ಅಂಕಣಗಳು

ಆರ್‌ಬಿಐನ ಈ ಸಮಿತಿಯಲ್ಲಿ ಹಿತಾಸಕ್ತಿಯ ಸಂಘರ್ಷ!

ಆರ್‌ಬಿಐನ ಈ ಸಮಿತಿಯಲ್ಲಿ ಹಿತಾಸಕ್ತಿಯ ಸಂಘರ್ಷ!
Published On :

ಇಂದು Conflict of interest (ಹಿತಾಸಕ್ತಿಯ ಸಂಘರ್ಷ) ಎನ್ನುವುದು ನಿಯಂತ್ರಣ ನೀತಿಯನ್ನು ರೂಪಿಸುವಲ್ಲಿ ಅತಿ ಮುಖ್ಯ ಪಾತ್ರವಹಿಸುತ್ತಿದೆ. ಈಗ ಆರ್‌ಬಿಐ ನೇಮಿಸಿರುವ ವಿತ್ತೀಯ ನಿರ್ವಹಣಾ ಸಮಿತಿ ಮತ್ತು ಬ್ಯಾಂಕಿಂಗ್ ಆಯ್ಕೆ ಸಲಹಾ ಸಮಿತಿಯಲ್ಲೂ ಈ ಹಿತಾಸಕ್ತಿಯ ಸಂಘರ್ಷವಿರುವುದು ಖಚಿತವಾಗಿದೆ. ಇದನ್ನು ಆರ್‌ಬಿಐ ಆದಷ್ಟು ಬೇಗ ಅರ್ಥಮಾಡಿಕೊಳ್ಳಬೇಕಿದೆ. ಈ ಹಿತಾಸಕ್ತಿಗಳನ್ನು ಕಿತ್ತೆಸೆಯದಿದ್ದರೆ ನಿಸ್ಸಂಶಯವಾಗಿಯೂ ಭಾರತೀಯ ಆರ್ಥಿಕ ವಲಯಕ್ಕೆ ಊಹಿಸಲಾಗದಷ್ಟು ಹಾನಿಯಾಗಲಿದೆ.
ಎಲ್ಲದಕ್ಕೂ ಮೊದಲಿಗೆ 'ಹಿತಾಸಕ್ತಿಯ ಸಂಘರ್ಷ' ಎನ್ನುವುದರ ಅರ್ಥವೇನೆಂದು ನೋಡೋಣ. ಹಿತಾಸಕ್ತಿಯ ಸಂಘರ್ಷ ಅಂದರೆ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆ ತನ್ನ ಹಿತಾಸಕ್ತಿಗಾಗಿ ಇನ್ನೊಬ್ಬರ ಆಸಕ್ತಿಯನ್ನು ತುಳಿಯುವುದಕ್ಕೆ ಪ್ರಯತ್ನಿಸುವುದು ಎಂದರ್ಥ. ಹಾಗಿದ್ದರೆ ಈ ವಿಷಯವನ್ನು ಆರ್ಥಿಕ ವಲಯದ ನಿರ್ವಹಣೆಗೆ ಅನ್ವಯ ಮಾಡಿ ಮಾತನಾಡುವುದು/ ಅದಕ್ಕೆ ಪ್ರಾಮುಖ್ಯ ಕೊಡುವ ಅಗತ್ಯವೇನಿದೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಒಂದು ವೇಳೆ ಇದನ್ನು ಕಿತ್ತೆಸೆಯದಿದ್ದರೆ ಅಥವಾ ನಿಯಂತ್ರಿಸದಿದ್ದರೆ ಭಾರತದ ಇಡೀ ಆರ್ಥಿಕ ವಲಯವೇ ಅಧೋಗತಿಗಿಳಿಯಬಹುದು. ಹಿಂದಿನ ಬಿಕ್ಕಟ್ಟುಗಳೆಲ್ಲ ನಮಗೆ ಸೂಚಿಸುತ್ತಿರುವುದು ಇದೇ ಸಂಗತಿಯನ್ನೇ! ಜಾಗತಿಕ ಹಗರಣಗಳ ಮತ್ತು ಆರ್ಥಿಕ ಬಿಕ್ಕಟ್ಟುಗಳ ಮೂಲ ಕಾರಣಗಳಿಗೆ ಕಿವಿಗೊಟ್ಟಾಗ, ನಮಗೆ ಕೇಳಿಸುವುದು ಈ ಹಿತಾಸಕ್ತಿಯ ಸಂಘರ್ಷದ ಸ್ವರವೇ...  
