ದಸರೆಯ ನೆಪದಲ್ಲಿ ಸಾಲು ಸಾಲಾಗಿ ರಜೆಗಳು ಬಂದವಲ್ಲ; ಆಗ ನಾವು ಮಾಡಿದ ಘನಂದಾರಿ ಕೆಲಸವೆಂದರೆ ಶಾಪಿಂಗ್‌ಗೆ ಹೋಗಿದ್ದು. ಎದುರಾದ ಎಲ್ಲ ಅಂಗಡಿಗಳಿಗೂ ನಾವು ಭೇಟಿ ಕೊಟ್ಟೆವು. ವಾಚು, ಸೀರೆ, ಬಳೆ, ಚೂಡಿದಾರ್‌ಗಳ ರಾಶಿಯ ಮಧ್ಯೆ ಕೂತೆವು. ಅಂಗಡಿಯವನು ಹೇಳುತ್ತಾನಲ್ಲ; ಅದರ ಅರ್ಧ ಬೆಲೆಗೆ ಕೇಳಿದೆವು. 'ಅಷ್ಟೊಂದು ಕಡಿಮೆ ಬೆಲೆಗೆ ಕೊಡೋಕಾಗಲ್ಲ' ಎಂದು ಅವರು ಹೇಳುತ್ತಿದ್ದಂತೆಯೇ ಹೊರಬಿದ್ದೆವು. ಕೆಲವು ಅಂಗಡಿಯವರು ನಾವು ಹೇಳಿದ ಬೆಲೆಯನ್ನು ತಕ್ಷಣ ಒಪ್ಪಿಕೊಂಡು ಅಷ್ಟೇ ಕೊಡಿ ಪರವಾಗಿಲ್ಲ ಎನ್ನುತ್ತಾ ನಮ್ಮನ್ನು ತಬ್ಬಿಬ್ಬು ಮಾಡುತ್ತಿದ್ದರು. ಆಗೆಲ್ಲಾ ಎಟಿಎಂನಿಂದ ಹಣ ತರಲಿಕ್ಕಿದೆ ಎಂದೋ, ಆ ಕಡೆಯಿಂದ ವಾಪಸ್ ಬರುವಾಗ ಖರೀದಿಸುತ್ತೇವೆ ಎಂದೋ ಸುಳ್ಳು ಹೇಳಿ ಜಾರಿಕೊಳ್ಳುತ್ತಿದ್ದೆವು.
ಮೊನ್ನೆ ಹೀಗೇ ಒಂದು ಮಾಲ್‌ಗೆ ಹೋದೆವು. ಅಲ್ಲಿ, 1500 ರೂ. ಬೆಲೆಯ ವಸ್ತುಗಳನ್ನು ಖರೀದಿಸಿದರೆ ತಿಂಗಳ ನಂತರ ನಡೆಯುವ ಲಕ್ಕಿ ಡ್ರಾದಲ್ಲಿ ಒಂದು ಲಕ್ಷ ರೂ. ಮೌಲ್ಯದ ಚಿನ್ನ ಗೆಲ್ಲುವ ಅವಕಾಶ ಎಂಬ ಘೋಷಣೆಯಿತ್ತು. ಚಿನ್ನದ ಮೋಹ ಯಾರಿಗಿಲ್ಲ ಹೇಳಿ; ನಾವು ಗೆಳತಿಯರೆಲ್ಲ ಲಕ್ಕಿ ಡ್ರಾ ಕೂಪನ್ ಪಡೆದು, ಅದನ್ನು ಭರ್ತಿ ಮಾಡಿ, ಮಾಲ್‌ನಲ್ಲಿದ್ದ ಬಾಕ್ಸ್‌ನೊಳಕ್ಕೆ ಅದನ್ನು ಹಾಕಿ ರೂಂಗೆ ವಾಪಸಾದೆವು. ಮರುದಿನ ಬೆಳಿಗ್ಗೆ ಗೆಳತಿ ದೀಪಿಕಾ ಇದ್ದಕ್ಕಿದ್ದಂತೆಯೇ ಘೋಷಿಸಿದಳು:'ಲಕ್ಕಿ ಡ್ರಾ ಬಹುಮಾನ ನಂಗೇ ಸಿಗುತ್ತೆ! ಅವಳ ಮಾತಿಂದ ನಮಗೆಲ್ಲಾ ಆಶ್ಚರ್ಯ. ಅಷ್ಟೊಂದು ಖಡಕ್ಕಾಗಿ ಹೇಗೇ ಹೇಳ್ತೀಯ? ಡ್ರಾ ಎತ್ತೋದು ನಿಮ್ಮ ಅತ್ತೆ ಮಗನಾ ಎಂದು ರೇಗಿಸಿದ್ವಿ. 'ಹಾಗಲ್ಲ ಕಣ್ರೇ, ನಂಗೆ ಒಂದು ಲಕ್ಷ ರೂ. ನ ಬಹುಮಾನ ಸಿಗುವಂತೆ ಮಾಡಿದ್ರೆ 2 ಸಾವಿರ ರು.ಗಳನ್ನು ಹುಂಡಿಗೆ ಹಾಕ್ತೇನೆ ಅಂತ ಮನೆದೇವರಿಗೆ ಹರಕೆ ಕಟ್ಟಿಕೊಂಡಿದ್ದೇನೆ. ದೇವರು ಅನ್ಯಾಯ ಮಾಡಲಾರ...'
