ಅಂಕಣಗಳು

ಜಾತ್ಯತೀತತೆಯ ಸಮಾಧಿ ಕಟ್ಟಿದ ವೋಟ್‌ಬ್ಯಾಂಕ್ ವ್ಯಾಧಿ

Published On :

ಈ ಜಾತ್ಯತೀತ ಎನ್ನುವ ಭಾವನೆ ಬಹುಸಂಖ್ಯಾತ ಹಿಂದುಗಳಲ್ಲಿ ನೈಜವಾಗೇ ಇದೆ. ಭಾರತ ಶತಶತಮಾನಗಳಿಂದಲೂ ಸರ್ವಧರ್ಮ-ಸಮಭಾವ ಸಿದ್ಧಾಂತವನ್ನು ಅನುಸರಿಸಿ, ಅದನ್ನು ಅಂತರ್ಗತ ಮಾಡಿಕೊಂಡಿದೆ.

ಅಂತೂ ಭಾರತದ ಅನೇಕ ಮುಸ್ಲಿಂ ನಾಯಕರಲ್ಲಿ ನಿಜವಾದ ಜಾತ್ಯತೀತತೆಯ ಅರಿವು ಮೂಡಲಾರಂಭಿಸಿದೆ. ಜಮೀಯತ್ ಇ-ಉಲೇಮಾ ಹಿಂದ್ ಮುಖ್ಯಸ್ಥ ಮೌಲಾನಾ ಮೆಹ್ಮೂದ್ ಮದನಿ ಹೇಳಿಕೆ ಅದನ್ನು ಪುಷ್ಟೀಕರಿಸಿದೆ. ಇಷ್ಟೇ ಅಲ್ಲ, ಭಾರತದ ಎಲ್ಲ ಅಲ್ಪಸಂಖ್ಯಾತ ವರ್ಗಗಳ ಜನಮಾನಸದಿಂದಲೂ ಈ ರೀತಿಯ ಚಿಂತನೆ ಹೊರಬರಬೇಕಿದೆ. ಏಕೆಂದರೆ ನಮ್ಮ ದೇಶದ ಅಧಿಕಾರಸ್ಥರು ಇಂಗ್ಲಿಷರಂತೆ ಒಡೆದು ಆಳುವ ನೀತಿಯನ್ನೇ ಅನುಸರಿಸಿಕೊಂಡು ಪಟ್ಟ ಹಿಡಿಯಲು ಶಕ್ತರಾಗಿರುವುದರಿಂದ ಇದಕ್ಕಿಂತ ಸೂಕ್ತ ಮಾರ್ಗ ಇನ್ನೊಂದಿಲ್ಲ.
ಅಲ್ಪಸಂಖ್ಯಾತರಿರಲಿ ಬಹುಸಂಖ್ಯಾತರಿರಲಿ, ಸಾಮರಸ್ಯದ ಬದುಕು ಸಿಗಬೇಕಾದರೆ ಒಬ್ಬರು ಮತ್ತೊಬ್ಬರ ನಂಬಿಕೆಗಳನ್ನು ಗೌರವಿಸುವುದನ್ನು ಕಲಿತಾಗಲೇ ಹೊರತು ರಾಜಕೀಯ ಪಕ್ಷಗಳ ಘೋಷಣೆಗಳು ಅಥವಾ ಅವು ಕೊಡುವ ಅನುದಾನಗಳಿಂದಲ್ಲ. ಓಲೈಕೆ ನೀತಿ ಇನ್ನಷ್ಟು ಕಂದಕವನ್ನು ಸೃಷ್ಟಿಸಬಲ್ಲದೇ ಹೊರತು ಕೂಡಿ ಬಾಳುವುದನ್ನಂತೂ ಕಲಿಸುವುದಿಲ್ಲ. ಕಾಂಗ್ರೆಸ್ ಆದಿಯಾಗಿ ಎಲ್ಲ ಜಾತ್ಯತೀತ ಪಕ್ಷಗಳೂ ಲೋಕಸಭಾ ಚುನಾವಣೆ ಘೋಷಣೆ ಆಗುವ ಒಳಗಾಗಿ ಅಲ್ಪಸಂಖ್ಯಾತರನ್ನು ಓಲೈಸಲು ಇನ್ನಿಲ್ಲದ ಕಸರತ್ತು ಮಾಡುತ್ತವೆ.
