ಬ್ಯಾಂಕ್ಗಳನ್ನೂ ಮತಬ್ಯಾಂಕ್ಗೆ ಬಲಿ ಕೊಡುವುದೇ?
ಸರ್ಕಾರದಿಂದ ಆಗಾಗ ಹೊಸ ಬಂಡವಾಳ ಹಾಕಿಸಿ ದುರ್ಬಲ ರಾಷ್ಟ್ರೀಕೃತ ಬ್ಯಾಂಕುಗಳನ್ನು ಬಿಳಿ ಆನೆಯಂತೆ ಪೋಷಿಸುವುದಕ್ಕಿಂತ ಅಂತಹ ಬ್ಯಾಂಕುಗಳು ಇನ್ನೊಂದು ಪ್ರಬಲ ರಾಷ್ಟ್ರೀಕೃತ ಬ್ಯಾಂಕಿನೊಂದಿಗೆ ಸ್ವಇಚ್ಛೆಯಿಂದ ವಿಲೀನಗೊಳ್ಳವಂಥ ಅನಿವಾರ್ಯ ಸ್ಥಿತಿಯನ್ನು ಮಾರುಕಟ್ಟೆ ಶಕ್ತಿಯು ತಾನಾಗಿಯೇ ನಿರ್ಮಿಸುವಂತಹ ಭೂಮಿಕೆ ತಯಾರಿಸುವುದೇ ತಮ್ಮ ಆರ್ಥಿಕ ಧೋರಣೆ ಎಂದು ರಿಸರ್ವ್ಬ್ಯಾಂಕ್ನ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಸಾರ್ವಜನಿಕ ಯಾನೆ ರಾಷ್ಟ್ರೀಕೃತ ಬ್ಯಾಂಕುಗಳ ಬಗ್ಗೆ ಈ ಆರ್ಥಿಕ ನೀತಿಯೇನೋ ಸರಿ. ಕಾರಣ ಮುಂಬೈ ಮೂಲದ ಸೆಂಟ್ರಲ್ಬ್ಯಾಂಕ್ನಂಥ ಕೆಲವು ದುರ್ಬಲ ಬ್ಯಾಂಕುಗಳು ಕಿಂಗ್ ಫಿಷರ್ ವಿಮಾನ ಕಂಪನಿ ಮತ್ತು ವಿನ್ಸಮ್ ಡೈಮಂಡ್ಗಳಂತಹ ಕೋಟಿ-ಕೋಟಿಗಟ್ಟಲೆಯ ಭಾರೀ ಸುಸ್ತಿ ಸಾಲಗಳಿಂದಾಗಿ ತೀವ್ರ ಮೂಲ ಬಂಡವಾಳ ಸವೆತ ಅನುಭವಿಸಿ ಷೇರು ಮಾರುಕಟ್ಟೆಯಲ್ಲಿ ವಿಪರೀತ ಕುಸಿತ ಕಂಡು ಷೇರುದಾರರಿಗೆ ಭಾರೀ ನಷ್ಟ ಉಂಟು ಮಾಡಿವೆ. ಇಂಥ ದುರ್ಬಲ ಬ್ಯಾಂಕುಗಳು ಸ್ಟೇಟ್ಬ್ಯಾಂಕಿನಂಥ ಪ್ರಬಲ ಬ್ಯಾಂಕಿನೊಂದಿಗೆ ವಿಲೀನಗೊಂಡರೆ ಎರಡೂ ಕಡೆಯವರಿಗೂ ಉತ್ತಮ.
