ಅಂಕಣಗಳು

ಕನಕಾನುಯಾಯಿಗಳಿಗೆ ವೈಷ್ಣವ ದೀಕ್ಷೆ ತಪ್ಪೇನು?

Published On :

 ಹರಿದಾಸ ಪರಂಪರೆಯಲ್ಲಿ ಕನಕದಾಸರು ಕುಲದಲ್ಲಿ ಬ್ರಾಹ್ಮಣೇತರರಾಗಿದ್ದರೂ ದಾಸಶ್ರೇಷ್ಠರೆಂಬ ಮನ್ನಣೆಗೆ ಪಾತ್ರರಾಗಿದ್ದಾರೆ. ಇಂಥ ಕನಕದಾಸರ ಅನುಯಾಯಿಗಳು ಎಂದು ಹೇಳಿಕೊಳ್ಳುವ ಹಾಲುಮತ ಕುರುಬರಿಗೆ ವೈಷ್ಣವ ದೀಕ್ಷೆ ನೀಡುವುದಾಗಿ ಹೇಳಿರುವ ಪೇಜಾವರ ಶ್ರೀ ವಿಶ್ವೇಶ್ವತೀರ್ಥ ಸ್ವಾಮಿಗಳು ಪ್ರಸ್ತುತ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಶ್ರೀಗಳ ಹೇಳಿಕೆ ಕೆಲವರಿಗೆ ಪುರೋಹಿತಶಾಹಿ ಧೋರಣೆಯಂತೆ ಕಂಡಿದೆ. ಹೀಗಾಗಿ, ಕೆಲವರು ಶ್ರೀಗಳ ಹೇಳಿಕೆ ಬಗ್ಗೆ ಅಪಸ್ವರ ಎತ್ತಿದ್ದಾರೆ.
ಪೇಜಾವರ ಶ್ರೀಗಳು ಟೀಕೆಗೆ ಗುರಿಯಾಗಿರುವುದು ಇದೇ ಮೊದಲೇನಲ್ಲ. ಫಲಭರಿತ ಮರಕ್ಕೆ ಜನರು ಕಲ್ಲು ಹೊಡೆಯುವುದು ಸಹಜ. ಹಾಗಾಗಿಯೇ ಮಾತೆ ಮಹಾದೇವಿ, ನಿಡುಮಾಮಿಡಿ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿಯಂಥ ವಿವಾದಾತ್ಮಕ ಮತ್ತು ಪ್ರಚಾರಪ್ರಿಯರಿಗೂ ಪೇಜಾವರ ಶ್ರೀಗಳು ಸುಲಭದ ತುತ್ತಾಗಿದ್ದಾರೆ. ಸಮಾಜದಲ್ಲಿ ತಮ್ಮ ಜಾತಿಮಠಗಳನ್ನೇ ಸಾಮ್ರಾಜ್ಯ ಮಾಡಿಕೊಂಡು, ಅನಭಿಷಕ್ತ ದೊರೆಯಾಗಿ ಮೆರೆಯುತ್ತಿರುವ ಮಠಾಧೀಶರಿಗೇನೂ ಕೊರತೆ ಇಲ್ಲ. ಅಂಥವರ ಬಗ್ಗೆ ಪ್ರಗತಿಪರರೆನಿಸಿಕೊಂಡವರು ಚಕಾರ ಎತ್ತುವುದಿಲ್ಲ. ಪೇಜಾವರ ಶ್ರೀಗಳು ಸಹ ತಮ್ಮ ಮಠದ ವ್ಯಾಪ್ತಿಯಲ್ಲಿ ಮಡಿ-ಮೈಲಿಗೆ ಕಾಪಾಡಿಕೊಂಡು, ತಮ್ಮ ಪಾಡಿಗೆ ತಾವಿದ್ದಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ, ಪೇಜಾವರ ಶ್ರೀಗಳು ಹಿಂದೂ ಸಮಾಜದ ಏಕತೆಗಾಗಿ ಶ್ರಮಿಸುವ ರಾಜ್ಯದ ಕೆಲವೇ ನೈಜ ಪ್ರಗತಿಪರ ಧೋರಣೆಯುಳ್ಳ ಮಠಾಧೀಶರಲ್ಲಿ ಒಬ್ಬರಾಗಿದ್ದಾರೆ. ಸಮಾಜದಲ್ಲಿನ ಅಸ್ಪೃಶ್ಯತೆ, ಜಾತೀಯತೆ ನಿವಾರಣೆಗೆ ತಮ್ಮ ಇತಿ-ಮಿತಿಗಳ ನಡುವೆಯೂ ಶ್ರೀಗಳು ಪ್ರಯತ್ನಿಸುತ್ತಿರುವುದು ಕೆಲವರ ಕಣ್ಣನ್ನು ಕೆಂಪಾಗಿಸಿದೆ. ಇದೇ ಕಾರಣಕ್ಕೆ ಶ್ರೀಗಳು ಏನೇ ಹೇಳಿದರೂ, ಹೇಳದಿದ್ದರೂ ಅದು ವಿವಾದದ ಸ್ವರೂಪ ಪಡೆಯುತ್ತದೆ. ಒಂದು ವೇಳೆ ಅವರೇನಾದರೂ ಕನಕಾನುಯಾಯಿಗಳಿಗೆ ವೈಷ್ಣವ ದೀಕ್ಷೆ ನೀಡುವುದಿಲ್ಲ ಎಂದಿದ್ದರೆ ಇನ್ನೂ ದೊಡ್ಡಮಟ್ಟದ ವಿವಾದವಾಗುತ್ತಿತ್ತೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.
