ಇದನ್ನು ಯಾರಾದರೂ ನೀತಿ ಬೋಧನೆ ಎನ್ನುತ್ತಾರೆಯೇ ?

ನಾಯಕರ ಅರ್ಥವಿಲ್ಲದ 'ಪುಗ್ಸಟ್ಟೆ' ಮಾತಿಗೆ, ಅವಿವೇಕದ ಹೇಳಿಕೆಗೆ ಮಾತ್ರ ಬರವಿಲ್ಲ...
Updated on: 

ರಾಜ್ಯ ರಾಜಕಾರಣದ ಅಂಗಣ ಈಗ ಹೆಚ್ಚು ಕಡಿಮೆ ಪ್ರಶಾಂತವಾಗಿದೆ. ಕಾಂಗ್ರೆಸ್ ನಾಯಕರು ಅಸಮಾಧಾನವನ್ನು ಉಡಿಯಲ್ಲಿ ಕಟ್ಟಿಕೊಂಡರೂ ಲೋಕಸಭಾ ಚುನಾವಣೆಯವರೆಗೆ ತಾಳ್ಮೆಯ ಗಡಿ ಹಾಕಿಕೊಂಡಿದ್ದಾರೆ. ರಾಜ್ಯಾಧ್ಯಕ್ಷರ ಆಯ್ಕೆ ನಂತರ ಜೆಡಿಎಸ್‌ನಲ್ಲಿ ಚಟುವಟಿಕೆಗಳು ಒಂದು ಹಂತದಲ್ಲಿ ಸ್ಥಬ್ದವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮರಳಿ ಸ್ವಾಗತಿಸುವ ಸಿದ್ಧತೆಯಲ್ಲಿ ಬಿಜೆಪಿ ನಾಯಕರು ಮುಳುಗಿದ್ದಾರೆ. ಹೀಗಾಗಿ ರಾಜಕೀಯ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತ ಸ್ವಾರಸ್ಯಕರ ಬೆಳವಣಿಗೆ ಕಾಣುತ್ತಿಲ್ಲ.
ಆದರೆ ರಾಜಕೀಯ ನಾಯಕರ ಅರ್ಥವಿಲ್ಲದ 'ಪುಗ್ಸಟ್ಟೆ' ಮಾತಿಗೆ, ಅವಿವೇಕದ ಹೇಳಿಕೆಗೆ ಮಾತ್ರ ಬರವಿಲ್ಲ. ರಾಜಕೀಯ ನಾಯಕರ ಹೇಳಿಕೆಗಳತ್ತ ಹಾಗೆ ಸುಮ್ಮನೆ ದೃಷ್ಟಿ ಹಾಯಿಸಿ. ಅವುಗಳಲ್ಲಿ ಅತ್ಯಂತ ಶ್ರೇಷ್ಠ ಅವಿವೇಕದ ಹೇಳಿಕೆ ಎಂಬ ಬಿರುದಿಗೆ ಪಾತ್ರವಾಗಬಹುದಾದ ಅರ್ಹತೆ ಹೊಂದಿರುವಂತದನ್ನು ಮೊದಲು ಹೆಕ್ಕೋಣ.
' ಅನ್ನಭಾಗ್ಯ ಯೋಜನೆ ಅನ್ವಯ ಸರ್ಕಾರ ಕೊಟ್ಟ ಅಕ್ಕಿಯನ್ನು ಬಡವರು ಮಾರಿಕೊಂಡರೆ ತಪ್ಪಿಲ್ಲ' !
- ಸಚಿವ ಕಿಮ್ಮನೆ ರತ್ನಾಕರ.
'ಸರ್ಕಾರಕ್ಕೆ ಯಾರ್ಯಾರೋ ಟೋಪಿ ಹಾಕುತ್ತಾರೆ. ಹಾಗಿರುವಾಗ ಅಲ್ಪ ಸಂಖ್ಯಾತ ಸಮುದಾಯದವರು ಸರ್ಕಾರದಿಂದ ಸಾಲ ಪಡೆದು ವಾಪಸ್ ನೀಡದೆ ಟೋಪಿ ಹಾಕಲಿ ಬಿಡಿ '.
