ಸೋನಿಯಾ- ಸಿಂಗ್ ನಡುವೆ ಈಗ ಆಳ ಕಂದಕ?

ಪ್ರಧಾನಿ ವಿರುದ್ಧ ಪ್ರಹಾರ ಮಾಡುವ ಮನಸಿದ್ದೂ ಸಿಬಿಐ ಸುಮ್ಮನಿರುವುದೇಕೆ? ಸಿಬಿಐ ಎಂಬುದು ಪಂಜರದ ಗಿಳಿಯೇ ಎನ್ನುವುದಾದರೆ ಆ ಪಂಜರದ ಕೀಲಿಕೈ ಇರುವುದು ಯಾರ ಬಳಿ? ಪ್ರಧಾನಿ ಕಾರ್ಯಾಲಯದ ಬಳಿಯೋ ಅಥವಾ ಅದನ್ನೂ ಮೀರಿರುವ ಯಾರಾದರೂ ಇದ್ದಾರೋ? ಶಿಕ್ಷೆಗೆ ಒಳಗಾದ ಜನಪ್ರತಿನಿಧಿಗಳಿಗೆ ಅವರ ಹುದ್ದೆಯಲ್ಲೇ ಉಳಿಯುವುದಕ್ಕೆ ಅನುವು ಮಾಡಿಕೊಡುವ ಸುಗ್ರೀವಾಜ್ಞೆಯ ಕರಡಿಗೆ ಅನುಮತಿ ಸಿಕ್ಕಿದ್ದು ಸೋನಿಯಾ ಗಾಂಧಿಯವರಿದ್ದ ಸಭೆಯಲ್ಲೇ ಆಗಿತ್ತಲ್ಲವೇ? ಕೊನೆಕ್ಷಣದಲ್ಲೇಕೆ ರಾಹುಲ್ ಗಾಂಧಿಯವರಿಗೆ ಸುಗ್ರೀವಾಜ್ಞೆ ಪ್ರತಿಯನ್ನು ಹರಿಯುವ ಮನಸ್ಸಾಯಿತು. ಇದೊಂದು ಶುದ್ಧ ನಾನ್ಸೆನ್ಸ್ ಎಂದಿದ್ದಕ್ಕೆ ಪ್ರತಿಯಾಗಿ ಮನಮೋಹನಸಿಂಗ್ ಅವರಿಗೆ ಗಟ್ಟಿ ಪ್ರತಿಕ್ರಿಯೆ ದಾಖಲಿಸಲಿಕ್ಕಾಗಲಿಲ್ಲ.
ರಾಜಕೀಯ ವಿಶ್ಲೇಷಕರ ಪ್ರಕಾರ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸೋನಿಯಾ ಮತ್ತು ಮನಮೋಹನರ ನಡುವೆ ಸಂಬಂಧ ಬದಲಾಗುತ್ತಿರುವುದರಲ್ಲಿ ಅಡಗಿದೆ. ಈ ಸಂಬಂಧದ ಸ್ಥಿತ್ಯಂತರವು 2014 ಇಲ್ಲವೇ ಅದರಾಚೆಗೆ ರಾಹುಲ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಯೋಚನೆಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಪ್ರಮುಖವಾಗುತ್ತದೆ. ವಿಶ್ಲೇಷಕರು ನಂಬುವಂತೆ ಸೋನಿಯಾ- ಮನಮೋಹನ್ ಬಾಂಧವ್ಯ ಮೊದಲಿನಂತಿಲ್ಲ. ರಾಹುಲ್ ಇಮೇಜ್ ಕಟ್ಟುವುದಕ್ಕೆ ಮನಮೋಹನ್ ವರ್ಚಸ್ಸನ್ನು ಹಾಳುಗೆಡವುವ ಸಂದರ್ಭ ಬಂದರೆ ಅದಕ್ಕೆ ಹಿಂಜರಿಕೆ ಪಟ್ಟುಕೊಳ್ಳುವುದಿಲ್ಲ ಎಂಬರ್ಥದ ಸಂದೇಶವು 10, ಜನಪಥದಿಂದ ಹೊರಹೊಮ್ಮುತ್ತಲೇ ಮನಮೋಹನ್ ಸಿಂಗ್ ತುಸು