ಈಗ ಆರ್‌ಬಿಐ ಅತೀ ಅವಸರದಲ್ಲಿ ಬ್ಯಾಂಕಿಂಗ್‌ಪರವಾನಗಿ ಕೊಡಲು ಮುಂದಾಗಿರುವುದಷ್ಟೇ ಅಲ್ಲದೆ,  ವಿತ್ತೀಯ ನಿರ್ವಹಣೆಗೆ ಹೆಚ್ಚು ಶಕ್ತಿ ಕೊಡಲು ಮನಸ್ಸು ಮಾಡಿದೆ. ಇಂಥ ಅಪಾಯಕಾರಿ ಹೆಜ್ಜೆಯನ್ನು ಇಡಹೊರಟಿರುವ ಆರ್‌ಬಿಐ ಒಮ್ಮೆ ಅಮೆರಿಕದ ಆರ್ಥಿಕ ವಲಯದತ್ತ ಚಿತ್ತ ಹರಿಸುವುದು ಒಳಿತು. ಹೇಗೆ ಅಲ್ಲಿನ ಆರ್ಥಿಕ ಬಿಕ್ಕಟ್ಟುಗಳಿಗೆ ಕೆಲವರ ಆರ್ಥಿಕ ಹಿತಾಸಕ್ತಿ ಕಾರಣವಾಯಿತು ಎನ್ನುವುದು ನಮಗೆ ಪಾಠವಾಗಬೇಕು.
ಅಮೆರಿಕದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್(ಎಸ್‌ಇಸಿ)ನ ಮಾಜಿ ಮುಖ್ಯಸ್ಥ ಆರ್ಥರ್ ಲೆವಿಟ್ ಅವರ ಮಾತಿನಲ್ಲೇ ಹೇಳಬೇಕೆಂದರೆ...
"1929ರಲ್ಲಿ ಅಮೆರಿಕದ ಮಾರುಕಟ್ಟೆ ನೆಲಕಚ್ಚಿದಾಗ ಭದ್ರತಾ ಮಾರುಕಟ್ಟೆಗಳ ಮೇಲೆ ಸೂಕ್ಷ್ಮ ಪರಿಶೀಲನೆ ನಡೆಸಲಾಯಿತು. 1933ರ ಪೆಕೋರಾ ನ್ಯಾಯವಿಚಾರಣೆ, ಆರ್ಥಿಕ ಬ್ಯಾಂಕ್‌ಗಳು ಮತ್ತು ಅದರ ಅಂಗಸಂಸ್ಥೆಗಳ ಹೀನ ಆಚರಣೆಗಳು(ಹಿತಾಸಕ್ತಿಯ ಸಂಘರ್ಷಗಳು) ಬಿಕ್ಕಟ್ಟಿಗೆ ಪ್ರಮುಖ ಕಾರಣವಾದವು ಎನ್ನುವುದನ್ನು ಹೊರಗೆಡವಿತು. ಈ ಹಳವಂಡಗಳನ್ನು ತಡೆಯುವ ಕಾರಣಕ್ಕಾಗಿಯೇ ಅನೇಕ ನಿರ್ವಹಣಾ ಕಾಯ್ದೆಗಳನ್ನು  ಜಾರಿಗೊಳಿಸಲಾಯಿತು"
ನಾನು ಅಮೆರಿಕದಲ್ಲಿ ಅನೇಕ ವರ್ಷಗಳನ್ನು ಕಳೆದಿದ್ದೇನೆ. ಹಿತಾಸಕ್ತಿಯ ಸಂಘರ್ಷಗಳಿಂದಾಗಿ ಬಿಕ್ಕಟ್ಟು ಉದ್ಭವವಾದ ಅನೇಕ ಉದಾಹರಣೆಗಳನ್ನು ನಾನು ನೋಡಿದ್ದೇನೆ. ಇವನ್ ಬೋಸ್ಕಿ ಮತ್ತು ಡೆನ್ನಿಸ್ ಲೆವೈನ್  ಹಗರಣ(1980), ವಾಲ್‌ಸ್ಟ್ರೀಟ್‌ನ ಪ್ರಮುಖ ಹೂಡಿಕೆ ಬ್ಯಾಂಕಿಂಗ್ ಸಂಸ್ಥೆ( ಇನ್ವೆಸ್ಟ್‌ಮೆಂಟ್ ಬ್ಯಾಂಕ್) ಮುಚ್ಚಿಹೋಗಿದ್ದು ಮತ್ತು ಅದರ ಪ್ರಮುಖ ಉದ್ಯೋಗಿ ಮೈಕೆಲ್ ಮಿಲ್ಕೇನ್ ಜೈಲು ಸೇರಿದ ಘಟನೆಗಳಿನ್ನೂ ನನ್ನ ನೆನಪಿನಲ್ಲಿ ಹಾಗೇ ಉಳಿದಿವೆ. ಇನ್ನು 2000 ನೇ ಇಸವಿಯ ನಂತರ ಹೆಚ್ಹೆಚ್ಚು ಹಗರಣಗಳು ಅಲ್ಲಿ ನಡೆದವು. ಉದಾಹರಣೆಗೆ 2000 / 2001ರ ಅಂತರ್ಜಾಲ ಉಬ್ಬರ, ಹೇಗೆ ಅನೇಕ "ಸಂಶೋಧನಾ ವಿಶ್ಲೇಷಕರು" ತಮಗೆ ಬೇಕಾದ ಸಂಸ್ಥೆಗಳಿಗೆ ಅನುಕೂಲವಾಗುವ ರೀತಿಯಲ್ಲೇ ವರದಿಗಳನ್ನು ತಯಾರಿಸುತ್ತಿದ್ದರು ಎನ್ನುವುದನ್ನು ಬಹಿರಂಗಗೊಳಿಸಿತು. ನಿಜ ಹೇಳಬೇಕೆಂದರೆ ಅಮೆರಿಕದಲ್ಲಿ "ಸರ್ಬೇನ್ಸ್ ಆಕ್ಸ್ಲೇ" ಕಾಯ್ದೆ ಜಾರಿಗೆ ಬಂದದ್ದೇ ಸಂಶೋಧನಾ ವಿಶ್ಲೇಷಕರ ಹಿತಾಸಕ್ತಿಯ ಸಂಘರ್ಷಗಳನ್ನು ತಡೆಯುವುದಕ್ಕಾಗಿ. ಇನ್ನು ದಶಕದ ಹಿಂದೆ, ಅಂದರೆ 2003ರಲ್ಲಿ, ಎಸ್‌ಇಸಿ, "ಮಾರಾಟಗಾರರು, ತಮ್ಮ ಷೇರುಗಳ ಮಾರಾಟಕ್ಕೆ ಸಹಕಾರಿಯಾಗಲು ದಳ್ಳಾಳಿಗಳಿಗೆ ಕಮಿಷನ್ ಕೊಡುವ ಪರಿಪಾಠ ಎಲ್ಲೆಡೆಯೂ ಹೆಚ್ಚಾಗಿದೆ' ಎನ್ನುವುದನ್ನು ಪತ್ತೆಹಚ್ಚಿತು.  ಇಷ್ಟೆಲ್ಲಾ ಆದ ಮೇಲೆ, "ಎಲ್ಲಾ ಬಿಕ್ಕಟ್ಟುಗಳ ತಾಯಿ" ಎಂದು ಕರೆಸಿಕೊಳ್ಳುವ 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟು ಪ್ರಪಂಚವನ್ನು ನಡುಗಿಸತೊಡಗಿತು. ಇದಕ್ಕೂ ಕಾರಣ ತಿಳಿಯದ್ದೇನಲ್ಲ. ಉತ್ಪಾದನೆ ಮತ್ತು ಅಡಮಾನ ಆಧಾರಿತ ಭದ್ರತಾ ಕ್ಷೇತ್ರಗಳು ಮತ್ತು ಅವುಗಳಿಗೆ ರೇಟಿಂಗ್ ಕೊಡುವ ಸಂಸ್ಥೆಗಳ ಸ್ವಹಿತಾಸಕ್ತಿಯೆಲ್ಲಾ ಸೇರಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾಯಿತು. ರೇಟಿಂಗ್ ಕಂಪೆನಿಗಳು ಅಪಾಯ ಸಾಧ್ಯತೆ ಮತ್ತು ಬಡ್ಡಿಯನ್ನು ತೆರುವ ಸಾಲಗಾರರ ಸಾಮರ್ಥ್ಯದ ಮೇಲೆ ರೇಟಿಂಗ್ ಕೊಡುತ್ತವೆ. ಹೆಚ್ಚು ಶ್ರೇಯಾಂಕ ಪಡೆದ ವಲಯಗಳು ಕಡಿಮೆ ಅಪಾಯಕಾರಿ ಎಂದರ್ಥ. ಆದರೆ ತಮ್ಮ ಅನುಕೂಲಕ್ಕೆ ತಕ್ಕಂತೆ ಅವು ರೇಟಿಂಗ್ ಕೊಡುವ ಉದಾಹರಣೆಗಳು ಬಹಳಷ್ಟಿವೆ.  
2007ರ ತನ್ನ ವರದಿಯಲ್ಲಿ ಹಣಕಾಸು ಬಿಕ್ಕಟ್ಟು ತನಿಖಾ ಆಯೋಗ (ಎಫ್‌ಸಿಐಸಿ), "ರಚನಾತ್ಮಕ ಆಸ್ತಿ ಬೆಂಬಲಿತ ಭದ್ರತೆಯ ಮೌಲ್ಯಮಾಪನ ಮಾಡುವಲ್ಲಿ ಈ ರೇಟಿಂಗ್ ಏಜೆನ್ಸಿಗಳ ನಡುವೆ ಹಿತಾಸಕ್ತಿಯ ಸಂಘರ್ಷವಿದ್ದೇ ಇದೆ" ಎನ್ನುವುದನ್ನು ಹೇಳುತ್ತದೆ. ಅಲ್ಲದೆ Moody's ನಂಥ ರೇಟಿಂಗ್ ಕಂಪನಿಗಳು ಈ ಬಿಕ್ಕಟ್ಟಿಗೆ ಬಹುಪಾಲು ಕೊಡುಗೆ ನೀಡಿದವು" ಎನ್ನುತ್ತದೆ ಆ ವರದಿ.   ಎಸ್‌ಇಸಿ 2008ರ ತನ್ನ ವರದಿಯಲ್ಲಿ ""Moody's ಕಂಪನಿ, ಅಡಮಾನ ಮಾಹಿತಿಯ ನಿಖರತೆಯನ್ನು ಪರೀಕ್ಷಿಸಲು ವಿಫಲವಾಗಿದೆ, ಆ ಕೆಲಸವನ್ನು ಬೇರೇ ಮೂಲಗಳಿಂದ ಮಾಡಿಸಿದೆ" ಎಂದು ಹೇಳಿತ್ತು. ಅಲ್ಲದೆ ಅಗತ್ಯವಿರುವಷ್ಟು ಸಿಬ್ಬಂದಿಯ ನೇಮಕ ಮಾಡಿಕೊಳ್ಳದಿರುವುದು ಮತ್ತು ಹಿತಾಸಕ್ತಿಯ ಸಂಘರ್ಷಗಳಿಂದಾಗಿ ರೇಟಿಂಗ್‌ನ ಮೇಲೆ ಪರಿಣಾಮ ಉಂಟಾಗಿದ್ದರ ಬಗ್ಗೆಯೂ ಬರೆದಿತ್ತು.
