ಅಂಕಣಗಳು

ಹೆಸರಿಗೆ ತಕ್ಕಂತೆಯೇ ಅಪ್ಪಟ ಬಂಗಾರವಾಗಿದ್ದ ಅಪ್ಪ...

ಹೆಸರಿಗೆ ತಕ್ಕಂತೆಯೇ ಅಪ್ಪಟ ಬಂಗಾರವಾಗಿದ್ದ ಅಪ್ಪ...
ಎಸ್. ಬಂಗಾರಪ್ಪ
Published On :

ಅವರ ಶಟಲ್ ಬ್ಯಾಟ್ ಹೊಡೆತ ಎಂದಿಗಿಂತ ಅಂದು ತೀವ್ರವಾಗಿತ್ತು. ಎಲ್ಲ ಭಾವನೆಗಳೂ ಕಾರ್ಕ್ ಹಿಂದಿರುಗಿಸುವ ಶಾಟ್‌ನಲ್ಲಿ ಅಬ್ಬರಿಸುತ್ತಿದ್ದವು. ಇಂತಹದ್ದೇ ಮತ್ತೊಂದು ತೀವ್ರ ವೇಗದ ಶಾಟ್‌ಗಳು ಹೊರಹೊಮ್ಮಿದ್ದು ಮತ್ತೊಂದು ದಿನ. ಅಂದು ಶಾಟ್‌ಗಳು ಆರ್ಭಟಿಸಿದ್ದವು. ಕಾರ್ಕ್ ಮೇಲೆಯೇ ಎಲ್ಲ ಭಾವಾವೇಶ ಮುಗಿಸಿದ್ದರು...
ನನ್ನ ತಂದೆ ಬಂಗಾರಪ್ಪ ಅವರು ಮುಖ್ಯಮಂತ್ರಿಯಾದ ದಿನ ಹಾಗೂ ಸಿಎಂ ಹುದ್ದೆಗೆ ರಾಜಿನಾಮೆ ನೀಡಿದ ದಿನ ಶಟಲ್ ಬ್ಯಾಡ್ಮಿಂಟನ್ ಆಡಿದ ಎರಡೂ ದಿನಗಳ ಅವರ ಶಾಟ್ ಅತ್ಯಂತ ವೇಗವಾಗಿದ್ದವು. ಏಕೆಂದರೆ, ಅವರ ಎಲ್ಲ ಭಾವಾವೇಶಗಳು ಯಾವಾಗಲೂ ಶಟಲ್‌ನಲ್ಲೇ, ಕ್ರೀಡಾಭಾವದಲ್ಲೇ ಹೊರಹೊಮ್ಮುತ್ತಿದ್ದವು. ಇನ್ನೆಲ್ಲೂ ಆಕ್ರೋಶ ವ್ಯಕ್ತವಾಗುತ್ತಿರಲಿಲ್ಲ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನ ಅವರು ಶಟಲ್ ಕಾರ್ಕ್ ಕೋರ್ಟ್‌ಗೆ ಹೋಗಿ ಆಟ ಆಡಿದ್ದರು. ಸಿಎಂ ಹುದ್ದೆಗೆ ರಾಜಿನಾಮೆ ನೀಡಿದ ಮರುಕ್ಷಣವೇ ಅವರು ಅದೇ ಶಟಲ್ ಕಾರ್ಕ್ ಕೋರ್ಟ್‌ಗೆ ಹೋಗಿ ಆಡಿದ್ದರು. ಸಿಎಂ ಹುದ್ದೆ ಅವರ ಜೀವನದ ಕೆಲಸ ಆಗಿತ್ತೇ ಹೊರತು, ಅದೇ ಜೀವನ ಆಗಿರಲಿಲ್ಲ. ಅವರ ಜೀವನಭಾಗ ಎಂದರೆ, ಬೆಳಗ್ಗೆ ಎದ್ದು ಒಳ್ಳೆ ಶೇವ್ ಮಾಡಿ, ಬ್ರಶ್ ಮಾಡಿ, ಒಂದು ಕಪ್ ಟೀ ಕುಡಿದು, ಸಾಕುಪ್ರಾಣಿಗಳೊಂದಿಗೆ ಕೆಲವು ಸಮಯ ಕಳೆಯುವುದು. ನಂತರ ಮೊಮ್ಮಕ್ಕಳೊಂದಿಗೆ ಆಟವಾಡುವುದು. ಶಟಲ್ ಬ್ಯಾಡ್ಮಿಂಟನ್ ಆಡುವುದು ಅಷ್ಟೆ. ಅಭಿಮಾನಿಗಳಿಗಾಗಿ ಜೀವನದ ಬಹುತೇಕ ಭಾಗವನ್ನು ಮುಡುಪಿಟ್ಟರು. ನಾನು ಕಂಡಂತೆ, ಬಂಗಾರಪ್ಪ ಅವರು ಹೆಸರಿಗೆ ತಕ್ಕಂತೆ ಅಪ್ಪಟ ಬಂಗಾರ.
