ಪರದಾಡಿದ ಪ್ರಧಾನಿಗೆ ಖಳನಾಯಕನಂತೆ ಕಂಡ ಬಿಜೆಪಿ!
ಸಂಸದೀಯ ಉತ್ತರದಾಯಿತ್ವ. ನಮ್ಮ ಕರೆನ್ಸಿ ಕುಸಿತಕ್ಕೆ, ಮಂದಗತಿಯ ಬೆಳವಣಿಗೆಗೆ ಮತ್ತು ಆರ್ಥಿಕ ಅಧೋಗತಿಗೆ ತಂದೊಡ್ಡಿದ ಸಿದ್ಧಾಂತವಿದು. ಕೊನೆಗೂ ನಮ್ಮ ಪ್ರಧಾನಿಗಳು, ರಾಷ್ಟ್ರಕ್ಕೆ ಸಮಜಾಯಿಶಿ ನೀಡಬೇಕಾದುದು ತಮ್ಮ ಹೊಣೆ ಎನ್ನುವುದನ್ನರಿತರು ಮಾತನಾಡಿದ್ದಾರೆ.
ಪ್ರಧಾನಿಗಳು ಕಡೆಗೂ ತಮ್ಮ ತುಟಿ ಬಿಚ್ಚುವ ಕೃಪೆ ತೋರಿದ್ದು ಸ್ವಾಗತಾರ್ಹ ಸಂಗತಿಯೇ. ಆದರೆ ಅವರು ದಣಿದಿದ್ದ ರಾಜ್ಯಸಭೆ ಮತ್ತು ವ್ಯಾಕುಲಗೊಂಡಿರುವ ರಾಷ್ಟ್ರಕ್ಕೆ ಹೇಳಿದ ಮಾತು ನಿಜಕ್ಕೂ ಇರುಸುಮುರುಸು ಉಂಟುಮಾಡುವಂತಿತ್ತು. ಹಿಂದೆ ಕೂಡ ಕೆಲವು ಚತುರ ರಾಜಕಾರಣಿಗಳು ಮೌನವ್ರತ ಎಂಬ ತಂತ್ರಕ್ಕೆ ಮೊರೆಹೋಗುತ್ತಿದ್ದರು. ನಿಸ್ಸಂಶಯವಾಗಿಯೂ ಮಹಾತ್ಮಾ ಗಾಂಧಿ ಇಂಥ ಚತುರ ತಂತ್ರಗಾರರಲ್ಲಿ ಮುಂಚೂಣಿಯಲ್ಲಿರುವ ಹೆಸರು. ತಮ್ಮ ವಿರೋಧಿಗಳನ್ನು ಗೊಂದಲಗೊಳಿಸಲು, ಕೆರಳಿಸಲು ಅವರು ಈ ಹಾದಿ ಹಿಡಿಯುತ್ತಿದ್ದರು. ಇನ್ನು ಅವರ ಅನುಯಾಯಿ ವಿನೋಭಾ ಭಾವೆ ಕೂಡ ತುರ್ತುಪರಿಸ್ಥಿತಿಯನ್ನು ವಿರೋಧಿಸುತ್ತಾ ಮೌನವ್ರತಕ್ಕೆ ಶರಣಾಗಿದ್ದರು. ಭಾರತವನ್ನು ನುಂಗುತ್ತಿರುವ ಆರ್ಥಿಕ ಕುಸಿತದ ಕುರಿತು ಮನಮೋಹನ್ ಸಿಂಗ್ ಇಂಥದ್ದೇ ಕಾರಣಕ್ಕಾಗಿಯೇ ಮಾತನಾಡುತ್ತಿಲ್ಲ ಎಂದೇ ಇದುವರೆಗೂ ಭಾವಿಸಲಾಗಿತ್ತು. ಆದರೆ ಅವರ ಮಾತು ಕೇಳಿದ ನಂತರ-'ಅರ್ಥಪೂರ್ಣವಾದ ಸಂಗತಿಗಳು ಅವರ ಬಳಿಇರಲಿಲ್ಲವಾದ್ದರಿಂದ' ಅವರು ಮೂಕರಾಗಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ.