2010ರಲ್ಲಿ ಆಂಧ್ರಪ್ರದೇಶದಲ್ಲಿ ಸುಮಾರು 35 ಸಾವಿರ ಉದ್ಯೋಗಗಳ ನಷ್ಟಕ್ಕೆ ಕಾರಣವಾದ, ಆ ರಾಜ್ಯವನ್ನು ಅಲುಗಾಡಿಸಿದ ಕಿರು ಬಂಡವಾಳ ಕ್ಷೇತ್ರದ ಬಿಕ್ಕಟ್ಟು ಕೂಡ "ಹಿತಾಸಕ್ತಿಯ ಸಂಘರ್ಷ"ದಿಂದಲೇ ಉಂಟಾಗಿದ್ದು.
ಈಗ ಆರ್‌ಬಿಐ ನೇಮಕ ಮಾಡಿರುವ ವಿತ್ತೀಯ ನಿರ್ವಹಣಾ ಸಮಿತಿ ಮತ್ತು ಬ್ಯಾಂಕಿಂಗ್ ಆಯ್ಕೆ ಸಲಹಾ ಸಮಿತಿಯಲ್ಲೂ ಈ ಹಿತಾಸಕ್ತಿಯ ಸಂಘರ್ಷವಿರುವುದು ಖಚಿತ. ಏಕೆಂದರೆ ಈ ಸಮಿತಿಗಳಲ್ಲಿರುವ ಅನೇಕ ಸದಸ್ಯರು ಕಿರುಬಂಡವಾಳ ಸೇರಿದಂತೆ ಹಣ ನಿರ್ವಹಣೆಯ ಅನೇಕ ಉದ್ಯಮ ವಲಯಗಳಲ್ಲಿ ಅತೀವ ವಾಣಿಜ್ಯ ಆಸಕ್ತಿ ಹೊಂದಿದವರು. ಹಾಗಾಗೇ ಇವರುಗಳು ತಮ್ಮ ಆಸಕ್ತಿಗನುಗುಣವಾದ ನೀತಿಗಳನ್ನು ಸಮಿತಿಯ ಮೂಲಕ ಜಾರಿ ಮಾಡಿಸುವಲ್ಲಿ ಹಿಂದೇಟುಹಾಕಲಾರರು! ಈ ಕುರಿತು ಆರ್‌ಬಿಐ ಎಚ್ಚೆತ್ತುಕೊಳ್ಳಲೇಬೇಕು.
ಹಿಂದಿನ ಅನೇಕ ಆರ್ಥಿಕ ಬಿಕ್ಕಟ್ಟುಗಳಿಗೆ, ವಾಣಿಜ್ಯಕ ಹಿತಾಸಕ್ತಿಯುಳ್ಳ ಉದ್ಯಮಗಳ ಒಳಗಿನವರು ಅಥವಾ ಅಂಥವರ ಸಲಹೆಯ ಮೇರೆಗೆ ರಚಿಸಲ್ಪಟ್ಟ ಸಡಿಲ ಮತ್ತು ತಾಟಸ್ಥ್ಯ ನೀತಿಗಳು ಮತ್ತು ನಿರ್ವಹಣಾ ಚೌಕಟ್ಟುಗಳೇ ಕಾರಣವೆನ್ನಬಹುದು.