ಮುಖ್ಯಮಂತ್ರಿಯಾಗಿದ್ದಾಗ ನಮ್ಮನ್ನೆಲ್ಲ ಬೆಳೆಸಲೇ ಇಲ್ಲ. ಅವರ ಹುದ್ದೆಯನ್ನು ಮಾತ್ರ ನಿರ್ವಹಿಸುತ್ತಿದ್ದರು. ನನಗೆ ನೆನಪಿದೆ, ಒಂದು ವರ್ಗಾವಣೆ ವಿಷಯದ ಬಗ್ಗೆ ತಂದೆಯನ್ನು ಕೇಳಲು ನಾನು 25 ದಿನ ಕಾದಿದ್ದೆ! ಅವರ ಬಳಿ ಹೋಗಲು ಹೆದರಿದ್ದೆ. ಕೊನೆಗೆ ಒಂದು ದಿನ ಹೋಗಿ ಕೇಳಿದಾಗ, ಅವರು ನಕ್ಕರು. 'ಇವರಿಗೆ ಮಾಡಬಹುದಲ್ಲಾ, ಅವರು ನಮಗೆ ಸಹಾಯ ಮಾಡಿದ್ದಾರಲ್ಲ. ಸಹಾಯ ಮಾಡಿದವರಿಗೆ ಸಹಾಯ ಮಾಡೋದು ತಪ್ಪಲ್ಲ' ಎಂದಿದ್ದರು. ತಂದೆ ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಜತೆ ಹತ್ತಿರ ಆಗಲು ಬಹಳ ಜನ ಬರುತ್ತಿದ್ದರು. ಅವರಿಂದ ನಾನು ದೂರ ಓಡಿಹೋಗುತ್ತಿದ್ದೆ. ಆಕಾಶ್ ಆಡಿಯೋ ಮಾಡಲು ಮುಂದಾದಾಗ ಎಷ್ಟು ಹೆದರಿದ್ದೆ ಎಂದ್ರೆ ಏನೂ ಕೇಳಲಿಲ್ಲ. ಅದಕ್ಕೇ, ಅವರ ಸಿಎಂ ಹುದ್ದೆ ಹೋದ ಮೇಲೆ ಆಕಾಶ್ ಆಡಿಯೋ ಚೆನ್ನಾಗಿ ಬೆಳೆಯಿತು.
