ಲೋಕಸಭಾ ಚುನಾವಣೆಯ ನಿರೀಕ್ಷೆಯಲ್ಲಿರುವ ರಾಜ್ಯ ರಾಜಕಾರಣ ನಾನಾ ಬಗೆಯ ಅನುಮಾನದ ಗಂಧವನ್ನು ಹೊರ ಸೂಸುವ 'ಧೂಪ ಘಠ'ದಂತಾಗಿದೆ..!
ಅಧಿಕಾರದಲ್ಲಿರುವ ಕಾಂಗ್ರೆಸ್ಸನ್ನು ಈ ಬಾರಿಯಾದರೂ ಹಣಿಯಬೇಕೆಂಬ ಹವಣಿಕೆಯಿಂದ ಹೊಸ ಕೂಡಾವಳಿಯ ಹುಡುಕಾಟ, ಯಾರ ಜತೆ ಹೊಂದಾಣಿಕೆ ಮಾಡಿಕೊಂಡರೆ ಲಾಭವಾಗಬಹುದೆಂಬ ಲೆಕ್ಕಾಚಾರ, ಒಂಟಿ ಹೋರಾಟದ ಕಸರತ್ತು, ವಿಲೀನದ ಮಾತುಕತೆಯ ಹೊಗೆ ಪ್ರತಿಪಕ್ಷ ಪಾಳಯದಿಂದ ಹೊರ ಸೂಸುತ್ತಿದೆ. ಅದೇ ರೀತಿ ಲೋಕಸಭಾ ಚುನಾವಣೆಯ ಫಲಿತಾಂಶ ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಗಾಲೋಟಕ್ಕೆ ಕಡಿವಾಣ ಹಾಕುವ ಅತೃಪ್ತ ಕಾಂಗ್ರೆಸಿಗರ ಪ್ರಯತ್ನದ ಘಾಟು ಈ ಧೂಪ ಕುಂಡದಿಂದ ಈಗ ಮೇಲೇಳುತ್ತಿದೆ.
ಈ ರಾಜಕೀಯವೇ ಹಾಗೆ. ಇದೊಂದು ರೀತಿಯಲ್ಲಿ ಹಲವಾರು ಕಟ್ಟಿಗೆಗಳನ್ನು ತುಂಬಿಸಿಕೊಂಡು ಬೆಂಕಿ ಉಗುಳುವ ಒಲೆಯಂತೆ. ಬೇರೆ ಬೇರೆಯಾಗಿರುವ ಕಟ್ಟಿಗೆ ತುಂಡಿನಿಂದ ಸೀಳು ಒಡೆಯುವ ಕಿಚ್ಚಿನ ಕೆನ್ನಾಲಿಗೆಗೆ ಸದಾ ಒಂದೇ ತೆರನಾದ ಬಲವನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ದೊಡ್ಡ ಬೆಂಕಿಯನ್ನು ಸರಿಗಟ್ಟುವುದಕ್ಕೆ ಚಿಕ್ಕ ಚಿಕ್ಕ ಕಿಡಿಗಳು ಒಂದರಲ್ಲಿ ಇನ್ನೊಂದು ಸೇರಿ ದೊಡ್ಡದಾಗಬೇಕು. ಇಲ್ಲವಾದರೆ ಪ್ರಬಲವಾಗಿ ಬೆಳೆದಿದ್ದನ್ನು ಒಪ್ಪಿಕೊಂಡು ತಮ್ಮಷ್ಟಕ್ಕೆ ತಾವು ತೆಪ್ಪಗಿರಬೇಕು.