ಆದರೆ, ಒಂದು ಸಹಕಾರಿ ಬ್ಯಾಂಕಾದ ಬೆಂಗಳೂರಿನ ಅಮಾನತ್ ಕೋ-ಆಪರೇಟಿವ್ ಬ್ಯಾಂಕಲ್ಲಿ ಆಡಳಿತದಲ್ಲಿದ್ದ ಒಂದು ರಾಜಕೀಯ ಗುಂಪಿನ ರೂ.113 ಕೋಟಿಯ ಭಾರೀ ಮೋಸದಿಂದ ಆ ಬ್ಯಾಂಕು ಅತೀವ ನಷ್ಟ ಅನುಭವಿಸಿದೆ. ಈಗ ಆ ರಾಜಕೀಯ ನೇತಾರರನ್ನು ಕಾನೂನಿನ ಕುಣಿಕೆಯಿಂದ ರಕ್ಷಿಸಲು ಈ ಮುಸ್ಲಿಂ ಸಹಕಾರಿ ಬ್ಯಾಂಕನ್ನು ಒಂದು ರಾಷ್ಟ್ರೀಕೃತ ಕೆನರಾ ಬ್ಯಾಂಕಿನಲ್ಲಿ ಒತ್ತಾಯಪೂರ್ವಕವಾಗಿ ವಿಲೀನಗೊಳಿಸಿ ಆ ಮೋಸಗಾರರನ್ನು ರಕ್ಷಿಸುವ ರಾಜಕೀಯದಾಟ ಸರಿಯೇ? ಭಾರತ ದೇಶದಲ್ಲಿ ಪ್ರತಿ ವರ್ಷ ಕನಿಷ್ಠ ಹತ್ತು-ಹದಿನೈದು ಜಾತಿವಾರು ಸಹಕಾರಿ ಬ್ಯಾಂಕುಗಳಾದರೂ ಮುಳುಗುತ್ತವೆ. ಅಂಥ ಬ್ಯಾಂಕುಗಳ ಆ ಜಾತಿಯ ಷೇರುದಾರರು ಮತ್ತು ಠೇವಣಿದಾರರು ಲಕ್ಷಗಟ್ಟಲೆ ಹಣ ಕಳೆದುಕೊಂಡು ಬೀದಿಗೆ ಬೀಳುತ್ತಾರೆ. ಆದರೆ ಅಂಥ ಬ್ಯಾಂಕುಗಳ ಅಮಾಯಕ ಷೇರುದಾರರು ಮತ್ತು ಠೇವಣಿದಾರರ ಬಗ್ಗೆ ಇಲ್ಲದ ಕನಿಕರ ಈಗ ಅಮಾನತ್ ಸಹಕಾರಿ ಬ್ಯಾಂಕಿನ ನಲ್ವತ್ತು ಸಾವಿರ (ಮುಸ್ಲಿಂ) ಷೇರುದಾರರು ಮತ್ತು ಮುಸ್ಲಿಂ ಠೇವಣಿದಾರರ ಬಗ್ಗೆ ಕೇಂದ್ರ ಸರಕಾರಕ್ಕೆ ಮತ್ತೂ ರಿಸರ್ವ್ ಬ್ಯಾಂಕಿಗೆ ಒಮ್ಮೆಲೇ ಕನಿಕರ ಉಮ್ಮಳಿಸಿದ್ದು ಹೇಗೆ? ಈ ಬ್ಯಾಂಕಿನಲ್ಲಿರುವ ರೂ.120 ಕೋಟಿ ಸುಸ್ತಿ ಸಾಲದ ಜತೆಗೆ ರೂ.113 ಕೋಟಿ ಋಣಾತ್ಮಕ ಬಂಡವಾಳ (ನಷ್ಟ) ಮತ್ತೂ 420 ಜನ (ಮುಸ್ಲಿಂ) ನೌಕರರು ಇವರನ್ನೆಲ್ಲ ಕೆನರಾ ಬ್ಯಾಂಕು ತಾನು ವಹಿಸಿಕೊಂಡು ತನ್ನ ತಲೆಯ ಮೇಲೆ ತನ್ನ ಕೈಯಿಂದಲೇ ಚಪ್ಪಡಿ ಎಳೆದುಕೊಳ್ಳಬೇಕೆಂದು ಕೇಂದ್ರದ ವಿತ್ತ ಸಚಿವರು ಮತ್ತು ಅಲ್ಪಸಂಖ್ಯಾತ ಖಾತೆಯ ಮಂತ್ರಿ ಬಯಸುತ್ತಿರಲು ಕಾರಣವೇನು? ಬ್ಯಾಂಕಿನ ರೂ.113 ಕೋಟಿ ನಷ್ಟದಲ್ಲಿ ಹೆಚ್ಚಿನ ಭಾಗ ಡೈರೆಕ್ಟರುಗಳ ಧನಿಕ ಸಂಬಂಧಿಕರಿಗೆ ಕೊಟ್ಟ ಬೇನಾಮೀ ಸಾಲಗಳ ರೈಟ್-ಆಫ್ ಮತ್ತು