ತಂದೆ ಮುಖ್ಯಮಂತ್ರಿಯಾಗಿದ್ದಾಗ ರಾತ್ರಿ ಮನೆಗೆ ಬಂದಾಗ ನನ್ನ ರೂಂಗೇ ಬಂದು ಟಿವಿ ನೋಡುತ್ತಿದ್ದರು. ಅವರ ರೂಂನಲ್ಲಿ ಟಿವಿ ಇರಲಿಲ್ಲ. ಒಳ್ಳೆ ಮೂವಿ ಹಾಕಲು ಹೇಳುತ್ತಿದ್ದರು. "ಎಸ್ಕೇಪ್ ಟು ವಿಕ್ಟರಿ"ಯಂತಹ ಚಿತ್ರ ನೋಡುತ್ತಿದ್ದರು. ಕನ್ನಡದಲ್ಲಿ ಭಕ್ತಕುಂಬಾರದಂತಹ ಪೌರಾಣಿಕ ಚಿತ್ರ ಅವರಿಗೆ ಇಷ್ಟವಿತ್ತು. ಹಾಸ್ಯ ಚಿತ್ರದಲ್ಲಿ ಗುರುಶಿಷ್ಯರು, ಲಾರಲ್ ಅಂಡ್ ಹಾರ್ಡ್ಲಿ, ಚಾರ್ಲಿ ಚಾಪ್ಲಿನ್‌ನ ಮೇಲೆ ಅವರಿಗೆ ಅತ್ಯಂತ ಪ್ರೀತಿ. ಅವರಿಗೆ ಮಾಸ್ಟರ್ ಪೀಸ್‌ಗಳು ಮಾತ್ರ ಇಷ್ಟವಾಗುತ್ತಿದ್ದವು. ಏಕೆಂದರೆ ಮಾಸ್ಟರ್ ಪೀಸ್‌ಗಳಿಗೆ ಮಾಸ್ಟರ್ ಪೀಸ್‌ಗಳು ಮಾತ್ರ ಸಮಾಧಾನ ತರಲು ಸಾಧ್ಯ. ಅವರಿಗೆ ಯಾವುದು ಸಂತೋಷ ಕೊಡುತ್ತಿತ್ತೋ ಅದನ್ನಷ್ಟೇ ಮಾಡುತ್ತಿದ್ದರು. ಸಂತೋಷ ನೀಡದ ಯಾವುದೇ ಕೆಲಸವನ್ನು ಮುಖ್ಯಮಂತ್ರಿಯಾಗಿಯೂ ಮಾಡಲಿಲ್ಲ. ನನ್ನ ತಂದೆಯವರು ಪ್ರಥಮ ಬಾರಿಗೆ ಚುನಾವಣೆಯಲ್ಲಿ ಸೋತಾಗ ನಾನು ಕಣ್ಣೀರಿಟ್ಟಿದ್ದೆ. ಆದರೆ, ಅವರು ಒಂದು ಮಾತು ಮಾತ್ರ ಹೇಳಿದ್ದರು- 'ಮಧು, ಯಾವಾಗಲೂ ಗೆಲ್ತಿದ್ದೆನಲ್ಲಾ, ಗೆದ್ದು ರಾಜಕಾರಣ ಮಾಡೋದು ಸುಲಭ. ಸೋತು ಮಾಡೋದು ಕಷ್ಟ. ಸೋತು ರಾಜಕಾರಣ ಮಾಡೋದ್ರಲ್ಲೂ ಒಂದು ರೀತಿ ಮಜಾ ಇದೆ ಕಣೋ. ಅದರ ಅನುಭವ ನನಗೆ ಈಗ ಆಗುತ್ತಿದೆ'.
