ಜಾಗಿಂಗ್ನ ಸಂದರ್ಭದಲ್ಲಿ ಪರಿಚಯವಾಗಿ, ಈಗ 'ಕ್ಲೋಸ್' ಫ್ರೆಂಡ್ ಎಂಬಂತಾಗಿರುವ ಜಯಲಕ್ಷ್ಮಿ ಆಂಟಿ ಅದೊಮ್ಮೆ ಕೇಳಿದರು: 'ಮನಸ್ಸಿಗೆ ಬೇಜಾರಾಯ್ತು ಅಂತಿಟ್ಕೋ. ಆಗ ಏನು ಮಾಡ್ತೀಯ? ಶನಿವಾರ-ಭಾನುವಾರ ರಜೆ ಸಿಗುತ್ತಲ್ಲ; ಆಗ ಎಲ್ಲಿಗೆ ಹೋಗ್ತೀಯ? 'ಆಂಟೀ, ಮನಸ್ಸಿಗೆ ಬೇಜಾರಾದ್ರೆ ಸಮಾಧಾನ ಆಗುವಷ್ಟು ಅತ್ತು ಬಿಡ್ತೀನಿ. ಇಲ್ಲಾಂದ್ರೆ ಅಮ್ಮನಿಗೆ ಫೋನ್ ಮಾಡಿ ಎಲ್ಲವನ್ನೂ ಹೇಳ್ಕೋತೀನಿ. ರಜೆ ಸಿಕ್ಕಾಗ ಊರಿಗೆ ಹೋಗೋದು, ಇಲ್ಲಾಂದ್ರೆ ದಿನಕ್ಕೊಂದು ಸಿನಿಮಾ ನೋಡೋದು, ಅಷ್ಟೇ ನನ್ನ ಶೆಡ್ಯೂಲ್' ಅಂದೆ.
'ಓಹೋ, ಹಾಗಾದ್ರೆ ನಿನಗೆ ಮೆಡಿಟೇಷನ್ನ ಬಗ್ಗೆ ತಿಳಿದಿಲ್ಲ ಅನ್ಸುತ್ತೆ. ಮೆಡಿಟೇಷನ್ ಅಂದ್ರೆ ತರಗತಿಗೇ ಹೋಗಬೇಕು ಅಂತೇನಿಲ್ಲ. ಪ್ರಶಾಂತ ವಾತಾವರಣದಲ್ಲಿ ಕೂತು ಧ್ಯಾನದಲ್ಲಿ ಮುಳುಗಬಹುದು. ಅಥವಾ, ಪ್ರಶಾಂತ ವಾತಾವರಣದಲ್ಲಿ ಕೂತು ಆಡಿಯೋ ರೂಪದಲ್ಲಿ ಸಿಗುವ ಸಿ.ಡಿ.ಗಳಿಂದ ಉಪನ್ಯಾಸವನ್ನು ಆಲಿಸಬಹುದು. ಹೆಚ್ಚಿನ ಸಂದರ್ಭದಲ್ಲಿ ನಾವು ಕೇಳುವುದು ನೀತಿ ಕತೆಗಳನ್ನೇ. ಅವುಗಳಿಂದ ಹೊಸದೊಂದು ಒಳನೋಟವಂತೂ ದಕ್ಕುತ್ತದೆ. ನಮ್ಮ ತಿಳಿವಳಿಕೆಯ ಮಟ್ಟವೂ ಹೆಚ್ಚುತ್ತದೆ. ಮೆಡಿಟೇಷನ್ನ ಕಾರಣದಿಂದ ಮಾನಸಿಕವಾಗಿ ನಾವು ಗಟ್ಟಿಯಾಗಲಿಕ್ಕೂ ಸಾಧ್ಯವಿದೆ' ಎಂದೆಲ್ಲಾ ಹೇಳಿದ ಜಯಲಕ್ಷ್ಮಿ ಆಂಟಿ, ಇದನ್ನು ಒಂದ್ಸಲ ಕೇಳು ಎನ್ನುತ್ತಾ ಸಿ.ಡಿ.ಯೊಂದನ್ನು ಕೊಟ್ಟರು. ಮೈಮರೆಯುವಂತೆ ಮಾಡುವ ಯಾವ ಪ್ರಸಂಗಗಳಿರಬಹುದು ಇದರೊಳಗೆ ಎಂಬ ಕುತೂಹಲದಿಂದಲೇ ಎಲ್ಲವನ್ನೂ ಆಲಿಸಿದೆ. ಆನಂತರದಲ್ಲಿ ನನ್ನನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಒಂದು ಪ್ರಸಂಗದ ವಿವರಣೆಯಿದು.
