Hmmm...ಪಾಂಚ್
-ನಮಸ್ಕಾರ, ಚಿತ್ರರಂಗಕ್ಕೆ ಬರ್ತಾ ಇರೋ ಹೊಸ ಹೀರೋಗೆ. ಸಿಕ್ಸ್‌ಪ್ಯಾಕ್ ಬಾಡಿ ಇದೆ ಅಂತ ಹೀರೋ ಆಗ್‌ಬಿಟ್ರಂತೆ ಆ್ಯಕ್ಟಿಂಗ್ ಏನಾದ್ರೂ ಬರುತ್ತೋ?
ಅಯ್ಯೋ, ಆ್ಯಕ್ಟಿಂಗ್ ಕಲಿಯೋಕೆ ಅಂತಾನೇ ಅಲ್ವಾ ಸಿನಿಮಾ ಮಾಡ್ತಾ ಇರೋದು.
-ಓಹೋಹೋ, ನೀವು ಕೋಟಿಗಟ್ಲೆ ದುಡ್ಡು ಖರ್ಚು ಮಾಡಿಸಿ ಆ್ಯಕ್ಟಿಂಗ್ ಕಲಿತೀರೋ, ಸಿನಿಮಾಗೆ ದುಡ್ ಏನು ನಿಮ್ಮಪ್ಪ ಹಾಕ್ತಾನಾ?
ಹೌದ್ರೀ, ನಮ್ಮಪ್ಪನೇ ಪ್ರೊಡ್ಯೂಸರ್ರು. ಹುಟ್ಟಿಸಿದ ಅಪ್ಪ ಹುಲ್ಲು ಮೇಯಿಸದಿರುವನೇ...
-ಸರಿ, ಸರಿ, ನೀವು ಆ ಕೇಸು, ನಿರ್ಮಾಪಕರು ತಮ್ಮ ಮಕ್ಕಳನ್ನೇ ಹೀರೋ ಮಾಡೋ ಈ ಟ್ರೆಂಡ್‌ನಲ್ಲಿ ಚಿತ್ರರಂಗ ಅದೇನ್ ಉದ್ದಾರ ಆಗುತ್ತೋ ಏನೋ..
ಯಾಕ್ರೀ ಹಂಗಂತೀರಾ. ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ನಿರ್ಮಾಪಕರ ಮಗನೇ. ನೆನಪಿರ್ಲಿ. ಈಗಾಗ್ಲೇ ನಮ್ ಚಿತ್ರದ ಪ್ರೊಮೋಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಅವರದ್ದು ಪ್ರೇಮಲೋಕ, ನಮ್ದು ಪ್ರೊಮೋಲೋಕ.
-ಪರವಾಗಿಲ್ವೇ, ಅಭಿನಯ ಕಲಿಯದೇ ಬಂದಿದ್ರೂ, ಈ ಥರಾ ಕೌಂಟರ್ ಕೊಡೋದನ್ನ ಮಾತ್ರ ಕಲ್ತಿದೀರಾ ಗುಡ್ ಗುಡ್. ಅದ್ಸರಿ, ಈ ನಿಮ್ಮ ಬ್ಲ್ಯಾಕ್‌ಮನಿಯಿಂದ ಮಾಡಿದ ಸಿನಿಮಾ ನೋಡೋಕೆ ಜನ ಬ್ಲ್ಯಾಕ್‌ನಲ್ಲಿ ಟಿಕೆಟ್ ತಗೊಂಡ್ ಬರ್ತಾರೆ ಅಂತ ಗ್ಯಾರಂಟಿ ಇದೆಯಾ?
ಯಾಕ್ ಬರಲ್ಲ? ನೋಡ್ತಾ ಇರಿ. ಫಸ್ಟ್ ಶೋಗೆ ಫುಲ್ ನಮ್ ಜನಗಳನ್ನೇ ಕರ್‌ಕೊಂಡ್ ಬಂದು ನಮ್ ಸಿನಿಮಾನ ಬ್ಲಾಕ್‌ಬಸ್ಟರ್ ಮಾಡಿಬಿಡ್ತೀವಿ.
- ಓಕೆ ಓಕೆ.. ಅದ್ಸರಿ, ಫಸ್ಟ್ ಫಿಲ್ಮ್‌ನಲ್ಲಿ ಪೊಲೀಸ್ ರೋಲ್ ಮಾಡ್ತಿದೀರಂತೆ. ಫೋಟೋ'ಶೂಟ್' ಬೇರೆ ಮಾಡ್ಸಿದೀರಾ, ಬಟ್ ಅದೇನ್ರೀ, ನಿಮ್ ಮುಖದ್ ಮೇಲೆ ಎಕ್ಸ್‌ಪ್ರೆಷನ್ನೇ ಇಲ್‌ವಲ್ರೀ?