ಅಂಥದೊಂದು ಹೊಂದಾಣಿಕೆಯ ಹೊಯ್ದಾಟ ರಾಜ್ಯ ರಾಜಕಾರಣದಲ್ಲಿ ಗಾಢವಾಗಿ ನಡೆಯುತ್ತಿದೆ. ಸದ್ಯಕ್ಕೆ ಉಳಿದೆಲ್ಲ ಪಕ್ಷಗಳಿಗಿಂತ ಹೆಚ್ಚು ಸತ್ವಯುತವಾಗಿ ಉರಿಯುತ್ತಿರುವ ಕಾಂಗ್ರೆಸ್ನ ಬಲವನ್ನು ಕಡಿಮೆ ಮಾಡುವುದಕ್ಕೆ ಮಾತ್ರವಲ್ಲ, ತಮ್ಮ ಅಸ್ಥಿತ್ವ ಅಳಿಸಿಲ್ಲ ಎಂಬುದನ್ನು ತೋರಿಸಿಕೊಡುವುದೂ ಈ ಪ್ರಕ್ರಿಯೆಯ ಮೂಲ ಆಶಯವಾಗಿದೆ. ಹೀಗಾಗಿ ಬಿಜೆಪಿ, ಜೆಡಿಎಸ್ ಕೆಜೆಪಿ ಹಾಗೂ ಬಿಎಸ್ಆರ್ ಕಾಂಗ್ರೆಸ್ನ ನಾಯಕರು ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಪ್ರಯತ್ನ ಆರಂಭಿಸಿದ್ದಾರೆ.
ಆದರೆ ಈ ಹೊಂದಾಣಿಕೆ ರಾಜಕೀಯ ಎಂಬುದು ಅಂದುಕೊಂಡಷ್ಟು ಸುಲಭವೂ ಅಲ್ಲ. ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ನ ಮೂರು ಸ್ಥಾನಗಳಿಗೆ ನಡೆದ ಚುನಾವಣೆ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ನಡೆದ ಈ ಕೂಡಾವಳಿಯಲ್ಲಿ 'ವಿಕಲ ಚೇತನ' ಪ್ರಸವವಾಗಿರುವುದರಿಂದ ಮುಂದಿನ ಪ್ರಯೋಗ ಹೇಗಿರಬೇಕೆಂಬ ಲೆಕ್ಕಾಚಾರ ಈಗ ಗುಟ್ಟಾಗಿ ನಡೆಯುತ್ತಿದೆ.
ಸಹಜವಾಗಿಯೇ ಈ ಪ್ರಕ್ರಿಯೆಯ ಕೇಂದ್ರದಲ್ಲಿರುವುದು ಬಿಜೆಪಿ. ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ಮಡುಗಟ್ಟುತ್ತಿರುವ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವ ಬಿಜೆಪಿಯ ರಾಷ್ಟ್ರೀಯ ಮುಖಂಡರು ಪ್ರತಿ ರಾಜ್ಯದಲ್ಲೂ ಹೊಸ ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ. ಆದರೆ ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಹೊರತುಪಡಿಸಿದರೆ ಬೇರೆಲ್ಲೂ ಅಂಥ ಲೆಕ್ಕಾಚಾರಗಳಿಗೆ ಅವಕಾಶವಿಲ್ಲ. ಹೀಗಾಗಿ ಇಲ್ಲಿ ಹೆಚ್ಚಿನ ಸ್ಥಾನ ಗಳಿಕೆಗೆ ಅದರದ್ದೇ ಆದ ಪ್ರಯತ್ನಗಳು ನಡೆಯುತ್ತಿವೆ.
ಕಾಂಗ್ರೇಸ್ಸೇತರ ಶಕ್ತಿಗಳನ್ನು ಒಗ್ಗೂಡಿಸಬೇಕೆಂಬುದು ಒಂದು ಪ್ರಯತ್ನ. ಆದರೆ ಆ ಸಂದರ್ಭದಲ್ಲಿ ಪಕ್ಷದ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಜಾಗೂರಕತೆ ಕಾಯ್ದುಕೊಳ್ಳುವುದು ಅನಿವಾರ್ಯ. ಹೀಗಾಗಿ ಯಾರ ಜತೆ ಹೊಂದಾಣಿಕೆ ಮಾಡಿಕೊಂಡರೂ ಅದು ಅಧಿಕೃತವಾಗಿರಬೇಕು. ಇಲ್ಲವಾದರೆ ಒಬ್ಬಂಟಿಯಾಗಿ ಕಾಂಗ್ರೆಸ್ ಎದುರಿಸುವುದೇ ಲೇಸು ಎಂಬ ಎಣಿಕೆಯಲ್ಲಿ ರಾಜ್ಯ ಬಿಜೆಪಿ ಮುಖಂಡರು ಮುಳುಗಿದ್ದಾರೆ.