ದೇವರಿಗೆ ಹರಕೆ ಕಟ್ಕೊಂಡಿದೀನಿ. ಹಾಗಾಗಿ ಬಹುಮಾನ ನನಗೇ ಸಿಗುತ್ತೆ ಎಂಬ ಅವಳ ಮಾತು ಕೇಳಿ ನಗು ಬಂತು. ಅದೇ ಸಮಯಕ್ಕೆ, ಇಂಟರ್‌ನೆಟ್‌ನಲ್ಲಿ ಓದಿದ ಕಥೆಯೊಂದರ ನೆನಪೂ ಬಂತು. ಆ ಕಥೆಯ ವಿವರಣೆ ಹೀಗೆ: ಕೋಟ್ಯಾಧಿಪತಿಯೊಬ್ಬ ಬಿಜಿನೆಸ್‌ನ ಕಾರಣಕ್ಕೆ ವಿದೇಶಕ್ಕೆ ಹೋಗಿದ್ದ. ಮೋಜು ಮಾಡುವ ಉದ್ದೇಶದಿಂದ ಆತ ಸಮುದ್ರ ತೀರಕ್ಕೆ ಹೋಗಿದ್ದಾಗಲೇ ತೀರಾ ಅನಿರೀಕ್ಷಿತವಾಗಿ ಸುನಾಮಿಯ ಅಲೆಗಳು ನುಗ್ಗಿ ಬಂದವು. ಹಾ ಹೂ ಅನ್ನುವುದರೊಳಗೆ ಅಲೆಗಳು ಶ್ರೀಮಂತನನ್ನು ಹೊತ್ತೊಯ್ದವು. ರಾಕ್ಷಸ ಗಾತ್ರದ ಅಲೆಗಳು, ಅಬ್ಬರದ ಬಿರುಗಾಳಿ ಮತ್ತು ಸಾಗರದ ಮೊರೆತವನ್ನು ಪ್ರತ್ಯಕ್ಷ ಕಂಡ ಶ್ರೀಮಂತನಿಗೆ, ತಾನು ಸತ್ತು ಹೋಗುತ್ತೇನೆಂಬುದು ಗ್ಯಾರಂಟಿಯಾಯಿತು. ಆಗಲೇ ಆತ ಪ್ರಾರ್ಥಿಸಿದ: 'ದೇವರೇ, ಈ ವಿಪತ್ತಿನಿಂದ ನನ್ನನ್ನು ಕಾಪಾಡಿದರೆ, ನನ್ನ ಬಂಗಲೆಯನ್ನು ಮಾರಿ, ಅದರಿಂದ ಬರುವ ಹಣವನ್ನು ಹತ್ತು ಮಂದಿ ಭಿಕ್ಷುಕರಿಗೆ ದಾನ ಮಾಡುತ್ತೇನೆ...'