ಅಸಹ್ಯವೆನಿಸುವಷ್ಟು ಆಶ್ವಾಸನೆ ನೀಡುವಲ್ಲಿ ಪೈಪೋಟಿ ನಡೆಸುತ್ತವೆ. ಮೋದಿ ಆಡಳಿತದಲ್ಲಿ ಯಾರ ಓಲೈಕೆಯೂ ಕಾಣಿಸದು. ಎಲ್ಲರೂ ಸಮಾನರು ಎನ್ನುತ್ತಾರವರು. ಕಳೆದ ಹನ್ನೊಂದು ವರ್ಷಗಳಲ್ಲಿ ಗುಜರಾತ್‌ನಲ್ಲಿ ಒಂದೂ ಕೋಮುಗಲಭೆಗಳು ನಡೆದಿಲ್ಲ. ಅದೇ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಅಖಿಲೇಶ್ ಸರ್ಕಾರ ಬಂದು ಕೇವಲ ಹದಿಮೂರು ತಿಂಗಳಲ್ಲೇ ನೂರಾ ಹದಿಮೂರಕ್ಕೂ ಹೆಚ್ಚು ಹತ್ಯೆಗಳು ನಡೆದಿವೆ! ದೊಂಬಿಗಳಿಗೂ ಇವರ ಓಲೈಕೆಯ ರಾಜಕಾರಣಕ್ಕೂ ತುಂಬಾ ನಂಟಿದೆ ಎಂದು ಅನಿಸದಿರದು.
ಕರ್ನಾಟಕದಲ್ಲಿ ಹಿಂದೆ ಬಿಜೆಪಿ ಸರ್ಕಾರ ಮಠಗಳಿಗೆ ಅನುದಾನ ನೀಡಿದರೆ ಪ್ರಶ್ನಿಸುತ್ತಿದ್ದ ಸಿದ್ದರಾಮಯ್ಯನವರು ಈಗ ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗೆ ಅನುದಾನ ನೀಡಲು ಹೊರಟಿರುವುದು ದ್ವಂದ್ವ ನಿಲುವಲ್ಲವೇ? ಇದು ಓಲೈಕೆಯಲ್ಲದೇ ಮತ್ತೇನು? ಗೋಹತ್ಯೆ ಹತ್ಯೆ ವಿರೋಧಿ ಕಾನೂನನ್ನು ಹಿಂತೆಗೆದುಕೊಂಡ ಮುಖ್ಯಮಂತ್ರಿಗಳ ಹಿಂದಿರುವ ತಾರತಮ್ಯ ನೀತಿ ಇಲ್ಲಿನ ಬಹುಸಂಖ್ಯಾತರ ಮನಸ್ಸಿಗೆ ಯಾವ ಸಂದೇಶ ರವಾನಿಸಬಹುದೆನ್ನುವುದನ್ನು ಯೋಚಿಸಿ? ಇದು ತುಷ್ಟೀಕರಣದ ಪರಮಾವಧಿ ಅಲ್ಲವೇ? ಭಾರತದ ರಾಜಕೀಯ ಪಕ್ಷಗಳು ಮತ್ತು ಕೆಲವು ತಥಾಕಥಿತ ವಿಚಾರವಾದಿ ಸಂಘಟನೆಗಳು ಆಗಾಗ ತಾವು ಜಾತ್ಯತೀತರೆಂದು ನಿರೂಪಿಸುವ ಪ್ರಯತ್ನದಲ್ಲಿ ಜಾತ್ಯತೀತತೆ ಎಂಬ ಪದದ ಅರ್ಥವನ್ನೇ ಹಾಳುಗೆಡವುತ್ತಿವೆ. ಹಾಗೆ ನೋಡಿದರೆ, ಜಾತ್ಯತೀತ ಮತ್ತು ಕೋಮುವಾದ ಎಂಬ ಶಬ್ದಗಳ ಅರ್ಥವನ್ನು ನಮ್ಮಲ್ಲಿನ್ನಂತೆ ಜಗತ್ತಿನ ಯಾವುದೇ ಪ್ರಜಾಪ್ರಭುತ್ವ ದೇಶದಲ್ಲೂ ಅನರ್ಥಗೊಳಿಸಲಾಗಿಲ್ಲ. ಏಕೆ ಹೀಗೆ ಎಂದು ನೋಡಿದಾಗ, ಉತ್ತರವೂ ಸಿಗುತ್ತದೆ. ಸೆಕ್ಯುಲರ್ ನೀತಿಯಿರುವ ಅಮೆರಿಕದಲ್ಲಿ ಗುಡ್‌ಫ್ರೈಡೆಯಂದು ಅಲ್ಲಿನ ಎಲ್ಲಾ ವಿಧದ ರಕ್ಷಣಾ ವ್ಯವಸ್ಥೆಗಳಲ್ಲಿ ಚರ್ಚಿನ ಧಾರ್ಮಿಕ ವಿಧಿ-ವಿಧಾನಗಳು ನಡೆಯುತ್ತವೆ. ಸೈನಿಕರನ್ನುದ್ದೇಶಿಸಿ ಮಾತಾಡಲು ಅಲ್ಲಿ ಕ್ರೈಸ್ತ ಧರ್ಮಗುರುಗಳನ್ನು ಆಹ್ವಾನಿಸಲಾಗುತ್ತದೆ. ಅದು ಅವರ ಜಾತ್ಯತೀತತೆಗೆ ತೊಡಕಾಗುವುದಿಲ್ಲ. ಅಮೆರಿಕದ ಸಂಸತ್ತಿನಲ್ಲಿ ಹಿಂದುಗಳ ಪವಿತ್ರ ಹಬ್ಬವಾದ ದೀಪಾವಳಿಯನ್ನು ಆಚರಿಸಲಾಗುತ್ತದೆ, ಅದನ್ನು ಅಲ್ಲಿ ಯಾರೂ ಪ್ರಶ್ನಿಸುವುದಿಲ್ಲ. ಪಾಶ್ಚಾತ್ಯ ದೇಶಗಳ ಜಾತ್ಯತೀತ ಕಲ್ಪನೆಯಲ್ಲಿ ಅಲ್ಲಿನ ರಾಜಕೀಯ ಪ್ರಬುದ್ಧತೆ ಕಾಣುತ್ತದೆ. ಅದೇ ಭಾರತದಲ್ಲಿ? ಅಲ್ಪಸಂಖ್ಯಾತರ ಓಲೈಕೆಯ ಸೆಕ್ಯುಲರ್ ಆಗುತ್ತದೆ! ಬಹುಸಂಖ್ಯಾತರ ನಂಬಿಕೆಗಳನ್ನು ಮಾನ್ಯ ಮಾಡುವುದು ಕೋಮುವಾದ ಎನಿಸುತ್ತದೆ. ಹಾಗಾಗಿ ಈ ಪದವೇ ಭಾರತದ ಮಟ್ಟಿಗೆ ಅತ್ಯಂತ ಗೊಂದಲದ್ದು.  ಇಲ್ಲಿ ಬಹುಸಂಖ್ಯಾತರ ನಂಬಿಕೆ-ಶ್ರದ್ಧೆಗಳನ್ನು ತೆಗಳುವುದೇ ಅಭಿವ್ಯಕ್ತಿ ಸ್ವಾತಂತ್ರ್ಯ ಎನಿಸಿಕೊಳ್ಳುತ್ತದೆ. ಅದೇ ಅಲ್ಪಸಂಖ್ಯಾತರಲ್ಲಿನ ದೋಷಗಳನ್ನು ಹೇಳುವಾಗ ಮೌನಕ್ಕೆ ಶರಣಾಗಲಾಗುತ್ತದೆ. ಹೀಗಾಗಿ ಭಾರತದಲ್ಲಿನ ಕೋಮುಸಾಮರಸ್ಯಕ್ಕೆ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಕೊಡಲಿ ಪೆಟ್ಟು ಬೀಳುತ್ತಿದೆ.
