ಅಂಕಣಗಳು

ವೈಷ್ಣವ ದೀಕ್ಷೆ ಎಂದರೆ ಬ್ರಾಹ್ಮಣರಾಗುವುದೇ?

Published On :

ನಾಡಿನ ಹಿರಿಯ ಯತಿಗಳಾಗಿರುವ ಪೂಜ್ಯ ಪೇಜಾವರ ಶ್ರೀಗಳು, ಮಾರುಕಟ್ಟೆಯ ಸರಕು ಮಾರಾಟ ಮಾಡುವಂತೆ, ಮಾಧ್ವ ದೀಕ್ಷೆ ಪಡೆದು ನಿತ್ಯ ಸ್ವರ್ಗಿಗಳಾಗಿರೆಂದು, ಕುರುಬ ಸಮಾಜದವರಿಗೆ ಉದಾರ ಕರೆ ಕೊಟ್ಟಿದ್ದಾರೆ. ಪ್ರಸಕ್ತದಲ್ಲಿ ಯಾವ ಮತಾಂತರ, ಧರ್ಮಾಂತರಗಳ ವ್ಯಾಪಾರವೂ ಜರುಗುತ್ತಿಲ್ಲವೆಂಬುದು ಬಹುಶಃ ಶ್ರೀಗಳಿಗೆ ತಿಳಿಯದೆಂದು ಕಾಣುತ್ತದೆ. ಬ್ರಾಹ್ಮಣರಲ್ಲೇ ಪರಸ್ಪರ ಉಪ ಮತಾಂತರಗಳು 14ನೇ ಶತಮಾನದಲ್ಲೇ ಆಗಿ ಹೋಗಿದೆ. ವಾದ, ತರ್ಕಗಳಲ್ಲಿ ಗೆದ್ದು ಮತಾಂತರವಾಗುತ್ತಿದ್ದ ಮಾತು ಆ ಕಾಲಕ್ಕೇ ಪರಿಸಮಾಪ್ತಿಗೊಂಡಿದೆ. ಈಗೇನಿದ್ದರೂ ಪ್ರೇಮ ಪ್ರಕರಣಗಳಲ್ಲಿ ಕ್ರೈಸ್ತ ಧರ್ಮಾಂತರವಾಗುತ್ತಿರುವ ಅಪವಾದಗಳು ಅಲ್ಲಿ-ಇಲ್ಲಿ ಕೇಳಿ ಬರುತ್ತಿದೆ ಅಷ್ಟೆ.
ಅಷ್ಟಕ್ಕೂ ವೈಷ್ಣವ ದೀಕ್ಷೆ ಅಂದರೆ ಏನು? ಬ್ರಾಹ್ಮಣೇತರರು, ಬ್ರಾಹ್ಮಣ ಯತಿಗಳಿಂದ ಸದರಿ ಮತಗಳ ದೀಕ್ಷೆ ಪಡೆದ ನಂತರ ಬ್ರಾಹ್ಮಣರಾಗುವುದೆಂದು ಅರ್ಥವೇ? ಅಲ್ಲಿಗೆ, ಮತಾಂತರಿಯಾದವನು ಜನಿವಾರ, ಲಾಂಛನಗಳನ್ನು ಧರಿಸಿ, ಸಂಧ್ಯಾವಂದನೆ ಪೂಜೆಗಳಲ್ಲಿ ತೊಡಗಬೇಕೆ? ಮಾಂಸಾಹಾರಿಗಳಾಗಿದ್ದವರು ಸಸ್ಯಾಹಾರಿಗಳಾಗಿ ಪರಿವರ್ತನೆ ಹೊಂದಬೇಕೆ? ಅಕಸ್ಮಾತ್ ಕುಟುಂಬದ ಯಜಮಾನ ಮಾತ್ರ ದೀಕ್ಷೆ ಪಡೆದರೆ ಅವನ ಹೆಂಡತಿ ಮಕ್ಕಳು ದೀಕ್ಷೆ ಪಡೆಯದಿದ್ದರೆ ಅವರುಗಳ ಪಾಡೇನು? ವ್ಯಾಸರಾಜರು ಕನಕ-ಪುರಂದರರಿಗೆ ಮಾಧ್ವ ಪಂಥ ಅನುಯಾಯಿ ಉಪದೇಶ ನೀಡಿ, ಅವರನ್ನು ಹರಿದಾಸರನ್ನಾಗಿ ಮಾಡಿ, ಶಿಷ್ಯತ್ವ ಸ್ವೀಕರಿಸಿದ್ದು ಬಹುಶಃ ಮತಾಂತರವಲ್ಲ. ಆದರೆ ವಾದಿರಾಜರು ಕೊಂಕಣ ಪ್ರದೇಶದ ಬ್ರಾಹ್ಮಣೇತರರೂ ಸೇರಿದಂತೆ ಅನೇಕರನ್ನು ಮಾಧ್ವ ಸಂಪ್ರದಾಯಕ್ಕೆ ಮತಾಂತರಿಸಿದ ಫಲವಾಗಿ, ಇಂದಿಗೂ ಅವರುಗಳು ಮಾಧ್ವ ಬ್ರಾಹ್ಮಣರ ರೀತ್ಯ ಆಚಾರ-ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಅವರಲ್ಲಿ ಕೆಲವರು ಆಹಾರದ ವಿಷಯವಾಗಿ ಅವರವರ ಹಿಂದಿನ ಪದ್ಧತಿಯನ್ನೇ ಉಳಿಸಿಕೊಂಡಿದ್ದಾರೆ.