ಆಗ ನಿಜವಾಗಿ ಪವಾಡ ನಡೆದುಹೋಯಿತು. ಈ ಶ್ರೀಮಂತನಿಗೆ,ನೀರಲ್ಲಿ ತೇಲಿ ಬಂದ ಮರದ ತುಂಡೊಂದು ಸಿಕ್ಕಿತು. ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಆತ ಪ್ರಾಣಭಯದಿಂದಲೇ ಕಣ್ಮುಚ್ಚಿದ. ಅದೆಷ್ಟೋ ಹೊತ್ತಿನ ನಂತರ ಕಣ್ತೆರೆದಾಗ ಆತ ದಡದಲ್ಲಿದ್ದ. ಬದುಕುಳಿದ ನಂತರ, ಶ್ರೀಮಂತನಿಗೆ ತಾನು ದುಡುಕಿ ಬಿಟ್ಟೆ ಅನ್ನಿಸಿತು. ಭಾರೀ ಬೆಲೆ ಬಾಳುವ ಬಂಗಲೆಯನ್ನು ಮಾರಿ, ಅದರಿಂದ ಬರುವ ಹಣವನ್ನು ಭಿಕ್ಷುಕರಿಗೆ ದಾನ ಮಾಡ್ತೇನೆ ಎಂದು ಹರಕೆ ಕಟ್ಕೋಬಾರದಿತ್ತು ಅಂದುಕೊಂಡ. ಆದರೆ, ಒಮ್ಮೆ ಹರಕೆ ಕಟ್ಟಿದ ಮೇಲೆ ಅದನ್ನು ಬದಲಿಸುವಂತಿರಲಿಲ್ಲ. ಕೆಲ ದಿನಗಳ ನಂತರ ಆತ ಹುಟ್ಟೂರಿಗೆ ಬಂದ. ಆ ವೇಳೆಗೆ ಆತ ಸುನಾಮಿಗೆ ಸಿಕ್ಕಿಕೊಂಡದ್ದು, ಪವಾಡ ಸದೃಶ್ಯ ಎಂಬಂತೆ ಪಾರಾಗಿದ್ದು... ಎಲ್ಲವೂ ಪತ್ರಿಕೆ ಹಾಗೂ ಟಿ.ವಿ.ಯ ಮೂಲಕ ಜನರನ್ನು ತಲುಪಿತ್ತು. ಹೀಗೇ ತಿಂಗಳು ಕಳೆಯಿತು. ಈ ಸಮಯದಲ್ಲಿ ಬಹಳ ಲೆಕ್ಕಾಚಾರ ಮಾಡಿದ ಶ್ರೀಮಂತ, ಬಂಗಲೆ ಮಾರಾಟಕ್ಕಿದೆಯೆಂದೂ, ಅದರ ಬೆಲೆ 1 ಲಕ್ಷ ರೂಪಾಯಿಗಳೆಂದೂ ಘೋಷಿಸಿದ. ಅಷ್ಟಕ್ಕೇ ಸುಮ್ಮನಾಗದೆ, ಷರತ್ತುಗಳು ಅನ್ವಯಿಸುತ್ತವೆ ಎಂದೂ ಸೇರಿಸಿದ್ದ.
ಶ್ರೀಮಂತನ ಬಂಗಲೆಗೆ ಮಾರುಕಟ್ಟೆಯಲ್ಲಿ ಒಂದು ಕೋಟಿಗಿಂತ ಹೆಚ್ಚು ಬೆಲೆಯಿದೆ ಎಂದು ಎಲ್ಲರಿಗೂ ಗೊತ್ತಿತ್ತು. ಅಂಥ ಮನೆಯನ್ನು ಕೇವಲ ಒಂದು ಲಕ್ಷ ರೂ.ಗೆ ಮಾರುತ್ತೇನೆ ಎಂದಿರುವ ಶ್ರೀಮಂತನಿಗೆ ತಲೆಕೆಟ್ಟಿರಬೇಕು. ಪ್ರಾಣಾಪಾಯವನ್ನು ಪ್ರತ್ಯಕ್ಷ ಕಂಡ ನಂತರ ವೈರಾಗ್ಯ ಭಾವ ಮೂಡಿರಬೇಕು ಎಂದೆಲ್ಲಾ ಜನ ಮಾತಾಡಿಕೊಂಡರು. ನಂತರ, ಬಂಗಲೆಯನ್ನು ಖರೀದಿಸುವ ಉದ್ದೇಶದಿಂದ ಶ್ರೀಮಂತನ ಬಳಿಗೆ ಬಂದರು. ಹಾಗೆ ಬಂದವರಿಗೆಲ್ಲ ಶ್ರೀಮಂತ ಖಡಕ್ಕಾಗಿ ಹೇಳಿದ: 'ನನ್ನ ಬಂಗಲೆಯ ಬೆಲೆ ಕೇವಲ 1 ಲಕ್ಷ. ಆದರೆ, ಬಂಗಲೆ ಬೇಕು ಅನ್ನುವವರು ನನ್ನ ಬೆಕ್ಕನ್ನೂ ಖರೀದಿಸಲೇಬೇಕು. ಅದರ ಬೆಲೆ 99 ಲಕ್ಷ!'