ಬಿಗುವಾಗಿದ್ದಾರೆ. ಕಾಂಗ್ರೆಸ್ ಕಾರ್ಯತಂತ್ರ ಪರಿಣತರ ತಲೆಯಲ್ಲಿರುವ ವಿಚಾರ ಎಂದರೆ- ಮುಂದಿನ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್ ಗೆಲ್ಲುವುದು ಕಷ್ಟ. ಆದರೆ ಮೂರನೇ ರಂಗಕ್ಕೆ ಬಾಹ್ಯ ಬೆಂಬಲ ನೀಡುವ ಬಲವನ್ನು ಉಳಿಸಿಕೊಳ್ಳಬೇಕು. ಬಿಜೆಪಿ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ ಬಂದರೂ ಅದಕ್ಕೆ ಸುಗಮವಾಗಿ ಆಡಳಿತ ನಿರ್ವಹಿಸಲಾಗದಷ್ಟರಮಟ್ಟಿಗೆ ಆಟ ಕಟ್ಟುವ ಸಂಸದರ ಬಲ ತನಗಿರಬೇಕೆಂದು ಕಾಂಗ್ರೆಸ್ ಯೋಚಿಸುತ್ತಿದೆ. ಈ ನಿಟ್ಟಿನಲ್ಲಿ 130-150 ಸ್ಥಾನಗಳನ್ನು ಗೆಲ್ಲುವ, ಆ ಮೂಲಕ ತೃತೀಯ ರಂಗವನ್ನು ಬಾಹ್ಯವಾಗಿ ಬೆಂಬಲಿಸುವ ಆಯ್ಕೆ ಕಾಪಿಟ್ಟುಕೊಳ್ಳುವ ಹಾಗೂ ಬಿಜೆಪಿ ನೇತೃತ್ವದ ಸರ್ಕಾರ ರೂಪುಗೊಂಡರೆ ಅದನ್ನು ದುರ್ಬಲವಾಗಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಲಿದೆ. ರಾಹುಲ್ ಗಾಂಧಿ ಅವತರಿಸುತ್ತಿದ್ದಾರೆ ಎಂದು ಬಿಂಬಿಸುವ ಪ್ರಯತ್ನವು ವಾಸ್ತವದಲ್ಲಿ 2016-17ರ ಸಮಯದಲ್ಲಿ ರಾಜಕೀಯ ದಾಳಗಳನ್ನು ಉರುಳಿಸುವುದಕ್ಕೆ ಅಣಿ ಮಾಡಿದಂತಿದೆ. ಇದಕ್ಕೆ ಆಗಬೇಕಿರುವುದೇನೆಂದರೆ ಯುಪಿಎ-2ರ ಎಲ್ಲ ಅಪಸವ್ಯಗಳಿಗೆ ಪ್ರಧಾನಿ ಮನಮೋಹನ ಸಿಂಗ್ ಅವರನ್ನೇ ಗುರಿ ಮಾಡುವುದು. ಇದನ್ನೆಲ್ಲ ಸರಿ ಪಡಿಸಬೇಕಾದರೆ ರಾಹುಲ್ ಬರಬೇಕಾಗುತ್ತದೆ ಎಂದು ಚಿತ್ರಕತೆಯ ಮುಂದಿನ ಭಾಗವನ್ನು ಲಂಬಿಸುವುದು. ಮನಮೋಹನ್ ಸಿಂಗ್ ಅವರ ವರ್ಚಸ್ಸಿನ ಗೋರಿಯ ಮೇಲೆ ತನ್ನ ಗೌರವದ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವುದು ರಾಹುಲ್ ಗಾಂಧಿ ಯೋಜನೆ. ವಿಶ್ಲೇಷಕರ ಈ ವಿವರಣೆಯನ್ನು ನೀವು ಒಪ್ಪುವುದೇ ಆದರೆ ಹಲವು ಗೋಜಲುಗಳನ್ನು ಬಿಡಿಸಬಹುದಾಗಿದೆ.
ಅದೇಕೆ ಸಿಬಿಐ, ಪಿಸಿ ಪರಾಖ್ ಮತ್ತು ಕುಮಾರ ಮಂಗಲಂ ಬಿರ್ಲಾ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಿದೆ? ಬಿರ್ಲಾರಿಗೆ ಕಲ್ಲಿದ್ದಲು ಹಂಚಿಕೆ ಆಗಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡ ಪ್ರಧಾನಿ ವಿರುದ್ಧ ಪ್ರಕರಣ ಏಕಿಲ್ಲ? ಉತ್ತರ ಸರಳವಾಗಿದೆ. ಹೀಗೆ ಆಟ ಹೂಡುತ್ತಿರುವವರಿಗೆ ಪ್ರಧಾನಿಯನ್ನು ಘಾಸಿ ಮಾಡಬೇಕು, ಆದರೆ ಈಗಲೇ ಅವರು ರಾಜೀನಾಮೆ ಕೊಡುವ ಸನ್ನಿವೇಶ ಬರಬಾರದು ಎಂಬ ಯೋಚನೆ ಇದೆ. ಸಿಬಿಐ ಎಷ್ಟು ಸ್ವತಂತ್ರವಾಗಿದೆ ಎಂದರೆ ಅದು ತನ್ನ ಬಾಸ್ ಇಚ್ಛೆಯ ವಿರುದ್ಧವೇ ಹೋಗುವಷ್ಟು ಶಕ್ತಿಶಾಲಿ ಎಂದು ಚಿತ್ರಣವೊಂದನ್ನು ಸೃಷ್ಟಿಸುವ ಪ್ರಯತ್ನ.
ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರಿಗೆ ಪ್ರಧಾನಿಗೆ ಮುಜುಗರವಾಗುವ ಹಲವು ಕ್ರಮಗಳನ್ನು ಕೈಗೊಳ್ಳುವುದು ಹೇಗೆ ಸಾಧ್ಯವಾಗುತ್ತಿದೆ ಎಂದು ಅಧಿಕಾರಿಗಳ ವಲಯ ಗುಸುಗುಡುತ್ತಿದೆ. 2ಜಿ ಪ್ರಕರಣದ ತನಿಖೆ ನಡೆಯುತ್ತಿದ್ದಾಗ ಇಂಥದ್ದೇನೂ ಆಗಿರಲಿಲ್ಲ. ಅಲ್ಲಿ ಪ್ರಧಾನಿ ಕಾರ್ಯಾಲಯದ ಪತ್ರವೊಂರ ಸೋರಿಕೆ ಆಗುವಂತೆಮಾಡಿ, ತರಂಗಾಂತರ ಹಂಚಿಕೆಯಲ್ಲಿ ಎ. ರಾಜಾ ನಿಲವಿಗೆ ಪ್ರಧಾನಿ ವಿರುದ್ಧವಾಗಿದ್ದರು ಎಂಬ ಚಿತ್ರಣವನ್ನು ರೂಪಿಸಲಾಗಿತ್ತು. ಆದರೆ ಈಗಿನ ಕಲ್ಲಿದ್ದಲು ಹಗರಣದ ತನಿಖೆ ಮಾತ್ರ ಭಿನ್ನದಾರಿ ಹಿಡಿದು, ದೂಷಿಸಬೇಕಿರುವುದು ಪ್ರಧಾನಿಯನ್ನೇ ಎಂಬ ವಾತಾವರಣವನ್ನು ನಿರ್ಮಿಸುತ್ತಿದೆ. ಈ ಕಾರಣದಿಂದಲೇ ಸೋನಿಯಾ ಮತ್ತು ಮನಮೋಹನ್ ನಡುವೆ ಎಲ್ಲವೂ ಸರಿಯಿಲ್ಲ ಎಂದು ವಿಶ್ಲೇಷಿಸುವಂತಾಗಿದೆ.