ಕಳೆದ ಹದಿನೈದು ದಿನಗಳಿಂದ ಕ್ಯಾಬಿನೆಟ್ ಸಚಿವರುಗಳು ತಮ್ಮ ನೈತಿಕ ಪರಿಶುದ್ಧಿಯನ್ನು ಪ್ರೂವ್ ಮಾಡಲು ಪರಸ್ಪರ ಗೂಬೆ ಕೂರಿಸುವ ಆಟ ಆಡುತ್ತಿದ್ದಾರೆ. ಮೊದಲಿಗೆ, ಮಹಾಲೇಖಪಾಲರನ್ನು ಈ ಕುಸಿತದ ಪ್ರಮುಖ ವಿಲನ್ ಎಂದು ದೂಷಿಸಲಾಯಿತು. ಆ ನಂತರ ನ್ಯಾಯಾಂಗದತ್ತ ಬೆರಳು ತೋರಿಸಿದ್ದೂ ಆಯಿತು. 'ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗನುಗುಣವಾಗಿ ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಹುಟ್ಟುಹಾಕಿದ್ದಾರೆ' ಎಂದು ಅಮೆರಿಕದ ಫೆಡರಲ್ ರಿಸರ್ವ್ ಅನ್ನೂ ಜಾಡಿಸಲಾಯಿತು. ಸಿರಿಯಾ ತನ್ನ ಜನರ ವಿರುದ್ಧ ರಾಸಾಯನಿಕ ಅಸ್ತ್ರಗಳನ್ನು ಬಳಸುತ್ತಿರುವುದರಿಂದ ರುಪಾಯಿ ಮಾಲ್ಯ ಕುಸಿದಿದೆ ಎಂದೂ ಕೆಲವರು ಹೇಳಿ ಸುಮ್ಮನಾದರು. ಕೊನೆಗಂತೂ ಪಿ. ಚಿದಂಬರಂ ಅವರು, ಸಂಪೂರ್ಣ ಹೊಣೆಯನ್ನು ತಮ್ಮ ಪೂರ್ವಾಧಿಕಾರಿಯ (ಈಗ ಪ್ರತಿಕ್ರಿಯಿಸಲು ಶಕ್ತರಲ್ಲದ) ಮೇಲೆ ಹಾಕಿ, ಈ ದಾರಿದ್ರ್ಯ ಅವರಿಂದಲೇ ಬಂದೊದಗಿದೆ ಎಂದು ಕೈತೊಳೆದುಕೊಂಡರು. ದುರ್ದೈವವಶಾತ್ ಇಂಥ ಸಮಜಾಯಿಶಿಯಿಂದ, ನುಣುಚಿಕೊಳ್ಳುವ ಕೆಲಸದಿಂದ ಮಾರುಕಟ್ಟೆಗೆ ಯಾವ ಉಪಯೋಗವೂ ಆಗುವುದಿಲ್ಲ. ರಿಸರ್ವ್ ಬ್ಯಾಂಕ್ ಗವರ್ನರ್ ಈ ಕುರಿತು ಮಾತನಾಡುತ್ತಾ, ಸ್ವಹಿತಾಸಕ್ತ ಒಬಾಮಾ ಆಡಳಿತಕ್ಕಿಂತ ಹೆಚ್ಚಾಗಿ ನಮ್ಮ ದೇಶದ ದಿಕ್ಕು ದೆಸೆಯಿಲ್ಲದ ರಾಜಕಾರಣದಿಂದಾಗಿ ಈ ಅವಸ್ಥೆ ಬಂದೆರಗಿದೆ ಎಂದು ಹೇಳಿದ ನಂತರ, ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಸಮಾಜಾಯಿಶಿಗಳ ವೇಗ ರುಪಾಯಿ ಮೌಲ್ಯದ ಕುಸಿತದೊಂದಿಗೆ ಪೈಪೋಟಿ ಒಡ್ಡುತ್ತಿರುವಾಗಲೇ...ಇನ್ನಷ್ಟು ಸಬೂಬುಗಳ ಬ್ರಹ್ಮಾಸ್ತ್ರವನ್ನು ತಮ್ಮ ಬತ್ತಳಿಕೆಯಿಂದ ತೆಗೆದರು ಮನಮೋಹನ್ ಸಿಂಗ್! ವಿರೋಧ ಪಕ್ಷಗಳನ್ನು ವಿಲನ್ಗಳಂತೆ ಬಿಂಬಿಸಿ ನಿರುಮ್ಮಳರಾದರು.