ಈ ದೇಶದ ರಾಜಕೀಯ ವ್ಯವಸ್ಥೆ ಅದೆಂದೋ ಜಾತ್ಯತೀತತೆಯ ಸಮಾಧಿ ಮಾಡಿ ಬಿಟ್ಟಿದೆ. ಭಾರತದ ಮಣ್ಣಿನಲ್ಲೇ ಸರ್ವಮತ-ಸಮಭಾವದ ಘಮವಿದೆ. ಇಲ್ಲಿನ ಮೂಲ ಚಿಂತನೆಯಾದ ವಿವಿಧತೆಯಲ್ಲಿ ಏಕತೆ ಎಂಬ ಮಾತೇ ಅರ್ಥ ಕಳೆದುಕೊಳ್ಳುತ್ತಿದೆ. ಇದಕ್ಕೆಲ್ಲ ಕಾರಣ ಈ ಸೆಕ್ಯುಲರ್ ರಾಜಕಾರಣ. ಎಜಾಜ್ ಅಹಮದ್ ಎಂಬ ಲೇಖಕರು ಹೇಳುವಂತೆ- "ಈ ದೇಶದಲ್ಲಿ ಕೋಮುದಳ್ಳುರಿ ಹಚ್ಚಿ ಪಾಕಿಸ್ತಾನವೆಂಬ ಇಸ್ಲಾಂ ರಾಷ್ಟ್ರ ಉದಯವಾಯಿತು. ಭಾರತದಲ್ಲಿನ ಬಹುಸಂಖ್ಯಾತರು ಹಿಂದುಗಳೇ ಆದರೂ, ಜಾತ್ಯತೀತತೆಯ ತಳಹದಿಯ ಮೇಲೆಯೇ ಹೊಸ ರಾಷ್ಟ್ರದ ನಿರ್ಮಾಣವಾಯಿತು. ಭಾರತ ಒಂದು ರಾಷ್ಟ್ರವಾಗಿ ರೂಪುಗೊಳ್ಳುವ ಸಂದರ್ಭದಲ್ಲಿದ್ದ ಆರ್ಥಿಕ ಮತ್ತು ಸಾಕ್ಷರತಾ ಪ್ರಮಾಣ ಎಷ್ಟು ಕೆಳಮಟ್ಟದಲ್ಲಿತ್ತೆಂದರೆ, ಅಂಥ ಸ್ಥಿತಿ ಬೇರೇ ದೇಶಗಳಲ್ಲಿದ್ದಿದ್ದರೆ ಅವು ಯಾವತ್ತೂ ಸೆಕ್ಯುಲರ್ ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಈ ಜಾತ್ಯತೀತ ಎನ್ನುವ  ಭಾವನೆ ಬಹುಸಂಖ್ಯಾತ ಹಿಂದುಗಳಲ್ಲಿ ನೈಜವಾಗೇ ಇತ್ತು. ಭಾರತ ಶತಶತಮಾನಗಳಿಂದಲೂ ಸರ್ವಧರ್ಮ-ಸಮಭಾವ ಸಿದ್ಧಾಂತವನ್ನು ಅನುಸರಿಸಿ, ಅದನ್ನು ಅಂತರ್ಗತ ಮಾಡಿಕೊಂಡಿದೆ. ಇಂದಿಗೂ ರಾಜಕೀಯ ಕುತಂತ್ರಗಳಿಲ್ಲವೆಂದರೆ, ಈ ದೇಶದ ಯಾವುದೇ ಭಾಗದಲ್ಲಿ ಅಲ್ಪಸಂಖ್ಯಾತನೊಬ್ಬ ಬಹುಸಂಖ್ಯಾತ ಹಿಂದುಗಳೊಂದಿಗೆ ತನ್ನ ಧಾರ್ಮಿಕ ನಂಬಿಕೆ-ಶ್ರದ್ಧೆಗಳನ್ನು ಉಳಿಸಿಕೊಂಡು ಬದುಕಬಲ್ಲ. ಆದರೆ ಅದೇ ಇಸ್ಲಾಮಿಕ್ ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತರು ಹೀಗೆ ಬದುಕಬಲ್ಲರೇ? ಅಷ್ಟೇ ಏಕೆ, ನಮ್ಮದೇ ದೇಶದ ಭಾಗವಾಗಿರುವ ಕಾಶ್ಮೀರದಲ್ಲಿ ಅಲ್ಲಿನ ಹಿಂದುಗಳ ಸ್ಥಿತಿ ಹೇಗಿದೆ ಎನ್ನುವುದು ವಿವರಿಸಿ ಹೇಳಬೇಕಿಲ್ಲ. ಮತಾಂತರ ಗೊಂಡು ಕ್ರೈಸ್ತ ಮತವನ್ನು ಅನುಸರಿಸುತ್ತಿರುವ ಈಶಾನ್ಯ ರಾಜ್ಯಗಳಲ್ಲಿ ಎಲ್ಲೆಡೆಯೂ ಇಂದು ರಾಷ್ಟ್ರ ವಿರೋಧಿ ಭಾವನೆಗಳೇ ತುಂಬಿದೆ ಎಂದರೆ ಇದೆಲ್ಲ ಹುಸಿ ಜಾತ್ಯತೀತಯೇ ಪಾಪದ ಕೂಸು ಎಂದೆನಿಸುವುದಿಲ್ಲವೇ? ಸೆಕ್ಯುಲರ್ ಅನ್ನುವ ಶಬ್ದದ ಮೂಲ ಅರ್ಥವನ್ನು ಯಾರೂ ಸರಿ ಮಾಡಲಾರದಷ್ಟು ವಿರೂಪ ಮಾಡಿವೆ ಈ ದೇಶದ ರಾಜಕೀಯ ಪಕ್ಷಗಳು ಮತ್ತು ವಿಚಾರ'ವ್ಯಾಧಿ' ಸಂಘಟನೆಗಳು. ಈ ಹಿನ್ನೆಲೆಯಲ್ಲಿ ಎಲ್ಲ ಅಲ್ಪಸಂಖ್ಯಾತ ಬಂಧುಗಳು ಸಾಮರಸ್ಯದ ಭಾರತೀಯ ಚಿಂತನೆಯ ಮೂಸೆಯಿಂದ ಮೂಡಿರುವ ವಿಚಾರಗಳನ್ನು ಅಂತರ್ಗತ ಮಾಡಿಕೊಂಡಲ್ಲಿ, ಈ ದೇಶ ನಮ್ಮ ಜೀವಿತಾವಧಿಯಲ್ಲೇ ಸರ್ವ ಜನಾಂಗದ ಶಾಂತಿಯ ತೋಟ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಈ ರಾಷ್ಟ್ರದ ಅಲ್ಪಸಂಖ್ಯಾತ ವರ್ಗದ ನಾಯಕರರಲ್ಲಿ ಮತ್ತಷ್ಟು ಚಿಂತನ-ಮಂಥನ ನಡೆಯಬೇಕಿದೆ.

- ಡ್ಯಾನಿ ಪಿರೇರಾ
danyperera27@gmail.com
ಹಳ್ಳಿಮೈಸೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.