- ಡಾ.ಜಿ.ಪರಮೇಶ್ವರ. ಕೆಪಿಸಿಸಿ ಅಧ್ಯಕ್ಷ.
' ರಾಜಕೀಯದಲ್ಲಿ ಎಲ್ಲರೂ ಪ್ರಾಮಾಣಿಕರಾಗಿರಬೇಕು. ಆದರೆ ಅದು ಸಾಧ್ಯವಿಲ್ಲ. ಹೀಗಾಗಿ ನಾನು ಸ್ವಲ್ಪ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಂಡಿದ್ದೇನೆ.'
- ಮುಖ್ಯಮಂತ್ರಿ ಸಿದ್ದರಾಮಯ್ಯ.
ಇತ್ತೀಚಿನ ದಿನಗಳಲ್ಲಿ ರಾಜ್ಯದ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ, ವಿವಾದ ಹಾಗೂ ಟೀಕೆಯ ಸುಳಿ ಎಬ್ಬಿಸಿದ ಹೇಳಿಕೆಗಳಿವು. ವಿಚಿತ್ರ ಎಂದರೆ ಈ ಮೂರೂ ಹೇಳಿಕೆಗಳನ್ನು ಆಡಳಿತಾರೂಢ ಕಾಂಗ್ರೆಸ್‌ನ ಜವಾಬ್ದಾರಿಯುತ ಮುಖಂಡರೇ ಸಿಡಿಸಿದ್ದು.
ಖಂಡಿತವಾಗಿಯೂ 'ಪದಗಳಿಗೆ ಪಗಾರು' ಕೊಡಬೇಕಿಲ್ಲ. ಒಂದೊಮ್ಮೆ ನಾವಾಡುವ ಪ್ರತಿ ಮಾತಿಗೂ ಕಾಸು ಕೊಡುವಂತಿದ್ದರೆ ಯಾರು ಮಾತನಾಡುತ್ತಿರಲಿಲ್ಲ. ಮಾತು ಮತ್ತು ವಿವೇಚನಾ ಶಕ್ತಿ ಇರುವುದರಿಂದಲೇ ಮುನುಷ್ಯ ಪ್ರಾಣಿ ವರ್ಗಗಳಲ್ಲಿ ಭಿನ್ನ ಮತ್ತು ಶ್ರೇಷ್ಠ.
ಈ ಕಾರಣಕ್ಕಾಗಿಯೇ ನಮ್ಮ ಜನಪದರು, ತತ್ವಜ್ಞಾನಿಗಳು, ಕವಿಗಳು, ಜೀವನಾನುಭವ ಪಡೆದವರು ಮಾತಾಡುವಾಗ ಮುತುವರ್ಜಿ ತೋರಿದ್ದು ಮಾತ್ರವಲ್ಲ ಮಾತು ಹೇಗಿರಬೇಕು ಎಂಬ ಕಿವಿ ಮಾತನ್ನೂ ಹೇಳಿದ್ದಾರೆ. 'ಬೆಲ್ಲ ಇಲ್ಲದಿದ್ದರೂ ಬೆಲ್ಲದಂತ ಮಾತಿರಬೇಕು', ' ಮಾತು ಬಲ್ಲಾತಂಗೆ ಮಾತೊಂದು ಮಾಣಿಕವು', ' ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು', ' ಮಾತಿಗೆ ಬಡತನವೇಕೆ ?' ' ಮಾತು ಬೆಳ್ಳಿ, ಮೌನ ಬಂಗಾರ', ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಚಾಟಿಯ ಪೆಟ್ಟು' ಇತ್ಯಾದಿ ನುಡಿಗಟ್ಟುಗಳು ನಾಲಿಗೆಯ ಮೇಲೆ ಹಿಡಿತ ಇರಲಿ ಎಂಬ ಆಶಯವನ್ನೇ ಧ್ವನಿಸುತ್ತದೆ. ಅಂದ ಹಾಗೆ ಈ ಎಲ್ಲ ಹೇಳಿಕೆಗಳು ಹಿಂದೆ ಪ್ರಾಥಮಿಕ ಶಾಲೆಯ ಮಗ್ಗಿ ಪುಸ್ತಕದಲ್ಲಿ ಇರುತ್ತಿತ್ತು.