ಹಾಗಾಗೇ ಡಾ. ನಚಿಕೇತ್ ಮೋರ್ ನೇತೃತ್ವದ ಆರ್ಥಿಕ ನಿರ್ವಹಣಾ ಸಮಿತಿಯನ್ನು ಈ ಕೂಡಲೇ ವಿಸರ್ಜಿಸಬೇಕು. ಈಗಂತೂ ಎಮ್‌ಎಫ್‌ಐಡಿಆರ್ ಕಾಯ್ದೆ(2013) ಸಂಸದೀಯ ಸ್ಥಾಯಿ ಸಮಿತಿಯ ಮುಂದಿದೆ. ಆ ಸಮಿತಿಯ ಶಿಫಾರಸನ್ನು ನೋಡುವ ಮುನ್ನವೇ ಕಿರುಬಂಡವಾಳ ಮತ್ತು ಹಣಕಾಸು ನಿರ್ವಹಣಾ ಕ್ಷೇತ್ರಗಳ ಅಭಿವೃದ್ಧಿಯ ರಚನೆಗಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳುವ ನಿರ್ಧಾರಕ್ಕೆ ಆರ್‌ಬಿಐ ಬರಬಾರದು! ಇಷ್ಟೆಲ್ಲ ಏಕೆ ಒತ್ತುಕೊಟ್ಟುಹೇಳಬೇಕಿದೆಯೆಂದರೆ, ಹಿಂದೆ ಕೂಡ ಆರ್‌ಬಿಐ ರಚಿಸಿದ ಅನೇಕ ಸಮಿತಿಗಳಲ್ಲಿ ಕಿರುಬಂಡವಾಳ ಉದ್ಯಮಗಳಿಗೆ "ಬೇಕಾದವರು" ಸೇರಿಕೊಂಡಿದ್ದರು. ಇವರೆಲ್ಲರೂ ತಮ್ಮ ಸ್ವಹಿತಾಸಕ್ತಿಗಾಗಿ ನೀತಿಗಳನ್ನು ರೂಪಿಸಿದರು. ತತ್ಫಲವಾಗಿ ಎಂಥ ಸಂಕಷ್ಟಗಳು ಎದುರಾದವು ಎನ್ನುವುದನ್ನು ನಾವೆಲ್ಲ ನೋಡಿಯೇ ಇದ್ದೇವೆ. 2006ರಲ್ಲಿ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಕಿರುಬಂಡವಾಳ ಬಿಕ್ಕಟ್ಟು, 2009ರ ಕೋಲಾರ್ ಬಿಕ್ಕಟ್ಟು ಇದಕ್ಕೆ ಸೂಕ್ತ ಉದಾಹರಣೆ. ಹಣಕಾಸು ವಲಯದ ನಿಯಂತ್ರಣ/ ಮೇಲ್ವಿಚಾರಣೆ ನಡೆಸುತ್ತಿರುವ ಸ್ವತಂತ್ರ ಸಮಿತಿಗಳನ್ನು, ಅದೇ ವಿತ್ತೀಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಂಪೆನಿಗಳಿಂದ(ಸಂಸ್ಥೆಗಳು) ರಕ್ಷಿಸಬೇಕು. ಆಗ ಮಾತ್ರ ಆರ್‌ಬಿಐನ ಉದ್ದೇಶ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಬಲ್ಲದು. ಇಲ್ಲದಿದ್ದರೆ, ಸ್ವಹಿತಾಸಕ್ತ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಸಮಿತಿಗಳು(ಆರ್ಥಿಕ ನಿರ್ವಹಣಾ ಸಮಿತಿಯಂಥವು) ಸಾರ್ವಜನಿಕರು ಮತ್ತು ಗ್ರಾಹಕರ ಆಸಕ್ತಿಗಳನ್ನು ನಿಸ್ಸಂಶಯವಾಗಿಯೂ ಬಲಿಕೊಡಲಿವೆ. ಆರ್‌ಬಿಐ ತಾನೇ ಸ್ಥಾಪಿಸಿರುವ ಸಮಿತಿಯಿಂದ ಉಂಟಾಗಬಹುದಾದ ಅಪಾಯವನ್ನು ಕಡೆಗಣಿಸದಿರಲಿ ಎನ್ನುವುದಷ್ಟೇ ಈಗಿನ ಆಶಯ...

- ರಮೇಶ್. ಎಸ್. ಅರುಣಾಚಲಂ
ಆರ್ಥಿಕ ಪರಿಣತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.