ನಾನು ಎರಡನೇ ಪಿಯುಸಿಯಲ್ಲಿ ಫೇಲಾದಾಗ, ತಂದೆಯವರು ಎಲ್ಲಿ ಹೊಡೆಯುತ್ತಾರೋ ಎಂದು ಹೆದರಿದ್ದೆ. 'ಏನೋ ಫೇಲಾದ್ಯಂತೆ? ನವೆಂಬರ್‌ನಲ್ಲಿ ಕಟ್ಟಿ ಪಾಸ್ ಮಾಡಿಕೊ' ಎಂದಷ್ಟೇ ಹೇಳಿದ್ದರು. ಒಂದು ದಿನ ನಾನು ಹಳಗನ್ನಡ ಓದುವುದನ್ನು ಕೇಳಿಸಿಕೊಂಡರು. ಹತ್ತಿರ ಬಂದು ಓದು ಎಂದರು. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ನಾನು ಕನ್ನಡ ಓದುವಾಗ ತಡವರಿಸುತ್ತೇನೆ. "ಹಾಗಲ್ಲ, ಹೀಗೆ" ಎಂದು ಪ್ರತಿ ದಿನ ಒಂದು ತಾಸು ನನಗೆ ಅವರು ಪಾಠ ಮಾಡಿದ್ದರು. ಅವರ ಮುಂದೆ ಮಾತನಾಡುವಾಗ ಸಾಕಷ್ಟು ಭಯ ಇತ್ತು. ಅವರ ಫೇವರೆಟ್ ಅಂದರೆ ಸುಜಾತ ಅಕ್ಕ. ಅವರನ್ನು ಕಂಟ್ರೋಲ್ ಮಾಡುತ್ತಿದ್ದವರೂ ಅವರೇ. ಅದಕ್ಕೇ ತಂದೆಯ ಅಂತ್ಯಕ್ರಿಯೆಯಲ್ಲಿ ಅಕ್ಕನನ್ನು ನನ್ನ ಪಕ್ಕ ಕೂರಿಸಿಕೊಂಡಿದ್ದೆ. ನನ್ನ ತಂದೆಯವರ ಸ್ಥಾನವನ್ನು ಸುಜಾತ ಅಕ್ಕನಿಗೆ ನೀಡಿದ್ದೇನೆ.
ಅಪ್ಪ ಯಾವುದೇ ಸಮಾವೇಶ ಮಾಡಬೇಕಾದರೆ ಅದನ್ನು ಬೀದರ್‌ನಿಂದಲೇ ಶುರು ಮಾಡುತ್ತಿದ್ದರು. ಕ್ರಾಂತಿರಂಗ, ಕೆಸಿಪಿ ಎಲ್ಲ ಸಮಾವೇಶಗಳೂ ಅಲ್ಲಿಂದಲೇ ಪ್ರಾರಂಭವಾದವು. ಏಕೆಂದರೆ ಕರ್ನಾಟಕದ ಕಿರೀಟ ಬೀದರ್. ಅವರ ಅಭಿಮಾನಿಗಳು ಕೇವಲ ಸೊರಬದಲ್ಲಿ ಮಾತ್ರವಲ್ಲ, ರಾಜ್ಯಾದ್ಯಂತ ಇದ್ದಾರೆ. ಅವರೇ ತಂದೆಯವರ ಅತ್ಯಂತ ದೊಡ್ಡ ಆಸ್ತಿ. ಆ ಆಸ್ತಿಯನ್ನು ಅನುಭವಿಸಲು ನನಗೆ ಈ ಒಂದು ಜನ್ಮ ಸಾಲುವುದಿಲ್ಲ. ಅಭಿಮಾನಿಗಳ ಅಭಿಮಾನಕ್ಕೆ ಒಂದು ಸಣ್ಣ ಉದಾಹರಣೆ ನೀಡುತ್ತೇನೆ. ಮೊನ್ನೆ ರಾಯಚೂರಿಗೆ ಹೋಗಿದ್ದೆ. ಅಲ್ಲಿ ರೈತರು ಮುಷ್ಕರ ಮಾಡುತ್ತಿದ್ದರು. ದೇವೇಗೌಡರು ರೈತರೊಂದಿಗೆ ಮಾತನಾಡುತ್ತಿದ್ದರು. ನಾನು ಅಲ್ಲಿಗೆ ಹೋದಾಗ, ರೈತನೊಬ್ಬ ನನ್ನ ಕೈ ಎಳೆದ. "ನೀವು ಬಂಗಾರಪ್ಪನವರ ಮಗ ಅಲ್ವಾ?" ಎಂದ. ಅವನು ನನ್ನನ್ನು ಮಧು ಬಂಗಾರಪ್ಪ ಎಂದು ಕರೆಯಲಿಲ್ಲ, ಬಂಗಾರಪ್ಪನವಪ ಮಗ ಎಂದು ಕರೆದಿದ್ದ. ಅದು ಅಪ್ಪನ ತಾಕತ್ತು. ಅಷ್ಟೇ ಅಲ್ಲ, ಆತ ಮತ್ತೊಂದು ಮಾತೂ ಹೇಳಿದ- 'ನೀವೆಲ್ಲ ಬಂಗಾರಪ್ಪ ಅವರನ್ನು ಕಳೆದುಕೊಂಡಿದ್ದೇವೆ ಅಂದುಕೊಂಡಿರಬಹುದು. ಆದರೆ ಅವರು ನಮ್ಮ ಜತೆಯಲ್ಲೇ ಇದ್ದಾರೆ. ದಿನಾ ಅವರ ಹೆಸರು ಹೇಳೇ ನೀರು ಕುಡಿಯುತ್ತೇವೆ, ಇಲ್ಲಿನ "ಬಂಗಾರಪ್ಪ ಕೆರೆಯಿಂದ". ರಾಯಚೂರಿನ ಜನ ನೀರು ಕುಡಿಯುತ್ತಿದ್ದರೆ ಅದಕ್ಕೆ ಬಂಗಾರಪ್ಪ ಕಾರಣ' ಅಂದ.