ಆದರೆ ನಮ್ಮ ರಾಜಕೀಯ ನಾಯಕರು ನೀಡಿದ ಈ ಮೇಲಿನ ಹೇಳಿಕೆಗಳನ್ನು ಗಮನಿಸಿದಾಗ ಇವರೆಲ್ಲರಿಗೂ ಹಳೆ ಮಗ್ಗಿಪುಸ್ತಕವನ್ನು ಉಡುಗೊರೆ ರೂಪದಲ್ಲಿ ಕೊಟ್ಟು ' ಮಹನೀಯರೇ ನಿಮ್ಮ ನಾಲಿಗೆ ನಿಮ್ಮ ಹಿಡಿತದಲ್ಲೇ ಇರಲಿ' ಎಂದು ಸಾರ್ವಜನಿಕರೇ ಸಲಹೆ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸಾರ್ವಜನಿಕ ಬದುಕಿನಲ್ಲಿ, ಅದರಲ್ಲಿಯೂ ಮುಖ್ಯವಾಗಿ ಮುಖ್ಯಮಂತ್ರಿ, ಸಚಿವ, ಒಂದು ಜವಾಬ್ದಾರಿಯುತ ಪಕ್ಷದ ಅಧ್ಯಕ್ಷರು ಆಡುವ ಪ್ರತಿ ಮಾತಿಗೂ ಅದರದ್ದೇ ಆದ ತೂಕವಿರುತ್ತದೆ. ನಾನು ಆ ಅರ್ಥದಲ್ಲಿ ಹೇಳಿಲ್ಲ ಎಂದು ಮರುದಿನ ಸಬೂಬು ನೀಡಿದರೂ ಅವರಾಡಿದ ಮಾತು ಹಲವು ಪರಿಣಾಮಗಳನ್ನು ಸೃಷ್ಟಿಸಿಬಿಟ್ಟಿರುತ್ತದೆ. ಆ ಕಾರಣಕ್ಕಾಗಿಯೇ ಜಗತ್ತನು ನಿಯಂತ್ರಿಸುವುದಕ್ಕೆ ಮುನ್ನ ತಮ್ಮ ನಾಲಗೆಯನ್ನು ನಿಯಂತ್ರಿಸಬೇಕೆನ್ನುತ್ತಾರೆ. ಆದರೆ ಈ ಮೂರೂ ಹೇಳಿಕೆಗಳು ನಿಯಂತ್ರಣವಿಲ್ಲದ ಮನಸಿನ ಪ್ರತೀಕ ಎಂದರೆ ತಪ್ಪಿಲ್ಲ. ಮೊದಲನೆಯದಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಹೇಳಿಕೆಯನ್ನು ತೆಗೆದುಕೊಳ್ಳೋಣ. ಅಲ್ಪಸಂಖ್ಯಾತ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಓಲೈಕೆಯ ಹೇಳಿಕೆ ನೀಡುವ ಬರದಲ್ಲಿ 'ಕಳೆದ ಸರ್ಕಾರದ ಅವಧಿಯಲ್ಲಿ ಕೈಗಾರಿಕೆ ನಿರ್ಮಿಸುವುದಾಗಿ ಕೆಐಎಡಿಬಿಯಿಂದ ಯಾರ್ಯಾರೋ ಭೂಮಿ ಪಡೆದುಕೊಂಡರು. ಯಾರ್ಯಾರೋ ಸಾಲ ಪಡೆದು ಸರ್ಕಾರಕ್ಕೆ ಟೋಪಿ ಹಾಕುತ್ತಿರುವಾಗ ಅಲ್ಪಸಂಖ್ಯಾತರು ಟೋಪಿ ಹಾಕಿದರೆ ತಪ್ಪೇನು ? ಎಂದು ಪ್ರಶ್ನಿಸಿದ್ದರು.
ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷಗಿರಿಯಂತ ಜವಾಬ್ದಾರಿ ಸ್ಥಾನದಲ್ಲಿರುವ ಪರಮೇಶ್ವರ ಅವರು ತಮ್ಮ ಈ ಮಾತಿನ ಮೂಲಕ ಸರ್ಕಾರಕ್ಕೆ ಮೋಸ ಮಾಡಿ ಎಂದು ನೇರವಾಗಿ ಸಲಹೆ ನೀಡಿದಂತಿತ್ತು. ತಮ್ಮ ಈ ಎಡವಟ್ಟು ಮಾತಿನಿಂದ ಅವರು ತಮ್ಮ ವ್ಯಕ್ತಿತ್ವಕ್ಕೆ, ಹುದ್ದೆಗೆ ಮಾತ್ರವಲ್ಲ ಪರೋಕ್ಷವಾಗಿ ಅಲ್ಪಸಂಖ್ಯಾತ ಸಮುದಾಯದವರಿಗೂ ಅವಮಾನ ಮಾಡಿಬಿಟ್ಟರು. ಮರುದಿನ ನಾನು ಇಂಥ ಹೇಳಿಕೆ ನೀಡಿಲ್ಲ. ನನ್ನ ಮಾತಿನ ಆಶಯ ಹಾಗಲ್ಲ ಎಂದು ಅವರು ಎಷ್ಟೇ ಸಬೂಬು ನೀಡಿದ್ದರೂ ಆದ ಅನಾಹುತವನ್ನು ಸರಿಪಡಿಸುವುದಕ್ಕೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳೂ ನಿರ್ದಿಷ್ಟ ಸಮುದಾಯ ಅಥವಾ ಜಾತಿಯ ಓಲೈಕೆ ಮಾಡುತ್ತಿವೆ. ಆಯಾ ಪಕ್ಷದ ರಾಜಕೀಯ ಲಾಭ-ನಷ್ಟಗಳನ್ನು ಆಧರಿಸಿ ಇಂಥ ಬೆಳವಣಿಗೆ ನಡೆಯುತ್ತಿರುತ್ತದೆ. ಆದರೆ ಪರಮೇಶ್ವರ ಅವರ 'ಟೋಪಿ ಪ್ರಸಂಗ' ಮಾತ್ರ ಹಿಂದಿನ ಎಲ್ಲ ಓಲೈಕೆ ರಾಜಕಾರಣವನ್ನು ಮೀರಿಸುವಂತಿತ್ತು.
ಇನ್ನು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರ ಮಾತನ್ನು ಗಮನಿಸಿ ' ಅನ್ನ ಭಾಗ್ಯ ಯೋಜನೆ ಅನ್ವಯ ಸರ್ಕಾರ ನೀಡುವ ಅಕ್ಕಿಯನ್ನು ಬಡವರು ಮಾರಿಕೊಂಡರೆ ತಪ್ಪಿಲ್ಲ' ಎಂದು ಎರಡು ದಿನಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಮ್ಮನೆ ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಸಂಪುಟದ ಅತ್ಯಂತ ಸಂಭಾವಿತ ಸಚಿವರಲ್ಲೊಬ್ಬರು ಎಂದು ಪರಿಗಣಿಸಲ್ಪಟ್ಟಿರುವ ಕಿಮ್ಮನೆ ಅವರಿಗೆ ಮಂತ್ರಿಗಿರಿ ಚಲಾಯಿಸುವುದಕ್ಕೆ ಬೇಕಾದ ಪ್ರಾಥಮಿಕ ಅರ್ಹತೆಯೇ ಇಲ್ಲ ಎನ್ನುವುದಕ್ಕೆ ಈ ಮಾತಿಗಿಂತ ಬೇರೆ ದೃಷ್ಟಾಂತ ಬೇಕಿಲ್ಲ.