ಇಷ್ಟು ದಿನ ಕಾಂಗ್ರೆಸ್ ವಿರುದ್ಧ ಕೈಜೋಡಿಸುವುದಕ್ಕೆ ರಾಜ್ಯದಲ್ಲಿ ಬಿಜೆಪಿಗೆ ಜೆಡಿಎಸ್ ಮಾತ್ರ ವಸ್ತುವಾಗಿತ್ತು. ಆದರೆ ಈಗ ತಮ್ಮ ಪಕ್ಷದಿಂದಲೇ ಸಿಡಿದ ಕೆಜೆಪಿ ಹಾಗೂ ಬಿಎಸ್ಆರ್ ಕಾಂಗ್ರೆಸ್ ಇದೆ. ಅಂದಹಾಗೆ ಈ ಹೊಂದಾಣಿಕೆ ಪ್ರಕ್ರಿಯೆ ಒಬ್ಬರು ಮನಸ್ಸು ಮಾಡುವುದರಿಂದ ಆಗುವಂತದಲ್ಲ. ಇನ್ನೊಂದು ಕಡೆಯಿಂದಲೂ ಅಂಥದ್ದೇ ಪ್ರತಿಕ್ರಿಯೆ ಇರಬೇಕು. ಆದರೆ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ನಂತರ ಇದು ಅಂದುಕೊಂಡಷ್ಟು ಸುಲಭವಲ್ಲ ಎಂಬುದೂ ಮನದಟ್ಟಾಗಿದೆ.
ಉಪಚುನಾವಣೆಯುದ್ದಕ್ಕೂ ಜೆಡಿಎಸ್ ಜತೆಗಿನ ತಮ್ಮ ಮೈತ್ರಿಯನ್ನು ಎಷ್ಟು ಸಾಧ್ಯವೋ ಅಷ್ಟು ಅಧಿಕೃತಗೊಳಿಸಲು ಬಿಜೆಪಿ ಮುಖಂಡರು ಪ್ರಯತ್ನಿಸಿದರು. ಆದರೆ ಜೆಡಿಎಸ್ನಿಂದ ಮಾತ್ರ ಇದಕ್ಕೆ ವಿರುದ್ಧವಾದ ಪ್ರತಿಕ್ರಿಯೆ ಲಭ್ಯವಾಗಿತ್ತು. ಕುಟುಂಬ ರಾಜಕಾರಣದ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಏಕಮಾತ್ರ ಉದ್ದೇಶ ಹೊಂದಿದ್ದ ಜೆಡಿಎಸ್, ಬಿಜೆಪಿ ಬೆಂಬಲ ಗುಟ್ಟಾಗಿ ಉಳಿದರೆ ಕ್ಷೇಮ ಎಂಬಂತೆ ವರ್ತಿಸಿತು. ಆದರೆ 'ಹಲಸು ಹಳಸಿದ' ಮೇಲೆ ವಾಸನೆ ಬರಲೇಬೇಕಲ್ಲ ! ಅದೇ ಆಯ್ತು. ಫಲಿತಾಂಶ ಜೆಡಿಎಸ್ಗೆ ಪ್ರತಿಕೂಲವಾಗಿ ಬಂತು.
ಸೋಲಿನ ಆತ್ಮಾವಲೋಕನದ ನಂತರ ಜೆಡಿಎಸ್ ನಮಗೆ ಬಿಜೆಪಿ ಜತೆ ಹೊಂದಾಣಿಕೆ ಬೇಕಿಲ್ಲ ಎನ್ನುತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಲೋಕಸಭೆಯಲ್ಲಿ ತಮ್ಮ ಬೆಂಬಲ ತೃತೀಯ ರಂಗಕ್ಕೆ ಎಂದು ಬಲವಾಗಿ ಹೇಳಿದ್ದಾರೆ. ಇದರರ್ಥ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸಹವಾಸ ಬೇಡ ಎಂಬ ಸೂಚನೆ ರವಾನಿಸಿದ್ದಾರೆ.