ಒಟಿಎಸ್ ಸೆಟಲ್ಮೆಂಟುಗಳಿಂದಾಗಿಯೇ ಉಂಟಾಗಿರುವುದು ಎಂದು ರಿಜಿಸ್ಟ್ರಾರ್ ಆಫ್ ಸೊಸೈಟೀಸ್ ಇವರೇ ಅಧಿಕೃತವಾಗಿ ಷರಾ ಬರೆದಿದ್ದಾರೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಡಿಟರುಗಳು ಸ್ವತಃ ಕೇಂದ್ರ ಸಚಿವರೊಬ್ಬರ ವಿರುದ್ಧ ಶೀಘ್ರ ಮೊಕದ್ದಮೆ ಹೂಡುವಂತೆ ಶಿಫಾರಸು ಸಹಾ ಮಾಡಿದ್ದಾರೆ. ಅದಕ್ಕಾಗಿ ಈ ಎಲ್ಲಾ ಕಾನೂನು ಕುಣಿಕೆಗಳಿಂದ ಮೈನಾರಿಟಿ ಅಫೇರ್ ಮಂತ್ರಿವರ್ಯರನ್ನು ಬಚಾವು ಮಾಡಲು ಆ ಮುಳುಗಿದ ಸಹಕಾರಿ ಬ್ಯಾಂಕನ್ನು ಕೆನರಾ ಬ್ಯಾಂಕಿನ ಕೊರಳಿಗೆ ಒರಳು ಕಲ್ಲಿನಂತೆ ನೇತು ಹಾಕುವ ಹುನ್ನಾರ ಯಾರದ್ದು? ಅದೂ ಸಂಸದೀಯ ಚುನಾವಣೆ ಹತ್ತಿರ ಬರುತ್ತಿದಂತೆ ಅಲ್ಪಸಂಖ್ಯಾತರ ವೋಟ್ ಗಳಿಕೆಗೆ ಈ ಎಲ್ಲ ಚದುರಂಗದಾಟ. ಇದರಲ್ಲಿ ಕೊನೆಗೆ ನಷ್ಟಕ್ಕೊಳಗಾಗುವುದು ಕೆನರಾ ಬ್ಯಾಂಕಿನ ಲಕ್ಷಾಂತರ ಷೇರುದಾರರು ಮತ್ತು ಕೆನರಾ ಬ್ಯಾಂಕಿನ ನೌಕರವೃಂದ. ಅಮಾನತಿನಲ್ಲಿ ಕೇವಲ 16 ಶಾಖೆಗಳಿಗೆ 420 ಸಿಬ್ಬಂದಿ. ಅಂದರೆ ಒಂದು ಶಾಖೆಗೆ 26 ಸಿಬ್ಬಂದಿ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 16 ಶಾಖೆಗೆ ಹೆಚ್ಚೆಂದರೆ 120 ಜನ ಸಿಬ್ಬಂದಿ ಇರುತ್ತಾರೆ ಅಷ್ಟೇ. ಹೆಚ್ಚು ಪರಿಣತಿಯಿಲ್ಲದ ಡೈರೆಕ್ಟರುಗಳ ಸಂಬಂಧಿಗಳೇ ಆಗಿರುವ 420 ಜನ ಅಮಾನತ್ ಸಿಬ್ಬಂದಿ ಕೆನರಾ ಬ್ಯಾಂಕಿಗೆ ದೊಡ್ಡ ಹೊರೆ. ಏಳು ವರ್ಷಗಳ ಹಿಂದೆ ಆಗಿನ ವಿತ್ತಮಂತ್ರಿಗಳ ಒತ್ತಡದಿಂದಲೇ ಕೆನರಾ ಬ್ಯಾಂಕಿನ ಅತಿ ಸುಂದರ ಅರ್ಥವಿದ್ದ ಚಾರಿತ್ರಿಕ ಚಿನ್ಹೆಯನ್ನು (ಲೋಗೋ) ವಿನಾಕಾರಣ ಬದಲಾಯಿಸಲಾಯಿತು. ಈಗ ಅಲ್ಪಸಂಖ್ಯಾತರ ವೋಟ್ ಬ್ಯಾಂಕಿಗಾಗಿ ಕೆನರಾ ಬ್ಯಾಂಕು ಮತ್ತೊಮ್ಮೆ ಬಲಿ!
- ರವಿ. ಬಿ. ಶೇಣವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