ಒಂದು ಊರಲ್ಲಿ ಒಬ್ಬ ಶ್ರೀಮಂತನಿದ್ದ. ಅವನ ಬಳಿ ಲಕ್ಷಾಂತರ ರುಪಾಯಿ, ಆಳು-ಕಾಳು, ಮಣಗಟ್ಟಲೆ ಬಂಗಾರ, ನಾಲ್ಕು ತಲೆಮಾರು ಕೂತು ತಿಂದರೂ ಕರಗದಷ್ಟು ಆಸ್ತಿ ಇತ್ತು. ಆದರೆ ಮನಸ್ಸಂತೋಷ ಅಂತೀವಲ್ಲ; ಅದೇ ಇರಲಿಲ್ಲ. ಹೆಣ್ಣು-ಹೆಂಡದ ಹಿಂದೆ ಬಿದ್ದರೆ ಸಂತೋಷ ಸಿಗುತ್ತದೆ ಎಂದು ಯಾರೋ ಉಪದೇಶ ಮಾಡಿದರು. ಈ ಶ್ರೀಮಂತ, ಆ ಸಲಹೆಯನ್ನೂ ಪಾಲಿಸಿದ. ಆದರೆ ಅದರಿಂದ ದುಃಖ, ಅಶಾಂತಿ ಮತ್ತಷ್ಟು ಹೆಚ್ಚಿತು. ಸಂತೋಷ, ನೆಮ್ಮದಿಯೇ ಇಲ್ಲದ ಮೇಲೆ ಏನಿದ್ದರೇನು ಪ್ರಯೋಜನ ಎಂದುಕೊಂಡು ಈತ ಅಸಹನೆಯಿಂದ ಚಡಪಡಿಸುತ್ತಿದ್ದಾಗಲೇ, ಎಲ್ಲವನ್ನೂ ತ್ಯಾಗ ಮಾಡಿ ಸನ್ಯಾಸಿಯಾದರೆ ಸಂತೋಷವೆಂಬುದು ಜೊತೆಯಾಗುತ್ತದೆ ಎಂದು ಕೆಲವರು ಸಲಹೆ ಮಾಡಿದರು. ಈ ಶ್ರೀಮಂತ, ತನ್ನಲ್ಲಿದ್ದ ಒಡವೆಗಳನ್ನು ಗಂಟು ಕಟ್ಟಿಕೊಂಡ. ಆಸ್ತಿಪಾಸ್ತಿಯ ಲೆಕ್ಕಪತ್ರಗಳನ್ನು ಬ್ಯಾಗಲ್ಲಿಟ್ಟುಕೊಂಡ. ನಂತರ, ಊರಿನ ಹೊರವಲಯದಲ್ಲಿದ್ದ ಒಬ್ಬ ಸನ್ಯಾಸಿಯ ಮುಂದೆ ಅವುಗಳನ್ನಿಟ್ಟು -'ಸ್ವಾಮಿ, ಇದೆಲ್ಲಾ ಇನ್ನು ಮುಂದೆ ನಿಮ್ಮದು. ನನಗೆ ಇದೇನೂ ಬೇಡ. ನನಗೆ ಬೇಕಿರುವುದು ಸಂತೋಷ-ನೆಮ್ಮದಿ ಮಾತ್ರ' ಎಂದ.
ಆ ಸನ್ಯಾಸಿ ಮಾತೇ ಆಡಲಿಲ್ಲ. ಬದಲಿಗೆ ಶ್ರೀಮಂತ ತಂದಿದ್ದ ಒಡವೆಗಳ ಗಂಟನ್ನೊಮ್ಮೆ ಬಿಚ್ಚಿ ನೋಡಿದ. ಹೊರಗಿನ ಬಿಸಿಲು ಬಿದ್ದಾಕ್ಷಣ ಅವು ಫಳಫಳ ಹೊಳೆದವು. ಸರಸರನೆ ಅವುಗಳನ್ನು ಮತ್ತೆ ಗಂಟು ಕಟ್ಟಿದ ಸನ್ಯಾಸಿ, ಮರುಕ್ಷಣವೇ ಅದನ್ನು ಎತ್ತಿಕೊಂಡು ವೇಗವಾಗಿ ಓಡತೊಡಗಿದ.