ಅದೇ ರೀತಿ ಬಿಜೆಪಿ ನಾಯಕರೂ ಸೋಲಿಗೆ ವ್ಯಾಖ್ಯಾನ ನೀಡಿದ್ದಾರೆ. ಜೆಡಿಎಸ್ ಅಧಿಕೃತವಾಗಿ ಮೈತ್ರಿ ಮಾಡಿಕೊಳ್ಳದೇ ಇದ್ದುದರಿಂದ ಸೋಲಾಯ್ತು. ವಿಶೇಷವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸೋಲಿಗೆ ಜೆಡಿಎಸ್ ಮುಖಂಡರ ಇಬ್ಬಂದಿ ಧೋರಣೆಯೇ ಕಾರಣ. ಒಂದೊಮ್ಮೆ ಅಧಿಕೃತವಾಗಿ ನಾವು ಒಂದಾಗಿದ್ದೇವೆ. ಕಾಂಗ್ರಸ್ಸೇತರ ಶಕ್ತಿಯನ್ನು ಒಗ್ಗೂಡಿಸುತ್ತೇವೆ ಎಂದಿದ್ದರೆ ನಗರ ಪ್ರದೇಶದಲ್ಲಿರುವ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಪರವಾಗಿ ಕೆಲಸ ಮಾಡುತ್ತಿದ್ದರು. ನಾವು ಯಾರ ಜತೆಗೂ ಮೈತ್ರಿ ಮಾಡಿಕೊಳ್ಳುತ್ತೇವೆಂದು ಭಿಕ್ಷಾ ಪಾತ್ರೆ ಹಿಡಿದು ನಿಂತಿಲ್ಲ. ಬೇಕಾದವರು ಕೇಳಲಿ ಎಂದು ನೇರವಾಗಿ ಹೇಳಿದ್ದಾರೆ.
ಇದರರ್ಥ ಇಷ್ಟೆ. ಕಾಂಗ್ರೆಸ್ ವಿರುದ್ಧವಾಗಿ ಹೋರಾಡಲು ಯಾರಿಗಾದರೂ ಮನಸ್ಸಿದ್ದರೆ ಅಧಿಕೃತ ಹೊಂದಾಣಿಕೆಗೆ ಬನ್ನಿ. ಇಲ್ಲವಾದರೆ ಬೇಡ. ಇಂಥದೊಂದು ಖಡಾಖಂಡಿತ ನಿರ್ಧಾರ ರವಾನಿಸಿ ಎಂದು ರಾಷ್ಟ್ರೀಯ ಮುಖಂಡರ ಸಂದೇಶ ಈಗ ರಾಜ್ಯ ಬಿಜೆಪಿ ನಾಯಕರ ಬಾಯಿಂದ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣವಿಷ್ಟೆ, ದೇಶದಲ್ಲಿ ಈಗ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಅಲೆಯಿದೆ. ಮಾತ್ರವಲ್ಲ ಯುಪಿಎ ವಿರೋಧಿ ಮನಸ್ಸಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಜೆಡಿಎಸ್ ಹೊಂದಾಣಿಕೆ ಬಯಸಿದರೆ, ಎನ್ಡಿಎ ಮಿತ್ರಕೂಟದಲ್ಲಿ ಸೇರಲು ಸಿದ್ದವಾಗಬೇಕು. ಜತೆಗೆ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಮೈತ್ರಿ. ಇಲ್ಲವಾದರೆ ನಿಮ್ಮ ದಾರಿ ನಿಮಗೆ, ನಮ್ಮ ದಾರಿ ನಮಗೆ ಎಂಬ ಧೋರಣೆ ಪ್ರದರ್ಶಿಸುತ್ತಿದ್ದಾರೆ.
ಕೆಜೆಪಿ ವಿಚಾರದಲ್ಲೂ ಬಿಜೆಪಿ ರಾಷ್ಟ್ರೀಯ ಮುಖಂಡರದ್ದು ಇದೇ ಧೋರಣೆ. ಯಡಿಯೂರಪ್ಪನವರಿಗೆ ಮನಸ್ಸಿದ್ದರೆ ಬಿಜೆಪಿಯೊಂದಿಗೆ ಕೆಜೆಪಿಯನ್ನು ವಿಲೀನಗೊಳಿಸಲಿ. ಇಲ್ಲವಾದರೆ ಬೇಡ ಎನ್ನುವ ಮೂಲಕ ಎರಡು ಕಡೆ ಮೈತ್ರಿ ಬಾಗಿಲನ್ನು ತೆರೆದಿಟ್ಟು ಬಿಜೆಪಿ ತೆಪ್ಪಗಾಗುವ ಜಾಣತನ ಪ್ರದರ್ಶಿಸುತ್ತಿದೆ.