ಹಲೋ ಪ್ರಶ್ನೆ ಕೇಳಿದ್ ಸಾಕು. ಸಿನಿಮಾ ರಿಲೀಸ್ ಆದಾಗ ಹೇಳ್ತೀವಿ, 'ನೋಡ್ಕೊಂಡು' ವಿಮರ್ಶೆ ಬರೀರಿ. ಏನಾದ್ರೂ ಉಲ್ಟಾ ಸೀದಾ ಬರೆದ್ರೆ ಐತಲ್ಲ ನಿಮ್ಗೆ..ಅಷ್ಟೆ.
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಮೊನ್ನೆ ತಾನೇ ಗಾಯಕ ಮನ್ನಾಡೇ ತೀರಿಕೊಂಡಿದ್ದಾರೆ. ಅವರ ಹಾಡುಗಳನ್ನು ಕೇಳುವ ಮೂಲಕ ಅವರಿಗೊಂದು ಪುಟ್ಟ ಶ್ರದ್ಧಾಂಜಲಿ ಅರ್ಪಿಸುವ ಇಚ್ಛೆಯಿದ್ದರೆ ಈ ಲಿಂಕ್‌ಗಳಲ್ಲಿ ಮನ್ನಾ ಡೇ ಅವರ ಕೆಲವು ಜನಪ್ರಿಯ ಹಾಡುಗಳಿವೆ ಕೇಳಿ ನೋಡಿ.
bit.ly/17NbQ1S
bit.ly/1aGZfhv
bit.ly/1bp2qfv
bit.ly/1a21Z85
bit.ly/16c8xE9
ಹರಿ-ಕಥೆ
ಖೇಮು ತನ್ನ ಕುದುರೆ ಗಾಡಿ ಕಟ್ಕೊಂಡು ಎಲ್ಲೋ ಹೊರಟಿದ್ದ. ಅಷ್ಟರಲ್ಲೇ ಸೋಮು ಇವನ ಮನೆಗೆ ಬಂದ. ಖೇಮು ಹೊರಟಿದ್ದು ನೋಡಿ ಸೋಮು ನಾನೂ ಬರ್ತೀನಿ ಅಂದ. ಸರಿ, ಇಬ್ಬರೂ ಗಾಡಿ ಹತ್ತಿ ಕೂತರು. ಕುದುರೆಗೆ ಜೀನು ಹಾಕಿ ಹಗ್ಗ ಹಿಡಿದು ಖೇಮು ಒಂದ್ಸಲ ಜೋರಾಗಿ ಹೇಳಿದ 'ಲೇ ರಾಮಾ ಗಾಡಿ ಎಳೆಯೋ'. ನೋ ಯೂಸ್, ಕುದುರೆ ಒಂಚೂರೂ ಅಲುಗಾಡಲಿಲ್ಲ. ಖೇಮು ಈಗ ಮತ್ತೆ ಹೇಳಿದ 'ಲೇ ಶ್ಯಾಮಾ ಗಾಡಿ ಎಳೆಯೋ'. ನೋ ಯೂಸ್, ಕುದುರೆ ಈ ಬಾರಿಯೂ ಒಂಚೂರೂ ಅಲುಗಾಡಲಿಲ್ಲ. ಅದಾದ ನಂತರ ಖೇಮು ಮತ್ತೆ ಹೇಳಿದ 'ಲೇ ಭೀಮಾ ಗಾಡಿ ಎಳೆಯೋ'. ಈಗ ಕುದುರೆ ಗಾಡಿ ಎಳೆಯೋಕೆ ಶುರುಮಾಡಿತು. ಇದನ್ನೆಲ್ಲ ನೋಡಿ ಆಶ್ಚರ್ಯಗೊಂಡ ಸೋಮು ಖೇಮುವನ್ನು ಕೇಳಿದ 'ಅದೇನೂ, ರಾಮಾ ಎಳೆಯೋ, ಅಂದ್ರೂ ನಿನ್ ಕುದುರೆ ಗಾಡಿ ಎಳೀಲಿಲ್ಲ, ಶ್ಯಾಮಾ ಎಳೆಯೋ ಅಂದ್ರೂ ಎಳಿಲೀಲ್ಲ, ಭೀಮಾ ಎಳೆಯೋ ಅಂದತಕ್ಷಣ ಅದ್ ಹೆಂಗೆ ಎಳೀತು?'. ಖೇಮು ಹೇಳ್ದ 'ಯಾಕಂದ್ರೆ ಈ ಕುದುರೆ ಹೆಸರು ಭೀಮಾ ಅದಕ್ಕೆ'. 