ಹಾಲುಮತ ಸಮಾಜದವರು ಹಿಂದೂ ಧರ್ಮದ ಸಮಸ್ತ ಮುಕ್ಕೋಟಿ ದೇವರುಗಳನ್ನೂ ಪೂಜಿಸುವವರಾಗಿದ್ದಾರೆ. ಜಾತಿಗೊಂದು ಮಠ ಸ್ಥಾಪನೆಯಾಗುವ ಮುನ್ನ ಕುರುಬರು ಎಲ್ಲಾ ಮಠಮಾನ್ಯಗಳಿಗೂ ನಡೆದುಕೊಳ್ಳುವವರಾಗಿದ್ದರು. ಇಂದಿಗೂ ಸಮಾಜದ ಒಂದು ವರ್ಗದಲ್ಲಿ ಆ ಮಠ, ಈ ಮಠ ಎಂಬ ಭೇದಭಾವ ಇಲ್ಲ. ಶೈವ, ವೈಷ್ಣವ ಎಂಬ ಭಿನ್ನತೆಯ ಅರಿವೂ ಇಲ್ಲ. ಕಂಡ-ಕಂಡ ದೇವರಿಗೆ ಕೈ ಮುಗಿಯುವ ಜನರೇ ಹೆಚ್ಚು. ಹಾಗಾಗಿಯೇ ಹಾಲುಮತದವರು ಹಿಂದೂ ಧರ್ಮದ ಮುಖ್ಯವಾಹಿನಿಗೆ ಅತಿ ಸಮೀಪವಾಗಿದ್ದಾರೆ. ಕುರುಬರು ಶೈವ ಪರಂಪರೆಯವರೇ ಆಗಿರಬಹುದು. ಆದರೆ, ಕನಕದಾಸರು ವೈಷ್ಣವ ಪರಂಪರೆಯನ್ನು ಅನುಸರಿಸುವವರಾಗಿದ್ದರು ಎಂಬುದು ನಿರ್ವಿವಾದ. ಕನಕದಾಸರು ಕುಲದಲ್ಲಿ ಕುರುಬರಾಗಿದ್ದರೂ, ಆಚರಣೆಯಲ್ಲಿ ಯಾವ ವೈಷ್ಣವ ಬ್ರಾಹ್ಮಣರಿಗೂ ಕಡಿಮೆ ಇರಲಿಲ್ಲ. ಕರ್ನಾಟಕ ಸಂಗೀತದ ಪಿತಾಮಹರಾದ ಪುರಂದರದಾಸರ ಸಮಕಾಲೀನರಾಗಿದ್ದ ಕನಕದಾಸರು ವ್ಯಾಸರಾಯರ ಬಳಿ ವೈಷ್ಣವ ದೀಕ್ಷೆ ಪಡೆದಿದ್ದರು. ಕನಕದಾಸರ ಕುಲದೇವರು ಬೀರಪ್ಪನಾದರೂ, ಅವರ ಇಷ್ಟದೈವ ಕಾಗಿನೆಲೆ ಆದಿಕೇಶವ ಎಂಬುದು ಅವರ ಕೀರ್ತನೆಗಳಿಂದ ತಿಳಿದುಬರುತ್ತದೆ. ಅವರ ಭಕ್ತಿಗೆ ಮೆಚ್ಚಿ ದಿಕ್ಕು ಬದಲಿಸಿ ನಿಂತಿರುವ ಉಡುಪಿ ಶ್ರೀಕೃಷ್ಣ, ಕನಕದಾಸರ ಶ್ರೇಷ್ಠತೆಗೆ ಇಂದಿಗೂ ಸಾಕ್ಷಿಯಾಗಿದ್ದಾನೆ.