ಆದರೆ ಇದನ್ನು ಒಪ್ಪಿಕೊಳ್ಳುವುದು ಜೆಡಿಎಸ್ಗೆ ಮಾತ್ರವಲ್ಲ ಕೆಜೆಪಿಗೂ ಕಷ್ಟ. ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಕೆಜೆಪಿ ಮುಖಂಡರ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ. ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಬಿಜೆಪಿ ಇನ್ನೂ ಅಸ್ಪೃಶ್ಯವಲ್ಲ. ಹಿಂದೆ ಪಕ್ಷ ಬಿಡುವಂತೆ ಒತ್ತಡ ಹೇರಿದ್ದ ಅವರ ಇಬ್ಬರು ಪುತ್ರರಾದ ಬಿ.ವೈ.ರಾಘವೇಂದ್ರ ಹಾಗೂ ವಿಜಯೇಂದ್ರ ಬಿಜೆಪಿಯೊಂದಿಗೆ ವಿಲೀನವಾಗುವುದೇ ಲೇಸು ಎಂಬ ಸಲಹೆಯನ್ನು ಈಗ ನೀಡುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿಯಲ್ಲೇ ಉಳಿದುಕೊಂಡಿರುವ ಯಡಿಯೂರಪ್ಪನವರ ಖಾಸಾ ಶಿಷ್ಯರಾದ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಸೇರಿದಂತೆ ಹಲವರು 'ನೀವು ಪಕ್ಷ ಬಿಟ್ಟಿದ್ದೇ ತಪ್ಪು' ಎಂದು ಸಿಕ್ಕಾಗಲೆಲ್ಲ ಹೇಳುತ್ತಿದ್ದಾರೆ.
ಆದರೆ ಒಂದೇ ಉಸಿರಲ್ಲಿ ಪಕ್ಷ ಬಿಟ್ಟ ಯಡಿಯೂರಪ್ಪನವರಿಗೆ ಮರಳಿ ಹಳೆ ಗೂಡು ಸೇರಿಕೊಳ್ಳುವುದು ಈಗ ನಿರೀಕ್ಷಿಸಿದಷ್ಟು ಸುಲಭವಾಗಿ ಉಳಿದಿಲ್ಲ. ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ಸಿ.ಎಂ.ಉದಾಸಿ, ಧನಂಜಯಕುಮಾರ್ ಸೇರಿದಂತೆ ಹಲವರು ಕೆಜೆಪಿಯನ್ನು ಕಟ್ಟಿ ಬೆಳೆಸಿ ಎಂದು ಪಟ್ಟು ಹಿಡಿದಿದ್ದಾರೆ. 71 ಶಾಸಕರ ಬಲವಿದ್ದ ಸಂದರ್ಭದಲ್ಲೇ ನಿಮ್ಮನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವಲ್ಲಿ ಬಿಜೆಪಿ ಕೇಂದ್ರ ಮುಖಂಡರು ಹಿಂದೇಟು ಹಾಕಿದ್ದಾರೆ. ಈಗ ಪಕ್ಷಕ್ಕೆ ಸೇರಿಸಿಕೊಂಡು ಮೂಲೆಗುಂಪು ಮಾಡಿದರೆ ಏನು ಮಾಡುತ್ತೀರಿ. ಸದ್ಯಕ್ಕೆ ಮೈತ್ರಿ ಪ್ರಸ್ತಾಪ ಬದಿಗಿಡಿ ಎಂಬ ಸಲಹೆ ಮುಂದಿಟ್ಟಿದ್ದಾರೆ. ಹೀಗಾಗಿ ಇಲ್ಲಿರಲಾರೆ, ಅಲ್ಲಿಯೂ ಹೋಗಲಾರೆ ಎಂಬ ಸ್ಥಿತಿ ತಲುಪಿರುವ ಯಡಿಯೂರಪ್ಪ ವಾಸ್ತವದ ಲೆಕ್ಕಾಚಾರ ಆರಂಭಿಸಿದ್ದಾರೆ.