'ಎಲಾ ಇವ್ನ, ಕುದುರೆ ಹೆಸರು ಭೀಮಾ ಅಂತಾದ್ರೆ ಮೊದಲು ಅದನ್ನ ರಾಮಾ, ಶ್ಯಾಮಾ ಅಂತೆಲ್ಲ ಯಾಕೆ ಕರೆದೆ?'. ಖೇಮು ಹೇಳಿದ 'ಅದು ವಿಷ್ಯ ಏನಪ್ಪಾ ಅಂದ್ರೆ, ಈ ಕುದುರೆ ಇದೆಯಲ್ಲ ಇದಕ್ಕೆ ವಯಸ್ಸಾಗಿದೆ, ಕಣ್ಣು ಕಾಣ್ಸಲ್ಲ. ಆದ್ರೆ ಸಿಕ್ಕಾಪಟ್ಟೆ ಧಿಮಾಕು. ಗಾಡಿ ಎಳೆಯೋಕೆ ಅದೊಂದನ್ನೇ ಕಟ್ಟಿದೀನಿ ಅಂತ ಗೊತ್ತಾದ್ರೆ ಎಳೆಯೋಕೆ ಟ್ರೈ ಕೂಡ ಮಾಡಲ್ಲ ಬಡ್ಡೀಮಗಂದು. ಅದಕ್ಕೆ ಈ ಟೆಕ್ನಿಕ್ಕು..
ಸ್ಕ್ಯಾಂಡಲ್‌ವುಡ್
ಗಾಂಧಿನಗರ ರೀ ಸ್ಟಾರ್ಟ್ ಆದಂತಿದೆ. ಎಲ್ಲಿ ನೋಡಿದರೂ ರಿಪೀಟ್ ಸುದ್ದಿಗಳೇ. ಒಂದು ಕಡೆ ಹಳೆಯ ಚಿತ್ರಗಳ ಟೈಟಲ್‌ಗಳು ರಿಪೀಟ್ ಆಗುತ್ತಿವೆ. ಹಳೆಯ ಚಿತ್ರಗಳು ಮರುಬಿಡುಗಡೆ ಆಗುತ್ತಿರುವ ಹೊತ್ತಲ್ಲೇ ಕೆಲವೊಂದು ಇತ್ತೀಚಿನ ಚಿತ್ರಗಳೂ ರೀರಿಲೀಸ್‌ನ ಮಾತನಾಡುತ್ತಿವೆ. ಅದರ ಪರಿಣಾಮವಾಗಿ 'ಕೇಸ್ ರೀ ಓಪನ್' ಆಗಿದೆ, ವಾಣಿಜ್ಯ ಮಂಡಳಿಯ ಎಲೆಕ್ಷನ್ ಜೊತೆಗೆ 'ರೀ ಎಲೆಕ್ಷನ್' ಆಗುತ್ತಿದೆ. ಅಯೋಧ್ಯಾಪುರಂನಂಥಹ ಖತರ್ನಾಕ್ ಚಿತ್ರಗಳು ರಿವೈಸಿಂಗ್ ಕಮಿಟಿಗೆ ಹೋಗಿವೆ. ಮಲ್ಟಿಪ್ಲೆಕ್ಸ್‌ಗಳಾಗಲು ಹೊರಟಿರುವ ಗಾಂಧಿನಗರದ ಹಲವು ಮುಖ್ಯ ಚಿತ್ರಮಂದಿರಗಳು ರಿನೋವೇಷನ್‌ನ ಸುಖ ಅನುಭವಿಸುತ್ತಿವೆ. ಇದರ ಜೊತೆಗೆ 2010-11ರ ಸಾಲಿನ ರಾಜ್ಯಪ್ರಶಸ್ತಿಗಳೂ ಕೂಡ ರೀ ಅನೌನ್ಸ್ ಆಗಿವೆ. ಇಷ್ಟು ದಿನ ಗಾಂಧಿನಗರ ಇಂಥಹ 'ರೀ ಮ್ಯಾನಿಯಾ' ನೋಡಿದ್ದು ಕೇವಲ ರಿಮೇಕ್ ಚಿತ್ರಗಳ ಮೂಲಕ ಮತ್ತು 'ಏನ್ ರೀ, ಯಾಕ್ ರೀ' ಎನ್ನುವ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಂಭಾಷಣೆಗಳ ಮೂಲಕ ಮಾತ್ರ. ಹಾಗಾಗಿ ಈ ರೀ ಸ್ಟಾರ್ಟ್‌ಗೆ ಸಾಕ್ಷಿಯಾಗಿರುವ ನೋಡಿದ ಅಪ್ಪಟ ಕನ್ನಡ ಪ್ರೇಕ್ಷಕರು ಇದರ ಜೊತೆಗೆ ಕನ್ನಡ ಚಿತ್ರಗಳ ಸುವರ್ಣ ಯುಗ ಕೂಡ ಮತ್ತೆ ರಿಪೀಟ್ ಆದರೆ ಇನ್ನೂ ಚೆನ್ನ ಎನ್ನುತ್ತಿದ್ದಾರೆ.