ಬಡವರ ಹಸಿವನ್ನು ನೀಗಿಸುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಗೆ ಪ್ರತಿ ವರ್ಷ ವೆಚ್ಚವಾಗುವ ಹಣ ಕಡಿಮೆಯಲ್ಲ. ಇದಕ್ಕಾಗಿ ವಾರ್ಷಿಕ ರು. 4500 ಕೋಟಿ ರಾಜ್ಯ ಬೊಕ್ಕಸದಿಂದ ವ್ಯಯವಾಗುತ್ತದೆ. ನ್ಯಾಯ ಬೆಲೆ ಅಂಗಡಿಯಿಂದ ಬಡವನ ಮನೆ ಸೇರುವ ಪ್ರತಿ ಅಕ್ಕಿ ಕಾಳಿಗೂ ಬೆಲೆ ಇದೆ. ಸರ್ಕಾರವೇನೋ ರು. 1ಗೆ 1 ಕೆಜಿ ಅಕ್ಕಿಯನ್ನು ಅಗ್ಗವಾಗಿ ನೀಡಿದರೂ ಮಾರುಕಟ್ಟೆಯಲ್ಲಿ 1ಗೆ ಅಕ್ಕಿ ಸಿಗುವುದಿಲ್ಲ. ಮಾತ್ರವಲ್ಲ ರಾಜ್ಯದಲ್ಲಿ ಅಕ್ಕಿ ಲಭ್ಯತೆ ಇಲ್ಲವೆಂದೂ ಚತ್ತೀಸ್‌ಗಡದಿಂದ ಅಕ್ಕಿ ಖರೀದಿಸಿರುವುದು, ದಾಸ್ತಾನಿಗೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವುದು ಎಲ್ಲರಿಗೂ ಗೊತ್ತು. ಎಲ್ಲಕ್ಕಿಂತ ಹೆಚ್ಚಾಗಿ ಯೋಜನೆ ಆರಂಭವಾದ ನಂತರ ಕಾಳಸಂತೆಯಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿ ಮಾರಾಟವಾಗುತ್ತಿದೆ. ರಾಜ್ಯದ ಪ್ರತಿಯೊಬ್ಬ ನಾಗರಿಕನ ಶ್ರಮಕ್ಕೆ ವಿಧಿಸುವ ಕರದಿಂದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಆದರೆ ಬಡವರು ಅಕ್ಕಿ ಮಾರಾಟ ಮಾಡಿಕೊಂಡರೆ ತಪ್ಪಿಲ್ಲ ಎಂದು ಕಿಮ್ಮನೆ ರತ್ನಾಕರ ನೀಡಿದ ಹೇಳಿಕೆ ರಾಜ್ಯದ 'ಕರದಾತ'ರಿಗೆ ಮಾಡಿದ ಅವಮಾನವಲ್ಲವೇ ?
ಎಲ್ಲ ರಾಜಕೀಯ ನಾಯಕರ ರೀತಿ 'ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಇಂಥ ಹೇಳಿಕೆ ನೀಡುವಂತ ಮುಠ್ಠಾಳ ನಾನಲ್ಲ. ಬದುಕು ಮತ್ತು ನಿಯಮದ ಪ್ರಶ್ನೆ ಬಂದಾಗ ನಾನು ಬದುಕನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಮಾತ್ರೆ ತರುವುದಕ್ಕೆ ದುಡ್ಡಿಲ್ಲದ ಮಹಿಳೆ ಅದಕ್ಕಾಗಿ ಸರ್ಕಾರ ನೀಡಿದ ಅನ್ನಭಾಗ್ಯ ಯೋಜನೆ ಅಕ್ಕಿ ಮಾರಿಕೊಂಡರೆ ತಪ್ಪಿಲ್ಲ ಎಂದು ಹೇಳಿದ್ದೇನೆ. ನನ್ನ ಹೇಳಿಕೆಯ ಆಶಯವೇ ಬೇರೆ ಎಂದು ಡಾ.ಪರಮೇಶ್ವರ ಅವರ ಹಾದಿಯನ್ನೇ ಮರುದಿನ ಕಿಮ್ಮನೆ ತುಳಿದರು.