ಬೀದರ್‌ನಲ್ಲಿ ನಡೆದ ಇನ್ನೊಂದು ಘಟನೆ ಹೇಳುತ್ತೇನೆ. ದೊಡ್ಡ ಪೇಟ ಕಟ್ಟಿಕೊಂಡಿದ್ದ ಹಿರಿಯ ಮನುಷ್ಯನೊಬ್ಬ ನನ್ನ ಹತ್ತಿರ ಬಂದು ಬಂಗಾರಪ್ಪನವರ ಮಗ ಯಾರು ಎಂದು ಕೇಳಿದ. ಅವರು ಬಹುತೇಕ ನನ್ನ ಕಾಲಿನವರೆಗೆ ಬಂದು ಕಾಲಿಗೆ ಬೀಳಲು ಬಂದ ಯಜಮಾನ. ಹಿಡಿದುಕೊಂಡಾಗ, ನನ್ನ ಮುಖಮುಟ್ಟಿ "ಬಂಗಾರಪ್ಪನವರ ಮಗ ಬಂದಾನೆ ಅಂದ್ರು. ಅದಕ್ಕೆ ಬಂದೆ" ಅಂದ. "ಬಂಗಾರಪ್ಪನವರನ್ನು ನಾನು ಜೀವಂತ ನೋಡಲು ಸಾಧ್ಯವಾಗಲಿಲ್ಲ. ಆದರೆ ಅವರ ಮಗನ್ನ ನೋಡಲು ಅವಕಾಶ ಸಿಕ್ತು. ಏಕೆಂದರೆ, ನಮಗೆಲ್ಲ ಮುಂಚೆ, ತಿನ್ನೋಕು ಗತಿ ಇರಲಿಲ್ಲ. ನನ್ನ ಮಗನನ್ನ ಚೆನ್ನಾಗಿ ಓದಿಸಿದ್ದೆ. ನನ್ನ ಮಗನಿಗೆ ಮನೆಗೆ ಒಂದು ಲೆಟರ್ ಬಂತು. ನೀನು ಕೆಲಸಕ್ಕೆ ಅಪಾಯಿಂಟ್ ಆಗಿದ್ದೀಯಾ ಎಂದು. ಗ್ರಾಮೀಣ ಕೃಪಾಂಕದಡಿಯಲ್ಲಿ ಅವನಿಗೆ ಕೆಲಸ ಸಿಕ್ಕಿತ್ತು" ಎಂದು ಹೇಳಿದ.
ನಮ್ಮ ತಂದೆಗೆ ಎಷ್ಟು ದೂರದೃಷ್ಟಿಯಿತ್ತು ಎನ್ನುವುದನ್ನು ಹೇಳಲು ಈ ಘಟನೆಯನ್ನು ಉಲ್ಲೇಖಿಸಿದೆ. ಇನ್ನು ಅವರನ್ನು ಹಿಂದುಳಿದ ನಾಯಕ ಎನ್ನುತ್ತಾರೆ, ಮಾಸ್ ಲೀಡರ್ ಎಂದೂ ಕರೆಯುತ್ತಾರೆ. ಅವರಿಂದಾಗಿ ಹಿಂದುಳಿದವರಿಗೆ ಹೆಚ್ಚಿನ ಪ್ರಯೋಜನ ಆಗಿರಬಹುದು ಅಷ್ಟೆ. ರೈತರಿಗೆ ಉಚಿತ ಕರೆಂಟ್ ನೀಡುವಾಗ ಅವರ ಜಾತಿನೋಡಿ  ಕೊಡಲಿಲ್ಲ. ಆಶ್ರಯ ಮನೆ ನೀಡಿದಾಗಲೂ ಅಷ್ಟೇ. ಈಗ ಅದು ಜಾತಿಗೆ ಕನ್ವರ್ಟ್ ಆಗಿರಬಹುದು. ತಂದೆಯ ಉದ್ದೇಶ ಇದ್ದದ್ದು ಯೋಜನೆಗಳು ಎಲ್ಲರಿಗೂ ತಲುಪಬೇಕು ಎಂಬುದು. ಒಂದು ಕುಟುಂಬ, ಸಮುದಾಯ, ಜಾತಿಗೆ ಮಾತ್ರ  ಅವರು ಎಂದಿಗೂ ಸೀಮಿತರಾಗಲಿಲ್ಲ.
ಚಿತ್ರದುರ್ಗ ಬಳಿಯ ಹೈವೆಯಲ್ಲಿ ನ್ಯಾಷನಲ್ ಹೋಟೆಲ್ ಇದೆ. ಒಂದು ದಿನ ಅಲ್ಲಿ ನಾನು, ಅಮ್ಮ, ಅಕ್ಕ ಎಲ್ಲ ಊಟ ಮಾಡುತ್ತಿದ್ದೆವು.  ಆಗ ಅಲ್ಲಿಗೆ ಯಾರೋ ಒಂದಷ್ಟು ಜನ ಬಂದರು. ತಮ್ಮ ಗುಡಿಸಲೆಲ್ಲ ಸುಟ್ಟುಹೋಗಿದೆಯೆಂದು ತಿಳಿಸಿದರು. ಆಗ ಅಪ್ಪ ಅವರಿಗೆಲ್ಲ ತಿಂಡಿ ತಿನ್ನಿಸಿದರು. ಎಲ್ಲ ವಿಷಯ ಕೇಳಿದರು. ನಮ್ಮೆಲ್ಲರ ಜೇಬಿನಲ್ಲಿ ಎಷ್ಟು ಹಣವಿದೆ ಎಂದು ಕೇಳಿ ತೆಗೆದುಕೊಂಡರು. ನೀವು ನಂಬಲ್ಲ, ಅಂಬ್ಯಾಸೆಡರ್ ಕಾರ್ ಪೆಟ್ರೋಲ್‌ಗೆ 100-150 ರುಪಾಯಿ ಮಾತ್ರ ಉಳಿಸಿಕೊಂಡು ಉಳಿದ ಎಲ್ಲ ಹಣವನ್ನೂ ಅಪ್ಪ ಅವರಿಗೆ ಕೊಟ್ಟುಬಿಟ್ಟರು! ಎರಡುಮೂರು ಸಾವಿರ ಇತ್ತೆಂದು ನೆನಪು. ಇದು ಸುಮಾರು 30 ವರ್ಷದ ಹಿಂದೆ ನಡೆದ ಘಟನೆ. ಆಗ ಅವರು ಯಾವುದೇ ಅಧಿಕಾರದಲ್ಲೂ ಇರಲಿಲ್ಲ. ಯಾವುದಕ್ಕೂ ಹಿಂದೆ-ಮುಂದೆ ನೋಡುವ ಸ್ವಭಾವ ಅವರದ್ದಾಗಿರಲಿಲ್ಲ.