ಸುಗ್ರೀವಾಜ್ಞೆ ಕುರಿತು ಪ್ರಧಾನಿ ನಿರ್ಧಾರವನ್ನು ಬಹಿರಂಗವಾಗಿಯೇ ತುಚ್ಛೀಕರಿಸಿದ ರಾಹುಲ್ ಗಾಂಧಿ ನಂತರ ಆ ಬಗ್ಗೆ ಪ್ರಧಾನಿ ಬಳಿ ಕ್ಷಮೆಯನ್ನೇನೂ ಕೇಳಲಿಲ್ಲ. ಅಮೆರಿಕದಿಂದ ಹಿಂತಿರುಗಿದ ಪ್ರಧಾನಿಯವರನ್ನು ಭೇಟಿ ಮಾಡಿದ ರಾಹುಲ್, ಅವರು ತನ್ನ ಎರಡನೇ ಗುರು ಎಂದು ಮುಲಾಮು ಸವರಿದ್ದು ಹೌದಾದರೂ ತಾಯಿಯೇ ತನ್ನು ಪ್ರಥಮ ಗುರು ಎಂಬುದನ್ನೂ ಸ್ಪಷ್ಟಪಡಿಸಿದರು. ರಾಹುಲ್ ಆದ್ಯತೆ ತಾಯಿಯೇ ಹೊರತು ಮನಮೋಹನ್ ಸಿಂಗ್ ಅಲ್ಲ ಎಂಬುದು ಸ್ಪಷ್ಟವೇ. ರಾಹುಲ್ ಆಕ್ರೋಶಕ್ಕೆ ಮನಮೋಹನ್ಸಿಂಗ್ ಪ್ರತಿಕ್ರಿಯಿಸಿದ ರೀತಿ ಬಹಳ ಸೌಮ್ಯ ರೀತಿಯದ್ದು ಎಂದೆನಿಸಿದರೂ ತಮ್ಮ ಪ್ರತಿಕ್ರಿಯೆಯಲ್ಲಿ ಅವರು ತಮಗೆ ಕಿರಿಕಿರಿ ಆಗಿರುವುದನ್ನೂ, ರಾಹುಲ್ ಸ್ಥಾನ ಏನು ಎಂಬುದನ್ನೂ ಸೂಕ್ಷ್ಮವಾಗಿ ಹೇಳಿದ್ದಾರೆ. 'ಈ ಎಲ್ಲ ವಿಷಯಗಳನ್ನು ಸರ್ವೋಚ್ಛ ಗುಂಪಿನಲ್ಲಿ ಈ ಮೊದಲೇ ಚರ್ಚಿಸಲಾಗಿತ್ತು.' ಎಂದು ರಾಹುಲ್ ಬೂಟಾಟಿಕೆಯನ್ನು ಮೆತ್ತನೆಯ ಶಬ್ದಗಳಲ್ಲೇ ಬಹಿರಂಗಗೊಳಿಸಿದರಲ್ಲದೇ, 'ಸಂಪುಟವು ಈ ವಿಷಯವನ್ನು ಒಂದಲ್ಲ ಎರಡು ಬಾರಿ ಇದನ್ನು ಚರ್ಚಿಸಿದೆ' ಎಂಬುದನ್ನು ಒತ್ತಿ ಹೇಳಿದರು. ಕೊನೆಯಲ್ಲಿ. 'ಕಾಂಗ್ರೆಸ್ನ ಯಾವುದೇ ಸದಸ್ಯ, ಸಂಪುಟದ ಯಾವುದೇ ಸಹೋದ್ಯೋಗಿ ಪರಾಮರ್ಶೆಯಾಗಬೇಕಾದ ಸಂಗತಿ ಬಗ್ಗೆ ಧ್ವನಿ ಎತ್ತಬಹುದು. ದೃಷ್ಟಿಕೋನವೊಂದು ಅಭಿವ್ಯಕ್ತಗೊಂಡಾಗ ನಾವೆಲ್ಲ ಕುಳಿತು ಆ ಬಗ್ಗೆ ಚರ್ಚಿಸಬೇಕಾಗುತ್ತದೆ. ಪ್ರತಿಭಟನೆ ಸಲ್ಲಿಸುತ್ತಿರುವ ಮನದೊಳಗಿನ ಕಾಳಜಿ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ' ಎಂದು ಮಂಗಳ ಹಾಡುವ ಮೂಲಕ, ರಾಹುಲ್ ಸಹ ಕಾಂಗ್ರೆಸ್ನ ಎಲ್ಲ ಸದಸ್ಯರಂತೆ ಎಂಬುದನ್ನು ಸೂಚ್ಯವಾಗಿ ಹೇಳಿದರು.