ಆದರೆ ಈ ಮಾತನ್ನು ಆಡುವುದಕ್ಕೆ ಮೊದಲೇ ಯೋಚಿಸಿದ್ದರೆ ಕಿಮ್ಮನೆ ಅವರಾಗಲಿ ಡಾ.ಪರಮೇಶ್ವರ ಅವರಾಗಲಿ ಸಾರ್ವಜನಿಕರಿಂದ 'ಅಭಿಯೋಜನೆ' ಎದುರಿಸುವ ಪ್ರಶ್ನೆ ಉದ್ಭವವಾಗುತ್ತಿರಲಿಲ್ಲ. ಈಗಾಗಲೇ ವಿಘಟನೆಗೊಂಡಿರುವ ಸಮಾಜದಲ್ಲಿ ಇವರಿಬ್ಬರು ನೀಡಿದ ಹೇಳಿಕೆ ಇನ್ನಷ್ಟು ಗೊಂದಲವನ್ನು ಸೃಷ್ಟಿಸಿತೇ ಹೊರತು, ಯಾವುದೇ ರಚನಾತ್ಮಕ ಕೆಲಸಕ್ಕೆ ಪ್ರೇರಣೆ ನೀಡಲಿಲ್ಲ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲ ತಿಂಗಳ ಹಿಂದೆ ನೀಡಿದ ಹೇಳಿಕೆಯೂ ಇದಕ್ಕಿಂತ ಹೊರತಲ್ಲ. ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ' ರಾಜಕೀಯದಲ್ಲಿ ಎಲ್ಲರೂ ಪ್ರಾಮಾಣಿಕರಾಗಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಅದು ಸಾಧ್ಯವಿಲ್ಲ. ನಾನು ಸ್ವಲ್ಪ-ಸ್ವಲ್ಪ ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡಿದ್ದೇನೆ' ಎಂದು ಹೇಳಿಕೆ ನೀಡಿದ್ದರು.
ಅಬ್ಬಾ ಪರವಾಗಿಲ್ಲ. ಸಿದ್ದರಾಮಯ್ಯನವರಲ್ಲಿ ಆ ಮಟ್ಟಿಗಿನ ಪ್ರಾಮಾಣಿಕತೆಯಾದರೂ ಇದೆಯಲ್ಲ ಎಂದು ಅವರ ಅಭಿಮಾನಿಗಳು ಆ ಕ್ಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರಬಹುದು. ಭೇಷ್ ಎಷ್ಟೊಂದು ನೇರವಂತಿಕೆ ಎಂದು ಶಹಬ್ಬಾಸ್‌ಗಿರಿ ನೀಡಿರಬಹುದು. ಆದರೆ ನಾಡಿನ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿರುವ ವ್ಯಕ್ತಿಯಿಂದ ಇಂಥ ಮಾತು ಪ್ರಕಟವಾಗುವುದು ಖಂಡಿತ ಅನಪೇಕ್ಷಿತ ಮತ್ತು ಪ್ರಶಂಸೆಗೆ ಯೋಗ್ಯವಾದುದ್ದಲ್ಲ.
ಏಕೆಂದರೆ ಮುಖ್ಯಮಂತ್ರಿ ಹುದ್ದೆಗೆ ಅದರದ್ದೇ ಆದ ಘನತೆ, ಗೌರವವಿದೆ. ಆ ಹುದ್ದೆಯನ್ನು ಏರಬೇಕಾದರೆ ತೆರೆಮರೆಯಲ್ಲಿ ಏನೆಲ್ಲ ಪ್ರಯತ್ನಗಳು ನಡೆಯಬಹುದು, ನಡೆಸಿರಬಹುದು. ಆದರೂ ಬಹಿರಂಗವಾಗಿ ಅದನ್ನು ಪ್ರಕಟಿಸುವುದು ಸಭ್ಯತೆಯಲ್ಲ. ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವ ಹಾದಿಯಲ್ಲಿ ಹೊಂದಾಣಿಕೆ ಎಂಬ ಪ್ರಕ್ರಿಯೆ ಇತ್ತು ಎಂದು ಖುದ್ದು ಸಿದ್ದರಾಮಯ್ಯನವರೇ ಹೇಳಿದಂತಾಗಲಿಲ್ಲವೇ? ಎಲ್ಲಕ್ಕಿಂತ ಮುಖ್ಯವಾಗಿ ನನ್ನಿಂದ ಇನ್ನು ಮುಂದೆ ಹೆಚ್ಚಿನ ಪ್ರಾಮಾಣಿಕತೆಯನ್ನು ನಿರೀಕ್ಷೆ ಮಾಡಬೇಡಿ ಎಂಬ ಅರ್ಥವನ್ನು ಈ ಹೇಳಿಕೆ ಪರೋಕ್ಷವಾಗಿ ನೀಡಿದಂತಾಗುವುದಿಲ್ಲವೇ ?