ಈ ಹೊಸ ಕಂಡೀಷನ್ ಕೇಳಿ, ಬಂದಿದ್ದವರೆಲ್ಲ ಬೆಪ್ಪಾದರು. ಆ ಬಂಗಲೆಗೆ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಬೆಲೆಯಿದೆ ಎಂದು ತಿಳಿದಿದ್ದ ಮತ್ತೊಬ್ಬ ಶ್ರೀಮಂತ, 99 ಲಕ್ಷ ರೂ. ನೀಡಿ ಬೆಕ್ಕನ್ನೂ, ಒಂದು ಲಕ್ಷ ರೂ. ಕೊಟ್ಟು ಬಂಗಲೆಯನ್ನೂ ಖರೀದಿಸಿದ. ಆಗ, ಬಂಗಲೆಯನ್ನು ಮಾರಿದ ಶ್ರೀಮಂತ ಏನು ಮಾಡಿದ ಗೊತ್ತೆ? 10 ಮಂದಿ ಭಿಕ್ಷುಕರನ್ನು ಹುಡುಕಿದ. ಅವರಿಗೆಲ್ಲ ತಲಾ 10 ಸಾವಿರ ರೂ.ಗಳನ್ನು ದಾನ ಮಾಡಿ, ದೇವರ ಮುಂದೆ ನಿಂತು ಹೇಳಿದ: 'ದೇವರೇ, ನಿನಗೆ ಮಾತು ಕೊಟ್ಟಂತೆಯೇ ನಡೆದುಕೊಂಡಿದ್ದೇನೆ. ಬಂಗಲೆ ಮಾರಿದ್ದರಿಂದ ಸಿಕ್ಕಿದ ಅಷ್ಟೂ ಹಣವನ್ನು ಭಿಕ್ಷುಕರಿಗೆ ದಾನ ಮಾಡಿದ್ದೇನೆ!
ಕಥೆ ಇಲ್ಲಿಗೆ ಮುಗಿಯುತ್ತದೆ. ಈಗ ಯೋಚಿಸೋಣ. ನಮಗೆಲ್ಲ ಅರ್ಥವಾಗಿರುವಂತೆ, ದೇವರು ಎಂದರೆ ಕೊಡುವವನು. ಆತ ನಮ್ಮ ಪಾಲಿಗೆ ತಂದೆ, ತಾಯಿ, ಗುರು, ಆತ್ಮಬಂಧು. ಆತ ಯಾವತ್ತೂ ನನಗೆ ಇಂಥದೇ ಬೇಕು ಎಂದು ಕೇಳಿದವನಲ್ಲ. ಆತ ಯಾರೊಂದಿಗೂ ಮಾತಾಡಿದವನೂ ಅಲ್ಲ. ತನ್ನನ್ನು ನಂಬಿದವರು ಹಾಗೂ ನಂಬದವರು, ಈ ಎರಡೂ ವರೈಟಿಯ ಜನರನ್ನು ಆತ ಕಾಯುತ್ತಾನೆ, ಪೊರೆಯುತ್ತಾನೆ.
ಅಂಥ ದೇವರ ಮುಂದೆ, ನಾವು ಪ್ರಾರ್ಥನೆಯ ನೆಪದಲ್ಲಿ ಮಾತಿಗಿಳಿಯುತ್ತೇವೆ. ಪ್ರಾರ್ಥನೆ ಎಂಬುದು, ಅಗೋಚರ ಶಕ್ತಿಗೆ ಸಲ್ಲಿಕೆಯಾಗುವ ನಮ್ಮ ಮನವಿ ಎಂಬುದನ್ನು ಮರೆತು, ದೇವ್ರೇ, ನಂಗೆ ಇಷ್ಟು ಬಹುಮಾನ ಬಂದ್ರೆ ಅದರಲ್ಲಿ ನಿನಗಿಷ್ಟು ಕಾಣಿಕೆ ಕೊಡ್ತೇನೆ ಎಂದು ಆಸೆ ತೋರಿಸುತ್ತೇವೆ. ಪ್ರಾರ್ಥನೆಯನ್ನು, ವ್ಯವಹಾರದ ಮಟ್ಟಕ್ಕೆ, ಕಮೀಷನ್‌ನ ಮಟ್ಟಕ್ಕೆ ತಂದು ನಿಲ್ಲಿಸಿದ್ದೇವೆ. 'ದೀನ ನಾನು, ಸಮಸ್ತ ಲೋಕಕೆ ದಾನಿ ನೀನು...' ಎಂಬ ದಾಸರವಾಣಿ ಸಂಪೂರ್ಣವಾಗಿ ನಮಗೆಲ್ಲಾ ಅರ್ಥವಾಗುವ ತನಕ ದೇವರಿಗೆ ಕಮೀಷನ್‌ನ ಆಸೆ ತೋರಿಸುವ ಮಾತು ನಮ್ಮೆಲ್ಲರ ಮಧ್ಯೆ ಜಾರಿಯಲ್ಲಿದ್ದೇ ಇರುತ್ತದೆ!
ಹೇಳಿ: ಮನದೊಳಗಿನ ಇಂಥ ಕಾಯಿಲೆಗಳಿಗೆ ಮದ್ದೆಲ್ಲಿದೆ?
- ನಾನು ಪ್ರಣತಿ