ಈ ಹಿಂದೆ ವಿತ್ತ ಸಚಿವರು ಆರ್ಥಿಕತೆಯ ಪರವಾಗಿ ಮಾತಾಡಿದ್ದಾರೆ, ಶುಕ್ರವಾರದಂದು ಪ್ರಧಾನಿಗಳು ಕಾಂಗ್ರೆಸ್ನ ಪರವಾಗಿ ಮಾತನಾಡಲು ಪ್ರಯತ್ನಿಸಿದ್ದಾರೆ. ಪಾಪ ಅವರಾದರೂ ಏನು ಮಾಡಿಯಾರು? ರಾಜಕುಟುಂಬದ ಆಸ್ತಿಯನ್ನು(ಕಾಂಗ್ರೆಸ್ಸನ್ನು) ಕಾಯುವ ಕೆಲಸ ಅವರಿಗೆ ವಹಿಸಲಾಗಿದೆಯಲ್ಲ! ನೀರಸ, ಆದರೆ ಜಗಳಗಂಟ ಮಾತನಾಡುವುದನ್ನು ಬಿಟ್ಟು ಅವರಿಗೆ ಬೇರೆ ಯಾವ ಆಯ್ಕೆಗಳೂ ಇರಲಿಲ್ಲ.
ವಾದಗಳ ಮಳೆ ಸುರಿಸಿ ರಾಷ್ಟ್ರವನ್ನು ಹುರಿದುಂಬಿಸುವುದನ್ನು ಬಿಟ್ಟರೆ, ಬೇರಾವ ಪ್ರಯೋಜನವೂ ಈ ಚರ್ಚೆಯಿಂದ ಆಗಲಿಲ್ಲ. ಆಹಾರ ಭದ್ರತಾ ಮಸೂದೆ ಜಾರಿಯಾದ ನಂತರವೂ ರಾಷ್ಟ್ರದ ಮೂಡ್ ಬದಲಾಗುವ ಯಾವ ಸಾಧ್ಯತೆಗಳೂ ಗೋಚರಿಸುತ್ತಿಲ್ಲ. ಆದರೆ ಇನ್ನೊಂದೆಡೆ ಆದಾಯ ಕೊರತೆಯ ವಿಸ್ತರಣೆ, ಹೆಚ್ಚುತ್ತಿರುವ ಹಣಕಾಸಿನ ಕೊರತೆ, ಅಧಿಕ ಬಡ್ಡಿಯಿಂದಾಗಿ ನಮ್ಮ ಮಾರುಕಟ್ಟೆ ಮತ್ತಷ್ಟು ಕಂಗಾಲಾಗಿರುವುದಂತೂ ಸ್ಪಷ್ಟ.
ನಿತ್ರಾಣಗೊಂಡಿರುವ ರುಪಾಯಿಯನ್ನು ಭೂ ಸ್ವಾಧೀನ ಕಾಯ್ದೆಯ ಹಿನ್ನೆಲೆಯಲ್ಲಿ ನೋಡಿದಾಗ, ಭಾರತ ತನ್ನ ಕಾಲಿಗೆ ತಾನೇ ಗುಂಡು ಹಾರಿಸಿಕೊಳ್ಳುತ್ತಿದೆ ಎನ್ನುವುದು ತಿಳಿಯದೇ ಇರದು.
ಆದರೆ ತುಸು ಬದಲಾವಣೆ ಎಂಬಂತೆ, ಈ ಬಾರಿ ದಾಳಿ ನಡೆದದ್ದು ನೇರವಾಗಿ ಮಹಾರಾಣಿಯವರ ಮೇಲೆಯೇ. ಇನ್ನು ಅಪರೂಪಕ್ಕೆಂಬುವಂತೆ ಮಾಧ್ಯಮಗಳೂ ಕೂಡ 'ಸೋನಿಯಾ ಅರ್ಥವ್ಯವಸ್ಥೆಯನ್ನು' ಟೀಕಿಸಿದವು.ಕಾಂಗ್ರೆಸ್ ಸರ್ಕಾರದ ಅಸಂಬದ್ಧತೆಯನ್ನು ಅಧಿಕೃತ ರಹಸ್ಯಗಳ ಕಾಯ್ದೆಯಿಂದ ಮುಚ್ಚಿಡಲು ಈ ಬಾರಿ ಸಾಧ್ಯವಾಗಲಿಲ್ಲ. ಮದರ್ ಥೆರೆಸಾರಂಥ ನೈತಿಕತೆಯ ನಾಯಕಿ ಆಗಬೇಕೆಂಬ ಉತ್ಕಟ ಬಯಕೆ ಮತ್ತು ಮೆಯ್ನಾರ್ಡ್ ಕೆನ್ಸ್ರಂತೆ ಹೊಸ ಆರ್ಥಿಕ ಹಾದಿಯನ್ನು ತೋರಿಸಬೇಕೆಂಬ ಸೋನಿಯಾರ ಆಸೆಯ ನಡುವೆ ಸಿಲುಕಿ ಛಿದ್ರವಾಗಿದ್ದು ಭಾರತದ ಆರ್ಥಿಕತೆ ಮಾತ್ರ.