ಇವೆಲ್ಲವನ್ನೂ ಹಿನ್ನೆಲೆಯಲ್ಲಿ ಇಟ್ಟು ಪರಾಮರ್ಶಿಸಿದಾಗ, ಪ್ರಧಾನಿಗಿಂತ ಮೇಲಿನ ಶಕ್ತಿಯೊಂದು ಕಾರ್ಯಪ್ರವೃತ್ತವಾಗದೇ ತನಿಖಾ ಸಂಸ್ಥೆಗಳು ಅವರ ವಿರುದ್ಧವೇ ಬೊಟ್ಟು ಮಾಡುವ ಹೆಜ್ಜೆ ಇಡಲಾರವು ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ ಯಾರು ಈ ಉನ್ನತಶಕ್ತಿ ಎಂಬ ಪ್ರಶ್ನೆ ಎದ್ದಾಗ ಅಧಿಕಾರಿಗಳ ವರ್ಗವು ಖಾಸಗಿಯಾಗಿ ಸೋನಿಯಾ ಗಾಂಧಿ ಮತ್ತು ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರತ್ತಲೇ ದೃಷ್ಟಿ ನೆಡುತ್ತದೆ. ಅಧಿಕಾರದ ಕಾರಿಡಾರ್ಗಳಲ್ಲಿ ದಿನಂಪ್ರತಿ ಓಡಾಡಿಕೊಂಡಿರುವ ಉನ್ನತ ವ್ಯಕ್ತಿಗಳು ತಮ್ಮ ಖಾಸಗಿ ಮಾತುಕತೆಯಲ್ಲಿ ಹೇಳುವುದು ಏನೆಂದರೆ ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರು ಸೋನಿಯಾ ಗಾಂಧಿ ಎದುರು ತಮ್ಮ ಬಲಪ್ರದರ್ಶನವನ್ನು ಆಗಾಗ ಮಾಡುತ್ತಿರುತ್ತಾರೆ ಎಂಬುದು. ಉದಾಹರಣೆಗೆ 2012ರಲ್ಲಿ ಸಂಪುಟ ವಿಸ್ತರಣೆ ಆದಾಗ ಮನಮೋಹನ ಸಿಂಗ್ ಅವರು ತಮ್ಮ ಬೆಂಬಲಿಗರಾದ ಅಶ್ವನಿ ಕುಮಾರ್ ಹಾಗೂ ಪವನ್ ಕುಮಾರ್ ಬನ್ಸಲ್ ಅವರನ್ನು ಪ್ರಮುಖ ಹುದ್ದೆಗಳಿಗೆ ಕರೆತಂದರು. ಪಂಜಾಬ್ ಸಂಸದ ಅಶ್ವನಿ ಅವರು ಕಾನೂನು ಸಚಿವರಾದರೆ, ಬನ್ಸಲ್ ರೈಲ್ವೆ ಸಚಿವರಾದರು. ಆ ಕ್ಷಣಕ್ಕೆ ಮನಮೋಹನ್ ಬಯಕೆಗೆ ಸೋನಿಯಾ ಅಡ್ಡವಾಗಲಿಲ್ಲ. ಆದರೆ ಕೊನೆಗೆ ಆಗಿದ್ದೇನು ಎಂಬುದು ಎಲ್ಲರಿಗೂ ತಿಳಿದೇ ಇದೆ. ಏಪ್ರಿಲ್ 2013ರಲ್ಲಿ ಸಿಬಿಐ ಮಾಹಿತಿಯೊಂದನ್ನು ಸೋರಿಕೆ ಮಾಡಿತು. ಆ ಪ್ರಕಾರ ಕಲ್ಲಿದ್ದಲು ಹಗರಣದ ವರದಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸುವುದಕ್ಕೂ ಮೊದಲು ಕಾನೂನು ಸಚಿವರಿಗೆ ತೋರಿಸಿದ್ದಾಗಿ ಹೇಳಲಾಗಿತ್ತು. ಸುದ್ದಿಸ್ಫೋಟಗೊಂಡ ಬೆನ್ನಲ್ಲೇ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ, 'ತಾವು ಕಾನೂನು ಸಚಿವ ಅಶ್ವನಿ ಕುಮಾರ್ ಅವರಿಗೆ ಅಫಡವಿಟ್ ತೋರಿಸಿದ್ದು ಹೌದು. ಅದರ ಮೇಲೆ ಅವರು ಪರಿಣಾಮ ಬೀರಿರುವುದೂ ಖರೆ' ಎಂದುಬಿಟ್ಟರು. ಇದು ಪ್ರಧಾನಿಯನ್ನು ಕಟಕಟೆಯಲ್ಲಿ ನಿಲ್ಲಿಸಿತು. ಏಕೆಂದರೆ ಆ ಸಮಯದಲ್ಲಿ ಕಲ್ಲಿದ್ದಲು ಖಾತೆಯೂ ಅವರ ಬಳಿಯೇ ಇತ್ತು. ವಾಸ್ತವ ಏನೆಂದರೆ ಕಾನೂನು ಸಚಿವರನ್ನು ಭೇಟಿಯಾದ ಸಿಬಿಐ ನಿರ್ದೇಶಕರ ಪೈಕಿ ರಂಜಿತ್ ಮೊದಲಿಗರೇನೂ ಆಗಿರಲಿಲ್ಲ. ಪ್ರಾಸಿಕ್ಯೂಟರ್ಗಳನ್ನು ನೇಮಿಸುವುದು ಕಾನೂನು ಸಚಿವರ ವ್ಯಾಪ್ತಿಗೇ ಬರುತ್ತಾದ್ದರಿಂದ ಅಂಥ ಭೇಟಿಗಳು ಮಾಮೂಲು. ಆದರೆ ಕಲ್ಲಿದ್ದಲು ಹಗರಣದಲ್ಲಿ ಸುಪ್ರೀಂಕೋರ್ಟೇ ನಿಗಾ ವಹಿಸಿದ್ದರಿಂದ ರಂಜಿತ್ ಸಿನ್ಹಾ ಹುದ್ದೆಯೇ ಸಂಕಷ್ಟಕ್ಕೆ ಸಿಲುಕಿತ್ತು. ಇದೇ ಪ್ರಕರಣದಲ್ಲೇ ಸುಪ್ರೀಂಕೋರ್ಟ್, ಸಿಬಿಐ ತನ್ನ ಒಡೆಯನ ಧ್ವನಿಯಲ್ಲಿ ಮಾತನಾಡುವ ಪಂಜರದ ಗಿಣಿ ಎಂದಿದ್ದು.
ಮೇ 2013ರಲ್ಲಿ ಸಿಬಿಐ ಮತ್ತೆ ತನ್ನ ಕರಾಮತ್ತು ತೋರಿಸಿತು. ರೈಲ್ವೆಯ ನೇಮಕ ಒಂದರಲ್ಲಿ ಲಂಚ ಸ್ವೀಕರಿಸುತ್ತಿದ್ದ ಆರೋಪದಲ್ಲಿ ಬನ್ಸಲ್ ಸಂಬಂಧಿಯನ್ನು ಅದು ಬಂಧಿಸಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೋನಿಯಾ ನಿವಾಸಕ್ಕೆ ಧೌಡಿತ್ತ ಪ್ರಧಾನಿಗೆ ತಮ್ಮ ಇಬ್ಬರು ಆಪ್ತರಿಂದ ರಾಜೀನಾಮೆ ಪಡೆಯುವುದು ಅನಿವಾರ್ಯವಾಯಿತು. ನಂತರವೂ ಸೋರಿಕೆ ವರದಿಗಳ ಮೂಲಕ ಪ್ರಧಾನಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಕಾರ್ಯವನ್ನು ಸಿಬಿಐ ಮುಂದುವರಿಸಿಕೊಂಡುಬಂದಿದೆ. 'ಕಲ್ಲಿದ್ದಲು ಹಗರಣದ ವಿಚಾರದಲ್ಲಿ ತನಿಖಾಧಿಕಾರಿಗಳು ಪ್ರಧಾನಿಯನ್ನೂ ಪ್ರಶ್ನಿಸಬೇಕೆಂಬ ಅಭಿಪ್ರಾಯ ಹೊಂದಿದ್ದಾರೆ' ಎಂಬ ವರದಿ ಬಂತು. ಇದನ್ನು ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ನಿರಾಕರಿಸುವ ಗೋಜಿಗೆ ಹೋಗಲಿಲ್ಲ.
ಇವೆಲ್ಲವುಗಳ ಹಿನ್ನೆಲೆಯಲ್ಲೇ ಸುಗ್ರೀವಾಜ್ಞೆ ಕುರಿತ ರಾಹುಲ್ ಆಕ್ರೋಶದ ನಾಟಕವನ್ನೂ ಗಮನಿಸಬೇಕಾಗುತ್ತದೆ. ಇವೆಲ್ಲ ಸೋನಿಯಾ ಆಶೀರ್ವಾದವಿಲ್ಲದೇ ಬಿಚ್ಚಿಕೊಂಡಿರುವುದಕ್ಕೆ ಸಾಧ್ಯವಿಲ್ಲ. 2004ರಲ್ಲಿ ಸಿಂಗ್-ಸೋನಿಯಾ ನಡುವಿದ್ದ ಆಪ್ತಭಾವ ಈಗಿಲ್ಲ ಎಂಬುದರ ಸೂಚನೆಗಳಿವು.
- ರಮಣ್ ಕೃಪಾಲ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