ರಾಜಕಾರಣಿಗಳು ನೀಡುವ ಇಂಥ ಹೇಳಿಕೆಗಳಿಂದ ಅವರು ಪ್ರಜೆಗಳಿಗೆ ಎಷ್ಟರ ಮಟ್ಟಿಗೆ ಉತ್ತರದಾಯಿಗಳು ಎಂಬ ಪ್ರಶ್ನೆ ಮೂಡುತ್ತದೆ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಕನಿಷ್ಠ ಮಟ್ಟದ ಜವಾಬ್ದಾರಿ ಬೇಕು. ಜನ ತಮ್ಮ ನಾಯಕನ ಮಾತು-ಕೃತಿ ಒಂದೇ ರೀತಿ ಇರಬೇಕು. ಅದು ಬೇರೆಯವರಿಗೆ ಅನುಸರಣೀಯವಾಗಿರಬೇಕು ಎಂದೇ ಬಯಸುತ್ತಾನೆ. ಪರಸ್ಪರ ಕೆಸರೆರಚಿಕೊಳ್ಳುವಾಗ ನೀಡುವ ಹೇಳಿಕೆಗೂ ಆಡಳಿತಾತ್ಮಕ ವಿಚಾರಗಳನ್ನು ಜನರಿಗೆ ತಲುಪಿಸುವಾಗ ವರ್ತಿಸುವ ರೀತಿಗೂ ಸಾಕಷ್ಟು ವ್ಯತ್ಯಾವಿರುತ್ತದೆ.
ಆ ನಿಟ್ಟಿನಲ್ಲಿ ನೋಡಿದರೆ ಸಿದ್ದರಾಮಯ್ಯ, ಪರಮೇಶ್ವರ, ಕಿಮ್ಮನೆ ರತ್ನಾಕರ ಸೇರಿದಂತೆ ಹೆಚ್ಚಿನ ನಮ್ಮೆಲ್ಲ ನಾಯಕರೂ ನಾಲಿಗೆ ಮೇಲೆ ಹಿಡಿತ ಇಲ್ಲದವರೇ. ತಕ್ಷಣಕ್ಕೆ ಅವರ ಈ ಹೇಳಿಕೆಗಳು ಬೆಂಬಲಿಗರಿಂದ ಶಹಬ್ಬಾಸ್‌ಗಿರಿ ಪಡೆದರೂ ಅಂತಿಮವಾಗಿ ಸಮಾಜದ ವಿಘಟನೆಗೆ ಕಾರಣವಾಗುತ್ತದೆ. ತಲೆ ಬುಡವಿಲ್ಲದೇ ಆಡುವ ಮಾತು ನಮ್ಮ ಮನೆಯನ್ನೇ ಕೆಡಿಸುತ್ತದೆ ಎಂಬುದನ್ನು ನೆನಪಿಟ್ಟುಕೊಂಡರೆ ಇಂಥ ಅನರ್ಥಗಳಿಗೆ ಅವಕಾಶ ಸಿಗುವುದಿಲ್ಲ.

ಲಗೋರಿ: ಕೆಲವೊಮ್ಮೆ ಅನುಭವವೇ ಪಾಠ ಹೇಳಿಸುತ್ತದೆ.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com