ಇಂಥ ಭಕ್ತಶ್ರೇಷ್ಠರ ಅನುಯಾಯಿಗಳೆಂದು ಹೇಳಿಕೊಳ್ಳುವವರಿಗೆ ವೈಷ್ಣವ ದೀಕ್ಷೆ ನೀಡಲು ಪೇಜಾವರ ಶ್ರೀಗಳು ಮುಂದೆ ಬಂದಿರುವುದಕ್ಕೆ ಯಾಕಿಷ್ಟು ವಿರೋಧ? ಪೇಜಾವರ ಶ್ರೀಗಳೇನೂ ಒತ್ತಾಯಪೂರ್ವಕವಾಗಿ ಮತಾಂತರಕ್ಕೆ ಮುಂದಾಗಿಲ್ಲ. ಕನಕನ ಅನುಯಾಯಿಗಳು ಎಂದು ಹೇಳಿಕೊಳ್ಳುವ ಆಸಕ್ತರಿಗೆ ವೈಷ್ಣವ ದೀಕ್ಷೆ ನೀಡಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಅವರು ಆಹ್ವಾನ ನೀಡಿರುವುದು ಕನಕದಾಸರ ಅನುಯಾಯಿಗಳಿಗೇ ಹೊರತು ಹಾಲುಮತ ಕುರುಬರಿಗಲ್ಲ ಎಂಬುದು ಗಮನಿಸಬೇಕಾದ ಅಂಶ. ವೀರಶೈವ ಲಿಂಗಾಯತ ಮಠಾಧೀಶರೂ ಸಹ ಆಸಕ್ತರಿಗೆ ಇಷ್ಟಲಿಂಗ ದೀಕ್ಷೆ ನೀಡುವುದು ಸರ್ವೇ ಸಾಮಾನ್ಯ. ಅದರಂತೆ, ಆಸಕ್ತರು ಸ್ವಇಚ್ಛಾನುಸಾರ ವೈಷ್ಣವ ದೀಕ್ಷೆ ಪಡೆದರೆ ತಪ್ಪೇನು? ತಮಗೊಪ್ಪುವ ಮತ, ನಂಬಿಕೆಗಳನ್ನು ಅನುಸರಿಸಲು ಸಂವಿಧಾನದಲ್ಲೇ ಅವಕಾಶವಿರುವಾಗ ಅನಗತ್ಯ ವಿವಾದವೇಕೆ?
ಕನಕ ಗುರುಪೀಠ ಎಂದು ಕರೆದುಕೊಳ್ಳುವುದಾದರೆ ಕನಕದಾಸರ ಪರಂಪರೆಯನ್ನೂ ಅನೂಚಾನವಾಗಿ ಪಾಲಿಸಬೇಕಾದ್ದು ಕರ್ತವ್ಯ. ಕನಕದಾಸರ ಹೆಸರು ಬೇಕು, ಅವರ ವಿಚಾರ ಬೇಡ ಎಂದರೆ ಹೇಗೆ? ಹಾಗೊಂದು ವೇಳೆ ಕನಕದಾಸರ ವೈಷ್ಣವ ಪರಂಪರೆಯ ಭಾಗವಾಗುವುದು ಇಷ್ಟವಿಲ್ಲವಾದರೆ, ಅವರ ಹೆಸರನ್ನು ಕೈಬಿಡುವುದು ಉತ್ತಮ. ಅದನ್ನು ಬಿಟ್ಟು ರಾಜಕೀಯ ಹಿತಾಸಕ್ತಿಗಾಗಿ ಹಿಂದೂ ಧರ್ಮದ ಮುಖ್ಯವಾಹಿನಿಯಿಂದ ಹಾಲುಮತವನ್ನು ಬೇರ್ಪಡಿಸಲು ಯತ್ನಿಸುತ್ತಿರುವ ಹಿಂದುಳಿದ ವರ್ಗಗಳ ನಾಯಕರ ಷಡ್ಯಂತ್ರಕ್ಕೆ ಕಾಗಿನೆಲೆ ಪೀಠ ದಾಳವಾಗುವುದು ಬೇಡ.  

- ವಿಶ್ವಾಸ್ ಲಗಿಬಿಗಿ, ದಾವಣಗೆರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.