ಆದರೆ ಅವರ ಬಯಕೆ, ತುಡಿತಗಳೆಲ್ಲವೂ ಕೆಲ ದಿನಗಳಿಂದ ಅದಲು ಬದಲಾಗಿವೆ. ಅವರೀಗ ಅನುಸರಿಸುತ್ತಿರುವುದು ಮದರ್ ಥೆರೆಸಾಳ ಆರ್ಥಿಕತೆ ಮತ್ತು ಕೆನ್ಸ್ನ ನೈತಿಕತೆಯನ್ನು! ಭಾರತ ಇದನ್ನೆಲ್ಲ ಕಂಡು ನಿಜಕ್ಕೂ ಭಾವಪರವಶವಾಯಿತೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕೇ!
ಇನ್ನು ಕಾಂಗ್ರೆಸ್ಸಿಗರು, 'ದೇಶದ ದುರ್ದೆಸೆಗೆ ವಿರೋಧ ಪಕ್ಷಗಳೇ ಕಾರಣ' ಎಂದು ಮುಂದಿಟ್ಟ ವಾದವನ್ನು ಈಗ ಎಲ್ಲರೂ ಸಂಶಯದಿಂದ ನೊಡತೊಡಗಿದ್ದಾರೆ. ಹಾಗಂತ ವಿರೋಧ ಪಕ್ಷಗಳ ತಪ್ಪೇನೂ ಇಲ್ಲ ಎನ್ನುವುದಕ್ಕೂ ಸಾಧ್ಯವಿಲ್ಲ. ಇದರೊಟ್ಟಿಗೆ ಕೆಲವು ದಣಿದ ಹಿರಿಯ ನಾಯಕರು, ಅವಧಿಗೆ ಮುನ್ನ ಚುನಾವಣೆ ನಡೆಸಬೇಕೆಂಬ ಆಸೆಯಿಂದ ರಾಷ್ಟ್ರಪತಿ ಭವನದತ್ತ ಹೆಜ್ಜೆ ಹಾಕುತ್ತಿದ್ದಾರೆ. ತಾವೂ ಕೂಡ ಪ್ರಧಾನಿ ಹುದ್ದೆಯ ಬೇಟೆಯಲ್ಲಿದ್ದೇವೆ ಎಂಬುದನ್ನವರು ಈ ಮೂಲಕ ಎಲ್ಲರಿಗೂ ನೆನಪು ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ.
ಕಳೆದ ವಾರ ನಡೆದ ಭಾರತದ ಆರ್ಥಿಕತೆಯ ಹತ್ಯಾಕಾಂಡದಲ್ಲಿ, ಒಂದು ಉತ್ತಮ ಸಂಗತಿಯೊಂದು ಹೊರಬಿದ್ದಿದೆ. 1991ರಿಂದಲೂ ಇಲ್ಲಿಯವರೆಗೆ ಒಂದೇ ಮನಸ್ಥಿತಿಯೊಂದಿಗೆ ವರ್ತಿಸುತ್ತಿದ್ದ ವ್ಯಕ್ತಿಯ ನಿಲುವುಗಳು ಈ ಜಮಾನಾಕ್ಕೆ ಹೊಂದುವುದಿಲ್ಲ ಎನ್ನುವ ಸತ್ಯ ಹೊರಬಿದ್ದಿದೆ. ಈಗ ನಿರ್ಧಾರ ಜನತೆಯ ಕೈಯಲ್ಲಿದೆ. ಹೊಸ ಹವೆ ಮನೆಯೊಳಗೆ ನುಗ್ಗಲು ಅವರು ಕಿಟಕಿ ತೆರೆಯುತ್ತಾರೋ ಇಲ್ಲವೋ ಎನ್ನುವುದನ್ನು ನೋಡಲು ಕಾದು ನೋಡಬೇಕಿದೆ.
- ಸ್ವಪನ್ದಾಸ್ ಗುಪ್ತ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