ರಾಜ್ಯದಲ್ಲಿ ಸದ್ಯಕ್ಕೆ ಇರುವ ಕಾಂಗ್ರೆಸ್ ಪರ ಅಲೆಯಲ್ಲಿ ಜೆಡಿಎಸ್ ಕೊಚ್ಚಿ ಹೋಗಿದೆ. 2014ರ ಲೋಕಸಭಾ ಚುನಾವಣೆ ಹೊತ್ತಿಗೆ ಈ ಪರಿಸ್ಥಿತಿ ಬದಲಾಗುತ್ತದೆ ಎಂಬ ನಿರೀಕ್ಷೆಯೂ ಇಲ್ಲ. ಅಧಿಕಾರವಿಲ್ಲದ ಸಂದರ್ಭದಲ್ಲಿ ಚುನಾವಣೆ ಎದುರಿಸುವುದು ಸುಲಭವಲ್ಲ ಎಂಬುದು ಯಡಿಯೂರಪ್ಪನವರಿಗೂ ಗೊತ್ತು. 10 ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ಅವಕಾಶವಿದೆ ಎಂದು ಬೆಂಬಲಿಗರು ಹೇಳಿದರೂ ಏಕಾಂಗಿಯಾಗಿ ಬಿಜೆಪಿ ಹಾಗೂ ಕಾಂಗ್ರೆಸ್ಸನ್ನು ಸೋಲಿಸುವುದು ಸುಲಭವಲ್ಲ ಎಂಬ 'ಸಾಮಾನ್ಯ ಅಂಕಗಣಿತ' ಅರಿಯದ ಅಜ್ಞರಲ್ಲ ಅವರು. ಹೀಗಾಗಿ ನಮಗೆ ಯಾರೂ ಅಸ್ಪೃಶ್ಯರಲ್ಲ. ಯಾರ ಜತೆ ಬೇಕಾದರೂ ಹೊಂದಾಣಿಕೆಗೆ ಸಿದ್ದ ಎಂಬ ದಾಳವನ್ನು ಉರುಳಿಸಿದ್ದಾರೆ.
ಇನ್ನು ಜೆಡಿಎಸ್ ಪಾಲಿಗೆ 2014ರ ಲೋಕಸಭಾ ಚುನಾವಣೆ ನಿಜಕ್ಕೂ ನಿರ್ಣಾಯಕ. ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಚುನಾವಣೆಗೆ ಮುನ್ನ ಇದ್ದ ಆತ್ಮವಿಶ್ವಾಸ ಈಗ ಆ ಪಕ್ಷದ ಮುಖಂಡರಲ್ಲಿ ( ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ) ಇಲ್ಲ. ಈ ಬಾರಿ ಲೋಕಸಭೆಯಲ್ಲಿ ತಮ್ಮ ಸಂಖ್ಯಾ ಬಲವನ್ನು ಆರಕ್ಕೆ ಏರಿಸಿಕೊಳ್ಳುತ್ತೇವೆ ಎನ್ನುತ್ತಿದ್ದವರೇ ಈಗ ಆರು ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಅಂತಿಮಗೊಳಿಸುವುದಕ್ಕೆ ಪರದಾಡುವಂತಾಗಿದೆ. ಜೆಡಿಎಸ್ನಲ್ಲಿ ನಡೆಯುತ್ತಿರುವ ಒಳ ಜಗಳ ಅಷ್ಟರ ಮಟ್ಟಿಗೆ ಪಕ್ಷದ ಆತ್ಮವಿಶ್ವಾಸವನ್ನು ಕುಂದಿಸಿದೆ.