ಡಬ್ಕುಡಬಲ್ ತುದಾಂಡಲ್...
ನಿರ್ದೇಶಕ ಭಗವಾನ್ ಅಧ್ಯಕ್ಷತೆಯಲ್ಲಿ ರಾಜ್ಯ ಪ್ರಶಸ್ತಿ ಮರುಘೋಷಣೆಯಾದ ಮೇಲೆ ಕಳೆದ ಸಲ ಪ್ರಶಸ್ತಿ ಬಂದು ಈ ಬಾರಿ ಬರದೇ ಇದ್ದವರ ಮಾತು
ದೇವರು ಕೊಟ್ರೂ ಭಗವಾನ್ ಕೊಡಲಿಲ್ಲ
ಖೇಮು ತನ್ನ ಮನೆ ಬಾಗಿಲನ್ನು ಕಿತ್ತುಕೊಂಡು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದ. ದಾರಿಯಲ್ಲಿ ಸಿಕ್ಕ ಸೋಮು ಕೇಳಿದ,
'ಏನಿದು? ಬಾಗಿಲು ತಗೊಂಡು ಎಲ್ಲಿಗ್ ಹೋಗ್ತಿದೀಯಾ?'
'ಕೀ ಕಳೆದುಹೋಗಿದೆ. ಅದಕ್ಕೆ ಬೀಗ ರಿಪೇರಿಯವನತ್ರ ಹೋಗ್ತಿದೀನಿ'
'ಅಯ್ಯೋ, ಅಲ್ಲಿ ನಿಮ್ ಮನೇಗೆ ಯಾರಾದ್ರೂ ಕಳ್ಳರು ನುಗ್ಗಿದ್ರೆ?'
'ಅದ್ ಹೆಂಗ್ ನುಗ್ತಾರೆ, ಬಾಗಿಲು ನನ್ ಹತ್ರ ಇದೆಯಲ್ಲ'
ಸರ್ಜಾರ್ಜಿ ಜೋಕ್‌ಗಳನ್ನೆಲ್ಲ ಸೇರಿಸಿ ಒಬ್ಬ ಸರ್ದಾರ್ಜಿ ಅದನ್ನು ಪುಸ್ತಕ ರೂಪದಲ್ಲಿ ತಂದರೆ ಅದು ಅವನ ಆಟೋ ಬಯಾಗ್ರಫಿ
ಹೆವೀ ಮಂತ್ಲೀ ಪ್ರೀಮಿಯಮ್ ಕಟ್ಟಿ ತೆಗೆದುಕೊಂಡ ಕಾರು
'ಪ್ರೀಮಿಯಮ್' ಪದ್ಮಿನಿ
'ನನ್ನ ಹೆಂಡ್ತಿಗೆ ನಾನು ಮನೆಯ ಕಸ ಹೊಡೆಯುವ ಕೆಲಸದಲ್ಲಿ ಸಹಾಯ ಮಾಡ್ತೀನಿ'
'ಹೌದಾ, ಹೇಗೆ?'
'ಅವಳು ಸೋಫಾ ಕೆಳಗೆ ಕಸ ಗುಡಿಸಲು ಬಂದಾಗ ನನ್ನ ಕಾಲು ಎತ್ತುವುದರ ಮೂಲಕ'
ಗಂಡಸರ ವಾರ್ಡ್‌ರೋಬ್‌ನಲ್ಲಿರುವ ಬಟ್ಟೆಗಳನ್ನು ಎರಡು ರೀತಿಯಲ್ಲಿ ವಿಂಗಡಿಸಬಹುದು
ಒಂದು 'ಕೊಳೆಯಾದದ್ದು' ಮತ್ತೊಂದು 'ಕೊಳೆಯಾಗಿದೆ, ಆದ್ರೆ ಹಾಕ್ಕೊಬಹುದು' ಎನ್ನುವಂಥದ್ದು.
- ಹರಿ
harikannadaprabha@gmail.com