ಸನ್ಯಾಸಿಯ ಇಂಥ ವರ್ತನೆಯಿಂದ ಶ್ರೀಮಂತನಿಗೆ ಶಾಕ್ ಆಯಿತು. ಕಷ್ಟಪಟ್ಟು ಸಂಪಾದಿಸಿದ ಒಡವೆಗಳು ಕಳ್ಳ ಸನ್ಯಾಸಿಯ ಪಾಲಾದವು ಅನ್ನಿಸಿತು. ಕೆಲವೇ ನಿಮಿಷದ ಹಿಂದೆ ಪ್ರಾರ್ಥನೆಯ ಭಾವವಿದ್ದ ಆತನ ಮನದಲ್ಲಿ ಈಗ ರೋಷ ತುಂಬಿಕೊಂಡಿತು. ಆತ ತಕ್ಷಣವೇ ಸನ್ಯಾಸಿಯನ್ನು ಹಿಡಿಯುವ ಉದ್ದೇಶದಿಂದ ಅವನ ಹಿಂದೆ ತಾನೂ ಓಡತೊಡಗಿದ. ನೋಡಲು ತೆಳ್ಳಗಿದ್ದ, ದೈಹಿಕವಾಗಿ ಸದೃಢನಾಗಿದ್ದಆ ಸನ್ಯಾಸಿ, ಹಲವು ಸಂದಿಗೊಂದಿಗಳನ್ನು ನುಗ್ಗಿ ಓಡತೊಡಗಿದ. ದಢೂತಿಯಂತಿದ್ದ ಈ ಶ್ರೀಮಂತನಿಗೆ ವೇಗವಾಗಿ ಓಡಲು ಸಾಧ್ಯವಾಗಲೇ ಇಲ್ಲ. ಆದರೂ ಆಭರಣಗಳ ಮೇಲಿನ ಮೋಹದಿಂದ, ಈತ ಏದುಸಿರು ಬಿಡುತ್ತಲೇ ಹಿಂಬಾಲಿಸಿದ. ನಾಲ್ಕು ಹೆಜ್ಜೆ ಓಡುವುದರೊಳಗೇ ಸುಸ್ತಾದ ಕಾರಣದಿಂದ-'ಕಳ್ಳ, ಕಳ್ಳಾ, ಹಿಡ್ಕೊಳ್ಳಿ ಅವನನ್ನ' ಎಂದು ಕೂಗುವ ಶಕ್ತಿಯೂ ಶ್ರೀಮಂತನಿಗೆ ಇರಲಿಲ್ಲ.
ಹಲವಾರು ಸಂದಿಗೊಂದಿಗಳನ್ನು ಸುತ್ತಿದ ಸನ್ಯಾಸಿ ಕಡೆಗೊಮ್ಮೆ, ಈ ಹಿಂದೆ ಧ್ಯಾನಕ್ಕೆ ಕುಳಿತಿದ್ದ ಜಾಗಕ್ಕೇ ಮರಳಿ ಬಂದ. ಕೆಲ ಸಮಯದ ನಂತರ, ಏದುಸಿರುಬಿಡುತ್ತ, ಶ್ರೀಮಂತನೂ ಅಲ್ಲಿಗೆ ಬಂದ. ಅವನನ್ನು ಕಂಡು ಮುಗುಳ್ನಕ್ಕ ಸನ್ಯಾಸಿ- 'ಹೆದರಿಕೊಂಡು ಬಿಟ್ಯಾ? ತಗೋ. ನಿನ್ನ ಒಡವೆಗಳನ್ನೆಲ್ಲ ನೀನೇ ಇಟ್ಕೋ' ಎಂದ. ಸನ್ಯಾಸಿಯಿಂದ ಗಂಟು ಕಸಿದುಕೊಂಡ ಶ್ರೀಮಂತ, ಒಡವೆಗಳಲ್ಲಿ ಯಾವುದೂ ಮಿಸ್ ಆಗಿಲ್ಲ ತಾನೆ ಎಂದು ಪರೀಕ್ಷಿಸಿದ. ಹಾಗೇನೂ ಆಗಿಲ್ಲ ಅನ್ನಿಸಿದಾಕ್ಷಣವೇ ಅವನಿಗೆ ವಿಪರೀತ ಸಂತೋಷವಾಯಿತು. ಆಗ ಸನ್ಯಾಸಿ ಹೇಳಿದ: 'ನೋಡಿದ್ಯಾ, ಈ ಮೊದಲು ನಿನ್ನ ಬಳಿ ಈ ಒಡವೆಗಳಿದ್ದವು. ಆದರೆ ಸಂತೋಷವಿರಲಿಲ್ಲ. ಆದರೆ ಈಗ ಅದೇ ಹಳೆಯ ಒಡವೆಗಳು ನಿನ್ನೊಂದಿಗಿವೆ. ಒಂದೇ ಒಂದು ಹೊಸ ಬೆಳವಣಿಗೆ ಅಂದರೆ, ಈಗ ನಿನ್ನೊಂದಿಗೆ ಸಂತೋಷವೂ ಇದೆ. ಅದರರ್ಥ ಇಷ್ಟೆ: ಸಂತೋಷ ಎಂಬುದು, ನೆಮ್ಮದಿ ಎನ್ನುವುದು ಬೇರೆಲ್ಲೋ ಇಲ್ಲ. ಅದು ಖರೀದಿಗೆ ಸಿಗುವಂಥದ್ದಲ್ಲ. ಸಂತೋಷ-ನೆಮ್ಮದಿ ಎಂಬುದು, ನಮ್ಮ ಮನಸ್ಸಿನೊಳಗೇ ಇದೆ, ಐಶ್ವರ್ಯವನ್ನು ಹಂಚುವುದರಿಂದ, ನಮಗೆ ಗೊತ್ತಿರುವ ವಿದ್ಯೆಯನ್ನು ಹತ್ತು ಮಂದಿಗೆ ಕಲಿಸುವುದರಿಂದ, ಗೊತ್ತಿಲ್ಲದ ಸಂಗತಿಗಳನ್ನು ಕಲಿಯುವುದರಿಂದ ನೆಮ್ಮದಿ, ಸಂತೋಷವನ್ನು ಪಡೆಯಲು ಸಾಧ್ಯ...'
ಸನ್ಯಾಸಿಯ ಮಾತು ಕೇಳಿದ ಶ್ರೀಮಂತನಿಗೆ ಜ್ಞಾನೋದಯವಾಯಿತು. ತುಂಬ ಉಪಕಾರವಾಯ್ತು ಸ್ವಾಮೀ. ನೀವು ನನ್ನ ಕಣ್ತೆರೆಸಿದಿರಿ ಎಂದು ಹೇಳಿ ಆತ ಮನೆಗೆ ಬಂದ. ನಂತರ, ತನ್ನ ಐಶ್ವರ್ಯವನ್ನು ಬಡವರು ಹಾಗೂ ನಿರ್ಗತಿಕರಿಗೆ ದಾನ ಮಾಡುತ್ತಾ ದಿನಗಳನ್ನು ಕಳೆದ. ದಾನ ಮಾಡುತ್ತಾ ಹೋದಂತೆಲ್ಲಾ ಅವನ ಸಂತೋಷವೂ ಹೆಚ್ಚುತ್ತಲೇ ಹೋಯಿತು.
---
ಹೀಗೆ ಮುಗಿಯುತ್ತದೆ ಆ ಉಪನ್ಯಾಸ. ಅದನ್ನು ಕೇಳಿದ ನಂತರ ಅನಿಸಿದ್ದು: ಸಂತೋಷ ನೆಮ್ಮದಿ ಎಂಬುದು ಬೇರೆಲ್ಲೋ ಇಲ್ಲ. ಅದು ನಮ್ಮ ಮನಸ್ಸಿನೊಳಗೇ ಇದೆ. ಈ 'ರಹಸ್ಯ' ಗೊತ್ತಿಲ್ಲದ ನಾವು, ಅನೇಕ ಸಂದರ್ಭಗಳಲ್ಲಿ ಸಂತೋಷವನ್ನು ಬೇರೆಲ್ಲೋ ಹುಡುಕುತ್ತೇವೆ! ನಮ್ಮ ಸಂತೋಷಕ್ಕಾಗಿ ಬೇರೆಯವರನ್ನು ಅವಲಂಬಿಸುತ್ತೇವೆ!
ಇದು, ನನ್ನ ಅನಿಸಿಕೆ. ನೀವು ಏನಂತೀರಿ?
- ನಾನು ಪ್ರಣತಿ