ಒಕ್ಕಲಿಗರ ಮತವನ್ನೇ ನಂಬಿಕೊಂಡ ಜಿಲ್ಲೆಯಲ್ಲಿ ಪಕ್ಷಕ್ಕೆ ಸೋಲಾಗಿದೆ. ಹೀಗಾಗಿ ಪಕ್ಷದೊಳಗೆ ಅನಿವಾರ್ಯವಾಗಿ ಹೊಸದೊಂದು ಹೊಂದಾಣಿಕೆಯ ಹೊಳಹು ಹುಟ್ಟಿಕೊಂಡಿದೆ. ಕಾಂಗ್ರೆಸ್ನಂತೆ ಜೆಡಿಎಸ್ನಲ್ಲೂ ಅಹಿಂದ ಮತಗಳ ಏಕೀಕರಣಕ್ಕೆ ಪ್ರಯತ್ನ ನಡೆಯುತ್ತಿದೆ. ಒಂದೆಡೆ ಕಾಂಗ್ರೆಸ್ನತ್ತ ಮುಖ ಮಾಡಿರುವ ತನ್ನ ಶಾಸಕರನ್ನು ಉಳಿಸಿಕೊಳ್ಳುವುದು, ಜತೆಗೆ ಲೋಕಸಭೆ ಚುನಾವಣೆಯಲ್ಲಿ ಅನುಕೂಲವಾಗುವಂತ ರಾಜಕೀಯ ವ್ಯವಸ್ಥೆ ಕಲ್ಪಿಸಿಕೊಳ್ಳುವುದು ಸದ್ಯಕ್ಕೆ ಜೆಡಿಎಸ್ ಮುಂದಿರುವ ಸವಾಲು. ಹೀಗಾಗಿ ಆಂತರಿಕ ಸಮಸ್ಯೆ ಸರಿದೂಗಿಸಿಕೊಂಡು ಪಕ್ಷವನ್ನು ಭದ್ರಗೊಳಿಸುವ ಪ್ರಯತ್ನದಲ್ಲಿ ಆ ಪಕ್ಷದ ಮುಖಂಡರು ಮುಳುಗಿದ್ದಾರೆ.
ಹೀಗಾಗಿ ಕಾಂಗ್ರೆಸ್ಗೆ ಪಾಠ ಕಲಿಸಬೇಕೆಂಬ ಸಿದ್ದತೆ ಮೂರು ಪ್ರಮುಖ ಪ್ರತಿಪಕ್ಷಗಳಲ್ಲೂ ಸದ್ದಿಲ್ಲದೇ ನಡೆಯುತ್ತಿದೆ. ಆದರೆ ಆಯ್ಕೆಯದ್ದೇ ಸಮಸ್ಯೆ. ಹಸಿರು ಹುಲ್ಲುಗಾವಲಿನಲ್ಲೂ ಇದೆ, ಹೊಲದಲ್ಲೂ ಇದೆ. ಎಲ್ಲಿ ಕಾಲಿಟ್ಟರೆ ಅನುಕೂಲ ಎಂಬ ಗೊಂದಲ ಎಲ್ಲರನ್ನು ಕಾಡುತ್ತಿದೆ.
ಇನ್ನು ಎಲ್ಲರಿಗೂ ಸಮಾನ ವೈರಿಯಾಗಿರುವ ಕಾಂಗ್ರೆಸ್ಗೂ, ಪ್ರತಿಪಕ್ಷಗಳ ಒಕ್ಕೂಟ ಹೇಗಿರಬಹುದೆಂಬ ಕುತೂಹಲವಿದೆ. ಯಾರು ಬೇಕಾದರೂ ಒಂದಾಗಲಿ ನಮಗೇನು ತೊಂದರೆಯಿಲ್ಲ ಎಂಬ ಸ್ಥಿತಿಯಲ್ಲಿ ಕಾಂಗ್ರೆಸ್ ಮುಖಂಡರಿಲ್ಲ. ಏಕೆಂದರೆ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಯುಪಿಎಯನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಹೈಕಮಾಂಡ್ ಸಂದೇಶ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದ ಮುಖ್ಯಮಂತ್ರಿಗಳಿಗೆ ಈಗಾಗಲೇ ರವಾನೆಯಾಗಿದೆ. ಹೀಗಾಗಿ ಹೆಚ್ಚು ಸ್ಥಾನ ಗಳಿಸುವ ಜತೆಗೆ ಪ್ರತಿಪಕ್ಷಗಳ ಮೈತ್ರಿ ಮುರಿಯುವ ವಿನೂತನ ಜವಾಬ್ದಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲಿದೆ. ಇದರ ಸಾಫಲ್ಯ-ವೈಫಲ್ಯದಲ್ಲೇ ಕಾಂಗ್ರೆಸ್ನ ಭಿನ್ನಮತ ರಾಜಕಾರಣದ ಅಳಿವು-ಉಳಿವು ನಿರ್ಧಾರವಾಗುತ್ತದೆ ಎಂಬುದು ಇನ್ನೊಂದು ವಿಶೇಷ !!
ಲಗೋರಿ : ಗೋಲಿ ಆಟಕ್ಕೂ ಗುರಿ ಮುಖ್ಯ.
- ಪಿ. ತ್ಯಾಗರಾಜ್
thyagarjun@gmail.com