ಅವರಿಗೆ ಇಷ್ಟ ಇಲ್ಲ ಅಂದ್ರೆ ಯಾರನ್ನೂ ಕೇರ್ ಮಾಡುತ್ತಿರಲಿಲ್ಲ. ಯಾರ ಮನೆಗೂ ಹೋಗುತ್ತಿರಲಿಲ್ಲ. ಕೊನೆಗೆ ತಾವಿದ್ದ ಮನೆಯನ್ನೂ ಬಿಟ್ಟು ಹೋದರು. ಮನೆ ಬಿಡುವಾಗ ಹೇಳಿದ್ರು, "ನಾನು ಹೋಗುತ್ತಿದ್ದೇನೆ, ನಿನಗೆ ಬರಲು ಇಷ್ಟಾನಾ?" ಅವರೊಂದಿಗೆ ನಾನೂ ಹೋಗಿದ್ದೆ. ಅವರ ಪ್ರತಿಯೊಂದು ಹೆಜ್ಜೆಯನ್ನೂ ನಾನು ಇಂದಿಗೂ ಅನುಸರಿಸುತ್ತೇನೆ. 45 ವರ್ಷಗಳ ರಾಜಕೀಯದಲ್ಲಿ ಅವರು ಅಧಿಕಾರದಲ್ಲಿ ಇದ್ದದ್ದು ಕೇವಲ ಐದೂವರೆ ವರ್ಷ ಮಾತ್ರ. ಉಳಿದದ್ದು ಪ್ರತಿಪಕ್ಷದಲ್ಲೇ. ಅವರು ಜೀವನವಿಡೀ ತಮಗಾಗಿ ಏನೂ ಮಾಡಿಕೊಳ್ಳಲಿಲ್ಲ. ಬೇರೆಯವರಿಗೇ ಜೀವನ ಮುಡಿಪಿಟ್ಟುಬಿಟ್ಟಿದ್ದರು. ಅವರ ಕೊನೆಯ ಮಾತು ಕೂಡ ಇದೇ ಧಾಟಿಯಲ್ಲಿತ್ತು. ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಮಲಗಿದ್ದ ಅವರನ್ನು ಊರಿಂದ ಬಂದ ನಾನು ಮಾತನಾಡಿಸಿದೆ, "ಯಾವಾಗ ಬಂದೆ ಅಂದ್ರು. ಊರಲ್ಲಿ ಎಲ್ಲ ಹೆಂಗಿದ್ದಾರೇ?" ಎಂದು ಕೇಳಿದ್ದರು.  
ಅವರು ನನ್ನ ನಾಯಕ ಹಾಗೂ ಮಾರ್ಗದರ್ಶಕರೂ ಹೌದು. ಅಪ್ಪ ನನಗೆ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. "ಬೇರೆಯವರಿಗೆ ಸಹಾಯ ಮಾಡಲಾಗುತ್ತದೋ ಇಲ್ಲವೋ ಬೇಕಿಲ್ಲ, ಆದರೆ ದ್ವೇಷ ಮಾತ್ರ ಮಾಡಬೇಡ. ಇನ್ನೊಬ್ಬರನ್ನು ಹಾಳು ಮಾಡಲು ಹೋಗಬಾರದು'.
