾನವನ ಶೋಷಣೆಯಲ್ಲವೇ ಇದು?
ಇಂದಿನ ಸಮಾಜವು ಜಗದ್ಗುರುಗಳಿಂದ ಪೀಠಾಧಿಪತಿಗಳಿಂದ, ಸಾಧು-ಸಂತರಿಂದ ಸ್ವಾಮೀಜಿಗಳಿಂದ ದೇವರು ಧರ್ಮದ ಸಂಸ್ಕೃತಿ ಹೆಸರಿನಲ್ಲಿ ಅಜ್ಞಾನಕ್ಕೆ ಈಡಾಗಿದೆ. ಕಾಲ ಬದಲಾಗಿದೆಯಾದರೂ ಮೂಢನಂಬಿಕೆಗಳು ಮಾತ್ರ ಎಂದಿನಂತೆ ಮುಂದುವರಿದಿವೆ. ಮಠಾಧೀಶರು ಇಂಥ ಅವೈಜ್ಞಾನಿಕ ವಿಚಾರಗಳನ್ನು ಬಿತ್ತುವುದನ್ನು ಬಿಟ್ಟು, ಈಗಲಾದರೂ ನೈಜವಾಗಿ ಸಾಮಾಜಿಕವಾಗಿ ಕಳಕಳಿಯಿಂದ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಚಾರ, ಅಪೌಷ್ಠಿಕತೆ, ಹಸಿವು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳಂತಹ ಹತ್ತು ಹಲವಾರು ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಮುಂದಾಗಬೇಕು. ಇದೇ ನಿಜವಾದ ಸಾಮಾಜ ಸೇವೆಯಲ್ಲವೇ? ಇದು ಅವರ ಜವಾಬ್ದಾರಿಯಾಗಬೇಕಲ್ಲವೇ? ಕಚ್ಚಾಟಗಳನ್ನು ಪಕ್ಕಕ್ಕಿಟ್ಟು ನಿಜವಾದ ಪ್ರಗತಿಪರ ವಿಚಾರಗಳನ್ನು ಬಿತ್ತಬೇಕು. ಸಮಾಜದಲ್ಲಿ ಉತ್ತಮ ಮೌಲ್ಯ, ನೈತಿಕತೆ ಬೆಳೆಸಲು ಪಣ ತೊಡಬೇಕು.
(ಪಂಚಕಜ್ಜಾಯ ಮುಂದಿನ ವಾರದಿಂದ ಎಂದಿನಂತೆ)
-ಡಿ.ವಿ.ಭೀಮಾಶಂಕರ. ಪಾಣೇಗಾಂವ್
ಗುಲಬರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