ಇನ್ನೊಂದು ಪ್ರಮುಖ ವಿಚಾರವೆಂದರೆ, ಮಾಧ್ವ ಪರಂಪರೆಯ ಉಳಿದ ಪ್ರಮುಖ ಮಠಗಳ ಪೀಠಾಧಿಪತಿಗಳ ಹಾಗೂ ಶಿಷ್ಯ ವರ್ಗದವರ ಅಭಿಪ್ರಾಯದ ಪ್ರಕಾರ- ಪೇಜಾವರ ಶ್ರೀಗಳು ಏನಿದ್ದರೂ ಉಡುಪಿಯ ಅಷ್ಟ ಮಾಧ್ವ ಮಠಗಳ ಪೈಕಿ ಒಂದು ಮಠದ ಮುಖವಾಣಿ ಮಾತ್ರ. ಉಡುಪಿಯ ಉಳಿದ ಏಳು ಮಠಗಳು ಹಾಗೂ ಪ್ರಮುಖ ಮಾಧ್ವ ಮಠಗಳಾದ ಸೋಸಲೆ, ಮಂತ್ರಾಲಯ, ಉತ್ತರಾದಿ ಮಠಗಳ ಪರವಾಗಿ ಮಾತನಾಡಲು ಅವರಿಗೆ ಏನೇನೂ ಹಕ್ಕಿಲ್ಲ. ಇದಲ್ಲದೆ, ಸ್ಮಾರ್ತ-ಶ್ರೀ ವೈಷ್ಣವ ಬ್ರಾಹ್ಮಣ ಮಠಗಳ ಪರವಾಗಿಯಂತೂ ಅವರು ಮಾತನಾಡುವ ಹಾಗೆಯೇ ಇಲ್ಲ. ಇಷ್ಟೆಲ್ಲಾ ಗೊಂದಲಗಳು ಇದ್ದಾಗ್ಯೂ, ಶೈವಾಚರಣೆ ಮಾಡಿಕೊಂಡು ಸಮಸ್ತ ದೇವರುಗಳನ್ನು ಗೌರವಿಸಿಕೊಂಡು ಅವರ ಪಾಡಿಗೆ ಸಮಾಜದಲ್ಲಿ ವಿನೀತರಾಗಿ ಬಾಳುತ್ತಿರುವ ಕುರುಬ ಸಮಾಜದವರಿಗೆ ಯಾವ ನೆಲೆಯಲ್ಲಿ ಶ್ರೀಗಳು ಆಮಿಷ ಒಡ್ಡುತ್ತಿದ್ದಾರೋ, ಅದರಿಂದಾಗಿ ಅವರಿಗೇನು ಸಾರ್ಥಕ್ಯ ಲಭಿಸುತ್ತದೋ ನಮಗಂತೂ ಅರ್ಥವಾಗುತ್ತಿಲ್ಲ. ನಮಗೆ ತಿಳಿದ ಹಾಗೆ ಕುರುಬ ಸಮಾಜದಲ್ಲಿ ಕನಕರೊಬ್ಬರು ಮಾತ್ರ ದೀಕ್ಷೆ ಪಡೆದ ಪ್ರಕರಣ ಕಣ್ಮುಂದೆ ಇದೆ. ಅದರ ಹಿಂದೆಯೂ ಈ ಪ್ರಕರಣ ನಡೆದಿಲ್ಲ, ಮುಂದೆಯೂ ಮುಂದುವರೆದಿಲ್ಲ. ಕನಕರಿಗೆ ಹರಿದಾಸ ದೀಕ್ಷೆಯನ್ನು ನೀಡಿದ ನಮ್ಮ ಜಿಲ್ಲೆಯ ಪೂಜ್ಯ ಸೋಸಲೆ ವ್ಯಾಸರಾಜರು, ಈಗಲೂ ಸೋಸಲೆಯ ಪಕ್ಕದಲ್ಲಿಯೇ ಇರುವ ವ್ಯಾಸರಾಜಪುರದಲ್ಲಿ ಶ್ರೀಮಠದ ಆವರಣದಲ್ಲಿರುವ ಕನಕರ ಆಳೆತ್ತರದ ಮೂರ್ತಿಗೆ ಪ್ರತಿದಿನ ಪೂಜಾದಿ ಕೈಂಕರ್ಯಗಳು ನಡೆಯುವಂತೆ ಧಾರ್ಮಿಕ ಏರ್ಪಾಡು ಮಾಡಿರುತ್ತಾರೆ. ಉಡುಪಿಯ ಶ್ರೀ ಕೃಷ್ಣ, ಪೂಜ್ಯ ಮಧ್ವಾಚಾರ್ಯರ ಚೇತನ, ಸನಾತನ ಧರ್ಮದ ಎಲ್ಲಾ ವರ್ಗಗಳಲ್ಲೂ ಶಾಂತಿ ನೆಲೆಸುವಂತೆ ಅನುಗ್ರಹಿಸಲಿ.

- ಕೆ. ರಘುರಾಂ
ಮೈಸೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.