ಅವರ ಕಾಲದಲ್ಲಿ ಹೋರಾಟ ಇತ್ತು, ಗೇಣಿದಾರರ ಹೋರಾಟ ಮೊದಲಾದ ಸಂದರ್ಭದಲ್ಲಿ ಜನರೂ ಭಾಗವಹಿಸುತ್ತಿದ್ದರು. ಇಂದು ಹೋರಾಟ ಮಾಡಬೇಕಾಗಿಲ್ಲ. ಸರ್ಕಾರದ ಸವಲತ್ತುಗಳನ್ನು ಕೊಟ್ಟರೆ ಅದೇ ಹೋರಾಟ. ನನ್ನ ರಾಜಕೀಯ ಜೀವನದಲ್ಲಿ ತಂದೆಯವರ ಕೊನೆಯ ಸಾರ್ವಜನಿಕ ಭಾಷಣ ಅತ್ಯಂತ ಮಹತ್ವದ್ದು. ಸೊರಬದಲ್ಲಿ ಅವರಿಗೆ ಸನ್ಮಾನ ಮಾಡಲು ಕಾರ್ಯಕ್ರಮ ಮಾಡಿದ್ದರು. ಆಗ ಜನರಿಗೆ ಹೇಳಿದ್ದರು. "ಎರಡು ಸಲ ಸೋತಿರುವ ಮಧೂನ, ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ" ಎಂದಿದ್ದರು. ಅವರ ಭಾಷಣದಲ್ಲಿ ಅವರ ಜೀವನದ ಎಲ್ಲ ಅಂಶ ಬಿಚ್ಚಿಟ್ಟಿದ್ದರು. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದರು. ಎಲ್ಲವನ್ನೂ ಪಂಚಾಯ್ತಿ ಮಾಡಿಯೇ ಹೊರಟುಬಿಟ್ಟರು. ಬಂಗಾರಪ್ಪನವರ ಕುಟುಂಬದ ಬಗ್ಗೆ ಪಂಚಾಯ್ತಿ ಮಾಡೋಕೆ ಯಾರಿಗೂ ತಾಕತ್ತಿಲ್ಲ. ಅದು ಬಂಗಾರಪ್ಪನವರಿಗೆ ಮಾತ್ರ ಸಾಧ್ಯ ಇತ್ತು. ಬಂಗಾರಪ್ಪನವರ ಸ್ಥಾನದಲ್ಲಿ ಇವತ್ತು ಸೊರಬ ತಾಲೂಕಿನ ಜನರು ಇದ್ದಾರೆ. ಕಳೆದ ಚುನಾವಣೆಯಲ್ಲಿ ಸೊರಬದ ಜನ ಆ ಪಂಚಾಯ್ತಿ ಮುಗಿಸಿಬಿಟ್ಟರು.
ನಮ್ಮ ತಂದೆಯವರ ಈ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಮೂರು ದಿನದ ಕಾರ್ಯಕ್ರಮ ಮಾಡುತ್ತಿದ್ದೇನೆ. ಅವರ ಅಭಿಮಾನಿಗಳಿಗಾಗಿ ಈ ಕಾರ್ಯಕ್ರಮ. ನಾನು ವೇದಿಕೆಯ ಮುಂದೆ ಪ್ರೇಕ್ಷಕನಾಗಿ ಎಲ್ಲವನ್ನೂ ನೋಡಿ, ಕೇಳಿಸಿಕೊಳ್ಳುತ್ತೇನೆ. ಅವರ ಬಗ್ಗೆ ನನಗೆ ಗೊತ್ತಿಲ್ಲದ್ದನ್ನು ತಿಳಿದುಕೊಳ್ಳುತ್ತೇನೆ. ಬಂಗಾರದಂತೆ ಹೊಳೆಯಬೇಕು ಎಂದು ಮೂರು ಜನರಿಗೆ 'ಬಂಗಾರ' ಪ್ರಶಸ್ತಿ ನೀಡಲಾಗುತ್ತಿದೆ. ಮುಂದಿನ ವರ್ಷದಿಂದ ಆರ್ಥಿಕವಾಗಿ ತೊಂದರೆಯಲ್ಲಿರುವವರಿಗೆ ಬಂಗಾರಪ್ಪ ಟ್ರಸ್ಟ್‌ನಿಂದ ನೆರವು ನೀಡಲಾಗುತ್ತದೆ. ಬಂಗಾರಪ್ಪನವರು ಅಭಿಮಾನಿಗಳ ಅಭಿಮಾನದಲ್ಲಿ ಎಂದೆಂದಿಗೂ ಶಾಶ್ವತವಾಗಿ ಉಳಿಯುತ್ತಾರೆ ಎಂಬುದೇ ನನ್ನ ಬಲವಾದ ನಂಬಿಕೆ.

-ಮಧು ಬಂಗಾರಪ್ಪ
ಶಾಸಕರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.